ಮಾತೆಯನ್ನೂ ಉಳಿಸಿಕೊಳ್ಳಲಾಗದಿದ್ದರೆ ನಾವೆಂಥ ಮಕ್ಕಳು?

ಅವಳು ಮಮತಾಮಯಿ. ಏನು ಮಾಡಿದರೂ ಸಹಿಸಿಕೊಳ್ಳುತ್ತಾಳೆ. ಎಲ್ಲವನ್ನೂ ಒಡಲಲ್ಲಿ...
ಮಾತೆಯನ್ನೂ ಉಳಿಸಿಕೊಳ್ಳಲಾಗದಿದ್ದರೆ ನಾವೆಂಥ ಮಕ್ಕಳು?

ಅವಳು ಮಮತಾಮಯಿ. ಏನು ಮಾಡಿದರೂ ಸಹಿಸಿಕೊಳ್ಳುತ್ತಾಳೆ. ಎಲ್ಲವನ್ನೂ ಒಡಲಲ್ಲಿ ಹಾಕಿಕೊಳ್ಳುತ್ತಾಳೆ. ಇನಿತೂ ಕೋಪಿಸಿಕೊಳ್ಳದೆ ನಮ್ಮನ್ನು ಪೊರೆಯುತ್ತಾಳೆ. ಎಷ್ಟೇ ಪೀಡಿಸಿ, ಕಾಡಿಸಿ, ನೋವು ಕೊಟ್ಟರೂ ಆಕೆ ಒಮ್ಮೆಯೂ ಸಿಟ್ಟಿಗೆದ್ದಿದ್ದೇ ಇಲ್ಲ. ತಾಳ್ಮೆ ಎನ್ನುವ ಪದದ ಅನ್ವರ್ಥಕ ಅವಳು. ಹಾಗಂತ ನಾವುಇನ್ನಿಲ್ಲದ ಪರಿಯಲ್ಲಿ ಶೋಷಿಸುವುದು ಸರಿಯೇ? ನಮ್ಮ ಕಾಟ ತಾಳಲಾಗದೆ, ಅನುಭವಿಸುತ್ತಿರುವ ಸಂಕಟವನ್ನು ಬಾಯಿ ಬಿಟ್ಟು ಹೇಳಲಾಗದೆ ಒಂದು ದಿನ ಅವಳು ತನ್ನ ಭೌತಿಕ ಅಸ್ತಿತ್ವವನ್ನೇ ಇಲ್ಲವಾಗಿಸಿಕೊಂಡು ಬಿಟ್ಟರೆ?
ಭಾರತೀಯರೆಲ್ಲರ ಮಾತೆಯಾಗಿರುವ ಗಂಗೆಯ ಕುರಿತು ಇಂಥದ್ದೊಂದು ಕಳವಳಪಡಲು ಕಾರಣವಿದೆ. ನಮ್ಮ ತ್ಯಾಜ್ಯಗಳನ್ನೆಲ್ಲ ಅವಳ ಮಡಿಲಿಗೆ ಸುರಿಯುವ ಮೂಲಕ ನಾವು ಕೇವಲ ಮಲಿನಗೊಳಿಸಿಲ್ಲ, ಅವಳ ಇರುವಿಕೆಗೇ ಅಪಾಯ ತಂದೊಡ್ಡಿದ್ದೇವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ 'ಗಂಗಾ ಎನ್ನುವ ನದಿ ಇತ್ತು, ಅದು ಭಾರತೀಯರ ಪಾಲಿಗೆ ದೇವನದಿಯಾಗಿತ್ತು' ಎಂದು ನಮ್ಮ ಮೊಮ್ಮಕ್ಕಳು ಇತಿಹಾಸದ ಪಠ್ಯದಲ್ಲಿ ಓದಬೇಕಾಗಿ ಬಂದೀತು.
ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಗಂಗಾ ಶುದ್ಧೀಕರಣದ ಮಾತುಗಳನ್ನು ಆಡುತ್ತಿದೆ. ಚುನಾವಣೆಗೆ ಮುನ್ನ ವಾರಾಣಸಿ ಪ್ರಚಾರ ಸಭೆಯಲ್ಲೂ ಮೋದಿ, 'ನನ್ನನ್ನು ಗಂಗಾ ಮಾತೆಯೇ ಇಲ್ಲಿಗೆ ಕರೆಸಿಕೊಂಡಿದ್ದಾಳೆ. ಅವಳನ್ನು ಮತ್ತೆ ಪರಿಶುದ್ಧಗೊಳಿಸುವ ಹೊಣೆ ನನ್ನದು' ಎಂದಿದ್ದರು. ಅಧಿಕಾರ ವಹಿಸಿಕೊಂಡ ದಿನವೇ ಗಂಗಾ ಪುನರುಜ್ಜೀವನಕ್ಕೆ ಪ್ರತ್ಯೇಕ ಸಚಿವಾಲಯವನ್ನೇ ತೆರೆಯುವ ಮೂಲಕ ತಮ್ಮ ಬದ್ಧತೆ ತೋರಿಸಿದ್ದಾರೆ. ಗಂಗಾ ಶುದ್ಧೀಕರಣಕ್ಕೆ ಪರಸ್ಪರ ಸಮಾಲೋಚಿಸಿ ಯೋಜನೆ ರೂಪಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಿದ್ದಾರೆ. ಗಂಗೆಯ ಸಾನ್ನಿಧ್ಯದಲ್ಲೇ ಬೆಳೆದ ಉಮಾಭಾರತಿ ಅವರಿಗೆ ಮಾತೆಯನ್ನು ಕಾಪಾಡುವ ಹೊಣೆಗಾರಿಕೆ ವಹಿಸಿದ್ದಾರೆ. ಗಂಗೆಯಲ್ಲಿ ಉಗುಳಿದರೆ, ತ್ಯಾಜ್ಯ ಬಿಸಾಡಿದರೆ ಮೂರು
ತಿಂಗಳು ಜೈಲು ಅಥವಾ 10,000 ರುಪಾಯಿ ದಂಡದ ಪ್ರಸ್ತಾವನೆಯನ್ನು ಸಚಿವೆ ಸಿದ್ಧಪಡಿಸಿದ್ದಾರೆ. ಇನ್ನೊಂದೆಡೆ ಗಂಗಾ ದಡದ 16 ಪ್ರಮುಖ ನಗರಗಳ ಅಭಿವೃದ್ಧಿ ಜತೆಗೆ ಈ ನದಿಯನ್ನು ಸಾರಿಗೆ ಮಾರ್ಗವಾಗಿ ಬಳಸಿಕೊಳ್ಳುವ ಯೋಜನೆಯನ್ನು ಸಾರಿಗೆ ಸಚಿವರು ಮುಂದಿಟ್ಟಿದ್ದಾರೆ.
ಆದರೆ, ಗಂಗೆಯನ್ನು ಸತತ 40 ವರ್ಷಗಳಿಂದ ನೋಡುತ್ತ ಬಂದಿರುವ, ಅವಳನ್ನು ಉಳಿಸಿಕೊಳ್ಳಲು ಅವಿರತ ಹೋರಾಡುತ್ತಿರುವ ಪರಿಸರ ತಜ್ಞ ಪ್ರೊ.ಬಿ.ಡಿ.ತ್ರಿಪಾಠಿ ಹೇಳುತ್ತಾರೆ- ನಮಗೀಗ ತುರ್ತಾಗಿ ಬೇಕಿರುವುದು 'ಗಂಗಾ ಉಳಿಸಿ' ಕಾರ್ಯಕ್ರಮವೇ ವಿನಾ 'ಗಂಗಾ ಸ್ವಚ್ಥಗೊಳಿಸಿ' ಯೋಜನೆ ಅಲ್ಲ. ಹೀಗೆ ಹೇಳುವಾಗ ಅವರ ಮುಖದಲ್ಲಿ ಗಂಗೆ ಎಲ್ಲಿ ಮರೆಯಾಗಿ ಬಿಡುತ್ತಾಳೊ ಎನ್ನುವ ಕಳವಳ, ಅವಳನ್ನು ಉಳಿಸಿಕೊಳ್ಳಲು ನಾವು ಪ್ರಾಮಾಣಿಕ ಪ್ರಯತ್ನವನ್ನೇ ಮಾಡುತ್ತಿಲ್ಲ ಎನ್ನುವ ವಿಷಾದ ಎರಡೂ ಒಟ್ಟೊಟ್ಟಿಗೇ ಕಾಣಿಸಿಕೊಳ್ಳುತ್ತವೆ. 'ನಮ್ಮ ಆದ್ಯತೆ ಗಂಗೆಯನ್ನು ರಕ್ಷಿಸಿಕೊಳ್ಳುವುದು. ಅವಳು ಉಳಿದರೆ ತಾನೆ ಅವಳನ್ನು ಸ್ವಚ್ಛಗೊಳಿಸುವ ಮಾತು' ಎಂದು ನೋವಿನಿಂದ ಪ್ರಶ್ನಿಸುತ್ತಾರೆ ಅವರು.
ತ್ರಿಪಾಠಿಯವರ ಮಾತಿಗೆ ಪುರಾವೆ ಎನ್ನುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯೂ ಇದೆ. ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಗಂಗೆಯನ್ನು ನಂಬಿ ಬದುಕು ಸಾಗಿಸುವಂತೆಯೇ ಇಲ್ಲ. ಬಳಸಲು ಯೋಗ್ಯವಲ್ಲದ ರೀತಿಯಲ್ಲಿ ನದಿಯನ್ನು ಮಲಿನಗೊಳಿಸಲಾಗಿದೆ. ಹರಿದ್ವಾರದಿಂದ ಮುಂದಕ್ಕೆ ಗಂಗಾ ನೀರು ಕುಡಿಯುವುದಿರಲಿ, ಸ್ನಾನ ಮಾಡಲೂ ಯೋಗ್ಯವಲ್ಲ. ಇತರೆ ಉದ್ದೇಶಗಳಿಗೆ ಈ ನೀರು ಬಳಸಿಕೊಳ್ಳುವುದು ದೂರದ ಮಾತು ಎನ್ನುವುದು ಮಂಡಳಿ ಎಚ್ಚರಿಕೆ. ಹರಿದ್ವಾರದಲ್ಲಿ ಗಂಗಾ ನೀರಿನಲ್ಲಿ ಕೊಲಿಫಾರಂ ಬ್ಯಾಕ್ಟಿರೀಯಾ ಅಪಾಯಕಾರಿ ಮಟ್ಟವನ್ನೂ ದಾಟಿಬಿಟ್ಟಿದೆ. ಈ ಬ್ಯಾಕ್ಟೀರಿಯಾ ಕುಡಿಯುವ ನೀರಿನಲ್ಲಿ ಪ್ರತಿ 100 ಮಿಲಿಲೀಟರ್ 50 ಎಂಪಿಎನ್ ಇರಬೇಕು. ಆದರೆ ಅಲ್ಲಿನ ಗಂಗಾನೀರಿನಲ್ಲಿ ಇದು 5,500 ಎಂಪಿಎನ್ ಇದೆ.
ನಮ್ಮ ಸಂಸ್ಕೃತಿಯಲ್ಲಿ ಗಂಗೆ ಪಡೆದಿರುವ ಸ್ಥಾನದ ಬಗ್ಗೆ ಹೇಳಬೇಕಾಗಿಯೇ ಇಲ್ಲ. ಆಕೆ ನಮಗೆ ಪ್ರತ್ಯಕ್ಷ ದೇವತೆ.  ಪೂಜೆ ಮಾಡುವಾಗ 'ಗಂಗೇಚ ಯುಮನೇಚೈವ ಗೋದಾವರೀ ಸರಸ್ವತಿ/ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು' ಎಂದು ಕಲಶದ ನೀರಿಗೆ ಸಪ್ತನದಿಗಳನ್ನು ಆವಾಹಿಸಿಕೊಳ್ಳುವಾಗಲೂ ಗಂಗೆಗೇ ಆದ್ಯತೆ. ಮನೆಮನೆಗಳಲ್ಲಿ ಪುಟ್ಟದೊಂದು ಗಿಂಡಿಯಲ್ಲಾದರೂ ಗಂಗಾ ಜಲ ಇಟ್ಟುಕೊಂಡಿರುತ್ತೇವೆ, ಮಾತ್ರವಲ್ಲ ಅದನ್ನು ದೇವರಪೀಠದಲ್ಲಿಟ್ಟು ನಿತ್ಯ ಪೂಜಿಸುತ್ತೇವೆ. ಹಿರಿಜೀವಗಳು ಇನ್ನೇನು ಕೊನೆ ಉಸಿರು ಎಳೆಯುತ್ತಿದ್ದಾರೆ ಎನ್ನುವ ಕ್ಷಣದಲ್ಲಿ ಅವರ ಬಾಯಿಗೆ ಗಂಗಾ ಜಲ ಹಾಕಿ, ಕರ್ಮ ಕಳೆದುಕೊಂಡು ಪುನೀತರಾದ ಭಾವನೆ ಮೂಡಿಸುತ್ತೇವೆ. ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಎಂದರೆ ನಮ್ಮ ಜನ್ಮಾಂತರದ ಕೊಳೆಗಳನ್ನು ಕಳೆದುಕೊಂಡು ಶುದ್ಧರಾಗಿದ್ದೇವೆ ಎಂಬ ಭಾವನೆ. ಬದುಕಿನಲ್ಲಿ ಒಮ್ಮೆಯಾದರೂ ಗಂಗೆಯಲ್ಲಿ ಮಿಂದೇಳಬೇಕು ಎನ್ನುವ ಕನಸು ಕಾಣದವರು ಯಾರಾದರೂ ಇದ್ದರೆ ಹೇಳಿ. ದೌರ್ಭಾಗ್ಯ ಏನು ಗೊತ್ತಾ? ಹೀಗೆ ಭಾರತೀಯರ ಮನೆ,ಮನಗಳಲ್ಲಿ ಬೆಸೆದುಕೊಂಡಿರುವ ಗಂಗೆ, ಕೇವಲ ಭಾರತೀಯ ಸಂಸ್ಕೃತಿಯ ಪ್ರತೀಕವಲ್ಲ, ನಮ್ಮ ಜಡ್ಡುಗಟ್ಟಿದ ವ್ಯವಸ್ಥೆಯ ಪ್ರತಿಬಿಂಬವೂ ಆಗಿಬಿಟ್ಟಿದ್ದಾಳೆ ಎನ್ನುವುದು. ಅದಕ್ಕೆ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ.
ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಕನಿಷ್ಠ ಪ್ರಜ್ಞೆಯೂ ಇಲ್ಲದ ನಿರ್ಲಜ್ಜರು ನಾವು. ಹೊರಗಿನವರು ಏನಾದರೂ ಅಂದುಕೊಂಡಾರು ಎನ್ನುವ ಸಣ್ಣದೊಂದು ನಾಚಿಕೆಯೂ ನಮ್ಮಲ್ಲಿಲ್ಲ. ಮೂವತ್ತು ವರ್ಷಗಳಿಂದ ಸಾವಿರಾರು ಕೋಟಿ ರುಪಾಯಿಗಳ ಯೋಜನೆಗಳನ್ನು ರೂಪಿಸುತ್ತಿದ್ದರೂ, ಗಂಗೆಯನ್ನು 'ರಾಷ್ಟ್ರೀಯ ನದಿ' ಎಂದು ಘೋಷಿಸಿಕೊಂಡಿದ್ದರೂ ಅವಳ ಒಡಲು ತಂಪಾಗಿಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದಾದರೆ ನಾವೆಂಥ ಪಾಪಿಷ್ಠ ಮಕ್ಕಳು?
ಗಂಗೋತ್ರಿಯಲ್ಲಿ ಹುಟ್ಟುವ ಗಂಗೆ ಉತ್ತರಾಖಂಡ, ಉತ್ತರಪ್ರದೇಶ, ಜಾರ್ಖಂಡ್, ಬಿಹಾರ, ಪಶ್ಚಿಮ ಬಂಗಾಳಗಳಲ್ಲಿ ಹರಿದು ಬಂಗಾಳಕೊಲ್ಲಿ ಸೇರುತ್ತಾಳೆ. 2,500 ಕಿ.ಮೀಗಳಲ್ಲಿ ಅವಳದು ಒಂದು ಕಾಲದಲ್ಲಿ ಘನಗಂಭೀರ ಹರಿವು. ಆದರಿಂದು ಅವಳ ಅಸ್ತಿತ್ವಕ್ಕೇ ಸಂಚಕಾರ. ಬಹುತೇಕರು ತಿಳಿದುಕೊಂಡಿರುವುದು ಕಾಶಿಯಲ್ಲಿ ಅರೆಬೆಂದ ಹೆಣಗಳನ್ನು ನದಿಗೆ ಎಸೆಯುವುದರಿಂದ, ಚಿತಾಭಸ್ಮ ಬಿಡುವುದರಿಂದ ಗಂಗೆ ಮಲಿನಳಾಗಿದ್ದಾಳೆ ಎನ್ನುವುದು. ಅಲ್ಲಿನ ಘಾಟ್‌ಗಳಲ್ಲಿ ಪ್ರತಿವರ್ಷ ಸುಮಾರು 33,000 ಹೆಣ ಸುಡಲಾಗುತ್ತಿದೆ, 800 ಟನ್‌ನಷ್ಟು ಚಿತಾಭಸ್ಮವನ್ನು ನದಿಗೆ ಸುರಿಯಲಾಗುತ್ತಿದೆ ಎನ್ನುವುದು ಖರೆ. ಸಾವಿರಾರು ಕಿ.ಮೀ ದೂರದ ಊರುಗಳಿಂದಲೂ ಕಳೇಬರವನ್ನು ಕೊಂಡೊಯ್ದು ಗಂಗಾ ತಟದಲ್ಲಿಯೇ ಚಿತೆಗೆ ಏರಿಸುವುದೂ ಇದೆ ಎಂಬುದೂ ನಿಜ. ಆದರೆ ಗಂಗೆಗೆ ಅಪಾಯ ಬಂದಿರುವುದು ಅದೊಂದರಿಂದಲೇ ಅಲ್ಲ. ಕೈಗಾರಿಕೆ ತ್ಯಾಜ್ಯಗಳು ಸೇರುವುದೂ ಗಂಗೆಯನ್ನೇ. ನದಿ ತೀರದಲ್ಲಿರುವ ಮನೆಗಳ ಮಲ-ಮೂತ್ರದಿಂದ ಹಿಡಿದು ಕಲ್ಮಷಗಳೆಲ್ಲವನ್ನೂ ಬಿಡುವುದು ಇದೇ ನದಿಗೆ. ಕೇಂದ್ರ ಸರ್ಕಾರದ ಅಂಕಿ-ಅಂಶದ ಪ್ರಕಾರವೇ ಐದು ರಾಜ್ಯಗಳಲ್ಲಿ ಗಂಗಾತೀರದಲ್ಲಿರುವ ಕೈಗಾರಿಕೆಗಳ ಸಂಖ್ಯೆ 764. ಅವುಗಳಲ್ಲಿ ಚರ್ಮ ಹದಗೊಳಿಸುವುದು ಮತ್ತಿತರ ಸಣ್ಣಪುಟ್ಟ ಉದ್ಯಮಗಳು ಸೇರಿಲ್ಲ. ಕಾನ್ಪುರವೊಂದರಲ್ಲೇ 400ಕ್ಕೂ ಹೆಚ್ಚು ಚರ್ಮೋದ್ಯಮಗಳಿವೆ. ಅವು ನದಿಗೆ ಬಿಡುವ ತ್ಯಾಜ್ಯಗಳು ಕಡಿಮೆ ಅಪಾಯದ್ದೇನಲ್ಲ. ಜೀವಜಲವಾಗಿದ್ದ ಗಂಗಾ ಈಗ ವಿಷವಾಗಿ ಪರಿಣಮಿಸಿದ್ದರೆ ಅದಕ್ಕೆ ಕಾರಣ ಇಂಥ ಕೈಗಾರಿಕೆಗಳು, ಮನೆಮನೆಯಿಂದ ಬಂದು ಸೇರುವ ಜೈವಿಕ ತ್ಯಾಜ್ಯಗಳು.
ಪ್ರಭುತ್ವದ ನಿಟ್ಟಿನಲ್ಲಿ ಯೋಚಿಸೋಣ. ಉಗಮ ತಾಣದಿಂದ ಎಂಟು ತೊರೆಗಳಾಗಿ ಗಂಗಾ ಹೊರಡುತ್ತಾಳೆ. ಭಾಗೀರಥಿ, ಮಂದಾಕಿನಿ, ಆಲಕಾನಂದಾ ಅವುಗಳಲ್ಲಿ ಪ್ರಮುಖವಾದವು. ಪರಿಸರವಾದಿಗಳ ವಿರೋಧ, ತಜ್ಞರ ಎಚ್ಚರಿಕೆ ನಡುವೆಯೂ ಇವುಗಳಿಗೆ ಹರಿವಿನ ಆರಂಭದಲ್ಲಿಯೇ ಅಣೆಕಟ್ಟೆಗಳನ್ನು ಕಟ್ಟಲು ಯೋಜನೆ ರೂಪಿಸಲಾಗಿದೆ. ಅಲ್ಲಲ್ಲಿ ಇರುವ ಅಣೆಕಟ್ಟೆಗಳು ಈಗಾಗಲೇ ಸಹಜ ಹರಿವಿಗೆ ತಡೆ ಒಡ್ಡುತ್ತಿವೆ. ಇನ್ನು ನದಿ ಪುನಶ್ಚೇತನಕ್ಕಾಗಿ ರಾಜೀವ್‌ಗಾಂಧಿ ಕಾಲದಲ್ಲಿಯೇ ಗಂಗಾ ಕ್ರಿಯಾ ಯೋಜನೆ-1 ರೂಪುಗೊಂಡಿತು. ಇಚ್ಛಾಶಕ್ತಿ
ಕೊರತೆಯಿಂದ ವಿಫಲವಾಯಿತು. ಮುಂದೆ ಗಂಗಾ ಕ್ರಿಯಾ ಯೋಜನೆ-2 ಬಂದಿತು, ಅದರ ಅನುಷ್ಠಾನವೂ ತಳ ಹಿಡಿಯಿತು. 2009ರಲ್ಲಿ ಯುಪಿಎ ಸರ್ಕಾರ ರಾಷ್ಟ್ರೀಯ ಗಂಗಾ ನದಿ ಕಣಿವೆ ಪ್ರಾಧಿಕಾರ ರಚಿಸಿತು. ಅದಕ್ಕೆ ಪ್ರಧಾನಿಯವರೇ ಅಧ್ಯಕ್ಷರು. ನಂಬುತ್ತೀರೋ ಇಲ್ಲವೊ, ಪ್ರಾಧಿಕಾರ ಸಭೆ ಸೇರಿದ್ದು ಕೇವಲ ಮೂರು ಸಲ. ಒಂದು ಸಭೆಯನ್ನು ಸ್ವಾಮಿ ಸಾನಂದತೀರ್ಥರು (ಜಿ.ಡಿ.ಅಗರವಾಲ್) ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಉಪವಾಸ ಸತ್ಯಾಗ್ರಹ ಕೂರುವ ಬೆದರಿಕೆ ಹಾಕಿದ ಮೇಲೆ ಕರೆಯಲಾಗಿತ್ತು. ಮೂವತ್ತು ವರ್ಷಗಳಲ್ಲಿ ಗಂಗಾ ಶುದ್ಧೀಕರಣ, ಗಂಗಾ ಪುನರುಜ್ಜೀವನ ಇತ್ಯಾದಿ ಹೆಸರಿನಲ್ಲಿ 1,100 ಕೋಟಿ ರುಪಾಯಿ ವ್ಯಯಿಸಲಾಗಿದೆ, ಇನ್ನೂ 20 ಸಾವಿರ ಕೋಟಿ ರುಪಾಯಿ ವೆಚ್ಚದ ಯೋಜನೆಗಳು ಜಾರಿ ಹಂತದಲ್ಲಿವೆ. ಗಂಗಾ ಶುದ್ಧೀಕರಣದ ಯೋಜನಾ ವೆಚ್ಚದಲ್ಲಿ ಶೇ 85ರಷ್ಟನ್ನು ಪ್ರಾಧಿಕಾರದ ಮೂಲಕ ಕೇಂದ್ರ ಸರ್ಕಾರ, ಶೇ 15ರಷ್ಟನ್ನು ಆಯಾ ರಾಜ್ಯಗಳು ಭರಿಸಬೇಕು. ಆದರೂ ಸಂಕಲ್ಪಬಲದ ಕೊರತೆ, ಅಸಡ್ಡೆಯ ಧೋರಣೆಗಳಿಂದಾಗಿ ಯೋಜನೆಗಳು ಕುಂಟುತ್ತಿವೆ. ತಪ್ಪುಗಳಿಂದ ಪಾಠ ಕಲಿಯದೆ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತ, ಇನ್ನಷ್ಟು ತಪ್ಪು ಮಾಡುತ್ತಲೇ ಇವೆ ಸರ್ಕಾರಗಳು.
ನರೇಂದ್ರ ಮೋದಿ ಎನ್ನುವ ಮಗ ಅಮ್ಮನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಶತಾಯಗತಾಯ ಅವಳನ್ನು ಉಳಿಸಿಕೊಳ್ಳುವ ಮಾತುಗಳನ್ನು ಆಡಿದ್ದಾನೆ, ಆ ನಿಟ್ಟಿನಲ್ಲಿ ಹೆಜ್ಜೆಯನ್ನೂ ಇಟ್ಟಿದ್ದಾನೆ. ಅವನ ನಡೆ-ನುಡಿಗಳಲ್ಲಿ ಪ್ರಾಮಾಣಿಕತೆ ಗೋಚರಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಗಂಗೆಯ ವಿಚಾರದಲ್ಲಿ ನಮಗೆ
ಕಾಣಿಸುತ್ತಿರುವ ಆಶಾಕಿರಣ ಅದೊಂದೇ!



- ರಾಧಾಕೃಷ್ಣ ಭಡ್ತಿ
abhyagatha@yahoo.co.in


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com