ತಂತ್ರಲೋಕದ ಸಹಾಯದಿಂದ ನೆರೆ ಪರಿಹಾರ

ಚೆನೈನಲ್ಲಿ ಕಳೆದ ತಿಂಗಳು ನಡೆದ ಜಲವಿಪ್ಲವದ ನಂತರ ಮತ್ತೊಮ್ಮೆ ಗಂಭೀರ ಚಿಂತನೆ ನಡೆದಿದೆ. ಅವೈಜ್ಞಾನಿಕ ನಗರಾಭಿವೃದ್ಧಿ ಯೊಜನೆಗಳು, ಸರಿಯಾದ ಒಳಚರಂಡಿ...
Flooded Chennai
Flooded Chennai
ಚೆನೈನಲ್ಲಿ ಕಳೆದ ತಿಂಗಳು ನಡೆದ ಜಲವಿಪ್ಲವದ ನಂತರ ಮತ್ತೊಮ್ಮೆ ಗಂಭೀರ ಚಿಂತನೆ ನಡೆದಿದೆ. ಅವೈಜ್ಞಾನಿಕ ನಗರಾಭಿವೃದ್ಧಿ ಯೊಜನೆಗಳು, ಸರಿಯಾದ ಒಳಚರಂಡಿ ವ್ಯವಸ್ಥೆಯ ಕೊರತೆ, ಪ್ರತೀ ವರ್ಷ ಇಂತಹ ಅನಾಹುತಗಳು ನಡೆಯುತ್ತಿದ್ದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳದಿರುವುದು ಮತ್ತೆ ಮತ್ತೆ ಜೀವಹಾನಿಯಾಗುವ ಸಾಧ್ಯತೆಗಳನ್ನು ಹೆಚ್ಚಿಸಿವೆ. ಪ್ರವಾಹವು ಅತಿ ಹೆಚ್ಚು ಜನರ ಸಾವಿಗೆ ಕಾರಣವಾಗುವ ಪ್ರಾಕೃತಿಕ ವಿಕೋಪ. ಪ್ರವಾಹದ ತಡೆ ಮತ್ತು ಮುನ್ನೆಚ್ಚರಿಕೆಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದರೂ ಎಂದೆಂದಿಗೂ ಮಾನವ ಪ್ರಕೃತಿಯ ಎದುರಿಗೆ ಕುಬ್ಜನೇ! ಹೆಚ್ಚೆಂದರೆ ಜೀವಹಾನಿಯನ್ನು ಕಡಿಮೆಗೊಳಿಸಲು ಇಲ್ಲಿಯವರೆಗೆ ಸಾಧ್ಯವಾಗಿದೆಯೇ ಹೊರತು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ.
 ಇತ್ತೀಚೆಗೆ ಅಣ್ಣಾ ವಿಶ್ವವಿದ್ಯಾಲಯದ ಸಂಶೋಧಕರು ಇಂಜಿನಿಯರ್ ಗಳು ಜಲಪ್ರಳಯದ ಸಮಯದಲ್ಲಿ ಉಪಯೋಗವಾಗಬಲ್ಲ ಒಂದು ಹೊಸ ಸಂಶೋಧನೆಯನ್ನು ಕೈಗೊಂಡರು. ಇದರ ಪ್ರಕಾರ ಹೆಲಿಕಾಪ್ಟರ್ ಅಥವಾ ದ್ರೋಣ್ ಮುಖಾಂತರ ಪ್ರವಾಹಕ್ಕೊಳಗಾದ ಪ್ರದೇಶದಲ್ಲಿ ವಾಯು ಸಮೀಕ್ಷೆಯನ್ನು ನಡೆಸುವುದು. ಈ ದ್ರೋಣ್ ಗಳಲ್ಲಿ ಲೇಸರ್ ಮುಖಾಂತರ ನೆಲದ ದತ್ತಾಂಶವನ್ನು ಸಂಗ್ರಹಿಸುವ ವ್ಯವಸ್ಥೆಯಿರುತ್ತದೆ. ಲೇಸರ್ ಕಿರಣಗಳನ್ನು ನೆಲದ ಮೇಲೆ ಹಾಯಿಸಿ ಭೂಮಟ್ಟದಿಂದ ಎಷ್ಟು ಎತ್ತರದಲ್ಲಿ ನೀರು ಹರಿಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಸಾಮಾನ್ಯ ಭೂಮಟ್ಟಕ್ಕಿಂತ ನೀರು ನಿಂತಿರುವ ಎತ್ತರವನ್ನು ತಾಳೆ ಹಾಕಿ ಅಲ್ಲಿಯ ಪರಿಸ್ಥಿತಿಯ ಭೀಕರತೆಯನ್ನು ಅಂದಾಜು ಮಾಡಲಾಗುತ್ತದೆ. ದ್ರೋಣ್ ನೊಂದಿಗೆ ಸಂಪರ್ಕ ಹೊಂದಿರುವ ಉಪಗ್ರಹ ಆಧಾರಿತ ಜಿ ಪಿ ಎಸ್ ವ್ಯವಸ್ಥೆಯು ದ್ರೋಣ್ ಅಂದಾಜಿಸಿರುವ ಹಾನಿಯು ಭೂಪ್ರದೇಶದ ಅಥವಾ ನಗರದ ಯಾವ ಜಾಗದಲ್ಲಿದೆ ನಿಖರವಾಗಿ ನಿರ್ಧರಿಸಿ ಉಪಗ್ರಹದ ಮೂಲಕ ವಿವರಗಳನ್ನು ಡೇಟಾ ಸೆಂಟರ್ ಗಳಿಗೆ ಕಳಿಸುತ್ತದೆ. ಈ ಡೇಟಾ ಸೆಂಟರ್ ಗಳು ಹಿಂದಿನ ದತ್ತಾಂಶವನ್ನು ಈಗಿನ ದತ್ತಾಂಶಗಳೊಂದಿಗೆ ತಾಳೆ ಹಾಕುತ್ತವೆ. ಯಾವ ಜಾಗದಲ್ಲಿ ಹೆಚ್ಚು ಜನಸಾಂದ್ರತೆಯಿದೆ ಎಲ್ಲೆಲ್ಲಿ ಹೆಚ್ಚು ಹಾನಿಗಳಾಗಿರುವ ಸಾಧ್ಯತೆಯಿದೆ ಎಂಬುದನ್ನು ಇವು ಲೆಕ್ಕ ಹಾಕುತ್ತವೆ. ಅತಿ ಹೆಚ್ಚು ಹಾನಿಯಾಗಿರುವ ಪ್ರದೇಶಗಳಿಗೆ ಆದ್ಯತರೆ ಕೊಟ್ಟು ತಕ್ಕಂತೆ ಪರಿಹಾರ ಸಾಮಾಗ್ರಿಗಳನ್ನು ಆಯಾ ಪ್ರದೇಶಗಳಿಗೆ ತಕ್ಷಣಕ್ಕೆ ಕಳಿಸುವ ವ್ಯವಸ್ಥೆಯಾಗುತ್ತದೆ. 
 ದ್ರೋಣ್ ಅಥವಾ ಹೆಲಿಕಾಪ್ಟರ್ ನಲ್ಲಿ ಅಳವಡಿಸಲಾಗಿರುವ ನೀರಿನ ಎತ್ತರವನ್ನು ಅಳೆಯುವ ಉಪಕರಣವನ್ನು ಲಿಡಾರ್ (LIDAR- Light Detection and Ranging ). ಎಂದು ಕರೆಯಲಾಗುತ್ತದೆ. ಇದನ್ನು ಮಿಲಿಟರಿ ಮತ್ತು ವಿಮಾನ ನಿಲ್ದಾಣಗಳಲ್ಲಿ  ಬಳಸುವ ರೇಡಾರ್ ನ ತಮ್ಮ ಎಂದು ಕರೆಯಬಹುದು. ಏಕೆಂದರೆ ಇವೆರಡೂ ಕೆಲಸ ಮಾಡುವ ರೀತಿ ಒಂದೇ. ಚಿಕ್ಕ ವ್ಯತ್ಯಾಸವೆಂದರೆ ರೆಡಾರ್ ದೂರದ ವಸ್ತುಗಳನ್ನು ಪತ್ತೆ ಮಾಡಲು ಬಳಕೆಯಾದರೆ ಇದರಲ್ಲಿ ಹತ್ತಿರದ ವಸ್ತುಗಳ ಕಡೆ ಗಮನ ನೀಡಲಾಗುತ್ತದೆ. ರೇಡಾರ್ ರೇಡಿಯೋ ತರಂಗಗಳನ್ನು ಬಳಸುತ್ತದೆ ಆದರೆ ಲಿಡಾರ್ ಲೇಸರ್ ಕಿರಣಳನ್ನು ಬಳಸುತ್ತದೆ.
 ಈ ತಂತ್ರಜ್ಞಾನವನ್ನು ಈಗಾಗಲೇ ಥೈಲಾಂಡ್, ಅಮೇರಿಕದಂತಹ ದೇಶಗಳಲ್ಲಿ ಬಳಕೆಗೆ ತರಲಾಗಿದೆ. ಆದರೆ ಭಾರತದಲ್ಲಿ ಅತಿ ದೊಡ್ಡ ತೊಂದರೆಯೆಂದರೆ ದತ್ತಾಂಶಗಳ ಕೊರತೆ. ಹಳೆಯ ದತ್ತಾಂಶಗಳು ಇಂತಹ ಕೆಲಸದಲ್ಲಿ ಬಹಳ ಸಹಾಯಕಾರಿ. ಒಂದು ಕಡೆ ಜನ ಸಾಂದ್ರತೆಯನ್ನು ಅಳೆಯಲು, ಈ ಹಿಂದೆ ಆಗಿರುವ ಹಾನಿಗಳ ಆಧಾರದ ಮೇಲೆ ಈಗಿನ ಹಾನಿಯನ್ನು ಲೆಕ್ಕ ಹಾಕಿ ಅದ್ಯತೆಗಳನ್ನು ರೂಪಿಸಲು ಹಳೆಯ ದತ್ತಾಂಶಗಳು ಬೇಕೆಬೇಕು. ಇಲ್ಲವಾದಲ್ಲಿ ಎಂತಹ ತಂತ್ರಜ್ಞಾನವಿದ್ದರೂ ನಿಷ್ಪ್ರಯೋಜಕ! ನಮ್ಮಲ್ಲಿ ಬಹುತೇಕ ದತ್ತಾಂಶಗಳನ್ನು ಡಿಜಿಟಲೈಸ್ ಮಾಡಲಾಗಿಲ್ಲ ಹಾಗಾಗಿ ಕಂಪ್ಯೂಟರ್ ಗಳಿಗೆ ದತ್ತಾಂಶಗಳನ್ನು ನೀಡುವುದೂ ಸಹ ಕಷ್ಟಕರ.
 ಇತ್ತೀಚೆಗೆ ಲಂಡನ್ ನಲ್ಲಿ ಬ್ರಿಟನ್ ಪ್ರಧಾನಿ ಜೇಮ್ಸ್ ಕ್ಯಾಮರೂನ್ ನೇತೃತ್ವದಲ್ಲಿ ಗೂಗಲ್ ಮೈಕ್ರೋಸಾಫ್ಟ್ ಮತ್ತಿತರ ದೈತ್ಯ ಕಂಪನಿಗಳ ಕುಶಾಗ್ರಮತಿ ಇಂಜಿನಿಯರ್ ಗಳ ಸಭೆಯೊಂದನ್ನು ಕರೆಯಲಾಗಿತ್ತು. ಪ್ರಳಯದ ಸಮಯದಲ್ಲಿ ಉಪಯೋಗವಾಗಬಹುದಾದ ತಂತ್ರಜ್ಞಾನದ ಬೆಳವಣಿಗೆ ಮತ್ತು ಮುನ್ಸೂಚನೆ ಕುರಿತಂತೆ ಇಲ್ಲಿ ಚರ್ಚಿಸಲಾಯಿತು. ಈ ದಯತ್ಯ ಕಮಪನಿಗಳು ಅದೆಷ್ಟರ ಮಟ್ಟಿಗೆ ವಿಶ್ವಕ್ಕೆ ಸಹಾಯವಾಗಬಲ್ಲವೋ ಗೊತ್ತಿಲ್ಲ ಆದರೆ ಸಧ್ಯದ ಮಟ್ಟಿಗೆ ನಮ್ಮ ಸಹಾಯಕ್ಕೆ ನಿಲ್ಲಬೇಕಾದವರು ನಾವೆ! ಸರಿಯಾದ ನಗರ ಯೋಜನೆಗಳ ಬಗ್ಗೆ ಹಕ್ಕೊತ್ತಾಯ ಮಂಡಿಸುವುದು ನೀರು ಅರಿಯುವ ಹಳ್ಳಗಳು ಕೆರೆಗಳನ್ನು ಬಂದ್ ಮಾಡಿ ಮನೆ ಕಟ್ಟಿಕೊಳ್ಳುವುದು ನಿಲ್ಲಿಸಬೇಕು. ಯಾವುದಾದರೂ ಮನೆ ಕೆರೆ ಅಥವಾ ಹಳ್ಳ ಇರಬೇಕಾದ ಜಾಗದಲ್ಲಿ ಅಂದರೆ ಪ್ರಕೃತಿಯು ನೀರಿನ ಸಂಗ್ರಹಕ್ಕೆ ಮೀಸಲಿಟ್ಟ ಜಾಗದಲ್ಲಿ ಮನೆ ಅಥವಾ ಅಪಾರ್ಟ್ ಮೆಂಟ್ ಗಳನ್ನು ಕಟ್ಟಿದ್ದರೆ ಅದನ್ನು ಕೊಂಡುಕೊಳ್ಳದಿರುವುದು ಸಧ್ಯದ ಮಟ್ಟಿಗೆ ಜಾಣ ನಡೆಯಾದೀತು!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com