ಈ ಪಾರ್ಲಿಮೆಂಟ್ ಭಾಷೆಗಳ ಸ್ವರ್ಗ

ಮೂರು ವರ್ಷಗಳ ಹಿಂದೆ, ಅಂದಿನ ಪ್ರಧಾನಿ ಡಾ. ಮನಮೋಹನಸಿಂಗ್ ಜತೆಗೆ ಫ್ರಾನ್ಸ್‌ಗೆ...
ಈ ಪಾರ್ಲಿಮೆಂಟ್ ಭಾಷೆಗಳ ಸ್ವರ್ಗ

ಮೂರು ವರ್ಷಗಳ ಹಿಂದೆ, ಅಂದಿನ ಪ್ರಧಾನಿ ಡಾ. ಮನಮೋಹನಸಿಂಗ್ ಜತೆಗೆ ಫ್ರಾನ್ಸ್‌ಗೆ ಹೋದಾಗ, ಯುರೋಪಿಯನ್ ಪಾರ್ಲಿಮೆಂಟ್ ಇರುವ ಸ್ಟ್ರಾಸ್‌ಬರ್ಗ್‌ಗೆ ಭೇಟಿ ನೀಡಿದ್ದೆ. ಫ್ರಾನ್ಸ್ ಉತ್ತರಕ್ಕಿರುವ ಸ್ಟ್ರಾಸ್‌ಬರ್ಗ್ ಅಲ್ಸೇಸ್ ಪ್ರಾಂತದ ರಾಜಧಾನಿ. ಇಲ್ಲಿಂದ ಅರ್ಧ ಗಂಟೆ ಕಾರಿನಲ್ಲಿ ಪಯಣಿಸಿದರೆ ಜರ್ಮನಿ ಗಡಿಯೊಳಗಿರುತ್ತೇವೆ. ಪ್ರತಿ ವರ್ಷ ಇಲ್ಲಿ ತಿಂಗಳುಗಟ್ಟಲೆ ಯುರೋಪಿಯನ್ ಯೂನಿಯನ್‌ನ ಎಲ್ಲ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಭೆ ಸೇರುತ್ತಾರೆ. ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಸುಮಾರು 750 ಸದಸ್ಯರಿದ್ದಾರೆ. ಈ ಪಾರ್ಲಿಮೆಂಟ್ ಹೊರಗಿನಿಂದ ಭವ್ಯವಾಗಿದ್ದರೆ, ಒಳಾಂಗಣ ಸುಂದರವಾಗಿದೆ.
ಈ ಪಾರ್ಲಿಮೆಂಟ್‌ನಲ್ಲಿ ಕಾಲಿಟ್ಟಾಗ ಅಚ್ಚರಿಯಾದದ್ದೇನೆಂದರೆ, ಅಲ್ಲಿ ಸಂಸದರಿಗೆ ಮೀಸಲಿಟ್ಟ ಜಾಗಕ್ಕಿಂತ ದುಭಾಷಿಗಳಿಗೆ (Interpreters)ಹೆಚ್ಚು ಜಾಗ, ಆಸನಗಳನ್ನು ಬಿಟ್ಟಿದ್ದರು. ಆ ಪಾರ್ಲಿಮೆಂಟ್ ಭವನದಲ್ಲಿ ಸುಮಾರು 1200 ದುಭಾಷಿಗಳಿದ್ದರು. ಅಲ್ಲಿ ಬಲ್ಗೇರಿಯನ್, ಜೆಕ್, ಡ್ಯಾನಿಷ್, ಡಚ್, ಇಂಗ್ಲಿಷ್, ಎಸ್ತೋನಿಯನ್, ಫಿನ್ನಿಶ್, ಫ್ರೆಂಚ್, ಜರ್ಮನ್, ಗ್ರೀಕ್, ಹಂಗೇರಿಯನ್, ಐರಿಷ್, ಇಟಾಲಿಯನ್, ಲ್ಯಾಟ್ವಿಯನ್, ಲಿಥುವೇನಿಯನ್, ಪೋಲಿಷ್, ಪೋರ್ಚುಗೀಸ್, ರೊಮೇನಿಯನ್, ಸ್ಲೋವಾಕ್, ಸ್ಲೋವಿನ್, ಸ್ಪಾನಿಶ್, ಸ್ವೀಡಿಶ್, ಮಾಲ್ಟೀಸ್ ಸೇರಿದಂತೆ ಇಪ್ಪತ್ತೆಂಟು ಭಾಷೆಗಳನ್ನು ಮಾತಾಡುವ ಸದಸ್ಯರಿದ್ದರು. ಇವೆರಲ್ಲರ ಭಾಷೆಯನ್ನು ಮೊದಲು ಇಂಗ್ಲಿಷ್‌ಗೆ ಮಾತ್ರ ತರ್ಜುಮೆ ಮಾಡಲಾಗುತ್ತಿತ್ತು. ಆಗ ಕೆಲ ಸದಸ್ಯರು 'ಇಂಗ್ಲಿಷ್ ನಮ್ಮ ಭಾಷೆಯಂತೆ ಒಂದು ಭಾಷೆ. ಸಾಮಾನ್ಯ ಭಾಷೆ (common language)ಯಾಗಿ ನಮ್ಮ ಭಾಷೆಯೇ ಇರಲಿ' ಎಂದು ಪಟ್ಟು ಹಿಡಿದಾಗ ಗೊಂದಲ ತಲೆದೋರಿತು. ಈ ರಗಳೆಯೇ ಬೇಡವೆಂದು ಸಾಮಾನ್ಯ ಭಾಷೆಯನ್ನು ಕೈ ಬಿಡಲಾಯಿತು.
ಹೀಗಾಗಿ ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಸ್ಪೇನ್ ಸದಸ್ಯ ಪೋರ್ಚುಗೀಸ್ ಸದಸ್ಯನೊಂದಿಗೆ ತಮ್ಮ ತಮ್ಮ ಭಾಷೆಯಲ್ಲೇ ಮಾತಾಡಿಕೊಳ್ಳುತ್ತಾರೆ. ಅದೇ ಸ್ಪೇನ್ ಸದಸ್ಯ ಯಾವುದೇ ದೇಶದವರೊಂದಿಗೆ ಮಾತಾಡಿದರೂ ತಮ್ಮ ತಮ್ಮ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಹೀಗಾಗಿ ಅಲ್ಲಿ 1200 ದುಭಾಷಿಗಳಿದ್ದಾರೆ. ಎರಡು ದೇಶಗಳ ಮುಖ್ಯಸ್ಥರು ಭೇಟಿಯಾದಾಗ, ದುಭಾಷಿಗಳಿಲ್ಲದಿದ್ದರೆ ಕಿವುಡರು-ಮೂಕರಂತೆ ಕೈ ಸನ್ನೆ ಭಾಷೆಯಲ್ಲಿ ಮಾತಾಡಿಕೊಳ್ಳಬೇಕಾದ ಇಕ್ಕಟ್ಟು ಉದ್ಭವಿಸುತ್ತದೆ. ದುಭಾಷಿಗಳಿಲ್ಲದಿದ್ದರೆ ಎಲ್ಲರ ಬಾಯಿಯೂ ಬಂದ್!
ಯುರೋಪಿಯನ್ ಪಾರ್ಲಿಮೆಂಟ್‌ನ್ನು ಎಲ್ಲ ಅರ್ಥಗಳಲ್ಲೂ ನಿಯಂತ್ರಿಸುವವರೆಂದರೆ ದುಭಾಷಿಗಳೇ. ಪ್ರತಿ ವರ್ಷ ಸರಾಸರಿ ಲಕ್ಷಕ್ಕೂ ಅಧಿಕ ಸಲ ದುಭಾಷಿಗಳೇ ಪರಸ್ಪರ ಸಂವಾದಿಸುತ್ತಾರೆ. ಈ ಪಾರ್ಲಿಮೆಂಟ್‌ನಲ್ಲಿ 506 ಬೇರೆ ಬೇರೆ ಭಾಷಾ Combinationಗಳ ದುಭಾಷಿಗಳಿದ್ದಾರೆ. ಎರಡು ದುಭಾಷಿಗಳು ಮನಸ್ಸು ಮಾಡಿದರೆ, ಪರಸ್ಪರ ದೇಶಗಳ ಸಂಬಂಧವನ್ನು ಪೂರ್ತಿ ಹಾಳುಗೆಡವಿಬಿಡಬಹುದು. ಹೀಗಾಗಿ ಇಲ್ಲಿ ಸದಸ್ಯರ ಮಾತಿಗಿಂತ ದುಭಾಷಿಗಳ ಮಾತಿಗೇ ಹೆಚ್ಚು ಬೆಲೆ! ದುಭಾಷಿಗಳ ಮಾತುಗಳೇ ಕಡತದಲ್ಲಿ ದಾಖಲಾಗುತ್ತವೆ. ಕಾರಣ ಬಹುತೇಕ ಸಂದರ್ಭಗಳಲ್ಲಿ ಸದಸ್ಯರು ತಪ್ಪು ನುಡಿದಾಗ ದುಭಾಷಿಗಳು ಸರಿಪಡಿಸುತ್ತಾರೆ. ಇಷ್ಟೆಲ್ಲ ಭಾಷಾ ದುಭಾಷಿಗಳ ಜತೆಗೆ ಅರೆಬಿಕ್, ಟರ್ಕಿಶ್, ರಷ್ಯನ್, ಜರ್ಮನ್, ಚೈನೀಸ್, ಫಾರ್ಸಿ, ಹಿಂದಿ ಸೇವೆಯನ್ನೂ ಆರಂಭಿಸಲಾಗಿದೆ.
ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಕುಳಿತರೆ, ಸ್ವಲ್ಪವೂ ಅಬ್ಬರ, ಹಾರಾಟವಿಲ್ಲದೇ ತನ್ನ ಪಾಡಿಗೆ ತಾನು ಮೈ ಮುದುಡಿ ತೆಪ್ಪಗೆ ಕುಳಿತಿರುವ ಇಂಗ್ಲಿಷನ್ನು ನೋಡಬಹುದು. ಈ ಪಾರ್ಲಿಮೆಂಟ್ ಸದಸ್ಯರೊಬ್ಬರಿಗೆ ಭೋಜಪುರಿ ಭಾಷೆ ಮಾತ್ರ ಗೊತ್ತು ಎಂದು ಭಾವಿಸಿ. ಆತ ಆ ಭಾಷೆಯಲ್ಲಿ ಮಾತಾಡಬಹುದು. ಆತನ ಮಾತನ್ನು ಏಕಕಾಲಕ್ಕೆ ಉಳಿದ ಇಪ್ಪತ್ತೆಂಟೋ ಮೂವತ್ತಾರೋ ಭಾಷೆಗಳಲ್ಲಿ ದುಭಾಷಿಗಳು ತರ್ಜುಮೆ ಮಾಡುತ್ತಿರುತ್ತಾರೆ. ಏಳೆಂಟು ದೇಶಗಳ ಸದಸ್ಯರ ನಡುವೆ ಜಗಳ, ವಾಗ್ವಾದ ಆದಾಗ ನಿಜಕ್ಕೂ ಕಾವೇರಿದ ಅಥವಾ ಕೋಲಾಹಲದ ವಾತಾವರಣ ಉಂಟಾಗುತ್ತದೆ. ಹಿಂದಿನ ವರ್ಷ ಯುರೋಪಿಯನ್ ಪಾರ್ಲಿಮೆಂಟ್‌ನಲ್ಲಿ ಸದಸ್ಯರು ಜಗಳ ಮಾಡಿಕೊಂಡಾಗ, ದುಭಾಷಿಗಳು ಹೊಡೆದಾಡಿಕೊಂಡ ಘಟನೆಯನ್ನು ಸ್ಮರಿಸಬಹುದು.
ಒಟ್ಟಿನಲ್ಲಿ ಹೇಳಬೇಕಾದ ಮಾತುಗಳನ್ನು ಯಾವ ಭಾಷೆಯಲ್ಲಿ ಹೇಳಿದರೂ ತಲುಪಬೇಕಾದವರಿಗೆ ತಲುಪುತ್ತದೆ.
ಯುರೋಪಿಯನ್ ಪಾರ್ಲಿಮೆಂಟ್‌ನಿಂದ ಹೊರಬರುವಾಗ ಖ್ಯಾತ ಲೇಖಕ ಉಂಬೆರ್ಟೋ ಇಕೋ ಹೇಳಿದ The language of Europe is Translation ಎಂಬ ಮಾತು ಅಕ್ಷರಶಃ ನಿಜ ಎನ್ನಿಸಿತು.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದುಭಾಷಿಗಳಿಗೆ ಶುಕ್ರದೆಸೆ. ಮೋದಿಯವರು ವಿದೇಶ ಪ್ರವಾಸ ಹೊರಟಾಗ ತಮ್ಮ ಜತೆ ಪತ್ರಕರ್ತರನ್ನು ಕರೆದುಕೊಂಡು ಹೋಗುತ್ತಿಲ್ಲ. ದುಭಾಷಿಗಳನ್ನು ಮಾತ್ರ ಅವರು ಬಿಟ್ಟು ಹೋಗುವುದಿಲ್ಲ.
ನಮ್ಮ ಪಾರ್ಲಿಮೆಂಟ್‌ನಲ್ಲೂ ದುಭಾಷಿಗಳ ಸಹಾಯ ಪಡೆದು ಮಾತಾಡುವ ವ್ಯವಸ್ಥೆಯಿದೆ. ಆದರೆ ಅವರ ಸಹಾಯ ಪಡೆಯುವ ಸದಸ್ಯರಲ್ಲಿ ಕೀಳರಿಮೆ ಕಾಡುತ್ತದೆ. ಹಾಗಂತ ಇವರಿಗೆ ಇಂಗ್ಲಿಷ್‌ನಲ್ಲಾಗಲಿ ಹಿಂದಿಯಲ್ಲಾಗಲಿ ನಿರರ್ಗಳವಾಗಿ ಮಾತಾಡಲು ಬರೊಲ್ಲ. ಈ ಸದಸ್ಯರು ಸದನದಲ್ಲಿ ಸುಮ್ಮನಿರಲು ಬಯಸುತ್ತಾರೆಯೇ ಹೊರತು, ದುಭಾಷಿಗಳ ಮೂಲಕ ಮಾತಾಡುವುದಿಲ್ಲ.
ಆಶು ಭಾಷಣ
ಒಮ್ಮೆ ಖ್ಯಾತ ಸಾಹಿತಿ ಮಾರ್ಕ್ ಟ್ವೈನ್ ಭಾಷಣ ಕೇಳಿದ ಮಹಿಳೆಯೊಬ್ಬಳು, 'ನಿಜಕ್ಕೂ ನಿಮ್ಮ ಮಾತುಗಳನ್ನು ಕೇಳಿ ಬಹಳ ಸಂತಸವಾಯಿತು. ನೀವು ಯಾವುದೇ ವಿಷಯವನ್ನು ಕೊಟ್ಟರೂ ಅದ್ಭುತ ಆಶುಭಾಷಣ (impromptu) ಮಾಡುತ್ತೀರಿ. ಈ ಕಲೆ ನಿಮಗೆ ಸಿದ್ಧಿಸಿದ್ದಾದರೂ ಹೇಗೆ?' ಎಂದು ಕೇಳಿದಳು.
ಅದಕ್ಕೆ ಟ್ವೈನ್ ಹೇಳಿದ್ದು-'ಹಾಗೇನಿಲ್ಲ. It usually takes me more than three weeks to prepare a good impromptu speech.'
ಅದು ಯಾವ ಕ್ಷಣದಲ್ಲಾದರೂ ಬರಬಹುದು!
ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಭಾನಾಮತಿ ಹಾಗೂ ಹಸುಳೆ ಮಕ್ಕಳ ಸಾವಿನ ಪ್ರಕರಣ ಪದೇಪದೆ ಸಂಭವಿಸಿದಾಗ ಅಂದಿನ ಮುಖ್ಯಮಂತ್ರಿ ಗುಂಡೂರಾಯರು 'ಇನ್ನು ಮುಂದೆ ಇಂಥ ಪ್ರಕರಣಗಳು ಘಟಿಸುವುದಿಲ್ಲ. ನಮ್ಮ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಯಾರೂ ಚಿಂತಿತರಾಗಬೇಕಿಲ್ಲ' ಎಂದು ರಾಜ್ಯದ ಜನತೆಗೆ ಭರವಸೆ ನೀಡಿದ ಮರುದಿನವೇ ಪುನಃ ಈ ಘಟನೆಗಳು ಸಂಭವಿಸಿದವು. ಪುನಃ ಮುಖ್ಯಮಂತ್ರಿಗಳು ತಮ್ಮ ಮಾತನ್ನು ಪುನರುಚ್ಚರಿಸಿದರು. ಪುನಃ ಮರುದಿನ ಮೂರು ಹಸುಳೆಗಳು ಸತ್ತವು, ಭಾನಾಮತಿ ಪ್ರಕರಣ ಬೇರೆ ಊರಿಗೂ ವ್ಯಾಪಿಸಿತು. ಆ ಸಂದರ್ಭದಲ್ಲಿ ಅಂದಿನ ಜನಸಂಘದ ನಾಯಕ ಜಗನ್ನಾಥರಾವ್ ಜೋಶಿ ಹೇಳಿದ ಒಂದು ಪ್ರಸಂಗ.
ಒಮ್ಮೆ ರಾಜಕಾರಣಿಯೊಬ್ಬ ಭಾಷಣ ಬಿಗಿಯುತ್ತಿದ್ದ. 'ಮಹಾಜನರೇ, ನೀವು ಇನ್ನೂ ಸ್ವಲ್ಪ ತಾಳ್ಮೆ ವಹಿಸಬೇಕು. ನೀವು ಎದುರು ನೋಡುತ್ತಿರುವ ಸೋಶಿಯಲಿಸಂ (ಸಮಾಜವಾದ) ಇನ್ನೇನು ಬರಲಿದೆ' ಎಂದು ಹೇಳುತ್ತಿದ್ದ. ಈ ಮಾತಿಗೆ ಸಭಿಕನೊಬ್ಬ ಎದ್ದು ನಿಂತು, 'ಸ್ವಾಮಿ, ಸೋಶಿಯಲಿಸಂ ಬರುತ್ತಿದೆ ಬರುತ್ತಿದೆ ಎಂದು ಕಳೆದ ಮೂವತ್ತು ವರ್ಷಗಳಿಂದ ಹೇಳುತ್ತಾ ಬಂದಿದ್ದೀರಿ. ಆದರೆ ಅದು ಇನ್ನೂ ಬಂದಿಲ್ಲ' ಎಂದ.
ಆ ರಾಜಕಾರಣಿ ಆ ಸಭಿಕನನ್ನುದ್ದೇಶಿಸಿ, 'ನನ್ನ ಮಾತನ್ನು ನಂಬಿ, ಸೋಶಿಯಲಿಸಂ ಬರುವುದು ಬಹಳ ದೂರವಿಲ್ಲ. ಅದು ಯಾವ ಕ್ಷಣದಲ್ಲಾದರೂ ಬರಬಹುದು. ನೀವು ತುಸು ತಾಳ್ಮೆ ವಹಿಸಬೇಕು. ಇದೊಂದು ಚುನಾವಣೆ ಕಳೆದು ಹೋಗಲಿ. ಆನಂತರ ಸೋಶಿಯಲಿಸಂ ಬಂದೇ ಬರುತ್ತದೆ' ಎಂದು ಹೇಳಿದ.
ಆ ಸಭೆಯಲ್ಲಿದ್ದ ಏಳೆಂಟು ಮಂದಿ ಎದ್ದು ನಿಂತು, 'ಸೋಶಿಯಲಿಸಂ ಎಂಬುದು ಎಂದೆಂದೂ ಬರುವುದಿಲ್ಲ. ಹಾಗಂತ ನಿಮ್ಮ ಸೆಕ್ರೆಟರಿ ಸಹ ನಿನ್ನೆ ಕ್ಲಬ್‌ನಲ್ಲಿ ಸಿಕ್ಕಿದಾಗ ಹೇಳುತ್ತಿದ್ದ.' ಎಂದು ಗಟ್ಟಿ ಧ್ವನಿಯಲ್ಲಿ ಕೂಗಿದರು.
ಆಗ ರಾಜಕಾರಣಿ ತುಸು ವಿಚಲಿತನಾದರೂ, ಅದನ್ನು ತೋರಗೋಡದೇ, 'ನನ್ನ ಸೆಕ್ರೆಟರಿ ಹಾಗೆ ಹೇಳಲು ಹೇಗೆ ಸಾಧ್ಯ? ಆತ ನನ್ನ ಭಾಷಣವನ್ನು ಬರೆದಿಲ್ಲ. ನಾನು ಇನ್ನೊಂದು ಸಲ ಹೇಳುತ್ತಿದ್ದೇನೆ, ಸೋಶಿಯಲಿಸಂ ನಮ್ಮ ಸನಿಹದಲ್ಲಿದೆ' ಎಂದ. ಆದರೆ ಸಭಿಕರು ಅವನ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. 'ಸೋಶಿಯಲಿಸಂ ಎಂಬುದು ಎಂದೆಂದೂ ಬರೊಲ್ಲ. ಈ ನಾನ್ಸ್‌ನ್ಸೆನ್ನು ನಿಲ್ಲಿಸಿ. ನಿಮ್ಮ ಬೊಗಳೆ ಸಾಕು ಮಾಡಿ.' ಎಂದು ಕೂಗಿದರು. ಯಾಕೋ ಪರಿಸ್ಥಿತಿ ಕೈಮೀರಿ ಹೋಗುತ್ತಿದೆಯೆಂಬುದನ್ನು ಅರ್ಥಮಾಡಿಕೊಂಡ ರಾಜಕಾರಣಿ, 'ಹಾಗಂತೀರಾ? ಸೋಶಿಯಲಿಸಂ ಬರೊಲ್ಲ ಅಂತೀರಾ? ನೀವು ಹೇಳೋದನ್ನು ಕೇಳಿದರೆ ಬರೋಲ್ಲವೇನೋ ಎಂದು ಅನಿಸುತ್ತಿದೆ. ನಾನಾದರೂ ಏಕೆ ನಿಮ್ಮ ಮನಸ್ಸನ್ನು ನೋಯಿಸಲಿ? ಸೋಶಿಯಲಿಸಂ ಬರುವುದಿಲ್ಲ ಬಿಡಿ' ಎಂದು ತನ್ನ ಭಾಷಣ ನಿಲ್ಲಿಸಿ ಮೆಲ್ಲಗೆ ವೇದಿಕೆಯಿಂದ ಇಳಿದು, ಕಾರು ಹತ್ತಿ ಹೋಗಿಬಿಟ್ಟ. ಆ ಊರಿಗೆ ಮತ್ತೊಮ್ಮೆ ಆತ ಬರಲಿಲ್ಲ, ಸೋಶಿಯಲಿಸಂ ಸಹ ಬರಲಿಲ್ಲ.
ಒಂದೆಡೆ ಅತ್ಯಾಚಾರ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ, ರಾಜ್ಯದಲ್ಲಿ ಅತ್ಯಾಚಾರ ಘಟಿಸದಂತೆ ಎಲ್ಲ ಕ್ರಮಕೈಗೊಳ್ಳುತ್ತೇನೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದನ್ನು ಕೇಳಿದಾಗ ಈ ಪ್ರಸಂಗ ನೆನಪಾಯಿತು.
ಹೊಸ ಪದಗಳು
ಗುರುವಾರದ 'ನೂರೆಂಟು ನೋಟ' ಅಂಕಣದಲ್ಲಿ 'ನಮಗೆ ತುರ್ತಾಗಿ ಕೆಲ ಹೊಸ ಪದಗಳು ಬೇಕಾಗಿವೆ, ಹುಡುಕಿ ಕೊಡಿ' ಎಂಬುದಕ್ಕೆ ಪ್ರತಿಕ್ರಿಯೆಯಾಗಿ ಪತ್ರಿಕೆಯ ಓದುಗ ಎಚ್. ಆನಂದರಾಮ ಶಾಸ್ತ್ರಿ ಕೆಲವು ಇಂಗ್ಲಿಷ್ ಪದಗಳಿಗೆ ಕನ್ನಡ ಪದಗಳನ್ನು ಟಂಕಿಸಿದ್ದಾರೆ. ಯಾವ ನಿಘಂಟು ತಜ್ಞರನ್ನು ಸಹ ಕೇಳದೇ ಇವುಗಳನ್ನು ಬಳಸುವಷ್ಟು ಚೆನ್ನಾಗಿರುವ ಕೆಲವನ್ನು ಇಲ್ಲಿ ಕೊಡುತ್ತಿದ್ದೇನೆ.
ಟೀ ಶರ್ಟ್- ತುಂಡಂಗಿ, ಮೋಟಂಗಿ, ಬೆರ್ಚಪ್ಪಂಗಿ, ಶಿಲುಬೆ ಅಂಗಿ.
ಬಲ್ಬ್- ಬುರುಡೆ ದೀಪ, ಗೆಡ್ಡೆದೀಪ, ಉಂಡೆ ದೀಪ.
ಫೋಟೋಜೆನಿಕ್- ಛಾಯಾಸುಂದರ, ಬಿಂಬಸುರೂಪಿ, ಛಾಯಾಯೋಗ್ಯ.
ನೂಡಲ್ಸ್- ಕಣಕಬಳೆ, ನಾದೆಳೆ, ಹಿಟ್ಟೆಳೆ.
ಪಾಸ್‌ಪೋರ್ಟ್- ದೇಶಾಂತರ ಪತ್ರ, ದೇಶಾಂತರಾನುಮತಿ ಪತ್ರ, ವಿದೇಶಯಾನ (ಪರಿಚಯ) ಪತ್ರ.
ಕೊರಿಯರ್- ಥಟ್ಟಂಚೆ, ತ್ವರೆಯಂಚೆ.
ಶೂ-ಮುಸುಗುಮೆಟ್ಟು, ಮುಸುಗೆರ, ಮುಸುಕುಜೋಡು.
ರಿಯಲ್ ಎಸ್ಟೇಟ್- ಸ್ಥಿರಸೊತ್ತು, ಸ್ಥಾವರಾಸ್ತಿ.
ರ್ಯಾಗಿಂಗ್- ಗೋಳುಹುಯಿಲು, ಪೀಡಿಸಾಟ, ಕೀಟಲೆಬಾಜಿ.
ಎಸ್ಕಲೇಟರ್- ಏರಿಳಿಮೆಟ್ಟಿಲು, ಚಲಿಸು ಮೆಟ್ಟಿಲು.
ಮಿಸ್ಡ್ ಕಾಲ್- ಬರಿಕರೆ, ಒಣಕರೆ.
ಚಾರ್ಜರ್- ವಿದ್ಯುದೊದಗಣೆ, ಬಾರುಗ.
ಆತ ಶೂಟ್ ಮಾಡುತ್ತಿದ್ದ
ಲಂಡನ್‌ನ 'ದಿ ಗಾರ್ಡಿಯನ್‌' ಪತ್ರಿಕೆಯಲ್ಲಿ ಇಂಗ್ಲಿಷ್ ಭಾಷೆಯ ಬಗ್ಗೆ ಬರೆಯುವ ಇವಾನ್ ಕಟ್‌ಹ್ಯಾಮ್, ಸಣ್ಣ ಪದಗಳ ಮಹತ್ವ ಹಾಗೂ ಬಳಕೆಯ ಕುರಿತು ಪ್ರಸ್ತಾಪಿಸುತ್ತಾರೆ. ಅವರು ತಮ್ಮ ಕಂಪ್ಯೂಟರ್‌ನಲ್ಲಿ ಒಂದು ಸಾಫ್ಟ್‌ವೇರ್‌ನ್ನು ಅಳವಡಿಸಿಕೊಂಡಿದ್ದಾರಂತೆ. ಒಂದು ವಾಕ್ಯದಲ್ಲಿ ಹದಿನಾರಕ್ಕಿಂತ ಹೆಚ್ಚು ಪದಗಳಿದ್ದರೆ, ಕಂಪ್ಯೂಟರ್ ಆ ವಾಕ್ಯವನ್ನು ಸ್ವೀಕರಿಸುವುದಿಲ್ಲ. ಹದಿನಾರು ಪದಗಳನ್ನು ಮೀರದ ವಾಕ್ಯವನ್ನೇ ರಚಿಸಬೇಕು. ಅಲ್ಲದೇ ಒಂದು ಪದದಲ್ಲಿ ಹನ್ನೊಂದಕ್ಕಿಂತ ಹೆಚ್ಚು ಅಕ್ಷರಗಳಿದ್ದರೆ ಅದನ್ನು ಅವರ ಕಂಪ್ಯೂಟರ್ ಮಾನ್ಯ ಮಾಡುವುದಿಲ್ಲ. ಉದಾಹರಣೆಗೆ, metropolitan(ಹನ್ನೆರಡು ಅಕ್ಷರಗಳು) ಎಂದು ಟೈಪ್ ಮಾಡಿದರೆ, ಅದು ಆ ಪದವನ್ನು ಸ್ವೀಕರಿಸುವುದಿಲ್ಲ. ಅದರ ಬದಲು City ಎಂಬ ಪದವನ್ನು ಬಳಸಬಹುದಲ್ಲ ಎಂದು ಸೂಚಿಸುತ್ತದೆ. ದೊಡ್ಡ ಪದಗಳ ಬದಲು ಸಣ್ಣಪದ, ಉದ್ದ ವಾಕ್ಯದ ಬದಲು ಚಿಕ್ಕ ವಾಕ್ಯಗಳನ್ನು ಉಪಯೋಗಿಸಬೇಕೆಂಬುದು ಅವರ ಹಠ. ಇದನ್ನು ಅವರು ತಮ್ಮ ಬರಹಗಳ ಮೂಲಕ ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.
ಖ್ಯಾತ ಭಾಷಾ ತಜ್ಞ, ಇಂಗ್ಲಿಷ್ ಪ್ರೇಮಿ ರಿಚರ್ಡ್ ಲೆಡರರ್ ಮಾಡಿದ್ದೂ ಇದೇ. 'ದೊಡ್ಡವರಂತೆ ಯೋಚಿಸಬೇಕು, ಚಿಕ್ಕವರಂತೆ ಬರೆಯಬೇಕು' ಎಂಬುದು ಅವನ ಆಶಯ. ಒಮ್ಮೆ ಲೆಡರರ್ ಹೈಸ್ಕೂಲು ವಿದ್ಯಾರ್ಥಿಗಳಿಗೆ ಅವರಿಗೆ ತೋಚಿದ್ದನ್ನು ಬರೆಯುವಂತೆ ಹೇಳಿದರಂತೆ. ಒಬ್ಬ ವಿದ್ಯಾರ್ಥಿ ಬರೆದ ಕೆಲವು ಸಾಲುಗಳಿವು. ಆತ ಪ್ರತಿ ವಾಕ್ಯದಲ್ಲೂ ತನಗರಿವಿಲ್ಲದಂತೆ ಒಂದು Syllable ಪದವನ್ನೇ ಬಳಸಿದ್ದ-'What can you say to a boy who has left home? You can say that he has done wrong, but he does not care. He wants to go as far as he can. He will do what he wants to do...'
ಕನ್ನಡದ ವಿಮರ್ಶಕರಿಗೆ ಇಂಥದ್ದೊಂದು ಸಾಫ್ಟ್‌ವೇರ್ ಮಾಡಿಕೊಡಬೇಕು.
ಕೆಲವು ವಿಮರ್ಶಕರ ವಾಕ್ಯ ರಚನೆಯನ್ನು ಗಮನಿಸಿದರೆ, ಲೇಖಕನ ಮೇಲಿನ ಸಿಟ್ಟಿನಿಂದಲೋ, ಓದುಗರ ಮೇಲಿನ ಅಸಡ್ಡೆಯಿಂದಲೋ ಹೀಗೆ ಬರೆಯುತ್ತಿದ್ದಾರೆಂಬ ಸಂದೇಹ ಯಾರಿಗಾದರೂ ಬರದೇ ಇರದು. ಕನ್ನಡದ ಖ್ಯಾತ ವಿಮರ್ಶಕರೊಬ್ಬರು ಬರೆದ ಒಂದು ಸಾಲು ಹೀಗಿದೆ-'ಜಾಗತೀಕರಣದ ಮೂಸೆಯಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಬೀಸಿದ ಬದಲಾವಣೆಯ ಬಿರುಗಾಳಿ ಖಂಡಾಂತರಗಳನ್ನು ದಾಟಿ, ವಸಹಾತುಶಾಹಿ ದಿನಗಳಲ್ಲಿ ಬೇರೂರಿದ್ದ ಶೀತಲ ಸಮರದ ಕಹಿ ನೆನಪುಗಳನ್ನು ಆಗಾಗ ನೆನಪಿಸಿದರೂ, ಆಂಗ್ಲ ಸಾಹಿತ್ಯದ ಪ್ರಭಾವದಿಂದ ಬಿಡಿಸಿಕೊಳ್ಳಲಾಗದೇ ಇಪ್ಪತ್ತೊಂದನೆ ಶತಮಾನದ ಆರಂಭದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ ಸಾಹಿತಿಗಳು, ತಮ್ಮ ಬರಹಗಳತ್ತ ಹಿನ್ನೋಟಕ್ಕಾಗಿ ಜಗತ್ತಿನ ತಲ್ಲಣಗಳ ಗ್ರಹಿಕೆಯನ್ನು ತಮ್ಮ ಸಾಹಿತ್ಯ ರಚನೆಯಲ್ಲಿ ಮೂಲಬಂಡವಾಳವಾಗಿಸಿಕೊಳ್ಳುವ ಜವಾಬ್ದಾರಿಯನ್ನು ಗಾಢವಾಗಿ ಮೆರೆದಿದ್ದನ್ನು ಒಂದು ಅಪೂರ್ವ ಮಜಲು ಎಂದು ಗುರುತಿಸಬೇಕಾಗುತ್ತದೆ.'
ರಿಚರ್ಡ್ ಲೆಡರರ್‌ಗೆ ಕನ್ನಡ ಬರುತ್ತಿದ್ದರೆ, ಈ ವಿಮರ್ಶಕರ ಕೃತಿಯನ್ನು ಓದಿದ್ದರೆ, ಆತ ಇವರನ್ನು 'ಶೂಟ್‌' ಮಾಡದೇ ಇರುತ್ತಿರಲಿಲ್ಲ!


- ವಿಶ್ವೇಶ್ವರ ಭಟ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com