ಭಾರತ ಬೇರೆ ಅಲ್ಲ, ಭಾರತೀಯ ರೈಲ್ವೆ ಬೇರೆ ಅಲ್ಲ!

ಕಳೆದ ವಾರ ಕೇಂದ್ರ ರೈಲ್ವೆ ಸಚಿವರಾದ ಡಿ.ವಿ. ಸದಾನಂದಗೌಡರಿಗೆ ಫೋನಾಯಿಸಿದ್ದೆ...
ಭಾರತ ಬೇರೆ ಅಲ್ಲ, ಭಾರತೀಯ ರೈಲ್ವೆ ಬೇರೆ ಅಲ್ಲ!

ಕಳೆದ ವಾರ ಕೇಂದ್ರ ರೈಲ್ವೆ ಸಚಿವರಾದ ಡಿ.ವಿ. ಸದಾನಂದಗೌಡರಿಗೆ ಫೋನಾಯಿಸಿದ್ದೆ. ಅವರು ಮೊಬೈಲ್ ಫೋನ್ ಎತ್ತಲಿಲ್ಲ. ಅವರ ಮೊಬೈಲ್ ಪರದೆ ಮೇಲೆ ನನ್ನ ನಂಬರ್, ಹೆಸರು ಮೂಡದ ಕಾರಣ (ನನ್ನ ನಂಬರ್ ಪ್ರೈವೇಟ್ ನಂಬರ್ ಲಿಸ್ಟ್‌ನಲ್ಲಿ ಇರುವುದರಿಂದ) ಅವರು ಫೋನ್ ಎತ್ತಿರಲಿಕ್ಕಿಲ್ಲ ಎಂದು ಭಾವಿಸಿ, 'ಈಗ ತಾನೆ ನಿಮಗೆ ಫೋನ್ ಮಾಡಿದವನು ನಾನೇ' ಎಂದು ನನ್ನ ಹೆಸರನ್ನು ಬರೆದು ಎಸ್ಸೆಮ್ಮೆಸ್ ಕಳಿಸಿದೆ. ಅವರು ನನ್ನ ಫೋನ್ ಅನ್ನು ಸ್ವೀಕರಿಸುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಕಾರಣ ಅವರು ಪ್ರಥಮ ರೈಲ್ವೆ ಬಜೆಟ್ ಮಂಡಿಸಿ ಹತ್ತು ದಿನಗಳಾಗಿದ್ದವು. ಸಂಸತ್ತಿನ ಉಭಯ ಸದನಗಳಲ್ಲಿ ಆ ಬಜೆಟ್ ಬಗ್ಗೆ ಚರ್ಚೆ ನಡೆದಿತ್ತು. ಇಂಥ ಸಂದರ್ಭದಲ್ಲಿ ರೈಲ್ವೆ ಮಂತ್ರಿಗಳಿಗೆ ಫೋನು ಮಾಡುವುದು, ಅವರು ಫೋನ್ ಕರೆ ಸ್ವೀಕರಿಸಬೇಕು ಎಂದು ಅಪೇಕ್ಷಿಸುವುದು ತಪ್ಪು ಎಂಬ ಕಾಮನ್‌ಸೆನ್ಸ್‌ನ್ನು ಇಟ್ಟುಕೊಂಡೇ ಅವರಿಗೆ ಫೋನ್ ಮಾಡಿದ್ದೆ. ಹೀಗಾಗಿ ಅವರು ಫೋನ್ ಎತ್ತದ್ದಕ್ಕೆ ಬೇಸರವಾಗಲಿಲ್ಲ. ನನ್ನ ಎಸ್ಸೆಮ್ಮೆಸ್ ನೋಡಿಯೂ ವಾಪಸ್ ಕರೆಯದಿದ್ದರೂ ನನಗೆ ಬೇಸರವಾಗುತ್ತಿರಲಿಲ್ಲ. ನಾನು ಸುಮ್ಮನೆ ಒಂದು ಛಾನ್ಸ್ ತೆಗೆದುಕೊಂಡಿದ್ದೆ ಅಷ್ಟೆ.
ಎರಡು ನಿಮಿಷಗಳ ನಂತರ ಫೋನ್ ಬಂತು. ಅತ್ತ ಕಡೆಯಿಂದ ಸದಾನಂದಗೌಡರು ಮಾತಾಡುತ್ತಿದ್ದರು. ಅವರಲ್ಲಿ ಕೇಳಿಸಿಕೊಳ್ಳುವ ತಾಳ್ಮೆ, ವ್ಯವಧಾನ ಹಾಗೂ ಸಮಯವಿತ್ತು. ತಿಳಿದುಕೊಳ್ಳುವ ಹಂಬಲವಿತ್ತು. ಕಿವಿಯಾಗುವ ಸಂಯಮವಿತ್ತು. ಬೆಂಗಳೂರಿಗೆ ಬಂದಾಗ ಮಾತುಕತೆಯನ್ನು ವಿಸ್ತರಿಸುವ ಕಾಳಜಿಯಿತ್ತು. ಮೂರು ದಿನಗಳ ನಂತರ ಗೌಡರು ಬೆಂಗಳೂರಿಗೆ ಬಂದವರೇ ಸ್ವತಃ ಫೋನ್ ಮಾಡಿ ಮರುದಿನ ಬೆಳಗ್ಗೆ ಭೇಟಿಗೆ ಸಮಯ ನಿಗದಿಪಡಿಸಿದರು. ಬೆಳಗ್ಗೆ ಅವರ ಮನೆಗೆ ಹೋದಾಗ ಮುಗುಳ್ನಗೆಯಿಂದ ಸ್ವಾಗತಿಸಿದರು. ಒಬ್ಬ ಕೇಂದ್ರ ಮಂತ್ರಿಯಿಂದ, ಅದರಲ್ಲೂ ರೈಲ್ವೆ ಖಾತೆಯಂಥ ಪ್ರಮುಖ ಜವಾಬ್ದಾರಿ ಹೊಂದಿರುವ ಮಂತ್ರಿಯಿಂದ ಇದನ್ನು ನಿರೀಕ್ಷಿಸಿರಲಿಲ್ಲ. ನಾನೂ ಸಹ ಕೇಂದ್ರದ ಕ್ಯಾಬಿನೆಟ್ ಖಾತೆ ಸಚಿವರಿಗೆ ಮೂರು ವರ್ಷ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದೆ. ಅಧಿಕಾರದ ಪಡಸಾಲೆಯಲ್ಲಿರುವ ಸಚಿವರುಗಳ ವರ್ತನೆ, ಸೋಗು, ನಾಟಕ, ಬಣ್ಣದ ಮಾತು, ಡೌಲು, ವಕ್ರಬುದ್ಧಿ ಹೊಸತೇನೂ ಅಲ್ಲ. ಇನ್ನೂ ಗೌಡರು ದಿಲ್ಲಿ ರಾಜಕೀಯಕ್ಕೆ ಹೊಂದಿಕೊಂಡಿಲ್ಲವೋ ಅಥವಾ ತಮ್ಮ ಹುಟ್ಟುಗುಣವನ್ನು ಇನ್ನೂ ಬಿಟ್ಟುಕೊಟ್ಟಿಲ್ಲವೋ ಎಂಬ ಜಿಜ್ಞಾಸೆ ಮೂಡಿತು. ಸದಾನಂದಗೌಡರ ತಲೆ ಇನ್ನೂ ಕುತ್ತಿಗೆ ಮೇಲೆಯೇ ಇರುವುದನ್ನು ಕಂಡು ಸಮಾಧಾನವೂ ಆಯಿತು.
ಸದಾನಂದಗೌಡರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಇಳಿದ ನಂತರ ಅವರಿಗೆ ಕೆಎಂಎಫ್‌ನಂಥ ಸಂಸ್ಥೆಯ ಅಧ್ಯಕ್ಷರಾಗಲು ಹರಸಾಹಸ ಪಟ್ಟರೂ ಆಗಲಿಲ್ಲ. ಅವರದೇ ಪಕ್ಷದ ಶಾಸಕ ಸೋಮಶೇಖರ ರೆಡ್ಡಿ ಆ ಸಂಸ್ಥೆಯ ಅಧ್ಯಕ್ಷರಾಗುವುದನ್ನು ತಪ್ಪಿಸಲು ಆಗಲಿಲ್ಲ. ಗೌಡರು ಪಕ್ಷದ ನಾಯಕರುಗಳ ಮುಂದೆ ಅಳಲು ತೋಡಿಕೊಂಡರೂ ಯಾರೂ ಸಹ ಅವರಿಗೆ ಸಹಾಯ ಮಾಡಲಿಲ್ಲ. ಬೇರೆ ಮಾರ್ಗವಿಲ್ಲದೆ ಕೆಎಂಎಫ್‌ನ ಹಲವು ನಿರ್ದೇಶಕರ ಪೈಕಿ ಒಬ್ಬರಾಗಿ ತೆಪ್ಪಗೆ ಉಳಿದರು. ಆನಂತರ ರಾಜಕೀಯ ಸ್ಥಿತ್ಯಂತರಗಳಿಂದ ಸದಾನಂದಗೌಡರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲೂ ಬೆಂಗಳೂರು ಉತ್ತರಕ್ಷೇತ್ರದ ಟಿಕೆಟ್ ಗಿಟ್ಟಿಸಲು ಅವರು ಎಷ್ಟೆಷ್ಟು ಸಾಹಸ ಮಾಡಬೇಕಾಯಿತು ಎಂಬುದು ಸಹ ಅನೇಕರಿಗೆ ಗೊತ್ತೇ ಇದೆ. ಆದರೆ ನರೇಂದ್ರ ಮೋದಿಯವರ ಸಚಿವ ಸಂಪುಟದಲ್ಲಿ ಖಾತೆ ಗಿಟ್ಟಿಸಲು, ಪ್ರಮುಖ ಖಾತೆ ಗಿಟ್ಟಿಸಲು ಯಾರ್ಯಾರು ಎಷ್ಟು ಸರ್ಕಸ್ ಮಾಡಿದರು, ಕಾಲು ಹಿಡಿದರು, ಲಾಬಿ ಮಾಡಿದರು ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಸದಾನಂದಗೌಡರಿಗೆ ಮಾತ್ರ ಈ ಖಾತೆ ಅಯಾಚಿತವಾಗಿ ಒಲಿದು ಬಂದಿತು. ಮೋದಿಯವರ ನಂತರ ಆರನೆಯವರಾಗಿ ಗೌಡರು ಪ್ರಮಾಣ ವಚನ ಸ್ವೀಕರಿಸಿದಾಗಲೇ ಅವರಿಗೆ ಯಾವುದೋ ಮಹತ್ವದ ಖಾತೆ ಕಾದಿದೆ ಎಂದು ಎಲ್ಲರೂ ಅಂದುಕೊಂಡರೂ, ರೈಲ್ವೆಯಂಥ ಅತ್ಯಂತ ಪ್ರಮುಖ ಖಾತೆ ಸಿಗಬಹುದೆಂದು ಯಾರೂ ಅಂದುಕೊಂಡಿರಲಿಲ್ಲ. ಸ್ವತಃ ಗೌಡರೂ ಅಂದುಕೊಂಡಿರಲಿಕ್ಕಿಲ್ಲ. ಪ್ರಮುಖ ಖಾತೆ ನಿರೀಕ್ಷಿಸುತ್ತಿದ್ದವರ ಹೊಟ್ಟೆಯಲ್ಲಿ ಹುಟ್ಟಿದ ಹುಳುಕು ಹುಳುಗಳೆಲ್ಲ ಹುಳಾಪಟೆ ಸತ್ತಿರಬಹುದು? ಒಂದು ಕಾಲಕ್ಕೆ ನಾನೇನಾ ಆ ಕೆಎಂಎಫ್ ಅಧ್ಯಕ್ಷ ಹುದ್ದೆಗೆ ಪ್ರಯತ್ನಿಸಿದವನು ಎಂದು ಗೌಡರೂ ನಾಚಿಕೆಪಟ್ಟುಕೊಂಡಿರಬಹುದು. ಅಂಥ 'ಹಿಮಾಲಯ ಸದೃಶ' ಖಾತೆಯನ್ನು ಭಗವಂತ ಅವರಿಗೆ ಕರುಣಿಸಿಬಿಟ್ಟ! ಆ ಖಾತೆಗೆ ತಾವೆಷ್ಟು ಅರ್ಹ, ಲಾಯಕ್ಕು, ಯೋಗ್ಯ ಎಂಬುದನ್ನು ಅವರೇ ರುಜುವಾತು ಮಾಡಿ ತೋರಿಸಬೇಕಿದೆ. ಈ ನಿಟ್ಟಿನಲ್ಲಿ ಅವರು ಮಂಡಿಸಿದ ರೈಲ್ವೆ ಬಜೆಟ್ ಇದೆಯಲ್ಲ, ಅದು ಅವರು ಪ್ರಥಮ ಹೆಜ್ಜೆಯಲ್ಲಿಟ್ಟ ದಾಪುಗಾಲು.
ಭಾರತೀಯ ರೈಲು ಈ ರಾಷ್ಟ್ರದ ಜೀವನಾಡಿ. ಹೀಗಂದರೆ ಏನೂ ಹೇಳಿದಂತೆ ಆಗಲಿಲ್ಲ. ಅದೊಂದು ಖಾಲಿ ಸ್ಟೇಟ್‌ಮೆಂಟ್ ಆದೀತು. ನಮ್ಮ ದೇಶದ ಅತ್ಯಂತ ದಕ್ಷ ರೈಲ್ವೆ ಮಂತ್ರಿಗಳ ಪೈಕಿ ಒಬ್ಬರಾಗಿದ್ದ, ಕನ್ನಡಿಗರೇ ಆದ ಜಾರ್ಜ್ ಫರ್ನಾಂಡಿಸ್ ಅವರು ಒಮ್ಮೆ ಹೇಳಿದ್ದರು-'ಭಾರತೀಯ ರೈಲನ್ನು ಕಲ್ಪಿಸಿಕೊಂಡರೆ ಇಡೀ ಭಾರತವೇ ನನ್ನ ಕಣ್ಮುಂದೆ ಬಂದು ನಿಂತಂತಾಗುತ್ತದೆ. ಭಾರತೀಯ ರೈಲ್ವೆ ಮೂಲಕ ಮಾತ್ರ ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಭಾರತ ಬೇರೆ ಅಲ್ಲ, ಭಾರತೀಯ ರೈಲ್ವೆ ಬೇರೆ ಅಲ್ಲ.'
    ಈ ದೇಶದ ವೈಶಾಲ್ಯ, ಅಗಾಧತೆ, ವಿಸ್ತಾರ ಗೊತ್ತಾಗಬೇಕೆಂದರೆ ರೈಲಿನಲ್ಲಿ ಪ್ರಯಾಣಿಸಬೇಕು. ಇಲ್ಲಿನ ಜನ, ಆಹಾರ, ಹವಾಮಾನ, ಜನಜೀವನ, ವೇಷಭೂಷಣ, ಭೌಗೋಳಿಕ ವೈಶಿಷ್ಟ್ಯಗಳನ್ನು ಭಾರತೀಯ ರೈಲು ಪರಿಚಯಿಸುವಷ್ಟು ಪರಿಣಾಮಕಾರಿಯಾಗಿ ಬೇರೆ ಯಾವುದರಿಂದಲೂ ಸಾಧ್ಯವಿಲ್ಲ. ಕನ್ಯಾಕುಮಾರಿಯಿಂದ ಜಮ್ಮುತವಿ ತನಕ, ಹೌರಾದಿಂದ ಅಮೃತಸರದ ತನಕ, ಹೌರಾದಿಂದ ಕಾಮರೂಪ್ ಎಕ್ಸ್‌ಪ್ರೆಸ್‌ನಲ್ಲಿ ಗುವಾಹಟಿ ತನಕ-ಒಟ್ಟು ಹನ್ನೆರಡು ದಿನ ರೈಲಿನಲ್ಲಿ ಪ್ರಯಾಣಿಸಿದರೆ 'ಭಾರತ ದರ್ಶನ'ವಾಗುತ್ತದೆ. ಮೂರು ಸಂಗತಿಗಳಿಂದ ಭಾರತವನ್ನು ಅರ್ಥಮಾಡಿಕೊಳ್ಳಬಹುದಂತೆ ಅಥವಾ ಭಾರತ ಅಂದ್ರೆ ಮೂರು Striking ಆದ ಸಂಗತಿಗಳು ಕಣ್ಣ ಮುಂದೆ ಹಾದು ಹೋಗುತ್ತವಂತೆ. ಅವ್ಯಾವುಗಳೆಂದರೆ ಕ್ರಿಕೆಟ್, ಹಿಂದಿ ಸಿನಿಮಾ ಹಾಗೂ ಭಾರತೀಯ ರೈಲ್ವೆ. ಇಡೀ ದೇಶಕ್ಕೆ ದೇಶವೇ ಸ್ತಬ್ದವಾಗಬೇಕು, ಸ್ಥಗಿತವಾಗಬೇಕೆಂದರೆ ರೈಲು ಓಡಾಟ ನಿಲ್ಲಿಸಿದರೆ ಸಾಕು. ಇದಕ್ಕೇ ಭಾರತೀಯ ರೈಲಿಗೆ ಲೈಫ್‌ಲೈನ್ ಅರ್ಥಾತ್ ಜೀವನಾಡಿ ಅಂತ ಕರೆಯೋದು, ಹಾಗೆ ನೋಡಿದರೆ, ಊರಿಂದ ಊರಿಗೆ, ಜಿಲ್ಲೆಯಿಂದ ಜಿಲ್ಲೆಗೆ, ರಾಜ್ಯದಿಂದ ರಾಜ್ಯಕ್ಕೆ ಕೂಡಿಸುವುದೇ ರೈಲುಗಳು. ಎಲ್ಲ ಅರ್ಥದಲ್ಲೂ ನಮ್ಮ ದೇಶದ ಅಖಂಡತೆ ಅಥವಾ ಸಮಗ್ರತೆಗೆ ಬೆಸುಗೆ ಬೆಸೆಯುವುದೇ ಭಾರತೀಯ ರೈಲು. ದೇಶದ ಲಕ್ಷಾಂತರ ಹಳ್ಳಿಗಳಲ್ಲಿರುವವರು ಪಾತ್ರೆ ಪಗಡಿ, ಹಾಸಿಗೆ, ಜಾನುವಾರುಗಳನ್ನು ಕಟ್ಟಿಕೊಂಡು ಮತ್ತೊಂದು ಊರಿಗೆ ಹೋಗಬೇಕೆಂದರೆ ರೈಲೇ ಗತಿ.
ಕೆಲವರು ಹಾಸ್ಯಕ್ಕೋ, ಲೇವಡಿಗೋ, ತಮಾಷೆಗೋ 'ಜಗತ್ತಿನ ಅತ್ಯಂತ ಉದ್ದದ ಟಾಯ್ಲೆಟ್‌ಗೆ ಭಾರತೀಯ ರೈಲು ಹಳಿಗಳು ಎಂದು ಕರೆಯಬಹುದು' ಎಂದು ವಕ್ರತುಂಡೋಕ್ತಿ ಹೇಳುವುದುಂಟು. ವಾಸ್ತವದಲ್ಲಿ ಇದು ನಿಜವೂ ಇರಬಹುದು. ಕಾರಣ ನಮ್ಮ ದೇಶದಲ್ಲಿ ಒಂದು ಲಕ್ಷದ ಹದಿನೈದು ಸಾವಿರ ಕಿ.ಮೀ. ಉದ್ದದ ರೈಲು ಹಳಿಗಳಿವೆ. ಇಷ್ಟು ಉದ್ದ ರೈಲು ಮಾರ್ಗ ಜಗತ್ತಿನ ಬೇರೆ ದೇಶಗಳಲೆಲ್ಲೂ ಇಲ್ಲ. ಅಮೆರಿಕ, ರಷ್ಯಾ, ಹಾಗೂ ಚೀನಾದಲ್ಲಿ ಹೆಚ್ಚು ಕಮ್ಮಿ ಇಷ್ಟೇ ಉದ್ದದ ರೈಲು ಮಾರ್ಗಗಳಿದ್ದರೂ, ಅಲ್ಲಿ ನಮ್ಮ ದೇಶದಲ್ಲಿ ಸಂಚರಿಸುವಷ್ಟು ಪ್ರಯಾಣಿಸುವುದಿಲ್ಲ. ಜಗತ್ತಿನ ಉದ್ದದ ಟಾಯ್ಲೆಟ್ ಮಾತ್ರ ಅಲ್ಲ, ಅಗಲವಾದ ಟಾಯ್ಲೆಟ್ ಇರುವುದು ಸಹ ಭಾರತದಲ್ಲಿಯೇ ಹಾಗೂ ಅದಕ್ಕೆ ರೈಲು ನಿಲ್ದಾಣಗಳು ಅಂತಾರೆ ಎಂದೂ ವ್ಯಂಗ್ಯವಾಡುವುದುಂಟು. ಕಾರಣ ನಮ್ಮ ದೇಶದಲ್ಲಿ 7175 ರೈಲು ನಿಲ್ದಾಣಗಳಿವೆ. ಪಶ್ಚಿಮ ಬಂಗಾಳದ ಖರಗಪುರದ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್ 2733 ಅಡಿ ಉದ್ದವಿದೆ. (ಜಗತ್ತಿನ ಅತ್ಯಂತ ಉದ್ದ ಫ್ಲಾಟ್‌ಫಾರ್ಮ್ ಇದೇ) ಪ್ರತಿದಿನ ಸಾವಿರಾರು, ಲಕ್ಷಾಂತರ ಪ್ರಯಾಣಿಕರು ಈ ನಿಲ್ದಾಣಗಳನ್ನು ಬಳಸುವುದರಿಂದ ಈ 'ಅಭಿದಾನ' ಬಂದಿರಬಹುದು.
ಅತಿ ಹೆಚ್ಚು ಜನರಿಗೆ ನೌಕರಿ ಕೊಟ್ಟಿರುವ ಸಂಸ್ಥೆಗಳ ಪೈಕಿ ಭಾರತೀಯ ರೈಲಿಗೆ ವಿಶ್ವದಲ್ಲಿ ಒಂಭತ್ತನೇ ಸ್ಥಾನ. ಅಂದ ಹಾಗೆ ಹದಿನಾಲ್ಕೂವರೆ ಲಕ್ಷ ಮಂದಿಗೆ ಭಾರತೀಯ ರೈಲ್ವೆ ನೇರ ಉದ್ಯೋಗ ಕೊಟ್ಟಿದೆ. ಇದರ ಹೊರತಾಗಿ, ಸುಮಾರು ಅರವತ್ತು ಲಕ್ಷ ಮಂದಿ ಪರೋಕ್ಷವಾಗಿ ತಮ್ಮ ಜೀವನ ನಿರ್ವಹಣೆಗೆ ರೈಲನ್ನು ನೆಚ್ಚಿಕೊಂಡಿದ್ದಾರೆ. ಸೋಜಿಗವೆನಿಸಬಹುದು. ರೈಲಿನಲ್ಲಿ ದೇಶಾದ್ಯಂತ ಕಳ್ಳೇಕಾಯಿ, ಕಳ್ಳೇಪುರಿ, ಬಿಸ್ಕೆಟ್, ಹುರಿದ ಕಡ್ಲೆ ಮುಂತಾದ ಕರುಂಕುರುಂ ಮಾರಾಟ ಮಾಡುವವರು ಮೂರೂವರೆ ಲಕ್ಷಕ್ಕಿಂತ ಅಧಿಕ ಜನರಿದ್ದಾರೆ! ಇವರನ್ನು ನೆಚ್ಚಿಕೊಂಡವರು ಮೂರು-ನಾಲ್ಕು ಪಟ್ಟು ಜಾಸ್ತಿಯಿದ್ದಾರೆ. ಮೂವತ್ತು-ಮೂವತ್ತೈದು ಬೋಗಿಯಿರುವ ಒಂದು ರೈಲು ಒಂದು ಊರಿನಿಂದ ಮತ್ತೊಂದು ಊರು ತಲುಪಿತೆಂದರೆ ಕನಿಷ್ಠ ಹತ್ತು ಸಾವಿರ ಮಂದಿ ಅದರ ಓಡಾಟಕ್ಕೆ ಕೈ ಜೋಡಿಸಿರುತ್ತಾರೆ. ಅಷ್ಟೇ ಸಂಖ್ಯೆಯ ಮಂದಿ ಪರೋಕ್ಷವಾಗಿ ಅದರ ಸುರಕ್ಷಿತ ಸಂಚಾರ, ಪ್ರಯಾಣಿಕರ ಅನುಕೂಲ, ಸರಕು-ಸಾಗಣೆ ನಿರ್ವಹಣೆಯ ಹಿಂದೆ ಅಗೋಚರವಾಗಿ ದುಡಿದಿರುತ್ತಾರೆ. ಹೀಗಾಗಿ ರೈಲು ಬರೀ ಜೀವನಾಡಿಯೊಂದೇ ಅಲ್ಲ, ಜೀವನನಾಡಿಯೂ ಹೌದು.
ಅಸ್ಸಾಮಿನ ದಿಬ್ರಗಢದಿಂದ ತಮಿಳುನಾಡಿನ ಕನ್ಯಾಕುಮಾರಿ ನಡುವೆ 'ವಿವೇಕ್ ಎಕ್ಸ್‌ಪ್ರೆಸ್‌' ಎಂಬ ರೈಲು ಓಡುತ್ತದೆ. ನಮ್ಮ ದೇಶದ ಅತ್ಯಂತ ಉದ್ದದ ರೈಲು ಅಂದ್ರೆ ಇದು. 4280 ಕಿಮಿ ಉದ್ದದ ಈ ಮಾರ್ಗವನ್ನು ಎಂಬತ್ತೆರಡೂವರೆ ಗಂಟೆ (ಸರಿಯಾಗಿ ಮೂರೂವರೆ ದಿನ)ಗಳಲ್ಲಿ ಕ್ರಮಿಸುತ್ತದೆ. ಇದೊಂದು ರೈಲನ್ನು ಪ್ರಯಾಣಿಕರನ್ನು ಹೊರತುಪಡಿಸಿ, ಸುಮಾರು ಒಂದು ಲಕ್ಷ ಮಂದಿ ತಮ್ಮ ಜೀವನ ನಿರ್ವಹಣೆಗೆ ಆಶ್ರಯಿಸಿದ್ದಾರೆಂದರೆ ಅದು ನಿಶ್ಚಿತವಾಗಿಯೂ ಜೀವನಾಡಿ ಎಂಬ ಮಾತನ್ನು ಒಪ್ಪುತ್ತೀರಿ. ಇದರಂತೆ ಇಲ್ಲಿ ಮತ್ತೊಂದು ರೈಲನ್ನು ಉಲ್ಲೇಖಿಸಬೇಕು. ಅದೆಂದರೆ ಹೌರಾ- ಅಮೃತಸರ ಎಕ್ಸ್‌ಪ್ರೆಸ್. ಇದನ್ನು ಎಕ್ಸ್‌ಪ್ರೆಸ್ ಅಂತ ಯಾಕೆ ಕರೆಯುತ್ತಾರೋ? ಕಾರಣ ಈ 'ಎಕ್ಸ್‌ಪ್ರೆಸ್ ರೈಲು' 115 ಕಡೆಗಳಲ್ಲಿ ನಿಲ್ಲುತ್ತದೆ. ಈಶಾನ್ಯ ಹಾಗೂ ವಾಯವ್ಯ ಭಾರತವನ್ನು ಸೇರಿಸಿರುವ ಈ ರೈಲನ್ನು ಹತ್ತು ಸಾವಿರಕ್ಕಿಂತ ಹೆಚ್ಚು ಕುಟುಂಬಗಳು ಆಶ್ರಯಿಸಿವೆ.
ಭಾರತದಲ್ಲಿ ಪ್ರತಿದಿನ ಏಳು ಸಾವಿರ ಪ್ಯಾಸೆಂಜರ್ ಟ್ರೇನುಗಳು ಸೇರಿದಂತೆ ಒಟ್ಟು 14,300 ರೈಲುಗಳು ಸಂಚರಿಸುವ ದೂರವನ್ನು ಲೆಕ್ಕ ಹಾಕಿದರೆ ಅದು ಭೂಮಿಯಿಂದ ಚಂದ್ರನವರೆಗಿನ ಮೂರೂವರೆ ಪಟ್ಟು ದೂರಕ್ಕೆ ಸಮ. ಪ್ರತಿನಿತ್ಯ ಈ ರೈಲುಗಳಲ್ಲಿ ಸುಮಾರು ಇಪ್ಪತ್ತೈದು ದಶಲಕ್ಷ ಜನ ಪ್ರಯಾಣಿಸುತ್ತಾರೆ. ಇದು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ತಸ್ಮೇನಿಯಾ, ಬ್ರುನೈ ಜನಸಂಖ್ಯೆಗೆ ಸಮ! ಪ್ರತಿ ವರ್ಷ ಏನಿಲ್ಲವೆಂದರೂ 7.2 ಶತಕೋಟಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಅಂದರೆ ಭಾರತದ ಜನಸಂಖ್ಯೆಯ ಆರು ಪಟ್ಟು ಜಾಸ್ತಿ! ಇದು ಪ್ರಯಾಣಿಕರ ಕತೆಯಾಯಿತು. ಇನ್ನು ಸರಕು -ಸಾಗಣೆ ಹೊತ್ತ ರೈಲುಗಳನ್ನು ಗಮನಿಸಬೇಕು. ಹಿಂದಿನ ವರ್ಷವೊಂದೇ 105818 ದಶಲಕ್ಷ ಟನ್ ಸರಕುಗಳನ್ನು ರೈಲುಗಳಲ್ಲಿ ಸಾಗಿಸಲಾಗಿದೆ. ಸುಮಾರು ಎರಡು ಲಕ್ಷದ ನಲವತ್ತು ಸಾವಿರ ಬೋಗಿಗಳಲ್ಲಿ ಪ್ರತಿದಿನ ಸರಕುಗಳನ್ನು ಸಾಗಿಸಲಾಗುತ್ತಿದೆ. ದಿನದ ಯಾವುದೇ ಹೊತ್ತಿನಲ್ಲಿ ಸುಮಾರು ಎರಡು ಲಕ್ಷ ಸರಕು ಬೋಗಿಗಳು ಚಾಲನೆಯಲ್ಲಿರುತ್ತವೆ.
ಸುಮಾರು ಹತ್ತು ಸಾವಿರ ಲೋಕೋಮೋಟಿವ್‌ಗಳು ಅರವತ್ತೆರಡು ಸಾವಿರ ಪ್ಯಾಸೆಂಜರ್ ಕೋಚ್‌ಗಳನ್ನು ಎಳೆಯುತ್ತಿರುತ್ತವೆ. ಇಡೀ ದೇಶಾದ್ಯಂತ ರೈಲು ಸಂಚರಿಸುತ್ತಿದೆಯೆಂದರೆ ದೇಶವೂ ಚಲಿಸುತ್ತಿದೆಯಂದರ್ಥ ಎಂದು ರೈಲ್ವೆ ಸಚಿವ ಮಧುದಂಡವತೆ ಹೇಳಿದ ಮಾತು ಅಕ್ಷರಶಃ ಸತ್ಯ.
ಇಷ್ಟು ಹೇಳಿದ ನಂತರವೂ ಭಾರತೀಯ ರೈಲ್ವೆ ಅಗಾಧತೆಯೇನೆಂಬುದರ ಒಂದು ಐಡಿಯಾ ಸಿಕ್ಕಿರಬಹುದು. ಭಾರತೀಯ ರೈಲ್ವೆಯನ್ನು ಹದಿನೇಳು ವಲಯಗಳಾಗಿ ವಿಂಗಡಿಸಲಾಗಿದೆ. ಉದಾಹರಣೆಗೆ ಬೆಂಗಳೂರು, ಹುಬ್ಬಳ್ಳಿ, ಮೈಸೂರು ಹಾಗೂ ಕೋಝಿಕೋಡ್ ಒಳಗೊಂಡ ಸೌಥ್ -ವೆಸ್ಟರ್ನ್ (ನೈರುತ್ಯ) ಝೋನ್ ಅಥವಾ ಚೆನ್ನೈ, ತಿರುಚಿನಾಪಳ್ಳಿ, ಮಧುರೈ, ಸೇಲಂ, ಪಾಲಕ್ಕಾಡ್ ಹಾಗೂ ತಿರುವನಂತಪುರಂ ಒಳಗೊಂಡ ದಕ್ಷಿಣ (ಸದರ್ನ್) ವಲಯ. ಅಚ್ಚರಿಯೆನಿಸಬಹುದು. ಈ ವಲಯಗಳ ಅದರಲ್ಲೂ ವಿಶೇಷವಾಗಿ ಸೆಂಟ್ರಲ್, ಉತ್ತರ ಅಥವಾ ದಕ್ಷಿಣ ರೈಲ್ವೆ ವಲಯಗಳ ಪೈಕಿ ಒಂದೊಂದು ವಲಯದ ವಾರ್ಷಿಕ ಬಜೆಟ್ ಕರ್ನಾಟಕ ಸರ್ಕಾರದ ಬಜೆಟ್‌ಗಿಂತ ಹೆಚ್ಚಿಗೆ ಇದೆಯೆಂದರೆ ಇದರ ವಹಿವಾಟಿನ ಅಂದಾಜು ಸಿಗಬಹುದು.
ಒಮ್ಮೆ ಲೋಕಸಭೆಯಲ್ಲಿ ಸಿಪಿಐನ ಸೋಮನಾಥ ಚಟರ್ಜಿಯವರು ರೈಲ್ವೆ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡು ಮಾತಾಡುವಾಗ, 'ಭಾರತೀಯ ರೈಲುಗಳೆಂದರೆ ಹಳಿಗಳ ಮೇಲೆ ಓಡಾಡುವ ದೇಹ, ಹೆಣದ ಪೆಟ್ಟಿಗೆಗಳು' ಎಂದು ಘೋಷಿಸಿದ್ದರು. ಈ ಮಾತಿನಿಂದ ತೀವ್ರ ಕ್ರುದ್ಧರಾದ ರೈಲ್ವೆ ಸಚಿವ ಜಾರ್ಜ್ ಫರ್ನಾಂಡಿಸ್, 'ನಿಮ್ಮಂಥ ಹಿರಿಯ ಸದಸ್ಯರು ಹೀಗೆಲ್ಲ ಹೇಳಬಾರದು. ಭಾರತೀಯ ರೈಲಿನ ಅಗಾಧತೆಯ ಅರಿವು ನಿಮಗಿದೆಯಾ? ದೇಶದ ಉದ್ದಗಲಕ್ಕೆ ಹರಡಿರುವ ರೈಲು ಹಳಿಗಳನ್ನು ಹಗಲು-ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಕಾಯುವುದೆಂದರೆ ಸಣ್ಣ ಕೆಲಸವಾ? ಮನುಷ್ಯನಿಂದ ಸಾಧ್ಯವಾದ ಕೆಲಸವಾ? ಆದರೂ ನಮ್ಮ ಇಲಾಖೆ ಶತಮಾನದಿಂದ ಮಾಡುತ್ತಾ ಬರುತ್ತಿದೆ. ಈ ಲಕ್ಷಾಂತರ ಕಿಮಿ ಉದ್ದದ ರೈಲು ಮಾರ್ಗದ ಯಾವುದೋ ಒಂದು ಕಡೆ ಕಿಡಿಗೇಡಿಗಳು ಫಿಶ್‌ಪ್ಲೇಟನ್ನು ತೆಗೆದರೆ ರೈಲು ಅಪಘಾತಕ್ಕೀಡಾಗಿ ನೂರಾರು ಜನ ಸಾಯಬಹುದು. ದೇಶದಲ್ಲಿ ಲಕ್ಷಕ್ಕೂ ಅಧಿಕ‌ unmanned ರೈಲ್ವೆ ಕ್ರಾಸಿಂಗ್‌ಗಳಿವೆ. ಪ್ರತಿ ಕ್ರಾಸಿಂಗ್ ಸಹ ಮೃತ್ಯುಕೂಪವಿದ್ದಂತೆ. ಪ್ರತಿ ವರ್ಷವೂ ಈ ಕ್ರಾಸಿಂಗ್‌ನಲ್ಲಿ ಗೇಟ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿವೆ.
ಇವೆಲ್ಲ ರಾತ್ರಿ ಬೆಳಗಾಗುವುದರೊಳಗೆ ಮುಗಿಯುವ ಕೆಲಸಗಳಲ್ಲ. ಆದರೆ ರೈಲುಗಳು ರಾತ್ರಿಯಲ್ಲಿ, ಬೆಳಗಿನಲ್ಲಿ ಸಂಚರಿಸುತ್ತಲೇ ಇರುತ್ತವೆ. ಭಾರತೀಯ ರೈಲ್ವೆ ಈ ಸ್ಥಿತಿಗೆ ತಲುಪಲು ಒಂದೂವರೆ ಶತಮಾನಗಳು ಹಿಡಿದಿವೆ. ಸಾಗಬೇಕಾದ ದಾರಿ ಇನ್ನೂ ಬಹುದೂರ ಇದೆ. ದಯವಿಟ್ಟು ಇಂಥ ಕೀಳು ಅಭಿರುಚಿಯ ಕಾಮೆಂಟ್ ಮಾಡಬೇಡಿ. ಅಂಥ ಮಾತುಗಳಿಂದ ದೇಶದ ಜನರಲ್ಲಿ ಭಯ ಮೂಡಿಸಬೇಡಿ' ಎಂದಿದ್ದರು.
ಜಾರ್ಜ್ ಹೇಳಿದಂತೆ, ಭಾರತೀಯ ರೈಲ್ವೆ ಕಾಲನ ಹೊಡೆತಕ್ಕೆ ಪಕ್ವವಾಗುವ, ಕಾಲನ ಪರೀಕ್ಷೆಗೊಳಗಾಗಿ ಪಕ್ಕಾಗುವುದಕ್ಕೆ ಉತ್ತಮ ನಿದರ್ಶನ. 1853ರಲ್ಲಿ ಭಾರತದಲ್ಲಿ ರೈಲ್ವೆ ಪ್ರಯಾಣ ಆರಂಭವಾಗಿ ಇಂದಿನ ತನಕ, ಕಳೆದ 161 ವರ್ಷಗಳಲ್ಲಿ ಸಾಧಿಸಿದ್ದು ಅಗಾಧ. ಅಟಲ್ ಬಿಹಾರಿ ವಾಜಪೇಯಿ ಅವರು ಜನಸಂಘದ ಮೂಲಕ ಲೋಕಸಭೆ ಸದಸ್ಯರಾಗಿ ಆಯ್ಕೆಯಾದಾಗ, ಭಾರತೀಯ ರೈಲನ್ನು ಸುಧಾರಿಸುವ ಮೊದಲ ಪ್ರಯತ್ನ ರೈಲ್ವೆ ಟೈಮ್ ಟೇಬಲ್‌ನಿಂದ ಆರಂಭವಾಗಲಿ ಎಂದು ಹೇಳಿದ್ದರು. ಕಾರಣ, ನಾನೂರು-ಐನೂರು ಪುಟಗಳ ರೈಲ್ವೆ ವೇಳಾಪಟ್ಟಿಯಲ್ಲಿ ನಮಗೆ ಬೇಕಾದ ರೈಲಿನ ವಿವರಗಳನ್ನು ಪಡೆಯುವುದೆಂದರೆ ಸಾಹಸದ ಮಾತಾಗಿತ್ತು. ಈ ಕಾರಣಕ್ಕಾಗಿಯೇ ಒಂದು ವ್ಯಂಗೋಕ್ತಿ ಜಾರಿಯಲ್ಲಿತ್ತು- 'ಈ ದೇಶದಲ್ಲಿ ಎರಡು ಮಹಾಕಾವ್ಯಗಳಿವೆ. ಮೊದಲನೆಯದು ತುಳಸೀ ರಾಮಾಯಣ ಹಾಗೂ ಎರಡನೆಯದು ರೈಲ್ವೆ ಟೈಮ್ ಟೇಬಲ್.' ಇವೆರಡೂ ಜನಸಾಮಾನ್ಯನಿಗೆ ಅರ್ಥವಾಗುವುದಿಲ್ಲ ಎಂಬುದು ಈ ಮಾತಿನ ತಾತ್ಪರ್ಯ. ವಿಚಿತ್ರ ಅಂದ್ರೆ ಇದು ಬರೀ ವ್ಯಂಗೋಕ್ತಿಯಾಗದೇ ವಾಸ್ತವವೂ ಆಗಿತ್ತು.
ಆದರೆ ಈಗ ವೇಳಾಪಟ್ಟಿ ಬದಲಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಕುಳಿತು ಕಂಪ್ಯೂಟರ್, ಮೊಬೈಲ್ ಆ್ಯಪ್ ಮೂಲಕ ಸ್ಟೇಷನ್‌ನಲ್ಲಿ ನಿಂತಿರುವ ರೈಲುಗಳಷ್ಟೇ ಅಲ್ಲ, ಹಳಿಗಳ ಮೇಲೆ ಓಡಾಡುವ ರೈಲುಗಳ ವಿವರಗಳನ್ನೆಲ್ಲ ಪಡೆಯಬಹುದು. ರೈಲು ಎಲ್ಲಿ ಸಂಚರಿಸುತ್ತಿದೆಯೆಂಬುದನ್ನು L‌o‌cate ಮಾಡಬಹುದು. ಎಲ್ಲಿಂದ ಎಲ್ಲಿಗೆ ಬೇಕಾದರೂ ಸೀಟು ಕಾಯ್ದಿರಿಸಬಹುದು. ತುಳಸೀದಾಸರು ಜೀವಂತವಾಗಿದ್ದಿದ್ದರೆ ರೈಲ್ವೆ ಟೈಮ್ ಟೇಬಲ್‌ನಿಂದ ಸ್ಫೂರ್ತಿ ಪಡೆದು ತಮ್ಮ ಮಹಾಕಾವ್ಯವನ್ನು ಸರಳಗೊಳಿಸುತ್ತಿದ್ದರೇನೋ?
ಭಾರತೀಯ ರೈಲ್ವೆಗೆ ನೊಗ ಕೊಡುವುದೆಂದರೆ ಕಾಲಿಗೆ ಸಾವಿರಾರು ಕೆ.ಜಿ. ಭಾರ ಕಟ್ಟಿಕೊಂಡು ಆಕಾಶಕ್ಕೆ ನೆಗೆಯಲು ಹಂಬಲಿಸುವುದು. ಜವಾಬ್ದಾರಿ ಬಹಳ ದೊಡ್ಡದು. ಸವಾಲು ಇನ್ನೂ ದೊಡ್ಡದು. ಒಂದು ಕ್ಷಣವೂ ವಿರಮಿಸುವಂತಿಲ್ಲ. ಹೇಗೆ ಮನುಷ್ಯನ ಹೃದಯ ಒಂದು ಸೆಕೆಂಡ್ ಸಹ ಸ್ಥಗಿತಗೊಳ್ಳುವುದಿಲ್ಲವೋ, ಭಾರತೀಯ ರೈಲ್ವೆಯೂ ಹಾಗೇ. ಪ್ರಯಾಣ ಸಾಗುತ್ತಲೇ ಇರಬೇಕು. ಅದಕ್ಕಾಗಿಯೇ ರೈಲ್ವೆಗೊಂದು ಪ್ರತ್ಯೇಕ ಬಜೆಟ್ ಇದೆ. ರೈಲ್ವೆ ಮಂಡಳಿಯಿದೆ. ಹತ್ತಾರು ಸಾವಿರ ಹಿರಿಯ ಅಧಿಕಾರಿಗಳಿದ್ದಾರೆ.
ಇವರಿಗೆಲ್ಲ ನೇತೃತ್ವ, ನಾಯಕತ್ವ ಕೊಡಬೇಕಲ್ಲ, ರೈಲ್ವೆ ಸಚಿವರ ನಿಜವಾದ ಸಾಮರ್ಥ್ಯ ಅಗ್ನಿ ಪರೀಕ್ಷೆಗೊಳಗಾಗುವುದು ಇಲ್ಲಿಯೇ. ಸದಾನಂದಗೌಡರಿಗೆ ತಮ್ಮ ಹತ್ತು ಜನ್ಮ ಕಳೆದರೂ ಸಿಗದ ಅದ್ಭುತ ಸದವಕಾಶ ಅವರನ್ನು ಹುಡುಕಿಕೊಂಡು ಬಂದಿದೆ. ರೈಲ್ವೆ ಹಳಿಗಳಂತೆ ಸಾಧ್ಯತೆಗಳು ಅನಂತ. ಅಷ್ಟಕ್ಕೂ ಅವರು ತೆಗೆದುಕೊಳ್ಳುವ ಪ್ರತಿ ನಿರ್ಧಾರವೂ 'ದೇಶ ಕಟ್ಟುವ ಕೆಲಸ' ಎಂದು ಜಮೆಯಾಗುತ್ತದೆ. ಜನರನ್ನು ನೇರವಾಗಿ ತಟ್ಟುತ್ತದೆ. ಗೌಡರು ತಮ್ಮ ಮೊಗದಲ್ಲಿನ ನಿರಂತರ ನಗುವಿನ ಕೆಲ ಪ್ರಮಾಣವನ್ನು ರೈಲು ಪ್ರಯಾಣಿಕರಿಗೂ ಹಂಚುವ ಕೆಲಸ ಮಾಡಲಿ.


-ವಿಶ್ವೇಶ್ವರ ಭಟ್
vbhat@me.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com