ಗೆಳೆಯರು ಮತ್ತು ಜ್ಞಾನ ವಾಸ್ತವ ಲೋಕದಿಂದಲೇ ಬರಲಿ, ಸೈಬರ್ ಲೋಕದಿಂದಲ್ಲ

ಇಂಟರ್ ನೆಟ್ ನಂತಹ ಆಧುನಿಕ ಸೌಲಭ್ಯಗಳು ತಂದೊಡ್ಡುವ ಸಮಸ್ಯೆಗಳಿಗೆ ವಿಶೇಷ ತಂಡಗಳಲ್ಲಿ ಮನೋವೈಜ್ಞಾನಿಕ ಸಂಶೋಧಕರು...
ಸೈಬರ್ ಸೆಕ್ಯೂರಿಟಿ
ಸೈಬರ್ ಸೆಕ್ಯೂರಿಟಿ

ಆಧುನಿಕ ಜಗತ್ತಿಗೆ ತಂತ್ರಜ್ಞಾನಕ್ಕೆ ತೆರೆದುಕೊಂಡಂತೆ ಮನುಷ್ಯ ಜೀವಿ ಹೊಸ ಹೊಸ ಸಮಸ್ಯೆಗಳಿಗೆ ಪಕ್ಕಾಗುತ್ತಿದ್ದಾನೆ. ವೈದ್ಯಕೀಯ ವಲಯದಲ್ಲಿ ಮನುಷ್ಯನ ಹೊಸ ಸಮಸ್ಯೆಗಳಿಗೆ ತಕ್ಕಂತೆ ಹೊಸ ಶಾಖೆಗಳು ಹುಟ್ಟುತ್ತಿವೆ. ಮನೋವೈಜ್ಞಾನಿಕ ಕ್ಷೇತ್ರದಲ್ಲಿ ವಿನೂತನ ಮತ್ತು ವಿಕ್ಷಿಪ್ತ ಸವಾಲುಗಳು ವೈದ್ಯರುಗಳಿಗೆ ಎದುರಾಗುತ್ತಿವೆ. ಇಂಟರ್ ನೆಟ್ ನಂತಹ ಆಧುನಿಕ ಸೌಲಭ್ಯಗಳು ತಂದೊಡ್ಡುವ ಸಮಸ್ಯೆಗಳಿಗೆ ವಿಶೇಷ ತಂಡಗಳಲ್ಲಿ ಮನೋವೈಜ್ಞಾನಿಕ ಸಂಶೋಧಕರು ಸಂಶೋಧನೆ ನಡೆಸಿದ್ದಾರೆ. ಇವುಗಳಲ್ಲಿ ಹೆಚ್ಚಿನ ಸಂಶೋಧನೆಗಳು ಮಕ್ಕಳ ಕುರಿತಂತೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಇಂಟರ್ ನೆಟ್ ಎಂಬ ಮಾಯಾಲೋಕ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಮಾತ್ರವಲ್ಲ ವೈದ್ಯಕೀಯ ಕ್ಷೇತ್ರದಲ್ಲೂ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂಬುದು ಕಟು ವ್ಯಂಗ್ಯದ ಸತ್ಯ!

 ಡ್ರಗ್ಸ್, ಜೂಜು, ಮದ್ಯದಂತಹ ಮಾದಕ ವ್ಯಸನಗಳ ಬಗ್ಗೆ ಅಧ್ಯಯನ ಮತ್ತು ಸಮೀಕ್ಷೆಗಳನ್ನು ನಡೆಸಿ ಅಂಕಿಅಂಶಗಳನ್ನು ಪ್ರಕಟಿಸುವ ಸಂಸ್ಥೆಯಾದ ಆಮೆರಿಕನ್ ಸೈಕಿಯಾಟ್ರಿಸ್ಟ್ ಅಸೋಸಿಯೇಷನ್ ಇತ್ತೀಚಿನ ಸಭೆಯಲ್ಲಿ ಇಂಟರ್ ನೆಟ್ ವ್ಯಸನವನ್ನೂ ತಮ್ಮ ಅಧ್ಯಯನದ ಪಟ್ಟಿಯೊಳಗೆ ಸೇರಿಸಿಕೊಳ್ಳಲು ಸುದೀರ್ಘ ಚಿಂತನೆಯನ್ನು ನಡೆಸಿತು. ಅಂದರೆ ಇಂಟರ್ ನೆಟ್ ನ ಕುರಿತ ಯುವಜನರ ದುರಾಸಕ್ತಿ ಮಾದಕ ವ್ಯಸನದಷ್ಟು ವ್ಯಾಪಕವಾದ ದುಷ್ಪರಿಣಾಮಗಳನ್ನು ಹೊಂದಿದೆ ಎಂಬುದು ಅವರು ಕಂಡುಕೊಂಡ ವಿಷಯವಾಗಿತ್ತು. ಮುಖ್ಯ ವ್ಯತ್ಯಾಸವೆಂದರೆ ಇಂಟರ್ ನೆಟ್ ವ್ಯಸನವು ದೈಹಿಕವಾದ ದುಷ್ಪರಿಣಾಮಗಳನ್ನು ಪ್ರತ್ಯಕ್ಷವಾಗಿ ಮಾಡುವುದಿಲ್ಲವೆಂಬ ಕಾರಣದಿಂದ ಇದನ್ನು ಪೋಷಕರು ಒಂದು "ದುಶ್ಚಟ" ಎಂದು ಭಾವಿಸುವುದಿಲ್ಲ. ಅಲ್ಲದೇ ಕಂಪ್ಯೂಟರ್ ಮತ್ತು ಇಂಟರ್ ನೆಟ್ ವಿದ್ಯಾವಂತಿಕೆಯ ಸಂಕೇತವಾಗಿರುವುದರಿಂದ ಇದರಲ್ಲಿ ಹೆಚ್ಚು ಸಮಯ ಕಳೆಯುವುದು ಒಳ್ಳೆಯದೆಂದೇ ಹಿರಿಯ ತಲೆಗಳು ಭಾವಿಸುತ್ತವೆ.

ಅತಿಯಾದ ಇಂಟರ್ ನೆಟ್ ಬಳಕೆಯಿಂದ ಮಕ್ಕಳಲ್ಲಿ ಸಾಕಷ್ಟು ಮನೋದೈಹಿಕ ಸಮಸ್ಯೆಗಳ ಒಳಹೊಕ್ಕುವಿಕೆಯನ್ನು ತಜ್ಞರು ಗುರುತಿಸಿದ್ದಾರೆ. ಫೇಸ್ ಬುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಮಕ್ಕಳಲ್ಲಿ ಅಧ್ಯಯನ ಕೈಗೊಂಡಾಗ ಬಹುತೇಕರಲ್ಲಿ ತೀವ್ರ ಆತ್ಮರತಿ (narcissism), ಅಕಾರಣ ಆತಂಕಗಳು, ಖಿನ್ನತೆ, ಅನಗತ್ಯ ಕೋಪ, ಜಗಳಗಂಟತನ, ನರಸಂಬಂಧಿತ ಖಾಯಿಲೆಗಳು ಸಕ್ರಿಯರಾಗಿರದ ಮಕ್ಕಳಿಗಿಂತ ಹೆಚ್ಚು ಪ್ರಮಾಣದಲ್ಲಿ ಕಂಡುಬಂದಿವೆ. ಇಂಟರ್ ನೆಟ್ ಮಾತ್ರವಲ್ಲ ಯುದ್ಧಸಂಬಂಧಿತ ವಿಡಿಯೋಗೇಮ್ ಗಳಲ್ಲಿ ತೊಡಗಿರುವ ಮಕ್ಕಳು ಹಿಂಸೆಯ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ತೊಡಗುವುದೂ ಸಹ ಕಂಡುಬಂದಿದೆ. ಕೆಲ ಮಕ್ಕಳಲ್ಲಿ ಆತ್ಮಹತ್ಯೆಯ ಪ್ರವೃತ್ತಿಯ ಹೆಚ್ಚಳ ಕಂಡುಬಂದಿರುವುದು ಸಹ ತಜ್ಞರನ್ನು ಚಿಂತೆಗೀಡುಮಾಡಿದೆ.

ಇಂಟರ್ ನೆಟ್ ಮೂಲಕ ಬಂದಿರುವ ಸಮಸ್ಯೆಗಳು ತೀರಾ ಇತ್ತೀಚಿನವಾಗಿರುವುದರಿಂದ ಸಂಶೋಧನೆಗಳು ತೀವ್ರಗತಿಯಲ್ಲಿ ನಡೆಯುತ್ತಿದ್ದರೂ ಪರಿಣಾಮಕಾರಿಯಾದಂತಹ ಚಿಕಿತ್ಸೆಗಳು ಇನ್ನೂ ಲಭ್ಯವಾಗಿಲ್ಲ. ಇಂಟರ್ ನೆಟ್  ನಿಂದ ಹುಟ್ಟುವ ಸಮಸ್ಯೆಗಳಿಗೆ ಇನ್ನೂ ಸಹ ಸಾಂಪ್ರದಾಯಿಕವಾದ ಮನೋವೈದ್ಯಕೀಯ ಚಿಕಿತ್ಸೆಯನ್ನೇ ನೀಡಲಾಗುತ್ತಿದೆ. ಇವು ಅನೇಕ ಪ್ರಕರಣಗಳಲ್ಲಿ ತಾತ್ಕಾಲಿಕ ಪರಿಹಾರ ಮಾತ್ರ ಎಂದು ಸಾಬೀತಾಗಿವೆ. ಪರಿಣಾಮಕಾರಿಯಾದ ಚಿಕಿತ್ಸೆ ಲಭ್ಯವಿರಲಿ ಇಲ್ಲದಿರಲಿ ಯಾವಾಗಲೂ ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಒಳ್ಳೆಯದು. ಪರಿಸ್ಥಿತಿ ಕೈಜಾರುವ ಮುಂಚೆ ಮಕ್ಕಳು ಇಂಟರ್ ನೆಟ್ ವ್ಯಸನದಲ್ಲಿ ಬಿದ್ದು ಒದ್ದಾಡದಿರುವಂತೆ ನೋಡಿಕೊಳ್ಳುವುದು ಒಳ್ಳೆಯದು.

  ಫೇಸ್ ಬುಕ್ ನಂತಹ ತಾಣಗಳಲ್ಲಿ ಖಾತೆ ತೆರೆಯಲು ಕನಿಷ್ಟ ವಯಸ್ಸು ಹದಿಮೂರು ವರ್ಷಗಳಾಗಿರಬೇಕು. ಆದರೆ ಹತ್ತು ಲಕ್ಕಷಕ್ಕೂ ಮಿಕ್ಕಿದ ಫೇಸ್ ಬುಕ್ ಬಳಕೆದಾರರು ಹತ್ತು ವರ್ಷ ಕ್ಕಿಂತ ಕಡಿಮೆ ವಯಸ್ಸಿನವರು ಎಂದು ಹೇಳಲಾಗುತ್ತದೆ. ಸಾಮಾಜಿಕ ತಾಣಗಳಲ್ಲಿ ತಮ್ಮನ್ನು ತಾವು ಒಡ್ಡಿಕೊಳ್ಳುವ ವಯಸ್ಸು ಚಿಕ್ಕದಾಗಿದ್ದಷ್ಟು ಭವಿಷ್ಯದಲ್ಲಿ ಸಮಸ್ಯೆಗಳು ಹೆಚ್ಚು! ಹಾಗಾಗಿ ತಂದೆ ತಾಯಿಗಳು ಮಕ್ಕಳನ್ನು ಸುಮ್ಮನೆ ಇಂಟರ್ ಬೆಟ್ ಮುಂದೆ ಕೂರಲು ಬಿಡದೇ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಪ್ರೇರೆಪಿಸಬೇಕು. ಜ್ಞಾನಕ್ಕಾಗಿ ಇಂಟರ್ ನೆಟ್ ಮೂಲಕವನ್ನು ಅವಲಂಬಿಸುವುದಕ್ಕಿಂತ ಹೆಚ್ಚಾಗಿ ಮುದ್ರಿತ ಪುಸ್ತಕಗಳು, ದಿನ ಪತ್ರಿಕೆಗಳ ಮೇಲೆ ಹೆಚ್ಚು ಅವಲಂಬಿತರಾಗಿರುವಂತೆ ಮಾಡಬೇಕು. ಒಳ್ಳೆಯ ಸಾಹಿತ್ಯವನ್ನು ಓದುವ ಅಭ್ಯಾಸ ಮಾಡಿಸಬೇಕು. ಹೊಸ ಜಾಗಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಮೂಲಕ ಪ್ರಕೃತಿಯ ವಿದ್ಯಮಾನ ಗಳ ಬಗ್ಗೆ ಆಸಕ್ತಿಯನ್ನು ಮೂಡಿಸಬೇಕು. ಐತಿಹಾಸಿಕ ಪ್ರದೇಶಗಳಿಗೆ ಭೇಟಿ ನೀಡಿದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವಂತೆ ಉತ್ತೇಜಿಸಬೇಕು. ಪ್ರಾಣಿಗಳ ಬಗ್ಗೆ ಸಸ್ಯಗಳ ಬಗ್ಗೆ ಅಥವಾ ಅವರ ಇಷ್ಟದ ಯಾವುದೇ ವಿಷಯಗಳ ಬಗ್ಗೆ ಹೆಚ್ಚಿನ ಅಧ್ಯಯನದಲ್ಲಿ ತೊಡಗುವಂತೆ ಸಹಕರಿಸಬೇಕು. ಶಾಲೆಯ ಸಮಯದಲ್ಲಿ ಮಕ್ಕಳು ಪಠ್ಯಗಳಲ್ಲಿ ಮಗ್ನರಾಗಿರುವುದರಿಂದ ಇಂಟರ್ ನೆಟ್ ಚಟುವಟಿಕೆಗಳಲ್ಲಿ ತೊಡಗಲು ಬಿಡುವಿರುವುದಿಲ್ಲ. ಆದರೆ ಸಂಜೆಯ ಸಮಯದಲ್ಲಿ, ರಜೆಯ ಸಮಯದಲ್ಲಿ ಮತ್ತು ಶನಿವಾರ ಭಾನುವಾರಗಳಂದು ಬಿಡುವಿರುವುದರಿಂದ ಇಂಟರ್ ನೆಟ್  ಕಡೆಗೆ ಗಮನ ಹರಿಯುತ್ತದೆ. ಒಂದೆರಡು ದಿನಗಳ ಬಿಡುವುದ್ದರೆ ಪ್ರವಾಸಗಳಲ್ಲೂ, ಸಂಜೆಯ ಸಮಯಗಳಲ್ಲಿ ಆಟ, ಸಾಹಿತ್ಯದ ಓದಿನಲ್ಲೂ ಮಕ್ಕಳನ್ನು ತೊಡಗಿಸುವುದು ಒಳ್ಳೆಯದು.

- ಸಿಂಧು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com