ಮಕ್ಕಳ ನೆನಪಿನ ಶಕ್ತಿ ಹೆಚ್ಚಿಸಲು ಒಂದಿಷ್ಟು ಸರಳೋಪಾಯಗಳು

ನೆನಪಿನ ಶಕ್ತಿ ಎಂಬುದು ಎಲ್ಲರಲ್ಲೂ ಸಮಾನವಾಗಿ ಅಡಕವಾಗಿರುತ್ತದೆ. ಮೆದುಳು ಪೋಷಿಸಿದಷ್ಟು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಎಲ್ಲ ಮನುಷ್ಯರ ಮತ್ತು ಮಕ್ಕಳ ಮೆದುಳುಗಳು ಬಹುತೇಕ ಸಮಾನ ಸಾಮರ್ಥ್ಯವನ್ನು ಹೊಂದಿರುತ್ತವೆ. ನೆನಪಿನ ಶಕ್ತಿ ಎಂಬುದು ಎಲ್ಲರಲ್ಲೂ ಸಮಾನವಾಗಿ ಅಡಕವಾಗಿರುತ್ತದೆ. ಮೆದುಳು ಪೋಷಿಸಿದಷ್ಟು ಹೆಚ್ಚು ಚುರುಕಾಗಿ ಕೆಲಸ ಮಾಡುತ್ತದೆ.ಮೆದುಳಿನ ಶಕ್ತಿ ಎಷ್ಟೆಂದರೆ, ಯಾವುದಾದರೂ ಜೀವಕೋಶ ನಾಶವಾದರೆ ತೊಂಬತ್ತನೆಯ ವಯಸ್ಸಿನಲ್ಲೂ ಅದನ್ನು ಪುನರ್ಚಿಸಿಕೊಳ್ಳುತ್ತದೆ. ಈ ಮಿದುಳನ್ನು ಪೋಷಿಸಲು ಕೆಲವು ಕ್ರಮವಾದ ದಾರಿಗಳಿವೆ. ಕೆಲವನ್ನಿಲ್ಲಿ ನೋಡೋಣ,

ಆಹಾರ ಕ್ರಮ ಮತ್ತು ವ್ಯಾಯಾಮ: ಪ್ರೋಟೀನ್ ಯುಕ್ತ ಆಹಾರ , ವಿಟಮಿನ್  ಯುಕ್ತ ಆಹಾರಗಳು, ಹಣ್ಣು, ಬೇಯಿಸದ ಅಥವಾ ಅರೆಬೇಯಿಸಿದ ತರಕಾರಿಗಳನ್ನು ಆಹಾರವಾಗ ಬಳಸಬೇಕು. ಮೆಕ್ ಡಿ, ಪಿಜ್ಜಾ, ಕೋಲಾ ದಂತಹ ಆಹಾರ ಪದಾರ್ಥಗಳು ನೆನಪಿನ ಶಕ್ತಿಯ ಮೇಲೆ ಗಾಢ ಪರಿಣಾಮ ಬೀರುತ್ತವೆ ಎಂದು ಅನೇಕ ಅಧ್ಯಯನಗಳು ಹೇಳುತ್ತವೆ. ಜೊತೆಗೆ ಬೆವರು ಹರಿಯುವಷ್ಟು ಆಟ, ಮೆದುಳು ಮನಸ್ಸು ಮತ್ತು ದೇಹಕ್ಕೆ ಸಾಕಷ್ಟು ವಿಶ್ರಾಂತಿಗಳು ನೆನಪಿನ ಶಕ್ತಿಯ ವೃದ್ಧಿಗೆ ಸಹಾಯ ವಾಗುತ್ತವೆ. ಮೊಳಕೆಯೊಡೆದ ಕಾಳುಗಳು, ದ್ರಾಕ್ಷಿ, ಕುಂಬಳಕಾಯಿ ಬೀಜಗಳು, ದ್ರಾಕ್ಷಿ, ಗೋಡಂಬಿ, ಅಕ್ರೂಟ್ ಇತ್ಯಾದಿ ಒಣ ಹಣ್ಣುಗಳು, ದಿನಕ್ಕೊಂದು ಲೋಟ ಹಾಲು, ವಾರಕ್ಕೊಮ್ಮೆ ಅಥವಾ ಎರಡು ಬಾರಿ ಚಾಕಲೇಟುಗಳನ್ನು ಊಟದ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕು.

ಚಟುವಟಿಕೆಗಳು: ಮನುಷ್ಯ ತಾನು ಮಾಡಿದ್ದನ್ನು ಶೇ.90 ರಷ್ಟು ನೆನಪಿಟ್ಟುಕೊಂಡರೆ, ಶೇ 70 ರಷ್ಟು ನೋಡಿದ್ದನ್ನು, ಶೇ 20 ರಷ್ಟು ಕೇಳಿದ್ದನ್ನು ನೆನಪಿಟ್ಟುಕೊಳ್ಳುತ್ತಾನೆ. ಹೆಚ್ಚಿನದು ನೆನಪಿರಬೇಕೆಂದರೆ ನೆನಪಿಟ್ಟುಕೊಳ್ಳಬೇಕಾದುದನ್ನು "ಮಾಡಬೇಕು". ಓದಿದ್ದನ್ನು ತನ್ನ ತಂದೆ ತಾಯಿಗಳಿಗೆ , ಅಜ್ಜಿ ತಾತಂದಿರಿಗೆ ಅಥವಾ ಗೆಳೆಯರಿಗೆ ಪಾಠ ಮಾಡಬಹುದು. ಕನ್ನಡಿಯೆದುರಿಗೆ ನಿಂತು ತಕ್ಕ ಹಾವಭಾವಗಳೊಂದಿಗೆ ಪಾಠವನ್ನು ಮನನ ಮಾಡಿಕೊಳ್ಳಬಹುದು. ಪಾಠಕ್ಕೆ ಸೂಕ್ತವಾದ ಮಾಹಿತಿ ಸಂಗ್ರಹಿಸಿ ಅದನ್ನು ಪ್ರಾಜೆಕ್ಟ್ ಅಥವಾ ವಸ್ತುಪ್ರದರ್ಶನದ ರೀತಿಯಲ್ಲಿ ಇತರರಿಗೆ ತೋರಿಸಬಹುದು.

ಪಠ್ಯೇತರ ಚಟುವಟಿಕೆಗಳು: ಪಠ್ಯೇತರ ಚಟುವಟಿಕೆಗಳು ಮೆದುಳನ್ನು ಪುನಃಶ್ಚೇತನಗೊಳಿಸುತ್ತವೆ. ಒಂದು ರೀತಿ ಓದಿನಲ್ಲಿ ಮುಳುಗಿರುವ ಮೆದುಳಿಗೆ ಇದು ವಿಶ್ರಾಂತಿಯೂ ಹೌದು. ನಾಟಕ, ಸಂಗೀತ, ವಾದ್ಯಗಳ ಕಲಿಕೆ ಇತ್ಯಾದಿ ಒಳ್ಳೆಯದು. ಆದರೆ ಈ ಪಠ್ಯೇತರ ಚಟುವಟಿಕೆ ಮಕ್ಕಳಿಗೆ ಆಸಕ್ತಿ ತುಂಬುವಂತಿರಬೇಕು ಹೆಚ್ಚಿನ ಹೊರೆ ಆಗಬಾರದು.ಆಗಾಗ ಪ್ರವಾಸ ಹೋಗುವುದು. ಪ್ರವಾಸದ ಸಮಯದಲ್ಲಿ ಹೊಸವಿಷಯಗಳ ಕಲಿಕೆಗೆ ಗಮನ ಕೊಡುವುದೂ ಸಹ ಮೆದುಳಿನ ವಿಕಾಸಕ್ಕೆ ಸಹಾಯಕ.

ಟಿವಿ ಹೊರೆ: ಟಿವಿಯನ್ನು ಆದಷ್ಟು ದೂರವಿಡುವುದು ಒಳ್ಳೆಯದು. ಟಿವಿಯಿಂದ ಮಕ್ಕಳ ಮೆದುಳಿಗೆ ವೈಪರೀತ್ಯದ ಪರಿಣಾಮಗಳಾಗುತ್ತಿರುವುದನ್ನು ಅನೇಕ ಅಧ್ಯಯನಗಳು ತೋರಿಸಿವೆ. ಮೆದುಳಿನ ವಿಕಾಸಕ್ಕೆ ತಕ್ಕ ಕಾರ್ಯಕ್ರಮಗಳು ಟಿವಿಯಲ್ಲಿ ಬರುತ್ತವಾದರೂ ಕಾರ್ಟೂನ್ ಗಳು ಎಂದಿಗೂ ಮಕ್ಕಳ ವಿಕಾಸಕ್ಕೆ ದಾರಿ ಮಾಡಿಕೊಡುವುದಿಲ್ಲ ಎಂಬುದು ನೆನಪಿರಲಿ.  
 ಓದಿದ್ದನ್ನು ಅಚ್ಚುಕಟ್ಟಾಗಿ ನೆನಪಿಟ್ಟುಕೊಳ್ಳುವುದು: ಓದಿದ ವಿಷಯಗಳನ್ನು ಒಂದು ನಿಯಬದ್ಧವಾಗಿ ಓದಬೇಕು. ಹಿಂದಿನ ಮತ್ತು ಮುಂದಿನ ವಿಷಯಗಳಿಗೆ ಯಾವ ರೀತಿ ವಿಷಯ ಜೋಡಣೆಯಾಗಿರುತ್ತದೆ ಎಂಬುದರ ಕಡೆ ಗಮನ ಕೊಡಬೇಕು. ಅಚ್ಚುಕಟ್ಟಾದ ಜೋಡಣೆಯಂತೆ ಒಂದಕ್ಕೊಂದೆ ಕೊಂಡಿಯಂತೆ ಜೋಡಿಸುತ್ತಾ ನೆನಪಿಟ್ಟುಕೊಳ್ಳುತ್ತಾ ಹೋದರೆ ಪಾಠಗಳು ಮೆದುಳಿನಲ್ಲಿ ಶಾಶ್ವತವಾಗಿ ಉಳಿಯುವುದು ಸುಲಭ. ಕೆಲವರು ಪ್ರಾಸಬದ್ಧ ಅಥವಾ ಸಂಕೇತ ರೂಪದಲ್ಲಿ ನೆನಪಿಡುವುದನ್ನು ಹೇಳಿಕೊಡುತ್ತಾರಾದರೂ ಅದು ಅಪೇಕ್ಷಣೀಯವಲ್ಲ!
ಮಾರ್ಕ್ಸ್ ಒತ್ತಡ ಕಡಿಮೆಯಾಗಲಿ: ಮೆದುಳಿನ ಮೇಲೆ ಹೆಚ್ಚು ಒತ್ತಡ ಹಾಕಿದಷ್ಟು ಮೆದುಳಿನ ಸಾಮರ್ಥ್ಯ ಕುಂಠಿತವಾಗುತ್ತದೆ. ಅದರಲ್ಲೂ ಅಂಕಗಳಿಕೆಯ ಒತ್ತಡ ಬಹಳ ಅಪಾಯಕಾರಿಯಾದುದು. ಅಂಕಗಳು ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯುವ ಅತ್ಯಂತ ದುರ್ಬಲ ಮಾರ್ಗ ಎಂಬುದು ಗಮನದಲ್ಲಿರಲಿ. ಮಕ್ಕಳು ವಿಷಯವನ್ನು ಅರಿತುಕೊಂಡು ಪರೀಕ್ಷೆಗಳಲ್ಲಿ ಉತ್ತರ ಬರೆದು ಹೆಚ್ಚು ಅಂಕಗಳಿಸಲು ಸಾಕಷ್ಟು ಸಮಯಾವಕಾಶ ಕೊಡಿ.  


 ಇವೆಲ್ಲಕ್ಕಿಂತ ಹೆಚ್ಚಾಗಿ ಓದಿನಲ್ಲು ಆಸಕ್ತಿ ಇರುವುದು ಮುಖ್ಯ. ಆಸಕ್ತಿ ಒಂದು ಇದ್ದರೆ ಯಾವುದೇ ಉಪಾಯಗಳ ಅವಶ್ಯಕತೆ ಬೀಳುವುದಿಲ್ಲ. ಮಕ್ಕಳನ್ನು ಆದಷ್ಟು ಮೆಮೊರಿ ವರ್ಕ್ ಶಾಪ್ ಗಳಿಂದ ದೂರವಿಡುವುದು ಒಳ್ಳೆಯದು. ಓದಿನಲ್ಲಿ ಮಕ್ಕಳ ಆಸಕ್ತಿ ಹೆಚ್ಚಿಸಲು ಚಾಕೊಲೇಟ್ ಅಥವಾ ಸಿನಿಮಾ ಇನ್ಯಾವುದೇ ಆಮಿಷಗಳನ್ನು ಒಡ್ಡುವುದು ತರವಲ್ಲ! ಓದಿನಲ್ಲಿ ಸಹಜವಾಗಿ ತೊಡಗುವಂತೆ ಅವರಿಗೆ ನೆರವಾದಷ್ಟು ಮಕ್ಕಳ ಬೌದ್ಧಿಕ ವಿಕಾಸ ಹೆಚ್ಚುತ್ತದೆ.        
  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com