ಭಾರತಕ್ಕೂ ಆತಂಕ, ಇರಾಕ್‌ನ ಸುನ್ನಿ-ಶಿಯಾ ಸಂಘರ್ಷ

ಕೆಲವು ಭಾರತೀಯ ಕೆಲಸಗಾರರ ಅಪಹರಣ ಮತ್ತು ನರ್ಸ್‌ಗಳು ಸಿಕ್ಕಿಹಾಕಿಕೊಂಡ...
ಭಾರತಕ್ಕೂ ಆತಂಕ, ಇರಾಕ್‌ನ ಸುನ್ನಿ-ಶಿಯಾ ಸಂಘರ್ಷ

ಕೆಲವು ಭಾರತೀಯ ಕೆಲಸಗಾರರ ಅಪಹರಣ ಮತ್ತು ನರ್ಸ್‌ಗಳು ಸಿಕ್ಕಿಹಾಕಿಕೊಂಡ ನಂತರವೇ ಇರಾಕ್ ಬಿಕ್ಕಟ್ಟಿನ ಪರಿಣಾಮ ನಮಗೆ ತಟ್ಟಿದ್ದು. ಒಂದು ವೇಳೆ ತೈಲ ದರ ಹುಚ್ಚಾಪಟ್ಟೆ ಏರಿದರೆ ಆರ್ಥಿಕ ಅವಗಢವೂ ಸಂಭವಿಸಬಹುದೆಂಬ ಎಚ್ಚರಿಕೆಯ ಗಂಟೆಯೂ ನಮ್ಮ ಕಿವಿಗಳಲ್ಲಿ ಮೊಳಗಿದೆ. ಇವೆಲ್ಲ ಗಂಭೀರ ಸಮಸ್ಯೆಗಳಾಗಿದ್ದು, ಅತ್ಯಂತ ಎಚ್ಚರಿಕೆಯಿಂದ ನಾವು ಹೆಜ್ಜೆಯಿಡಬೇಕಿದೆ. ಆದರೆ ಇರಾಕ್ ಒಡ್ಡುತ್ತಿರುವ ಅತಿದೊಡ್ಡ ಅಪಾಯ ಸೈದ್ಧಾಂತಿಕವಾದದ್ದು. ಮೂಲಭೂತವಾದಿ ಧಾರ್ಮಿಕ ಪಡೆಗಳು ಆಕ್ರಮಣಕಾರಿ ರೂಪ ಪಡೆಯುತ್ತಿದ್ದು, ಅವುಗಳ ಮುಖ್ಯ ಗುರಿಗಳಲ್ಲಿ ಭಾರತವೂ ಒಂದು.
ಮೂಲಭೂತವಾದಿ ಶಕ್ತಿಗಳ ಅನೇಕ ರೂಪಗಳನ್ನು ನಾವು ನೋಡಿದ್ದೇವೆ. ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ ಒಸಾಮಾ ಬಿನ್ ಲಾಡೆನ್ ಹುಟ್ಟುಹಾಕಿದ ಅಲ್ ಖೈದಾ ಕಠೋರ ಸಿದ್ಧಾಂತದ ಮೇಲೆಯೇ ನಿಂತಿತ್ತು. ವಿದೇಶಗಳ ಪ್ರಭಾವವನ್ನು ಕಳಚಿಕೊಳ್ಳಬೇಕು ಎಂದು ಮುಸಲ್ಮಾನ ರಾಷ್ಟ್ರಗಳಲ್ಲಿ ಕರೆಕೊಡುತ್ತಿದ್ದ ಆ ಸಂಘಟನೆ, ಇಸ್ಲಾಮಿಕ್ ಪ್ರಪಂಚವನ್ನು ಅಸ್ತಿತ್ವಕ್ಕೆ ತಂದು ಎಲ್ಲೆಡೆಯೂ ಷರಿಯಾ ಕಾನೂನನ್ನು ಜಾರಿಗೊಳಿಸಬೇಕೆಂದು ಹವಣಿಸುತ್ತಿತ್ತು. ಅದರ ಜಾಗತಿಕ ಜಿಹಾದ್ ಕರೆಗೆ ತಾಲಿಬಾನ್‌ನಂಥ ಸಂಘಟನೆಗಳೂ ಬೆಂಬಲ ನೀಡಿದವು. ಅಫ್ಘಾನಿಸ್ತಾನ ಮತ್ತು ಸುತ್ತಮುತ್ತಲ ರಾಷ್ಟ್ರಗಳಲ್ಲಿ ಮೃಗೀಯ ಆಚರಣೆಗಳಲ್ಲಿ ತಾಲಿಬಾನ್ ತೊಡಗಿತು. ಹಿಂದೊಮ್ಮೆ ತಾಲಿಬಾನ್‌ದೊಂದಿಗೆ ಕೆಲಸ ಮಾಡಿದ್ದ ಪಾಕಿಸ್ತಾನ ಕೂಡ ಈಗ ಅದರ ವಿರುದ್ಧ ತಿರುಗಿಬಿದ್ದಿದೆ. ಇತ್ತೀಚೆಗೆ ಕರಾಚಿ ವಿಮಾನ ನಿಲ್ದಾಣದಲ್ಲಿ ನಡೆದ ದಾಳಿಯ ನಂತರ ಪಾಕಿಸ್ತಾನಿ ಪಡೆಗಳು ತಾಲಿಬಾನಿಗಳು ಅಡಗಿಕೊಂಡಿದ್ದಾರೆ ಎನ್ನಲಾದ ಸರಹದ್ದು ಪ್ರಾಂತ್ಯಗಳ ಮೇಲೆ ನಿರಂತರ ವೈಮಾನಿಕ ದಾಳಿ ನಡೆಸತೊಡಗಿವೆ. ಜಾಗತಿಕ ಜಿಹಾದ್ ಸಿದ್ಧಾಂತದ ವಿಸ್ತರಣೆಗೆ ಇರಾಕ್‌ನಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಉತ್ತಮ ಉದಾಹರಣೆ. ಅದು ಇರಾಕ್‌ನಲ್ಲಿನ ಬಿಕ್ಕಟ್ಟು ಎನ್ನುವ ಕಾರಣಕ್ಕೆ ಅದನ್ನು ಸುನ್ನಿ ಮತ್ತು ಶಿಯಾಗಳ ನಡುವಿನ ಮತ್ತೊಂದು ತಿಕ್ಕಾಟ ಎಂದು ಹೇಳಿಬಿಡುವುದು ಸುಲಭ. ಸುನ್ನಿ ಮತ್ತು ಶಿಯಾಗಳ ಸಮಬಲದಲ್ಲಿರುವ ಏಕೈಕ ಮುಸ್ಲಿಂ ರಾಷ್ಟ್ರ ಇರಾಕ್. ಆದಾಗ್ಯೂ ಶಿಯಾಗಳ ಸಂಖ್ಯೆ ಸುನ್ನಿಗಳಿಗಿಂತ ಎರಡು ಪ್ರತಿಶತ ಹೆಚ್ಚಿದೆಯಷ್ಟೆ. ಅಮೆರಿಕ ನೇಣುಗಂಬಕ್ಕೇರಿಸಿದ ಆ ರಾಷ್ಟ್ರದ ಅಧ್ಯಕ್ಷ ಸದ್ದಾಂ ಹುಸೇನ್ ಸುನ್ನಿಯಾಗಿದ್ದ. ಈಗ ಅಮೆರಿಕ ಸಿಂಹಾಸನಕ್ಕೇರಿಸಿರುವ ಅದರ ಪ್ರಧಾನಿ ನೂರಿ ಅಲ್-ಮಲೀಕಿ ಶಿಯಾ ಜನಾಂಗದವರು. ವ್ಯಂಗ್ಯವೆಂದರೆ, ವಾರದ ಹಿಂದೆ ಅಮೆರಿಕ, "ಸುನ್ನಿ ನಾಯಕನಿಗೆ ತಮ್ಮ ಸ್ಥಾನ ಬಿಟ್ಟುಕೊಟ್ಟರೆ ಇರಾಕ್ ಶಾಂತಿಯುತವಾಗಿರುತ್ತದೆ" ಎಂದು ಅಲ್-ಮಲೀಕೀಗೆ ಸಲಹೆ ಕೊಟ್ಟಿದೆ. ಮಲೀಕಿ ಈ ಯೋಚನೆಯನ್ನು ನೇರವಾಗೇ ತಿರಸ್ಕರಿಸಿದ್ದಾರೆ.  ಆದಾಗ್ಯೂ ಇದು ಗೊಂದಲಮಯ ಯೋಚನೆಯಾಗಿತ್ತು ಬಿಡಿ. ವಿಯಟ್ನಾಂನ ಮೇಲೆ ಅನೇಕ ವರ್ಷಗಳು ಯುದ್ಧ ಮಾಡಿದರೂ ಹೇಗೆ ಅಮೆರಿಕಕ್ಕೆ ಆ ರಾಷ್ಟ್ರವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲವೋ, ಅದೇ ರೀತಿಯೇ ಬುಷ್ ಸರ್ಕಾರ ಇರಾಕ್‌ನ ಮೇಲೆ ಯುದ್ಧ ಮಾಡಿದ್ದರೂ ಅದಕ್ಕೆ ಈ ದೇಶವನ್ನು ಅರ್ಥಮಾಡಿಕೊಳ್ಳಲಾಗುತ್ತಿಲ್ಲ. ಯಾರು ತಮ್ಮ ತಪ್ಪಿನಿಂದ ಪಾಠ ಕಲಿಯುವುದಿಲ್ಲವೋ, ಅವರು ಮತ್ತೆ ತಪ್ಪೆಸಗುವ ಸಾಧ್ಯತೆಗಳೇ ಹೆಚ್ಚು. ಇರಾಕ್‌ನಲ್ಲಿ ಶಿಯಾ ಮತ್ತು ಸುನ್ನಿಗಳ ನಡುವೆ ಅಧಿಕಾರಕ್ಕಾಗಿ ರಕ್ತಮಯ ಹೋರಾಟ ನಡೆಯುತ್ತಿದೆ ಎನ್ನುವುದು ನಿಜ. ಉತ್ತರ ಐರ್ಲ್ಯಾಂಡ್‌ನಲ್ಲಿ ಕ್ಯಾಥೋಲಿಕ್-ಪ್ರೊಟೆಸ್ಟೆಂಟ್‌ರ ನಡುವೆ ಇದೇ ರೀತಿಯ ಕಾಳಗ ನಡೆದಾಗ ಆ ಜಗಳವನ್ನು ಹತ್ತಿಕ್ಕಲಾಗಿತ್ತು. ಆದರೆ ಇದೇ ಕೆಲಸವನ್ನು ಈಗಿನ ಗದ್ದಲದ ವಿಷಯದಲ್ಲೇಕೆ ಮಾಡಲಾಗುತ್ತಿಲ್ಲ?
ಪಶ್ಚಿಮ ಏಶಿಯಾದಲ್ಲಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಇರಾನ್ ಅನ್ನು ಅಪಾಯಕಾರಿಯೆಂದು ಪರಿಗಣಿಸಿ ಅದನ್ನು ಪ್ರತ್ಯೇಕವಾಗಿಟ್ಟವು ಮತ್ತು ಸೌದಿ ಅರೇಬಿಯಾದೊಂದಿಗೆ ದೋಸ್ತಿ ಮಾಡಿಕೊಂಡವು. ಇದು ಅವು ಮಾಡಿದ ಅತಿದೊಡ್ಡ ತಪ್ಪಾಗಿತ್ತು.  ಸೌದಿ ಅರೇಬಿಯಾದ ಆಡಳಿತ ಬೌದ್ಧಿಕ ಗಣ ಜಾಗತಿಕ ಜಿಹಾದ್ ಅನ್ನು ಬೆಳೆಸುವಲ್ಲಿ ಬಹಳ ಆಸಕ್ತಿ ಹೊಂದಿವೆ. ಅದರ ವಹಾಬಿ ಸಿದ್ಧಾಂತವಂತೂ ಇತರ ಮುಸಲ್ಮಾನರನ್ನೂ 'ಇಸ್ಲಾಮೇತರರು' ಎಂದು ಪರಿಗಣಿಸುತ್ತದೆ. ಇದು ಪೆಂಟೆಕೋಸ್ಟಲ್ ಕ್ರಿಶ್ಚಿಯನ್ನರು ಸಾಂಪ್ರದಾಯಿಕ ಚರ್ಚ್‌ಗಳನ್ನು ಕ್ರಿಶ್ಚಿಯನೇತರ ಎಂದು ಭಾವಿಸಿದಂತೆಯೇ!(ಬಹುಶಃ ಇವರೆಲ್ಲ ಹಿಂದು ಧರ್ಮದ ಅನನ್ಯತೆಯಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಹಿಂದುಗಳು ತಮ್ಮ ಎಲ್ಲಾ ದೇವರುಗಳನ್ನು ನಿರಾಕರಿಸಿದರೂ ಅವರು ಹಿಂದುಗಳಾಗಿಯೇ ಇರುತ್ತಾರೆ). ಶಿಯಾಗಳ ಇರಾನ್, ಸುನ್ನಿಗಳ ವಹಾಬಿ ಸಿದ್ಧಾಂತವನ್ನು ಇಸ್ಲಾಮಿಕ್ ನಾಗರಿಕತೆಗೆ ಅಪಾಯಕಾರಿ ಎಂದು ಭಾವಿಸುತ್ತದೆ. ಆದರೆ ಶಿಯಾಗಳಲ್ಲೂ ಅನೇಕ ಕಟ್ಟರ್ ನಂಬಿಕೆಗಳಿವೆ. ಅವರ ಪ್ರಮುಖ ನಂಬಿಕೆಯೆಂದರೆ 12ನೇ ಇಮಾಮ್ "ಮಹ್ದಿ" ಜಾಗತಿಕ ಇಸ್ಲಾಮಿಕ್ ಉತ್ತರಾಧಿಕಾರಿಯನ್ನು ನೇಮಿಸಲು ಹುಟ್ಟಿಬರುತ್ತಾರೆ ಎಂಬುದು. ಈ ಕೆಲಸ ತ್ವರಿತವಾಗಿ ಆಗಬೇಕೆಂದರೆ ಚಿಕ್ಕ ಸೈತಾನ್ ರಾಷ್ಟ್ರವಾದ ಇಸ್ರೇಲ್ ಅನ್ನು ನಾಶ ಮಾಡಬೇಕಂತೆ.(ಅಮೆರಿಕ ದೊಡ್ಡ ಸೈತಾನ). ಇರಾನ್ ಇಸ್ರೇಲ್ ಅನ್ನು ಉತ್ಕಟವಾಗಿ ದ್ವೇಷಿಸುವುದರಿಂದಲೇ ಅಮೆರಿಕ ಇರಾನ್ ಅನ್ನು ವೈರಿಯಂತೆ ನೋಡುತ್ತದೆ. ಆದರೆ ಇಡೀ ಪ್ರಪಂಚವನ್ನು ತನ್ನ ಸಿದ್ಧಾಂತಕ್ಕೆ ಮತಾಂತರ ಮಾಡಬೇಕು ಎನ್ನುವ ಉದ್ದೇಶ ಇರಾನ್‌ಗೆ ಇಲ್ಲ. ಆ ಉದ್ದೇಶ ಸೌದಿ ಅರೇಬಿಯಾಕ್ಕಂತೂ ಬಹಳವಿದೆ. ಪಶ್ಚಿಮ ರಾಷ್ಟ್ರಗಳು ಸೌದಿ ಅರೇಬಿಯಾವನ್ನು ಈ ವಿಷಯದಲ್ಲಿ ಕ್ಷಮಿಸಿರುವುದರಿಂದ ವಹಾಬಿ ಸಿದ್ಧಾಂತ ವೇಗವಾಗಿ ಮತ್ತು ಗಾಢವಾಗಿ ವಿಸ್ತರಿಸತೊಡಗಿದೆ. ಇಷ್ಟೇ ಅಲ್ಲ, ಮುಸ್ಲಿಂ ಮತ್ತು ಮುಸ್ಲಿಮೇತರ ರಾಷ್ಟ್ರಗಳಲ್ಲೂ 'ಜಿಹಾದ್‌' ಅನ್ನು ಧಾರ್ಮಿಕ ಕರ್ತವ್ಯವೆಂದು ಬಿಂಬಿಸುವ ಮೂಲಭೂತವಾದ ಬೆಳೆಯುತ್ತಿದೆ. ಭಾರತದ ಹಲವು ಭಾಗಗಳಲ್ಲಿ ಮತ್ತು ಮಲೇಷಿಯಾ, ಇಂಡೋನೇಶಿಯಾದಂಥ ಧರ್ಮ ಸಹಿಷ್ಣು ಇಸ್ಲಾಮಿಕ ರಾಷ್ಟ್ರಗಳಲ್ಲೂ ಈ ಚಟುವಟಿಕೆ ಈಗ ಯಶಸ್ವಿಯಾಗುತ್ತಿದೆ. ಆದರೆ ಈ ಸಂದೇಶವನ್ನು ಅಮೆರಿಕ ಇದುವರೆಗೂ ಅರ್ಥಮಾಡಿಕೊಂಡಿಲ್ಲ. ಇಸ್ಲಾಂ ಧರ್ಮದಲ್ಲಿ ಮೂಲಭೂತವಾದವನ್ನು ಹಬ್ಬಿಸುವ ಕೆಲಸ ವಿರೋಧವಿಲ್ಲದೇ, ನಿರಾತಂಕವಾಗಿ ಸಾಗತೊಡಗಿದೆ.
ಭಾರತವೂ ಸೌದಿ ಅರೇಬಿಯಾವನ್ನು ಗೌರವಾನ್ವಿತ ಮಿತ್ರ ರಾಷ್ಟ್ರವೆಂದು ನೋಡುತ್ತದೆ. ಅದು ಸರಿಯೇ. ಆದರೆ ತೀವ್ರವಾದಿ ಇಸ್ಲಾಮಿಕ್ ಶಕ್ತಿಗಳು ಭಾರತದಲ್ಲಿ ಬಲಿಷ್ಠವಾಗಿರುವುದನ್ನು ಕಡೆಗಣಿಸುವುದು ಬಹುದೊಡ್ಡ ತಪ್ಪಾಗುತ್ತದೆ. ಭಾರತದ ಸಾಂಸ್ಕೃತಿಕ ಬೆಳವಣಿಗೆಗೆ ಇಸ್ಲಾಮಿಕ್ ಪಂಡಿತರು, ಕಲಾವಿದರು, ಸಂಗೀತಗಾರರು ಅಗಾಧ ಕೊಡುಗೆಯನ್ನು ಕೊಟ್ಟಿದ್ದಾರೆ. ಆದರೆ ಮೂಲಭೂತವಾದಿಗಳು ಭಾರತದ ಮಹಾನ್ ಇತಿಹಾಸವನ್ನು ಮರೆತು ಭಾರತದ ವಿರುದ್ಧವೇ ಕೆಲಸ ಮಾಡತೊಡಗಿದ್ದಾರೆ. ಬಾಬ್ರಿ ಮಸೀದಿ ಧ್ವಂಸವಾದ ನಂತರ ಹೊರದೇಶಗಳ ಮುಸ್ಲಿಂ ಮೂಲಭೂತವಾದಿಗಳಲ್ಲಿ ದ್ವೇಷದ ಕಿಚ್ಚು ಹತ್ತಿತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರವಂತೂ, ಅದರಲ್ಲೂ ಮುಖ್ಯವಾಗಿ ನರೇಂದ್ರ ಮೋದಿಯವರು ಅಧಿಕಾರಕ್ಕೇರಿರುವುದರಿಂದ(2002ರ ಗುಜರಾತ್ ಗಲಭೆಗೆ ತಪ್ಪಿತಸ್ಥ ಎಂದು ಮೂಲಭೂತವಾದಿಗಳು ಹೇಳುತ್ತಾರೆ) ಅವುಗಳ ಭಾರತ ದ್ವೇಷ ಇನ್ನಷ್ಟು ಹೆಚ್ಚಿರಬಹುದು. ಇರಾಕ್‌ನಲ್ಲಿ ವಹಾಬಿಗಳು ಗೆದ್ದರೆಂದರೆ, ನಿಸ್ಸಂಶಯವಾಗಿಯೂ ಭಾರತಕ್ಕೆ ಅಪಾಯವಿದೆ.

ಟಿ.ಜೆ.ಎಸ್ ಜಾರ್ಜ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com