ತಪ್ಪಿದ ಪ್ರಕೃತಿಯ ಆಧಾರ, ನೆನಪಿಸುತ್ತಿದೆ ಕೇದಾರ

ಆಗಸದಲ್ಲಿ ಇನ್ನೂ ಮೋಡ ಕಟ್ಟುವ ಸೂಚನೆಯೇ ಕಾಣುತ್ತಿಲ್ಲ. ನಮ್ಮ ...
ತಪ್ಪಿದ ಪ್ರಕೃತಿಯ ಆಧಾರ, ನೆನಪಿಸುತ್ತಿದೆ ಕೇದಾರ

ಆಗಸದಲ್ಲಿ ಇನ್ನೂ ಮೋಡ ಕಟ್ಟುವ ಸೂಚನೆಯೇ ಕಾಣುತ್ತಿಲ್ಲ. ನಮ್ಮ ಕರ್ನಾಟಕದ ರೈತರ ಮೊಗದಲ್ಲಿ 'ಮಳೆರಾಯ ಬರುವನೊ ಇಲ್ಲವೊ' ಎನ್ನುವ ಆತಂಕ. ಜೂನ್ ಎರಡನೇ ವಾರಕ್ಕೆ ಕಾಲಿಟ್ಟಿದ್ದರೂ ಮಳೆಗಾಲ ಶುರುವಾಗುವ ಸೂಚನೆಗಳೇ ಇರಲಿಲ್ಲ. ವರುಣನಿಗೆ ಅದೆಲ್ಲಿತ್ತೊ ಸಿಟ್ಟು, ಉತ್ತರಾಖಂಡದ ದೇವನೆಲದಲ್ಲಿ ರುದ್ರನರ್ತನ ಆರಂಭಿಸಿಬಿಟ್ಟ. ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನೆಲ್ಲ ಮೌನವಾಗಿ ಸಹಿಸಿಕೊಂಡಿದ್ದ ಮಂದಾಕಿನಿ, ಆಲಕನಂದಾ ಸಹ ಜನರಿಗೆ ಬುದ್ಧಿ ಕಲಿಸಲು ಕಾಯುತ್ತಿದ್ದವೇನೋ. ಯಾವತ್ತೂ ಶಾಂತವಾಗಿರುತ್ತಿದ್ದ ಅವೂ ರೌದ್ರಾವತಾರ ತಾಳಿಬಿಟ್ಟವು. ಆಗಸದಲ್ಲಿ ಮೇಘಗಳೇ ಸ್ಫೋಟಗೊಳ್ಳುತ್ತಿದ್ದರೆ, ಸಹೋದರಿಯರು ಎದುರಿಗೆ ಸಿಕ್ಕಸಿಕ್ಕದ್ದನ್ನೆಲ್ಲ ಆಪೋಶನ ತೆಗೆದುಕೊಳ್ಳುತ್ತ ಹೊರಟುಬಿಟ್ಟವು.
ಉತ್ತರಾಖಂಡ ದುರಂತಕ್ಕೆ ವರ್ಷ ಸಮೀಪಿಸುತ್ತಿದೆ. ಈ ಹಂತದಲ್ಲಿ ಮತ್ತೆ ದುರಂತದ ನೆನಪು. ಅಲ್ಲಿ ನಾನು ಪ್ರತ್ಯಕ್ಷ ಕಂಡುಬಂದ ನರಕ ಮನಃಪಟಲದಲ್ಲಿ ಸುಳಿದು ಹೋಗುತ್ತಿದೆ. ಇನ್ನೂ ಅಲ್ಲಿ ಎಲ್ಲವೂ ಸರಿ ಆಗಿಲ್ಲ. ಆ ಮೇಘಸ್ಫೋಟ ಸಂಭವಿಸಿದ್ದು ನಾಲ್ಕೇನಾಲ್ಕು ದಿನ (ಜೂನ್ 14-17). ಆದರೆ ಅದರಿಂದ ತತ್ತರಿಸಿದ ರಾಜ್ಯಕ್ಕೆ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರೆ ಅನಾಹುತದ ಪ್ರಮಾಣವನ್ನು ಎಂಥವರೂ ಊಹಿಸಿಕೊಳ್ಳಬಹುದು. ಕುಂಭದ್ರೋಣ ಮಳೆಯೊಂದಿಗೆ ಹಿಮಕುಸಿತವೂ ಸೇರಿಕೊಂಡರೆ ನದಿಗಳಲ್ಲಿ ಪ್ರವಾಹ ಬರದೇ ಇನ್ನೇನಾಗಬೇಕು? ರಸ್ತೆ, ಸೇತುವೆ, ಕಟ್ಟಡ, ವಾಹನಗಳು, ವಿದ್ಯತ್ ಉತ್ಪಾದನೆಗೆ ಸಜ್ಜಾಗುತ್ತಿದ್ದ ಸ್ಥಾವರಗಳು... ಎಲ್ಲವೂ ನಿರ್ನಾಮ. ಹಿಮಾಲಯದ ತಪ್ಪಲಿನಲ್ಲೇ ಇದ್ದ ಚಾರ್ಧಾಮ್ (ಗಂಗೋತ್ರಿ, ಯಮುನೋತ್ರಿ, ಬದರಿ, ಕೇದಾರ) ಯಾತ್ರೆಗೆ ತೆರಳಿದ್ದ ಲಕ್ಷಾಂತರ ಮಂದಿಯನ್ನು ವಾಯುಪಡೆ ಸಿಬ್ಬಂದಿ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಆರೇಳು ದಿನಗಳೇ ಬೇಕಾದವು. ಶತಮಾನದ ಅತ್ಯಂತ ಭೀಕರ ದುರಂತ ಅದು. ಸರ್ಕಾರದ ಹೇಳಿಕೆ ಪ್ರಕಾರವೇ ಸತ್ತವರು 6,000 ಜನ, ಉತ್ತರಾಖಂಡ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚು ಜನ ನಿರಾಶ್ರಿತರಾಗಿದ್ದರು. ಅದು ಸರ್ಕಾರದ ಲೆಕ್ಕ.
ಇಂಥದ್ದೊಂದು ದುರಂತ ಅನಿರೀಕ್ಷಿತವೇನೂ ಆಗಿರಲಿಲ್ಲ. ಕೇಂದ್ರ ಸರ್ಕಾರದಿಂದ ಹಿಡಿದು ಪರಿಸರವಾದಿಗಳು, ವಿಜ್ಞಾನಿಗಳವರೆಗೆ ಎಲ್ಲರೂ ಉತ್ತರಾಖಂಡ ಸರ್ಕಾರವನ್ನು ಎಚ್ಚರಿಸುತ್ತಲೇ ಇದ್ದರು. ಅದರಲ್ಲೂ ಹಿಮಕಣಿವೆಗಳಲ್ಲಿ ಅಣೆಕಟ್ಟೆಗಳನ್ನು ಕಟ್ಟಿ ನದಿ ಪಾತ್ರಗಳನ್ನೇ ತಿರುಗಿಸುವುದರ ವಿರುದ್ಧ, ಚಾರ್ಧಾಮ್ನಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಧಾರಣ ಸಾಮರ್ಥ್ಯಕ್ಕೆ ವಿರುದ್ಧವಾಗಿ ಕಟ್ಟಡಗಳನ್ನು ನಿರ್ಮಿಸುವುದರ ವಿರುದ್ಧ, ಮಿತಿಮೀರಿ ಪ್ರವಾಸಿಗರು ಭೇಟಿ ನೀಡುತ್ತಿರುವುದರ ವಿರುದ್ಧ (ಚಾರ್ಧಾಮ್ ಯಾತ್ರಾ ಸ್ಥಳಕ್ಕಿಂತ ಮೋಜಿನ ಪ್ರವಾಸಿ ತಾಣವಾಗಿ ರೂಪುಗೊಂಡಿತ್ತು) ಆತಂಕ ವ್ಯಕ್ತಪಡಿಸುತ್ತಲೇ ಇದ್ದರು. ಕಿವಿಯನ್ನು ಮೊದಲೇ ಕಳೆದುಕೊಂಡಿದ್ದ ಸರ್ಕಾರ ಕಣ್ಣುಗಳನ್ನೂ ಕಳೆದುಕೊಂಡಿತ್ತು. ದೇಶದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಹುಮ್ಮಸ್ಸಿನಲ್ಲಿದ್ದವರಿಗೆ ವಿರೋಧಿಗಳ ಕಾಳಜಿ ಅರ್ಥವಾಗಲೇ ಇಲ್ಲ. ಪ್ರಕೃತಿಯಾದರೂ ಎಷ್ಟಂತ ತಾಳಿಕೊಂಡೀತು? ಅಂಥದ್ದೊಂದು ದಿನವೂ ಬಂದುಬಿಟ್ಟಿತು ನೋಡಿ. ಈಗ ಉತ್ತರಾಖಂಡ ಸರ್ಕಾರ ನಿತ್ಯವೂ ಮುಟ್ಟಿ ನೋಡಿಕೊಳ್ಳಬೇಕಾದ ಸ್ಥಿತಿ.
ಭೂಗರ್ಭ ಶಾಸ್ತ್ರಜ್ಞರಿಗೆ ಉತ್ತರಾಖಂಡದ ದುರಂತ ಯಾವುದೇ ಅಚ್ಚರಿ ಉಂಟುಮಾಡಿಲ್ಲ. ವೈಜ್ಞಾನಿಕ ಅಂದಾಜಿನ ಪ್ರಕಾರ, ಹಿಮಾಲಯದ ಸುನಾಮಿಯಲ್ಲಿ ಸಾವಿರಾರು ಜೀವ ಹಾನಿಯಾದುದರಲ್ಲಿ ಅತಿಶಯವೇನೂ ಇಲ್ಲ. ಹಿಮಾಲಯ ಪ್ರದೇಶದ ಅಧ್ಯಯನಿಗಳು ಹೇಳುವ ಪ್ರಕಾರ ಇದು ನಿರೀಕ್ಷಿತ, ಸರಕಾರ ಮಾತ್ರ ಈ ಬಗ್ಗೆ ಕಣ್ಣು ಮುಚ್ಚಿ ಕುಳಿತಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಪರಿಸರವನ್ನು ರಕ್ಷಿಸಬೇಕೆಂಬ ಬಗ್ಗೆ ಹೇಳುತ್ತಲೇ ಬರಲಾಗುತ್ತಿತ್ತು. ಆದರೆ ಇದನ್ನು ದುರಂತದ ಕ್ಷಣದವರೆಗೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬುದು ಭೂಗರ್ಭ ಶಾಸ್ತ್ರಜ್ಞರ ಅಭಿಮತ.
ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ (ಜಿಎಸ್ಐ) ಗ್ಲೇಸಿಯಾಲಜಿಸ್ಟ್ಗಳು ಕೇದಾರನಾಥ ಮತ್ತು ಸುತ್ತಲಿನ ಪ್ರದೇಶದಲ್ಲಿ ನಿಖರ ಅಧ್ಯಯನ ನಡೆಸಿದ್ದರು. ಜಿಎಸ್ಐನ ಹಿಂದಿನ ನಿರ್ದೇಶಕ ಹಾಗೂ ನುರಿತ ಗ್ಲೇಸಿಯಾಲಜಿಸ್ಟ್ ದೀಪಕ್ ಶ್ರೀವಾಸ್ತವ ಮತ್ತು ಅವರ ತಂಡ ಪ್ರವಾಹದ ಬಳಿಕ ಕೇದಾರ ಸುತ್ತಲಿನ ಪ್ರದೇಶದಲ್ಲಿ ಪ್ರವಾಸ ನಡೆಸಿ ಕಾರಣಗಳನ್ನು ಹುಡುಕಿದೆ. ಈಗ ಸಂಭವಿಸಿದ ಘಟನೆಗೆ ಅವರು ನೀಡುವ ಕಾರಣ ಮತ್ತು ದುರಂತದ ಪ್ರಮಾಣದಲ್ಲಿ ಸಹಜತೆ ಇದೆ. ಕೇದಾರ ಪ್ರದೇಶದಲ್ಲಿ ಸೀಸನ್ನಲ್ಲಿ ಏರ್ಪಡುತ್ತಿರುವ ನೂಕುನುಗ್ಗಲು, ಈ ಪ್ರದೇಶದ ಯಾತ್ರಿಗಳ ಸಂಖ್ಯೆಯಲ್ಲಿನ ಮಿತಿ ಮೀರಿದ ಹೆಚ್ಚಳ ಇತ್ತೀಚಿನ ವರ್ಷಗಳಲ್ಲಿ ಪರಿಸರಕ್ಕೆ ಅಪಾರ ಧಕ್ಕೆ ಉಂಟುಮಾಡುತ್ತಿತ್ತು. ವಿವಿಧ ವಿದ್ಯುತ್ ಯೋಜನೆಗಳ ನಿರ್ಮಾಣ ಕಾರ್ಯ, ಹೋಟೆಲ್ಗಳು, ವಸತಿ ಗೃಹಗಳು, ಆಶ್ರಮಗಳು, ಚಿಕ್ಕಪುಟ್ಟ ವ್ಯಾಪಾರಿ ಸ್ಥಳಗಳು ನಿರಂತರ ತಲೆ ಎತ್ತುತ್ತಲೇ ಇದ್ದವು.
ಡೆಹ್ರಾಡೂನ್ನ ಪೀಪಲ್ಸ್ ಸೈನ್ಸ್ ಇನ್ಸ್ಟಿಟ್ಯೂಟ್ನ ರವಿ ಚೋಪ್ರಾ ಪ್ರಕಾರ, ಈ ಭೂಪ್ರದೇಶದಲ್ಲಿನ ಭಾರಿ ಅನ್ವೇಷಣೆಯ ನಂತರ ಸಾಬೀತಾದ ಅಂಶವೆಂದರೆ ಮೇಘ ಸ್ಫೋಟ ಮತ್ತು ಪರ್ವತಗಳು ವಿಚಿತ್ರವಾದ ಪರಸ್ಪರ ಸಂಬಂಧವನ್ನು, ಹೊಂದಾಣಿಕೆಯನ್ನು ಹೊಂದಿವೆ. ಮೇಘ ಸ್ಫೋಟದಿಂದ ಭೂಮಿಗೆ ಧುಮುಕುವ ನೀರು, ಅದರ ಹರಿವು ಮತ್ತು ಅದರಿಂದಾಗುವ ಹಾನಿಯ ಮಟ್ಟವನ್ನು ಕಡಿಮೆ ಮಾಡುವುದು ಪರ್ವತಗಳಿಂದ ಮಾತ್ರ ಸಾಧ್ಯ. ಕೇದಾರನಾಥ ಟೌನ್ಶಿಪ್ ತಂಪಾದ ಹಿಮಮಯವಾದ ಶ್ರೇಣಿಯಲ್ಲಿದೆ. ಮಂದಾಕಿನಿ ನದಿಗೆ ಮೂಲ ನೀರು ಬರುವುದು ಚೌರಾಬಾರಿ ಮತ್ತು ಅದರೊಂದಿಗಿನ ಅಗಣಿತ ಹಿಮಜಲ ಬುಗ್ಗೆಗಳಿಂದ. ಅವೆಲ್ಲಾ ವೃತ್ತಾಕಾರದಲ್ಲಿ ಹರಿದು ಕೆಳಗಿನ ಕೇದಾರ ನಗರವನ್ನು ಬಳಸಿ ಹರಿಯುತ್ತವೆ. ಈ ಸರೋವರಗಳಲ್ಲಿ ಮಂಜಿನ ಸವಕಳಿ ಸಹಜ. ಹಿಮಾಲಯ ಶ್ರೇಣಿಯಲ್ಲಿನ ಜನ ದಟ್ಟಣೆ ಮೇಲ್ಪದರದಲ್ಲಿ ಹಿಮ ಕುಸಿಯುವಂತೆ ಮಾಡಿ ಈ ಸ್ಥಳದಲ್ಲಿರುವ ನದಿಯ ಒತ್ತಡವನ್ನು ಹೆಚ್ಚಿಸುತ್ತದೆ.
ಹಿಮದ ಕುಸಿತಕ್ಕೆ ಕಾರಣಗಳು ಹಲವು. ಅಂದರೆ ನೈಸರ್ಗಿಕವಾಗಿ ಹಿಮ ಜರುಗುವುದು, ಹೊರಗಿನ ಮತ್ತು ಮೆಕ್ಯಾನಿಕಲ್ ಒತ್ತಡಗಳು, ಇಳಿಜಾರಿನ ಸ್ಥಿತಿಗಳು ಮತ್ತು ಜಿಯೊ ಮಾರ್ಫೊಲಾಜಿಕ್ (ಭೂಭಾಗಗಳ ಪ್ರದೇಶದ ಅಧ್ಯಯನ ಮಾಡುವುದು) ಇರುವ ರೀತಿಯ ಮೇಲೆ ಅವಲಂಬಿಸಿದೆ. ಕೇದಾರನಾಥ ನಗರದಲ್ಲಿ ಚಳಿಗಾಲದಲ್ಲಿ, ಒಂದು ಹಿಮ ಮಳೆಯು ಎರಡು ಮೀಟರ್ಗಳಷ್ಟು ವೇಗವಾಗಿ ಹಿಮವನ್ನು ಮುಚ್ಚಬಲ್ಲದು. ಕೇದಾರ ನಾಥದ ಹಿಂಭಾಗದಲ್ಲಿರುವ ಬಟ್ಟಲಾಕಾರದ ಸರೋವರವು, ಕಣಿವೆಯಲ್ಲಿ ಬಿರುಗಾಳಿಯನ್ನು, ಸೈಕ್ಲೋನಿಕ್ ಅಲೆಗಳನ್ನು ಉಂಟುಮಾಡುವುದು. ಸರ್ಕಾರ ಇದಾವುದನ್ನೂ ಅರಿಯದೆ ಸಾಲುಸಾಲು ಜಲವಿದ್ಯುತ್ ಯೋಜನೆಗಳ ಕಾಮಗಾರಿ ಆರಂಭಿಸಿದ್ದುಸ್ವಾಭಾವಿಕವಾಗಿಯೇ ಅಲ್ಲಿನ ಭೌಗೋಳಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿತು.   
ಮಂದಾಕಿನಿ ಕಣಿವೆಯ ಮೇಲಿನ ಭಾಗದಲ್ಲಿ, ಕೇವಲ ಆಲ್ಪೈನ್ನಂತಹ ಹುಲ್ಲು ಮಾತ್ರ ಬೆಳೆಯುತ್ತದೆ. ಗರುಡ್ ಗಾಟ್ಟಿಯ ಸುತ್ತಲಿನ ಕಣಿವೆಯಲ್ಲಿ ಪೊದೆಗಳು ಬೆಳೆಯುತ್ತವೆ. ಘುನಿಂದೆರ್ ಪಾನಿಯಲ್ಲಿ ಪೈನ್ ಮತ್ತು ಬರ್ಚ್ ಮರಗಳು ಬೆಳೆಯುತ್ತವೆ. ಈ ಇಳಿಜಾರು ಪ್ರದೇಶಗಳು ಹಿಮದ ಕುಸಿಯುವಿಕೆಯನ್ನು ತಡೆಯಲು ಸಶಕ್ತವಾಗಿರುವುದಿಲ್ಲ. ಈ ಭಾಗವು ಹಿಮದ ಕುಸಿತವನ್ನು ತಡೆಯುವ ತಡೆಗೋಡೆಯಂತೆ ವರ್ತಿಸುವುದಿಲ್ಲ. ಇನ್ನೊಂದು ಕಡೆಯಲ್ಲಿ ನೋಡಿದರೆ, ಯಾವುದೇ ಬಲವಾದ ತಡೆಗೋಡೆಯು ನೈಸರ್ಗಿಕವಾಗಿ ಇಲ್ಲ, ಆದ್ದರಿಂದಲೇ ಅಷ್ಟು ಸುರಕ್ಷಿತವಲ್ಲ. ಎಡಭಾಗದಲ್ಲಿ ಕೇದಾರಕ್ಕೆ ಉತ್ತಮ ತಡೆಗೋಡೆ ಇದ್ದರೂ ಬಲಭಾಗದಲ್ಲಿ ಯಾವುದೇ ರೀತಿಯ ನೈಸರ್ಗಿಕ ತಡೆಗೋಡೆ ಇಲ್ಲ. ತಕ್ಕಮಟ್ಟಿಗೆ ವಿಸ್ತಾರವಾದ ಸುಂದರ ಸ್ಥಳವಾದ ಇಲ್ಲಿ ಜನರು ಕಟ್ಟಡ ಮುಂತಾದವುಗಳನ್ನು ಕಟ್ಟಲು ಮನಸ್ಸು ಮಾಡುತ್ತಾರೆ. ಆದರೆ ಬಲಭಾಗದ ಪ್ರದೇಶವನ್ನು ಮಾನವ ಹಸ್ತಕ್ಷೇಪವಿಲ್ಲದ ಹಾಗೆ ಇರಿಸಬೇಕು ಎಂದು ದೀಪಕ್ ಶ್ರೀವಾಸ್ತವ ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಹಿಮ ಕುಸಿತಗಳು ಪರ್ವತ ಶ್ರೇಣಿಯಲ್ಲಿ ಕಂಡುಬರುವುದಿಲ್ಲ, ಆದರೆ ಒಮ್ಮೆ ಹಿಮಕುಸಿತವಾದರೆ ನಂತರ ಹಲವು ಹಿಮಕುಸಿತಗಳು ಒಂದೇ ಬಾರಿ ಉಂಟಾಗುತ್ತವೆ.  
ಶ್ರೀವಾಸ್ತವ ಅವರು 28 ಕುಸಿತದ ಸ್ಥಳಗಳನ್ನು ಗುರುತಿಸಿದ್ದಾರೆ. ಇದು 3,888-4,000 ಮೀಟರ್ಗಳ ಅಕ್ಷಾಂಶಗಳ ನಡುವೆ ಬರುತ್ತದೆ. ಪ್ರತಿ ಕುಸಿತವು ಸುಮಾರು 900 ಮೀಟರ್ಗಳ ಪ್ರವಾಹದ ಮಾರ್ಗ ಹೊಂದಿರುತ್ತದೆ. ಸರಾಸರಿ ಹಿಮಪ್ರಮಾಣ 70,891 ಕ್ಯುಬಿಕ್ ಮೀಟರ್. ಪ್ರಭಾವಿಸಬಲ್ಲ ಒತ್ತಡ ಪ್ರತಿ ಕ್ಯುಬಿಕ್ ಮೀಟರ್ಗೆ 84.8 ಟನ್. ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ, 10 ಟನ್ಗಳ ವೇಗ ಪ್ರತಿ ಕ್ಯುಬಿಕ್ ಮೀಟರ್ ಅನ್ನೇ ಬುಡಮೇಲು ಮಾಡಬಲ್ಲುದು, ಪ್ರತಿ ಕ್ಯುಬಿಕ್ ಮೀಟರ್ಗೆ 100 ಟನ್ ವೇಗ ಇದ್ದರೆ ಅದು ಸ್ಥಿರವಾದ ಕಟ್ಟಡಗಳನ್ನೂ ನೆಲಸಮ ಮಾಡುವುದು. ಕೇದಾರ ಕಣಿವೆಯಲ್ಲಿ ಉಂಟಾದ ಹಿಮಪ್ರವಾಹ ಇಷ್ಟು ಶಕ್ತಿಯುತವಾದದ್ದು. ಹೀಗಾಗಿಯೇ ಎಷ್ಟೋ ಊರುಗಳು ಹೇಳ ಹೆಸರಿಲ್ಲದಂತಾಗಿ ಹೋದವು. ದೊಡ್ಡದೊಡ್ಡ ಕಟ್ಟಡಗಳೂ ಕೊಚ್ಚಿಕೊಂಡು ಹೋದವು.
ಶ್ರೀವಾಸ್ತವ ಅವರು 1985ರಿಂದ ಈ ಪ್ರದೇಶಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ನಿರ್ಮಾಣ ಚಟುವಟಿಕೆಗಳೇ ಇಲ್ಲಿ ಭೂಮಿಯನ್ನು ದುರ್ಬಲಗೊಳಿಸಿವೆ ಎನ್ನುವುದನ್ನು ಪದೇಪದೆ ಹೇಳುತ್ತಲೇ ಬಂದಿದ್ದಾರೆ. ಜಿಎಸ್ಐನ ಇನ್ನೊಬ್ಬ ಮಾಜಿ ನಿರ್ದೇಶಕ ಡಾ.ವಿ.ಕೆ. ಜೋಶಿ ಹೇಳುವುದೂ ಅದನ್ನೇ. ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದೆ ಎನ್ನುವುದು ಅವರ ಕಳವಳ. ವಿಜ್ಞಾನಿಗಳ ಪ್ರಕಾರ ಇಂಥಾ ಅಪಾಯದ ಸ್ಥಳದಲ್ಲಿ ನಿರ್ಮಾಣ ಕಾರ್ಯಗಳನ್ನು ನಡೆಸದಿದ್ದರೆ ವಿಕೋಪ ಇಷ್ಟು ತೀವ್ರವಾಗಿ ಹಾನಿ ಮಾಡುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಒಂದು ಮಿತಿಯಲ್ಲಿ ನಿಲ್ಲಿಸುವುದು ಅಗತ್ಯ. ಪರಿಸರ ಹಾನಿ ನಿಲ್ಲಿಸುವುದು ಅನಿವಾರ್ಯ (ಮರ ಕಡಿಯುವುದು, ಜಲ ವಿದ್ಯುತ್ ಯೋಜನೆಗಳು, ಕಟ್ಟಡಗಳನ್ನು ಸಮರ್ಪಕವಾಗಿ ಇಳಿಜಾರಿನ ವ್ಯವಸ್ಥೆ ಮಾಡದೆ ಕಟ್ಟುವುದು ಇತ್ಯಾದಿ). ಅದು ಉತ್ತರಾಖಂಡ ಸರ್ಕಾರಕ್ಕೆ ಈಗಲಾದರೂ ಅರ್ಥವಾದರೆ ಒಳ್ಳೆಯದು.


- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com