ಇಂಗಾಲಾಮ್ಲ ಅಂದರೆ ಕಂಗಾಲಾಗುವುದೇಕೆ?

ಇಂಗಾಲಾಮ್ಲ ಅಂದರೆ ಕಂಗಾಲಾಗುವುದೇಕೆ?

ಮೇಲ್ನೋಟಕ್ಕೆ ಎಲ್ಲವೂ ನಿಗೂಢ. ಅದರೊಳಕ್ಕೆ ತೆರೆದುಕೊಳ್ಳುತ್ತಿದ್ದಂತೆ ವಿಸ್ಮಯ. ಹೆಚ್ಚುತ್ತಿರುವ ಜಾಗತಿಕ ತಾಪಮಾನಕ್ಕೂ, ನಾವು ತಿನ್ನುವ ಮೀನೆಣ್ಣೆಗೂ ಸಂಬಂಧವಿದೆ ಎಂದರೆ ಅಚ್ಚರಿಯಾಗದೇ ಇದ್ದೀತೆ? ಪರಿಸರದಲ್ಲಿ ಇಂಗಾಲದ ಡೈಆಕ್ಸೈಡ್ ಅಂಶ ಹೆಚ್ಚುತ್ತಿದೆ. ಹಸುರು ಮನೆ ಅನಿಲ ದುಷ್ಪರಿಣಾಮ ಬೀರುತ್ತಿದೆ ಎಂಬ ಮಾತು ಸತ್ಯವಾದರೂ ಮಿಥೇನ್, ಇಂಗಾಲದಂಥ ಅನಿಲಗಳೂ ಉಪಯುಕ್ತವಾಗಬಲ್ಲವು ಎಂಬುದು ಹೊಸ ಸುದ್ದಿ.

ಹೌದು, ಅತ್ಯಂತ ಸುಂದರವಾಗಿ, ಹಚ್ಚ ಹಸುರಿನಿಂದ ಕಂಗೊಳಿಸುವ ಹೊಲ- ಗದ್ದೆಗಳು ಆಂತರ್ಯದಲ್ಲಿ ವಿನಾಶದ ಗುಣಗಳನ್ನು ಅಡಗಿಸಿಟ್ಟುಕೊಂಡಿವೆ ಎಂಬು ದನ್ನು ಒಮ್ಮೆಲೆ ನಂಬಲಾಗದಿದ್ದರೂ ನಿಜ. ಇವೆಲ್ಲಕ್ಕಿಂತ ಮುಖ್ಯವಾದ ಆಧುನಿಕ ಯುಗದಲ್ಲಿ ಮತ್ತೊಂದು ಆತಂಕ ಎದುರಾಗಿರುವುದು ಮೀನುಗಾರಿಕೆಯಿಂದ.
ಅನುಮಾನವೇ ಇಲ್ಲ ಪ್ರಾಕೃತಿಕ ಸಮತೋಲನ ರಕ್ಷಣೆಯಲ್ಲಿ ಸಸ್ಯ ಪ್ರಭೇದಗಳ ಪಾತ್ರ ಅತ್ಯಂತ ಹಿರಿದು. ಆದರೆ, ಬಹುರೂಪಿ ಬೆಳೆಗಳ ಯೋಜನೆಗಳ ಸಂದರ್ಭದಲ್ಲಿ, ಹೈಬ್ರೀಡ್ ತಳಿಗಳ ಹೆಸರಲ್ಲಿ ವ್ಯವಸಾಯಕ್ಕಿಳಿದಿದ್ದು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಸುರಿಯದೇ ಕೃಷಿ ಮುಗಿಯುವುದೇ ಇಲ್ಲವೆಂಬ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಇನ್ನೊಂದೆಡೆ ಕೃಷಿಯಲ್ಲಿನ ಯಂತ್ರಗಳ ಬಳಕೆ, ವಿದೇಶಿ ತಳಿಗಳನ್ನೊಳಗೊಂಡ ಪಶುಸಂಗೋಪನೆಯೂ ಸಂಕಷ್ಟಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ.
ಬಹಳ ಅಚ್ಚರಿಯಾಗಬಹುದು. ವಿದೇಶಿ ಪಶುಗಳ ಸಾಕಣೆಗೂ, ಯಂತ್ರಗಳ ಬಳಕೆಗೂ, ಬೆಳೆಗಳ ಆಯ್ಕೆಗೂ, ಪರಿಸರ ನಾಶಕ್ಕೂ ಎತ್ತಣಿಂದೆತ್ತಣ ಸಂಬಂಧ? ಈ ಪ್ರಶ್ನೆ ಸಹಜ.
ಇತ್ತೀಚೆಗೆ ದಟ್ಟವಾಗಿ ಕೇಳಿಬರುತ್ತಿರುವ 'ಗ್ರೀನ್ ಹೌಸ್ ಗ್ಯಾಸ್‌' ಅಥವಾ 'ಹಸುರು ಮನೆ ಅನಿಲ'ದ ಸಮಸ್ಯೆ ಆರಂಭವಾಗಿದ್ದೇ ನಮ್ಮ ಇಂಥ ಆಧುನಿಕ ಪಶು ಸಂಗೋಪನೆ, ಕೃಷಿ ಪದ್ಧತಿಗಳಿಂದ. ಹೀಗೆಂದರೆ ಕೃಷಿ ವಿಜ್ಞಾನಿಗಳು ಒಪ್ಪಲಿಕ್ಕಿಲ್ಲ. ಆದರೆ, ಇಂಗಾಲದ ಡೈ ಆಕ್ಸೈಡ್‌ನಷ್ಟೇ ಪ್ರಬಲವಾದ, ಅಷ್ಟೇ ಹಾನಿಕಾರಕ ಮೀಥೇನ್, ನೈಟ್ರಸ್ ಆಕ್ಸೈಡ್ ಹಾಗೂ ಅಮೋನಿಯಾಗಳು ಆಧುನಿಕ ಕೃಷಿ ಪದ್ಧತಿಯಲ್ಲಿ ವಾತಾವರಣಕ್ಕೆ ಮಿತಿ ಮೀರಿ ಬಿಡುಗಡೆಯಾಗುತ್ತಿವೆ ಎಂಬುದನ್ನು ಎಲ್ಲರೂ ಒಪ್ಪಲೇ ಬೇಕು. ಆ ಪೈಕಿ ಮೀಥೇನ್ ಉತ್ಪತ್ತಿ ಆಗುವುದೇ ಪಶುಗಳಲ್ಲಿ. ಆಧುನಿಕ, ತಳಿ ಸಂಕರಕ್ಕೊಳಪಟ್ಟ ರಾಸುಗಳಲ್ಲಿ ಇದು ಇನ್ನೂ ಅಧಿಕ. ದೇಶಿ ಗೋವುಗಳಿಗಿಂತ ವಿದೇಶಿ ಹಸುಗಳು ಮೀಥೇನ್ ಅನ್ನು ಅತ್ಯಂತ ಅಧಿಕ ಪ್ರಮಾಣದಲ್ಲಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ ಎಂಬುದು ಪ್ರಯೋಗಗಳಿಂದ ದೃಢಪಟ್ಟಿದೆ. ಮೊದಲಾದರೆ ದೇಶಿ ಗೋವುಗಳನ್ನು ಬೇಸಾಯದ ಸಂದರ್ಭದಲ್ಲಿ ದುಡಿಮೆಗೆ ಹಚ್ಚುತ್ತಿದ್ದುದರಿಂದ ಅವುಗಳ ಕೊಬ್ಬು ಕರಗುತ್ತಿತ್ತು. ಮಾತ್ರವಲ್ಲ ಅಂಥ ದುಡಿಮೆಯ ಸಂದರ್ಭದಲ್ಲಿ 'ಹೈಡ್ರಾಕ್ಸಿಲ್ ಕಣ'ಗಳ ಉತ್ಪತ್ತಿ ಹೆಚ್ಚಿ ಮೀಥೇನ್‌ನ ಪರಿಣಾಮವನ್ನು ನಿಯಂತ್ರಿಸುತ್ತಿತ್ತು. ಇಂದು ಹೊಲಗಳಿಗೆ ಗೋವನ್ನು ಇಳಿಸುವುದನ್ನೇ ಮರೆತಿದ್ದೇವೆ. ಉಳುಮೆಯಿಂದಾರಂಭಿಸಿ ಒಕ್ಕಲುತನಕ್ಕೆ ಯಂತ್ರಗಳನ್ನೇ ಅವಲಂಬಿಸಿದ್ದೇವೆ. ಅದೇ ಸಂದರ್ಭದಲ್ಲಿ ಮನೆಗಳಲ್ಲಿ ತೀರಾ ಹೆಚ್ಚು ಕೊಬ್ಬು ಇರುವ ಜೆರ್ಸಿ, ಸಿಂಧಿಗಳಂಥ ವಿದೇಶಿ ತಳಿಗಳನ್ನು ಹೈನುಗಾರಿಕೆಯ ಹೆಸರಲ್ಲಿ ಪಾಲಿಸಲಾರಂಭಿಸಿದ್ದೇವೆ. ಹೀಗಾಗಿ ಮೀಥೇನ್‌ಗೆ ಅಂಕುಶವೇ ಇಲ್ಲದಾಗಿದೆ.
ಇನ್ನು ನೈಟ್ರಸ್ ಆಕ್ಸೈಡ್. ಇದು ಜನಿಸುವುದೇ ಭತ್ತದ ಗದ್ದೆಗಳಲ್ಲಿ. ಹಸುರು ಕ್ರಾಂತಿಯ ಓಟದಲ್ಲಿ ದಿನದಿಂದ ದಿನಕ್ಕೆ ಕೃಷಿ ಭೂಮಿ ವಿಸ್ತಾರಗೊಳ್ಳುತ್ತಿದೆ. ಮಾತ್ರವಲ್ಲ, ಇಳುವರಿಗಾಗಿ ಹೊಸ ಹೊಸ ತಳಿಗಳನ್ನು ಪರಿಚಯಿಸುತ್ತಿದ್ದೇವೆ. ಮನಸ್ವೇಚ್ಛೆ ರಾಸಾಯನಿಕಗಳನ್ನು ಬಳಸುತ್ತಿದ್ದೇವೆ. ಸಾಂಪ್ರದಾಯಿಕ ತಳಿಗಳು ಕಣ್ಮರೆಯಾಗಿವೆ. ಅತಿ ಹೆಚ್ಚು ನೀರು ಬೇಡುವ (ನಿಜವಾಗಿ ಭತ್ತಕ್ಕೆ ಅಷ್ಟೊಂದು ನೀರು ಬೇಕಾಗಿಯೇ ಇಲ್ಲ. ಆ ಪ್ರಶ್ನೆ ಬೇರೆ) ಭತ್ತವನ್ನು ಒಣ ಭೂಮಿಯಲ್ಲೂ ಬೆಳೆಯಲು ಹವಣಿಸಿದ್ದೇವೆ. ಹೀಗಾಗಿ ನೀರು ಉಳಿಸಲು, ತೇವಾಂಶ ರಕ್ಷಣೆಗೆ ಮತ್ತೆ ಮತ್ತೆ ಯಂತ್ರಗಳಿಂದ ಭೂಮಿಯನ್ನು ಆಳದವರೆಗೆ ಉಳುಮೆ ಮಾಡುತ್ತಿರುವುದರಿಂದ ಭೂ ರಂಧ್ರಗಳು ಮುಚ್ಚಿ ಹೋಗಿ ಮಣ್ಣಿನಲ್ಲಿ 'ಪಿಎಚ್‌' ಅಂಶ ಕಡಿಮೆಯಾಗತೊಡಗಿದೆ. ಇದರಿಂದ ಭತ್ತದ ಗದ್ದೆಗಳಲ್ಲಿ ನಿಂತ ನೀರು ಆಮ್ಲಯುಕ್ತವಾಗಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತಿವೆ. ಇವು ನಿರಂತರವಾಗಿ ನೈಟ್ರಸ್ ಆಕ್ಸೈಡ್ ಕಾರುತ್ತಿರುತ್ತವೆ. ಈ ಹಂತದಲ್ಲಿ ಇಂಗಾಲ ಮತ್ತು ಸಾರಜನಕದ ಸಮತೋಲನ ತಪ್ಪಿ ವಾತಾವರಣಕ್ಕೆ ಆತಂಕ ಎದುರಾಗುತ್ತದೆ. ಇದರೊಂದಿಗೆ ಇಳುವರಿ ಹೆಚ್ಚಳಕ್ಕೆ ಬಳಸುವ ರಾಸಾಯನಿಕಗಳು ಅಮೋನಿಯಾವೆಂಬ ಕಾರ್ಕೋಟಕವನ್ನು ಹೊರಸೂಸುತ್ತವೆ. ಇವೆಲ್ಲದರ ಬಗ್ಗೆ ಚರ್ಚೆ ನಡೆಯಲಾರಂಭಿಸಿ ಸಾಕಷ್ಟು ದಿನಗಳಾದವು. ಆದರೆ ಈಗಿನ ಚರ್ಚೆ ಮೀನುಗಾರಿಕೆಯದ್ದು. ಇದಕ್ಕೂ ವಿಜ್ಞಾನಿಗಳು  ಪರ್ಯಾಯ ಕಂಡು ಹಿಡಿದಿದ್ದಾರೆ.
-
ಮೀನೆಣ್ಣೆ ಗೊತ್ತೇ ಇದೆ. ಇದರ ಮೂಲಕ ದೊರೆಯುವ ಒಮೆಗಾ-3 ಎನ್ನುವ ಪಾಲಿಸ್ಯಾಚುರೇಟೆಡ್ ಕೊಬ್ಬನ್ನು ತಾಪಮಾನದ ಕೊಡುಗೆಯಾದ ಇಂಗಾಲದ ಡೈ ಆಕ್ಸೈಡ್ ಮೂಲಕ ಪಡೆಯಬಹುದು ಎಂದು ಹೇಳಿದರೆ ವಿಸ್ಮಯದ ಸಂಗತಿ ಅನ್ನಿಸದೇ ಇದ್ದೀತೆ? ನಾರ್ವೆಯ ವಿಜ್ಞಾನಿಗಳು ಇವೆರಡಕ್ಕೂ ಸಂಬಂಧವಿದೆ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ. ಹೀಗಾಗಿ ಜಾಗತಿಕ ತಾಪಮಾನಕ್ಕೆ ಕೊಡುಗೆ ನೀಡುವ ಇಂಗಾಲಾಮ್ಲದಿಂದಲೇ (ಇಂಗಾಲದ ಡೈ ಆಕ್ಸೈಡ್) ನಮ್ಮ ಆಹಾರ ಪಡೆದುಕೊಳ್ಳಬಹುದು ಎನ್ನುವುದು ಈಗ ಒಪ್ಪಿಕೊಳ್ಳಲೇಬೇಕಾದ ಸತ್ಯ.
ಇಷ್ಟೇ ಹೇಳಿದರೆ ಅರ್ಥವಾಗದು. ಒಮೆಗಾ-3 ಕೊಬ್ಬಿನ ಅಂಶವುಳ್ಳ ಆ್ಯಸಿಡ್. ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯವಾಗಿ ಬೇಕು. ಸಂಧಿವಾತದಂತಹ ತೊಂದರೆಗಳಿಗೂ ಪರಿಣಾಮಕಾರಿ ಮದ್ದು. ಬೀನ್ಸ್, ಆಲಿವ್ ಎಣ್ಣೆ ಇತ್ಯಾದಿಗಳಲ್ಲೂ ಹೇರಳವಾಗಿ ಸಿಗುತ್ತದಾದರೂ ಆಹಾರ ತಜ್ಞರು ಶಿಫಾರಸು ಮಾಡುವುದು ಮೀನೆಣ್ಣೆಯನ್ನು. ಇದರ ಮೂಲಕ ಅತ್ಯಧಿಕ ಪ್ರಮಾಣದ ಒಮೆಗಾ-3 ದೊರೆಯುತ್ತದೆ ಮತ್ತು ಅಷ್ಟೇ ಪರಿಣಾಮಕಾರಿ ಸಹ. ಫಾರ್ಮಾಸುಟಿಕಲ್ ಕಂಪನಿಗಳಲ್ಲಂತೂ ಒಮೆಗಾ-3 ಆ್ಯಸಿಡ್‌ಗೆ ಭಾರಿ ಬೇಡಿಕೆ. ಪರಿಸ್ಥಿತಿ ಹೇಗಿದೆ ಎಂದರೆ ಅಗತ್ಯ ಇರುವಷ್ಟು ಪ್ರಮಾಣದ ಮೀನೆಣ್ಣೆಯೇ ಸಿಗುತ್ತಿಲ್ಲ.
ಸಾಂಪ್ರದಾಯಿಕ ಮೀನುಕೃಷಿ ವಿಧಾನ ನಂಬಿಕೊಂಡರೆ ಒಮೆಗಾ-3 ಕೊರತೆ ಮುಂದೊಂದು ದಿನ ಜಾಗತಿಕ ಸಮಸ್ಯೆ ಆಗಬಹುದು ಎನ್ನುವುದನ್ನು ಮೊದಲು ಅರಿತವರು ನಾರ್ವೆ ವಿಜ್ಞಾನಿಗಳು. ಬೇಡಿಕೆ ತಲುಪಬೇಕು ಅಂತಾದರೆ ಭಾರಿ ಪ್ರಮಾಣದ ಮೀನುಕೃಷಿ ನಡೆಸಬೇಕು. ಆದರೆ ಮೀನುಗಳಿಗೆ ಆಹಾರ ಒದಗಿಸುವುದು ಎಲ್ಲಿಂದ? ಈ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ಇಂಗಾಲಾಮ್ಲದಲ್ಲಿ! ನಿಮಗೆ ಗೊತ್ತಿರಲಿ, ಅನಿಲ ಮತ್ತು ತೈಲ ಹೊರತುಪಡಿಸಿದರೆ ಮೀನುಗಾರಿಕೆ ನಾರ್ವೆಯ ಅತಿದೊಡ್ಡ ಆದಾಯ ಮೂಲ. 2013ರಲ್ಲಿ 10 ಶತಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆ ದೇಶ ರಫ್ತು ಮಾಡಿದೆ. ಹೀಗಾಗಿ ಮೀನುಕೃಷಿಯಲ್ಲೂ ಹೊಸತನದ ಆವಿಷ್ಕಾರ ಅವರಿಗೆ ಅನಿವಾರ್ಯ ಸಹ.
ವಿಜ್ಞಾನಿಗಳು ಮಾಡಿದ್ದು ಸರಳ. ಇಂಗಾಲಾಮ್ಲ ಮತ್ತು ಪಾಚಿಗಳನ್ನು ಒಂದೆಡೆ ಸಂಗ್ರಹಿಸಿದರು. ಬಳಿಕ ಅದನ್ನು 25 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಸಮುದ್ರದ ನೀರಿಗೆ ಬಿಟ್ಟರು. ಮೀನುಗಳಿಗೆ ಪಾಚಿ ಒಳ್ಳೆಯ ಆಹಾರ. ಬೇಕಿದ್ದರೆ ನೀವೂ ಸಣ್ಣದೊಂದು ಪ್ರಯೋಗ ಮಾಡಿನೋಡಿ. ಸಣ್ಣಪುಟ್ಟ ಹೊಂಡಗಳಲ್ಲಿ ಮೀನುಗಳು ಕಂಡರೆ ಅಲ್ಲಿ ಸ್ವಲ್ಪ ಪಾಚಿ ಹಾಕಿ. ಮೀನುಗಳು ಬಕಾಸುರನಂತೆ ಗಬಗಬನೆ ತಿಂದು ತೇಗುತ್ತವೆ. ಮೀನಿನಲ್ಲಿ ಒಮೆಗಾ-3 ಇರುವ ಗುಟ್ಟೇ ಪಾಚಿಗಳು. ಇಂಗ್ಲಾಲಾಮ್ಲವನ್ನು ಪಾಚಿಯೊಂದಿಗೆ ಬೆರೆಸಿ ಮೀನುಗಳಿಗೆ ತಿನ್ನಿಸುವ ಪ್ರಯೋಗ ಯಶ ಕಂಡಿದ್ದೇ ತಡ, ಬಹುದೊಡ್ಡ ಪ್ರಮಾಣದಲ್ಲಿ ಇದೇ ಮಾದರಿ ಅಳವಡಿಸಿಕೊಳ್ಳಲು ಮತ್ಸ್ಯೋದ್ಯಮಿಗಳು ಮುಂದಾಗಿದ್ದಾರೆ. ಅಲ್ಲಿನ ಉದ್ಯಮಿಗಳದು ಏನಿದ್ದರೂ ಸಂಘಟಿತ ಪ್ರಯತ್ನ. ಈ ವಿಚಾರದಲ್ಲೂ ದೊಡ್ಡದೊಡ್ಡ ಕಂಪನಿಗಳೆಲ್ಲ ಒಂದು. ಸರ್ಕಾರವೂ ಕೈ ಜೋಡಿಸಿದೆ. ಸಮುದ್ರತೀರದ ಮೊಂಗ್‌ಸ್ಟ್ಯಾಡ್‌ನ ತಾಂತ್ರಿಕ ಕೇಂದ್ರದಲ್ಲಿ ಬಹುದೊಡ್ಡ ಪ್ರಮಾಣದ ಮೀನುಕೃಷಿಗೆ ಇಂಗಾಲಾಮ್ಲ ಬಳಸಿಕೊಳ್ಳುವ ಪ್ರಯೋಗ ನಡೆಯುತ್ತಿದೆ. ಸಮೀಪದ ತೈಲ ಸಂಸ್ಕರಣಾ ಕೇಂದ್ರದಲ್ಲಿ ಉತ್ಪತ್ತಿಯಾಗುವ 80,000 ಟನ್, ಅನಿಲ ಆಧಾರಿತ ವಿದ್ಯುತ್ ಸ್ಥಾವರ ಹೊರಸೂಸುವ 20,000 ಟನ್ ಇಂಗಾಲಾಮ್ಲವನ್ನು ಸಂಗ್ರಹಿಸಲಾಗುತ್ತಿದೆ. ಅದನ್ನು ಪಾಚಿಯೊಂದಿಗೆ ಬೆರೆಸಿ ಬಿಡುವುದು ಇದ್ದೇ ಇದೆ.
ನಾರ್ವೆ ಇಂತಹ ಪ್ರಯೋಗ ಕೈಗೊಳ್ಳಲು ಮತ್ತೊಂದು ಕಾರಣವೂ ಇದೆ. ಸಾಮಾನ್ಯವಾಗಿ ಮೀನು ಕೃಷಿಗೆ ಬಳಸುವುದು ಬಲೆ ವಿಧಾನ. ಹೀಗೆ ಬೆಳೆಸಿದ ಮೀನಿನಲ್ಲಿ ಒಮೆಗಾ-3 ಸಿಗದು. ರುಚಿಗಷ್ಟೇ ಬಿಟ್ಟರೆ, ಔಷಧ ಉದ್ಯಮದ ಅಗತ್ಯಗಳನ್ನು ಪೂರೈಸದು. ಈ ಕೊಬ್ಬಿನೆಣ್ಣೆ ಇರುವ ಮೀನುಗಳು ಭಾರಿ ಪ್ರಮಾಣದಲ್ಲಿ ಉತ್ಪಾದನೆಯಾಗಬೇಕು ಅಂತಾದರೆ ಪರ್ಯಾಯ ವಿಧಾನ ಕಂಡುಕೊಳ್ಳುವುದು ಅನಿವಾರ್ಯ. ಒಮೆಗಾ-3 ಪೂರೈಕೆಯಲ್ಲಿ ಮುಂದಿರುವ ಪೆರುವನ್ನು ಹಿಂದಿಕ್ಕುವುದೂ ನಾರ್ವೆ ಗುರಿ. ಸಮುದ್ರ ಇದೆ, ತಾಂತ್ರಿಕ ನೆರವು ನೀಡಲು ಸರ್ಕಾರ ಸಿದ್ಧವಿದೆ. ಇನ್ನೇನು ಬೇಕು?
ನಾರ್ವೆ ಪ್ರಯೋಗ ಬ್ರಿಟನ್ ವಿಜ್ಞಾನಿಗಳಿಗೂ ಪ್ರೇರಣೆ ನೀಡಿದೆ. ಆರೋಗ್ಯಕಾರಿ ಕೊಬ್ಬಿನ ಆ್ಯಸಿಡ್‌ಗಳನ್ನು ಉತ್ಪಾದಿಸಬಲ್ಲ ಕ್ಯಾಮಲಿನ ಸಸ್ಯದ ವಾಣಿಜ್ಯ ಬೇಸಾಯಕ್ಕೆ ಕುಲಾಂತರಿ ತಳಿಯನ್ನು ನೀಡಿರುವ ಬ್ರಿಟನ್, ಮೀನುಕೃಷಿಯಲ್ಲಿ ನಾರ್ವೆ ಮಾದರಿ ಅಳವಡಿಸಿಕೊಳ್ಳಲು ಮುಂದಾದರೆ ಆಶ್ಚರ್ಯವಂತೂ ಅಲ್ಲ.

-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com