ಚಿತ್ತಾಲ ಎಂಬ 'ಯಶವಂತ' ನೆನಪಿನಲ್ಲಿ ಹೀಗೆ ನಿಂತ...

"ಪೂರ್ವಾಗ್ರಹ ರಹಿತ ಮನಸ್ಸಿನ ಪರಿಪಕ್ವ ಭಾವಗಳನ್ನು ಪದಗಳಲ್ಲಿ ಕೂಡಿಟ್ಟರೆ ಅದು ಉತ್ತಮ ಬರಹವಾಗುತ್ತದೆ ಹಾಗೆ ಮೂಡುವ...
ಚಿತ್ತಾಲ ಎಂಬ 'ಯಶವಂತ' ನೆನಪಿನಲ್ಲಿ ಹೀಗೆ ನಿಂತ...

"ಪೂರ್ವಾಗ್ರಹ ರಹಿತ ಮನಸ್ಸಿನ ಪರಿಪಕ್ವ ಭಾವಗಳನ್ನು ಪದಗಳಲ್ಲಿ ಕೂಡಿಟ್ಟರೆ ಅದು ಉತ್ತಮ ಬರಹವಾಗುತ್ತದೆ ಹಾಗೆ ಮೂಡುವ ಬರಹದಲ್ಲಿ ಕೃತ್ರಿಮತೆಯಿರುವುದಿಲ್ಲ ಅದು ಸಹಜಾಭಿನಯ. ನರ್ತಿಸುವುದನ್ನು ಸುಲಭವಾಗಿ ಹೇಳಿಕೊಡಿ" ಎಂದಾಗ ಸಿನಿಮಾನಟ ಪ್ರಭುದೇವ, ಒಬ್ಬನನ್ನು ವೇದಿಕೆಗೆ ಕರೆದರು. ಕೈಮೇಲೆತ್ತಿ ವಿದ್ಯುತ್ ಬಲ್ಬನ್ನು ಹೋಲ್ಡ್‌ರ್‌ನಿಂದ ತೆಗೆಯುವಂತೆ ತೋರಿಸು ಎಂದರು. ಅದೇ ಸಮಯದಲ್ಲೇ ಉರಿಯುವ ಸಿಗರೇಟ್ ಅನ್ನು ಪಾದದಿಂದ ನುರಿದು ಆರಿಸುವಂತೆ ತೋರಿಸು ಎಂದರು. ಎರಡನ್ನೂ ಏಕಕಾಲಕ್ಕೆ ನಡೆಸಿದಾಗ ಅಲ್ಲೊಂದು ನರ್ತನದ ಭಂಗಿ ಕಾಣಿಸಿತು! ಅಂತೆಯೇ, ಹಲವು ಪದಗಳನ್ನು ಹುಡುಕಿ-ಹಿಡಿದು, ತಟ್ಟಿ ತೆಗೆದು ಜೋಡಿಸುತ್ತಿದ್ದರೆ ಅದು ಅನ್ ಪ್ರೊಫೆಷನಲ್ ಬರಹವಾಗುತ್ತದೆ, ಕೃತ್ರಿಮತೆಯೆನಿಸಿ ಓದುವವ ಬೇಸರದಿಂದ ಮಗುಚಿಟ್ಟು ಓಡಿಹೋಗುತ್ತಾನೆ.
----
ಶಿಕಾರಿ , ಆಟ , ಕತೆಯಾದಳು ಹುಡುಗಿ , ಬೇನ್ಯಾ ಕೃತಿಗಳನ್ನು ಕನ್ನಡದ ಓದುಗರಿಗೆ ನೀಡಿದ ಅದೇ ಲೇಖಕ 'ಛೇದ' ಕಾದಂಬರಿಯನ್ನೂ ಅಷ್ಟೇ ಭಾವನಾತ್ಮಕವಾಗಿ ಮನದಿಂದ ಬಸಿದುಕೊಟ್ಟ! 'ಅವರ ಪುಸ್ತಕವೆಂದರೆ ಹೊಸದೊಂದು ಲೋಕಕ್ಕೆ ಪ್ರವೇಶ ದೊರೆತಂತೆ' ಎಂದುಕೊಂಡ ಓದುಗನಿಗೆ ನಿರಾಸೆ ಮಾಡದೇ ಬರೆದ ಲೇಖಕನ ಹೆಸರು ಯಶವಂತ ಚಿತ್ತಾಲ.
ಚಿತ್ತಾಲರ ಕಥೆಗಳಲ್ಲಿ ಬರುವ ಹಳ್ಳಿಗಳು, ರಸ್ತೆಗಳು, ಸಂಕಗಳು, ರಸ್ತೆಯ ಪಕ್ಕದ ಹಸಿರು ಗದ್ದೆಗಳು, ಅಲ್ಲೆಲ್ಲ ಅಲೆಯುವ ವಿವಿಧ ಪಾತ್ರಗಳು ಇವುಗಳಿಗೆಲ್ಲ ಮೂಲ ಆಕರ ಯಾವುದು ಗೊತ್ತೇ? ಅದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ಒಂದು ಸಣ್ಣ ಊರು ಹನೇಹಳ್ಳಿ. ಇಲ್ಲಿಯೇ ಹುಟ್ಟಿ ಬೆಳೆದವರು ಯಶವಂತ ವಿಠೋಬಾ ಚಿತ್ತಾಲ. ಯಶವಂತ ಚಿತ್ತಾಲರ ಅಣ್ಣ ಗಂಗಾಧರ ಚಿತ್ತಾಲ. ಅಣ್ಣ ಕವಿಯಾದರೆ ತಮ್ಮ ಯಶವಂತ ಶ್ರೇಷ್ಠ ಕಥೆಗಾರ, ಕಾದಂಬರಿಕಾರ.
ಬಡತನ ಮೂರ್ತಿವೆತ್ತ ಅಖಂಡ ಉತ್ತರಕನ್ನಡಕ್ಕೆ ಸಿರಿತನದ ಸೋಗು ಬಹಳ ಕಡಿಮೆ. ಜನ ಸಾದಾ-ಸೀದಾ ಮತ್ತು ನಿಯತ್ತುಳ್ಳವರು, ಸ್ನೇಹಪರರು, ಇರುವುದರಲ್ಲೇ ಅತಿಥಿ ಸತ್ಕಾರಕ್ಕೆ ಹೆಸರಾದವರು. ಇಂಥದ್ದೊಂದು ಬಡ ಕುಟುಂಬದ, ವಿಠೋಬಾ - ರುಕ್ಮಿಣಿ ದಂಪತಿಗಳ ಏಳು ಮಕ್ಕಳಲ್ಲಿ ಯಶವಂತರು ಐದನೆಯವರು. ಮನೆ ತುಂಬಾ ಮಕ್ಕಳು. ಮುಜುಗರ. ಕಾಯಿಲೆ. ತಂದೆ ವಾಸಿಯಾಗದ ವ್ಯಾಧಿಯಿಂದ ನರಳಿ ನೋವು ತಡೆಯಲಾರದೆ ಬಾವಿಗೆ ಬಿದ್ದು ಬಾಳು ಮುಗಿಸಿಕೊಂಡರು. ಒಬ್ಬ ಅಣ್ಣನ ಬಾಳೂ ನಡುವಿನಲ್ಲೇ ಕಳಚಿ ಬಿತ್ತು. ಸಾವು-ನೋವು-ನಲಿವು-ನಿರಾಶೆ-ಹತಾಶೆಗಳ ತೂಗುಯ್ಯಾಲೆಯಲ್ಲೇ ಕುಳಿತು, ಕುಮಟಾ, ಧಾರವಾಡ, ಮುಂಬಯಿ, ನ್ಯೂಜೆರ್ಸಿ (ಅಮೆರಿಕ) ಮೊದಲಾದೆಡೆಗಳಲ್ಲಿ ವಿದ್ಯಾಭ್ಯಾಸ ನಡೆಸಿದ ಹುಡುಗ ಯಶವಂತ, ಪಾಲಿಮರ್ ತಂತ್ರಜ್ಞಾನದಲ್ಲಿ ತಜ್ಞತೆಯನ್ನು ಸಂಪಾದಿಸಿದರು. ಮುಂಬಯಿ ವಿಶ್ವವಿದ್ಯಾನಿಲಯದ ಪ್ಲ್ಯಾಸ್ಟಿಕ್ ವಿಭಾಗದಲ್ಲಿ ಪ್ರಥಮ ಪದವಿಯನ್ನೂ ಪಡೆದ. ಸ್ಟೀಫನ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ನಾತಕೋತ್ತರ ಪದವಿಯನ್ನು ಗಳಿಸಿದ ನಂತರ ಬೇಕ್‌ಲೈಟ್ ಹೈಲಾಂ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಾ ಆದರಲ್ಲಿಯೇ ಉನ್ನತ ಹುದ್ದೆಗೇರಿ, ಸೇವಾವಧಿ ಪೂರ್ಣವಾಗುವವರೆಗೂ ದುಡಿದು ನಿವೃತ್ತರಾದರು.
ಚಿತ್ತಾಲರಿಗೆ ಬಾಲ್ಯದಿಂದ ಇದ್ದ ಇನ್ನೊಂದು ಹವ್ಯಾಸವೆಂದರೆ ಜಲವರ್ಣ ಚಿತ್ರ ರಚನೆ. ಇದು ಚಿತ್ತಾಲರ ಓದುಗರನೇಕರಿಗೆ ತಿಳಿದಿರದ ಸಂಗತಿ. ಅದನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಳ್ಳಬೇಕೆಂಬ ಮಹದಾಕಾಂಕ್ಷೆ ಹೊತ್ತು ಅದಕ್ಕಾಗಿಯೇ ಮುಂಬೈಗೆ ಹೋಗಿ, ಅಲ್ಲಿ 'ಕಲಾನಿಕೇತನ' ನಡೆಸುತ್ತಿದ್ದ ಸಂಜೆ ತರಗತಿಗಳಿಗೆ ಸೇರಿದ್ದು. ಆದರೆ, ಕಲೆ ಆಧಾರವಾಗಲಿಲ್ಲ, ಬದಲಾಗಿ, ಮುಂಬೈಗೆ ಹೋಗಿದ್ದೇ ಜೀವನದ ಮುಖ್ಯ ತಿರುವಾಗಿ ಪರಿಣಮಿಸಿತು. ಅಲ್ಲಿ ಎಂ. ಎನ್. ರಾಯರ ಪ್ರಭಾವಕ್ಕೆ ಒಳಗಾಗಿ, ಕಲಾನಿಕೇತನವನ್ನು ಬಿಟ್ಟು ರಾಯರ ಜೊತೆಗೆ ಸೇರಿಕೊಂಡರು. ವೈಚಾರಿಕ ಮಾರ್ಗದಲ್ಲಿ ಅದೊಂದು ದೊಡ್ಡ ಮೈಲುಗಲ್ಲು. ಮುಂದೆ, ಡಾರ್ವಿನ್, ಐನ್‌ಸ್ಟೈನ್, ಯೂಂಗ್, ಮಾರ್ಕ್ಸ್, ಮಾಸ್ತಿ, ಕಾರಂತ, ಪುಟ್ಟಪ್ಪ, ಮೊಪಾಸಾ, ಟಾಲ್‌ಸ್ಟ್ಟಾಯ್, ಚೆಕಾಫ್, ಹೆಮ್ಮಿಂಗ್ವೇ, ಕಾಫ್ಕಾ ಕಾಮೂವೇ ಮೊದಲಾದ ಸಾಹಿತ್ಯ ದಿಗ್ಗಜಗಳ ಪ್ರಭಾವ ಉಂಟಾಯ್ತು. ಜೊತೆಗೆ ಉದರಂಭರಣೆಗಾಗಿ ವೃತ್ತಿ ಸಂಬಂಧವಾದ ತಂತ್ರಜ್ಞಾನದ ಪರಿಚಯವನ್ನೂ ಮಾಡಿಕೊಳ್ಳಲೇಬೇಕಾಯ್ತು.
ಅವರಿಗೆ ಸೋನೆ ಮಳೆಯ ಹನಿಗಳು ಹಸಿರೆಲೆಗಳಮೇಲೆ ಪಟಪಟನೆ ತೊಟ್ಟಿಕ್ಕುವುದನ್ನೇ ನೆನಪಿಗೆ ತರುವ ಪುಟ್ಟ ಹುಟ್ಟೂರು ಹನೇಹಳ್ಳಿಯ ನೆನಪು ಮಾಸಲೇ ಇಲ್ಲ. ಬಾಲ್ಯದಿಂದ ಜೀವನ ನದಿಯ ಸಾವು-ನೋವಿನ ಪ್ರವಾಹಕ್ಕೆ ವಿರುದ್ಧವಾಗಿ ಈಜುತ್ತಾ, ಹಲವು ಸಂಗತಿಗಳು ಬೀಜಗಳಾಗಿ, ತಲೆಯೊಳಗೇ ಮೊಳೆತು ಕುಡಿಯೊಡೆದು ಬೆಳೆಯತೊಡಗಿದ್ದರಿಂದ ಕಥನ ಪ್ರಕ್ರಿಯೆ ಆರಂಭಗೊಂಡಿತು. ಆಗಿನ್ನೂ ಅವರ ವಯಸ್ಸು ಇಪ್ಪತ್ತೆರಡು. ಬರಹಲೋಕದಲ್ಲಿ ಅವರ ಮೊದಲ ಸಸ್ಯವೇ 'ಆಕಸ್ಮಿಕ' ಸಂಕಲನ. ಆಗ ಅವರು ಕುಮಟಾ ತಾಲೂಕಿನ ಬಾಡ ಎಂಬ ಹಳ್ಳಿಯಲ್ಲಿ ಶಾಲಾ ಮಾಸ್ತರರಾಗಿದ್ದರು. ಎಳೆಯ ಮಾಸ್ತರನಿಗೆ ಹತ್ತಿರದ ಸಂಬಂಧಿಗಳಲ್ಲೊಬ್ಬರಲ್ಲಿ ವಸತಿ-ಊಟ ಲಭಿಸಿದ್ದರಿಂದಲೂ ಒಂದೇ ತಾಲೂಕಿನ ಎರಡು ಹಳ್ಳಿಗಳಾದ ಬಾಡ ಮತ್ತು ಹನೇಹಳ್ಳಿಗಳ ಪರಿಸರ ಬಹುತೇಕಮಟ್ಟಿಗೆ ಹಾಗ್ಹಾಗೇ ಇದ್ದುದರಿಂದಲೂ, ಬಾಡದಲ್ಲಿರುವಾಗಲೂ ಈ ಯುವಕನಿಗೆ ಹನೇಹಳ್ಳಿಯದೇ ಧ್ಯಾನ. ಯಾರದೋ ಕೂಗನ್ನು ಬೆನ್ನು ಹಿಡಿದು ನಡೆದು ನೋಡಿ, ಅದು ಮನದಲ್ಲಿ ವಿಶಿಷ್ಟ ಆಕಾರ ತಳೆದು-ಬೆಳೆದು ಮೂಡಿದ್ದು 'ಬೊಮ್ಮಿಯ ಹುಲ್ಲು ಹೊರೆ'. ಇದು ಚಿತ್ತಾಲರ ಮೊದಲ ಕಥೆ. ನಂತರ ಮುಹೂರ್ತ, ಮೂಡು, ಮಾತುಗಳ ತ್ರಿವೇಣಿ ಸಂಗಮ, ರಾಸಾಯನಿಕ ಕ್ರಿಯೆ,  ದಿಗ್ಗನೆ ಪ್ರಕಾಶ, ಹೀಗೆ ಮನದಲ್ಲಿ ಕಥೆಗಳು ಹುಟ್ಟಿದ ಮೇಲೆಯೇ ಸಹಜವಾಗಿ ಕಥೆಗಾರನಾದದ್ದು. ಎಳೆಯ ಮಾಸ್ತರ ಬರೆದ ಸಾಹಿತ್ಯ-ರಸತೊಳೆಗಳನ್ನು ಸವಿದ ಜನ ಅವರನ್ನು ಗುರುತಿಸಲು ಆರಂಭಿಸಿದ್ದರು. ಹತ್ತು ಜನರಲ್ಲಿ ಹುದುಗಿದ್ದ ಭಾವಗಳಿಗೆ ಆಕಾರಕೊಡಬಲ್ಲ ತಾಕತ್ತು ಮಾಸ್ತರನಿಗೆ ಇದೆಯೆಂಬುದು ಸಾಬೀತಾದಾಗಲೇ ಮಾಸ್ತರನಲ್ಲಿ ನಿಜವಾದ  ಯಶವಂತ ಚಿತ್ತಾಲ ಎದ್ದುನಿಂತಿದ್ದು! ಬಹುತೇಕ ಕಥೆಗಳ ಕಥಾವಸ್ತುಗಳಲ್ಲಿ ಕಾಣಿಸುವುದು ಕೆಳವರ್ಗದವರ ಶೋಷಣೆ. ನೆಲದ ಮಣ್ಣ ಕತ್ತಲೆಯಲ್ಲಿ ಹುದುಗಿದ್ದ ಬೀಜ ವಾತಾವರಣದ ಆರ್ದ್ರತೆಯ ಸ್ಪರ್ಶಕ್ಕೆ ಜಮ್ಮುದಟ್ಟಿದೊಡನೆ ಮೊಳಕೆಯೊಡೆದದ್ದೇ 'ಕಥೆಯಾದಳು ಹುಡುಗಿ'. ಕಂಡ, ಕೇಳಿದ, ಧ್ವನಿಸಿದ, ಧ್ವನಿ ಪೂರ್ಣವೆನಿಸಿದ, ಆಕರ್ಷಿಸಿದ್ದ, ಕಣ್ಣು ಕೋರೈಸಿದ, ಅಚ್ಚೊತ್ತಿ-ಚಿತ್ರವಾದ, ಚಿತ್ತವನ್ನೊತ್ತಿದ ಎಲ್ಲಾ ವಿಷಯಗಳೂ ಕಥೆಗಳಾಗಿ ಶರೀರವನ್ನು ಪಡೆದುನಿಂತವು!
'ನೀವೇಕೆ ಬರೆಯುತ್ತೀರಿ' ಎಂಬ ಪ್ರಶ್ನೆಗೆ ಅವರ ಉತ್ತರ 'ಒಟ್ಟಿನಲ್ಲಿ ನಾನು ಬರೆಯುತ್ತಿದ್ದದ್ದು ನಾನು ನಾನೇ ಆಗಲು. ನಾನು ನಾನಾಗಿಯೇ ಉಳಿದು ಉಳಿದವರೊಂದಿಗೆ ಬರೆಯಲು, ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಿಕೊಳ್ಳಲು. ಉಳಿದವರನ್ನು ತಿದ್ದುವುದಕ್ಕಲ್ಲ. ಆ ಯೋಗ್ಯತೆಯಾಗಲಿ ಅಧಿಕಾರವಾಗಲಿ ನನಗಿಲ್ಲ. ಅಷ್ಟೇ ಅಲ್ಲ, ಇಂದಿನ ಸಮಾಜದಲ್ಲಿ ನಾನು ಮನುಷ್ಯನಾಗಿ ಬಿಚ್ಚಿಕೊಳ್ಳಲು ಆರಿಸಿಕೊಳ್ಳಬಹುದಾದ ಜೀವಂತ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದು, ಮಾತ್ರವಲ್ಲ, ಮನುಷ್ಯ ತನ್ನ ಬದುಕಿನ ನಕಾಶೆಯಲ್ಲಿ ಮೂಡಿಸಿಕೊಳ್ಳಲೇಬೇಕಾದ ಅತ್ಯಂತ ಮೌಲಿಕ ಸಂಗತಿಗಳಲ್ಲಿ ಕೆಲವು ಸಂಗತಿಗಳು ಸಾಹಿತ್ಯದಿಂದ ಮಾತ್ರ ಒದಗಬಲ್ಲಂಥವು' ಎಂದಿದ್ದರು.
ಉತ್ತರ ಕನ್ನಡ ಜಿಲ್ಲೆ, ಅದರಲ್ಲೂ ನನ್ನ ಹುಟ್ಟೂರಾದ ಹನೇಹಳ್ಳಿ. ಇವು ನನ್ನ ಮಟ್ಟಿಗೆ ಬರೇ ನೆಲದ ಹೆಸರುಗಳಲ್ಲ. ಬದಲಾಗಿ ನನ್ನ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ ಅದರ ಚೈತನ್ಯಕ್ಕೆ ನಿರಂತರವಾದ ಜೀವಸೆಲೆ ಎಂದವರು ಚಿತ್ತಾಲರು. ಹನೇಹಳ್ಳಿಯ 'ಭೂತ'ವನ್ನು ವರ್ತಮಾನದೊಂದಿಗೆ ಹೋಲಿಸುತ್ತಾ, ಅದನ್ನು ಇಡೀ ಮನುಕುಲದಲ್ಲಿ ಸಂಭವಿಸಿರುವ ಅಸ್ತಿತ್ವದ ಬಿಕ್ಕಟ್ಟಿಗೆ ಪ್ರತಿಮೆಯಾಗಿ ಪರಿವರ್ತಿಸುತ್ತಾರೆ. ಅವರ 'ಪುರುಷೋತ್ತಮ' ಕಾದಂಬರಿಯ ನಾಯಕ ತನ್ನ ಹನೇಹಳ್ಳಿಗೆ ಮತ್ತೆ ಬರುತ್ತಾನೆ. ವಾಸ್ತವಿಕತೆ ಮತ್ತು ಕಲ್ಪನಾವಿಲಾಸಗಳ ಗಡಿಗುರುತುಗಳನ್ನೂ, ನಾಕಾ ಬಂಧಿ-ಬಾಂಧವ ಕಲ್ಲುಗಳನ್ನು ಅವರು ತಮ್ಮ ಕೃತಿಗಳಲ್ಲಿ ಅಳಿಸಿ ಬಿಡುತ್ತಾರೆ. ಚಿತ್ತಾಲರು ವಿಜ್ಞಾನದ ವಿದ್ಯಾರ್ಥಿಯಾಗಿದ್ದುಕೊಂಡು, ತಂತ್ರಜ್ಞಾನ ಪರಿಣಿತರಾಗಿ, ತಮ್ಮ ಭಾವ ಪ್ರಪಂಚದೊಂದಿಗೆ ವೈಜ್ಞಾನಿಕ-ವೈಚಾರಿಕ ಪ್ರಪಂಚವು ಸೇರಿಕೊಂಡಿದ್ದರೂ, ಅವರಲ್ಲಿನ ವೈಚಾರಿಕತೆ ತನ್ನ ಮಿತಿಯನ್ನು ಉಲ್ಲಂಘಿಸಲಿಲ್ಲ. ಇದೇ ಅವರ ಕಥೆಗಳ ವಿಶಿಷ್ಟ ಮೌಲ್ಯ.
ಮುಂಬಯಿಯಂಥ ಮಹಾನಗರದ ಕಲುಷಿತ ವಾತಾವರಣಗಳಲ್ಲಿ, ನಾಗರಿಕತೆಯ ಸೋಗಿನಲ್ಲಿರುವ ಆಧುನಿಕ ನಾಗರಿಕತೆಯ ಹೀನ ಮುಖಗಳ ನಡುವೆ ಮಾನವೀಯತೆ ಮರೆಯಾಗುವ ಅಪಾಯವಿದೆ. ಇದನ್ನು ಅತ್ಯಂತ ಕಲಾತ್ಮಕವಾಗಿ ಅನುಭವಿಸಿ, ನಿರ್ವಹಿಸಿ, ಯಶಸ್ಸು ಸಾಧಿಸಿರುವವರು ಯಶವಂತರೊಬ್ಬರೇ. ನಗರ ಜೀವನದ ಹಣ ಕೇಂದ್ರಿತ ಸಂಬಂಧಗಳು 'ಶಿಕಾರಿ' ಕಾದಂಬರಿಯಲ್ಲಿ ಶಕ್ತವಾಗಿ ನಿರೂಪಿತವಾಗಿವೆ. ಸುಲಭವಾಗಿ ಕಾಣೆಯಾಗುವುದೇ ಅಭ್ಯಾಸವಾಗಿಬಿಟ್ಟ ನಮ್ಮೊಳಗಿನ ಮನುಷ್ಯನನ್ನು ಪತ್ತೆ ಮಾಡುವ ರೋಮಾಂಚನಕಾರಿ ಸಾಹಸದ ವಿವಿಧ ಮಜಲುಗಳನ್ನು ಅವರ ಕೃತಿಗಳಲ್ಲಿ ನಾವು ಕಂಡುಕೊಳ್ಳಬಹುದಾಗಿದೆ.
'ಹನೇಹಳ್ಳಿ, ಸಾವಿನ ನಿಗೂಢತೆ, ನಮ್ಮೊಳಗಿನ ಮನುಷ್ಯನನ್ನು ಹುಡುಕುವ ಪ್ರಯತ್ನ, ಇದು ನನ್ನ ಸಾಹಿತ್ಯದ ಆರಂಭದ ದಿನಗಳಿಂದಲೂ ನನ್ನ ಆಸ್ಥೆಗೆ ಒಳಪಟ್ಟ ವಿಷಯ, ಥೀಮ್‌' ಎಂದು ಅವರೇ ಹೇಳಿಕೊಂಡಿದ್ದಾರೆ. ಇಂಥದ್ದು ಸ್ವತಃ ಅವರಿಗೇ ಹೊಳೆದದ್ದು ಆಶ್ಚರ್ಯ. ಯಶವಂತ ಚಿತ್ತಾಲರ ಮೊದಮೊದಲ ಕಥೆಗಳು ಹಾಸ್ಯಪ್ರಜ್ಞೆ ಮತ್ತು ಭಾವನೆಗಳಿಂದ, ಮುಂಗಾರು ಮಳೆಯ ಆರಂಭದ ಸನ್ನಿವೇಶದಂತೆ, ಆರ್ದ್ರವಾದ ಮನಸ್ಸಿನ ಅಭಿವ್ಯಕ್ತಿಯಾಗಿವೆ. ಮುಂದೆ ದುಗುಡ-ಆತಂಕ-ವಿಷಾದಗಳು ಅವರ ಮನಸ್ಸನ್ನು ತುಂಬಿರುವಾಗ ಮೂಡಿಬಂದ ಕಥೆಗಳು, ಸರಳವಾಗಿರುವಂತೆನಿಸಿದರೂ ಸರಳವಲ್ಲದ, ಜನರಿಂದ ಬೇರೆಯಾಗಿಯೂ ಜನರಲ್ಲಿ ಬೆರೆಯಬೇಕೆನ್ನುವವನ ಅಭಿವ್ಯಕ್ತಿಯಾಗುತ್ತವೆ. ಹೋಗುತ್ತ ಹೋಗುತ್ತ, ಮುಂದಿನ ಮುಜಲಿನ ಕಥೆಗಳಲ್ಲಿ ನಗರವೇ ಕೇಂದ್ರವಾಗುತ್ತದೆ. ಅನುಭವದ ಸ್ವರೂಪದಲ್ಲಿ ಬದಲಾವಣೆಯಾದಂತೆ ಕಥಾಶಿಲ್ಪ ನಿರೂಪಣೆಯ ವಿಧಾನದಲ್ಲೂ ಬದಲಾವಣೆಯಾಗುತ್ತದೆ.
1959ರ ಸರಹದ್ದಿನಲ್ಲಿ ಚಿತ್ತಾಲರ ಬೆಳೆವಣಿಗೆಯ ದಿಕ್ಕು ಬಹುತೇಕ ಬದಲಾಗಿರುತ್ತದೆ ಎಂಬುದಕ್ಕೆ 'ಅಪರಿಚಿತರು'  ಸಾಕ್ಷಿ ಹೇಳುತ್ತದೆ. ಜೀವನದ ಇನ್ನೊಂದು ಮಜಲು ಇದೇನೋ ಎಂಬಂತೆ, ಕಥೆ ವಾಸ್ತವಿಕತೆಯಿಂದ ಸಾಂಕೇತಿಕತೆಯೆಡೆಗೆ ಸಾಗುತ್ತದೆ. (1969) ಪ್ರಕಟಗೊಂಡ 'ಆಟ' ಕಥಾಸಂಕಲನ ವಿಭಿನ್ನ ದೃಷ್ಟಿಯಿಂದ ಮಹತ್ವದ್ದೆಂದು ಹೇಳಬಹುದು. 'ಪರಿಪೂರ್ಣತೆಯ ಗಡಿಯನ್ನೇ ಸ್ಪರ್ಶಿಸಿತು' ಎಂಬ ಹೇಳಿಕೆಗೆ ಭಾಜನವಾದ 'ಕಥೆಯಾದಳು ಹುಡುಗಿ'  ಸಂಕಲನದ ಸಾಲಿನಲ್ಲಿ ಬೋನ್ಸಾ, ಸಿದ್ಧಾರ್ಥಗಳೂ ನಿಲ್ಲುತ್ತವೆ. 'ನಾವು ಅಸಮಗ್ರತೆಯಿಂದ ಸಮಗ್ರತೆಯೆಡೆಗೆ, ಅಪ್ರಬುದ್ಧತೆಯಿಂದ ಪ್ರಬುದ್ಧತೆಯೆಡೆಗೆ ಸಾಗುವ, ಸ್ವಲ್ಪದರಲ್ಲಿ, ಮನುಷ್ಯರಾಗಿ ಸಾಗುವ ಪ್ರಕ್ರಿಯೆಗೆ "ಶಿಕಾರಿ"  ರೂಪಕವಾಗಿದಂ" ಎಂದು ಯಶವಂತ ಚಿತ್ತಾಲರು ಹೇಳಿಕೊಂಡಿದ್ದಿದೆ.
ಹೀಗಿದ್ದ ಚಿತ್ತಾಲರನ್ನು ಸಾಹಿತ್ಯಾಸಕ್ತ ಕನ್ನಡ ಮನಸ್ಸುಗಳು ಓದಿ ರಂಜನೆಗೊಳಗಾಗಿವೆ. ಸಂಕುಚಿತ ಭಾವಗಳುಳ್ಳವರು ತಮ್ಮನ್ನು ತಿದ್ದಿಕೊಂಡು ಉನ್ನತ ಮಾನವೀಯ ಸ್ವಭಾವಗಳನ್ನು ರೂಢಿಸಿಕೊಳ್ಳುವಲ್ಲಿ ಅವು ಸಹಕಾರಿಯಾಗಿವೆ. ಕಥೆಗಳನ್ನು ಬರೆಯುತ್ತಿದ್ದ ಚಿತ್ತಾಲರು ಹೊತ್ತಗೆಯಲ್ಲಿ ತಾವೂ ಅಡಗಿಹೋಗಿದ್ದಾರೆ. ಅಂತಹ ಚಿತ್ತಾಲರಿಗೆ ಹೆತ್ತ ತವರಾದ ಉತ್ತರಕನ್ನಡದ ಸಾಹಿತ್ಯಕ ಮನಸ್ಸುಗಳ ಪರವಾಗಿ ವಿಶೇಷವಾಗಿ ಮತ್ತು ಕನ್ನಡಿಗರೆಲ್ಲರ ಪರವಾಗಿ ಭಾವಪೂರ್ಣ ವಿದಾಯ.


- ವಿ.ಆರ್.ಭಟ್
vrbhat06@gmail.com

 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com