ಮಾಲ್‌ಗಳ ಆಫರ್ ಮಳೆ, ಅವೆಲ್ಲ ನೀರಿನ ಉತ್ಪನ್ನಗಳೇ!

ಕೈ ತುಂಬಾ ಸಂಬಳ. ವಾರಾಂತ್ಯ ಶಾಪಿಂಗ್. ಕಬೋರ್ಡ್‌ನಲ್ಲಿ ರಾಶಿರಾಶಿ ಬಟ್ಟೆಗಳು. ದಿನಕ್ಕೊಂದು ಜೊತೆ ಹಾಕಿಕೊಂಡರೂ ತಿಂಗಳಿಗೆ ಒಂದು ಸಲವಷ್ಟೇ ಧರಿಸಬಹುದಾದಷ್ಟು ವಸ್ತ್ರಗಳಿವೆ. ಆದರೂ ಹೊಸತು ಕಂಡಿತೆಂದ ತಕ್ಷಣ ಕೊಳ್ಳಲೇಬೇಕೆಂಬ ತುಡಿತ. ಕಿಸೆಯಲ್ಲಿ ಕಾಸಿಲ್ಲದಿದ್ದರೆ ಏನಂತೆ, ಕಾರ್ಡ್ ಇದೆಯಲ್ಲ ಅದನ್ನು ಉಜ್ಜು, ಬೇಕಾದ್ದು ಖರೀದಿಸು. ಬಟ್ಟೆ ಮಾತ್ರವೇ ಅಲ್ಲ, ಪರ್ಸ್ ಇರಬಹುದು, ಚೆಂದದ ಪಾದರಕ್ಷೆ ಆಗಿರಬಹುದು. ನಮ್ಮ ಬಳಿ ಇನ್ನೂ ಆರೇಳು ತಿಂಗಳು ಬಳಸಬಹುದಾದ ಸುಂದರ ಚಪ್ಪಲಿ, ಶೂ ಇದ್ದರೂ ಇನ್ನೂ ಚೆಂದದ್ದು ಕಂಡರೆ ಕೊಳ್ಳುವ ತವಕ. ಮ್ಯಾಚಿಂಗ್ ಹುಚ್ಚು ಇದ್ದರಂತೂ ಮುಗಿದೇ ಹೋಯಿತು ಬಿಡಿ. ಎಷ್ಟು ಜೊತೆ ಬಟ್ಟೆಗಳಿವೆಯೋ ಅದಕ್ಕೆ ತಕ್ಕಂತೆ ಪಾದರಕ್ಷೆ, ವಾಲ್ಲೆಟ್ ಎಲ್ಲವೂ ಇರಬೇಡವೆ? ಇಲ್ಲದಿದ್ದರೆ ಜನ ಏನಂದುಕೊಂಡಾರು? ನಮ್ಮ ಈ ಕೊಳ್ಳುಬಾಕತನ ಕೇವಲ ದಿರಿಸು- ವಸ್ತುಗಳಿಗಷ್ಟೇ ಸೀಮಿತವಾಗಿಲ್ಲ. ತಿಂಡಿ- ತಿನಿಸಿನ ವಿಚಾರದಲ್ಲೂ ಇಂಥದ್ದೊಂದು ಕೆಟ್ಟ ಸಂಸ್ಕೃತಿಯ ದಾಸರಾಗುತ್ತಿದ್ದೇವೆ. ವೀಕೆಂಡ್‌ಗಳಲ್ಲಿ ಯಾವುದೇ ರೆಸ್ಟೊರೆಂಟ್‌ಗೆ ಹೋಗಿ. ಕಾಲಿಡಲೂ ಸಾಧ್ಯವಿಲ್ಲ. ಮಧ್ಯಮ ವರ್ಗದ ಜನರ 'ಆಧಾರಸ್ತಂಭ'ಗಳಾಗಿರುವ ದರ್ಶಿನಿಗಳಿಂದ ಹಿಡಿದು, ಪಂಚತಾರಾ ಹೋಟೆಲ್‌ಗಳವರೆಗೂ ರಶ್ಶೋರಶ್ಶು. ಅದಕ್ಕೆ ತಕ್ಕಂತೆ ಪಿಜ್ಜಾ ತಿಂದರೆ ಕೋಲಾ ಫ್ರೀ! ಮರುಳುಗೊಳಿಸುವ ಆಫರ್‌ಗಳ ಸುರಿಮಳೆ. ಇದು ಬೆಂಗಳೂರು, ಮಂಗಳೂರು, ಹುಬ್ಬಳ್ಳಿಯಂಥ ನಗರಗಳಿಗಷ್ಟೇ ಸೀಮಿತವಾಗಿರುವ ಟ್ರೆಂಡ್ ಅಲ್ಲ. ಜಿಲ್ಲಾ ಕೇಂದ್ರಗಳಲ್ಲೂ ಇವೆಲ್ಲ ಈಗ ಕಾಮನ್.
'ನಮ್ಮ ದುಡ್ಡು, ನಮ್ಮ ಮೋಜು. ನಿಮಗೇನು ಪ್ರಾಬ್ಲಂ' ಎಂದು ನಮ್ಮ ಮಕ್ಕಳೇ ನಮ್ಮನ್ನು ಕೇಳುತ್ತಾರೆ. ಅವರ ಮಟ್ಟಿಗೆ ಅದು ಸರಿ ಎನ್ನಿ. ಆದರೆ ವಿಷಯ ಕೇವಲ ಹಣ, ಮೋಜಿಗೆ ಸಂಬಂಧಿಸಿಲ್ಲ. ಜಾಗತೀಕರಣದ ಫಲವಾದ ಕೊಳ್ಳುಬಾಕ ಸಂಸ್ಕೃತಿ ಈಗ ಜಲಮೂಲಗಳ ಬುಡಕ್ಕೇ ಬಂದು ನಿಂತಿದೆ. ದಶಕದಿಂದ ಈಚೆಗೆ ನೀರಿನ ಸಮಸ್ಯೆ ಇನ್ನಿಲ್ಲದಂತೆ ಬೆಳೆದು ನಿಂತಿದ್ದರೆ ಅದಕ್ಕೆ ಪ್ರಮುಖ ನಾವು ರೂಢಿಸಿಕೊಳ್ಳುತ್ತಿರುವ ಆಧುನಿಕ ಲೈಫ್‌ಸ್ಟೈಲ್ ಸಹ ಕಾರಣ. ನಮ್ಮ ಯುವಪೀಳಿಗೆಯ ತಲೆ ಕೆಡಿಸಿರುವ ಶಾಪಿಂಗ್ ಹುಚ್ಚೇ ಇರಬಹುದು, ಆಹಾರ ಪದ್ಧತಿಯಲ್ಲಿ ಆಗಿರುವ ಬದಲಾವಣೆಯೇ ಇರಬಹುದು, ಐಷಾರಾಮಿ ಬದುಕಿನ ಕನಸುಗಳೇ ಆಗಿರಬಹುದು. ಇವೆಲ್ಲವೂ ಜತೆಗೂಡಿ ನೀರಿನ ಒತ್ತಡ ಸೃಷ್ಟಿಸಿರುವುದು ಸುಳ್ಳಲ್ಲ.
ನಾವು ಧರಿಸುವ ಕಾಟನ್ ಶರ್ಟ್ ಅನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಮೀಡಿಯಂ ಸೈಜ್‌ನ ಒಂದು ಅಂಗಿ ಸಿದ್ಧವಾಗಲು ಎಷ್ಟು ನೀರು ಬೇಕು ಗೊತ್ತಾ? 2,900 ಲೀಟರ್! ಜಮೀನಿನಲ್ಲಿ ಹತ್ತಿ ಬೀಜ ಬಿತ್ತಿ, ಅದು ಗಿಡವಾಗಿ, ಹೂ ಬಿಟ್ಟು, ಹತ್ತಿ ನೂಲಿನಿಂದ ಅಂಗಿ ಸಿದ್ಧವಾಗಿ, ಮನಮೋಹಕ ಪ್ಯಾಕ್‌ನಲ್ಲಿ ಸಿಂಗಾರಗೊಂಡು, ನಮ್ಮ ಕೈ ಸೇರುವವರೆಗೆ ಇಷ್ಟು ಪ್ರಮಾಣದ ನೀರು ಬೇಕು! ಕಾಲಿಗೆ ಹಾಕಿಕೊಳ್ಳುವ ಒಂದು ಜೂತೆ ಲೆದರ್ ಶೂ 8,000 ಲೀಟರ್ ನೀರು ಬಳಸಿಕೊಂಡು ಸಿದ್ಧವಾಗಿರುತ್ತದೆ. 750 ಮಿಲಿ ಲೀಟರ್‌ನ ಒಂದು ಕ್ಯಾನ್‌ಕೋಲಾ ತಯಾರಾಗಲು 200 ಲೀಟರ್ ನೀರು ಬೇಕಾಗುತ್ತದೆ. ಒಂದು ಕಪ್ ಬ್ಲ್ಯಾಕ್ ಕಾಫಿಗೆ 140 ಲೀಟರ್ ನೀರಿನ ಅಗತ್ಯವಿದೆ. ಅಗತ್ಯ ಇಲ್ಲದಿದ್ದರೂ ನಾವು ಖರೀದಿಸುವ ಒಂದು ಕಾಟನ್ ಶರ್ಟ್, ಒಂದು ಜೊತೆ ಶೂ, ಕುಡಿಯುವ ಒಂದು ಕಪ್ ಕೋಲಾಗಳಿಗೆ ಖರ್ಚು ಮಾಡುವುದು ಹೆಚ್ಚೆಂದರೆ ನಾಲ್ಕೈದು ಸಾವಿರ ರುಪಾಯಿಗಳಾಗಬಹುದಷ್ಟೆ. ಆದರೆ ವಾಸ್ತವಿಕವಾಗಿ 11,100 ಲೀಟರ್ ನೀರನ್ನು ವಿನಾಕಾರಣ ವ್ಯರ್ಥ ಮಾಡಿರುತ್ತೇವಲ್ಲ, ಅದಕ್ಕೆ ಹೇಗೆ ಬೆಲೆ ಕಟ್ಟುವುದು? ತಿಂಗಳ ಕೊನೆಗೆ ಲಕ್ಷದ ಲೆಕ್ಕದಲ್ಲಿ ಸಂಬಳ ನಮ್ಮ ಖಾತೆಗೆ ಬಂದು ಬೀಳಬಹುದು, ಆದರೆ ನಾವು ಸುಖಾಸುಮ್ಮನೆ ವ್ಯಯಿಸಿರುವ ಲಕ್ಷಾಂತರ ಲೀಟರ್ ನೀರು ಪುನಾ ಉತ್ಪಾದನೆಯಾಗಲು ಎಷ್ಟು ವರ್ಷ ಬೇಕು?
ಹಾಗಿದ್ದರೂ ಸುಮ್ಮನಿದ್ದುಬಿಡಬಹುದಿತ್ತು. ಹೇಗಿದ್ದರೂ ನೀರು ಹೇರಳವಾಗಿದೆ. ಹರಿದು ಸಮುದ್ರ ಸೇರುತ್ತಿದೆ. ಅದನ್ನು ಬಳಸಿದರಾಯಿತು ಎನ್ನಬಹುದಿತ್ತು. ಈಗ್ಗೆ ಎರಡು ದಶಕಗಳ ಹಿಂದಾಗಿದ್ದರೆ ಆ ಮಾತು ಬೇರೆ. ಆದರೆ ಇಂದು ಭೂಮಿಯ ಬಹುತೇಕ ಕಡೆ ಮೇಲ್ಜಲ ಬರಿದಾಗಿದೆ.
ವಿಶ್ವಸಂಸ್ಥೆ ಅಂದಾಜಿನ ಪ್ರಕಾರ, ಜಗತ್ತಿನಲ್ಲಿ 1.1 ಶತಕೋಟಿ ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. 2.6 ಶತಕೋಟಿ ಜನಸಂಖ್ಯೆಗೆ ಶೌಚ ಇತ್ಯಾದಿ ನೈರ್ಮಲ್ಯೀಕರಣ ಉದ್ದೇಶಕ್ಕೆ ನೀರಿಲ್ಲ. ಚರಂಡಿ ನೀರು ಕುಡಿದು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗಿ ನಿತ್ಯ ವಿಶ್ವದಾದ್ಯಂತ 3,900 ಮಕ್ಕಳು ಸಾವನ್ನಪ್ಪುತ್ತಾರೆ. ಅದಾವುದರ ಪರಿವೆಯೇ ಇಲ್ಲದೆ ಅಥವಾ ಆ ವಿಚಾರ ನಮಗೆ ಸಂಬಂಧಿಸಿದ್ದಲ್ಲ ಎಂದುಕೊಂಡು ನಾವು ಯಥಾಪ್ರಕಾರ ಕೊಳ್ಳುಬಾಕತನ ಮುಂದುವರಿಸುತ್ತೇವೆ. ಲೆಕ್ಕಾಚಾರ ಇಷ್ಟಕ್ಕೇ ಮುಗಿಯಿತು ಎಂದುಕೊಳ್ಳಬೇಡಿ. ನಾಮಕರಣ, ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಕ್ವಿಂಟಾಲ್‌ಗಟ್ಟಲೆ ಆಹಾರ ಪದಾರ್ಥವನ್ನು ತಿಪ್ಪೆಗೆ ಬಿಸಾಡುತ್ತೇವೆ. ಒಂದು ಕೆ.ಜಿ. ಅಕ್ಕಿಗೆ 1,400 ಲೀಟರ್, ಒಂದು ಕೆ.ಜಿ. ಗೋಧಿಗೆ 1,000 ಲೀಟರ್, ಒಂದು ಕೆ.ಜಿ. ಮಾಂಸಕ್ಕೆ 13,000 ಲೀಟರ್ ನೀರಿನ ಅಗತ್ಯವಿರುತ್ತದೆ ಎನ್ನುವುದು ಅರ್ಥವಾದರೆ ಅಮೂಲ್ಯ ಜಲಸಂಪತ್ತನ್ನು ನಾವು ಯಾವ ರೀತಿ ಹಾಳು ಮಾಡಿಕೊಳ್ಳುತ್ತಿದ್ದೇವೆ ಎನ್ನುವುದು ಅರಿವಿಗೆ ಬಂದೀತು.
-
'ಜಲಚಕ್ರ'ದ ಬಗ್ಗೆ ನಮಗೆ ಗೊತ್ತೇ ಇದೆ. ಮಳೆ ನೀರು ಒಂದಷ್ಟು ಕಣ್ಣಾಮುಚ್ಚಾಲೆ ಆಟ ಆರಂಭಿಸುತ್ತದೆ. ಸಾಲು ಮೆರವಣಿಗೆ ಸಾಗುವಾಗ ಅಲ್ಲಲ್ಲಿ ಒಂದಷ್ಟು ಮಂದಿ ಬಿಸಿಲು ತಾಳದೇ ತಂಪನೆಯ ತಾವು ಅರಸಿ ಕಳಚಿಕೊಳ್ಳುವ ಪರಿಯಲ್ಲಿ ಭೂಮಿಯ ಮೇಲೆ ಹರಿದೋಡುವ ನೀರಿನಲ್ಲಿ ಒಂದಷ್ಟು ಭಾಗ ಅಲ್ಲಲ್ಲೇ ನಿಂತು ಇಂಗಲಾರಂಭಿಸುತ್ತದೆ. ಜತೆಗೆ ಕೆರೆ, ಕಟ್ಟೆಗಳಲ್ಲಿ ಸಂಗ್ರಹಗೊಂಡ ನೀರಿನಲ್ಲೂ ಒಂದಷ್ಟು ಸೇರಿಕೊಳ್ಳುತ್ತದೆ.
ನೆಲದೊಳಗೆ ಯಾವುದೇ ನದಿ, ಸರೋವರ, ಸಮುದ್ರಗಳಿಲ್ಲ. ಬದಲಾಗಿ ಒಂದಷ್ಟು ಸೀಳು, ಬಿರುಕು, ಟೊಳ್ಳುಗಳಿವೆ. ಭೂಮಿಯ ಮೇಲ್ಮೈ ಸಹ ಇದರಿಂದ ಹೊರತಲ್ಲ. ಅಂಥ ತಾಣಗಳ ಮೂಲಕ ಹರಿಯದೇ ನಿಲ್ಲುವ ನೀರು ಕೆಳಗಿಳಿಯಲಾರಂಭಿಸುತ್ತದೆ. ತಗ್ಗಿನೆಡೆ ಸರಿಯುವುದು ನೀರ ಜನ್ಮಜಾತ ಗುಣ. ಆದರೆ ಇದು ಆಯಾ ಭೂಪ್ರದೇಶದ ರಚನೆಯನ್ನು ಅವಲಂಬಿಸಿರುತ್ತದೆ.
ಭೂಮಿಯ ಎಲ್ಲೆಡೆ ಒಂದೇ ತೆರನಾದ ಮಣ್ಣಿನ ಲಕ್ಷಣಗಳಿರುವುದಿಲ್ಲ ಎಂಬುದು ಗೊತ್ತೇ ಇದೆ. ಒಂದಷ್ಟು ಗಡಸು, ಒಂದಷ್ಟು ನುಣುಪು, ಜೌಗು, ಮರಳು, ಶಿಲಾವೃತ ಪ್ರದೇಶಗಳು ಪ್ರಕೃತಿ ಸಹಜ. ಆದರೆ ಈ ಎಲ್ಲ ಪ್ರಕಾರಗಳಲ್ಲಿ ಒಂದೇ ಸಮಾನ ಅಂಶವೆಂದರೆ ರಂಧ್ರಗಳು. ಇಂಥ ರಂಧ್ರಗಳೇ ನೀರು ಕೆಳಗಿಳಿಯಲು ಸಹಾಯಕ. ಎಂಥದೇ ಗಡಸು, ಗಟ್ಟಿ ಕಲ್ಲಾದರೂ ಗಾಳಿ, ಮಳೆಗಳ ಹೊಡೆತಕ್ಕೆ ಸಿಕ್ಕಿ ಶಿಥಿಲಗೊಳ್ಳುತ್ತಲೇ ಇರುತ್ತದೆ. ಈ 'ಶಿಥಿಲೀಕರಣ' ಪ್ರಕ್ರಿಯೆ ನೀರಿಂಗಲು ಸಹಾಯಕ.
ಭೂಮಿಯ ಮೇಲ್ಭಾಗದಲ್ಲಿರುವ ಮರ ಗಿಡ, ಸಸ್ಯ ವರ್ಗಗಳ ಪಾತ್ರವೂ ಅಂತರ್ಜಲ ರಕ್ಷಣೆಯಲ್ಲಿ ಮಹತ್ವದ್ದು. ಗಿಡಮರಗಳು ಹೆಚ್ಚಿದಷ್ಟೂ, ಮಣ್ಣಿನ ಪದರ ಸಡಿಲವಾಗಿ ಮಳೆಯ ನೀರು ಜಿನುಗುವುದು ಸುಲಭವಾಗುತ್ತದೆ. ಮಣ್ಣಿನ ಪದರುಗಳಲ್ಲಿ ಜಿನುಗಿ ಇಳಿಯುವ ನೀರು ಗಡಸು ಶಿಲಾ ಪದರ ಸಿಗುವವರೆಗೂ ತನ್ನ ಪಯಣ ಮುಂದುವರಿಸುತ್ತದೆ. ಇನ್ನು ಇಳಿಯಲು ಸಾಧ್ಯವಿಲ್ಲ ಎಂಬಂಥ ಸ್ಥಿತಿಯಲ್ಲಿ ಗಡಸು ಕಲ್ಲಿನ ಮೇಲೆ ವಿಶ್ರಾಂತಿಗೆ ನಿಲ್ಲುತ್ತದೆ. ಅಲ್ಲೇ ಅಡಗಿ ಕುಳಿತುಕೊಳ್ಳುತ್ತದೆ. ಸಾಮಾನ್ಯವಾಗಿ, ಬಾವಿ- ಹೊಂಡ ತೋಡಿದಾಗ 'ಜಲ ಸಿಕ್ಕಿತು', 'ಒರತೆ ಕಂಡಿತು' ಎನ್ನುವುದನ್ನು ಕೇಳಿದ್ದೇವೆ. ಹೀಗೆ ಸಿಕ್ಕುವುದೇ ವಿಶ್ರಾಂತಿಗೆ ಕುಳಿತಿದ್ದ ಜಲ. ಎಷ್ಟೋ ಜನರ ಕಲ್ಪನೆಯಲ್ಲಿ ಇದೇ ಅಂತರ್ಜಲ ಎಂಬುದಿದೆ. ನಿಜವಾಗಿ ಇದು ಅಂತರ್ಜಲವಲ್ಲ. ಭೂಗರ್ಭ ಶಾಸ್ತ್ರಜ್ಞ ಸುಭಾಷ್ಚಂದ್ರ ಅವರು ವಿವರಿಸುವಂತೆ ಇದು ಪೂರಕ ಜಲ ಸಂಪನ್ಮೂಲ (ಡೈನಾಮಿಕ್ ರಿಸೋರ್ಸ್). ಭೂಮಿಯ ಮೇಲ್ಪದರದ 200 ಅಡಿಯ ಆಸುಪಾಸಿನಲ್ಲಿ ನಮಗೆ ಸಿಗುವ ಜಲವೆಲ್ಲವೂ ಇಂಥ ಪೂರಕ ಸಂಪನ್ಮೂಲವೇ. ಇದು ಒಂದೇ ತೆರನಾಗಿ ಇರುವುದಿಲ್ಲ. ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ, ನೀರಿಳಿಯುವ ಮಟ್ಟವನ್ನು ಅವಲಂಬಿಸಿ ಬದಲಾಗುತ್ತಿರುತ್ತದೆ.
ನಿಜವಾದ ಅಂತರ್ಜಲವೆಂದರೆ ಅದು 'ಸ್ಥಿರ' ಅಥವಾ 'ಶಾಶ್ವತ' ಸಂಪನ್ಮೂಲ (ಸ್ಟ್ಯಾಟಿಕ್ ರಿಸೋರ್ಸ್). ಡೈನಾಮಿಕ್ ವಲಯವನ್ನು ದಾಟಿ ಕಷ್ಟಪಟ್ಟು, ಸಂದಿ-ಗೊಂದಿಗಳನ್ನು ತದಡಿ, ತಡಕಾಡಿ ಕೆಳಗಿಳಿಯುವ ನೀರು ಭೂಮಿಯ ಮೇಲೆ 3- 4 ಅಡಿಯಿಂದ ಸಾವಿರಾರು ಅಡಿಗಳನ್ನು ದಾಟಿ ತನ್ನ ಇರುವನ್ನು ಕಂಡುಕೊಂಡಿರುತ್ತದೆ. ಪೂರಕ ಜಲವೆಂದರೆ ಕೃತಕವಾಗಿ ಮಾನವ ನಿರ್ಮಿತ ಹೊಂಡ, ತಗ್ಗುಗಳಲ್ಲಿ ಸಂಗ್ರಹಗೊಂಡದ್ದೂ ಆಗಬಹುದು. ಆದರೆ, ಸ್ಥಿರ ಜಲ ಸಂಪನ್ಮೂಲ ಪ್ರಕೃತಿಯ ಪರಮೋಚ್ಚ ಶಕ್ತಿಯ ಬಳಕೆಯ ಫಲವಾಗಿ ಕೆಲವು ಸಾವಿರ ವರ್ಷಗಳ ನಿರಂತರ ಪಯಣದ ಬಳಿಕ, ಯಾವುದೇ ಕೃತಕ, ಬಾಹ್ಯ ಬಲಪ್ರಯೋಗವಿಲ್ಲದೇ ಸಂಗ್ರಹಿತಗೊಳ್ಳುವಂಥದ್ದು. ಪೂರಕ ಜಲ, ಸಾಮಾನ್ಯವಾಗಿ ತನ್ನ ಸುತ್ತಮುತ್ತಲ ಪ್ರದೇಶವನ್ನೆಲ್ಲ ತಂಪಾಗಿಸುತ್ತದೆ. ಹಾಗೆಯೇ ಬೇಸಿಗೆ ಹೆಚ್ಚಿದಂತೆಲ್ಲ ತನ್ನ ಪ್ರಮಾಣವನ್ನು ಕಿರುದಾಗಿಸಿಕೊಳ್ಳುತ್ತ ಬರುತ್ತದೆ.
ಮುಖ್ಯವಾಗಿ ಭೂಮಿಯ ಮೇಲೆ ವಾರ್ಷಿಕ ನೂರು ಮಿಲಿಮೀಟರ್ ಮಳೆ ಸುರಿದರೆ ಅಂತರ್ಜಲ ಸೇರುವ ನೀರಿನ ಪ್ರಮಾಣ 3ರಿಂದ 5 ಮಿಲಿಮೀಟರ್ ಮಾತ್ರ. ನದಿ, ಸರೋವರಗಳ ಭಾಗದಲ್ಲಿ 12ರಿಂದ 20 ಮಿಲಿಮೀಟರ್‌ವರೆಗೆ ಇರುತ್ತದೆ. ಅಂದರೆ ಅತ್ಯಂತ ಕನಿಷ್ಠ ಭಾಗ ನೀರು ಮಾತ್ರ ಒಳಗೆ ಸಂಗ್ರಹಗೊಂಡಿರುತ್ತದೆ. ಅದರಲ್ಲೂ ಬಹುಪಾಲು ಭೂಮಿಯ ಮೇಲ್ಪದರದಲ್ಲಿ ಅಂದರೆ ಶಿಥಿಲ ವಲಯದಲ್ಲಿ ನಿಲ್ಲುತ್ತದೆ. ಮತ್ತೊಂದಿಷ್ಟು ಸಚ್ಛಿದ್ರ ಶಿಲಾವಲಯವೆಂದು ಕರೆಯುವ ಎರಡನೇ ಭಾಗಕ್ಕೆ ಹೋಗುತ್ತದೆ. ಇಲ್ಲಿ ತೀರಾ ಅಪರೂಪಕ್ಕೆ ಕಾಣಸಿಗುವ ಶಿಲಾ ಸೀಳುಗಳ ಮೂಲಕ ಹಲವು ಸಂವತ್ಸರಗಳ ಬಳಿಕ ತೀರಾ ಕನಿಷ್ಠ ಪ್ರಮಾಣದ ನೀರು ಆಳಕ್ಕಿಳಿಯುತ್ತದೆ. ಹೀಗಾಗಿಯೇ ಇದನ್ನು 'ಆಪತ್ಕಾಲದ ನೀರು' ಎಂದು ಕರೆಯಲಾಗುತ್ತದೆ. ಇದರ ಕೆಳಗೆ ಜಲವಿಲ್ಲದ, ಗಟ್ಟಿ ಕಲ್ಲಿನ ಒಣ ವಲಯವಿರುತ್ತದೆ. ಈಗ ನಾವು ಬೋರ್‌ವೆಲ್‌ಗಳ ಮೂಲಕ ಬರಿದಾಗಿಸುತ್ತಿರುವುದು ಇಂಥ ನೀರನ್ನು!
-
ಜೀವನಶೈಲಿಯ ಜತೆಯಲ್ಲೇ ವ್ಯವಸ್ಥೆಯಲ್ಲಿನ ಏರುಪೇರುಗಳು ಜಲದೊತ್ತಡ ಸೃಷ್ಟಿಗೆ ಕಾರಣಗಳು. ಭಾರತದಲ್ಲಿ ಕೈಗಾರಿಕೀಕರಣ, ನಗರೀಕರಣಗಳಿಂದ ನೀರಿನ ಬಳಕೆ ಹೆಚ್ಚಿದೆ, ನೀರಿನ ಮೂಲಗಳು ಬತ್ತುತ್ತಿವೆ ಎನ್ನುವುದು ಹೊಸ ವಿಚಾರವಲ್ಲ. ಇಲ್ಲೆಲ್ಲ ನೀರು ಭಾರಿ ಪ್ರಮಾಣದಲ್ಲಿ ಪೋಲಾಗುತ್ತಿದೆ. ಅಗತ್ಯಕ್ಕಿಂತ ಹೆಚ್ಚಿನ ಬಳಕೆ ತಡೆಯಲು ನಮ್ಮಿಂದ ಆಗುತ್ತಿಲ್ಲ. ಅದಕ್ಕೆ ಕಾರಣ ಸರ್ಕಾರದ ನೀತಿ ಸಹ. ನೀರು ಸರ್ಕಾರದ ಸಹಾಯಧನದಿಂದ ನಗರ ನಿವಾಸಿಗಳಿಗೆ, ಕೈಗಾರಿಕೆಗಳಿಗೆ (ಈಗೀಗ ಗ್ರಾಮೀಣ ಪ್ರದೇಶದಲ್ಲಿ ಸಹ) ಸಿಗುತ್ತಿರುವ ಅಗತ್ಯ ವಸ್ತು (ಎಸೆನ್ಶಿಯಲ್ ಕಮಾಡಿಟಿ) ಎನ್ನುವ ಪ್ರಜ್ಞೆಯೇ ನಮ್ಮಲ್ಲಿ ಮೂಡಿಲ್ಲ. ಹೀಗಾಗಿಯೇ ಎಷ್ಟು ಬಳಸುತ್ತೇವೆಯೋ ಅದರ ದುಪ್ಪಟ್ಟು ವ್ಯರ್ಥ ಮಾಡುತ್ತೇವೆ. ಕೊಳಚೆ ನೀರನ್ನು ಕೈಗಾರಿಕೆ ಉದ್ದೇಶಗಳಿಗೆ ಬಳಸಿಕೊಳ್ಳುವ ವಿಚಾರದಲ್ಲಂತೂ ಬಹಳ ಅಂದರೆ ಬಹಳ ಹಿಂದಿದ್ದೇವೆ. ಸ್ಥಳೀಯ ಆಡಳಿತ ನೀರು ಪೂರೈಸುವುದು ಎರಡು ದಿನ ತಡವಾದರೆ ಮನಸೋಇಚ್ಛೆ ಶಪಿಸುತ್ತೇವೆ, ಆದರೆ ಆ ನೀರು ಎಷ್ಟು ದೂರದಿಂದ ನಮ್ಮ ಮನೆಗೆ ಹರಿದು ಬರುತ್ತದೆ? ಅದಕ್ಕೆ ತಗಲುವ ಸಾಗಣೆ ವೆಚ್ಚ ಎಷ್ಟು, ನಾವು ಪಾವತಿಸುವುದೆಷ್ಟು ಇತ್ಯಾದಿ ವಿಚಾರಗಳ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದಲೇ ನೀರಿಗೆ ನೀಡುತ್ತಿರುವ ಸಹಾಯಧನವನ್ನು ಹಂತಹಂತವಾಗಿ ಕಡಿಮೆ ಮಾಡಬೇಕು ಎನ್ನುವ ಪ್ರಸ್ತಾಪ ತಜ್ಞರಿಂದ ವ್ಯಕ್ತವಾಗಿದೆ. ಮುಂದೊಂದು ದಿನ ಸರ್ಕಾರ ಅನಿವಾರ್ಯವಾಗಿ ನೀರಿನ ಸಹಾಯಧನ ರದ್ದುಪಡಿಸಿದರೆ ಒಂದು ಲೀಟರ್ ನೀರಿಗೆ ನೂರಾರು ರುಪಾಯಿ ಪಾವತಿಸುವ ಸನ್ನಿವೇಶ ಕಲ್ಪನೆಯಲ್ಲ, ಅತಿಸನಿಹದಲ್ಲೇ ಇರುವ ವಾಸ್ತವ. ಆಗ ನೀರಿನ ಮಹತ್ವ ಅರ್ಥವಾದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ನಾವಿರುತ್ತೇವೆ.
ಜೀವನಶೈಲಿ, ಕೃಷಿ ಎಲ್ಲವೂ ಸೇರಿ ಜಗತ್ತಿನಲ್ಲಿ ಅತಿಹೆಚ್ಚು ನೀರು ಬಳಸುತ್ತಿರುವವರು ಭಾರತೀಯರೇ (ಶೇ.13). ನಮಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ನೀರಿನ ಬಳಕೆಯಲ್ಲಿ (ಶೇ.12) ಭಾರತಕ್ಕಿಂತ ಹಿಂದಿದೆ ಎನ್ನುವುದು ಗಮನಾರ್ಹ.

-ರಾಧಾಕೃಷ್ಣ ಎಸ್. ಭಡ್ತಿ

abhyagatha@yahoo.co.in


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com