ತಂತ್ರಜ್ಞಾನ ಎಂಬುದು ಭೂತವಲ್ಲ.. ಭವಿಷ್ಯ..!

ತಂತ್ರಜ್ಞಾನ ಎಂದರೆ ಇಂಗ್ಲೀಷ್ ಬಲ್ಲವರಿಗೆ ಮಾತ್ರ ಎಂಬ ಮೂಢನಂಬಿಕೆಯೂ ಇದೊಂದು ಭೀತಿಗೆ ಕಾರಣ...
ತಂತ್ರಜ್ಞಾನ
ತಂತ್ರಜ್ಞಾನ

ಕೆಲ ವರ್ಷಗಳ ಹಿಂದೆ ಅಗ್ನಿಶಾಮಕ ಇಲಾಖೆಯ ಸಭೆಯೊಂದಕ್ಕೆ ನಮ್ಮನ್ನು ಕರೆಯಲಾಗಿತ್ತು.
ಅಗ್ನಿಶಾಮಕ ದಳದವರು ಸೆಕ್ಯುರಿಟಿ ಗಾರ್ಡ್ ಗಳ ತರಬೇತಿ ಮತ್ತು ಪ್ರಮಾಣ ಪತ್ರವನ್ನು ವಿತರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಕಂಪ್ಯೂಟರೈಸ್ ಮಾಡುವ ಸಲುವಾಗಿ ಸಲಹೆ, ಸೂಚನೆ ನೀಡಲು ಮತ್ತು ತಕ್ಕ ತಂತ್ರಾಂಶ ಅಭಿವೃದ್ಧಿ ಪಡಿಸಲು ನಮ್ಮನ್ನು ಆಹ್ವಾನಿಸಲಾಗಿತ್ತು. ತರಬೇತಿಗಾಗಿ ಬರುವ ಅಭ್ಯರ್ಥಿಗಳ ಪೂರ್ವಾಪರ ಮತ್ತಿತರ ವಿವರಗಳನ್ನು ತುಂಬುವ, ತರಬೇತಿಯ ವಿವರಗಳನ್ನು ಸಂಗ್ರಹಿಸುವ ಹಾಗೂ ಕಡೆಗೆ ಪ್ರಮಾಣ ಪತ್ರವನ್ನು ವಿತರಿಸುವವರೆಗಿನ ಸಂಪೂರ್ಣ ಕಾರ್ಯವಿಧಾನಗಳನ್ನು ಗಣಕದಲ್ಲಿ ಅಳವಡಿಸಿಕೊಡಬೇಕಿತ್ತು. ಅಭ್ಯರ್ಥಿಗಳಿಗೆ ವಿತರಿಸಲಾಗುವ ಪ್ರಮಾಣಪತ್ರ ಇಲ್ಲಿಯವರೆಗೆ ಕನ್ನಡದಲ್ಲೇ ಇರುತ್ತಿತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಉನ್ನತ ಅಧಿಕಾರಿಯೊಬ್ಬರು ಪ್ರಕ್ರಿಯೆಗಳೆಲ್ಲ ಗಣಕೀಕರಣಗೊಳ್ಳುತ್ತಿರುವ ಕಾರಣ ಇಲ್ಲಿಯವರೆಗೆ ಕನ್ನಡದಲ್ಲಿ ಇರುತ್ತಿದ್ದ ಪ್ರಮಾಣ ಪತ್ರ ಇನ್ನು ಮುಂದೆ ಇಂಗ್ಲೀಷ್ ನಲ್ಲಿ ಕೊಡುವಂತೆ ಆದೆಶಿಸಿದರು. ಹಾಗೆಯೇ ಕನ್ನಡದಿಂದ ಇಂಗ್ಲೀಷ್ ಗೆ ಪ್ರಮಾಣಪತ್ರವನ್ನು ಬದಲಿಸಲು ಸೂಕ್ತವಾದ ಸರಕಾರಿ ಔಪಚಾರಿಕತೆಗಳನ್ನು ಶುರು ಮಾಡುವಂತೆ ತಮ್ಮ ಜೊತೆಗಾರರಿಗೆ ಹೇಳಿದರು.
ಗಣಕದ ಮೂಲಕ ನಮ್ಮ ವ್ಯವಸ್ಥೆ ಮೇಲ್ದರ್ಜೆಗೇರುತ್ತಿದೆ ಹಾಗೆಯೇ ನಾವೂ ಇಂಗ್ಲೀಷ್ ಬಳಸುವ ಮೂಲಕ ಮೇಲ್ದರ್ಜೆಗೇರಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಕನ್ನಡ ಬಳಕೆಯ ಮೂಲಕ ತಂತ್ರಜ್ಞಾನವು ಮೇಲ್ದರ್ಜೆಗೇರುತ್ತದೆ. ಕನ್ನಡಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಒಗ್ಗಿಸಿಕೊಳ್ಳಬೇಕು ಎಂದು ಅವರಿಗೆ ಗೊತ್ತುಮಾಡಿಸುವಲ್ಲಿ ನನಗೆ ಸಾಕುಬೇಕಾಯಿತು!
ಐಪಿಎಸ್ ಕೇಡರ್ ನಂತಹ ಉನ್ನತ ಅಧಿಕಾರಿಗಳಲ್ಲಿಯೂ ಸಹ ಕಂಪ್ಯೂಟರ್ ಬಳಸಲು ಇಂಗ್ಲೀಷ್ ಬೇಕೇ ಬೇಕು ಎಂಬ ಮೂಢನಂಬಿಕೆ ಬೇರೂರಿರಿವುದು ನನಗೆ ಅತ್ಯಂತ ಅಚ್ಚರಿಯನ್ನುನುಂಟು ಮಾಡಿತ್ತು.
ಇದೊಂದು ಉದಾಹರಣೆಯಷ್ಟೇ! ಪ್ರತೀ ಕಡೆಯಲ್ಲೂ ನಾವು ಕಂಪ್ಯೂಟರ್ ಬಗ್ಗೆ ಮಾತನಾಡುವಾಗ ಸಾಮಾನ್ಯರಲ್ಲಿ ಒಂದು ರೀತಿಯಲ್ಲಿ ದಿಗಿಲು ಬೀಳುವುದನ್ನು ನಾನು ಕಂಡಿದ್ದೇನೆ.
ತಂತ್ರಜ್ಞಾನ ಎಂದರೆ ಇಂಗ್ಲೀಷ್ ಬಲ್ಲವರಿಗೆ ಮಾತ್ರ ಎಂಬ ಮೂಢನಂಬಿಕೆಯೂ ಇದೊಂದು ಭೀತಿಗೆ ಕಾರಣ.
 
 ಒಂದು ಉದಾಹರಣೆ ಕೊಡುವುದಾದರೆ ಮೊಬೈಲ್ ಬಳಕೆ ಕೆಲ ವರ್ಷಗಳ ಹಿಂದೆ ನಲವತ್ತು ವರ್ಷಗಳ ಕೆಳವಯಸ್ಸಿನವರ ಸೊತ್ತಾಗಿತ್ತು. ಇಂಗ್ಲೀಷ್ ಬಾರದವರು ಪೋನ್ ನಂಬರುಗಳನ್ನು ಮೋಬೈಲ್ ನಲ್ಲಿ ಉಳಿಸಿಕೊಳ್ಳಲು ಒದ್ದಾಡುತ್ತಿದ್ದರು. ಉಳಿಸಿದ ಸಂಖ್ಯೆಗಳನ್ನು ಹುಡುಕುವುದೂ ಒಂದು ಸವಾಲಾಗಿ ಪರಿಣಮಿಸಿತ್ತು.
ಮೊದಲ ಬಾರಿಗೆ ನೋಕಿಯಾ ಕಂಪನಿಯವರು ಕನ್ನಡವನ್ನು ಮೊಬೈಲ್ ನಲ್ಲಿ ಬಳಸುವ ಸೌಲಭ್ಯ ಮಾಡಿಕೊಟ್ಟದ್ದೇ ಮೊಬೈಲ್ ಫೋನ್ ಎಂಬುದು ಸರ್ವವ್ಯಾಪಿಯಾಗಿ ಹೋಯಿತು, ಯಾವುದೇ ಹೆಸರನ್ನು ಹುಡುಕುವುದಾಗಲಿ, ಐಕಾನ್ ಗಳನ್ನು ಓದುವುದಾಗಲಿ ಕನ್ನಡದಲ್ಲಿ ಲಭ್ಯವಾದದ್ದೇ ಅತ್ಯಂತ ಧೈರ್ಯದಿಂದ ಇಳಿವಯಸ್ಸಿನವರೂ ಮೊಬೈಲ್ ಗಳನ್ನು ಬಳಸಲಾರಂಭಿಸಿದರು. ಹಳ್ಳಿಗಳಲ್ಲೂ ಮೊಬೈಲ್ ಜನಪ್ರಿಯವಾಯಿತು.ಸ್ಥಳೀಯ ಭಾಷೆಗಳ ಸೌಲಭ್ಯ ಬಿಡುಗಡೆಯಾದ ಮೇಲೆ ಮೊಬೈಲ್ ಮಾರುಕಟ್ಟೆ ವಿಸ್ತರಿಸಿದ್ದನ್ನು ಅಂಕಿಅಂಶಗಳೇ ಸಾಕಷ್ಟು ಸಾರುತ್ತವೆ.

ಒಂದು ಭಾಷೆ ಉಳಿಯಬೇಕಾದರೆ ಅದು ಬಲಾಢ್ಯವಾಗಬೇಕು. ಬಲಾಢ್ಯತೆ ಬರಲು ಜಗತ್ತಿನ ಎಲ್ಲ ಆಗುಹೋಗುಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳಬೇಕು. ತಂತ್ರಜ್ಞಾನವು ಬೆಳೆಯುತ್ತಿದ್ದಂತೆ ಇಂಗ್ಲೀಷ್ ಬಲಾಢ್ಯಾಗತೊಡಗಿತು. ಎಷ್ಟರ ಮಟ್ಟಿಗೆಂದರೆ ಅಮೇರಿಕದ ಇಂಗ್ಲೀಷನ್ನು ಕೀಳುಗರೆಯುತ್ತಿದ್ದ ಮಡಿವಂತ ಇಂಗ್ಲೀಷ್ ಭಾಷೆಯೂ ಮಂಕಾಗತೊಡಗಿತು.ಕಾರಣ ಸ್ಪಷ್ಟ. ಕಂಪ್ಯೂಟರ್ ತಂತ್ರಜ್ಞಾನವನ್ನು ಬೆಳೆಸಿದ ಬಹುತೇಕ ಕಂಪನಿಗಳು (ಉದಾಹರಣೆಗೆ ಐಬಿಮ್, ಮೈಕ್ರೊಸಾಫ್ಟ್, ಆಪಲ್) ಅಮೇರಿಕ ಮೂಲದವು. ಜನರಿಗೆ ಕಂಪ್ಯೂಟರ್ ನೊಡನೆ ಮಾತನಾಡಲು ಅವಕಾಶ ಕೊಡುವ GUI ಗಳು ಅಮೇರಿಕದ ಇಂಗ್ಲೀಷ್ ನಲ್ಲಿಯೇ ಇದ್ದವು! ವಿಶ್ವದೆಲ್ಲೆಡೆ ಜನರಿಗೆ ಅಮೇರಿಕ ಇಂಗ್ಲೀಷ್ ಬಳಕೆ ಹತ್ತಿರವಾಗಿಬಿಟ್ಟಿತು! ಮಡಿವಂತ ಇಂಗ್ಲೀಷಿನ ಸೊಕ್ಕು ಮುರಿದುಹೋಯಿತು! ಈ ಲೋಕದಲ್ಲಿ ತಮ್ಮ ಇರವನ್ನು ಉಳಿಸಿಕೊಳ್ಳಲು ಎಲ್ಲ ದೇಶಗಳು ತಮ್ಮ ಸ್ಥಳೀಯ ಭಾಷೆಗಳಲ್ಲಿಯೇ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಒತ್ತು ಕೊಡತೊಡಗಿದವು. ಈಗ ಸ್ಯಾಪ್, ಮೈಕ್ರೊಸಾಫ್ಟ್ ನಂತಹ ದೈತ್ಯಗಳೂ ಸಹ ಫ್ರೆಂಚ್, ಜರ್ಮನಿ, ಜಪಾನೀಸ್ ಗಳಂತಹ ಕಡಿಮೆ ಜನಸಂಖ್ಯೆಯ ನುಡಿಗಳಿಗನುಗುಣವಾಗಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಕೊಡುತ್ತವೆ.ಕೊರಿಯನ್ ಜಪಾನೀಸ್ ನಂತಹ ಭಾಷೆಗಳಲ್ಲೂ ಕೀಲಿಮಣೆ ಲಭ್ಯವಿದೆ.

ಇದು ಕನ್ನಡದೊಡನೆಯೂ ನಡೆಯಲು ಸಾಧ್ಯ! ಇಲ್ಲಿನ ಅತೀ ದೊಡ್ಡ ಸಮಸ್ಯೆಯೆಂದರೆ ತಂತ್ರಜ್ಞಾನದೊಡನೆ ಅನುಸಂಧಾನ ಮಾಡಿಕೊಳ್ಳಲು ನಾವು ತಡ ಮಾಡುವುದು. ಮೊಬೈಲ್ ಫೋನ್ ಹೊರತು ಪಡಿಸಿದರೆ ಎಲ್ಲ ತಂತ್ರಜ್ಞಾನ ಬಳಕೆಯಲ್ಲಿ ನಾವು ಅತ್ಯಂತ  ಹಿಂದೆ.ತಂತ್ರಜ್ಞಾನ ಅಭಿವೃದ್ಧಿಗಾಗಿಯೇ ಸ್ಥಾಪಿತವಾದ ಕಿಯೋನಿಕ್ಸ್ ನಂತಹ ಸಂಸ್ಥೆಗಳಲ್ಲೂ ಇನ್ನೂ ವಿಂಡೋಸ್ ಎಕ್ಸ್ ಪಿ ಬಳಕೆಯಲ್ಲಿದೆ. ಲಿನಕ್ಸ್ ಹೋಗಲಿ ವಿಂಡೋಸ್ 7 ಬಳಸಲೂ ಸಹ ಹಿಂಜರಿಯುತ್ತಾರೆ.ಎಲ್ಲ್ ಬ್ಯಾಂಕ್ ಗಳಲ್ಲಿ ಇಂಟರ್ ನೆಟ್ ಎಕ್ಸ್ ಪ್ಲೋರರ್ ಹೊರತು ಪಡಿಸಿದರೆ ಬೇರೆ ಬ್ರೌಸರ್ ನ ಬಗ್ಗೆ ಮಾಹಿತಿಯೂ ಸಹ ಇಲ್ಲ. ಇಂತಹ ಕಡೆಗೆಲ್ಲ ಪ್ರತಿಯೊಬ್ಬರಿಗೂ ಸಹ ತಂತ್ರಜ್ಞಾನವನ್ನು ಕಲಿಸುವುದು ಕಷ್ಟವೇ ಸರಿ. ಬದಲಾಗಿ ತಂತ್ರಜ್ಞಾನವು ಜನಬಳಕೆಗೆ ಹತ್ತಿರವಾಗುವಂತೆ ಒಗ್ಗಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಆಡಳಿತಾತ್ಮಕ ನಡೆಗಳು ರೂಪುಗೊಳ್ಳಬೇಕು. ಕನ್ನಡಕ್ಕೆ ತಂತ್ರಜ್ಞಾನವನ್ನು ಒಗ್ಗಿಸಲು ನಮ್ಮಲ್ಲೊಬ್ಬ ಹಮ್ಮುರಾಭಿ ಹುಟ್ಟಬೇಕು!

-ಶ್ರೀಹರ್ಷ ಸಾಲಿಮಠ
 ನಿರ್ದೇಶಕರು, ಪ್ರೊ ಎಕ್ಸ್ ಕನ್ಸಲ್ಟೆನ್ಸಿ ಪ್ರೈ ಲಿ ಕಂಪನಿ

 
ಮುಂದಿನ ವಾರ: ಕನ್ನಡಕ್ಕೆ ಬೇಕೊಬ್ಬ ಹಮ್ಮುರಾಭಿ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com