ತಮ್ಮ ವಚನಗಳಲ್ಲಿ ಅಸಮಾನತೆಯ ಬಗ್ಗೆ ಪ್ರತಿಭಟನೆಯನ್ನು ತಾತ್ವಿಕ ರೂಪವಾಗಿ ವ್ಯಕ್ತಪಡಿಸಿರುವ ಇವರು ಶ್ರೀಸಾಮಾನ್ಯನ ಕಲ್ಯಾಣವನ್ನು ತಮ್ಮ ಧ್ಯೇಯವೆಂದು ತಿಳಿದು ಅದೇ ಹಾದಿಯಲ್ಲೇ ನಡೆದವರು. ಜನತೆಗೆ ಅನ್ನದ ಅವಶ್ಯಕತೆಗಿಂತ ಜ್ಞಾನದ ಅವಶ್ಯಕತೆಯಿದೆ ಎಂಬುದನ್ನು ತಿಳಿದು ಅದನ್ನು ತಮ್ಮಲ್ಲಿ ಅಳವಡಿಸಿಕೊಂಡು ನಂತರ ಸಮಾಜದಲ್ಲಿ ಜಾರಿಗೆ ತಂದವರು.
12ನೇ ಶಕಮಾನವು ಅನೇಕ ಕಾರಣಗಳಿಗಾಗಿ ಪ್ರಾಮುಖ್ಯತೆಯನ್ನು ಪಡೆದಿದೆ. ರಾಜಕೀಯ ಮತ ಸಂಘರ್ಷ, ಮೇಲು ಕೀಳೆಂಬ ಅಂಶಗಳಿಗೆ ಒಳಗಾಗಿದ್ದ ಕಾಲದಲ್ಲಿ ಬಂದವರು ಶಿವಶರಣರು. ಇವರು ವೀರಶೈವ ಧರ್ಮವನ್ನು ಹರಡುವುದಕ್ಕೆ ಸೀಮಿತರಾಗದೇ ಧರ್ಮ ಪ್ರಚಾರದಲ್ಲಿ ಅನೇಕ ಜೀವನ ಮೌಲ್ಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ವಚನ ಮೂಲಕ ಪ್ರಚಾರ ಮಾಡಿದವರು.
ಮಾನವನ ಜೀವನ ನಿರ್ವಹಣೆಗೆ ಹಣಕಾಸು ಕೂಡ ಪ್ರಮುಖವಾಗಿದ್ದು ಅದು ಸಮಾಜದ ಉತ್ಪಾದನೆ, ವಿನಿಮಯ, ಹಂಚಿಕೆಗೆ ಸಂಬಂಧಪಟ್ಟಿದೆಯಲ್ಲದೇ, ಉದ್ಯೋಗ ಮತ್ತು ವರಮಾನಕ್ಕೂ ಆಧಾರವಾಗಿದೆ. ರಾಷ್ಟ್ರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಆರ್ಥಿಕ ವ್ಯವಸ್ಥೆಯನ್ನು ಜಾರಿಗೆ ತರುವಂತಹ ಜವಾಬ್ದಾರಿಯನ್ನು ಕೈಗೊಂಡವರು ಶಿವಶರಣರಾಗಿದ್ದಾರೆ. ಅರ್ಥಕ್ಕೆ ನಿರ್ಣಾಯಕ ಪಾತ್ರವಿದೆ ಎಂದು ಗುರುತಿಸಿ, ಅದನ್ನು ಜಾರಿಗೆ ತರಲು ಭಕ್ತಿ ಮಾರ್ಗವನ್ನು ಅನುಸರಿಸಿದವರು. 20ನೇ ಶತಮಾನದಲ್ಲಿ ಕಾರ್ಲ್ ಮಾರ್ಕ್ಸ್, ಮಾರ್ಷಲ್, ಹೇಗಲ್, ಕೇನ್ಸ್, ಗಾಂಧೀಜಿ, ಇತ್ತೀಚಿನ ಅಮರ್ತ್ಯ ಸೇನ್ರವರು ಪ್ರಚಾರಕ್ಕೆ ತಂದ ವಿಚಾರಗಳನ್ನು 800 ವರ್ಷಗಳ ಹಿಂದೆಯೇ ನಮ್ಮ ಶಿವಶರಣರು ಅಳವಡಿಸಿಕೊಳ್ಳುವಂತೆ ಪ್ರೇರೆಪಿಸಿದವರು. ಅಲ್ಲಮ ಪ್ರಭುಗಳು ಮಾನವ ಆಸೆಗಳನ್ನು ಪೂರೈಸಿಕೊಳ್ಳುವ ಮೂಲಭೂತ ಅಂಶಗಳ ಬಗ್ಗೆ ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.
"ಹೊನ್ನು ಮಾಯೆಂಬರು, ಹೊನ್ನ ಮಾಯೆಯಲ್ಲ/ಹೆಣ್ಣು ಮಾಯೆಂಬರು, ಹೆಣ್ಣು ಮಾಯೆಯಲ್ಲ/ಮಣ್ಣು ಮಾಯೆಂಬರು ಮಣ್ಣ ಮಾಯೆಯಲ್ಲ/ ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರಾ!"
ಈ ವಚನವು ಆಧ್ಯಾತ್ಮಿಕವಾಗಿದ್ದರೂ ಕೂಡ ಲೌಕಿಕ ರಹಸ್ಯಗಳನ್ನು ಒಳಗೊಂಡಿದೆ. ಇಲ್ಲಿ ಹೆಣ್ಣು, ಹೊನ್ನು, ಮಣ್ಣು ಇತ್ಯಾದಿ ಆಸೆಗಳನ್ನು ದಾಟಿ ಮುನ್ನಡೆಯಬೇಕು ಎಂಬ ಅಂಶವನ್ನು ಒತ್ತಿ ಹೇಳಿದ್ದಾರೆ.
ಕಾಯಕ ತತ್ವವೆನ್ನುವುದನ್ನು ಭಕ್ತಿ ಭಂಡಾರಿ ಬಸವಣ್ಣನವರು ನೀಡಿದ ಅಪೂರ್ವ ಕೊಡುಗೆ ಎಂದರೆ ತಪ್ಪಾಗಲಾರದು. ಈ ತತ್ವ ಸರ್ವಕಾಲಿಕವಾದುದು. ಇಂದು ನಮ್ಮ ರಾಷ್ಟ್ರದಲ್ಲಿರುವ ಬಡವ-ಶ್ರೀಮಂತ, ನಿರುದ್ಯೋಗಿಗಳು, ಕಾರ್ಮಿಕರು- ಮಾಲೀಕರು, ಲಂಚಗುಳಿತನ, ಸ್ವಜನ ಪಕ್ಷಪಾತ, ಮೋಸ, ವಂಚನೆ ಮುಂತಾದ ಸಮಸ್ಯೆಗಳಿಗೆ ಶರಣರ ಕಾಯಕ ತತ್ವ ರಾಮಬಾಣವೆಂದರೆ ತಪ್ಪಾಗಲಾರದು. ಪ್ರತಿಯೊಬ್ಬರೂ ದೈಹಿಕವಾಗಿ ದುಡಿಮೆ ಮಾಡಬೇಕು. ತನ್ನ ದುಡಿಮೆಯಿಂದಲೇ ಬದುಕಬೇಕು. ಪರಾವಲಂಬಿಗಳಾಗಿ ಸಮಾಜಕ್ಕೆ ಹೊರೆಯಾಗಬಾರದು. ಸಮಾಜದ ಅಭಿವೃದ್ಧಿಗೆ ಮಾತ್ರ ಸಂಪತ್ತಿನ ಉತ್ಪಾದನೆಗೆ ನೆರವಾಗುವ ಭೌತಿಕ ಮತ್ತು ದೈಹಿಕ ಶ್ರಮಕ್ಕೆ ಬಸವಣ್ಣನವರು ಕಾಯಕವೆಂದು ಕರೆದಿದ್ದಾರೆ.
ಈ ಕಾಯಕದಲ್ಲಿ ಅನ್ನ ದಾಸೋಹ, ಜ್ಞಾನದಾಸೋಹ ಮತ್ತು ಕಾಯಕ ದಾಸೋಹ ಈ ಮೂರನ್ನು ಆಚರಣೆಗೆ ತರಬೇಕೆಂದು ಬಸವಣ್ಣನವರ ಅಭಿಪ್ರಾಯವಾಗಿತ್ತು. ಪ್ರತಿಯೊಬ್ಬರು ತಮ್ಮ ವರಮಾನದಲ್ಲಿ ಒಂದಂಶವನ್ನು ದಾನಧರ್ಮ ಮಾಡಬೇಕು. ಎಲ್ಲರೂ ಕಾಯಕಮಾಡಿ ಜೀವಿಸಬೇಕು. ಅಂದಿನ ಕಾರ್ಯವನ್ನು ಅಂದೇ ಮಾಡಿ ಪರಿಶುದ್ಧರಾಗಬೇಕು ಅದುವೇ ಕಾಯಕವೆಂದಿದ್ದಾರೆ. ಅಷ್ಟೇ ಅಲ್ಲದೆ ಬಸವಣ್ಣನವರು ಸ್ವ-ಉದ್ಯೋಗ ಕೈಗೊಂಡು ತಮ್ಮ ನಿರುದ್ಯೋಗವನ್ನು ನಿವಾರಿಸಿಕೊಂಡು ಸ್ವಾವಲಂಬನೆಯತ್ತ ಮುನ್ನಡೆಯಬೇಕು ಎಂದಿದ್ದಾರೆ. "ಛಲಬೇಕು ಶರಣಂಗೆ ಪರಧನವನ್ನೊಲ್ಲೆನೆಂಬ ಉರಿ ಬರಲಿ, ಸಿರಿಬರಲಿ ಮಾನವರ ಬೇಡೆನು". ಏನೇ ಕಷ್ಟ ಬರಲಿ ಬೇಡುವುದನ್ನು ಮಾಡುವುದಿಲ್ಲ ಎಂದು ಆ ಮಾತಿಗೆ ದೇವರನ್ನೇ ಸಾಕ್ಷಿಯಾಗಿ ನಿಲ್ಲಿಸುತ್ತಾರೆ ಬಸವಣ್ಣ.
ಪ್ರಸ್ತುತ ನಮ್ಮ ರಾಷ್ಟ್ರದ ಬಹು ಮುಖ್ಯ ಸಮಸ್ಯೆಗಳಲ್ಲಿ ನಿರುದ್ಯೋಗವೂ ಕೂಡ ಒಂದಾಗಿದೆ. ಸುಶಿಕ್ಷಿತರೆಲ್ಲರೂ ತಮಗೆ ಸರ್ಕಾರಿ ಕೆಲಸ ಬೇಕೆಂದು ಆಶಿಸುತ್ತಾರೆ. ಆದರೆ ಸ್ವಂತ ಉದ್ದಿಮೆ ಸ್ಥಾಪಿಸಿ ತಮ್ಮ ಕಾಲ ಮೇಲೆ ನಿಲ್ಲುವ ಧೈರ್ಯ ಮಾಡುವುದಿಲ್ಲ. ಆದ್ದರಿಂದ ರಾಷ್ಟ್ರದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಬೃಹತ್ ಪ್ರಮಾಣದ ಯಂತ್ರಗಳಿಂದ, ಆಧುನಿಕ ತಂತ್ರಜ್ಞಾನಗಳಿಂದ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ. ಟಾಲ್ಸ್ಟಾಯ್, ಗಾಂಧೀಜಿಯವರು ಶಿವಶರಣರು ಹೇಳಿದ ಅಂಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಆ ಕಾರಣಕ್ಕಾಗೇ ಗಾಂಧೀಜಿಯವರು ಪ್ರತಿಯೊಂದು ಹಳ್ಳಿಗಳೂ ಸ್ವಾವಲಂಬಿಯಾಗಬೇಕೆಂದು ಹೇಳಿದ್ದರು. ಪ್ರಸ್ತುತ ಸಮಯದಲ್ಲಿ ಪ್ರತಿಯೊಬ್ಬರು ತಮ್ಮಲ್ಲಿ ಧನ, ಕನಕ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ, ಕೊರತೆ ಉಂಟುಮಾಡಿ ಹೆಚ್ಚು ಲಾಭಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಿವಶರಣರಲ್ಲಿ ಒಬ್ಬರಾದ ಆಯ್ದಕ್ಕಿ ಮಾರಯ್ಯನ ಮಡದಿ ಲಕ್ಷ್ಮಮ್ಮನ ವಚನವು ಹೆಚ್ಚು ಅರ್ಥಪೂರ್ಣವಾಗಿದೆ. ಮಾರಯ್ಯ ಪ್ರತಿನಿತ್ಯವೂ ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯ್ದ ತಂದು ತಮ್ಮ ಜೀವನ ನಡೆಸುತ್ತಿದ್ದರು. ಒಂದು ದಿನ ತಮ್ಮ ಅಗತ್ಯಕ್ಕಿಂತ ಹೆಚ್ಚು ಅಕ್ಕಿಯನ್ನು ಆಯ್ದು ತಂದಾಗ ಆಕೆ ತನ್ನ ಗಂಡನನ್ನು ಈ ರೀತಿಯಾಗಿ ಪ್ರಶ್ನಿಸುತ್ತಾಳೆ. "ಎನ್ನಾಳದರೇ ಯಾಕೆ ಹೆಚ್ಚು ತಂದಿರಿ/ ನಿತ್ಯವಷ್ಟೇ ಸಾಕು, ಈ ಹೆಚ್ಚಿನ ದುರಾಸೆ ನಿಮಗೇಕೆ ಉಂಟಾಯಿತು"
ಅಧಿಕ ಸಂಪತ್ತು ಹೊಂದಿದ ವ್ಯಕ್ತಿ ಒಂದು ಕೊಟ್ಟು ಎರಡು ಪಡೆವ ಪದ್ಧತಿಯನ್ನೂ ಶಿವಶರಣರು ಟೀಕಿಸಿದ್ದಾರೆ. ಸಂಪತ್ತು ಸಂಗ್ರಹಿಸುವವರು ಇತರರನ್ನು ಶೋಷಣೆ ಮಾಡಬಹುದು ಎಂಬಂಶವನ್ನು ಕಂಡುಕೊಂಡಿದ್ದಾರೆ. ಆ ಕಾಲದಲ್ಲಿ ದೇವಸ್ಥಾನದಲ್ಲಿ ವಣಿಕರು, ಅಧಿಕಾರಿಗಳು, ಲೇವಾದೇವಿ ವ್ಯವಹಾರಗಾರರು ಒಂದು ಕೊಟ್ಟು ಎರಡು ಪಡೆಯುವ ಗುಂಪಿಗೆ ಸೇರಿದವರು, ಪ್ರಸ್ತುತ ನಮ್ಮ ರಾಷ್ಟ್ರವು ಪ್ರಪಂಚದ ಅನೇಕ ರಾಷ್ಟ್ರಗಳಿಂದ ಹಣಕಾಸು ಸಂಸ್ಥೆಗಳಿಂದ 1,85,000 ಬಿಲಿಯನ್ನಷ್ಟು ಸಾಲಪಡೆದು ಪ್ರತಿವರ್ಷ 1.50,000 ಕೋಟಿ ರುಪಾಯಿಗಳವರೆಗೆ ಬಡ್ಡಿ ನೀಡುತ್ತದೆ ಎಂದರೆ ಅದರ ಪ್ರಮಾಣವೆಷ್ಟು? ಪ್ರಸ್ತುತ ತಲಾ ಸಾಲ 35000 ರು.
ಹಾಗೆಯೇ ಆಂಗ್ಲ ಅರ್ಥಶಾಸ್ತ್ರಜ್ಞರ ಬರವಣಿಗೆಗಳಿಂದ ಹೆಚ್ಚಿನ ಪ್ರಚಾರಕ್ಕೆ ಬಂದಿರುವ ಕೊರತೆ ಮತ್ತು ಮಿತವ್ಯಯವನ್ನು ಶಿವಶರಣರು ತಮ್ಮ ಧಾರ್ಮಿಕ ದೃಷ್ಟಿಕೋನದಿಂದ ಅಂದೇ ವಿಶ್ಲೇಷಿಸಿದ್ದರು. ಬಸವಣ್ಣನವರು ದೇವರ ಹೆಸರಿನಲ್ಲಿ ಹಣ ಅಪವ್ಯಯ ಮಾಡುವುದನ್ನು ಖಂಡಿಸುತ್ತಿದ್ದರು.
"ಉಳ್ಳವರು ಶಿವಾಲಯ ಮಾಡುವರು/ ನಾನೇನು ಮಾಡಲಿ ಬಡವನಯ್ಯಾ
ಎನ್ನಕಾಲೇಕಂಬ, ದೇಹವೇ ದೇಗುಲ, ಎನ್ನಶಿರ ಹೊನ್ನಕಳಸವಯ್ಯ, ಕೂಡಲ ಸಂಗಮದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲಾ"
ಸಮಾಜದಲ್ಲಿ ಉಳ್ಳವರು ಲಕ್ಷಾಂತರ ರುಪಾಯಿ ವ್ಯಯಿಸಿ ದೇವಾಲಯ ನಿರ್ಮಿಸುತ್ತಾರೆ. ದೇವರ ಹೆಸರಿನಲ್ಲಿ ಹಣಪೋಲು ಮಾಡುತ್ತಾರೆ. ಪ್ರಸ್ತುತ ಸನ್ನಿವೇಶದಲ್ಲಿ ಗುಡಿ ಗುಂಡಾಂತರಗಳನ್ನು ನಿರ್ಮಿಸುವವರ ಸಂಖ್ಯೆ ಅಧಿಕವಾಗಿದೆ.
ಪ್ರಸ್ತುತ ಆರ್ಥಿಕತೆಯಲ್ಲಿ ನಾವು ಪ್ರಥಮ, ದ್ವಿತೀಯ ಮತ್ತು ತೃತೀಯ ವಲಯಗಳೆಂದು ಆಧುನಿಕ ಯುಗದಲ್ಲಿ ಗುರುತಿಸುತ್ತೇವೆ. ಇಂತಹ ಅಂಶಗಳನ್ನು 800 ವರ್ಷಗಳ ಹಿಂದೆಯೇ ತಮ್ಮ ವಚನದಲ್ಲಿ ತಿಳಿಸಿದ್ದಾರೆ.
"ನಾನು ಆರಂಭದ(ಕೃಷಿ)ಮಾಡುವೆನಯ್ಯಾ ಗುರುಪೂಜೆಗೆಂದು, ನಾನು ಬೇವಹಾರವ(ವ್ಯವಹಾರ) ಮಾಡುವೆನಯ್ಯಾ ಲಿಂಗಾರ್ಚನೆಗೆಂದು, ನಾನು ಪರ ಸೇವೆಯ(ಸಾರಿಗೆ ಸಂಪರ್ಕ) ಮಾಡುವೆನಯ್ಯಾ ಜಂಗಮ ದಾಸೋಹಕ್ಕೆಂದು"
ಅಂದರೆ ಆ ಕಾಲದಲ್ಲೂ ಮೂರು ವಲಯಗಳಿದ್ದವೆಂಬುದನ್ನು ಅವರ ವಚನಗಳು ಸ್ಪಷ್ಟಪಡಿಸುತ್ತವೆ.
ಸಂಪತ್ತನ್ನು ಈ ಸಮಾಜದಿಂದ ಗಳಿಸುತ್ತೇವೆ. ಅದು ಸಮಾಜೋದ್ಧಾರಕ್ಕಾಗಿ ನೀಡಬೇಕು. ಸಂಪತ್ತನ್ನು ಗಳಿಸಬೇಕು, ಗಳಿಸಿದ ಸಂಪತ್ತಿನಲ್ಲಿ ಬೇಕಾದಷ್ಟು ಇಟ್ಟುಕೊಂಡು ಉಳಿದದ್ದನ್ನು ದಾಸೋಹಕ್ಕೆ ನೀಡಬೇಕು ಎಂದು ಬಸವಣ್ಣ ತಿಳಿಸುತ್ತಾರೆ. ಪ್ರಸ್ತುತ ಸನ್ನಿವೇಶದಲ್ಲಿ ಸಂಪತ್ತನ್ನು ಅಕ್ರಮವಾಗಿ ಗಳಿಸಿ ಸಂಗ್ರಹಿಸುವ ಬುದ್ಧಿ ಅಧಿಕವಾಗಿರುವುದನ್ನು ಕಾಣಬಹುದು.
ಹೀಗೆ ಬಸವಣ್ಣ ಮತ್ತು ಅವರ ಅನುಯಾಯಿಗಳಿಗೆ ಭಕ್ತಿ ಮತ್ತು ಕಾಯಕ ಆಧಾರದ ತತ್ವಗಳಾಗಿದ್ದವು. ಇವರು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವುದೇ ಭಕ್ತಿ, ಸಿಕ್ಕ ನೀರಲ್ಲಿ ಮುಳುಗಿ ಕಂಡ ಕಂಡ ಗುಡಿ ಗೋಪುರ ಗಳಿಗೆ ಸುತ್ತಿ ಬರುವುದು ಭಕ್ತಿಯಲ್ಲ, ಗುಡಿ ಗೋಪುರ ಕಟ್ಟುವುದು ಉಣ್ಣಲಾಗದ ಮೂರ್ತಿಗಳಿಗೆ. ಎಡೆ, ಹಣ್ಣು, ಕಾಯಿ, ನೈವೇದ್ಯ ಮಾಡುವುದು ಭಕ್ತಿಯಲ್ಲ, ತಾನು ಪ್ರಾಮಾಣಿಕನಾಗಿದ್ದು, ಹೆಣ್ಣು, ಹೊನ್ನು, ಮಣ್ಣು ಬಯಸದೇ ಕಾಯಕ ಮಾಡಿ ತನ್ನ ಸಂಪಾದನೆಯಿಂದ ಸಮಾಜದ ಒಳಿತಿಗಾಗಿ ದುಡಿಯುವವನೇ ನಿಜವಾದ ಭಕ್ತ ಎಂದಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ಶರಣರ ವಚನಗಳತ್ತ ಯುವ ಜನಾಂಗ ಹೆಚ್ಚು ಗಮನಹರಿಸಬೇಕಾಗಿದೆ. 115 ಕೋಟಿ ಜನಸಂಖ್ಯೆಯಲ್ಲಿ ಪ್ರತಿ ಶತ 40ರಷ್ಟು ಜನರು ನಿಲ್ಲಲು ನೆಲೆಯಿಲ್ಲದೇ ಹೊಟ್ಟೆ, ಬಟ್ಟೆಗಿಲ್ಲದೇ ನರಳಾಡುವಾಗ ಗುಡಿ, ಮಸೀದಿ, ಚರ್ಚ್ ಕಟ್ಟಿಸುತ್ತಿರುವುದು ಸರಿಯೇ? ಅದೇ ಹಣದಿಂದ ಬಡತನ ನಿರ್ಮೂಲನೆ ಮಾಡಿದರೆ ದೇವರು ಒಪ್ಪುವುದಿಲ್ಲವೇ?
-ಡಾ.ಕೆ.ಜಿ.ಶಂಕರಾನಂದ
ಸಹ ಪ್ರಾಧ್ಯಾಪಕರು.
ಎ.ಡಿ.ಬಿ.ಕಾಲೇಜು, ಹರಪನಹಳ್ಳಿ
Advertisement