ಫಿಲ್ಟರ್, ಪ್ಯೂರಿಫಾಯರ್ ಇಲ್ಲದ ನೀರಿನ 'ಶುದ್ಧಿ'ಮನೆ ಕಥೆ!

ಫಿಲ್ಟರ್, ಪ್ಯೂರಿಫಾಯರ್ ಇಲ್ಲದ ನೀರಿನ 'ಶುದ್ಧಿ'ಮನೆ ಕಥೆ!
ಫಿಲ್ಟರ್, ಪ್ಯೂರಿಫಾಯರ್ ಇಲ್ಲದ ನೀರಿನ 'ಶುದ್ಧಿ'ಮನೆ ಕಥೆ!

ಬಯೋ ಸ್ಯಾಂಡ್ ಫಿಲ್ಟರ್ ಅನ್ನು ಮಾಡಿಕೊಳ್ಳುವುದು ಬಹು ಸುಲಭ. ಮನೆಯಲ್ಲಿಯೇ ಒಂದಡಿಯ ಪ್ಲಾಸ್ಟಿಕ್ ಡಬ್ಬ ಇದ್ದರೂ ಸಾಕು. ಅದನ್ನೇ ಕಂಟೇನರ್ ಆಗಿ ಬಳಸಿಕೊಳ್ಳಬಹುದು. ಅನುಕೂಲವಿದ್ದರೆ ಕಾಂಕ್ರೀಟ್‌ನಿಂದಲೂ ತಯಾರಿಸಿಕೊಳ್ಳಬಹುದು.
ಆ ಕಾಯಿಲೆಗಳೇನು ನಮಗೆ ನೋಟಿಸ್ ಕೊಟ್ಟು ಬರುವುದಿಲ್ಲ. ಕನಸಿನಲ್ಲೂ ಬಂದು 'ನಾಳೆ ಬರ್ತೀನಪ್ಪಾ... ದೇಹದ ಬಾಗಿಲು ತೆರೆದಿರು' ಅಂತ ಆರ್ಡರ್ ಮಾಡುವುದಿಲ್ಲ. ಹೊತ್ತುಗೊತ್ತಿಲ್ಲದ ಆಗಮನ. ಕಾಲದ ಹಂಗೂ ಅವಕ್ಕಿಲ್ಲ. ಬೇಸಿಗೆ ಇರಲಿ, ಮಳೆಗಾಲವಾಗಿರಲಿ ಅಥವಾ ಬೇಸಿಗೆ ಮುಗಿದು ಮಳೆಗಾಲ ಆರಂಭವಾಗುವ ಸಂಧಿ ಸಮಯವೇ ಆಗಿರಲಿ. ಸಾಂಕ್ರಾಮಿಕ ರೋಗಗಳು ಧುತ್ತೆಂದು ಪ್ರತ್ಯಕ್ಷವಾಗಿಬಿಡುತ್ತವೆ. ನಮ್ಮ ದೇಹ 'ನೋ' ಎಂದರೂ ಅವೇನು ಕೇಳುವುದಿಲ್ಲ. ಅಷ್ಟಕ್ಕೂ ಇನ್ನೂ ನಮ್ಮ ವಿಜ್ಞಾನ 'ಡಿಸೀಸ್‌ಪ್ರೂಫ್ ಜಾಕೆಟ್‌' ಅನ್ನು ಕಂಡುಹಿಡಿದಿಲ್ಲವಲ್ಲ!
ಅದು ರೋಗಾಣುಗಳ ಸಾಲು. ಕಾಲರಾ, ಮಲೇರಿಯಾ, ಅತಿಸಾರ, ಜ್ವರ, ವಾಕರಿಕೆ, ವಾಂತಿ ಸಾಲುಸಾಲು ಕಾಯಿಲೆಗಳ ಪೆರೇಡ್. ಗ್ರಾಮೀಣ ಪ್ರದೇಶ, ನಗರಗಳ ಕೊಳೆಗೇರಿಗಳಲ್ಲಂತೂ ಇವುಗಳ ಉಪಟಳ ಹೇಳತೀರದು. ಅಂದರೆ ಬಡವರೇ ಈ ರೀತಿಯ ಆರೋಗ್ಯ ತೊಂದರೆಗಳಿಗೆ ಒಳಗಾಗುತ್ತಾರೆ ಅಂತಾಯಿತು. ಅಪಾರ್ಟ್‌ಮೆಂಟಿನ ವಿಳಾಸ ಇವಕ್ಕೆ ಗೊತ್ತಿಲ್ಲ ಅಂತೇನಿಲ್ಲ. ಆದರೆ, ಅಶುದ್ಧಿ ಇದ್ದೆಡೆ ಇವುಗಳ ದಾಳಿ ಕಾಯಂ.
ಸ್ಥಳೀಯ ಆಡಳಿತಗಾರರಿಗೆ ಈ ಕಾಯಿಲೆಗಳ ದಾಳಿಯ ಮುನ್ಸೂಚನೆ ಇರುವುದಿಲ್ಲ ಅಂತಲ್ಲ. ಎಲ್ಲಾದರೂ ಸಾಂಕ್ರಾಮಿಕ ಕಾಯಿಲೆ ಸ್ಫೋಟದ ಸುದ್ದಿ ಬಂದ ತಕ್ಷಣ ಅವರು ಸಂತ್ರಸ್ತರನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗುವುದಿಲ್ಲ; ಆ ಪ್ರದೇಶದಲ್ಲಿನ ಕುಡಿಯುವ ನೀರು ಪೂರೈಕೆಯಲ್ಲಿ ಎಲ್ಲಿ ವ್ಯತ್ಯಯವಾಗಿದೆ? ಎಲ್ಲಾದರೂ ಕುಡಿಸುವ ನೀರಿನೊಂದಿಗೆ ಚರಂಡಿ ನೀರು ಸೇರಿಕೊಂಡಿದೆಯಾ? ಅಥವಾ ಬೇರಾವುದಾದರೂ ಕಾರಣಗಳಿಂದ ನೀರು ಕಲುಷಿತಗೊಂಡಿದೆಯಾ? ಇವೇ ಮೊದಲಾದ ವಿಚಾರಗಳತ್ತ ಗಮನ ಹರಿಸುತ್ತಾರೆ. ಬಹುಶಃ ನೀವು ಇಂಥ ವಾತಾವರಣವನ್ನು ಭೀಕರ ಭೂಕಂಪದ ನಂತರ, ಪ್ರವಾಹಗಳಂಥ ಪ್ರಾಕೃತಿಕ ವಿಕೋಪದ ಬಳಿಕ ನೋಡಬಹುದು. ಏಕೆಂದರೆ ಆಡಳಿತಗಾರರಿಗೆ ಚೆನ್ನಾಗಿ ಗೊತ್ತು, ಕಲುಷಿತ ನೀರು ಸೇವನೆಯಿಂದಲೇ ಇದು ಸಂಭವಿಸಿರುವುದು ಎಂದು. ಕಳೆದವರ್ಷ (2013) ಜನವರಿ 1ರಿಂದ ಮೇ 31ರವರೆಗಿನ ಕೇವಲ ಐದು ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ 58,911 ಜನ ಜಲಜನ್ಯ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದರು. ಇದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ. ಇಲಾಖೆ ಗಮನಕ್ಕೆ ಬಾರದ ಪ್ರಕರಣಗಳು ಸಾವಿರಾರು. ರಾಷ್ಟ್ರಮಟ್ಟದಲ್ಲಿ ಹೇಳುವುದಾದರೆ ಪ್ರತಿವರ್ಷ 37.7 ದಶಲಕ್ಷ ಭಾರತೀಯರು ಜಲಮೂಲದಿಂದ ಹರಡುವ ಕಾಯಿಲೆಗಳಿಂದ ಬಳಲುತ್ತಾರೆ. ಅವರಲ್ಲಿ ಮಕ್ಕಳ ಸಂಖ್ಯೆ ಆರು ಲಕ್ಷ.
ಶುದ್ಧ ಕುಡಿವ ನೀರು ಪೂರೈಸುವುದು ಯಾವುದೇ ಹಂತದ ಆಡಳಿತಕ್ಕೂ ಸವಾಲಿನ ವಿಷಯವೇ. ಗ್ರಾಮ ಪಂಚಾಯಿತಿಯುಂದ ಹಿಡಿದ ಕೇಂದ್ರ ಸರ್ಕಾರಕ್ಕೂ ಇದು ಸುಲಭದ ಕಾರ್ಯವಲ್ಲ. ಇವತ್ತಿಗೂ ಗ್ರಾಮೀಣ ಪ್ರದೇಶದ ಶೇ.70ರಷ್ಟು ಜನಸಂಖ್ಯೆಗೆ ಶುದ್ಧ ಕುಡಿವ ಒದಗಿಸಲು ಆಗುತ್ತಿಲ್ಲ. ದೇಶದ ಪ್ರತಿ ಮೂರರಲ್ಲಿ ಎರಡು ಮನೆಗಳಲ್ಲಿ ಸಂಸ್ಕರಿಸದ ನೀರನ್ನೇ ಅಡುಗೆಗೆ, ಕುಡಿಯಲು ಬಳಸುತ್ತಿದ್ದಾರೆ. ಕೊನೇಪಕ್ಷ ಕಾಯಿಸಿ ಕುಡಿಯಲೂ ಆಗುತ್ತಿಲ್ಲ. ಅದಕ್ಕೆ ಕಟ್ಟಿಗೆ, ಅಡುಗೆ ಅನಿಲ ಬೇಕಲ್ಲವೆ? ಹೀಗಾಗಿ ನೀರನ್ನು ಸಂಸ್ಕರಿಸದೇ ಕುಡಿಯುವವರೇ ಜಾಸ್ತಿ. ಮಧ್ಯಮ ವರ್ಗದವರೇನೊ ಮನೆಯಲ್ಲಿ ಫಿಲ್ಟರ್ ಇಟ್ಟುಕೊಳ್ಳಬಹುದು. ಸಿರಿವಂತರು ವಾಟರ್ ಪ್ಯೂರಿಫಾಯರ್‌ಗಳನ್ನು ಕೊಳ್ಳಬಹುದು. ಬಡವರು ಏನು ಮಾಡಿಯಾರು? ರಿವರ್ಸ್ ಆಸ್ಮೊಸಿಸ್ ತಾಂತ್ರಿಕತೆಯ ವಾಟರ್ ಪ್ಯೂರಿಫಾಯರ್‌ಗಳು ದುಬಾರಿ ಮಾತ್ರವಲ್ಲ, ನೀರು ವ್ಯರ್ಥವಾಗುವುದೂ ಹೆಚ್ಚು. ಒಂದು ಕೊಡ ನೀರನ್ನೂ ಮೈಲುಗಟ್ಟಲೆ ದೂರದಿಂದ ಹೊತ್ತು ತರುವವರು ಇಂಥವನ್ನು ಕನಸಿನಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ದುಬಾರಿ ನೀರು ಶುದ್ಧಕಗಳಿಗಿಂತ ಕಡುಬಡವರೂ ಮನೆಯಲ್ಲೇ ಮಾಡಿಕೊಳ್ಳಬಹುದಾದ, ದೀರ್ಘ ಬಾಳಿಕೆಯ, ಯಂತ್ರಗಳಿಗಿಂತಲೂ ಪರಿಶುದ್ಧ ನೀರು ನೀಡುವ ಸುಲಭ ಮಾರ್ಗೋಪಾಯವಿದೆ. ಅದುವೇ ಬಯೋಸ್ಯಾಂಡ್ ಫಿಲ್ಟರ್‌ಗಳು!
ಹಾಗೆ ನೋಡಿದರೆ ಬಯೋಸ್ಯಾಂಡ್ ಫಿಲ್ಟರ್‌ಗಳು ತೀರಾ ಹೊಸ ಕಲ್ಪನೆಯೇನೂ ಅಲ್ಲ. 200 ವರ್ಷ ಹಿಂದೆಯೇ ಬಳಕೆಯಲ್ಲಿದ್ದ ಸಾಂಪ್ರದಾಯಿಕ ವಿಧಾನವೇ ಇದು. ಒಂದರ್ಥದಲ್ಲಿ ಪರಂಪರಾಗತ ನೀರಿಂಗಿಸುವ ವಿಧಾನವೂ ಹೌದು. ಆದರೆ ಆಧುನಿಕ ರೂಪ ಕೊಟ್ಟದ್ದು ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದ ಡಾ. ಡೇವಿಡ್ ಮಾಂಜ್. ಆತ 1980ರಲ್ಲಿಯೇ ಕಡಿಮೆ ಖರ್ಚಿನಲ್ಲಿ ನೀರು ಸಂಸ್ಕರಣೆಗೆ ಇಂಥದ್ದೊಂದು ವಿಧಾನ ಕಂಡುಹಿಡಿದಿದ್ದರು. ಆದರೆ ಅಧಿಕೃತವಾಗಿ ಅದರ ಪ್ರಯೋಗಾಲಯ ಪರೀಕ್ಷೆ ನಡೆದದ್ದು 1991ರಲ್ಲಿ. ಅದಾದ ದಶಕದ ತರುವಾಯ ಡಾ. ಮಾಂಜ್ ಕೆನಡಿಯನ್ ನಾನ್‌ಪ್ರಾಫಿಟ್ ಸೆಂಟರ್ ಫಾರ್ ಅಪೊರ್ಡೆಬಲ್ ವಾಟರ್ ಅಂಡ್ ಸ್ಯಾನಿಟೇಶನ್ ಟೆಕ್ನಾಲಜಿ ಎನ್ನುವ ಸರ್ಕಾರೇತರ ಸಂಸ್ಥೆ ಹುಟ್ಟುಹಾಕಿದರು. ಕ್ವಾಸ್ಟ್ ಈಗ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಬಯೋಸ್ಯಾಂಡ್ ಫಿಲ್ಟರ್‌ಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸಂಸ್ಥೆ ತಾನೇ ಫಿಲ್ಟರ್‌ಗಳನ್ನು ಸಿದ್ಧಪಡಿಸಿ ಕೊಡುತ್ತದೆ, ಮನೆಯಲ್ಲೇ ಮಾಡಿಕೊಳ್ಳುವವರಿಗೆ ಅಗತ್ಯ ಮಾರ್ಗದರ್ಶನವನ್ನೂ ನೀಡುತ್ತಿದೆ. ಸಂಸ್ಥೆಯ ಪ್ರಯತ್ನದ ಫಲವಾಗಿ ಘಾನಾ, ಪಾಕಿಸ್ತಾನ ಮೊದಲಾದ ಬಡ, ಅಭಿವೃದ್ಧಿಶೀಲ ದೇಶಗಳಲ್ಲಿ ಬಯೋಸ್ಯಾಂಡ್ ಫಿಲ್ಟರ್‌ಗಳು ಈಗ ಜನಪ್ರಿಯ.
ಇವನ್ನು ಮಾಡಿಕೊಳ್ಳುವುದು ಬಹು ಸುಲಭ. ಮನೆಯಲ್ಲಿ ಒಂದಡಿಯ ಪ್ಲಾಸ್ಟಿಕ್ ಡಬ್ಬ ಇದ್ದರೂ ಸಾಕು. ಅದನ್ನೇ ಕಂಟೇನರ್ ಆಗಿ ಬಳಸಿಕೊಳ್ಳಬಹುದು. ಅನುಕೂಲವಿದ್ದರೆ ಕಾಂಕ್ರೀಟ್‌ನಿಂದಲೂ ತಯಾರಿಸಿಕೊಳ್ಳಬಹುದು.
ಕಂಟೇನರ್‌ನ ತಳದ ಎರಡು ಪದರಗಳಲ್ಲಿ ಜಲ್ಲಿ, ಅದರ ಮೇಲೆ ಮರಳು ತುಂಬುವುದು. ಅದೇ ರೀತಿ ಮರಳಿನಲ್ಲೂ ಎರಡು ಪದರ. ನಡುವೆ ಒಂದು ಡಿಫ್ಯೂಸರ್ ತಟ್ಟೆ ಬಳಸಬಹುದು. ಕಂಟೇನರ್ ಅನ್ನು ಬಿಗಿಯಾಗಿ ಮುಚ್ಚುವುದು. ಒಂದು ರಬ್ಬರ್ ಟ್ಯೂಬ್ ಮೂಲಕ ನೀರು ಹೊರಹೋಗುವ ವ್ಯವಸ್ಥೆ ಮಾಡಿಕೊಳ್ಳುವುದು. ಕಂಟೇನರ್‌ಗೆ ನೀರು ಹಾಕಿದಾಗ ಅದು ಮರಳು, ಜಲ್ಲಿಗಳಲ್ಲಿ ಶೋಧಗೊಂಡು, ಶುದ್ಧ ನೀರು ತಳದಲ್ಲಿ ಸಂಗ್ರಹವಾಗುತ್ತದೆ. ಮರಳು, ಜಲ್ಲಿಯ ಒತ್ತಡದಿಂದಾಗಿ ಟ್ಯೂಬ್‌ನಲ್ಲಿ ಸಂಗ್ರಹವಾಗುವ ನೀರು ಪುನಃ ಮೇಲಕ್ಕೆ ಹೋಗುತ್ತದೆ. ಅಲ್ಲಿನ ನಳದ ಮೂಲಕ ಬೇಕೆಂದಾಗ ಪಡೆದುಕೊಳ್ಳಬಹುದು. ಇದಕ್ಕೆ ತಗಲುವ ವೆಚ್ಚ ಅಬ್ಬಬ್ಬಾ ಎಂದರೂ 2ರಿಂದ 3 ಸಾವಿರ ರುಪಾಯಿ ಮಾತ್ರ. ಕೆನಡಾದ ಕ್ವಾಸ್ಟ್‌ನಿಂದಲೇ ತರಿಸಿಕೊಂಡರೂ ಸಾಗಣೆ ವೆಚ್ಚ ಇನ್ನೊಂದು ಸಾವಿರ ಜಾಸ್ತಿ ಆಗಬಹುದಷ್ಟೆ. ಬಾವಿ, ಕೊಳವೆ ಬಾವಿ, ಕೆರೆ, ನದಿ, ನಳ, ಮಳೆ ನೀರು ಹೀಗೆ ಯಾವ ನೀರನ್ನಾದರೂ ಈ ವಿಧಾನದಲ್ಲಿ ಶುದ್ಧೀಕರಿಸಬಹುದು. ವಿದ್ಯುತ್ ಇಲ್ಲದಿದ್ದರೆ ಫಿಲ್ಟರ್ ನೀರು ಸಿಗಲ್ಲ ಎನ್ನುವ ಮಂಡೆಬಿಸಿಯೂ ಇಲ್ಲ.
ಇಲ್ಲಿನ ತಾಂತ್ರಿಕತೆಯೂ ಸರಳ. ನೀರು ನಿಧಾನವಾಗಿ ಕೆಳಕ್ಕೆ ಇಳಿಯುತ್ತಿದ್ದಂತೆ ಮರಳಿನಲ್ಲಿ ನಡೆಯುವ ಜೈವಿಕ ಕ್ರಿಯೆ ನೀರಿನಲ್ಲಿನ ರೋಗಕಾರಕ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಬ್ಯಾಕ್ಟೀರಿಯಾಗಳನ್ನು ಹೊರತಳ್ಳುವುದು, ಹೀರಿಕೊಳ್ಳುವುದು, ಕಾವಿನಿಂದ ನಾಶಪಡಿಸುವುದು ಇತ್ಯಾದಿ ಹಲವು ರೀತಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ವಿದ್ಯುತ್ ನೆರವಿನಿಂದ ಕಾರ್ಯನಿರ್ವಹಿಸುವ ಪ್ಯೂರಿಫಾಯರ್‌ಗಳಿಗಿಂತ ಇವು ಶಕ್ತಿಶಾಲಿ. ನೀರಿನಲ್ಲಿನ ಮಣ್ಣು ಬೇರ್ಪಡುತ್ತದೆ. ಹುಳುಗಳು ಸಂಪೂರ್ಣ ನಾಶವಾಗುತ್ತವೆ. ಬ್ಯಾಕ್ಟೀರಿಯಾ ಶೇ. 98.5ರಷ್ಟು, ವೈರಸ್‌ಗಳು ಶೇ. 99ರಷ್ಟು ನಿರ್ನಾಮ ಹೊಂದುತ್ತವೆ. ಬಾಳಿಕೆ ವಿಚಾರದಲ್ಲಿಯೂ ಅಷ್ಟೇ, ಸಿಮೆಂಟ್ ಕಂಟೇನರ್‌ಗಳು ಮೂವತ್ತು ವರ್ಷ, ಸಿಮೆಂಟ್ ಕಂಟೇನರ್ ಹತ್ತು ವರ್ಷದರೆಗೆ ಯಾವುದೇ ತೊಂದರೆ ಇಲ್ಲ. ನಿರ್ವಹಣೆಯೂ ಸುಲಭ. ತಳದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಸುಲಭವಾಗಿ ತೆಗೆದುಹಾಕಬಹುದು. ಮುಖ್ಯವಾಗಿ ಇದು ಕಾರ್ಯನಿರ್ವಹಿಸುವುದು ಗುರುತ್ವಾಕರ್ಷಣೆ ತತ್ವದಲ್ಲಿ. ಒಂದೇಒಂದು ಸಮಸ್ಯೆ ಎಂದರೆ ಕ್ಲೋರಿನ್‌ನಂಥ ರಾಸಾಯನಿಕಗಳು ಅಧಿಕ ಪ್ರಮಾಣದಲ್ಲಿದ್ದರೆ ಮರಳಿನಲ್ಲಿನ ಜೀವಾಣುಗಳು ನಾಶವಾಗಿ, ಜೈವಿಕ ಪ್ರಕ್ರಿಯೆ ನಡೆಯುವುದಿಲ್ಲ. 10-15 ಸದಸ್ಯರಿರುವ ಮನೆಗಳಲ್ಲೂ ಬಯೋಸ್ಯಾಂಡ್ ಫಿಲ್ಟರ್ ಬಳಸಬಹುದು. ಶಾಲೆಗಳಲ್ಲೂ ಬಳಸಬಹುದು.
ನೋಡಿ, ಮರಳಿನಿಂದ ನಾವು ಶುದ್ಧೀಕರಣ ಕ್ರಾಂತಿಯೇ ಮಾಡಬಹುದು. ಆದರೆ, ನಾವು ಮರಳನ್ನು ಅಂಥ ದೃಷ್ಟಿಯಲ್ಲಿ ನೋಡುತ್ತಿಲ್ಲ. ನದಿಯೊಡಲಿನ ಈ ಹಾಸಿಗೆಯನ್ನು ಬರಿದು ಮಾಡುವತ್ತಲೇ ಚಿತ್ತ ಹರಿಸುತ್ತೇವೆ. ಅಕ್ರಮವಾಗಿ ನದಿಯ ಒಡಲನ್ನು ಬಗೆದು, ಅರಮನೆ ಕಟ್ಟುವ ಕನಸಿಗೆ ಕೈಹಾಕುತ್ತೇವೆ. ಕೆನಡಿಯನ್ನರಿಗೆ ಹೊಳೆಯುವ ಬಯೋಸ್ಯಾಂಡ್ ಫಿಲ್ಟರ್ ನಮಗೀ ಅವಸರದಲ್ಲಿ ಹೊಳೆಯದೇ ಇದ್ದಿದ್ದೇ ದುರಂತ. ಇರಲಿ, ಇನ್ನಾದರೂ ಮರಳು- ಜೆಲ್ಲಿಯನ್ನು ಇನ್ನೊಂದು ದೃಷ್ಟಿಯಲ್ಲಿ ನೋಡೋಣ...

-ರಾಧಾಕೃಷ್ಣ ಎಸ್. ಭಡ್ತಿ
abhygatha@yahoo.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com