ಅಷ್ಟಕ್ಕೂ ನಾವು ಆರಿಸಿರೋದು ಪ್ರಧಾನಿಯನ್ನೇ ಹೊರತು ಮಾಂತ್ರಿಕನನ್ನಲ್ಲ!

ನರೇಂದ್ರ ಮೋದಿ ಪ್ರಧಾನಿಯಾಗಿ ಮೂವತ್ತೈದು ದಿನಗಳಾದವು. ಭಾರತ ಅಭಿವೃದ್ಧಿಯೇ...
ಅಷ್ಟಕ್ಕೂ ನಾವು ಆರಿಸಿರೋದು ಪ್ರಧಾನಿಯನ್ನೇ ಹೊರತು ಮಾಂತ್ರಿಕನನ್ನಲ್ಲ!

ನರೇಂದ್ರ ಮೋದಿ ಪ್ರಧಾನಿಯಾಗಿ ಮೂವತ್ತೈದು ದಿನಗಳಾದವು. ಭಾರತ ಅಭಿವೃದ್ಧಿಯೇ ಆಗಿಲ್ಲ, 'ಅಚ್ಛೆ ದಿನ್ ಆಯೇಗಾ' ಎಂದು ಹೇಳಿ ಇಷ್ಟು ದಿನಗಳಾದರೂ ಮೋದಿಯವರಿಂದ ಒಳ್ಳೆಯ ದಿನಗಳು ಇನ್ನೂ ಬಂದಿಲ್ಲ, ಅದರ ಬದಲು ರೈಲು ಪ್ರಯಾಣ ದರ ಏರಿಕೆಯಾಗಿದೆ, ಅಡುಗೆ ಅನಿಲ ಏರುವ ಸಾಧ್ಯತೆಯಿದೆ, ಮೋದಿಯವರು ಕಳೆದ ಹತ್ತು-ಹನ್ನೆರಡು ದಿನಗಳಿಂದ ಏನೂ ಮಾಡದೇ ಸುಮ್ಮನಿದ್ದಾರೆ, ಅವರೂ ಸಹ ಹಿಂದಿನ ಪ್ರಧಾನಿ ಡಾ. ಮನಮೋಹನಸಿಂಗ್‌ರಂತೆ ಮಾತಾಡುತ್ತಿಲ್ಲ...
ಈ ರೀತಿಯ ಮಾತುಕತೆಗಳು ಅಲ್ಲಲ್ಲಿ ಸಣ್ಣದಾಗಿ ಹುಟ್ಟಿಕೊಂಡಿರುವುದನ್ನು ನೀವೂ ಕೇಳಿರಬಹುದು. ಒಂದು ತಿಂಗಳಾದರೂ ಏನೂ ಆಗಿಯೇ ಇಲ್ಲವಲ್ಲ ಎಂಬುದು ಕೆಲವರ ಅಸಹನೆ, ತಕರಾರಿಗೆ ಕಾರಣವಾಗಿದೆ. ಮೋದಿ ಹಾಗೆ ಮಾಡ್ತಾರೆ, ಹೀಗೆ ಮಾಡ್ತಾರೆ ಅಂತಿದ್ರಲ್ಲಾ, ಒಂದು ತಿಂಗಳಲ್ಲಿ ಏನು ಕಡಿದು ಕಟ್ಟಿದರು ಎಂದು ಹೇಳುವವರೂ ಇದ್ದಾರೆ. ಈ ಧಾಟಿಯ ಹತ್ತಾರು ಪತ್ರಗಳು ನಮ್ಮ 'ಪತ್ರಪ್ರಭ' ವಿಭಾಗಕ್ಕೆ ಬಂದಿವೆ.
ಇವು ಮೋದಿಯವರ ಬಗೆಗಿನ ಟೀಕೆಗಳು ಅಥವಾ ಆಡಳಿತ ವಿರೋಧಿ ಭಾವ ಎಂದು ಭಾವಿಸಬೇಕಿಲ್ಲ. ಮೋದಿ ಸರ್ಕಾರದ ಬಗ್ಗೆ ಜನಸಾಮಾನ್ಯರ ನಿರೀಕ್ಷೆ ಎಷ್ಟು ಎತ್ತರದಲ್ಲಿದೆ ಎಂಬುದಕ್ಕೆ ನಿದರ್ಶನ. ಕೇಂದ್ರದಲ್ಲಿ ಯಾವುದೇ ಪಕ್ಷದ, ಯಾರದೇ ಸರ್ಕಾರವಿರಲಿ, ಹತ್ತು ತಿಂಗಳು, ಒಂದು ವರ್ಷವಾದರೂ ಟೈಮು ಕೊಡಬೇಕು. ಆದರೆ ಮೋದಿಯವರ ವಿಷಯದಲ್ಲಿ ಜನ ಇಷ್ಟೆಲ್ಲ ಸಮಯ ಕೊಡಲು ತಯಾರಿಲ್ಲ. ಮೂರ್ನಾಲ್ಕು ತಿಂಗಳು ಸಹ ಕಾಯಲು ಸಿದ್ಧರಿದ್ದಂತಿಲ್ಲ. ಈ ಕಾರಣಕ್ಕೆ ಅವರು ಹೇಳಿದ್ದು 'ನನಗೆ ಹನಿಮೂನ್ ಟೈಮು ಸಹ ಸಿಕ್ಕಿಲ್ಲ' ಅಂತ.
ದಿಲ್ಲಿಯ ಪತ್ರಿಕೆಗಳು ವರದಿ ಮಾಡಿರುವಂತೆ, ಮೋದಿ ಪ್ರತಿದಿನ 17-18 ಗಂಟೆ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಸಮಯವನ್ನು ಕಚೇರಿಯಲ್ಲಿ ಕಳೆಯುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ, 2-3 ಗಂಟೆ ವ್ಯಯವಾಗುತ್ತದೆಂದು ಅವುಗಳಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಧಿಕಾರಿಗಳಿಗೆ ಹೆಚ್ಚಿನ ಸಮಯ ಕೊಡುತ್ತಿದ್ದಾರೆ. ಪಕ್ಷದ ಚಟುವಟಿಕೆ ಹಾಗೂ ರಾಜಕಾರಣದಿಂದ ಸಂಪೂರ್ಣ ದೂರ. ಬಹುಪಾಲು ಸಮಯ ಮೀಟಿಂಗ್‌ಗಳಲ್ಲಿ ಹೋಗುತ್ತಿವೆ. ಆಫೀಸು, ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಸಮಯವನ್ನು ಎತ್ತಿಡುತ್ತಿದ್ದಾರೆ. ಅವರಿಗೆ ದಿಲ್ಲಿ, ಅಲ್ಲಿನ ರೀತಿ, ರಿವಾಜು, ಆಡಳಿತವೆಲ್ಲ ಹೊಸತು. ಹೀಗಾಗಿ ತಳವೂರಲು ತುಸು ಸಮಯಬೇಕು. ಈ ಮಧ್ಯೆ ಬಜೆಟ್ ಅಧಿವೇಶನ ಬೇರೆ ಬರಲಿದೆ. ಇಡೀ ಸರ್ಕಾರ ಹಾಗೂ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಅವರಿಗೆ ಸ್ವಾಭಾವಿಕವಾಗಿ ಐದಾರು ತಿಂಗಳಾದರೂ ಬೇಕು.
ಆದರೆ ಅಲ್ಲಿತನಕ ಕಾಯುವ ವ್ಯವಧಾನ ಬೇಕಲ್ಲ.
ಮೋದಿ ಒಂದು ತಿಂಗಳು ಪೂರೈಸಿದ ದಿನ, ದಿಲ್ಲಿಯ 'ಹಿಂದುಸ್ತಾನ್ ಟೈಮ್ಸ್‌' ಪತ್ರಿಕೆಯಲ್ಲಿ ಒಂದು ಕಾರ್ಟೂನು ಪ್ರಕಟವಾಗಿತ್ತು. ಎರಡು ಖಾಲಿ ಕುರ್ಚಿಗಳ ಚಿತ್ರ. ಂ್ಟಜ್ಝ ಜ್ಟ್ಠಿ ಕಿಂ ಎಂದು ಬರೆದ ಒಂದು ಕುರ್ಚಿ ಮೇಲೆ ಹೂಗಳು ಚೆಲ್ಲಿದ್ದವು. ಕ್ಠ್ಟಿಛಿಟಜಟಡ ಜ್ಟ್ಠಿ ಂ್ಟಜ್ಝ ಎಂದು ಬರೆದ ಕುರ್ಚಿ ಮೇಲೆ ಮುಳ್ಳುಗಳು! ಬರೀ ಒಂದು ತಿಂಗಳ ಅವಧಿಯಲ್ಲಿ ಹೂಗಳು ಮಾಯವಾಗಿ ಮುಳ್ಳುಗಳು ಮೂಡಿರುವುದನ್ನು ಗಮನಿಸಿದರೆ, ಮೋದಿ ಮುಂದಿರುವ ಸವಾಲುಗಳ ತೀವ್ರತೆಯನ್ನು ಬಿಂಬಿಸುವುದು ಈ ಚಿತ್ರದ ಉದ್ದೇಶದಂತಿತ್ತು.
ಈ ದೇಶವನ್ನು ನೆಹರು, ಇಂದಿರಾಗಾಂಧಿ, ರಾಜೀವಗಾಂಧಿ ಹಾಗೂ ಡಾ. ಮನಮೋಹನಸಿಂಗ್ ಸೇರಿ 47 ವರ್ಷ 48 ದಿನಗಳ ಕಾಲ ಆಳಿದ್ದಾರೆ. ಅದಕ್ಕೆ ಹೋಲಿಸಿದರೆ ಮೋದಿ ಅಂಬೆಗಾಲಿಡುತ್ತಿದ್ದಾರೆ.
ಅಷ್ಟಕ್ಕೂ ನಾವು ಆರಿಸಿರುವುದು ಪ್ರಧಾನ ಮಂತ್ರಿಯನ್ನೇ ಹೊರತು ಮ್ಯಾಜಿಶಿಯನ್ ಅಲ್ಲವಲ್ಲ. ಅದೇನೇ ಇರಲಿ, ಸರ್ಕಾರದ ಬಗ್ಗೆ ಜನರ ನಿರೀಕ್ಷೆ ಸೊರಗಬಾರದು. ಅದು ಏರುತ್ತಲೇ ಹೋಗಬೇಕು. ನಿರೀಕ್ಷೆ ಕಳೆದುಕೊಂಡಾಗ ಆತ್ಮವಿಶ್ವಾಸ ಹಾಗೂ ಭರವಸೆಯೂ ಹೊರಟು ಹೋಗುತ್ತದೆ. ಆದರೆ ನಿರೀಕ್ಷೆ ಹುಸಿಯಾಗದಂತೆ ಕಾಪಾಡಿಕೊಳ್ಳುವುದು ಮೋದಿಯವರಿಗಿರುವ ಚಾಲೆಂಜ್. ಒಳ್ಳೆಯ ದಿನಗಳು ಬರುತ್ತವೆಂದು ಆಶಿಸೋಣ.
ಅನುವಂಶೀಯ ಹುಚ್ಚಾಟ
ನನ್ನ ಸ್ನೇಹಿತರಾದ ರಮೇಶ ಖೇತಾನಿ ಇತ್ತೀಚೆಗೆ ತಮ್ಮ ಹೇರ್‌ಸ್ಟೈಲ್‌ನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದರು. ಐವತ್ತೈದು ವರ್ಷದ ಅವರ ತಲೆಗೂದಲು ಕೆಂಪು ಹಾಗೂ ನೀಲಿಬಣ್ಣಕ್ಕೆ ತಿರುಗಿತ್ತು. ಒಂದು ಕ್ಷಣ ಅವರನ್ನು ಗುರುತು ಹಿಡಿಯುವುದೇ ಕಷ್ಟವಾಯಿತು. ಅವರು ಇರಲಿಕ್ಕಿಲ್ಲ ಎಂದು ಎರಡೆರಡು ಸಲ ಒಳಮನಸ್ಸು ಹೇಳುತ್ತಿತ್ತು. ಆದರೂ ಅವರ ಹತ್ತಿರ ಹೋಗಿ 'ತಾವು ರಮೇಶ್........ಖೇತಾನಿಖಖಖ....... ತಾನೆ?' ಎಂದೆ. 'ಈ ಮುಂಡೇದು ಕೂದಲ ಬಣ್ಣ ಇದೆಯಲ್ಲ, ನನ್ನ ಬಣ್ಣವನ್ನೆಲ್ಲ ಬಯಲು ಮಾಡುತ್ತಿದೆ' ಎಂದು ಜೋರಾಗಿ ನಕ್ಕರು.
ನನಗೆ ಭಲೇ ತಮಾಷೆ ಅನಿಸಿದ್ದು ಇದಕ್ಕಲ್ಲ.
'ಏನು ಖೇತಾನಿ? ನಿಮ್ಮ ಸ್ವರೂಪ? ಏನಿದು ಹುಚ್ಚಾಟ? ಎಂದು ಕೇಳಿದೆ. ಅದಕ್ಕೆ ಅವರು ನೀಡಿದ ಉತ್ತರ ಮಜಾ ಆಗಿತ್ತು.
'ಭಟ್ರೇ, ನೀವು ಹೇಳಿದಿರಲ್ಲ ಏನಿದು ಹುಚ್ಚಾಟ ಅಂತ. ನಿಮಗೆ ಗೊತ್ತಾ ಹುಚ್ಚಾಟ ಇದೆಯಲ್ಲ ಅದು hereditary (ಅನುವಂಶೀಯ). ವಿಚಿತ್ರ ಅಂದ್ರೆ ಇದನ್ನು ನಾವು ನಮ್ಮ ಪೂರ್ವಜರಿಂದ ಅಲ್ಲ, ನಮ್ಮ ಮಕ್ಕಳಿಂದ ಪಡೆಯುತ್ತೇವೆ.'
ಅವರಿಗೆ ಊಟ, ಇವರಿಗೆ ಉಪವಾಸ
ಚುನಾವಣೆ ಮುಗಿದು ಹೊಸ ಸರ್ಕಾರ ಬಂದರೂ ನರೇಂದ್ರ ಮೋದಿ -ರಾಹುಲ್ ಗಾಂಧಿ ಜೋಕುಗಳು ಮಾತ್ರ ನಿಂತಿಲ್ಲ. ರಮಜಾನ್ ಹಬ್ಬದ ಆಚರಣೆಯಲ್ಲಿರುವಾಗಲೇ ಒಂದು ಲೇಟೆಸ್ಟ್ ಜೋಕು.
ಒಮ್ಮೆ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ದಟ್ಟ ಅರಣ್ಯದಲ್ಲಿ ದಾರಿತಪ್ಪಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದರು. ಎಷ್ಟು ನಡೆದರೂ ಯಾವುದೇ ಊರಾಗಲಿ, ಜನರಾಗಲಿ ಸಿಗಲಿಲ್ಲ. ನೀರಡಿಕೆಯಿಂದ ಇಬ್ಬರೂ ತತ್ತರಿಸಿದ್ದರು. ಹಸಿವಿನಿಂದ ಕಂಗಾಲಾಗಿದ್ದರು. ಯಾರಾದರೂ ಸಿಗಬಾರದಾ ಎಂದು ಅಂದುಕೊಳ್ಳುತ್ತಿರುವಾಗಲೇ ಅವರಿಗೆ ಸನಿಹದಲ್ಲಿ ಮಸೀದಿಯೊಂದು ಕಾಣಿಸಿತು. ಅವರಿಬ್ಬರ ಆನಂದಕ್ಕೆ ಪಾರವೇ ಇರಲಿಲ್ಲ.
ರಾಹುಲ್- 'ನಾವು ಮಸೀದಿಯೊಳಗೆ ಹೋಗಿ ನನ್ನ ಹೆಸರು ಮೊಹಮದ್ ಅಂತ ಹೇಳ್ತೇನೆ. ನೀವು ನಿಮ್ಮ ಹೆಸರು ಅಹ್ಮದ್ ಅಂತ ಹೇಳಿ. ನಮಗೆ ತಿನ್ನಲು ಏನಾದರೂ ಸಿಗಬಹುದು. ನಾನು ಈ ಟ್ರಿಕ್ಕನ್ನು ಈ ಮೊದಲು ಪ್ರಯೋಗಿಸಿದ್ದೆ. ನಾನು ಹೇಳಿದಂತೆ ಮಾಡೋಣ ಆಯ್ತಾ?'
ಮೋದಿ-'ರಾಹುಲ್‌ಜೀ, ನಿಮ್ಮ ಸಲಹೆಗೆ ನನ್ನ ಒಪ್ಪಿಗೆ ಇಲ್ಲ. ನಾನು ನನ್ನ ಹೆಸರನ್ನು ಬದಲಿಸುವುದಿಲ್ಲ. ಈ ವಿಷಯದಲ್ಲಿ ಸುಳ್ಳು ಹೇಳೋಲ್ಲ. ನಾನು ನರೇಂದ್ರ ಮೋದಿ ಎಂದೇ ಪರಿಚಯಿಸಿಕೊಳ್ಳುತ್ತೇನೆ.'
ಸರಿ, ಇಬ್ಬರೂ ಮಸೀದಿಯೊಳಗೆ ಹೋದರು.
ನೀವು ಯಾರೆಂದು ಮೌಲ್ವಿ ಅವರಿಬ್ಬರನ್ನೂ ಕೇಳಿದರು.
ರಾಹುಲ್- ನನ್ನ ಹೆಸರು ಮೊಹಮದ್ ಅಂತ.
ಮೋದಿ- ನನ್ನ ಹೆಸರು ನರೇಂದ್ರ ದಾಮೋದರ್ ಮೋದಿ.
ಅವರಿಬ್ಬರನ್ನೂ ಸ್ವಾಗತಿಸುತ್ತಾ ಮೌಲ್ವಿ ಹೇಳಿದರು-'ಮೋದಿಯವರಿಗೆ ಮೊದಲು ಕುಡಿಯಲು ನೀರು ಕೊಡಿ. ಒಳಗಡೆ ಕರೆದುಕೊಂಡು ಹೋಗಿ ಊಟ ನೀಡಿ. ಮೊಹಮದ್ ಮಿಯಾ, ರಮಜಾನ್ ಮುಬಾರಕ್.'
ಕಾಮಗಾರಿಯ ಗುತ್ತಿಗೆ ಲಭಿಸಿದ್ದು ಯಾರಿಗೆ?
ನಮ್ಮ ದೇಶದಲ್ಲಿರುವ ಕಂಟ್ರಾಕ್ಟರ್‌ಗಳು ಅರ್ಥಾತ್ ಗುತ್ತಿಗೆದಾರರಿಗೆ ಇರುವಷ್ಟು 'ಕುಖ್ಯಾತಿ' ಬೇರೆ ದೇಶಗಳ ಕಂಟ್ರಾಕ್ಟರ್‌ಗಳಿಗೆ ಇಲ್ಲವೆಂದೇ ಹೇಳಬೇಕು. ನಮ್ಮಲ್ಲಿ ಗುತ್ತಿಗೆದಾರರನ್ನು 'ಬೆರಳು ತೋರಿಸಿದರೆ ಹಸ್ತ ನುಂಗು ವ ಮಂದಿ' ಎಂದೇ ಕರೆಯಲಾಗುತ್ತದೆ. ಆ ಮಾತಿಗೆ ಮತ್ತೊಂದು ಪುರಾವೆ ನೀಡಬಲ್ಲಂಥ ಒಂದು ಪ್ರಸಂಗದ ವಿವರಣೆ ಹೀಗಿದೆ:
ಅದೊಮ್ಮೆ ಅಮೆರಿಕದ ವೈಟ್‌ಹೌಸ್‌ನ ಮೇಲ್ಚಾವಣಿಯಲ್ಲಿ ಸಣ್ಣದೊಂದು ಬಿರುಕು ಕಾಣಿಸಿಕೊಂಡಿತು. ಅದನ್ನು ರಿಪೇರಿ ಮಾಡಿಸಲು ಅಮೆರಿಕ ಸರ್ಕಾರ ಟೆಂಡರ್ ಪ್ರಕಟಣೆಯ ಜಾಹೀರಾತು ಹೊರಡಿಸಿತು. ಆ ವಿವರ ಪತ್ರಿಕೆಗಳಲ್ಲಿ ಪ್ರಕಟವಾದ ಮರುದಿನವೇ ವೈಟ್‌ಹೌಸ್‌ಗೆ ಮೂವರು ಗುತ್ತಿಗೆದಾರರು ಬಂದರು. ಒಬ್ಬ ಬಾಂಗ್ಲಾದೇಶದವನು, ಇನ್ನೊಬ್ಬ ಚೀನಾದವನು, ಮೂರನೇ ಆಸಾಮಿ ಭಾರತದವನು.
ಈ ಗುತ್ತಿಗೆದಾರರ ಎದುರು ನಿಂತ ಅಮೆರಿಕನ್ ಅಧಿಕಾರಿ-'ರಿಪೇರಿ ಕೆಲಸಕ್ಕೆ ಎಷ್ಟು ಹಣ ಖರ್ಚಾಗಬಹುದೆಂದು ಪಟ್ಟಿ ಕೊಡಿ. ಆನಂತರ ಗುತ್ತಿಗೆ ಕಾಮಗಾರಿಯ ಹೊಣೆಯನ್ನು ಯಾರಿಗೆ ಕೊಡಬೇಕೆಂದು ನಿರ್ಧರಿಸುತ್ತೇವೆ' ಎಂದ.
ಮೊದಲು ಬಾಂಗ್ಲಾ ದೇಶದ ಗುತ್ತಿಗೆದಾರ ಮೇಲ್ಚಾವಣಿಯ ಬಳಿ ಹೋದ. ಬಿರುಕು ಬಿಟ್ಟ ಜಾಗವನ್ನು ಅಳತೆ ಮಾಡಿದ. ನಂತರ ಏನೇನೋ ಲೆಕ್ಕಾಚಾರ ಮಾಡಿ, ಈ ಕೆಲಸ ಮುಗಿಸಲು ಒಟ್ಟು 900 ಡಾಲರ್ ಖರ್ಚಾಗುತ್ತದೆ. 400 ಡಾಲರ್ ರಿಪೇರಿಗೆ ಬೇಕಾದ ವಸ್ತುಗಳ ಖರೀದಿಗೆ, 400 ಡಾಲರ್ ಕೆಲಸದವರ ಸಂಬಳ ಹಾಗೂ ಉಳಿದ 100 ಡಾಲರ್ ನನ್ನ ಕೂಲಿ ಎಂದ.
ಭಾರತದ ಗುತ್ತಿಗೆದಾರನ ಸರದಿ. ಇವನು ಎಷ್ಟು ಬೆಲೆ ಹೇಳಬಹುದು ಎಂಬ ಕುತೂಹಲದಲ್ಲಿ ಮೂವರೂ ಇದ್ದರು. ಈ ಭೂಪ, ಬಿರುಕು ಬಿಟ್ಟಿದ್ದ ಮೇಲ್ಚಾವಣಿಯತ್ತ ತಿರುಗಿ ಕೂಡ ನೋಡಲಿಲ್ಲ. ಲೆಕ್ಕಾಚಾರವನ್ನೂ ಮಾಡಲಿಲ್ಲ. ಬದಲಿಗೆ, ಈ ಕೆಲಸ ಮುಗಿಸಲು 2700 ಡಾಲರ್ ಖರ್ಚಾಗುತ್ತದೆ ಎಂದು ಬಿಟ್ಟ.
ಬಿರುಕು ಬಿಟ್ಟ ಜಾಗದ ಅಳತೆ ನೋಡದೆ, ಲೆಕ್ಕಾಚಾರವನ್ನೂ ಮಾಡದೆ ಭಾರೀ ಮೊತ್ತಕ್ಕೆ ಡಿಮ್ಯಾಂಡ್ ಮಾಡಿದ ಭಾರತೀಯ ಕಂಟ್ರಾಕ್ಟರ್‌ನನ್ನು ಕಂಡು ವೈಟ್‌ಹೌಸ್‌ನ ಅಧಿಕಾರಿಗೆ ವಿಪರೀತ ಸಿಟ್ಟು ಬಂತು. ಲೆಕ್ಕಾಚಾರವೇ ಇಲ್ಲದೇ ಮಾತಾಡ್ತೀರಲ್ರೀ, ಅಷ್ಟೊಂದು ದುಡ್ಡು ಯಾಕೆ ಎಂದು ಆತ ಸಿಟ್ಟಿನಿಂದ ಪ್ರಶ್ನಿಸಿದ.
ತಕ್ಷಣ ಆ ಅಮೆರಿಕನ್ ಅಧಿಕಾರಿಯನ್ನು ಒಂದು ಮೂಲೆಗೆ ಕರೆದೊಯ್ದು ಭಾರತದ ಗುತ್ತಿಗೆದಾರ ಪಿಸುದನಿಯಲ್ಲಿ ಹೇಳಿದ: ಸಾರ್, 1000 ಡಾಲರ್ ನಿಮಗೆ, ಒಂದು ಸಾವಿರ ಡಾಲರ್ ನನಗೆ, ಉಳಿದ 700 ಡಾಲರ್‌ಗೆ ಚೀನಾದ ಕಂಟ್ರಾಕ್ಟರ್‌ನ ಬಳಸಿಕೊಂಡು ಈ ಮೇಲ್ಚಾವಣಿಯ ದುರಸ್ತಿ ಕೆಲಸ ಮುಗಿಸಿ ಬಿಡೋಣ...
ಆ ಗುತ್ತಿಗೆ ಕಾಮಗಾರಿಯ ಗುತ್ತಿಗೆ, ಭಾರತದ ಕಂಟ್ರಾಕ್ಟರ್‌ನ ಪಾಲಾಯಿತು!
ಮಾತು -ಮೌನ
ಯೋಗಿ ದುರ್ಲಭಜೀ ಮೌನ. ಆಷಾಢ ಬಂತೆಂದರೆ ಅವರು ಮೌನ ಹೊದ್ದು ಕುಳಿತು ಬಿಡುತ್ತಾರೆ. ಒಂದು ತಿಂಗಳು ಕಾಯಬೇಕು. ಒಮ್ಮೊಮ್ಮೆ ಈ ಮೌನ ಎರಡು, ಮೂರು ತಿಂಗಳಿಗೆ ವಿಸ್ತರಿಸುವುದೂ ಉಂಟು. ಮಾತಿನ ಅಗತ್ಯ ಇಲ್ಲ ಅಂತಾದರೆ ಮೌನವೇ ಲೇಸು ಎಂಬುದನ್ನು ಅವರು ಮೌನದ ಅಗತ್ಯ ಇಲ್ಲವಾದರೆ ಮಾತ್ರ ಮಾತು ಎಂದು ಭಾವಿಸಿದಂತಿದೆ. ಆದರೆ ಮೌನವೇ ಹೆಚ್ಚು ಅಗತ್ಯವೆನಿಸುತ್ತದೆಂದು ಅವರು ಆಗಾಗ ಹೇಳುವುದನ್ನು ಕೇಳಿದ್ದೇನೆ.
ಬಿಳಿಗಿರಿರಂಗನ ಬೆಟ್ಟದಲ್ಲಿ ಒಬ್ಬ ಸ್ವಾಮೀಜಿಯಿದ್ದರು. ಅವರು ಹದಿನೆಂಟು ವರ್ಷಗಳ ಕಾಲ ಮೌನವ್ರತದಲ್ಲಿದ್ದರು. ಮಾತುಕತೆಯೆಲ್ಲ ಬರಹ, ಸನ್ನೆಗಳಲ್ಲೇ. ಹೊರ ಜಗತ್ತಿನೊಂದಿಗೆ ಅವರ ಸಂಪರ್ಕ ಇದ್ದುದು ಪತ್ರಗಳ ಮೂಲಕ ಮಾತ್ರ. ಅವರು ಎಷ್ಟು ಪತ್ರ ಬರೆಯುತ್ತಿದ್ದರೆಂದರೆ, ಅವರಿಗೆ ಎಷ್ಟು ಪತ್ರಗಳು ಬರುತ್ತಿದ್ದವೆಂದರೆ, ಅಂಚೆ ಇಲಾಖೆಯವರು ಅವರ ಆಶ್ರಮದಲ್ಲೇ ಒಂದು ಪೋಸ್ಟ್ ಡಬ್ಬಾವನ್ನು ಏರ್ಪಾಡು ಮಾಡಿದ್ದರು. ಹದಿನೆಂಟು ವರ್ಷಗಳ ನಂತರ ಅವರು ಮೌನ ಮುರಿದರು. ಆಗಲೇ ಅವರಿಗೆ ಕಿರಿಕಿರಿ ಆಗಲಾರಂಭಿಸಿತು. ಒಂದು ವರ್ಷ ಹಾಗೋ ಹೀಗೋ ಮಾತಾಡಿದರು. ಕೊನೆಗೆ ಮಾತು ಅವರಲ್ಲಿ ಅದೆಂಥ ಅಸಹನೆಯನ್ನು ಮೂಡಿಸಿತೆಂದರೆ ಅವರು ಪುನಃ ಮೌನವ್ರತಕ್ಕೆ ಶರಣಾದರು. ಆಗಲೇ ಅವರ ಆರೋಗ್ಯ ಸುಧಾರಿಸಿತು.
'ಮೌನದಲ್ಲಿದ್ದಾಗ ಮಾತಿನ ಅಗತ್ಯವೇ ಕಾಣುವುದಿಲ್ಲ. ಪ್ರಾಣಿ ಪಕ್ಷಿಗಳು ನಮಗಿಂತ ಚೆನ್ನಾಗಿ, ಸುಖವಾಗಿ ಬದುಕುವುದಿಲ್ಲವಾ?' ಎಂದು ಕೇಳುವ ಯೋಗಿಜೀ, ಎಲ್ಲ ಅನಿಷ್ಟಗಳಿಗೂ ಮಾತು ಕಾರಣ ಅಂತಾರೆ. ದೇವರು ಮನುಷ್ಯನಿಗೆ ಮಾತು ಕೊಟ್ಟು ಶಾಂತಿ ಕಿತ್ತುಕೊಂಡ ಎಂದು ಆಗಾಗ ಹೇಳುತ್ತಿರುತ್ತಾರೆ.
ಮೌನದ ಬಗ್ಗೆ ಗಟ್ಟಿಯಾಗಿ ಮಾತಾಡಿದವರು ಓಶೋ. ಅವರ Sounds of Silence ಪುಸ್ತಕ ಓದಿದರೆ ಮಾತು ಮರೆತು ಹೋಗಬಾರದಾ ಎಂದೆನಿಸಿದರೂ ಅಚ್ಚರಿಯಿಲ್ಲ. ಅಧಿಕಾರ ರಾಜಕಾರಣದಲ್ಲಿ ಉತ್ತುಂಗದಲ್ಲಿದ್ದಾಗ, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ವಾರದಲ್ಲಿ ಒಂದು ದಿನ ಮೌನವ್ರತ ಆಚರಿಸುತ್ತಿದ್ದರು. ಆದರೆ ವ್ರತ ಪಾಲನೆಯಲ್ಲಿ ಅವರು ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದರೋ ಗೊತ್ತಿಲ್ಲ.
ವರ್ಷದ ಮುನ್ನೂರು ಅರವತ್ತೈದು ದಿನಗಳ ಪೈಕಿ ಪ್ರತಿ ದಿನವನ್ನು ಒಂದಲ್ಲ ಒಂದು ರೀತಿಯಲ್ಲಿ ಆಚರಿಸುತ್ತೇವೆ. ಪರಿಸರ ದಿನ, ಏಡ್ಸ್ ದಿನ, ತಾಯಂದಿರ ದಿನ, ಪ್ರೇಮಿಗಳ ದಿನ ಎಂದು ಆಚರಿಸಿ ಸಂಭ್ರಮಿಸುತ್ತೇವೆ. ಜಗತ್ತಿನಾದ್ಯಂತ ಒಂದು ದಿನವನ್ನು ಮೌನಕ್ಕೂ ಕೊಟ್ಟಿದ್ದರೆ ಎಷ್ಟು ಚೆನ್ನಾಗಿತ್ತು?
ಮನೆಯಲ್ಲಿದ್ದಾಗ ವರ್ಷವಿಡೀ ಮೌನ ವ್ರತ ಆಚರಿಸುವುದಿಲ್ಲವಾ ಎಂಬ ಗಂಡಂದಿರು ಪುಕಾರು ತೆಗೆದರೆ ನನ್ನ ಉತ್ತರ ಮೌನವೇ!
ಹಿಲ್ಲರಿ ಪುಸ್ತಕ
ಹಿಲ್ಲರಿ ಕ್ಲಿಂಟನ್ ಅಮೆರಿಕದ ಪ್ರಪ್ರಥಮ ಅಧ್ಯಕ್ಷೆಯಾಗಬಹುದಾ?
ಇಂಥದೊಂದು ಚರ್ಚೆ ಈಗಾಗಲೇ ಶುರುವಾಗಿದೆ. ರಾಜಕೀಯ ಲೆಕ್ಕಾಚಾರಗಳೆಲ್ಲ ಅಂದುಕೊಂಡಂತೆ ಆದರೆ, ಹಿಲ್ಲರಿ 2016ರಲ್ಲಿ ಅಧ್ಯಕ್ಷೆಯಾಗುವುದು ನಿಶ್ಚಿತವೆಂದು ವಿಶ್ಲೇಷಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿಯೇ ಹಿಲ್ಲರಿ ಬರೆದ 'Hard Choices' ಪುಸ್ತಕ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. 632 ಪುಟಗಳ ಈ ಆತ್ಮಕಥನವನ್ನು ಓದಲು ಬಹಳ ತಾಳ್ಮೆ, ಸಂಯಮ ಬೇಕು. ಈ ಪುಸ್ತಕ ಬರೆಯುವ ಉದ್ದೇಶ ಇಟ್ಟುಕೊಂಡೇ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರಾ ಎಂದು ಭಾವಿಸಿರುವಷ್ಟು ಸಣ್ಣಪುಟ್ಟ ವಿವರಗಳನ್ನು ಅವರು ಬರೆದಿದ್ದಾರೆ.
ಕೆಲವು ವಿವರಗಳು ಸೊಗಸಾಗಿವೆ.
ಸರಿಯಾದ ಸಮಯ, ಮುಂದಿನ ತಂತ್ರ, ಮಹತ್ತರ ಕನಸು, ಆಕಾಂಕ್ಷೆಯನ್ನೆಲ್ಲ ಅಳೆದು ತೂಗಿ ಹಿಲ್ಲರಿ ಈ ಪುಸ್ತಕ ಬರೆದಿರುವುದು ಸ್ಪಷ್ಟ.
ಈ ಕೃತಿಯನ್ನು ವಿಮರ್ಶಿಸಿರುವ 'ಇಂಡಿಯಾ ಟುಡೇ' ವಾರಪತ್ರಿಕೆ ನೀಡಿರುವ ಶೀರ್ಷಿಕೆ - World's Longest ಈಗ.
ಜಗತ್ತಿನ ಪತ್ರಿಕೆಗಳ ಮುಖಪುಟವನ್ನು ನಾನು ನನ್ನ ಕೇಶವಿನ್ಯಾಸ ಬದಲಾವಣೆಯಿಂದ ಬದಲಿಸಬಲ್ಲೆ ಎಂದು ಹಿಂದೊಮ್ಮೆ ಹಿಲ್ಲರಿ ಹೇಳಿದ್ದರು. ಈಗ ಪುಸ್ತಕ ಬರೆದು ಜಗತ್ತಿನ ಪತ್ರಿಕೆಗಳ ಪುಟಗಳನ್ನು ತುಂಬಿಸಿರುವುದು ನಿಜ.


- ವಿಶ್ವೇಶ್ವರ ಭಟ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com