ಅತಿಥಿಗಳ ಮೇಲೆ ಪ್ರೀತಿಯೊಂದೇ ಅಲ್ಲ, ಕನಿಕರವೂ ಇರಲಿ!

ಅತಿಥಿಗಳ ಮೇಲೆ ಪ್ರೀತಿಯೊಂದೇ ಅಲ್ಲ, ಕನಿಕರವೂ ಇರಲಿ!
ಅತಿಥಿಗಳ ಮೇಲೆ ಪ್ರೀತಿಯೊಂದೇ ಅಲ್ಲ, ಕನಿಕರವೂ ಇರಲಿ!

ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡುವಂತಿಲ್ಲ, ಬೇರೆಯವರ ಮೂಲಕ ಕಳಿಸುವಂತಿಲ್ಲ, ಸ್ವತಃ ನಾವೇ ಹೋಗಿ ಕರೆಯಬೇಕು. ಸಮಸ್ಯೆ ಎದುರಾಗುವುದೇ ಇಲ್ಲಿ. ನೀವು ಸ್ವತಃ ಕರೆಯಲು ಹೋದಿರೆಂದರೆ ಅವರು ನಿಮ್ಮ ಪಾಲಿಗಷ್ಟೇ ಅಲ್ಲ, ನೀವೂ ಅವರಿಗೆ ವಿಶೇಷ ವ್ಯಕ್ತಿಯೇ.
ಕಳೆದ ವಾರ ನನ್ನ ಮಗನ ಬ್ರಹ್ಮೋಪದೇಶ ಕಾರ್ಯಕ್ರಮವಿತ್ತು. ಒಂದು ತಿಂಗಳಿನಿಂದ ನಾನು ನನ್ನ ನಿತ್ಯಕರ್ಮ, ಆಫೀಸು ಕೆಲಸಗಳ ಮಧ್ಯೆ ಈ ಕಾರ್ಯಕ್ರಮದ ಸಿದ್ಧತೆ, ರೂಪುರೇಷೆ, ಆಮಂತ್ರಣ ಪತ್ರಿಕೆ ವಿತರಣೆ, ಛತ್ರದ ಅಲಂಕಾರ, ಉಪಾಹಾರ- ಊಟದ ತಯಾರಿಯ ಮೇಲುಸ್ತುವಾರಿ, ಗಣ್ಯರ ಆತಿಥ್ಯ... ಇತ್ಯಾದಿ ಅಗತ್ಯ, ಅವಶ್ಯ ಹಾಗೂ ಪ್ರಮುಖ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ದೈನಂದಿನ ಕೆಲಸ ಕಾರ್ಯ, ಒತ್ತಡ, ಜಂಜಾಟಗಳ ನಡುವೆ ಈ ಖಾಸಗಿ ಸಮಾರಂಭವನ್ನು ಸಂಘಟಿಸದೇ ಹಲವು ವರ್ಷಗಳೇ ಆಗಿದ್ದವು.
ಈ ಕಾರಣಕ್ಕಾಗಿಯೇ ನಾನು ಈ ಸಮಾರಂಭದಲ್ಲಿ ನನ್ನನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದೆ. ನನ್ನಂಥ ಪತ್ರಕರ್ತರು ಪ್ರತಿನಿತ್ಯ ಒಂದಿಲ್ಲೊಂದು ಸಭೆ, ಸಮಾರಂಭ, ಮದುವೆ, ಉಪನಯನ, ಗೃಹಪ್ರವೇಶದಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ನಮ್ಮ ಮನೆಯಲ್ಲಿ ಇಂಥ ಸಂದರ್ಭಗಳನ್ನು ಸಂಘಟಿಸಲು ನಮಗೆ ಟೈಮಾಗಲಿ, ವ್ಯವಧಾನವಾಗಲಿ ಇರುವುದಿಲ್ಲ. ಮೊದಲನೆಯದಾಗಿ, ಈ ದಿನಗಳಲ್ಲಿ ಇಂಥ ಕಾರ್ಯಕ್ರಮಗಳನ್ನು ರೂಪಿಸಿ, ಸಂಘಟಿಸಲು ಹಣ ಬೇಕು. ಅದಕ್ಕಿಂತ ಹೆಚ್ಚಾಗಿ ತಾಳ್ಮೆ, ಸಂಯಮ, ಸಮಯ ಬೇಕು. ನಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳುವ ತಾದಾತ್ಯ್ಮತನ ಬೇಕು. ಕೆಲಸವನ್ನು ಅಚ್ಚುಕಟ್ಟಾಗಿ ರೂಪಿಸುವ, ಯೋಗ್ಯ ವ್ಯಕ್ತಿಗಳಿಗೆ ಜವಾಬ್ದಾರಿಗಳನ್ನು ಜಜಟಜ್ಜಛಡಿಜ ಮಾಡುವ ಸಂಘಟನಾ ಸಾಮರ್ಥ್ಯವೂ ಬೇಕು.
ಅನೇಕ ಸಂದರ್ಭಗಳಲ್ಲಿ ರಾಜಕಾರಣಿಗಳು ಎರಡು-ಮೂರು ಲಕ್ಷ ಜನರಿರುವ ರ್ಯಾಲಿಗಳನ್ನು ಸಂಘಟಿಸಿದಾಗ, ಬಂದವರಿಗೆಲ್ಲ ಊಟ, ಉಪಹಾರ, ನೀರು, ಸಾರಿಗೆ ವ್ಯವಸ್ಥೆಯನ್ನು ಪೂರೈಸುವಾಗ ಅವರ ಸಂಘಟನಾ ಚಾತುರ್ಯ ಕಂಡು ಮೂಗಿನ ಮೇಲೆ ಬೆರಳಿಟ್ಟಿದ್ದೇನೆ. ಇಂಥ ರ್ಯಾಲಿಗಳಲ್ಲಿನ ಸಣ್ಣ ಪುಟ್ಟ ದೋಷಗಳನ್ನು ನಾವು ದೊಡ್ಡದು ಮಾಡಿ ಮರುದಿನ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ. ಅಂಥ ಏರುಪೇರುಗಳು ಸಹಜ ಎಂಬ ರಿಯಾಯಿತಿಯನ್ನೂ ಕೊಡದೇ ಟೀಕಿಸುತ್ತೇವೆ. ಅದೇ ನಮ್ಮ ಮನೆಯಲ್ಲಿ ಮದುವೆ, ಮುಂಜಿಯಂಥ ಕಾರ್ಯಕ್ರಮ ಮಾಡಿದಾಗ ಏನೆಲ್ಲ ಪ್ರಕ್ರಿಯೆಗಳನ್ನ ದಾಟಬೇಕು, ಏನೆಲ್ಲ ಏರು-ಪೇರುಗಳಾಗುತ್ತವೆ ಎಂಬುದನ್ನು ನಾವು ಯೋಚಿಸುವುದಿಲ್ಲ. ಸಾವಿರಾರು ಜನ ಬಂದಾಗ ಪರದಾಡುವ ನಾವು, ಲಕ್ಷಾಂತರ ಜನರಿರುವ, ಅದೂ ವಿಭಿನ್ನ ಮನೋಭಾವದ ಸಾರ್ವಜನಿಕರಿರುವ ಸಮಾರಂಭದಲ್ಲಿ ಲೋಪ-ದೋಷಗಳಾಗುವುದು ಸಹಜ ಎಂದೂ ತಿಳಿಯದೇ ಟೀಕಿಸಿರುತ್ತೇವೆ. 'ಟೀಕಿಸುವುದು ನಮ್ಮ ಜನ್ಮಸಿದ್ಧ ಹಕ್ಕು' ಎಂಬ ವೃತ್ತಿ ಒಣ ಅಹಂಭಾವ ಇದಕ್ಕೆ ಕಾರಣವಾ, ಗೊತ್ತಿಲ್ಲ.
ಹತ್ತಾರು ವರ್ಷಗಳಿಂದ ಮನೆಯಲ್ಲಿ ಯಾವುದೇ ಸಮಾರಂಭವನ್ನು ಮಾಡದೇ ಇದ್ದುದರಿಂದ, ಮಗನ ಬ್ರಹ್ಮೋಪದೇಶ ಸಂದರ್ಭವನ್ನು ನೆಪವಾಗಿಟ್ಟುಕೊಂಡು ನನ್ನೆಲ್ಲ ಸ್ನೇಹಿತರು, ನೆಂಟರು, ಬಂಧುಗಳು, ಆತ್ಮೀಯರು, ವೃತ್ತಿ ಬಾಂಧವರು, ಗಣ್ಯ ಪರಿಚಿತರನ್ನು ಆಹ್ವಾನಿಸಿ, ಅವರ ಭಾಗಿದಾರಿಕೆಯಲ್ಲಿ ಸಿಗುವ ಸಂತಸವನ್ನು ಎಲ್ಲರಿಗೂ ಹಂಚುವ, ಆ ಮೂಲಕ ಎಲ್ಲರನ್ನೂ ಭೇಟಿ ಮಾಡುವ, ಪರಸ್ಪರ ಭಾವ ವಿನಿಮಯ ಮಾಡಿಕೊಳ್ಳುವ ಅವಕಾಶವಾಗಿ ಪರಿವರ್ತಿಸಲು ಯೋಚಿಸಿ ಈ ಕಾರ್ಯಕ್ರಮವನ್ನು ರೂಪಿಸಿದ್ದೆ. ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳ ಉದ್ದೇಶವೂ ಇದೇ ತಾನೆ.
ಆಮಂತ್ರಣ ಪತ್ರಿಕೆಯನ್ನು ಆಯ್ಕೆ ಮಾಡುವುದರಿಂದ ಹಿಡಿದು ಕಾರ್ಯಕ್ರಮ ಮುಗಿದು ಮನೆಗೆ ಬಂದ ಅತಿಥಿಗಳು ವಾಪಸ್ ಹೋಗುವ ತನಕ ಏನೇನು ಮಾಡಬೇಕು ಎಂಬುದರ ತನಕ ಯೋಚಿಸಿಯೇ ಇಡೀ ಕಾರ್ಯಕ್ರಮವನ್ನು ಎಲ್ಲರೂ ಸಂಯೋಜಿಸಿರುತ್ತಾರೆ. ಆಮಂತ್ರಣ ಪತ್ರಿಕೆ ಆಯ್ಕೆ ಮಾಡಲು ಹೋದಾಗ ನನಗೊಂದು ಪುಟ್ಟ ಅಚ್ಚರಿ ಕಾದಿತ್ತು. ಬೆಂಗಳೂರಿನ ಸುಲ್ತಾನಪೇಟೆಯಲ್ಲಿ ಆಮಂತ್ರಣ ಪತ್ರಿಕೆಗಳ ಅದ್ಭುತಲೋಕವೇ ತಲೆಯೆತ್ತಿರುವುದು ಕಾಲುಶತಮಾನದಿಂದ ರಾಜಧಾನಿಯಲ್ಲಿ ನೆಲೆಸಿದ್ದರೂ ನನ್ನ ಅನುಭವಕ್ಕೆ ಬಂದಿರಲಿಲ್ಲ. ನಾನೂರು -ಐನೂರು ಅಂಗಡಿಗಳಲ್ಲಿ ಸಾವಿರಾರು ನಮೂನೆಯ, ವಿನ್ಯಾಸಗಳ ಆಮಂತ್ರಣ ಪತ್ರಿಕೆಗಳು. ಹತ್ತು ರೂಪಾಯಿಯಿಂದ ಹಿಡಿದು ಹತ್ತು ಸಾವಿರ ರೂಪಾಯಿವರೆಗೆ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅಪರಿಮಿತ ಅವಕಾಶ. ಪ್ರತಿ ವರ್ಷ ಏನಿಲ್ಲವೆಂದರೂ ನೂರೈವತ್ತು ಕೋಟಿ ರೂ.ಗಳ ವಹಿವಾಟು ನಡೆಯುತ್ತದಂತೆ. ಮದುವೆ ಸ್ವರ್ಗದಲ್ಲಿ ನಿರ್ಧಾರವಾದರೂ ಆಮಂತ್ರಣ ಪತ್ರಿಕೆ ಮಾತ್ರ ಸುಲ್ತಾನಪೇಟೆಯಲ್ಲೇ ರೂಪುಗೊಳ್ಳುತ್ತದೆ. ಆಮಂತ್ರಣ ಪತ್ರಕ್ಕೆ ಅಂಟಿಕೊಳ್ಳುವ ಇತರ ಎಲ್ಲ ಸಾಮಗ್ರಿಗಳೂ ಒಂದೇ ಪ್ರದೇಶದಲ್ಲಿ ಸಿಗುವುದು ಗ್ರಾಹಕರ ಹಿತದೃಷ್ಟಿಯಿಂದ ಒಳ್ಳೆಯದೇ. ಬಸ್ ಸ್ಟಾಪ್‌ನಲ್ಲಿ ಎಲ್ಲವೂ ಲಭ್ಯ.
ಸಾಮಾನ್ಯವಾಗಿ ಮದುವೆ, ಮುಂಜಿ, ಗೃಹಪ್ರವೇಶದಂಥ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಬಹಳ ದೊಡ್ಡ ಕೆಲಸ ಅಂದ್ರೆ ಆ ಆಮಂತ್ರಣ ಪತ್ರಿಕೆಯನ್ನು ವಿತರಿಸುವುದು. ಅಂದ್ರೆ ಅತಿಥಿ, ನೆಂಟರು, ಆಪ್ತೇಷ್ಟರನ್ನು ಆಮಂತ್ರಿಸುವುದು. ಛತ್ರವನ್ನು ನಿರ್ಧರಿಸಿದ ನಂತರ ಅದರ ಅಲಂಕಾರ, ಒಪ್ಪು, ಓರಣ, ತೋರಣಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ. ನಮ್ಮ ಬಜೆಟ್‌ಗೆ ಸರಿ ಹೊಂದುವ ಅಲಂಕಾರ ಮಾಡುವ ಕಂಟ್ರಾಕ್ಟರ್‌ಗಳು ಸಿಗುತ್ತಾರೆ. ನಮಗೆ ಬೇಕಾದ ರೀತಿಯಲ್ಲಿ ಆ ಕೆಲಸ ಮಾಡಿಕೊಡುತ್ತಾರೆ. ಇನ್ನು ನಮಗೆ ಬೇಕಾದ ಮೆನು ಕೊಟ್ಟರೆ ಅಚ್ಚುಕಟ್ಟಾಗಿ ಬಡಿಸುವ ಅಡುಗೆಯವರು ಸಿಗುತ್ತಾರೆ. ಎಂಥ ಮಂಗಳ ಕಾರ್ಯವನ್ನು ಶಿಸ್ತುಬದ್ಧವಾಗಿ ನೆರವೇರಿಸುವ ನಿಟ್ಟಿನಲ್ಲಿ ಹತ್ತಾರು ಮಂದಿ ತರಹೇವಾರಿ ಸರ್ವೀಸ್ ಕೊಡುತ್ತಾರೆ. ಆದರೆ ನೀವೇ ಖುದ್ದಾಗಿ ನೀವೇ ಮಾಡಬೇಕಾದುದೆಂದರೆ ಅತಿಥಿಗಳನ್ನು ಆಮಂತ್ರಿಸುವುದು. ಇದನ್ನು ಮಾತ್ರ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಕೆಲವರಿಗೆ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡುವಂತಿಲ್ಲ, ಬೇರೆಯವರ ಮೂಲಕ ಕಳಿಸುವಂತಿಲ್ಲ, ಸ್ವತಃ ನಾವೇ ಹೋಗಿ ಕರೆಯಬೇಕು.
ಸಮಸ್ಯೆ ಎದುರಾಗುವುದೇ ಇಲ್ಲಿ. ನೀವು ಸ್ವತಃ ಕರೆಯಲು ಹೋದಿರೆಂದರೆ ಅವರು ನಿಮ್ಮ ಪಾಲಿಗಷ್ಟೇ ಅಲ್ಲ, ನೀವೂ ಅವರಿಗೆ ವಿಶೇಷ ವ್ಯಕ್ತಿಯೇ. ಹೀಗಾಗಿ ನೀವು ಆಮಂತ್ರಣ ಪತ್ರಿಕೆಯನ್ನು ಕೊಟ್ಟು ಬರಲು ಸಾಧ್ಯವಾಗುವುದೇ ಇಲ್ಲ. ಉಪಾಹಾರ ಸೇವಿಸಬೇಕು. ಕಾಫಿ ಕುಡಿಯಬೇಕು. ಬಹಳ ವರ್ಷಗಳ ನಂತರ ಹೋದಿರೆಂದರೆ ಊಟ ಮಾಡಬೇಕು. ಕೆಲವು ಕಡೆ ನೀವು ಬಂದಿದ್ದೀರೆಂದು ಕೇಸರಿಬಾತ್ ಅಥವಾ ಇನ್ನಿತರ ಸ್ವೀಟನ್ನು ಸಿದ್ಧಪಡಿಸುತ್ತಾರೆ. ನಿಮಗೆ ಬಿಪಿ, ಶುಗರ್ ಇದ್ದರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಅವರ ಮನೆಯೊಳಗೆ ಕಾಲಿಡುತ್ತಿದ್ದಂತೆ ಅವರು ಅಡುಗೆ ಮನೆಯೊಳಗೆ ಕಾಲಿಡುತ್ತಾರೆ. ಬೇಡ ಬೇಡ ಅಂದರೂ ಕೇಳುವುದಿಲ್ಲ. ಏನಾದರೂ ತಿಂಡಿ, ಸ್ವೀಟನ್ನು ತಯಾರಿಸಿಯೇ ತಯಾರಿಸುತ್ತಾರೆ. ಅವರು ಮಾಡಿದ್ದಾರಲ್ಲ ಎಂಬ ಕಿಚ್ಚಿಗೆ ನೀವು ತಿನ್ನಲೇಬೇಕು. ತಿನ್ನದಿದ್ದರೆ ಅವರಿಗೆ ಅವಮರ್ಯಾದೆ ಮಾಡಿದಂತೆ. ಮನೆಗೆ ಬಂದು ಏನೂ ಸೇವಿಸದೇ ಹೋದರೆ ಅದು ಆಮಂತ್ರಿಸಿದರೂ ಆಮಂತ್ರಿಸದಂತೆ! ಹಾಗೆಂಬ ಭಾವನೆ ಇನ್ನೂ ಹಲವರಲ್ಲಿದೆ. ಹೀಗಾಗಿ ನಿಮಗೆ ಬೇಡದಿರಲಿ, ಮನಸ್ಸಿಲ್ಲದಿರಲಿ, ಹೊಟ್ಟೆ ತುಂಬಿರಲಿ, ತಿಂದರೆ ನಿಮ್ಮ ಶುಗರ್ ಹೆಚ್ಚಾಗಲಿ, ಅವರು ಮಾಡಿದ್ದಾರೆಂದರೆ ನೀವು ತಿನ್ನಲೇಬೇಕು. ಅವರು ಕೊಟ್ಟಿದ್ದನ್ನೆಲ್ಲ ತಿಂದು ಆಮಂತ್ರಿಸಿದಾಗಲೇ ಅವರಿಗೆ ಸಮಾಧಾನ. ಪ್ರತಿದಿನ ಎಲ್ಲರ ಮನೆಯಲ್ಲೂ ಇದೇ ಆದರೆ ಆಮಂತ್ರಿಸಲು ಹೋದವರ ಕತೆ ಏನಾದೀತು? ಹಾಗೆಂದು ಯಾವ ನೆಂಟರಿಷ್ಟರೂ ಯೋಚಿಸುವುದಿಲ್ಲ. ಮನೆಗೆ ಆಮಂತ್ರಣ ಪತ್ರಿಕೆ ನೀಡಲು ಬಂದಿದ್ದಾರೆಂದರೆ ಏನಾದರೂ ಸೇವಿಸಲೇಬೇಕೆಂಬ ಕಟ್ಟಪ್ಪಣೆ.
ಇದು ನಮ್ಮ ರಾಜ್ಯದ ಎಲ್ಲೆಡೆಯೂ ಆಚರಣೆಯಲ್ಲಿರುವ ಪದ್ಧತಿ. ಉತ್ತರ ಕನ್ನಡದಲ್ಲಿ ಇದು ತುಸು ಅತಿ ಎನಿಸುವಷ್ಟು ಜಾಸ್ತಿ. ನಾನು ಶಿರಸಿಯ ನಮ್ಮ ಹತ್ತಿರದ ಬಂಧುಗಳ ಮನೆಗೆ ಕರೆಯಲು ಹೋಗಿದ್ದೆ. ಅದು ಒಂದು ಮನೆ. ಆದರೆ ಒಂದು ಸೂರಿನಡಿಯಲ್ಲಿ ಐದು ಕುಟುಂಬಗಳ ವಾಸ. ಇಡೀ ಮನೆಗೆ ಒಂದೇ ಜಗುಲಿ. ಮೊದಲನೆಯ ನೆಂಟರ ಮನೆಗೆ ಹೋದೆ. ಬಹಳ ವರ್ಷಗಳ ನಂತರ ಹೋದುದರಿಂದ ಮಾವಿನಹಣ್ಣಿನ ಸಿಹಿಕರಣೆ, ಹಲಸಿನ ಕಡುಬು ಮಾಡಿದರು. ಬೆಳಗಿನ ಉಪಾಹಾರ ಸೇವಿಸಿದ್ದರೂ ಬೇರೆ ಉಪಾಯವಿಲ್ಲದೇ ಸೇವಿಸಿದೆ. ಆನಂತರ ಕಾಫಿ ಬಂತು. ಅದನ್ನೂ ಕುಡಿದಿದ್ದಾಯಿತು. ಪಕ್ಕದ ಮನೆಗೆ ಹೋದೆ. ಮೊದಲ ಮನೆಯಲ್ಲಿ ಐದು ನಿಮಿಷ ಮುಂಚೆ ನಾನು ತಿಂದಿದ್ದನ್ನು ಅವರು ಕಣ್ಣಾರೆ ನೋಡಿದ್ದರು. ಹೀಗಾಗಿ ತಿಂಡಿ ತಿನ್ನುವಂತೆ ಒತ್ತಾಯಿಸಲಿಕ್ಕಿಲ್ಲ ಅಂದುಕೊಂಡಿದ್ದೆ. ಅವರ ಮನೆಗೆ ಬರುತ್ತಲೇ ಪುನಃ ಮಾವಿನಹಣ್ಣಿನ ಸಿಹಿಕರಣೆ, ಹಲಸಿನ ಹಣ್ಣಿನ ಕಡುಬು, ಬಾಳೆಕಾಯಿ ಚಿಪ್ಸ್. ಆನಂತರ ಕಾಫಿ. ದೂಸರಾ ಮಾತಿಲ್ಲದೇ ಎಲ್ಲವನ್ನೂ ಸೇವಿಸಿದೆ. ಆಮಂತ್ರಣ ಪತ್ರಿಕೆ ಕೊಟ್ಟು ಮೂರನೆ ಮನೆಗೆ ಹೋದೆ. ಆಗಲೇ ಒಳ ಮನೆಯಿಂದ ಶಿರಾ (ಕೇಸರಿಬಾತ್) ವಾಸನೆ ಘಮಘಮ ಮೂಗಿಗೆ ಬಡಿಯಿತು. 'ಆ ಎರಡು ಮನೆಯಲ್ಲಿ ಸೇವಿಸಿದ್ದನ್ನೆಲ್ಲ ನೀವು ನೋಡಿದ್ದೀರಿ. ಹೀಗಾಗಿ ಏನೂ ತಿನ್ನುವುದಿಲ್ಲ. ಈಗಾಗಲೇ ಹೊಟ್ಟೆ ಭರ್ತಿಯಾಗಿದೆ' ಅಂದೆ. 'ಎಲ್ಲಾದರೂ ಉಂಟಾ? ಬಹಳ ವರ್ಷಗಳ ನಂತರ ನಮ್ಮ ಮನೆಗೆ ಬಂದಿದ್ದೀಯಾ. ಅದೂ ಮಗನ ಉಪನಯನಕ್ಕೆ ಆಮಂತ್ರಿಸಲು ಬಂದಿದ್ದೀಯಾ. ಏನೂ ಸೇವಿಸದೇ ಹೋದರೆ ನಮಗೆ ಬೇಸರವಾಗುತ್ತದೆ. ಹೆಂಡತಿ ಶಿರಾ ಮಾಡಿದ್ದಾಳೆ. ತಿನ್ನಲೇಬೇಕು' ಎಂದು ಸುಗ್ರೀವಾಜ್ಞೆ ಹೊರಡಿಸಿದರು. ಬೇಡ ಬೇಡ ಅಂದರೂ ಬಡಿಸಿದರು. ಆಗಲೇ ನನ್ನ ಪ್ಯಾಂಟಿನ ಬೆಲ್ಟು ಬಿಗಿದುಕೊಳ್ಳಲಾರಂಭಿಸಿತ್ತು. ಅವರ ಮುಂದೆ ವಾದಿಸುವ ಬದಲು ಎರಡು ಚಮಚ ತಿಂದರಾಯಿತು ಎಂದು ನನಗೆ ಸಮಧಾನ ಹೇಳಿಕೊಂಡು ಆ ಎರಡು ತುತ್ತು ಬಾಯಿಗಿಟ್ಟೆ. ಪುನಃ ಮಾವಿನ ಹಣ್ಣಿನ ಸಿಹಿಕರಣೆ ಬಂತು. ಮತ್ತೆ ಬೇಡ ಅಂದರೂ ಬಿಡದೇ ಒಂದು ಸವುಟು ಸುರಿದರು. ತಿಂದೆ.
ನಾಲ್ಕನೆ ಮನೆಗೆ ಬಂದೆ. ನಾನು ಆ ಮೂರು ಮನೆಗಳಲ್ಲಿ ಸೇವಿಸಿದ್ದನ್ನು ಅವರೂ ಕಣ್ಣಾರೆ ನೋಡಿದ್ದರು. ಹೀಗಾಗಿ ನನ್ನ ಮೇಲೆ ದಬ್ಬಾಳಿಕೆ ನಡೆಸದೇ, ಉದರ ಶಿಕ್ಷೆ ವಿಧಿಸದೇ ಸುರಕ್ಷಿತವಾಗಿ ಕಳಿಸಿಕೊಡಬಹುದು ಎಂದು ಭಾವಿಸಿದ್ದೆ. ಮೊದಲ ಮನೆಗೆ ಹೋದಾಗಲೇ ನಾಲ್ಕನೆ ಮನೆಯ ಅತ್ತೆ ಉಪ್ಪಿಟ್ಟು, ಶಿರಾ, ಕಡುಬು, ಬಾಳೆಹಣ್ಣುಗಳನ್ನು ಇಟ್ಟು ನನಗಾಗಿ ಕಾಯುತ್ತಿದ್ದಳು. 'ಆ ಮೂವರ ಮನೆಯಲ್ಲಿ ತಿಂದು, ನಮ್ಮ ಮನೆಯಲ್ಲಿ ತಿನ್ನದೇ ಹೋದರೆ ಹೇಗೆ? ನೀನು ತಿನ್ನಲೇಬೇಕು. ಇಲ್ಲದಿದ್ದರೆ ನಾವು ನಿಮ್ಮ ಮಗನ ಉಪನಯನಕ್ಕೆ ಬರುವುದಾದರೂ ಹೇಗೆ? ಅಪರೂಪಕ್ಕೆ ಬಂದಿದ್ದೀಯಾ. ಹಾಗೆ ನೋಡಿದರೆ ನೀನು ಊಟ ಮಾಡಿ ಕರೆದು ಹೋಗಬೇಕು. ನಾನು ಹೆಚ್ಚೇನೂ ಮಾಡಿಲ್ಲ. ಬರೀ ಉಪ್ಪಿಟ್ಟು, ಶಿರಾ, ಕಡುಬು (ಉ.ಶಿ.ಕ ) ಅಷ್ಟೆ. ಅಷ್ಟರೊಳಗೆ ನಾನು 'ಸಾಮೂಹಿಕ ಅತ್ಯಾಚಾರ'ಕ್ಕೊಳಗಾಗಿದ್ದೆ. ಪುನಃ ಸೇವಿಸುವುದೆಂದರೆ ಮತ್ತೊಂದು ದೊಡ್ಡ ಶಿಕ್ಷೆಯೇ. ಆದರೆ ಬೇರೆ ದಾರಿಯಿಲ್ಲ. ಉ.ಶಿ.ಕ.ವನ್ನು ಬಾಯಿಯೊಳಗಿಟ್ಟೆ.
ಐದನೆ ಮನೆಗೆ ಬರುವ ಹೊತ್ತಿಗೆ ನಾನು ನಿತ್ರಾಣನಾಗಿದ್ದೆ. ಅಲ್ಲಿ ಪುನಃ 'ಅತ್ಯಾಚಾರ'ಕ್ಕೊಳಗಾಗುವುದರಲ್ಲಿ ಸಂದೇಹವೇ ಇರಲಿಲ್ಲ. ಅವರ ಮನೆಗೆ ಕಾಲಿಡುತ್ತಿದ್ದಂತೆ, 'ನಿಮ್ಮ ಮನೆಯಲ್ಲಿ ಮಾವಿನಹಣ್ಣಿನ ಸಿಹಿಕರಣೆ, ಹಲಸಿನ ಹಣ್ಣಿನ ಕಡುಬು, ಉಪ್ಪಿಟ್ಟು, ಶಿರಾ... ಏನು ಮಾಡಿದ್ದೀರಿ. ಬಹಳ ಹಸಿವಾಗಿದೆ. ಏನಾದರೂ ತಿನ್ನಲು ಕೊಡಿ' ಎಂದು ನಾನೇ ಹೇಳಿಬಿಟ್ಟೆ. ವಿಪರ್ಯಾಸ ಅಂದ್ರೆ ಕೊನೆ ಮನೆಗೆ ಬರುವ ಹೊತ್ತಿಗೆ ಟೈಮು ಸಿಕ್ಕಿದ್ದರಿಂದ ಊಟಕ್ಕೆ ಬಾಳೆ ಎಲೆ ಹಾಕಿದ್ದರು. 'ಅವರೆಲ್ಲರ ಮನೆಯಲ್ಲಿ ತಿಂಡಿ ತಿಂದಿದ್ದಾಯಿತು. ನಮ್ಮ ಮನೆಯಲ್ಲಿ ಮಾತ್ರ ಊಟ ಮಾಡಲೇಬೇಕು' ಎಂದು ಎಲ್ಲರೂ ಒತ್ತಾಯ ಮಾಡಲಾರಂಭಿಸಿದರು. ಹಾಗೆಂದು ಅವರೆಲ್ಲರೂ ಮೊದಲಿನ ನಾಲ್ಕು ಮನೆಗಳಲ್ಲಿ ಗಡದ್ದಾಗಿ ತರೇಹವಾರಿ ತಿಂಡಿ ಸೇವಿಸಿದ್ದನ್ನು ಕಣ್ಣಾರೆ ನೋಡಿದ್ದರು. ನನ್ನ ಮೇಲೆ ಅವರಿಗೆ ಸ್ವಲ್ಪವೂ ಕನಿಕರವಾಗಲಿ, ಅನುಕಂಪವಾಗಲಿ ಇಲ್ಲ ಎಂಬುದು ಮನವರಿಕೆಯಾಗಿತ್ತು. ಅವರ ಆತಿಥ್ಯದ ಮುಂದೆ ನನ್ನ ಉದರಬೇನೆ ನಗಣ್ಯವಾಗಿತ್ತು. ಇಂಥ ಸ್ಥಿತಿಯಲ್ಲಿ ಊಟಕ್ಕೆ ಬಾಳೆ ಹಾಕಿದರೆ, ನನ್ನ ಪರಿಸ್ಥಿತಿ ಹೇಗಿದ್ದಿರಬಹುದು?! ಊಟ ಮಾಡದಿದ್ದರೆ ಬಿಡುವುದಿಲ್ಲ ಎಂಬುದು ಖಾತ್ರಿಯಾದಾಗ ಊಟ ಮಾಡಿದ ಶಾಸ್ತ್ರ ಮಾಡಿ ಮೇಲಕ್ಕೆದ್ದೆ. ಮಗನ ಉಪನಯನ ಮುಗಿಯುವ ಹೊತ್ತಿಗೆ ನನ್ನ ಪರಿಸ್ಥಿತಿ ನೆನೆದು ನನ್ನ ಬಗ್ಗೆಯೇ ಕನಿಕರ, ಪಶ್ಚಾತ್ತಾಪ ಪಟ್ಟುಕೊಂಡೆ.
ಇದು ಒಂದು ದಿನದ ಕತೆಯಲ್ಲ. ಹೆಚ್ಚು ಕಮ್ಮಿ 20-25 ದಿನ ಪ್ರತಿದಿನವೂ ಇದೇ ಗೋಳು. ಆದರೆ ಈ ಗೋಳಿನ ಹಿಂದಿರುವ 'ಪ್ರೀತಿ' ನನ್ನನ್ನು ಸುಮ್ಮನಾಗಿಸುತ್ತಿತ್ತು. ನನ್ನ ಮುಂದೆ ಇಟ್ಟಿರುವುದನ್ನು ತಿನ್ನುವಂತೆ ಪ್ರೇರೇಪಿಸುತ್ತಿತ್ತು. ಮನೆಗೆ ಆಮಂತ್ರಿಸಲು ಬರುವವರಿಗೆ ತಿನ್ನಲು, ಕುಡಿಯಲು ಏನೇನೂ ಕೊಡಬಾರದು ಎಂಬ ಸಂಪ್ರದಾಯವನ್ನು ನಮ್ಮ ಹಿರಿಯರು ಯಾಕೆ ಜಾರಿಗೆ ತರಲಿಲ್ಲ? ಅವರ ಕಷ್ಟವನ್ನು ಅರಿತುಕೊಳ್ಳದೇ ಆತಿಥ್ಯದ ನೆಪದಲ್ಲಿ ತಿನ್ನು ತಿನ್ನು ಎಂದು ಹೇಳಿದರೆ ಮನೆಗೆ ಬಂದವರ ಕತೆ ಏನಾಗಬೇಡ? ಈ ಬಗ್ಗೆ ಯಾರೂ ಏಕೆ ಯೋಚಿಸುವುದಿಲ್ಲ? ಹೀಗೆಂದು ನನಗೆ ಅನೇಕ ಸಲ ಅನಿಸಿದ್ದುಂಟು. ಈ ಕಾರಣಕ್ಕೆ ಇರಬೇಕು. ಉಳಿದೆಲ್ಲ ಕೆಲಸಗಳಿಗಿಂತ ಅತಿಥಿಗಳನ್ನು ಆಮಂತ್ರಿಸುವುದೆಂದರೆ ಬಹಳ ದೊಡ್ಡ ಕೆಲಸ, ತಲೆಬೇನೆ ಎಂದು ಎಲ್ಲರೂ ಅವಲತ್ತುಕೊಳ್ಳುವುದು. ಹಾಗೆ ನೋಡಿದರೆ ಇದೊಂದು ಅತಿ ದೊಡ್ಡ ಸಾಂಕ್ರಾಮಿಕ ಸಾಮಾಜಿಕ ಪಿಡುಗು. ಈ ಕುರಿತು ಎಲ್ಲರೂ ಗಂಭೀರವಾಗಿ ಯೋಚಿಸಬೇಕು. ಅತಿಥಿ ಸತ್ಕಾರವೆಂದರೆ ಅವರು ಬೇಡ ಬೇಡ ಎಂದರೂ ತಿನ್ನಿಸಿ ಆನಂದಪಡುವುದಲ್ಲ. ನಮ್ಮ ಸಮಾಧಾನಕ್ಕೆ ಅವರ ಹೊಟ್ಟೆ ಮೇಲೆ ಹೊಡೆಯುವುದಲ್ಲ. ತಿಂಡಿ ತಿನ್ನಲು, ಊಟ ಮಾಡಲಷ್ಟೇ ಅತಿಥಿಗಳು ಮನೆಗೆ ಬರುವುದಿಲ್ಲ. ಮನೆಗೆ ಬಂದವರಿಗೆ ತಿನ್ನಿ ತಿನ್ನಿ ಎಂದು ಅತಿ ಒತ್ತಾಯ ಮಾಡುವುದು ಒಂದು ರೀತಿಯ ಶಿಕ್ಷೆಯೇ. ಅದರಲ್ಲೂ ಆಮಂತ್ರಿಸಲು ಬರುವವರು ಹತ್ತಾರು ಕಡೆಗಳಲ್ಲಿ ತಿಂಡಿಯನ್ನೋ, ಕಾಫಿಯನ್ನೋ ಸೇವಿಸಿ ಬರುವುದರಿಂದ, ಪುನಃ ಅವರ ಮೇಲೆ ನಮ್ಮ 'ಅತಿಥಿ ಸತ್ಕಾರ'ವನ್ನು ಹೇರಿದರೆ ಅದು ನಿಜಕ್ಕೂ ಘನಘೋರ ಶಿಕ್ಷೆಯೇ.
ನಟ, ಮಂತ್ರಿ ಅಂಬರೀಷ್ ಅವರನ್ನು ಆಮಂತ್ರಿಸಲು ಅವರ ಮನೆಗೆ ಹೋಗಿದ್ದೆ. ಅವರು ನನ್ನನ್ನು ನೋಡುತ್ತಲೇ, "ಸ್ವಾಮಿ, ಯಾವ ಜಮಾನದಲ್ಲಿದ್ದೀರಿ. ಮನೆ ಮನೆಗೆ ಹೋಗಿ ಕರೆಯುವ ಸಂಪ್ರದಾಯವನ್ನು ಇನ್ನೂ ಅನುಸರಿಸುತ್ತಿದ್ದೀರಲ್ಲಾ? ನಿಮಗೆ ಬೇರೆ ಕೆಲಸ ಇಲ್ಲವಾ?' ಅಂದರು. ಮತ್ತೊಬ್ಬ ಸ್ನೇಹಿತರು, 'ಈ ಕಾರಣಕ್ಕಾಗಿ ನನ್ನ ಮನೆಗೆ ಬರಬೇಕಿಲ್ಲ. ಇಷ್ಟು ಆಮಂತ್ರಣ ಸಾಕು. ಅಷ್ಟಕ್ಕೂ ನನಗೆ  invitation ಗಿಂತ   information  ಸಾಕು' ಎಂದರು. ಇನ್ನು ಕೆಲವರು 'ಎಸ್ಸೆಮ್ಮೆಸ್ ಕಳಿಸಿ ಬಿಡಿ, ಯಾಕೆ ತೊಂದರೆ ತೆಗೆದುಕೊಳ್ತೀರಿ?' ಅಂದರು. ಅಂಥದೇ ಎಸ್ಸೆಮ್ಮೆಸ್ ನೋಡಿ ದುಬೈನಿಂದ ಪ್ರವೀಣಶೆಟ್ಟಿ ತಮ್ಮ ಪತ್ನಿಯೊಂದಿಗೆ ಬಂದರು. ಸ್ನೇಹಿತನಾದ ಕಿರಣ್ ಉಪಾಧ್ಯಾಯ ಬಹರೇನ್‌ನಿಂದ ಆಗಮಿಸಿದರು. ಉಪನಯನದ ದಿನ ಬೆಳಗ್ಗೆ ಎಸ್ಸೆಮ್ಮೆಸ್ ಕಳಿಸಿದರೂ ಆತ್ಮೀಯರಾದ ಎಂ. ನಾರಾಯಣಸ್ವಾಮಿ ಪತ್ನಿಯೊಂದಿಗೆ ದಯಮಾಡಿಸಿದರು. ಬರೀ ಒಂದು ಫೋನ್ ಕರೆಗೆ ಅವೆಷ್ಟೋ ಪ್ರೀತಿಪಾತ್ರರು ಬಂದರು. ಮನೆಗೇ ಬಂದು ಕರೆಯಬೇಕು ಎಂದು ಯಾರೂ ನಿರೀಕ್ಷಿಸಿರುವುದಿಲ್ಲ. ಕಾಲ ಬದಲಾಗಿದೆ. ಆದರೆ ಮನೆಗೆ ಬಂದಾಗ ಮಾಡುವ ಅತಿಥಿ ಸತ್ಕಾರ ಮಾತ್ರ ಬದಲಾಗಿಲ್ಲ. ಇದಕ್ಕೆ ನಾನು ಹಾಗೂ ಹೆಚ್ಚಿದ ಏಳು ಕೆಜಿ ತೂಕವೇ ಸಾಕ್ಷಿ!
ಇದೇನೇ ಇರಲಿ, ಕರೆಯುವುದರಲ್ಲಿರುವ ಸಂತಸವೇ ಬೇರೆ. ಉಪನಯನದ ನೆಪದಲ್ಲಿ ನಾನು ಕನಿಷ್ಠ ಇನ್ನೂರು ಇನ್ನೂರೈವತ್ತು ನೆಂಟರ, ಸ್ನೇಹಿತರ, ಆಪ್ತರ, ಗಣ್ಯರ ಮನೆಗಳಿಗೆ ಹೋಗಿರಬಹುದು. ಅವರೊಂದಿಗಿನ ನನ್ನ ಸಂಬಂಧ ಮತ್ತಷ್ಟು ಹೊಳಪು ಪಡೆಯಿತು. ಬಂಧ ಮತ್ತಷ್ಟು ಗಟ್ಟಿಯಾಯಿತು. reconnect ಆಗಲು, ಸಂಬಂಧ re-establish ಆಗಲು ಸಹಾಯಕವಾಯಿತು. ಮನೆಗೆ ಬಂದವರು ಮನಸ್ಸಿನಲ್ಲಿ ನೆಲೆ ನಿಲ್ಲುತ್ತಾರೆ ಅಂತಾರಲ್ಲ, ಆ ಮಾತು ಎಷ್ಟು ನಿಜ ಎಂದು ಪದೇ ಪದೆ ಅನಿಸಿತು.
ನಿಮ್ಮನ್ನು ಆಮಂತ್ರಿಸಲು ಯಾರಾದರೂ ಮನೆಗೆ ಬಂದಾಗ ಅವರ ಮೇಲೆ ಪ್ರೀತಿಯೊಂದೇ ಅಲ್ಲ, ಕನಿಕರವೂ ಇರಲಿ.

-ವಿಶ್ವೇಶ್ವರಭಟ್
vbhat@me.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com