ಡಿಜಿಟಲ್ ಲೋಕದ ಶಕುನದ ಹಕ್ಕಿ ಗಾರ್ಡನ್ ಮೂರ್...!

ಗಾರ್ಡನ್ ಮೂರ್ ಇಂಟೆಲ್ ಕಂಪನಿಯ ಸಹ ಸಂಸ್ಥಾಪಕ. ಹೌದು ನಾವು ಕಂಪ್ಯೂಟರ್ ಗಳಲ್ಲಿ ಬಳಸುವ ಪ್ರೊಸೆಸರ್, ಮದರ್ ಬೋರ್ಡ್ ಗಳನ್ನು ತಯಾರಿಸುತ್ತದಲ್ಲ ಅದೇ ಕಂಪನಿ!...
ಗಾರ್ಡನ್ ಮೂರ್
ಗಾರ್ಡನ್ ಮೂರ್

ಮಾರುಕಟ್ಟೆಯಲ್ಲೇ ಅತ್ಯಂತ ಹೊಚ್ಚ ಹೊಸ ಮತ್ತು ಹೆಚ್ಚಿನ ಸಾಮರ್ಥ್ಯದ  ಮೊಬೈಲ್ ಫೋನ್ ಗಳನ್ನು ಕೊಂಡು ಮನೆಗೆ ಬರುತ್ತಿದ್ದಂತೆ ಅದಕ್ಕಿಂತ ಉತ್ತಮ ಸಾಮರ್ಥ್ಯದ ಫೋನ್ ಆಗಲೇ ಮಾರುಕಟ್ಟೆಗೆ ಬಂದು ಕುಳಿತಿರುತ್ತದೆ. ಡುಯಲ್ ಕೋರ್, ಕ್ವಾಡ್ ಕೋರ್ ಗಳು ಹಳೆಯವಾಗಿ ಅಕ್ಟಾ ಕೋರ್, ಡೆಕಾ ಕೋರ್ ಗಳು ಮಾರುಕಟ್ಟೆಗಳನ್ನಲಂಕರಿಸಿವೆ. ದಿನದಿನಕ್ಕೂ ಕಂಪ್ಯೂಟರ್ ಗಳ ಮೊಬೈಲ್ ಗಳ ಸಾಮರ್ಥ್ಯ ಹೆಚ್ಚುತ್ತಿದೆ. ಯಾವ ಕ್ಷೇತ್ರದಲ್ಲೂ ಕಾಣದ ವೇಗ ಡಿಜಿಟಲ್ ಕ್ಷೇತ್ರದಲ್ಲಿ ಕಾಣುತ್ತಿದೆ. ಸಾಮರ್ಥ್ಯ ಹೆಚ್ಚಿದ್ದರೂ ಗೆಜೆಟ್ ಗಳ ಬೆಲೆಗಳು ಕಡಿಮೆಯಾಗುತ್ತಿವೆ. ಇಂತಹದೊಂದು ಮುನ್ನೋಟವನ್ನು ಮೊದಲೇ ಕಂಡಿದ್ದವನು ಗಾರ್ಡನ್ ಮೂರ್.  
 ಗಾರ್ಡನ್ ಮೂರ್ ಇಂಟೆಲ್ ಕಂಪನಿಯ ಸಹ ಸಂಸ್ಥಾಪಕ. ಹೌದು ನಾವು ಕಂಪ್ಯೂಟರ್ ಗಳಲ್ಲಿ ಬಳಸುವ ಪ್ರೊಸೆಸರ್,  ಮದರ್ ಬೋರ್ಡ್ ಗಳನ್ನು ತಯಾರಿಸುತ್ತದಲ್ಲ ಅದೇ ಕಂಪನಿ! ಜನ ಸಾಮಾನ್ಯರ ಬಳಕೆಯ ಪಿ2, ಪಿ 3 ಪಿ4 ನಿಂದ ಹಿಡಿದು ಇಂದಿನ ಐ7 ಪ್ರೊಸೆಸರ್ ಗಳ ವರೆಗೆ ಎಲ್ಲ ತಯಾರಿಕೆ ಇಂಟೆಲ್ ನದ್ದು! ಏನಿದು ಗಾರ್ಡನ್ ಮೂರ್ ನ ಜ್ಯೋತಿಷ್ಯ? ಡಿಜಿಟಲ್ ಲೋಕದಲಲ್ಲೇಕೆ ಅವರ ಈ ಮಾತಿಗೆ ಇಷ್ಟೊಂದು ಬೆಲೆ ಇದೆ? ಸತತ ಐವತ್ತು ವರ್ಷಗಳ ಕಾಲ ತನ್ನ ಸತ್ಯವನ್ನು ನಿರೂಪಿಸುತ್ತಿರುವ ಆ ಭವಿಷ್ಯವಾಣಿಯೇನು? ನೋಡುವ.
ಅದಕ್ಕಿಂತ ಮೊದಲು ಈ 'ಚಿಪ್' ಬಗ್ಗೆ ಹೇಳಿಬಿಡುತ್ತೇನೆ. ಮೊಬೈಲ್ ಗಳಲ್ಲಿ ಹಾಕುವ ಮೆಮೊರಿ ಕಾರ್ಡ್ ಗಳನ್ನು ಎಲ್ಲರೂ ನೋಡಿರಬಹುದು. ಮೊಬೈಲ್ ಒಳಗೆ ಚಿಕ್ಕ ಚಿಕ್ಕ ಕಪ್ಪು ಬಿಲ್ಲೆಗಳನ್ನು ನೋಡಿರಬಹುದು. ಇವೇ ಇಂಟಿಗ್ರೇಟೆಡ್ ಚಿಪ್ ಗಳು! ಈ ಬಿಲ್ಲೆಗಳಲ್ಲಿ ಡಯೋಡ್, ಟ್ರಾನ್ಸಿಸ್ಟರ್ ಗಳಂತಹ ಲಕ್ಷಾಂತರ ಎಲೆಕ್ಟ್ರಾನಿಕ್ ಅಂಗಾಂಗಗಳಿರುತ್ತವೆ ಅಥವಾ ಘಟಕಗಳಿರುತ್ತವೆ!
 ಗಾರ್ಡನ್ ಮೂರ್ ಹೇಳುವ ಪ್ರಕಾರ  "ಒಂದು ಎಲೆಕ್ಟ್ರಾನಿಕ್ ಚಿಪ್ ನಲ್ಲಿ ಅಳವಡಿಸಬಹುದಾದ ಎಲೆಕ್ಟ್ರಾನಿಕ್ ಘಟಕಗಳ ಸಂಖ್ಯೆ ಪ್ರತಿ ಒಂದೂ ವರೆ ವರ್ಷಕ್ಕೊಮ್ಮೆ ದುಪ್ಪಟ್ಟಾಗುತ್ತದೆ." ಇನ್ನೂ ಕರಾರುವಕ್ಕಾಗಿ ಹೇಳಬೇಕೆಂದರೆ (ಎಲೆಕ್ಟ್ರಾನಿಕ್ ಬಗ್ಗೆ ಕೊಂಚ ತಿಳಿದವರಿಗಾಗಿ) ಒಂದು ಐ ಸಿ (Integrated Chip) ಯಲ್ಲಿ ಅಳವಡಿಸಬಹುದಾದ ಟ್ರಾನ್ಸಿಸ್ಟರ್ ಗಳ ಸಂಖ್ಯೆ ಪ್ರತಿ ಒಂದೂವರೆ ವರ್ಷಕ್ಕೆ ದುಪ್ಪಟ್ಟಾಗುತ್ತದೆ. (ಚಿತ್ರ ನೋಡಿ) ಇದರ ಬಗ್ಗೆ ಮೊದಲ ಬಾರಿಗೆ ಗಾರ್ಡನ್ ಮೂರ್ 1965 ರ ತಮ್ಮ ಬರಹವೊಂದರಲ್ಲಿ ಈ ವಿಷಯವನ್ನು ಮಂಡಿಸುತ್ತಾರೆ. (ಮೂಲ ಬರಹ ಓದಲು ಇಲ್ಲಿ ಕ್ಲಿಕ್ಕಿಸಿ. http://www.cs.utexas.edu/~pingali/CS395T/2013fa/papers/moorespaper.pdf ) ಡಿಜಿಟಲ್ ಯುಗದ ಬೆಳವಣಿಗೆಯು ಚಿಪ್  ಗಳ ಬೆಳವಣಿಗೆಯ ಮೇಲೇ ಅವಲಂಬಿತವಾಗಿರುತ್ತದೆ ಎಂಬುದು ಮೂರ್ ಮಹಾಶಯರ ನಂಬುಗೆಯಾಗಿತ್ತು.  
 1964 ರಲ್ಲಿ ಮೊದಲ ಬಾರಿಗೆ ಚಿಪ್ ಗಳನ್ನು ತಯಾರಿಸಿದಾಗ ಒಂದು ಚಿಪ್ ನಲ್ಲಿ ಹೆಚ್ಚೆಂದರೆ ಹತ್ತು  ಟ್ರಾನ್ಸಿಸ್ಟರ್ ಗಳಿದ್ದವು. 1968 ರಲ್ಲಿ ಇವುಗಳ ಸಂಖ್ಯೆ ಐದು ನೂರನ್ನು ದಾಟಿತು. 1980 ರ ಸುಮಾರಿಗೆ ಒಂದು ಚಿಪ್ ನಲ್ಲಿ ಇಪ್ಪತ್ತು ಸಾವಿರ ಅಂಗಗಳನ್ನು ಗಳನ್ನ ಜೋಡಿಸುವಷ್ಟು ತಂತ್ರಜ್ಞಾನ ಬೆಳೆಯಿತು. ಈಗ ಬಿಲಿಯನ್ ದಾಟಿದೆ. ಅಂದರೆ ನಿಮ್ಮ ಮೆಮೊರಿ ಕಾರ್ಡ್ ನ ಮೇಲೆ ಒಂದು ಸೂಜಿಯ ಚೂಪಾದ ತುದಿಯನ್ನಿಟ್ಟರೆ ಅಷ್ಟು ಜಾಗದಲ್ಲಿ ಸುಮಾರು ನಾಲ್ಕು ಲಕ್ಷ ಟ್ರಾನ್ಸಿಸ್ಟರ್ ಗಳಿರುತ್ತವೆ! ಮೈಕ್ರೋ ಚಿಪ್ ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆ ಮೂರ್ ಹೇಳಿದ್ದನ್ನು ಚಿತ್ರದಲ್ಲಿರುವ ಈ ಗ್ರಾಫ್ ವಿವರಿಸುತ್ತದೆ. ಈ ವರ್ಷ ಮೂರ ನು ತನ್ನ ಭವಿಷ್ಯವಾಣಿಯನ್ನು ನುಡಿದು ಸರಿಯಾಗಿ ಐವತ್ತು ವರ್ಷಗಳು. ಮೂರ್ ನ ಮಾತಿನ ಪ್ರಖರತೆ ಇನ್ನೂ ಕಡಿಮೆಯಾಗಿಲ್ಲ. ತೀರಾ ಎರಡು ಪಟ್ಟು ಆಗದಿದ್ದರೂ ಗಣನೀಯವೆಂಬಂತೆ ಒಂದು ಮೈಕ್ರೋಚಿಪ್ ನಲ್ಲಿ ಕೂರಿಸಬಲ್ಲ ಘಟಕಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ!
 ಒಂದು ಚಿಪ್ ಅನ್ನು ತಯಾರಿಸಬೇಕಾದರೆ ಮೂರು ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ.
1. ಕಡಿಮೆ ವಿದ್ಯುತ್ ಬಳಸಬೇಕು.
2. ಕಡಿಮೆ ಜಾಗವನ್ನು ಆಕ್ರಮಿಸಿಕೊಳ್ಳಬೇಕು
3. ಹೆಚ್ಚು ಸಾಮರ್ಥ್ಯವಿರಬೇಕು.

 ಒಂದು ಚಿಪ್ ನಲ್ಲಿ ಹೆಚ್ಚು ಹೆಚ್ಚು ಘಟಕ ಅಳವಡಿಕೆಯಾದಂತೆ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಅಂದರೆ ಮೂರ್ ನ ಹೇಳಿಕೆಯಂತೆ ಒಂದೇ ಎರಡು ಚಿಪ್ ಗಳಲ್ಲಿ ಕೂರುವಷ್ಟು ಘಟಕಗಳು ಒಂದೇ ಚಿಪ್ ನಲ್ಲಿ ಕೂರುವುದರಿಂದ ಉತ್ಪಾದನೆಯ ಬೆಲೆ ಅರ್ಧಕ್ಕರ್ದ ಕಡಿಮೆಯಾಗುತ್ತದೆ. ಅದಕ್ಕೆ ತಕ್ಕಂತೆ ಡಿಜಿಟಲ್ ಗ್ಯಾಜೆಟ್ ಗಳ ಬೆಲೆ ಕಡಿಮೆಯಾಗುತ್ತದೆ.
 ಉದಾಹರಣೆ ಹೇಳಬೇಕೆಂದರೆ ಹದಿನೈದು ವರ್ಸಗಳ ಹಿಂದೆ ಒಂದು 66 ಮೆಗಾ ಹರ್ಟ್ಸ್ ಸಾಮರ್ಥ್ಯದ ಪಿ2 ಗಣಕದ ಬೆಲೆ ಸುಮಾರು ಅರವತ್ತು ಸಾವಿರ ರೂಪಾಯಿಗಳಷ್ಟಿತ್ತು. ಈಗ 1.2 ಗಿಗಾ ಹರ್ಟ್ಸ್ ಸಾಮರ್ಥ್ಯದ ಡುಯಲ್ ಕೋರ್ ಗಣಕದ ಬೆಲೆ ಹತ್ತು ಸಾವಿರ ರೂಪಾಯಿಗಳು! ಅಂದರೆ ಗಣಕದ ಸಾಮರ್ಥ್ಯ ಹದಿನೆಂಟು ಪಟ್ಟು ಹೆಚ್ಚಾಗಿದೆ ಮತ್ತು ಬೆಲೆ ಆರು ಪಟ್ಟು ಕಡಿಮೆಯಾಗಿದೆ! ಮೊದಲ ಬಾರಿಗೆ ನಮ್ಮ ಮಾರುಕಟ್ಟೆಗೆ ಮೊಬೈಲ್ ಕಾಲಿಟ್ಟಾಗ ಕಪ್ಪು ಬಿಳುಪಿನ ಪರದೆಯ ಕರೆ ಮತ್ತು ಸಂದೇಶಗಳನ್ನು ಮಾತ್ರ ಕಳಿಸಬಹುದಾದ ಮೊಬೈಲ್ ನ ಬೆಲೆ ಒಂಬತ್ತು ಸಾವಿರ ರೂಪಾಯಿ ಇತ್ತು. ಈಗ ಕ್ಯಾಮೆರಾ, ಹಾಡುಗಳು, ವಿಡಿಯೋ ಚಿತ್ರೀಕರಣ ಗಳೂ ಸೇರಿದಂತೆ ಅನೇಕ ಉಪಯೋಗಗಳುಳ್ಳ ಉತ್ತಮ ಗುಣಮಟ್ಟದ ಮೊಬೈಲ್ ಗಳು ಆರು ಸಾವಿರಕ್ಕೂ ಲಭ್ಯ!
ಐವತ್ತು ವರುಷಗಳ ಭವಿಷ್ಯವನ್ನು ಕರಾರುವಕ್ಕಾಗಿ ನೋಡಿದ ಮೂರ್ ಮಹಾಶಯನಿಗೆ ಒಂದು ಹ್ಯಾಟ್ಸ್ ಆಫ್ ಹೇಳೋಣವೆ?

-ಶ್ರೀಹರ್ಷ ಸಾಲಿಮಠ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com