ಇದೇ ಅಂತರಗಂಗೆ ಶುದ್ಧಿ, ಇದೇ ಬಹಿರಂಗ ಅಭಿವೃದ್ಧಿ

ಮತ್ತೆ ದೇವನದಿ ಗಂಗೆಯ ಬಗ್ಗೆಯೇ ಬರೆಯಬೇಕಾಗಿದೆ. ಬಹುಶಃ...
ಇದೇ ಅಂತರಗಂಗೆ ಶುದ್ಧಿ, ಇದೇ ಬಹಿರಂಗ ಅಭಿವೃದ್ಧಿ

ಮತ್ತೆ ದೇವನದಿ ಗಂಗೆಯ ಬಗ್ಗೆಯೇ ಬರೆಯಬೇಕಾಗಿದೆ. ಬಹುಶಃ ಇತ್ತೀಚಿನ ವರ್ಷಗಳಲ್ಲಿ ಗಂಗೆಯನ್ನು ಹೊರತುಪಡಿಸಿದರೆ ಬೇರಾವ ನದಿಯೂ ಇಷ್ಟು ಚರ್ಚೆಗೆ ಒಳಗಾಗಿರಲಿಲ್ಲ, ಈ ಪ್ರಮಾಣದಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿರಲಿಲ್ಲ. ಸುದ್ದಿಮನೆಗಳಿಗೂ ಗಂಗೆ 'ಜೀವನದಿ'. ವಾರಾಣಸಿಯಲ್ಲಿ ಬಿಜೆಪಿ ಪ್ರಚಾರ ಸಭೆ. ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾವುಕರಾಗಿದ್ದರು. 'ಗಂಗಾ ಮಾತೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ. ಅವಳಿಗೆ ಮತ್ತೆ ಹಿಂದಿನ ಪಾವಿತ್ರ್ಯ ದೊರಕಿಸಿಕೊಡುವುದು ನನ್ನ ಗುರಿ' ಎಂದು ಭಾವನಾತ್ಮಕವಾಗಿಯೇ ಮಾತನಾಡಿದ್ದರು ಅವರು. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ತಮ್ಮ ಮಾತನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
ಗಂಗಾ ಉಳಿಸಿ ಹೋರಾಟದಲ್ಲಿ ಸಕ್ರಿಯರಾಗಿದ್ದ ಉಮಾಭಾರತಿ ಅವರಿಗೇ ಗಂಗೆಯ ರಕ್ಷಣೆ ಹೊಣೆ ವಹಿಸಿದ್ದಾರೆ. ಅದಕ್ಕಾಗಿ ಸಚಿವಾಲಯದ ಹೆಸರನ್ನೇ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುತ್ಥಾನ ಎಂದು ಬದಲಿಸಿದ್ದಾರೆ. ಉಹ್ಞುಂ, ಇದು ಗಂಗಾ ಉಳಿಸಿ ಆಂದೋಲನದಲ್ಲಿ ಭಾಗವಹಿಸಿದ್ದವರಿಗೆ ಸಂತೋಷ ಮಾತ್ರ ಉಂಟುಮಾಡಿಲ್ಲ. ಬದಲಿಗೆ ಅವರ ಮನಸ್ಸಿನಲ್ಲಿ ಒಂದಷ್ಟು ಅನುಮಾನಗಳನ್ನೂ ಹುಟ್ಟುಹಾಕಿದೆ.
ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಮೊದಲನೆಯದಾಗಿ ನದಿ ಅಭಿವೃದ್ಧಿ ಎನ್ನುವ ನಾಮಕರಣ. ಜಲ ಸಂಪನ್ಮೂಲ ಅಭಿವೃದ್ಧಿ ಎನ್ನುವುದು ಖರೆ. ಆದರೆ ಇದೇನಿದು ನದಿ ಅಭಿವೃದ್ಧಿ? ತಾಂತ್ರಿಕವಾಗಿ ನೋಡುವುದಾದರೆ ಅಣೆಕಟ್ಟೆ, ಜಲಾಶಯ, ಬ್ಯಾರೇಜ್, ಕಾಲುವೆಗಳ ಮೂಲಕ ನದಿ ನೀರನ್ನು ಹೆಚ್ಚಾಗಿ ಬಳಸಿಕೊಳ್ಳುವುದು. ಅಂದರೆ ಇದು ಗಂಗಾ ನದಿಗೂ ಅನ್ವಯ ಆಗುತ್ತದೆಯೆ? ಹೌದು ಅಂತಾದರೆ ಈಗಾಗಲೇ ಯೋಜನೆಗಳ ಭಾರದಿಂದ ಬಳಲಿರುವ ಗಂಗೆಯನ್ನು ಇನ್ನಷ್ಟು ಶೋಷಿಸಿದಂತೆ ಆಗುವುದಿಲ್ಲವೆ? ಅದರಿಂದ ಪರಿಸರ, ಜೀವವೈವಿಧ್ಯದ ಮೇಲೆ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೆ? ಇಂತಹ ಪ್ರಶ್ನೆಗಳನ್ನು ಹೋರಾಟಗಾರರು ಎತ್ತಿದ್ದಾರೆ.
ಗಂಗೆಗೆ ಸಂಬಂಧಿಸಿ ಮೋದಿ ಸಂಪುಟದ ಹಿರಿಯ ಸದಸ್ಯರೊಬ್ಬರು ನೀಡಿರುವ ಹೇಳಿಕೆ. ಸಾರಿಗೆ ಸಚಿವರು ಗಂಗಾನದಿಯನ್ನು ಜಲಮಾರ್ಗಕ್ಕಾಗಿ ಬಳಸಿಕೊಳ್ಳುವ, ಗಂಗೆಯ ತಟದಲ್ಲಿರುವ ಪ್ರಮುಖ ಪಟ್ಟಣಗಳನ್ನು ಬಂದರು ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದು ಗಂಗೆಯ 'ನಿರ್ಮಲ್ ಔರ್ ಅವಿರಳ್‌' (ನಿರ್ಮಲ ಮತ್ತು ತಡೆರಹಿತ) ಹರಿವಿಗೆ ಅಡ್ಡಿ ಉಂಟುಮಾಡದೆ?
ಗಂಗೆಯನ್ನು ಶುದ್ಧೀಕರಿಸುವ ಮಾತನಾಡುತ್ತಲೇ ನೌಕಾಯಾನಕ್ಕೂ ಇದೇ ನದಿ ಬಳಸಿಕೊಳ್ಳುವುದು ಎಂದರೆ ಆಭಾಸದ ಮಾತಲ್ಲವೆ? ಇದಲ್ಲದೆ ಗಂಗೆಯ ಒಡಲಲ್ಲಿ ಹುದುಗಿರುವ ಹೂಳೆತ್ತಿ ಶುದ್ಧೀಕರಿಸುವ, ಗಂಗೆಯ ಹರಿವನ್ನು ಅಗಲಗೊಳಿಸುವ ಪ್ರಸ್ತಾಪವೂ ಇದೆ ಎನ್ನುವ ಸಂಗತಿ. ಎಷ್ಟು ಕಿ.ಮೀ. ಉದ್ದದವರೆಗೆ ಅಗಲಗೊಳಿಸಲು ಅಥವಾ ಎಷ್ಟು ಆಳದವರೆಗೆ ಹೂಳೆತ್ತಲು ಸಾಧ್ಯ? ಹೂಳೆತ್ತುವುದು ಅಂದರೆ ಗಂಗೆಯ ತಳವೂ ಕಲುಷಿತಗೊಂಡಿದೆ ಎಂದರ್ಥವಲ್ಲವೆ? ನದಿಪಾತ್ರವನ್ನು ಅಗಲಗೊಳಿಸುವುದರಿಂದ ಮರಳು ಗಣಿಗಾರಿಕೆಗೆ ಅವಕಾಶ ಕೊಟ್ಟಂತಾಗುವುದಿಲ್ಲವೆ? ಒಂದೆಡೆ  ಸರಾಸರಿ ಅಲ್ಲಲ್ಲಿ ನಿರ್ಮಾಣಗೊಂಡಿರುವ ಅಣೆಕಟ್ಟೆಗಳು, ಮತ್ತೊಂದೆಡೆ ನೌಕಾಯಾನದ ಮಾತು. ಇಂಥ ದ್ವಂದ್ವಗಳೇ ಆತಂಕ ಮೂಡಿಸಿರುವುದು.
ಕೆಲವರು ಗುಜರಾತ್‌ನ ಸಾಬರಮತಿ ಮಾದರಿಯ ಮಾತು ಆಡುತ್ತಿದ್ದಾರೆ. ವಾಸ್ತವಿಕವಾಗಿ ಸಾಬರಮತಿಯ ಪುನರುತ್ಥಾನವಲ್ಲ ಅಲ್ಲಿ ಆಗಿರುವುದು. 10.4 ಕಿ.ಮೀ. ಕಾಲುವೆ ಮೂಲಕ ನರ್ಮದಾ ನದಿಯಿಂದ ಸಾಬರಮತಿಗೆ ನೀರು ಹರಿಸಲಾಗಿದೆ. ಅಂದರೆ ಒಂದು ನದಿಯಿಂದ ಮತ್ತೊಂದು ನದಿಗೆ ನೀರು ಹರಿಸಲಾಗಿದೆ. ಇದಕ್ಕೆ ಪೂರಕವಾಗಿ ನದಿ ಜೋಡಣೆ ಬಗ್ಗೆ ಖುದ್ದು ಪ್ರಧಾನಿಯವರಿಗೆ ಆಸಕ್ತಿ ಇದೆ. 2002ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರೂಪಿಸಿದ್ದ ನದಿ ಜೋಡಣೆ ಯೋಜನೆಯಲ್ಲಿ ಗಂಗೆಯನ್ನು ಸುವರ್ಣ ರೇಖೆ ಮತ್ತು ಮಹಾನದಿಗಳಿಗೆ ಜೋಡಿಸುವುದು, ಬಳಿಕ ದೇವನದಿಯನ್ನು ದಕ್ಷಿಣದ ನದಿಗಳೊಂದಿಗೆ ಜೋಡಣೆ ಮಾಡುವುದು ಸೇರಿದೆ. ಗಂಗಾ ಪುನರುತ್ಥಾನ ಎಂದರೆ ಮೋದಿ ಸರ್ಕಾರ ಇದೇ ಯೋಜನೆಯನ್ನು ಜಾರಿಗೊಳಿಸುತ್ತದೆಯೇನು? ನದಿ ಹರಿವು ಬದಲಿಸುವುದು ಪುನರುತ್ಥಾನವಾಗಲು ಹೇಗೆ ಸಾಧ್ಯ?
ಗಂಗೆಯ ಉಳಿವಿನ ಬಗ್ಗೆ ಪ್ರಧಾನಿ ಮೋದಿಯವರಿಗೆ ಇರುವ ಕಾಳಜಿಯಾಗಲೀ, ಸಚಿವೆ ಉಮಾಭಾರತಿ ಅವರ ಬದ್ಧತೆಯಾಗಲೀ ಪ್ರಶ್ನಾತೀತ. ಹೊಸ ಸರ್ಕಾರದ ಗಂಗಾಪುನರುತ್ಥಾನ ಯೋಜನೆಯ ನೀಲನಕ್ಷೆ ಇನ್ನೂ ಸಿದ್ಧವಾಗಬೇಕಿದೆ ಎನ್ನುವುದೂ ನಿಜ. ಆದರೆ ಅದಕ್ಕೂ ಮೊದಲು ಗಂಗಾ ಉಳಿಸಿ ಆಂದೋಲನದ ಸದಸ್ಯರ ಭಾವನೆಗಳನ್ನೂ ಸರ್ಕಾರ ಅರ್ಥ ಮಾಡಿಕೊಳ್ಳಬೇಕು, ಅವರ ಗೊಂದಲಗಳನ್ನು ಬಗೆಹರಿಸುವ ಪ್ರಯತ್ನವನ್ನೂ ಮಾಡಬೇಕು. ಪ್ರಧಾನಿಯವರ ಹೊಣೆಗಾರಿಕೆ ಇರುವುದೇ ಈ ಹಂತದಲ್ಲಿ. ಆರಂಭದಲ್ಲಿ ಎದ್ದಿರುವ ಅನುಮಾನಗಳನ್ನು ಬಗೆಹರಿಸುವುದು ಮಾತ್ರವೇ ಅಲ್ಲ, ಗಂಗೆಯ ಹರಿವಿನುದ್ದಕ್ಕೂ ತಲೆ ಎತ್ತುತ್ತಿರುವ ಜಲವಿದ್ಯುತ್ ಯೋಜನೆಗಳ ಅನಿವಾರ್ಯತೆ ಕುರಿತಾಗಿಯೂ ಗಮನಹರಿಸಬೇಕು. ಅಣೆಕಟ್ಟೆ, ಬ್ಯಾರೇಜ್‌ಗಳ ನಿರ್ಮಾಣದ ಮೂಲಕ ಗಂಗಾನದಿಗೆ ಎಷ್ಟು ಹಾನಿ ಮಾಡಲು ಸಾಧ್ಯವೋ ಅಷ್ಟು ಮಾಡಿಯಾಗಿದೆ.
ಜೀವವೈವಿಧ್ಯಕ್ಕೆ, ಗಂಗಾ ತಟದ ಪರಿಸರಕ್ಕೆ ಧಕ್ಕೆ ತಂದಾಗಿದೆ. ನದಿಯ ಸಹಜ ಹರಿವಿಗೆ ಧಕ್ಕೆ ತಂದದ್ದಾಗಿದೆ. ಮಾರುಕಟ್ಟೆಯಲ್ಲಿ ವಿದ್ಯುತ್‌ಗೆ ಇರುವ ಬೇಡಿಕೆಯೊಂದೇ ಆಯಾ ರಾಜ್ಯ ಸರ್ಕಾರಗಳ ಗಮನದಲ್ಲಿ ಇರುವುದು. ಇಂಥ ಪ್ರವೃತ್ತಿ ಮುಂದುವರಿದರೆ ನದಿ ಕೊನೆಪಾತ್ರವನ್ನು ಊಹಿಸಿಕೊಳ್ಳುವುದೂ ಕಷ್ಟ. ಸರಿಯಾಗಿ ವರ್ಷದ ಹಿಂದೆ ಉತ್ತರಾಖಂಡದಲ್ಲಿ ಸಂಭವಿಸಿದ ದುರಂತವನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಖುದ್ದು ಗಂಗೆಯೇ ಅಲ್ಲದೆ ಅವಳ ಮೂಲ ಸ್ರೋತಗಳಾದ ಅಲಕನಂದಾ ಮತ್ತು ಭಾಗೀರಥಿ ಸಹ ತಾಳ್ಮೆ ಕಳೆದುಕೊಂಡು ರೌದ್ರಾವತಾರ ತಾಳಿದವು. ಅವರ ಆಕ್ರೋಶಕ್ಕೆ ಅಣೆಕಟ್ಟೆಗಳೂ ಒಡೆದವು. ಇವೆಲ್ಲಕ್ಕೆ ಕಾರಣ ಏನು ಹೇಳಿ ಅಭಿವೃದ್ಧಿ ಹೆಸರಿನಲ್ಲಿ ನಡೆಸಿದ ಅತ್ಯಾಚಾರ, ಬಂಡವಾಳಶಾಹಿಗಳ ಕಪಿಮುಷ್ಟಿಗೆ ಸಿಲುಕಿ ಎಗ್ಗುಸಿಗ್ಗಿಲ್ಲದೆ ರೂಪಿಸಿದ ಯೋಜನೆಗಳಲ್ಲವೆ? ಅಷ್ಟಾದರೂ ಉತ್ತರಾಖಂಡ ಸರ್ಕಾರ ಪಾಠ ಕಲಿತಿಲ್ಲ. ಅದು ಬಿಡಿ, ಮೊನ್ನೆ ಮೇ ತಿಂಗಳಲ್ಲಿ ಖುದ್ದು ಸುಪ್ರೀಂ ಕೋರ್ಟ್ ತಪರಾಕಿ ಬಾರಿಸಿದೆ. ಅನುಷ್ಠಾನ ಹಂತದಲ್ಲಿದ್ದ 24 ಜಲವಿದ್ಯುತ್ ಯೋಜನೆಗಳಿಗೆ ತಡೆ ನೀಡಿದೆ. 'ಅಣೆಕಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಜೀವವೈವಿಧ್ಯ ಹೊಂದಿರುವ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿದೆ. ಇದಲ್ಲದೆ ಅಣೆಕಟ್ಟೆಗಳ ನಡುವಿನ ನದಿ ಪ್ರದೇಶದಲ್ಲಿ ಹೂಳು ತುಂಬಿಕೊಳ್ಳುವ ಅಪಾಯವೂ ಇದೆ. ಜೋರಾಗಿ ಮಳೆಯಾದಾಗ ಹೂಳು ತುಂಬಿಕೊಳ್ಳುವ ಪ್ರಕ್ರಿಯೆ ಇನ್ನಷ್ಟು ಬಿರುಸಾಗಬಹುದು. ಸಾಲದೆಂಬಂತೆ ಹಿಮಪಾತದ ಸಂಭವವೂ ಇದೆ. ಕಳೆದ ವರ್ಷ ನಡೆದ ಪ್ರವಾಹಕ್ಕೂ ಇಂಥ ಅಣೆಕಟ್ಟೆಗಳೆ ಕಾರಣ' ಎನ್ನುವುದಾಗಿ ತಜ್ಞರ ಸಮಿತಿ ನೀಡಿದ್ದ ವರದಿಯನ್ನು ಸುಪ್ರೀಂ ಕೋರ್ಟ್ ಮನ್ನಿಸಿ ತಡೆ ನೀಡಿದೆ.
ಅಚ್ಚರಿ ಅನ್ನಿಸಬಹುದು. ಗಂಗೆಯ ಹರಿವಿಗೆ ತಡೆಯೊಡ್ಡಿ, ವಿದ್ಯುತ್ ಉತ್ಪಾದಿಸುವ ಎಷ್ಟು ಯೋಜನೆಗಳು ಸಿದ್ಧವಾಗಿವೆ ಗೊತ್ತೆ? ನೀವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. 450 ಅಣೆಕಟ್ಟೆಗಳನ್ನು ನಿರ್ಮಿಸುವ ಪ್ರಸ್ತಾಪ ಉತ್ತರಾಖಂಡ ಸರ್ಕಾರದ ಮುಂದಿದೆ. ಇವೆಲ್ಲ ಅನುಷ್ಠಾನಕ್ಕೆ ಬಂದಿದ್ದೇ ಆದಲ್ಲಿ ರಾಜ್ಯದ ಭೌಗೋಳಿಕ ಚಿತ್ರಣವೇ ಬದಲಾಗಿಬಿಡಬಹುದು ಎನ್ನುವ ಆತಂಕವನ್ನು ಪರಿಸರವಾದಿಗಳು ಮಾತ್ರವಲ್ಲ, ತಜ್ಞರೂ ವ್ಯಕ್ತಪಡಿಸಿದ್ದಾರೆ.
ಗಂಗೆಯ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಮೋದಿ ಸರ್ಕಾರ ಇಂಥ ಎಲ್ಲ ವಿಚಾರಗಳನ್ನೂ ಗಮನಕ್ಕೆ ತಂದುಕೊಳ್ಳಬೇಕು. ಪ್ರಧಾನಿಯವರನ್ನು ಏಮಾರಿಸುವುದು ಅಧಿಕಾರಶಾಹಿಗೆ, ಬಂಡವಾಳಶಾಹಿಗಳಿಗೆ ಕಷ್ಟ. ಈ ಹಿನ್ನೆಲೆಯಲ್ಲಿಯೇ ಗಂಗೆಯನ್ನು ಮೋದಿ ಉಳಿಸುವುದರ ಜತೆಗೆ ಹಿಂದಿನ ವೈಭವ ತಂದುಕೊಡುತ್ತಾರೆ ಎಂದು ನಾವು ಆಶಾಭಾವ ಇಟ್ಟುಕೊಳ್ಳಬಹುದು.


- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com