ತಿರುವಳ್ಳವರ್‌ರಿಂದ ಡಿವಿಜಿ, ವ್ಯತ್ಯಾಸಗಳಿಲ್ಲದ ಹಾಲಿ-ಮಾಜಿ

ಬಿಜೆಪಿಯ ಎಲ್ಲ ಧ್ವನಿಗಳೂ ಬಜೆಟ್ ಅನ್ನು..
ತಿರುವಳ್ಳವರ್‌ರಿಂದ ಡಿವಿಜಿ, ವ್ಯತ್ಯಾಸಗಳಿಲ್ಲದ ಹಾಲಿ-ಮಾಜಿ

ಬಿಜೆಪಿಯ ಎಲ್ಲ ಧ್ವನಿಗಳೂ ಬಜೆಟ್ ಅನ್ನು ಪ್ರಶಂಸಿಸಿದವು. ಕಾಂಗ್ರೆಸ್ಸಿನ ಧ್ವನಿಗಳೆಲ್ಲ ಟೀಕಿಸಿದವು. ಹಾಗಾದರೆ ಹೊಸದೇನು? ದೆಹಲಿಯಲ್ಲಿ ಏನೂ ಬದಲಾಗುವುದಿಲ್ಲ ಎಂಬ ಭಾವನೆ ಕೆಲವು ವೇಳೆ ನಮ್ಮನ್ನು ಕಾಡುತ್ತದೆ. ಬದಲಾವಣೆಯನ್ನು ಗುರುತಿಸಲೇಬೇಕು ಎಂಬ ಸಂಕಲ್ಪ ಹೊಂದಿರುವ ನಮ್ಮಲ್ಲಿ ಕೆಲವರಿಗೆ ಅಂಥ ಬದಲಾವಣೆಗಳು ಕಂಡಾವು. ಸರ್ಕಾರಿ ನೌಕರರು ಈಗ ಸರಿಯಾದ ಸಮಯಕ್ಕೆ ಕಚೇರಿ ತಲುಪುತ್ತಾರೆ. ಇದು ಕೆಲಕಾಲದ ಹಿಂದೆ ರೈಲುಗಳು ಸರಿಯಾದ ಸಮಯಕ್ಕೆ ಸಂಚರಿಸಿದವು ಎಂಬ ಸುದ್ದಿ ನೀಡಿದ ಪುಳಕವನ್ನೇ ಕೊಟ್ಟಿದೆ. ಹಿಂದಿನ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರು ತಮ್ಮ ಬಜೆಟ್ ಭಾಷಣದಲ್ಲಿ ತಿರುವಳ್ಳವರ್ ಕವಿಯನ್ನು ಉಲ್ಲೇಖಿಸಿದ್ದರು. ಈ ಬಾರಿ ರೈಲ್ವೆ ಬಜೆಟ್ ಮಂಡಿಸಿದ ಡಿ. ವಿ. ಸದಾನಂದ ಗೌಡರು ಡಿವಿಜಿ ಅವರನ್ನು ಉದ್ದರಿಸಿದರು. ಅದುವೇ ಬದಲಾವಣೆ! ಅರುಣ್ ಜೇಟ್ಲಿ ಅವರು ಯಾರ ಮಾತನ್ನೂ ಉದಾಹರಿಸಲಿಲ್ಲ. ಇದೂ ಬದಲಾವಣೆಯೇ. ಒಟ್ಟಾರೆ ತಿರುಳು ಹೇಳುವುದಾದರೆ ನೀತಿಗಳು ಬದಲಾಗಲಿಲ್ಲ, ಬದಲಾಗುವುದೂ ಇಲ್ಲ. ಬಿಜೆಪಿ ಪ್ರತಿಪಕ್ಷದಲ್ಲಿದ್ದಾಗ ಹೇಗೆ ವರ್ತಿಸುತ್ತೋ ಅದೇ ವರ್ತನೆಯನ್ನು ಕಾಂಗ್ರೆಸ್ ಪ್ರಕಟಿಸಿದೆ. ಇನ್ನು, ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಹೇಗೆ ನಡೆದುಕೊಂಡಿತ್ತೋ ಅದರಂತೆಯೇ ಈಗ ಬಿಜೆಪಿ ವರ್ತಿಸಿದೆ.
ರೌಡಿತನಕ್ಕೂ, ನೀತಿ ನಿರೂಪಣೆ ವಿಷಯದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವಲ್ಲೂ ಸಾಮ್ಯಗಳೇ ತೋರುತ್ತವೆ. ಕಾಂಗ್ರೆಸ್ ರೈಲ್ವೆ ಬಜೆಟ್ ಅನ್ನು ವಿರೋಧಿಸಿದ್ದು ಸಹಜ. ಆದರೆ ವಿರೋಧಿಸಿದ ರೀತಿಯನ್ನು ಗಮನಿಸಿ. ಪಕ್ಷದ ಕಾರ್ಯಕರ್ತರು ರೈಲ್ವೆ ಸಚಿವರ ನಿವಾಸದ ನಾಮಫಲಕವನ್ನು ಕಿತ್ತರು. ಕಾಂಗ್ರೆಸ್‌ನ ಸಂಸದನೊಬ್ಬ ವೀರಾವೇಶದಿಂದ ಅದನ್ನು ತುಳಿದ. ಕಾಂಗ್ರೆಸ್ ಸೃಷ್ಟಿಸಿದ ಗಲಾಟೆಯಿಂದ ಮೊದಲ ದಿನದ ಸಂಸತ್ ಕಲಾಪ ಮುಂದೂಡಲಾದ ನಂತರ ನಡೆದ ಇನ್ನೊಂದು ಅನಪೇಕ್ಷಿತ ವಿದ್ಯಮಾನ ಇದು. ಹೆಚ್ಚು ಕಡಿಮೆ ಕಳೆದ ವರ್ಷದ ಈ ಸಂದರ್ಭದಲ್ಲೇ ಪ್ರತಿಪಕ್ಷದಲ್ಲಿದ್ದ ಬಿಜೆಪಿಯ ನಿರಂತರ ಗಲಾಟೆ ಮನೋಭಾವದಿಂದ ಸಂಸತ್ತಿನ ಎರಡೂ ಮನೆಗಳ ಕಲಾಪ ಆಗಾಗ್ಗೇ ಮುಂದೂಡುವ ಸಂದರ್ಭ ಎದುರಾಗಿತ್ತು. ಈಗ ಕಾಂಗ್ರೆಸ್ ಸಹ ಮುಯ್ಯಿಗೆ ಮುಯ್ಯಿ ಎಂಬಂತೆ ಅಂಥದೇ ವರ್ತನೆ ಪಕ್ಕಾಗಿರುವುದರಿಂದ ಜನರ ಮುಂದೆ ದಾಂದಲೆ ಮತ್ತು ದಾಂದಲೆ ಎಂಬ ಆಯ್ಕೆಗಳಷ್ಟೇ ಉಳಿದುಕೊಂಡಿವೆ.  ಹೊಸ ಸರ್ಕಾರವು ಹಳೆಯದಕ್ಕಿಂತ ಯಾವ ರೀತಿಯಲ್ಲೂ ಭಿನ್ನವಾಗಿಲ್ಲ ಎಂಬುದಕ್ಕೆ ರೈಲ್ವೆ ಬಜೆಟ್ ಉತ್ತಮ ಉದಾಹರಣೆ ಆಗಬಲ್ಲದು. ರೈಲ್ವೆ ದರವನ್ನು ಹೆಚ್ಚಿಸುವ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಈ ಸರ್ಕಾರ ಹಿಂದಿನ ಆಡಳಿತ ವ್ಯವಸ್ಥೆಗೆ ಆರೋಪಿಸಿತು. ಅವರು ಹಾಕಿಕೊಟ್ಟು ಹೋಗಿದ್ದ ದರಗಳನ್ನು ಇದೀಗ ಅನುಷ್ಠಾನಕ್ಕೆ ತರುತ್ತಿದ್ದೇವೆ ಅಷ್ಟೇ ಎಂಬುದು ಇವರ ಸಮರ್ಥನೆ. ಹಾಗಾದರೆ ಹಳಬರ ನಿರ್ಧಾರಗಳನ್ನು ಜಾರಿಗೆ ತರಲಿ ಎಂದು ಜನರು ಹೊಸ ಸರ್ಕಾರವನ್ನು ಆರಿಸಿದ್ದಾರೆಯೇ? ಸತ್ಯವನ್ನು ಒಪ್ಪಿಕೊಂಡರೆ ಸಚಿವರಿಗೆ ಇನ್ನಷ್ಟು ವಿಶ್ವಾಸ ಸಂದಾಯವಾಗುತ್ತದೆ. ವಾಸ್ತವ ಏನೆಂದರೆ ನೀವು ಪ್ರತಿಪಕ್ಷದಲ್ಲಿದ್ದಾಗ ಹಕ್ಕಿಯಂತೆ ಸ್ವಚ್ಛಂದ. ಆದರೆ ಅಧಿಕಾರಕ್ಕೆ ಬರುತ್ತಲೇ ಅದರದ್ದೇ ಆದ ಕೆಲವು ಒತ್ತಡಗಳಿಂದ ಕೈ ಕಟ್ಟುತ್ತದೆ.
ಈ ವಾಸ್ತವವನ್ನು ಅರುಣ್ ಜೇಟ್ಲಿ ಅವರಿಗಿಂತ ಚೆನ್ನಾಗಿ ಇನ್ಯಾರು ಬಲ್ಲರು? ಪ್ರತಿಪಕ್ಷದಲ್ಲಿದ್ದಾಗ ಅದರ ಪ್ರಮುಖ ಧ್ವನಿಯೇ ಜೇಟ್ಲಿಯವರದ್ದಾಗಿತ್ತು. 1962ರ ಚೀನಾ ಯುದ್ಧದ ಸಂಬಂಧ ಹೆಂಡರ್ಸನ್- ಬ್ರೂಕ್ಸ್ ವರದಿಯನ್ನು ಬಹಿರಂಗಪಡಿಸಬೇಕು ಎಂದು ಅವರು ಆಗಿನ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಅದೇ ಜೇಟ್ಲಿ ಈಗ ಸರ್ಕಾರದ ಪ್ರಮುಖ ಧ್ವನಿಯಾಗಿ ಹೇಳುತ್ತಿದ್ದಾರೆ- ಈ ವರದಿಯನ್ನು ಬಹಿರಂಗಗೊಳಿಸುವುದು ರಾಷ್ಟ್ರೀಯ ಹಿತಾಸಕ್ತಿಗೆ ಮಾರಕ ಎಂದು! ಈ ಬಗ್ಗೆ ಭಿನ್ನ ಅಭಿಪ್ರಾಯಗಳು ಇದ್ದಿರಬಹುದು. ಭಾರತದ ಹಿಮಾಲಯ ಸದೃಶ ಸೋಲಿನ ಅವಮಾನಕ್ಕೆ ಅದಕ್ಷತೆ ಮತ್ತು ಅಹಮಿಕೆಯ ಸಂಘರ್ಷಗಳು ಹೇಗೆ ಕಾರಣವಾದವು ಎಂಬುದನ್ನು ವಿವರಿಸುವ ಪುಸ್ತಕಗಳೆಲ್ಲ ಅದಾಗಲೇ ಪ್ರಕಟಗೊಂಡಿವೆ. ವಿಷಯ ಅದಲ್ಲ. ಜೇಟ್ಲಿ ಈಗ ರಕ್ಷಣಾ ಸಚಿವರು ಎಂಬ ಕಾರಣಕ್ಕೆ ನಾವು ಅವರು ರಿವರ್ಸ್ ಗೇರ್ ಹಾಕಿರುವುದನ್ನು ಒಪ್ಪಿಕೊಳ್ಳಬೇಕು.  ಕಾರ್ಯಾಚರಣೆ ಹಂತದ ಪ್ರಮುಖಾಂಶಗಳ ಬಗ್ಗೆ ನೀವು ತುಸು ಗಮನ ಹರಿಸಿದರೆ ಅಲ್ಲಿಯೂ ಸೋನಿಯಾ ಗಾಂಧಿ ಯುಗ ಹಾಗೂ ಮೋದಿಯುಗದಲ್ಲಿ ಸಾಮ್ಯಗಳು ಕಾಣುತ್ತವೆ. ಎಲ್ಲ ಅಧಿಕಾರಗಳನ್ನು ಏಕವ್ಯಕ್ತಿಯಲ್ಲಿ ಕೇಂದ್ರೀಕರಿಸುವುದೇ ಅವತ್ತಿನ ಮಂತ್ರವಾಗಿತ್ತು. ಈಗಲೂ ಅದೇ ಮಂತ್ರ. ಸೋನಿಯಾ ಗಾಂಧಿಯವರು ಸ್ಚೆನೋಗ್ರಾಫರ್‌ಗಳನ್ನು ಹಾಗೂ ಕುಟುಂಬಕ್ಕೆ ನಿಕಟವಾಗಿದ್ದವರನ್ನು ಅಧಿಕಾರದಲ್ಲಿ ತಂದುಕೂರಿಸಿದರು. ಅವರಿಗೆ ತಮ್ಮ ಮೇಲೆ ನಿಷ್ಠೆ ಇದೆ ಎಂಬುದೊಂದೇ ಸಾಕಾಗಿದ್ದ ಮಾನದಂಡ. ಪ್ರಧಾನಿ ಕಾರ್ಯಾಲಯದ ಮುಖ್ಯ ಕಾರ್ಯದರ್ಶಿ ನೇಮಕ ವಿಚಾರದಲ್ಲೂ ಪ್ರಧಾನಿಯ ಇಚ್ಛೆ ಈಡೇರಗೊಡದೇ ತಮ್ಮ ಕುಟುಂಬನಿಷ್ಠರನ್ನು ಕೂರಿಸಿದರು. ಇಂಥದ್ದೇ ಆಶಯಗಳ ಈಡೇರಿಕೆಗೆ ನರೇಂದ್ರ ಮೋದಿಯವರು ಇನ್ನೊಂದು ಬಗೆಯ ಆದೇಶದ ದಾರಿ ಹುಡುಕಿಕೊಂಡಿದ್ದಾರೆ. ಅವರ ಸರ್ಕಾರದ ಮೊದಲ ಆದೇಶವೇ ತಾವು ಆರಿಸಿದ ಮುಖ್ಯ ಕಾರ್ಯದರ್ಶಿಗಳನ್ನು ನಾನಾ ಇಲಾಖೆಗಳಲ್ಲಿ ಕೂರಿಸುವುದಾಗಿತ್ತು.
ಇಂದಿರಾ ಗಾಂಧಿಯವರಂತೆ ಸುಪ್ರೀಂಕೋರ್ಟ್ ಅನ್ನೇ ಅಧೀನವಾಗಿಸುವ ಹಂತಕ್ಕೆ ನರೇಂದ್ರ ಮೋದಿಯವರು ಹೋಗಲಾರರೇನೋ. ಆದರೆ, ಸುಪ್ರೀಂಕೋರ್ಟ್‌ನ ಕೊಲಿಜೀಯಮ್ ತಾನು ಪದೋನ್ನತಿಗೆ ಆರಿಸಿದ್ದವರ ಪೈಕಿ ಒಬ್ಬರಾಗಿದ್ದ ಗೋಪಾಲ ಸುಬ್ರಹ್ಮಣಿಯನ್ ಅವರನ್ನು ಪಕ್ಕಕ್ಕೆ ಸರಿಯುವಂತೆ ಮಾಡಿದ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕಟು ಶಬ್ದಗಳಲ್ಲಿ ಎಚ್ಚರಿಸಿದ್ದಾರೆ. ಸುಬ್ರಹ್ಮಣ್ಯನ್ ಅವರು ಅಮಿಕಸ್ ಕ್ಯೂರಿ ಆಗಿ ಕೆಲಸ ಮಾಡಿದ್ದ ಪ್ರಕರಣದ ವರದಿಯೇ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣವನ್ನು ಸುಪ್ರೀಂಕೋರ್ಟ್, ಗುಜರಾತ್ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವುದಕ್ಕೆ ಕಾರಣವಾಯಿತು.ಆಗ ನಡೆದ ಸಿಬಿಐ ವಿಚಾರಣೆಯೇ ಅವತ್ತಿಗೆ ಗುಜರಾತ್‌ನ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರ ಬಂಧನಕ್ಕೆ ಎಡೆಮಾಡಿಕೊಟ್ಟಿತು. ಆ ಪ್ರಕರಣದಲ್ಲಿ ಗುಜರಾತ್ ಸರ್ಕಾರದ ಪರ ಮೂವರು ನ್ಯಾಯವಾದಿಗಳು ವಾದಿಸಿದ್ದರು. ಆ ಎಲ್ಲ ಮೂವರಿಗೆ ಈಗ ಸರ್ಕಾರದ ಹುದ್ದೆಗಳು ಸಿಕ್ಕಿವೆ. ಅಟಾರ್ನಿ ಜನರಲ್, ಸಾಲಿಸಿಟರ್ ಜನರಲ್ ಹಾಗೂ ಅಡಿಷನಲ್ ಸಾಲಿಸಿಟರ್ ಜನರಲ್ ಹುದ್ದೆಗಳಲ್ಲಿ ಅವರು ವಿರಾಜಮಾನರು. ಆ ಪ್ರಕರಣದಲ್ಲಿ ಅಮಿತ್ ಶಾ ಅವರನ್ನು ಪ್ರತಿನಿಧಿಸಿದ್ದ ನ್ಯಾಯವಾದಿಯೊಬ್ಬರನ್ನು ಸುಪ್ರೀಂಕೋರ್ಟ್‌ನ ಕೊಲಿಜಿಯಮ್ ವ್ಯವಸ್ಥೆಗೆ ಪದೋನ್ನತಿಗೆ ಶಿಫಾರಸ್ಸು ಮಾಡಲಾಗಿದೆ. ಹೀಗೆ ಅದ್ಭುತಗಳು ತೆರೆದುಕೊಳ್ಳುತ್ತಲೇ ಹೋಗುತ್ತವೆ.  ಆಸಕ್ತಿಕರ ವಿಷಯವೆಂದರೆ ಈ ಎಲ್ಲ ವಿಚಾರಗಳಲ್ಲಿ ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾದಾಗ ಬಿಜೆಪಿಯ ಕೆಳಹಂತದ ನಾಯಕತ್ವ ಮಾತ್ರವೇ ಪ್ರತಿಕ್ರಿಯಿಸುತ್ತದೆ. ಮೇಲಿನವರು ಅಸಾಧ್ಯ ಮೌನವೊಂದನ್ನು ಕಾಪಾಡಿಕೊಳ್ಳುತ್ತಾರೆ. ಇದೂ ಸಹ ವ್ಯವಸ್ಥೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಹಾಗೆಯೇ ತೇಲಿಸಿಬಿಡುವ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ನೀತಿಯನ್ನೇ ಹೋಲುತ್ತದೆ. ಒಟ್ಟಾವಿಯಾ ಕ್ವಟ್ರೋಕಿ ಹಾಗೂ ರಾಬರ್ಟ್ ವಾದ್ರಾರಂಥ ಜನರನ್ನು ತುಸು ನೆನಪಿಸಿಕೊಳ್ಳಿ.ಯಾವ ಪಕ್ಷ ಬಂದರೂ ಹೋದರೂ ಇಂಥ ಜನ ನಿರಾತಂಕವಾಗಿಯೇ ಇರುತ್ತಾರೆ. ಬಹುಶಃ ಈ ಜನರನ್ನೇ ಬದಲಾಯಿಸಿ ಹೊಸರಕ್ತ ಪ್ರತಿಷ್ಠಾಪಿಸುವ ಸಮಯ ಬಂದಿದೆಯೇನೋ?

- ಟಿಜೆಎಸ್ ಜಾರ್ಜ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com