ಇನ್ನೂ ಅಲ್ಲಿ ಎಷ್ಟು ರಕ್ತ ಹರಿಯಬೇಕು? ಹೆಣಗಳು ಉರುಳಬೇಕು?

ಇನ್ನೂ ಅಲ್ಲಿ ಎಷ್ಟು ರಕ್ತ ಹರಿಯಬೇಕು? ಹೆಣಗಳು ಉರುಳಬೇಕು?
ಇನ್ನೂ ಅಲ್ಲಿ ಎಷ್ಟು ರಕ್ತ ಹರಿಯಬೇಕು? ಹೆಣಗಳು ಉರುಳಬೇಕು?

ಹೈಸ್ಕೂಲಿನಲ್ಲಿದ್ದಾಗ ಪೇಪರ್ ಓದಲು ಆರಂಭಿಸಿದ ದಿನಗಳಿಂದ ಇಸ್ರೇಲ್, ಪ್ಯಾಲಸ್ತೀನ್, ಗಾಜಾಪಟ್ಟಿ, ಪಶ್ಚಿಮದಂಡೆ (ಗಿಜಡಡಿ ಇಛಟ್ಞಿ)ಹಾಗೂ ಅಲ್ಲಿ ನಡೆಯುತ್ತಿದ್ದ ಕದನ, ಸಾವು-ನೋವು, ರಕ್ತಪಾತಗಳ ಬಗ್ಗೆ ನಿರಂತರವಾಗಿ ಓದುತ್ತಿದ್ದೆ. ಜಗತ್ತಿನ ಭೂಪಟದಲ್ಲಿ ಪುಟ್ಟ ಗಾಳಿಪಟದಂತಿರುವ ಇಸ್ರೇಲ್‌ನಲ್ಲಿ ನಡೆಯುತ್ತಿದ್ದ ಕದನ, ಅದಕ್ಕೆ ಕಾರಣವಾದ ಸಂಗತಿಗಳು, ಶಾಂತಿಪ್ರಕ್ರಿಯೆ ಯತ್ನ, ನೆರೆದೇಶಗಳ ಕುತಂತ್ರ, ಚಾರಿತ್ರಿಕ ಅಂಶಗಳೆಲ್ಲ ಪತ್ರಿಕೆಗಳಲ್ಲಿ ಸವಿವರವಾಗಿ ವರದಿಯಾಗುತ್ತಿತ್ತು. ಅವೆಲ್ಲವುಗಳನ್ನು ಮನಸ್ಸಿನಲ್ಲಿ ಚಿತ್ರಿಸಿಕೊಂಡಾಗ, ಇಸ್ರೇಲ್ ಹಾಗೂ ಪ್ಯಾಲಸ್ತೀನ್ ಗರ್ಭದಲ್ಲಿ ಹುದುಗಿರುವ ದ್ವೇಷ-ಆಕ್ರೋಶವಾದರೂ ಏನು, ತಮ್ಮ ನಡುವಿನ ಸಂಘರ್ಷವನ್ನು ಬಗೆಹರಿಸಿಕೊಳ್ಳಲು ಈ ದೇಶಗಳಿಗೆ ಸಾಧ್ಯವಾಗದಿರುವುದು ಏತಕ್ಕೆ, ಒಂದು ದೇಶವಾಗಿ ಅಸ್ತಿತ್ವದಲ್ಲಿರಲು ಈ ಎರಡೂ ದೇಶಗಳಿಗೆ ಕದನ ಅನಿವಾರ್ಯವಾ, ಎರಡೂ ದೇಶಗಳ ನಡುವಿನ ಕದನದಿಂದ ಈತನಕ ಲಕ್ಷಾಂತರ ಅಮಾಯಕರು ಸತ್ತಿದ್ದರೂ, ಆಸ್ತಿ-ಪಾಸ್ತಿಗೆ ಅಪಾರ ಹಾನಿಯಾಗಿದ್ದರೂ, ಉಭಯ ರಾಷ್ಟ್ರಗಳ ಮುಖ್ಯಸ್ಥರು ಒಂದೆಡೆ ಕುಳಿತು ಬಗೆಹರಿಸಿಕೊಳ್ಳಲು ಸಾಧ್ಯವಾಗದಂಥ ಜಟಿಲ ಸಮಸ್ಯೆ, ಬಿಕ್ಕಟ್ಟು ಏನಿದೆ, ಹತ್ತಾರು ತಲೆಮಾರುಗಳು ಗತಿಸಿದರೂ ಮುಗಿಯದ ಹಗೆತನವಾದರೂ ಏನು... ಎಂದು ನನಗೆ ಆ ದಿನಗಳಲ್ಲಿ ಅನಿಸಿದ್ದುಂಟು.
ಅದಾದ ಎರಡು ದಶಕಗಳ ಬಳಿಕ ಪತ್ರಕರ್ತನಾಗಿ ಸುದ್ದಿಮನೆ ಸೇರಿದಾಗ, ಇಸ್ರೇಲ್-ಪ್ಯಾಲಸ್ತೀನ್ ನಡುವಿನ ಸಂಘರ್ಷದ ಸುದ್ದಿಯನ್ನು ಪದೇ ಪದೆ ಬರೆಯುವ ಸಂದರ್ಭಗಳು ಬಂದಾಗ ಸಹ ಇವೇ ಪ್ರಶ್ನೆಗಳು ಏಳುತ್ತಿದ್ದವು. 'ಸಂಯುಕ್ತ ಕರ್ನಾಟಕ'ದಲ್ಲಿ ಕೆಲಸ ಮಾಡುವಾಗ ಪತ್ರಿಕೆಯ ಅಂದಿನ ಸಂಪಾದಕರಾಗಿದ್ದ ಆರ್.ಎ. ಉಪಾಧ್ಯ ಅವರ ಬಳಿ ಇಸ್ರೇಲ್-ಪ್ಯಾಲಸ್ತೀನ್ ಯಾಕೆ ಈ ಪರಿ ಹೊಡೆದಾಡುತ್ತಿವೆ, ಕಾರಣಗಳೇನು ಎಂದು ಕೇಳಿದಾಗ, ಅವರು ಮೂರು ಸಿಗರೇಟುಗಳನ್ನು ಸುಡುವಷ್ಟು ಹೊತ್ತು ವಿವರಿಸಿದ್ದರು. ಆದರೆ ಕೆಲವು ಪ್ರಶ್ನೆಗಳಿಗೆ ಅವರಲ್ಲೂ ಉತ್ತರವಿರಲಿಲ್ಲ. ಅಲ್ಲದೇ ಅವರು ನೀಡಿದ ಕಾರಣಗಳು ಸಂಪೂರ್ಣ ಒಪ್ಪಿಕೊಳ್ಳುವ ರೀತಿಯಲ್ಲಿರಲಿಲ್ಲ. ಕಾರಣ, ಆನಂತರವೂ ನನ್ನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉಳಿದಿದ್ದವು. ಆನಂತರ ಸಂದರ್ಭ ಬಂದಾಗ ಅನೇಕರ ಮುಂದೆ ಇಸ್ರೇಲ್-ಪ್ಯಾಲಸ್ತೀನ್ ಜಟಾಪಟಿಯ ಬಗ್ಗೆ ಕೇಳಿದಾಗ ಸಿಕ್ಕ ಉತ್ತರಗಳು ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದವೇ ಶಿವಾಯ್, ಅಲ್ಲಿನ ವಾಸ್ತವ ಚಿತ್ರಣಗಳನ್ನು ಕೊಡಲಿಲ್ಲ. ಇದಕ್ಕೆ ನನಗಿದ್ದ ಆ ಪ್ರಾಂತಗಳ ಭೌಗೋಳಿಕ ಜ್ಞಾನದ ಕೊರತೆಯೂ ಕಾರಣವಾಗಿದ್ದಿರಬಹುದು. ಈ ಮಧ್ಯೆ ಇಸ್ರೇಲ್- ಪ್ಯಾಲಸ್ತೀನ್ ಸಂಘರ್ಷ, ಐತಿಹಾಸಿಕ ಕಾರಣ, ಶಾಂತಿ ಸಂಧಾನಕ್ಕೆ ಸಂಬಂಧಿಸಿದ ಕೆಲವು ಪುಸ್ತಕಗಳನ್ನು ಓದಿದರೂ, 'ಅವೆಲ್ಲ ಸರಿ, ಮಾತುಕತೆ, ಸಂಧಾನದಿಂದ ಬಗೆಹರಿಸಿಕೊಳ್ಳಲಾಗದಷ್ಟು ಗಂಭೀರ ಸಮಸ್ಯೆಯಾ ಇದು? ಕದನವೇ ಪರಿಹಾರವಾದರೆ ಅದರಿಂದಲೂ ಇನ್ನೂ ಪರಿಹಾರವೇಕೆ ಸಿಕ್ಕಿಲ್ಲ? ಇನ್ನೆಷ್ಟು ವರ್ಷ ಈ ರಕ್ತಪಾತ?' ಎಂಬ ಪ್ರಶ್ನೆಗಳು ಮಾತ್ರ ಹಾಗೇ ಉಳಿದಿದ್ದವು.
ಈ ಪ್ರಶ್ನೆಗಳಿಗೆ ಉತ್ತರವನ್ನು ಅರಸುವ ಒಂದು ಅಪೂರ್ವ ಅವಕಾಶ ಒದಗಿ ಬಂತು. ಎರಡೂವರೆ ವರ್ಷಗಳ ಹಿಂದೆ, ಅಂದಿನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಎಂ. ಕೃಷ್ಣ ಅವರೊಂದಿಗೆ ಐದು ದಿನಗಳ ಕಾಲ ಜೋರ್ಡಾನ್, ಇಸ್ರೇಲ್, ಪ್ಯಾಲಸ್ತೀನ್‌ನಲ್ಲಿ ಓಡಾಡುವ, ಹಿರಿಯ ರಾಜತಾಂತ್ರಿಕರೊಂದಿಗೆ ಚರ್ಚಿಸುವ ಅವಕಾಶ ಸಿಕ್ಕಿತು. ಜೋರ್ಡಾನ್‌ನಿಂದ ರಸ್ತೆ ಮೂಲಕ ಡೆಡ್‌ಸೀ (ಮೃತಸಮುದ್ರ) ಮಾರ್ಗವಾಗಿ ಇಸ್ರೇಲ್ ಪ್ರವೇಶಿಸುವುದು ಸಾಮಾನ್ಯ ಪ್ರವಾಸಿಗರಿಗೆ ಸಾಧ್ಯವೇ ಇಲ್ಲ. ಎರಡೂ ದೇಶಗಳ ಮಧ್ಯೆ ನೂರಾರು ಕಿಮಿ ದೂರ ಬಿಗಿ ಭದ್ರತೆ, ಕಣ್ಗಾವಲು, ಶತ್ರುವಾಗಿ ಇರುವೆ ರೂಪದಲ್ಲಿ ಸಹ ನುಸುಳಲು ಸಾಧ್ಯವಾಗದಂಥ ಸರ್ಪಗಾವಲು. ಮಾರ್ಗದುದ್ದಕ್ಕೂ ಹತ್ತಾರು ಕಡೆ ತಪಾಸಣೆ, ಕಣ್ಣ ದೃಷ್ಟಿ ಹಾಯುವ ತನಕ ದಟ್ಟ ದರಿದ್ರ ಮರುಭೂಮಿಯಲ್ಲಿ, ನೀರೇ ಕಾಣದ ಆ ಬರಡು ಭೂಮಿಯಲ್ಲಿ ನೂರಾರು ಕಿಮೀ ಪ್ರಯಾಣಿಸುವಾಗ, ಅಲ್ಲಿ ಕದನದ ಸಣ್ಣ ಸುಳಿವು ಸಹ ಸಿಗುತ್ತಿರಲಿಲ್ಲ. ಆನಂತರ ನಾಲ್ಕು ದಿನ ಜೆರುಸಲೇಮ್, ಟೆಲ್ ಅವಿವ್, ಬೈಟ್ ಶೆಮೆಕ್, ರೆಹೆಮೊತ್, ಸೆತೆತಿಕ್ವಾ, ಕಫರ್‌ಸೇಬಾ, ರಮಲ್ಲಾ, ಹೆಬ್ರಾನ್, ಹೊಲೊನ್, ಅಶ್ಕೆಲಾನ್... ಮುಂತಾದ ಪ್ರದೇಶಗಳಲ್ಲಿ ಪ್ರವಾಸ ಮಾಡಿದಾಗ, ಅಲ್ಲಿನ ಪರಿಸರ, ಭೌಗೋಳಿಕ ಪ್ರದೇಶಗಳನ್ನು ಕಣ್ಣಾರೆ ನೋಡಿದಾಗ, ಕದನ ಕುತೂಹಲದ ಕಾರಣಗಳು ಅರ್ಥವಾಗುತ್ತಾ ಹೋದವು. ಅಥವಾ ಹಾಗಂತ ನಾನು ಭಾವಿಸಿದ್ದೆ. ಟೆಲ್ ಅವಿವ್‌ನಿಂದ ಕೃಷ್ಣ ಅವರ ಜತೆ ಪ್ಯಾಲಸ್ತೀನ್ ರಮಲ್ಲಾಗೆ ಹೋಗುವಾಗ ಎರಡು-ಮೂರು ಕಡೆ ಗಡಿಗಳನ್ನು ದಾಟಿ ಪಯಣಿಸಬೇಕಿರುವುದರಿಂದ ವಾಹನ ಹತ್ತಿ ಇಳಿದು ಪ್ರಯಾಸ ಪಡುವುದು ಅನಿವಾರ್ಯವಾದರೂ ರೋಚಕ ಅನುಭವ. ಅಶ್ಕೆಲಾನ್‌ನಿಂದ ಗಾಜಾ ಪಟ್ಟಿ ಬರೀ ಏಳು ಕಿಮಿ ದೂರದಲ್ಲಿದೆ. ಜೆರುಸಲೇಮ್‌ನಲ್ಲಿ ನಾವು ತಂಗಿದ್ದ ಕಿಂಗ್‌ಡೆವಿಡ್ ಹೋಟೆಲ್‌ನಿಂದ ಗಾಜಾ ಸುಮಾರು ಒಂದೂವರೆ ಗಂಟೆ ರಸ್ತೆ ಪ್ರಯಾಣದಷ್ಟು ಹತ್ತಿರದಲ್ಲಿದೆ.
ಮೂರನೆಯ ರಾತ್ರಿ ಭಾರತೀಯ ದೂತವಾಸದ ಹಿರಿಯ ರಾಜತಾಂತ್ರಿಕರೊಬ್ಬರು ಇಸ್ರೇಲ್-ಪ್ಯಾಲಸ್ತೀನ್ ರಕ್ತಸಿಕ್ತ ಇತಿಹಾಸವನ್ನು ಸುಮಾರು ಮೂರು ತಾಸುಗಳವರೆಗೆ ಮಕ್ಕಳಿಗೆ ಕಾಗಕ್ಕ-ಗುಬ್ಬಕ್ಕನ ಕತೆಯಂತೆ ವಿವರಿಸಿದರು. ಅವರ ಕತೆ ಕೇಳಿದ ಬಳಿಕ ನಾನು ಎಲ್ಲಿಂದ ಆರಂಭಿಸಿದ್ದೇನೋ, ಪುನಃ ಅಲ್ಲಿಗೆ ಬಂದು ತಲುಪುತ್ತಿದ್ದೆ. ಇದನ್ನು ಅವರ ಮುಂದೆ ಹೇಳಿದಾಗ 'ಅದು ನಿಮ್ಮದೊಂದೇ ಅನುಭವವಲ್ಲ. ಕಳೆದ ನಾಲ್ಕೂವರೆ ವರ್ಷಗಳಿಂದ ನಾನು ಇಸ್ರೇಲ್‌ನಲ್ಲಿದ್ದೆ. ಕಳೆದ ಹದಿನಾಲ್ಕು ವರ್ಷಗಳಿಂದ ಈ ಎರಡೂ ದೇಶಗಳ ವಿದ್ಯಮಾನವನ್ನು ಅಭ್ಯಸಿಸುತ್ತಿದ್ದೇನೆ. ಉಗುರಿನಿಂದ ಆಗುವ ಕೆಲಸಕ್ಕೆ ಕೊಡಲಿ ತೆಗೆದುಕೊಂಡರು ಅಂತಾರಲ್ಲ, ಈ ಸಮಸ್ಯೆ ಅಂಥದ್ದು' ಎಂದು ಹೇಳಿ ನಿಟ್ಟುಸಿರು ಬಿಟ್ಟರು. ಆನಂತರ ಅವರೇ ಮಾತಿನ ವರಸೆ ಬದಲಿಸಿ, 'ಇಷ್ಟೇ ಹೇಳಿ ಈ ಸಮಸ್ಯೆಯನ್ನು ಸರಳೀಕರಿಸುವಂತಿಲ್ಲ. ಮೇಲ್ನೋಟಕ್ಕೆ ಕಾಣುವಷ್ಟು ಸಸಾರ ಸಮಸ್ಯೆ ಇದಲ್ಲ. ನನಗೆ ತಿಳಿದಂತೆ, ಕದನ ಹಾಗೂ ಕದನ ವಿರಾಮ ಮಾತ್ರ ಸಂಘರ್ಷ ಮತ್ತು ಶಾಂತಿಯ ದ್ಯೋತಕ' ಎಂದು ಸುಮ್ಮನಾದರು.
ಕಳೆದ ಎರಡು ತಿಂಗಳಿನಿಂದ ಇಸ್ರೇಲ್-ಪ್ಯಾಲಸ್ತೀನ್ ನಡೆಯುತ್ತಿರುವ ಹಿಂಸಾಚಾರವನ್ನು ಗಮನಿಸಿದಾಗ, ಮೂವತ್ತೈದು ವರ್ಷಗಳ ಹಿಂದೆ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಮೂಡಿದ್ದ ಪ್ರಶ್ನೆಗಳೇ ಬೃಹದಾಕಾರವಾಗಿ ನಿಂತಿದ್ದವು. ಇದೊಂದು ಉತ್ತರ ಸಿಗದ ಪ್ರಶ್ನೆಯಾಗಿ, ಉತ್ತರವೇ ಇಲ್ಲದ ಶೇಷ ಪ್ರಶ್ನೆಯಾಗಿ ಈ ಪ್ರದೇಶದಲ್ಲಿ ಶಾಂತಿ ನೆಲೆಸುವುದು ಮರೀಚಿಕೆಯಾಗಿಯೇ ಉಳಿದು ಬಿಟ್ಟಿದೆ. ಇನ್ನೂ ಎಷ್ಟು ಹೆಣಗಳು ಉರುಳಿದರೆ ಶಾಂತಿ ನೆಲೆಸುತ್ತದೆಂಬುದು ಯಾರಿಗೂ ಗೊತ್ತಿಲ್ಲ.
ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನ ಮಾಡದವರಿಲ್ಲ. ಅಮೆರಿಕ, ವಿಶ್ವಸಂಸ್ಥೆಯಿಂದ ಹಿಡಿದು ಅಂತಾರಾಷ್ಟ್ರೀಯ ವೇದಿಕೆಗಳೆಲ್ಲ ಶತಾಯಗತಾಯ ಪ್ರಯತ್ನಿಸಿ ಕೈ ಚೆಲ್ಲಿ ಕುಳಿತಿವೆ. ಯಾರು ಸರಿ, ಯಾರು ತಪ್ಪು ಎಂದು ನಿರ್ಧರಿಸುವ ಮಾನದಂಡ ಸಹ ನಿಷ್ಪ್ರಯೋಜಕವಾಗಿದೆ. ಇದು ಬರೀ ಗಡಿ ತಂಟೆಯಾಗಿದ್ದರೆ, ಭೂಕಬಳಿಕೆಯಾಗಿದ್ದರೆ, ಜನಾಂಗೀಯ ಕಲಹವಾಗಿದ್ದರೆ ಬಗೆಹರಿಸಬಹುದಿತ್ತು. ಆದರೆ ಇದು ಈ ಎಲ್ಲ ಅಂಶಗಳನ್ನು ಒಳಗೊಳ್ಳುವುದರ ಜತೆಗೆ ಧರ್ಮ, ಜಾತಿ, ವ್ಯವಹಾರ, ಅಹಂಕಾರ, ಮತ್ಸರ, ಮೇಲಾಟ, ದರ್ಪಗಳೆಲ್ಲ ಸೇರಿ ಇಡೀ ಸಮಸ್ಯೆ ದಿನಗಳು ಕಳೆದಂತೆಲ್ಲ ತೊಳಸಂಬಟ್ಟೆಯಾಗಿ ಬಗೆಹರಿಸಲು ಸಾಧ್ಯವಾಗದ ಹಂತ ತಲುಪಿ ಬಿಟ್ಟಿದೆ. ಇಲ್ಲಿ ಒಂದೆರಡು ದೇಶಗಳಷ್ಟೇ ಭಾಗಿಯಾಗಿದ್ದರೆ, ಸುಧಾರಿಸಬಹುದಿತ್ತು.
ಆದರೆ ವಿಶ್ವದ ಎಲ್ಲ ದೇಶಗಳಿಗೂ ಈ ಪ್ರಾಂತದಲ್ಲಿ ನಡೆಯುವ ವಿದ್ಯಮಾನಗಳು ಪ್ರಮುಖವಾದ್ದರಿಂದ, ಅವೆಲ್ಲವೂ ಪರಿಸ್ಥಿತಿಯನ್ನು ನಿಭಾಯಿಸುವ ನೆಪದಲ್ಲಿ ಮತ್ತಷ್ಟು ಹಾಳುಗೆಡವಿ ಹಾಕಿದ್ದು ದುರ್ದೈವ. ಹೀಗಾಗಿ ಎಂದೋ ಬಗೆಹರಿಯಬೇಕಿದ್ದ ಸಮಸ್ಯೆ, ಎಂದೆಂದೂ ಬಗೆಹರಿಸಲು ಸಾಧ್ಯವಾಗದಷ್ಟು ಜಟಿಲವಾಗಿ ಉಳಿದು ಬಿಟ್ಟಿದೆ. ಇಸ್ರೇಲ್‌ನಲ್ಲಿ ಎರಡು ಕದನಗಳ ನಡುವಿನ ಅವಧಿಯನ್ನು ಶಾಂತಿ ಎಂದು ಭಾವಿಸುವಂತಾಗಿರುವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.
ಭೌಗೋಳಿಕವಾಗಿ ಇಸ್ರೇಲ್ ಎಂಥ ಆಯಕಟ್ಟಿನ, ಸೂಕ್ಷ್ಮ ಸ್ಥಳದಲ್ಲಿದೆ ಎಂಬುದನ್ನು ಒಂದು ಕ್ಷಣ ಕಣ್ಮುಂದೆ ತಂದುಕೊಂಡರೆ ಸಮಸ್ಯೆಯ ತೀವ್ರತೆಯ ನೋಟ ಅರಿವಿಗೆ ಬರುತ್ತದೆ. ಉತ್ತರಕ್ಕೆ ಲೆಬನಾನ್, ಈಶಾನ್ಯಕ್ಕೆ ಸಿರಿಯಾ, ಪೂರ್ವಕ್ಕೆ ಜೋರ್ಡಾನ್, ಪಶ್ಚಿಮಕ್ಕೆ ಈಜಿಪ್ತ್, ವಾಯವ್ಯಕ್ಕೆ ಮೆಡಿಟರೇನಿಯನ್ ಸಮುದ್ರ, ಈ ಪ್ರದೇಶಗಳಿಗೆ ತಾಕಿಕೊಂಡು ಸೌದಿ ಅರೇಬಿಯಾ, ಇರಾನ್, ಟರ್ಕಿ, ನಡುವೆ ಇಸ್ರೇಲ್ ಎಂಬ ಪುಟ್ಟ ಬಾಲಂಗೋಚಿ! ಸುತ್ತಲೂ ಶತ್ರು ರಾಷ್ಟ್ರಗಳು. ಸಾಲದು ಎಂಬಂತೆ ದೇಶದ ಹೊಟ್ಟೆಯೊಳಗೆ ಪ್ಯಾಲಸ್ತೀನ್, ಗಾಜಾ ಪ್ರದೇಶ. ಕರೆದರೆ, ಕೂಗಿದರೆ ನೆರವಿಗೆ ಬರಲು ಒಂದೇ ಒಂದು ಮಿತ್ರ ದೇಶವಿಲ್ಲ. ಒಂದು ಕ್ಷಣ ವಿರಮಿಸಿದರೆ ಶತ್ರು ದೇಶಗಳಿಂದ ಅಪಾಯ ಗ್ಯಾರಂಟಿ. ಹೀಗಾಗಿ ಸದಾ ಎಚ್ಚರವಾಗಿರಬೇಕು. ಇನ್ನು ಹೊಟ್ಟೆಯೊಳಗಿರುವ ಪ್ಯಾಲಸ್ತೀನ್ ಜತೆಗೆ ಈ ಎಲ್ಲ ಶತ್ರು ದೇಶಗಳ ಸ್ನೇಹ, ಕುಮ್ಮಕ್ಕು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದಾದರೆ, ಇಸ್ರೇಲಿನಲ್ಲಿರುವ ಯಹೂದಿಗಳು ನೆರೆಯ ದೇಶಗಳಲ್ಲಿರುವ ಮುಸ್ಲಿಮರು ಮತ್ತು ತನ್ನೊಳಗೇ ಇರುವ ಪ್ಯಾಲಸ್ತೀನ್, ಗಾಜಾಪಟ್ಟಿ ಹಾಗೂ ಪಶ್ಚಿಮ ದಂಡೆಯಲ್ಲಿರುವ ಮುಸ್ಲಿಮರ ಜತೆ ಸದಾ ಹೋರಾಡಬೇಕು. ಇನ್ನೂ ಸರಳವಾಗಿ ಹೇಳಬೇಕೆಂದರೆ, ನಿಮ್ಮ ಮನೆಯ ಕೌಂಪೌಂಡ್ ವಾಲ್‌ನ್ನು ನಾಲ್ಕೂ ಕಡೆಗಳಿಂದ ನಿಮಗೆ ಆಗದವರು ಸುತ್ತುವರಿದುದಲ್ಲದೇ, ನಿಮ್ಮ ಹಿತ್ತಲಲ್ಲೋ, ಜಗುಲಿಯಲ್ಲೋ, ಪಡಸಾಲೆಯಲ್ಲೋ ಶತ್ರುಗಳು ಬಂದು ವಾಸಿಸಿದರೆ ಹೇಗಾಗಬಹುದೋ ಹಾಗೇ. ಇಷ್ಟೂ ಸಾಲದೆಂಬಂತೆ ಇಡೀ ಕೇರಿ ಹಾಗೂ ಅಕ್ಕಪಕ್ಕದ ಊರುಗಳೂ ಶತ್ರುಗಳಿಗೇ ಸಹಾಯ ಮಾಡಿದರೆ ಹೇಗಾಗಬೇಡ? ಅಕ್ಷರಶಃ ಇಸ್ರೇಲ್ ಕಳೆದ ಆರೂವರೆ ದಶಕಗಳಿಂದ ಈ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಒಂದು ಕ್ಷಣ ಯೋಚಿಸಿ, ನಾವು ಬಗಲಲ್ಲಿ ಒಂದು ಪಾಕಿಸ್ತಾನ ಕಟ್ಟಿಕೊಂಡು ಎಷ್ಟೆಲ್ಲ ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ. ಇನ್ನು ಸುತ್ತೆಲ್ಲ ಇಂಥ ಮೂರ್ನಾಲ್ಕು ದೇಶಗಳಿದಿದ್ದರೆ, ನಮ್ಮ ಕತೆಯೇನಾಗುತ್ತಿತ್ತು? ಇಸ್ರೇಲ್‌ನ ಕತೆಯೂ ಇದೇ. ಸುತ್ತಲಿನ ದೇಶಗಳು ಇಸ್ರೇಲಿನ ಏಳಿಗೆಯನ್ನು ಸಹಿಸಲಾರವು. ಹೆಜ್ಜೆ ಹೆಜ್ಜೆಗೂ ತಗಾದೆ. ಒಳಗಿರುವ ಶತ್ರುವಿಗೆ ಕುಮ್ಮಕ್ಕು ಕೊಟ್ಟರೆ ಸಾಕು, ಇಸ್ರೇಲ್‌ನಲ್ಲಿ ರಕ್ತದ ಕೋಡಿ ಹರಿಯುತ್ತದೆ. ಇಸ್ರೇಲ್ ತನ್ನ ರಾಜಧಾನಿ ಜೆರುಸಲೇಮ್ ಎಂದು ಸಾರಿದರೂ ಅಂತಾರಾಷ್ಟ್ರೀಯ ಸಮುದಾಯಗಳು ಅದನ್ನು ರಾಜಧಾನಿ ಎಂದು ಪರಿಗಣಿಸದಿರುವುದು ದುರಂತ. ಇಸ್ರೇಲ್ ಜನಸಂಖ್ಯೆ ಸುಮಾರು 81 ಲಕ್ಷ. ಆ ಪೈಕಿ ಸುಮಾರು 61 ಲಕ್ಷ ಮಂದಿ ಯಹೂದಿಗಳು. ಎರಡನೆಯ ಹೆಚ್ಚು ಜನಸಂಖ್ಯೆ ಹೊಂದಿರುವವರು ಮುಸ್ಲಿಮರು (ಸುಮಾರು 16 ಲಕ್ಷ). ಉಳಿದವರು ಕ್ರಿಶ್ಚಿಯನ್‌ರು, ಆಫ್ರಿಕನ್, ಆರ್ಮೇನಿಯನ್‌ರು. ಜಗತ್ತಿನ ಏಕೈಕ ಯಹೂದಿಗಳ ರಾಷ್ಟ್ರ ತಾನು ಎಂದು ಇಸ್ರೇಲ್ ಘೋಷಿಸಿಕೊಂಡಿದೆ.
ಈಜಿಪ್ತ್, ಜೋರ್ಡಾನ್ ಸದಾ ಮುಗ್ಗಲ ಮುಳ್ಳುಗಳಂತೆ ಇಸ್ರೇಲ್‌ಗೆ ಕಾಡುತ್ತಿದೆ. ಸದಾ ಒಂದಿಲ್ಲೊಂದು ರೀತಿಯಲ್ಲಿ ತರಲೆ, ತಂಟೆ ಮಾಡುತ್ತಲೇ ಇರುತ್ತವೆ. ಲೆಬನಾನ್ ಹಾಗೂ ಸಿರಿಯಾ ಅನುಕೂಲ ನೋಡಿಕೊಂಡು, ಇಸ್ರೇಲಿನ ಪ್ರತೀಕಾರದ ಸಾಮರ್ಥ್ಯ ನೋಡಿಕೊಂಡು ಕೀಟಲೆ ಮಾಡುತ್ತದೆ. ಇರಾನ್ ಹಾಗೂ ಸೌದಿ ಅರೇಬಿಯಾ ಕೂಡ ಬೆಂದ ಗಳ ಇರಿಯುವ ಕೆಲಸ ಬಂದಾಗ ಒಲ್ಲೆ ಎನ್ನುವುದಿಲ್ಲ. ಶತ್ರುವಿನ ಶತ್ರು ಮಿತ್ರ ಎಂಬುದು ಜಗತ್ತಿನ ಎಲ್ಲೆಡೆ ಸತ್ಯವಾದ ಮಾತು. ಆದರೆ ಇಸ್ರೇಲ್ ಮಟ್ಟಿಗೆ ಮಾತ್ರ ಇದು ಲಾಗೂ ಆಗುವುದಿಲ್ಲ. ಹಾಗೆ ನೋಡಿದರೆ, ಇಸ್ರೇಲ್‌ಗೆ ಮಿತ್ರರು ಎಂಬುವವರು ನೆರೆಹೊರೆಯಲ್ಲಿ ಯಾರೂ ಇಲ್ಲ. ಆದರೂ ಅದನ್ನು ಕದಲಿಸಲು ಯಾರಿಂದಲೂ ಸಾಧ್ಯವಾಗಿಲ್ಲ.
ಇಸ್ರೇಲ್‌ಗೆ ಯುದ್ಧವೆಂಬುದು ದೈನಂದಿನ ಜೀವನದಷ್ಟೇ ಸಹಜ. ಯಾಕೆಂದರೆ, 1948ರಲ್ಲಿ ಆ ರಾಷ್ಟ್ರ ಸ್ವತಂತ್ರವಾದ ಮರುದಿನದಿಂದ ಶುರುವಾದ ಯುದ್ಧ ಇಂದಿನವರೆಗೂ ನಿಂತಿಲ್ಲ. ಈ ಅವಧಿಯಲ್ಲಿ ಯುದ್ಧವಿಲ್ಲದ ದಿನಗಳೆಷ್ಟು ಎಂಬುದನ್ನು ಲೆಕ್ಕ ಹಾಕುವುದೇ ಸುಲಭ. ಇಸ್ರೇಲ್ ಬದಲು ಬೇರೆ ಯಾವುದೇ ದೇಶವಿದ್ದರೂ ಅದೆಂದೋ ಅಸ್ತಿತ್ವ ಕಳೆದುಕೊಳ್ಳುತ್ತಿತ್ತು, ಇಲ್ಲವೇ ಹರಿದು ಹಂಚಿ ಹೋಗುತ್ತಿತ್ತು. ಮುಸ್ಲಿಂ ರಾಷ್ಟ್ರಗಳಿಗೆ ಇಸ್ರೇಲ್ ಜನ್ಮ ತಾಳುವುದು ಬೇಕಿರಲಿಲ್ಲ. ವಿಶ್ವಸಂಸ್ಥೆ ಮೇಲೆ ಇನ್ನಿಲ್ಲದ ಒತ್ತಡ ಹೇರಿದರೂ ಪ್ರಯೋಜನ ಆಗಲಿಲ್ಲ. ಅರಬ್ ಪ್ಯಾಲಸ್ತೀನ್ ನಿರ್ಮಾಣ ಮಾಡಬೇಕೆಂಬುದು ಅವರ ಕನಸಾಗಿತ್ತು. ವಿಶ್ವಸಂಸ್ಥೆ ಇಸ್ರೇಲ್‌ನ್ನು ಸ್ವತಂತ್ರ ದೇಶವೆಂದು ಘೋಷಣೆ ಮಾಡುತ್ತಿದ್ದಂತೆ, ಅರಬ್ ದೇಶಗಳು ಯುದ್ಧ ಸಾರಿದವು. ಆದರೆ ಈ ಯುದ್ಧದಲ್ಲಿ ಯಹೂದಿಗಳು ಅರಬ್ ಪಡೆಗಳಿಗೆ ಮಣ್ಣು ಮುಕ್ಕಿಸಿದ್ದಲ್ಲದೇ, ಅರಬ್‌ನ ವಶದಲ್ಲಿದ್ದ ಪ್ಯಾಲೇಸ್ತಿನ್ ಪ್ರಮುಖ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡರು. ಇದರ ಪರಿಣಾಮದಿಂದ ಆ ಮುಸ್ಲಿಮ್ ಪ್ರಾಬಲ್ಯವಿರುವ ಪ್ಯಾಲಸ್ತೀನ್ ಛಿದ್ರವಾಗಿ ಗಾಜಾಪಟ್ಟಿ ಹಾಗೂ ಪಶ್ಚಿಮದಂಡೆ ನಿರ್ಮಾಣವಾದದ್ದಲ್ಲದೇ, ಇವೆರಡು ಕಡೆ ಇಸ್ರೇಲ್ ತನ್ನ ಪ್ರಭುತ್ವ ಸಾಧಿಸಿತು.
1967ರಲ್ಲಿ ಸುಮಾರು ಇಪ್ಪತ್ತು ದಿನಗಳವರೆಗೆ ನಡೆದ ಭಯಾನಕ ಯುದ್ಧವನ್ನು ಮರೆಯುವಂತೆಯೇ ಇಲ್ಲ. ಇದರ ಪರಿಣಾಮವಾಗಿ ಪ್ಯಾಲಸ್ತೀನ್ ಅರಬ್ಬರು ಗಾಜಾಪಟ್ಟಿ ಹಾಗೂ ಪಶ್ಚಿಮದಂಡೆಗಳನ್ನು ಕಳೆದುಕೊಂಡರು. ಪ್ಯಾಲಸ್ತೀನ್ ಪಡೆ ಬೆಂಬಲಕ್ಕೆ ನಿಂತಿದ್ದ ಈಜಿಪ್ತ್ ತನ್ನ ಸಿನೈ ದ್ವೀಪವನ್ನೂ ಸಿರಿಯಾ ತನ್ನ ಕಬ್ಜದಲ್ಲಿದ್ದ ಗೋಲನ್ ಹೈಟ್‌ನ್ನು ಕಳೆದುಕೊಂಡಿತು. ಇಸ್ರೇಲ್ ಪ್ರತಿ ತಂತ್ರದಿಂದ ನೆರೆಯ ಅರಬ್ ದೇಶಗಳು ತತ್ತರಿಸಿ ಹೋದವು.
ತಾನು ಅಸ್ತಿತ್ವಕ್ಕೆ ಬಂದಂದಿನಿಂದ ಒಂದು ದಿನ ಸಹ ಸುಮ್ಮನಿರಲು ಬಿಡದ ಅರಬ್ ದೇಶಗಳು ಇಸ್ರೇಲ್‌ಗೆ ಕಚ್ಚಿದ್ದಕ್ಕಿಂತ ಕಚ್ಚಿಸಿಕೊಂಡಿದ್ದೇ ಹೆಚ್ಚು. ಇಷ್ಟಾದರೂ ನೆರೆಯ ದೇಶಗಳು ಕೊಟ್ಟ ಕಿರುಕುಳ, ತಾಪತ್ರಯ ಒಂದಾ ಎರಡಾ? ಇಲ್ಲಿ ಅರಬ್ ದೇಶಗಳ ಒಂದು ಅಧಿಕ ಪ್ರಸಂಗದ ಬಗ್ಗೆ ಹೇಳಬೇಕು. ಇಸ್ರೇಲಿನ ದಕ್ಷಿಣದ ತುತ್ತ ತುದಿಗೆ ಗಲ್ಫ್ ಅಖಾಬಾ (ಅಖಾಬಾ ಕೊಲ್ಲಿ) ಇದೆ. ಇಸ್ರೇಲಿಗಳು ಈ ಕೊಲ್ಲಿಯ ಮೂಲಕ ಕೆಂಪು ಸಮುದ್ರದ ಮಾರ್ಗವಾಗಿ ಹಿಂದೂ ಮಹಾಸಾಗರ ಬಳಸಿ ಏಷಿಯಾ ಹಾಗೂ ಆಫ್ರಿಕಾದ ಬೇರೆ ಬೇರೆ ದೇಶಗಳಿಗೆ ಪಯಣಿಸುತ್ತಿದ್ದರು.
ಈಜಿಪ್ತ್ ಹಾಗೂ ಜೋರ್ಡಾನ್ ಕರಾಮತ್ತು ನಡೆಸಿ ಇಸ್ರೇಲ್‌ಗೆ ಇದ್ದ ಸಮುದ್ರ ಮಾರ್ಗವನ್ನು ಮುಚ್ಚಿಬಿಟ್ಟರು.
ಇದರಿಂದ ಇಸ್ರೇಲ್‌ಗೆ ಮೆಡಿಟರೇನಿಯನ್ ಸಮುದ್ರ ಮಾರ್ಗವೊಂದೇ ಉಳಿಯಿತು. ಅದರಲ್ಲೂ ಪೂರ್ವದ ಅಥವಾ ಏಷಿಯಾದ ದೇಶಗಳಿಗೆ ಹೋಗಬೇಕೆಂದರೆ ಆಫ್ರಿಕಾ ಖಂಡವನ್ನು ಮುಕ್ಕಾಲು ಸುತ್ತು ಹಾಕಿ, ಗುಡ್‌ಹೋಪ್ ಭೂಶಿರ ತಲುಪಿ ಅಲ್ಲಿಂದ ಹೋಗಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರು. ಆದರೆ ಇದನ್ನು ತೀವ್ರವಾಗಿ ಪ್ರತಿಭಟಿಸಿದ ಇಸ್ರೇಲ್ ಈಜಿಪ್ತ್ ಮೇಲೆ ದಾಳಿ ಮಾಡಿತು. ಆ ಮೂಲಕ ಗಾಜಾವನ್ನು ವಶಪಡಿಸಿಕೊಂಡಿತು. ಅಲ್ಲದೇ, ಈಜಿಪ್ತ್ ಜತೆ ಕೈ ಜೋಡಿಸಿದ ಜೋರ್ಡಾನ್ ಮೇಲೂ ದಾಳಿ ಮಾಡಿತು. ಪರಿಣಾಮ ಜೋರ್ಡಾನ್ ಸುಪರ್ದಿಯಲ್ಲಿದ್ದ ಪಶ್ಚಿಮ ದಂಡೆ ಇಸ್ರೇಲ್ ಪಾಲಾಯಿತು. ಅಕ್ಷರಶಃ ಅಲ್ಲಿಗೆ ಪ್ಯಾಲಸ್ತೀನ್ ಪೂರ್ತಿಯಾಗಿ ಇಸ್ರೇಲ್ ವಶವಾಗಿತ್ತು.
ಆನಂತರ ನಡೆದ ಶಾಂತಿ ಮಾತುಕತೆಗಳು ಅವೆಷ್ಟೋ? 1974ರಲ್ಲಿ ಈಜಿಪ್ತ್ ಇಸ್ರೇಲ್ ಮೇಲೆ ದಾಳಿ ಮಾಡಿ ಮಣ್ಣು ಮುಕ್ಕಿಸಿಕೊಂಡಿದ್ದು ಇನ್ನೊಂದು ದೊಡ್ಡ ಕತೆ. ಆನಂತರ ಮರ್ಯಾದೆ ಮುಚ್ಚಿಕೊಳ್ಳಲು ಈಜಿಪ್ತ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಸಿರಿಯಾ, ಲೆಬನಾನ್‌ಗಳು ಸಹ ಈಜಿಪ್ತ್ ಹಾಗೂ ಜೋರ್ಡಾನ್ ಮಾತು ಕೇಳಿ ಇಸ್ರೇಲ್‌ನಿಂದ ಇಕ್ಕಿಸಿಕೊಂಡಿದ್ದು ಮತ್ತೊಂದು ಕತೆ. ಈ ನಾಲ್ಕು ದೇಶಗಳು ಸೇರಿ ತಂತ್ರ ಹೆಣೆದರೂ ಇಸ್ರೇಲ್‌ನ ಮಣಿಸಲು ಸಾಧ್ಯವಾಗಿಲ್ಲ.
ಸಣ್ಣಪುಟ್ಟ ಕಿರುಕುಳ, ತರಲೆಗಳಿಗೂ ತುಸು ತೀವ್ರವಾಗಿಯೇ ಇಸ್ರೇಲ್ ಪ್ರತಿಕ್ರಿಯಿಸುತ್ತದೆಂಬುದು ಅಂತಾರಾಷ್ಟ್ರೀಯ ಸಮುದಾಯದ ಅಭಿಪ್ರಾಯವಿದ್ದರೂ, ಇಸ್ರೇಲ್ ಅದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಯಾವುದೇ ಸಂದರ್ಭದಲ್ಲೂ ವೈರಿ ದೇಶಗಳ ಕೈ ಮೇಲಾಗದಂತೆ ನೋಡಿಕೊಳ್ಳುತ್ತಿದೆ. ಯಾವ ದಾಳಿಗೂ ಇಸ್ರೇಲ್ ಪ್ರತಿ ದಾಳಿ ನಡೆಸದೇ ಬಿಡುತ್ತಿಲ್ಲ. ಅದರಲ್ಲೂ ಕಳೆದ ಆರೇಳು ವರ್ಷಗಳಲ್ಲಿ ಗಾಜಾದಲ್ಲಿ ಇಸ್ಲಾಮಿಕ್ ಸಂಘಟನೆಯಾದ ಹಮಾಸ್ ಅಧಿಕಾರಕ್ಕೆ ಬಂದ ನಂತರ, ಯಹೂದಿಗಳ ಪ್ರಾಬಲ್ಯವನ್ನು ಮುರಿದು ಸಮಗ್ರ ಪ್ಯಾಲಸ್ತೀನ್ ರಾಷ್ಟ್ರ ನಿರ್ಮಾಣದ ಉದ್ದೇಶವನ್ನು ಪ್ರಕಟಿಸಿದ ಬಳಿಕ ಮತ್ತಷ್ಟು ಜಾಗೃತವಾಗಿದೆ. ಯಾರಾದರೂ 'ಮುಟ್ಟಿದರೆ ಸಾಕು, ತಟ್ಟಿ ಬಿಡ್ತೀನಿ' ಎಂದು ತೀಕ್ಷ್ಣ ಪ್ರತಿಕ್ರಿಯೆಗೆ ಇಸ್ರೇಲ್ ಮುಂದಾಗಿದೆ. ಈ ಹಮಾಸ್‌ಗಳು ಇಸ್ರೇಲ್‌ನ್ನು ಒಂದು ರಾಷ್ಟ್ರ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಅದೊಂದು ಆಕ್ರಮಿತ ಪ್ರದೇಶ ಎಂಬುದು ಹಮಾಸ್ ವಾದ.
ಅಷ್ಟಕ್ಕೂ ಕಳೆದ ಎರಡು ತಿಂಗಳಿನಿಂದ ಇಸ್ರೇಲ್-ಪ್ಯಾಲಸ್ತೀನ್ ನಡುವೆ ನಡೆಯುತ್ತಿರುವ ವೈಮಾನಿಕ ದಾಳಿಗೆ ಕಾರಣವಾದರೂ ಏನು? ಜೂನ್ ಮೊದಲನೆಯ ವಾರದಲ್ಲಿ ಮೂವರು ಇಸ್ರೇಲಿ ಯುವಕರು ಪಶ್ಚಿಮ ದಂಡೆ ಪ್ರದೇಶದಲ್ಲಿ ಕಣ್ಮರೆಯಾದರು. ಅದಾದ ಬಳಿಕ ಅವರನ್ನು ಕೊಲ್ಲಲಾಗಿದೆಯೆಂದು ಗೊತ್ತಾಯಿತು. ಇಸ್ರೇಲ್ ತಡ ಮಾಡಲಿಲ್ಲ. ಇದಕ್ಕೆ ಹಮಾಸ್ ಕಾರಣ ಎಂದು ದೂರಿದ ಇಸ್ರೇಲ್, ಗಾಜಾ ಮೇಲೆ ವೈಮಾನಿಕ ದಾಳಿ ಮಾಡಿತು. ಅದಕ್ಕೆ ಪ್ರತಿಯಾಗಿ ಹಮಾಸ್ ಇಸ್ರೇಲ್‌ನ ಅಶ್ಕೆಲಾನ್ ಪ್ರದೇಶದ ಮೇಲೆ ರಾಕೆಟ್ ದಾಳಿ ಮಾಡಿತು. ಇಸ್ರೇಲ್ ಇದರಿಂದ ಪ್ರಚೋದನೆಗೊಂಡು ಪ್ಯಾಲಸ್ತೀನಿನ ಪೂರ್ವ ಭಾಗದ ಮೇಲೆ ವೈಮಾನಿಕ ದಾಳಿಗೆ ಮುಂದಾಯಿತು. ಹಮಾಸ್ ಕೂಡ ಇಸ್ರೇಲ್‌ನ ಹಣಕಾಸು ನಗರ ಟೆಲ್ ಅವಿವ್ ಮೇಲೆ ರಾಕೆಟ್ ಹಾರಿಸಿತು. ಕಳೆದ ಎರಡು ತಿಂಗಳ ಈ ಹಣಾಹಣಿಯಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಿರ್ಗತಿಕರಾಗಿದ್ದಾರೆ. ಹತ್ತು ಲಕ್ಷಕ್ಕೂ ಅಧಿಕ ಮಂದಿ ಒಂದಿಲ್ಲೊಂದು ರೀತಿಯಲ್ಲಿ ಬಾಧಿತರಾಗಿದ್ದಾರೆ. ಸುಮಾರು ಐವತ್ತು ಸಾವಿರ ಮಂದಿ ಮನೆ-ಮಠ ಬಿಟ್ಟು ಪರಾರಿಯಾಗಿದ್ದಾರೆ. ಏನಿಲ್ಲವೆಂದರೂ ಒಂದು ಲಕ್ಷ ಇಪ್ಪತೈದು ಸಾವಿರ ಬಡಪಾಯಿ ಮಕ್ಕಳು ತಂದೆ-ತಾಯಿಗಳಿಂದ ದೂರವಾಗಿದ್ದಾರೆ ಅಥವಾ ಕಾಣೆಯಾಗಿದ್ದಾರೆ. ಒಟ್ಟಾರೆ ಪರಿಸ್ಥಿತಿ ಅಯೋವುಯ!
ಹಮಾಸ್ ಇಸ್ರೇಲ್ ಮೇಲೆ ಈ ಪ್ರಮಾಣದಲ್ಲಿ ಧೈರ್ಯ ತೋರಿ ತೊಡೆ ತಟ್ಟಿ ನಿಂತಿರುವುದು ಇಸ್ರೇಲ್‌ನ ಈ ಕ್ಷಣದ ತಲ್ಲಣಕ್ಕೆ ಕಾರಣವಾಗಿದ್ದು ನಿಜ. ಹಮಾಸ್ ಜತೆ ಸೌದಿ ಅರೇಬಿಯಾ, ಇರಾನ್, ಈಜಿಪ್ತ್, ಜೋರ್ಡಾನ್ ಕೈ ಜೋಡಿಸಿರುವುದು ಸ್ಪಷ್ಟ. ಹಮಾಸ್ ದಾಸ್ತಾನಿನಲ್ಲಿ ಭಾರಿ ಪ್ರಮಾಣದ ರಾಕೆಟ್‌ಗಳಿರುವುದನ್ನು ಇಸ್ರೇಲ್ ನಿರೀಕ್ಷಿಸಿರಲಿಲ್ಲ. ಇದು ಇಸ್ರೇಲ್‌ನ ನಿದ್ದೆಗೆಡಿಸಿರುವ ಸಂಗತಿ. ಇಷ್ಟಕ್ಕೆ ಸುಮ್ಮನಾಗುವ ಜಾಯಮಾನವಂತೂ ಯಹೂದಿಗಳದ್ದಲ್ಲ. ಹೀಗಾಗಿ ಅವರು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆಂಬುದೇ ಕದನ ಕುತೂಹಲದ ಮುಂದಿನ ಅಧ್ಯಾಯಕ್ಕೆ ನಾಂದಿಯಾಗಲಿದೆ. ಇಸ್ರೇಲಿಗಳ ಹಿಂದಿನ ವರಸೆಗಳನ್ನು ನೋಡಿದವರಿಗೆ, ಅವರು ಹಮಾಸ್ ಹುಟ್ಟಡಗಿಸದೇ ಬಿಡುವುದಿಲ್ಲ ಎಂಬುದು ದಿಟ. ಆದರೆ ಈ ಕಾದಾಟ ಅದೆಷ್ಟು ಭೀಕರ ರಕ್ತಪಾತಕ್ಕೆ ಸಾಕ್ಷಿಯಾಗಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲಿ ಯಾರು ಸರಿ, ತಪ್ಪು ಎಂಬ ವಾದಕ್ಕೆ ಅರ್ಥವೇ ಇಲ್ಲ. ಯಾರು ಸತ್ತರು, ಬಚಾವ್ ಆದರು, ಯಾರು ಗೆದ್ದರು, ಯಾರು ಸೋತರು ಎಂಬುದಷ್ಟೇ ಮುಖ್ಯ. ಹೀಗಾಗಿ ಎಲ್ಲ ಕಾದಾಟಕ್ಕೆ ಇಲ್ಲಿ ಮುಕ್ತ ಅವಕಾಶ, ಪರವಾನಗಿ.
ಅಷ್ಟಕ್ಕೂ ಇಸ್ರೇಲ್‌ನ ಜೆರುಸಲೇಮ್ ನಗರ ಜಗತ್ತಿನ ಮೂರು ಪ್ರಮುಖ ಧರ್ಮಗಳಾದ -ಕ್ರಿಶ್ಚಿಯಾನಿಟಿ, ಇಸ್ಲಾಮ್ ಹಾಗೂ ಜುಡಾಯಿಸಂ-ಗೆ ಪವಿತ್ರ ಕ್ಷೇತ್ರವಾಗಿರುವುದು ಮತ್ತು ಅದರ ಮೇಲೆ ಪ್ರಭುತ್ವ ಸಾಧಿಸಲು ಆಯಾ ಧರ್ಮ ಆಚರಿಸುವ ರಾಷ್ಟ್ರಗಳು ಮೇಲಾಟಕ್ಕೆ ಬಿದ್ದಿರುವುದೇ ಈ ಎಲ್ಲ ರಣಭೀಷಣಗಳಿಗೆ ಕಾರಣವಾ? ಅಲ್ಲಿ ಇನ್ನೆಷ್ಟು ಯುದ್ಧಗಳು ನಡೆಯಬೇಕೋ? ಹೆಣಗಳು ಬೀಳಬೇಕೋ?

-ವಿಶ್ವೇಶ್ವರಭಟ್
vbhat@me.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com