ನಮಗೆ ತುರ್ತಾಗಿ ಹಲವು ಪದಗಳು ಬೇಕಾಗಿವೆ, ಯಾರು ಕೊಡ್ತೀರಿ?

ಒಂದೇ ರೂಮಿನಲ್ಲಿ ಸತಿ-ಪತಿಗಳಂತೆ ಒಟ್ಟಿಗೆ ಇರುವ living in relationship...
ನಮಗೆ ತುರ್ತಾಗಿ ಹಲವು ಪದಗಳು ಬೇಕಾಗಿವೆ, ಯಾರು ಕೊಡ್ತೀರಿ?

ಒಂದೇ ರೂಮಿನಲ್ಲಿ ಸತಿ-ಪತಿಗಳಂತೆ ಒಟ್ಟಿಗೆ ಇರುವ living in relationship ಬೆಂಗಳೂರಿನಲ್ಲೊಂದೇ ಅಲ್ಲ, ಮೈಸೂರು, ಮಂಗಳೂರು, ಹುಬ್ಬಳ್ಳಿಯಂಥ ನಗರಗಳಲ್ಲೂ ಚಾಲ್ತಿಗೆ ಬಂದಿದೆ. ಅಂಥ ಸಂಬಂಧವನ್ನು ಅದೇ ಅಂದದಲ್ಲಿ ಹೇಳುವ ಕನ್ನಡ ಪದವಿಲ್ಲ. ಅದು ಇಲ್ಲವಲ್ಲ ಎಂದು ಯಾವ ಕನ್ನಡದ ವಿದ್ವಾಂಸರಿಗೆ, ಪಂಡಿತರಿಗೆ, ಭಾಷಾ ತಜ್ಞರಿಗೆ, ಪದಪ್ರೇಮಿಗಳಿಗೆ ಅನಿಸುತ್ತಿಲ್ಲ. ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು ಈ ಕೆಲಸವನ್ನು ನಿಲ್ಲಿಸಿ, ಬಹಳ ವರ್ಷಗಳೇ ಸಂದವು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಈ ಕೆಲಸ ಶ್ರದ್ಧೆಯಿಂದ ನಡೆದ ಬಗ್ಗೆ ತಿಳಿದುಬರುತ್ತಿತ್ತು. ಈಗ ಅಲ್ಲೂ ಈ ಕೆಲಸ ನಿಂತಿದೆ.

There will always be more things and ideas
than there are words -Richard Lederer
ಹಿಂದಿನ ತಿಂಗಳು ಪ್ಯಾರಿಸ್‌ನಲ್ಲಿ ಒಂದು ವಿಶೇಷ ಶೃಂಗಸಭೆ ಏರ್ಪಟ್ಟಿತ್ತು. ಫ್ರೆಂಚ್ ಭಾಷೆಯ ಭವಿಷ್ಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸಂಘಟಿಸಿದ ಸಭೆ ಆದಾಗಿತ್ತು. ಭಾಷಾ ಶಾಸ್ತ್ರಜ್ಞರು, ಭಾಷಾ ವಿಜ್ಞಾನಿಗಳು, ಶಿಕ್ಷಣವೇತ್ತರು, ಸಾಹಿತಿಗಳು, ಚಿಂತಕರು, ಪಂಡಿತರು, ಬುದ್ಧಿಜೀವಿಗಳು, ಅಧಿಕಾರಿಗಳು, ಭಾಷಾ ನೀತಿ-ನಿರೂಪಕರು, ಪತ್ರಕರ್ತರು, ಮುಂತಾದ ಪ್ರಮುಖರು ಆ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದರು. ಈ ಸುದ್ದಿಯನ್ನು ಓದುತ್ತಿದ್ದಂತೆ ಕುತೂಹಲದ ಆ್ಯಂಟೆನಾ ನಿಗರಿ ನಿಂತಿತು. ಇದೊಂದು ಔಪಚಾರಿಕ ಸಭೆ ಆಗಿರಲಿಲ್ಲ. ಬೋಂಡಾ, ಬಾತ್ ತಿಂದು ಎದ್ದು ಹೋಗುವ ಸಭೆಯೂ ಆಗಿರಲಿಲ್ಲ. ಫ್ರೆಂಚ್ ಭಾಷೆಯ ಭವಿಷ್ಯ, ಭಾಷೆಗೆ ಎದುರಾಗಿರುವ ಆತಂಕ, ಅಪಾಯ, ಭಾಷೆಯನ್ನು ಉಳಿಸಿ, ಬೆಳೆಸುವ ದಾರಿಗಳೇನು ಮುಂತಾದ ಪ್ರಮುಖ, ಕಾಡುವ ಪ್ರಶ್ನೆಗಳಿಗೆ ಉತ್ತರ, ಪರಿಹಾರಗಳನ್ನು ಕಂಡುಕೊಳ್ಳುವ ಜವಾಬ್ದಾರಿ, ಕಾಳಜಿ ಆ ಸಭೆಗೆ ಇತ್ತು.
ಹಾಗೆ ನೋಡಿದರೆ ಫ್ರೆಂಚ್ ಭಾಷೆಯ ವಿಷಯದಲ್ಲಿ ಇಂಥ ಸಭೆಗಳು ಆಗಾಗ ನಡೆಯುತ್ತಿರುತ್ತವೆ. ಭಾಷೆಯ ವಿಷಯದಲ್ಲಿ ಫ್ರೆಂಚ್ ಮಂದಿ ನಮ್ಮ ತಮಿಳರನ್ನು ಮೀರಿಸುತ್ತಾರೆ. ಆಡುಭಾಷೆ ವಿಚಾರಕ್ಕೆ ಬಂದರೆ ಅವರು ತುಳು ಭಾಷಿಕರಂತೆ ಭಾಷಾ ವೈಭವ ಮೆರೆಯುವ ಸುಬಗ ಸುಬ್ಬರಾಯರು! ಹುಟ್ಟುವ ಮೊದಲೇ ಮಾತಾಡಲು ಬರುತ್ತಿದ್ದರೆ ಅಲ್ಲೂ ತುಳುವಿನಲ್ಲೇ ಮಾತಾಡುವಂತೆ, ಫ್ರೆಂಚ್ ಮಂದಿಗೆ ಸಹ ತಮ್ಮ ಭಾಷೆಯ ಬಗ್ಗೆ ಅಂಥ ಪ್ರೇಮ.
ಇಂಗ್ಲಿಷಿನ ತವರೂರಾದ ಲಂಡನ್, ಪ್ಯಾರಿಸ್‌ನಿಂದ ಬರೀ ಒಂದು ತಾಸು ವಿಮಾನ ಪ್ರಯಾಣದಷ್ಟು ಹತ್ತಿರವಿದೆ. ಲಂಡನ್‌ನ ಗಾಳಿ, ವಾಸನೆ ಪ್ಯಾರಿಸ್‌ಗೆ ಸೋಂಕಲು ಅಷ್ಟೇ ಸಮಯ ಸಾಕು. ಆದರೂ ಫ್ರೆಂಚ್ ಮಂದಿ ಇಂಗ್ಲಿಷನ್ನು ತಮ್ಮ ದೇಶದೊಳಗೆ ಬರಲು ಬಿಟ್ಟಿಲ್ಲ. ಇಂಗ್ಲಿಷಿನ ವಾಸನೆ ಸಹ ಅವರಿಗೆ ಆಗಿ ಬರೊಲ್ಲ. ಇಂಗ್ಲಿಷ್ ಒಳಬರದಂತೆ ದೇಶದ ಸುತ್ತಲೂ ಭದ್ರಕೋಟೆ ನಿರ್ಮಿಸಿದ್ದಾರಾ ಎಂಬ ಗುಮಾನಿ ಬರುವಂತೆ ಇಂಗ್ಲಿಷ್‌ನ್ನು ತಡೆದು ನಿಲ್ಲಿಸಿದ್ದಾರೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಸಾರ್ವಜನಿಕ ತಾಣ, ಸಿನಿಮಾ ಥಿಯೇಟರ್, ಹೋಟೆಲ್ ಮೆನು, ಬಸ್ ನಿಲ್ದಾಣ... ಹೀಗೆ ಎಲ್ಲಿ ನೋಡಿದರೂ ಫ್ರೆಂಚ್ ಭಾಷೆಯೇ ರಾರಾಜಿಸುತ್ತದೆ. ಎಲ್ಲ ಫಲಕ, ಅಂಗಡಿ ಬೋರ್ಡ್‌ಗಳೂ ಅಲ್ಲಿನ ಭಾಷೆಯಲ್ಲಿಯೇ ಕಂಗೊಳಿಸುತ್ತವೆ. ಹೋಟೆಲ್‌ನಲ್ಲಿ ವೇಟರ್ ಜತೆ ಇಂಗ್ಲಿಷಿನಲ್ಲಿ ಮಾತಾಡಿದರೂ ಫ್ರೆಂಚ್‌ನಲ್ಲಿಯೇ ಉತ್ತರಿಸುತ್ತಾನೆ. ನೀವು ಪ್ಯಾರಿಸ್‌ಗೆ ಹೊಸಬರಾದರೆ, ಫ್ರೆಂಚ್ ಗೊತ್ತಿಲ್ಲದಿದ್ದರೆ, ನಿಮಗೆ ಇಂಗ್ಲಿಷ್ ಮಾತ್ರ ಸಂಪರ್ಕ ಭಾಷೆಯಾದರೆ, ಒಂದೆರಡು ದಿನ ತುಸು ತೊಂದರೆಯಾಗುತ್ತದೆ. ಆದರೂ ಈ ವಿಷಯದಲ್ಲಿ ಅಲ್ಲಿನ ಮಂದಿ ಚೌಕಾಶಿಗೆ ಸಿದ್ಧರಿಲ್ಲ. ಫ್ರೆಂಚ್ ಹೊರತಾಗಿ ಇಂಗ್ಲಿಷ್‌ನ್ನು ಸ್ವೀಕರಿಸಲು ಸಿದ್ಧರಿಲ್ಲ. 'ಇಂಗ್ಲಿಷ್ ಅಂದ್ರೆ ಜಿರಳೆ ಇದ್ದಂತೆ. ಮೀಸೆ ತೂರಿಸಲು ಅವಕಾಶ ಕೊಟ್ಟರೆ, ಇಡೀ ಶರೀರವನ್ನೇ ತೂರಿಸಿಬಿಡುತ್ತದೆ' ಎಂಬುದು ಅವರಿಗೆ ಗೊತ್ತಿದೆ. ಅದಕ್ಕಿಂತ ಹೆಚ್ಚಾಗಿ ಅವರಿಗೆ ತಮ್ಮ ಭಾಷೆ ಮೇಲೆ ಅಂಥ ಮೋಹ!
ಆದರೆ ಇಂಗ್ಲಿಷ್ ಎಂಬ ಜಿರಳೆ ಪದೇ ಪದೆ ತನ್ನ ಮೀಸೆಯನ್ನು ತೂರಿಸುತ್ತಲೇ ಇದೆಯೆಂಬುದು ಫ್ರೆಂಚರಿಗೆ ತಿಳಿಯದ ಸಂಗತಿಯೇನಲ್ಲ. ಹೀಗಾಗಿ ಅವರಿಗೆ ಈ ಭಯ ಸದಾ ಕಾಡುತ್ತಲೇ ಇದೆ. ಇಂದಲ್ಲ ನಾಳೆ ಈ 'ಮೀಸೆಮಾಮ' ದೇಹ ತೂರಿಸದೇ ಬಿಡೊಲ್ಲ ಎಂಬುದು ಅವರಿಗೆ ಗೊತ್ತು. ಅದಕ್ಕಾಗಿ ಅವರು ಕಾಲಕಾಲಕ್ಕೆ ಇಂಥ ಸಭೆ, ಕಮ್ಮಟ, ವಿಚಾರಗೋಷ್ಠಿಯನ್ನು ಏರ್ಪಡಿಸುತ್ತಲೇ ಇರುತ್ತಾರೆ. ಮೊದಲ ಐದು ವರ್ಷಗಳ ಕಾಲ ಶಾಲೆಯಲ್ಲಿ ಇಂಗ್ಲಿಷ್‌ಗೆ ಅವರು ಇನ್ನೂ ಪ್ರವೇಶ ಕೊಟ್ಟಿಲ್ಲ. ಯಾರೇ ಇರಲಿ, ಅವರಿಗೆ ಫ್ರೆಂಚ್ ಕಡ್ಡಾಯ. ಫ್ರೆಂಚ್ ಅಕಾಡೆಮಿಯಂತೂ ಸರ್ಕಾರದ ನೆತ್ತಿ ಮೇಲೆ ಸುತ್ತಿಗೆಯನ್ನು ಹಿಡಿದೇ ಇರುತ್ತದೆ. ಮಾತು ಕೇಳಲು ತಡ ಮಾಡಿದರೆ ಮೊಟಕುತ್ತದೆ. ಈ ಜಾಗತೀಕರಣದ ನಡುವೆಯೂ ಫ್ರೆಂಚ್ ಮಂದಿ ತಮ್ಮ ಭಾಷೆಯ ಮುಂದೆ ಇಂಗ್ಲಿಷ್ ಸೇರಿದಂತೆ ಮತ್ತ್ಯಾವ ಭಾಷೆಯೂ ಕಮಕ್-ಕಿಮಕ್ ಎನ್ನಲು ಬಿಟ್ಟಿಲ್ಲ. ಆದರೂ ಅವರಿಗೆ ಒಳಗೊಳಗೇ ಪುಕುಪುಕು, ಮೀಸೆ ಮಾಮನ ಭಯ. ಅವನನ್ನು ಹಿಮ್ಮೆಟ್ಟಿಸಲು ಸದಾ ಸನ್ನದ್ಧ. ಫ್ರೆಂಚರಿಗೆ ಇರುವ ಭಾಷಾ ಪ್ರೇಮದ ಗುಲಗಂಜಿಯಷ್ಟು ನಮ್ಮಲ್ಲಿ ಇದ್ದಿದ್ದರೆ, ನಾವು ಇಂಗ್ಲಿಷನ್ನು ಈ ಪರಿ ಅಪ್ಪಿಕೊಳ್ಳುತ್ತಿರಲಿಲ್ಲ. ಅದು ಬೇರೆ ಮಾತು ಬಿಡಿ.
ಫ್ರೆಂಚ್ ಮಂದಿ ಸಭೆ ನಡೆಸಿದ ಎರಡು ವಾರಗಳ ನಂತರ ಇಂಗ್ಲೆಂಡಿನ ಲಿವರ್‌ಪೂಲ್‌ನಲ್ಲಿ ಆಸಕ್ತಿ ಕೆರಳಿಸುವ ಒಂದು ಕಾರ್ಯಕ್ರಮ ನಡೆಯಿತು. ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಭಾಷಾವಿಜ್ಞಾನಿಗಳು, ಸಮಾಜ ಶಾಸ್ತ್ರಜ್ಞರು, ಪತ್ರಕರ್ತರು, ವಿದ್ವಾಂಸರು, ಭಾಷಾ ಪಂಡಿತರು, ಬುದ್ಧಿಜೀವಿಗಳು ಪಾಲ್ಗೊಂಡಿದ್ದರು. ಇವರಿಗೆ ಇಂಗ್ಲಿಷಿನ ಭವಿಷ್ಯದ ಬಗ್ಗೆ ಚಿಂತೆ ಇರಲಿಲ್ಲ. ಇವರು ಮಂಡೆ ಬಿಸಿ ಮಾಡಿಕೊಂಡಿದ್ದು ಭಾಷಾ ಸಾಧ್ಯತೆಯ ಬಗ್ಗೆ. ಈ ಜಗತ್ತನ್ನು ಗ್ರಹಿಸುವಷ್ಟು, ಕಂಡಿದ್ದನ್ನು, ಅನುಭವಿಸಿದ್ದನ್ನು ಹೇಳುವಷ್ಟು ಇಂಗ್ಲಿಷ್ ಬೆಳೆದಿದೆಯಾ, ಇಂಗ್ಲಿಷ್ ಭಾಷೆಯ ಪದ ಸಂಪತ್ತನ್ನು ಬೆಳೆಸುವುದು ಹೇಗೆ, ತಂತ್ರಜ್ಞಾನದ ಫಲವನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಹೇಳುವುದು ಹೇಗೆ, ಭಾಷೆಗಿಂತ ವೇಗವಾಗಿ ನಾವು ಬೆಳೆಯುತ್ತಿದ್ದರೂ, ಅದೇ ವೇಗ, ಪ್ರಮಾಣದಲ್ಲಿ ಭಾಷೆಯನ್ನು ನಮ್ಮ ಜತೆ ತರುವುದು ಹೇಗೆ ಎಂಬ ಕುರಿತು ಅವರೆಲ್ಲ ತಲೆಕೆಡಿಸಿಕೊಂಡಿದ್ದರು.
ಭಾಷೆಯೆಂಬುದು ನದಿಯಿದ್ದಂತೆ. ಅದು ಸದಾ ಹರಿಯುತ್ತಲೇ ಇರುತ್ತದೆ. ಆದರೆ ಜೀವನ, ಜಗತ್ತು ಹಾಗಲ್ಲ. ಅದು ಮಹಾಸಾಗರ. ಪ್ರತಿದಿನ, ಪ್ರತಿಕ್ಷಣ ನೂರಾರು ನದಿಗಳು ಬಂದು ಲೀನವಾಗುತ್ತಿದ್ದರೂ ಮಹಾಸಾಗರ ಅವನ್ನೆಲ್ಲ ತನ್ನೊಳಗೆ ಹೀರಿಕೊಳ್ಳುತ್ತಿರುತ್ತದೆ. ಅದರಲ್ಲೂ ನಾವು ಎಂಥ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಅಂದ್ರೆ ನಾವು ಹೇಳುವ ಮಾತು, ಬಳಸುವ ಪದಗಳನ್ನು ಜಗತ್ತಿನಲ್ಲಿರುವವರೆಲ್ಲ ಒಂದೇ ಅರ್ಥದಲ್ಲಿ ಗ್ರಹಿಸುವಂತೆ, ಸ್ವೀಕರಿಸುವಂತೆ ಮಾಡಬೇಕಾದ ಸವಾಲು, ಜವಾಬ್ದಾರಿ ನಮ್ಮ ಮೇಲಿರುತ್ತದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ತಂತ್ರಜ್ಞಾನ, ಬದಲಾಗುತ್ತಿರುವ ಜೀವನಕ್ರಮ, ಜೀವನ ಶೈಲಿಗಳಿಂದಾಗಿ ನಮಗೆ ಬೇಕಾದ ಪದಗಳು ಸಿಗದೇ, ನಮ್ಮ ಸಂವಹನಕ್ಕೆ ತೊಡಕಾಗಬಹುದು ಅಥವಾ ಅಷ್ಟೇ ಪ್ರಮಾಣದಲ್ಲಿ ಹೆಚ್ಚಿನ ಪದಗಳು ದೊರೆತು ಅವುಗಳ ಅರ್ಥ, ಬಳಕೆಯ ಗ್ರಹಿಕೆ, ಸಂದರ್ಭಗಳು ಏರುಪೇರಾಗಿ, ಆಗಲೂ ಸಂವಹನಕ್ಕೆ ಅಡ್ಡಿಯಾಗಬಹುದು. ಹಲವು ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಗಳು ಕೆಲಸ ಕಳೆದುಕೊಂಡಾಗ ಇಂಗ್ಲಿಷ್ ಪತ್ರಿಕೆಗಳು Bangalored ಎಂಬ ಪದವನ್ನು ಬಳಸಿದ್ದವು. ಕ್ರಮೇಣ ಈ ಪದವನ್ನು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿರುವ ಪತ್ರಿಕೆಗಳು ಸಹ ಬಳಸಲಾರಂಭಿಸಿದವು. ಈಗ Bangalored ಅಂದ್ರೆ ಚೀನಾದಲ್ಲಿರುವ ಸಾಫ್ಟ್‌ವೇರ್ ಉದ್ಯೋಗಿಗಳಿಗೂ ಅರ್ಥವಾಗುತ್ತದೆ. ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಅಮೆರಿಕದ 'ನ್ಯೂಯಾರ್ಕ್ ಟೈಮ್ಸ್‌' ಪತ್ರಿಕೆ ಬೆಳಕು ಚೆಲ್ಲಿದಾಗ ಗಾರ್ಡನ್ ಸಿಟಿ ಎಂದು ಕರೆಯಿಸಿಕೊಳ್ಳುತ್ತಿದ್ದ ನಗರ ಗಾರ್ಬೇಜ್ (ಕಸ) ಸಿಟಿ ಆಗಿದ್ದನ್ನು ವಿವರಿಸಲು ಇಲ್ಲಿನ ಪತ್ರಿಕೆಗಳು Gardbage City ಎಂದು ಬರೆದಾಗ ತಕ್ಷಣ ಎಲ್ಲರಿಗೂ ಅರ್ಥವಾಗದೇ ಹೋಗಿದ್ದಿರಬಹುದು. ಕ್ರಮೇಣ ಈ ಪದ ಮುಂದಿನ ದಿನಗಳಲ್ಲಿ ಪದೇ ಪದೆ ಬಳಕೆಯಾದಾಗ ಅದರ ಅರ್ಥ ಎಲ್ಲರಿಗೂ ಆಯಿತು.
ಮೊನ್ನೆ ಲಿವರ್‌ಪೂಲ್‌ನಲ್ಲಿ ಸೇರಿದ ಮಂದಿ ಮುಂದೆ ಇದ್ದ ಪ್ರಶ್ನೆಯೂ ಇದೇ ಆಗಿತ್ತು. ಹೊಸ ಹೊಸ ವಸ್ತು ಮಾರುಕಟ್ಟೆಗೆ ಬಂದಾಗ, ಹೊಸ ಹೊಸ ಪದ ಚಲಾವಣೆಗೆ ಬಂದಾಗ, ಹೊಸ ಹೊಸ ಸನ್ನಿವೇಶಗಳನ್ನು ಜನರಿಗೆ ವಿವರಿಸಬೇಕಾಗಿ ಬಂದಾಗ ಸೂಕ್ತ ಪದಗಳಿಲ್ಲದೇ ಪರಿತಪಿಸುವುದನ್ನು ತಪ್ಪಿಸಲು ಹೊಸ ಪದಗಳನ್ನು ಟಂಕಿಸುವುದು ಹೇಗೆ, ಟಂಕಿಸಿದ ಪದಗಳನ್ನು ಜನರಿಗೆ ಪರಿಚಯಿಸುವುದು ಹೇಗೆ, ಅವನ್ನೆಲ್ಲ ಹಿಡಿದಿಟ್ಟು ಪದಕೋಶ ಮಾಡುವುದು ಯಾರು... ಈ ಎಲ್ಲ ಪ್ರಶ್ನೆಗಳನ್ನು ಅವರು ಗುಡ್ಡೆ ಹಾಕಿಕೊಂಡು ಚರ್ಚಿಸುತ್ತಿದ್ದರು. ಭಾಷೆಯ ವಿಸ್ತಾರ, ಬೆಳವಣಿಗೆ ದೃಷ್ಟಿಯಿಂದ ಇದೊಂದು ಅತ್ಯಂತ ಮಹತ್ವದ ಹೆಜ್ಜೆ.
ಹಿಂದಿನ ವರ್ಷ ಜಿ-20 ಶೃಂಗಸಭೆ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದಾಗ, ಆತಿಥೇಯ ರಷ್ಯಾದ ಅಧ್ಯಕ್ಷ ಪುಟಿನ್ ಎಲ್ಲ ದೇಶಗಳ ಮುಖ್ಯಸ್ಥರಿಗೆ ಔತಣಕೂಟ ಏರ್ಪಡಿಸಿದ್ದರು. ಆ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಊಟಕ್ಕೆ ಮೊದಲು ಚಾಕಲೇಟನ್ನು ಸೇವಿಸಿದರು. ಆ ಚಾಕಲೇಟ್‌ನ ವೈಶಿಷ್ಟ್ಯವೇನೆಂದರೆ ಐದಾರು ಅಂಗುಲ ಉದ್ದದ ಆ ಚಾಕಲೇಟ್ ಅತ್ಯಂತ ಮೆದುವಾಗಿತ್ತು, ಆದರೆ ತಲೆ ಮಾತ್ರ ಬಹಳ ಗಡುಸಾಗಿತ್ತು. ಒಬಾಮ ಮೊದಲು ಗಡಸಾದ ಭಾಗವನ್ನು ತಿಂದು, ಆನಂತರ ಮೆದು ಭಾಗವನ್ನು ಸೇವಿಸಿದರು.
ಒಬಾಮ ಅವರೇನೋ ಚಾಕಲೇಟನ್ನು ತಿಂದು, ತೇಗಿ ಹೊರಟುಹೋದರು. ಆ ಸುದ್ದಿಯನ್ನು ಬರೆಯುವ ಪತ್ರಕರ್ತರಿಗೆ ಪೀಕಲಾಟ ಶುರುವಾಯಿತು. ಮೊದಲು ಚಾಕಲೇಟಿನ ಗಡಸು ಭಾಗವನ್ನು ತಿನ್ನುವ ಪ್ರವೃತ್ತಿ, ಮನೋಭಾವಕ್ಕೆ ಏನೆಂದು ಕರೆಯುವುದು? ಬೇರೆ ಯಾರಾದರೂ ತಿಂದಿದ್ದರೆ ಸುಮ್ಮನಿರಬಹುದಿತ್ತು. ಆದರೆ ಅಮೆರಿಕ ಅಧ್ಯಕ್ಷರ ಈ ಸ್ವಭಾವವನ್ನು ಬಣ್ಣಿಸಲು ಪದ ಇಲ್ಲ ಅಂದ್ರೆ ಹೇಗೆ? ಒಂದೆರಡು ದಿನಗಳ ನಂತರ ಪತ್ರಿಕೆಯಲ್ಲಿ ಈ ಕುರಿತು ಚರ್ಚೆ ಆರಂಭವಾಯಿತು. ಹಲವರು ತಮ್ಮ ಅಭಿಪ್ರಾಯಗಳನ್ನು ಪದಗಳ ಮೂಲಕ ವಿವರಿಸಿದರು. ಜಿ-20 ಶೃಂಗಸಭೆ ಮುಗಿದರೂ, ಒಬಾಮ ಅವರ ಈ ಬಾಯಿ ಚಪಲವನ್ನು ಒಂದು ಪದದಲ್ಲಿ ಹೇಗೆ ಬಣ್ಣಿಸಬೇಕೆಂಬ ಚರ್ಚೆ ಮಾತ್ರ ಮುಗಿದಿರಲಿಲ್ಲ. ಅಂತಿಮವಾಗಿ, ಅದ್ಯಾರು ಸೂಚಿಸಿದರೋ ಏನೋ, Choconivorous (ಚೊಕೋನಿವೊರಸ್) ಎಂಬ ಪದದ ಬಗ್ಗೆ ಸಹಮತ ವ್ಯಕ್ತವಾಯಿತು. ಚಾಕಲೇಟ್ ಹಾಗೂ ಕಾರ್ನಿವೋರಸ್ (ಮಾಂಸಾಹಾರಿ ಪ್ರಾಣಿಗಳಿಗೆ ಕಾರ್ನಿವೋರಸ್ ಅಂತಾರೆ. ಇಲ್ಲಿ ಮಾಂಸ ಎಂದು ಭಾವಿಸದೇ ಮಾಂಸದಷ್ಟು ಗಡಸಾದ ಪದಾರ್ಥ ಸೇವನೆ ಎಂಬರ್ಥದಲ್ಲಿ ಪ್ರಯೋಗಿಸಲಾಗಿದೆ.) ಈ ಎರಡೂ ಪದಗಳನ್ನು ಸೇರಿಸಿ Choconivorous ಎಂಬ ಪದವನ್ನು ಬಳಕೆಗೆ ಹರಿದು ಬಿಡಲಾಯಿತು. ಕ್ರಮೇಣ ಈ ಪದ ಪತ್ರಿಕೆಯ ಹೆಡ್‌ಲೈನ್‌ಗಳಲ್ಲೂ ಬಳಕೆಯಾಗಿ, ಒಬಾಮ ಅವರ ಆಹಾರ ಸೇವನೆ ಅಭಿರುಚಿ ಬಣ್ಣಿಸುವ ಅತ್ಯಂತ 'ಸಿಹಿಪದ'ವಾಗಿ ಮಾರ್ಪಟ್ಟಿದೆ.
ಪದ ಬಳಕೆಯ ಈ ಅವಾಂತರ, ಪದ ಲಭ್ಯತೆಯ ಕೊರತೆ ಬಗ್ಗೆ ಯೋಚಿಸಿಯೇ ಖ್ಯಾತ ಲೇಖಕ, ಭಾಷಾ ಚಿಂತಕ, ರಿಚರ್ಡ್ ಲೆಡರರ್, 'ನಮ್ಮಲ್ಲಿರುವ ಪದಗಳಿಗಿಂತ ಹೆಚ್ಚಾಗಿ ನಮ್ಮಲ್ಲಿ ವಸ್ತುಗಳು, ಯೋಚನೆಗಳು, ಕಲ್ಪನೆಗಳಿರುತ್ತವೆ' ಎಂದು ಹೇಳಿದ್ದು. ಉದಾಹರಣೆಗೆ, ನಮ್ಮಲ್ಲಿನ ಉತ್ಕಟ ಪ್ರೇಮ, ಪ್ರೀತಿಯನ್ನು ಪ್ರಕಟಪಡಿಸಲು ಇಂಗ್ಲಿಷಿನಲ್ಲಿ ಒಂದು ಒಳ್ಳೆಯ, ಯೋಗ್ಯ, ಲಾಯಕ್ಕಾದ, ರೋಮ್ಯಾಂಟಿಕ್ ಆದ ಪದವಿಲ್ಲ ಎಂದು ರಿಚರ್ಡ್ ಲೆಡರರ್ ಹೇಳಿ ದಶಕಗಳೇ ಸಂದರೂ ಇಲ್ಲಿತನಕ ಅಂಥ ಒಂದು ಪದ ಸಿಕ್ಕಿಲ್ಲ ಹಾಗೂ ಹುಟ್ಟುಹಾಕಲು ಸಾಧ್ಯವಾಗಿಲ್ಲ. ಇಂಗ್ಲಿಷ್ ಭಾಷೆಗೆ ಇಂಥ ಭವ್ಯ ಇತಿಹಾಸವಿದ್ದರೂ, ಪ್ರೀತಿಯನ್ನು ಹೇಳಲು ಒಳ್ಳೆಯ ಪದವಿಲ್ಲ. ಎಲ್ಲರೂ ಲವ್ (Love)ಎಂಬ ಪದವನ್ನೇ ಬಳಸುತ್ತಾರೆ. ಆದರೆ ಲವ್ ಎಂಬ ಪದ ಬಹಳ ಸವಕಲು, ಸಾರ್ವತ್ರಿಕ, ಸಸಾರ ಹಾಗೂ ಸಾಮಾನ್ಯ. ಲವ್ ಎಂಬ ಪದ ಪ್ರಯೋಗಿಸಿದಾಗ, ಪ್ರೀತಿಯಂಥ ಅದ್ಭುತ ಅನುಭೂತಿಯ ವಿಸ್ಮಯ ನಮ್ಮಲ್ಲಿ ಅರಳುವುದಿಲ್ಲ. ಕಾರಣ ನಾವು ಲವ್ ಪದವನ್ನು ಎಲ್ಲದಕ್ಕೂ ಬಳಸುತ್ತೇವೆ. I love my dog, I love my chappals, I love my God, I love my Parents, I love my broomsticks, I love my toilet...  ಹೀಗೆ ಲವ್‌ನ್ನು ಎಲ್ಲದಕ್ಕೂ ಬಳಸುತ್ತೇವೆ. ಆನಂತರ I love my fiancee, I love my wife ಅಂತೀವಿ. ಭಾಷಾ ಬಳಕೆ ಕ್ರಮದಿಂದ ಯೋಚಿಸಿದಾಗ, ಕಸಪೊರಕೆಗೂ, ಹೆಂಡತಿಗೂ ವ್ಯತ್ಯಾಸವೇ ಇಲ್ಲವಾ? ಇಷ್ಟವಾಗುವ ಪೊರಕೆಗೆ ಪ್ರಯೋಗಿಸಿದ ಪದವನ್ನೇ ಹೆಂಡತಿ ಮೇಲಿನ ಪ್ರೀತಿಗೂ ಬಳಸುವಷ್ಟು ನಮ್ಮಲ್ಲಿ ಪದ ದಾರಿದ್ರ್ಯವಿದೆಯಾ? ಹೌದು...ನಿಜ!
ಆಧುನಿಕತೆಯ ಹೊಡೆತಕ್ಕೆ ಲ್ಯಾಂಡ್‌ಲೈನ್ ಮೂಲೆ ಸೇರಿದೆ. ಲ್ಯಾಂಡ್‌ಲೈನ್‌ಗಳಿದ್ದಾಗ ನಾವು ಡೈಲ್ ಮಾಡುತ್ತಿದ್ದೆವು. ಈಗ ಎಲ್ಲರ ಕೈಯಲ್ಲೂ ಮೊಬೈಲು. ಈಗ ಡಯಲ್ ಮಾಡುವ ಪ್ರಮೇಯವೇ ಇಲ್ಲ. ಎಲ್ಲರೂ ಬಟನ್ ಅದುಮುತ್ತಾರೆ. ಯಾರ ಮೊಬೈಲ್ ಸಹ ರಿಂಗ್ ಆಗುವುದಿಲ್ಲ. ತರೇಹವಾರಿ ಸಂಗೀತಗಳು ಹೊರಹೊಮ್ಮುತ್ತವೆ. ಹೀಗಿರುವಾಗ ಡಯಲ್ ಮಾಡು, ರಿಂಗ್ ಮಾಡು ಎಂದು ಹೇಳುವುದು ಸರಿ ಅಲ್ಲ. ಹಾಗಂತ ಬಟನ್ ಅಮುಕು ಎಂದೂ ಹೇಳುವಂತಿಲ್ಲ. ಅದು ಅಷ್ಟೇನೂ ಶಿಷ್ಟಪ್ರಯೋಗ ಎನಿಸಿಕೊಳ್ಳುವುದಿಲ್ಲ. ಹೀಗಾಗಿ ಎಲ್ಲರಿಗೂ ಅಪ್ಯಾಯವಾಗುವ ಒಂದು ಸರಳ, ಸುಂದರ ಪದವಿನ್ನೂ ನಮಗೆ ದಕ್ಕಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯ ಪದವನ್ನು ಬಳಸುತ್ತಿದ್ದಾರೆ.
ಇದು ಇಂಗ್ಲಿಷಿನದ್ದೊಂದೇ ಸಮಸ್ಯೆ ಅಲ್ಲ. ಜಗತ್ತಿನ ಎಲ್ಲ ಭಾಷೆಗಳೂ ಎದುರಿಸುತ್ತಿರುವ ಸವಾಲು. 'ವ್ಯಾಕ್ಯುಂ ಕ್ಲೀನರ್‌' ಎಂಬ ಉಪಕರಣ ಮಾರುಕಟ್ಟೆಗೆ ಬರುವ ತನಕ ಅದರ ಹೆಸರಿನ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಅದರ ಬಳಕೆ, ಚಾಲ್ತಿ ಹೆಚ್ಚಿದಂತೆ ಎಲ್ಲ ಭಾಷೆಗಳಂತೆ ಕನ್ನಡದಲ್ಲೂ ಅದಕ್ಕೆ ಒಪ್ಪುವ ನಾಮಕರಣ ಮಾಡಬೇಕಾದಾಗ ಯಾರೋ 'ಹೀರು ಪೊರಕೆ' ಎಂದು ಸುಂದರವಾದ, ಆಪ್ತವಾದ ಹೆಸರನ್ನಿಟ್ಟರು. ಇಲ್ಲದಿದ್ದರೆ ಈ ಉಪಕರಣ ಇಂಗ್ಲಿಷ್‌ನಲ್ಲಷ್ಟೇ ಉಳಿದು ಬಿಡುತ್ತಿತ್ತು. ಇಂಗ್ಲಿಷರು, ಫ್ರೆಂಚರು ಮಾಡುತ್ತಿರುವುದು ಇದನ್ನೇ. ಭಾಷಾ ಬೆಳವಣಿಗೆ ದೃಷ್ಟಿಯಿಂದ ಹೊಸ ಹೊಸ ಪದಗಳನ್ನು ಹುಟ್ಟು ಹಾಕುವ, ಪರಿಚಯಿಸುವ, ಸಂವಹನವನ್ನು ಸುಲಭವಾಗಿಸುವ ಗಹನ ಕಾಯಕದಲ್ಲಿ ನಿರತರಾಗಿದ್ದಾರೆ. ಜಗತ್ತಿನ ಯಾವುದೇ ಭಾಗದಲ್ಲಿ ಒಂದು ಹೊಸ ಪದ ಹುಟ್ಟಿದರೂ, ಅದನ್ನು ಕಲೆ ಹಾಕಿ, ಸೂಕ್ತವಾಗಿದ್ದರೆ ಅದಕ್ಕೆ ಮಾನ್ಯತೆ ನೀಡಿ, ಅವಶ್ಯ ಬಿದ್ದರೆ ಅಲ್ಪಸ್ವಲ್ಪ ಸುಧಾರಣೆ ಮಾಡಿ ಚಲಾವಣೆಗೆ ಬಿಡುತ್ತಿದ್ದಾರೆ.
ಹುಡುಗ-ಹುಡುಗಿ ಐದಾರು ವರ್ಷಗಳವರೆಗೆ ಮದುವೆಯಾಗದಿದ್ದರೂ ಒಂದೇ ರೂಮಿನಲ್ಲಿ ಸತಿ-ಪತಿಗಳಂತೆ ಒಟ್ಟಿಗೆ ಇರುವ living in relationship ಬೆಂಗಳೂರಿನಲ್ಲೊಂದೇ ಅಲ್ಲ, ಮೈಸೂರು, ಮಂಗಳೂರು, ಹುಬ್ಬಳ್ಳಿಯಂಥ ನಗರಗಳಲ್ಲೂ ಚಾಲ್ತಿಗೆ ಬಂದಿದೆ. ಅಂಥ ಸಂಬಂಧವನ್ನು ಅದೇ ಅಂದದಲ್ಲಿ ಹೇಳುವ ಕನ್ನಡ ಪದವಿಲ್ಲ. ಅದು ಇಲ್ಲವಲ್ಲ ಎಂದು ಯಾವ ಕನ್ನಡದ ವಿದ್ವಾಂಸರಿಗೆ, ಪಂಡಿತರಿಗೆ, ಭಾಷಾ ತಜ್ಞರಿಗೆ, ಪದಪ್ರೇಮಿಗಳಿಗೆ ಅನಿಸುತ್ತಿಲ್ಲ. ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು ಈ ಕೆಲಸವನ್ನು ನಿಲ್ಲಿಸಿ, ಬಹಳ ವರ್ಷಗಳೇ ಸಂದವು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಈ ಕೆಲಸ ಶ್ರದ್ಧೆಯಿಂದ ನಡೆದ ಬಗ್ಗೆ ತಿಳಿದುಬರುತ್ತಿತ್ತು. ಈಗ ಅಲ್ಲೂ ಈ ಕೆಲಸ ನಿಂತಿದೆ. ಇದನ್ನು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ, ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಮಾಡಬೇಕೆಂದು ನಿರೀಕ್ಷಿಸಿದರೆ ಅದಕ್ಕಿಂತ ಮೂರ್ಖತನ ಮತ್ತೊಂದಿರಲಿಕ್ಕಿಲ್ಲ. ಬಹುತೇಕ ಎಲ್ಲ ಅಕಾಡೆಮಿಗಳು ನಿಷ್ಕ್ರಿಯವಾಗಿವೆ. ಕೆಲಸ ಮಾಡುವ ಉಮ್ಮೇದು ಇದ್ದರೂ ಹಣವಿಲ್ಲದೇ ಸೊರಗುತ್ತಿವೆ. ಭಾಷೆ ಅಭಿವೃದ್ಧಿ ದೃಷ್ಟಿಯಿಂದ ಇಂಥದ್ದೊಂದು ಕಾರ್ಯದ ಅಗತ್ಯವಿದೆಯೆಂದು ಯಾರಿಗೂ ಅನಿಸುತ್ತಿಲ್ಲ.
ಹಾಗೆ ನೋಡಿದರೆ, ಎಲ್ಲ ಪತ್ರಿಕೆಗಳ ಸುದ್ದಿ ಮನೆಯಲ್ಲಿರುವ ಪದಬ್ರಹ್ಮ (Wordsmith)ರೆಂದು ಕರೆಯಿಸಿಕೊಳ್ಳುವ ಉಪಸಂಪಾದಕರು, ಸುದ್ದಿ ಸಂಪಾದಕರು ನಿಷ್ಠೆಯಿಂದ ಪದಗಳನ್ನು ಟಂಕಿಸುವ ಪವಿತ್ರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕನಿಷ್ಠ ಚಟುವಟಿಕೆಯನ್ನು ಗುರುತಿಸುವ, ಸಂಗ್ರಹಿಸುವ, ದಾಖಲಿಸುವ ಕೆಲಸವನ್ನಾದರೂ ವಿಶ್ವವಿದ್ಯಾಲಯಗಳ ಭಾಷಾ ವಿಭಾಗ ಮಾಡಿದ್ದರೆ ಪುಣ್ಯ ಬರುತ್ತಿತ್ತು. ಆ ಕೆಲಸವೂ ಆಗುತ್ತಿಲ್ಲವಲ್ಲ ಎಂಬುದೇ ಸಂಕಟ.
ಗೊತ್ತಿರಲಿ. ಕನ್ನಡದ ಕೆಲಸವನ್ನು ತಲೆ ಮೇಲೆ ಹೊತ್ತು ಮಾಡಿದವರು ಜರ್ಮನಿಯ ಪಾದ್ರಿಗಳು, ಕ್ರಿಶ್ಚಿಯನ್ ಮಿಷನರಿಗಳು. ಕಿಟಲ್ ಎಂಬ ಪುಣ್ಯಾತ್ಮ ಕನ್ನಡ ಪದಕೋಶವನ್ನು ನಮಗಾಗಿ ಮಾಡಿ ಒಪ್ಪಿಸದಿದ್ದರೆ, ನಾವು ಆ ಕಾರ್ಯವನ್ನು ಮಾಡುತ್ತಿದ್ದೆವಾ? ಅನುಮಾನ. ಈಗಲೂ ಕನ್ನಡ ಭಾಷೆಗೆ ಸಂಬಂಧಿಸಿದ ಈ ಎಲ್ಲ ಕೆಲಸಗಳನ್ನು ಫ್ರೆಂಚರು, ಜರ್ಮನ್‌ರು ಅಥವಾ ಇಂಗ್ಲಿಷರೇ ಮಾಡಲಿ ಎಂದು ನಾವೇನಾದರೂ ನಿರೀಕ್ಷಿಸುತ್ತಿದ್ದೇವಾ?
ಯಾರಿಗೆ ಗೊತ್ತು!?


- ವಿಶ್ವೇಶ್ವರ ಭಟ್
vbhat@me.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com