ಕನ್ನಡಕ್ಕೆ ಬೇಕೊಬ್ಬ ಹಮ್ಮುರಾಭಿ!

ಕನ್ನಡ ಯುನಿಕೋಡ್ ನಲ್ಲಿ ಹಲವು ಫಾಂಟ್ ಗಳು ಬಂದು ವರ್ಷಗಳೇ ಕಳೆದಿದ್ದರೂ ಅವನ್ನು ವೆಬ್ ಸೈಟ್ ಗಳಲ್ಲಿ ಕಾಣಲು ಸಾಧ್ಯವಿಲ್ಲ...
ಕನ್ನಡ ಫಾಂಟ್
ಕನ್ನಡ ಫಾಂಟ್
ಹಮ್ಮುರಾಭಿ ಬೆಬಿಲೋನಿಯನ್ನಿನ ರಾಜ. ಮೆಸಪಟೋಮಿಯಾವರೆಗೆ ರಾಜ್ಯವನ್ನು ವಿಸ್ತರಿಸಿದ ಅಮೊರೈಟ್ ವಂಶದ ದೊರೆ. ಹಮ್ಮುರಾಭಿಯನ್ನು ನೆನಪಿಡುವುದು ಆತನ ಶೌರ್ಯಕ್ಕಲ್ಲ. ಬದಲಾಗಿ ಆತ ವಿಶ್ವದಾದ್ಯಂತ ಜಾರಿಯಲ್ಲಿದ್ದ ನಯಮಗಳನ್ನು ಕ್ರೋಢೀಕರಿಸಿ ಪರಿಷ್ಕರಿಸಿದ ಎಂಬ ಕಾರಣಕ್ಕಾಗಿ . ಹಮ್ಮುರಾಭಿಯದು ಇತಿಹಾಸದ ಮೊತ್ತಮೊದಲ ಬರೆದಿಟ್ಟ ಸಂವಿಧಾನ!  ರಾಜನಾಗಿ ರಾಜ್ಯ ವಿಸ್ತರಿಸಿದ ನಂತರ ತನ್ನ ನೆಲದ ಕಾನೂನನ್ನು ಹಮ್ಮುರಾಭಿ ತಹಬದಿಗೆ ತರತೊಡಗಿದ. ಯಾವ ಅಪರಾಧಕ್ಕಾಗಿ ಯಾವ ಶಿಕ್ಷೆ, ಜನರು ಬದುಕಬೇಕಾದ ರೀತಿ ಯಾವುದು, ನಾಗರಿಕನ ಹಕ್ಕು ಮತ್ತು ಕರ್ತವ್ಯಗಳೇನು, ಸಮಾಜದ ವಿವಿಧ ಪದರಗಳಲ್ಲಿದ್ದ ಜನರ ಹಕ್ಕು ಬಾಧ್ಯತೆಗಳೆಲ್ಲವನ್ನೂ ಬರೆದಿಟ್ಟು ಜನರ ನಡುವೆ ಪ್ರಚುರಪಡಿಸಿದ. ನಿಯಮಾವಳಿಗಳನ್ನು ರೂಪಿಸಲು ತನ್ನ ಗೂಢಚಾರರನ್ನು, ಪಂಡಿತರನ್ನು,ಅಧಿಕಾರಿಗಳನ್ನು ವಿಶ್ವದ ಬೇರೆ ಬೇರೆ ಕಡೆ ಕಳಿಸಿದ. ಬೇರೆ ಬೇರೆ ದೇಶಗಳಲ್ಲಿ ಜಾರಿಯಲ್ಲಿದ್ದ ಕಾನೂನುಗಳನ್ನು ತಂದು ಗುಡ್ಡೆಹಾಕಿ ಅವುಗಳನ್ನು ಅಧ್ಯಯನ ಮಾಡಿ ಸೂಕ್ತವಾದವುಗಳನ್ನು ಸೂಕ್ತವಾಗಿ ಮಾರ್ಪಡಿಸಿ ಕಾನೂನುಗಳಾಗಿ ರೂಪಿಸಿದ. ಕಾನೂನುಗಳನ್ನು ಸ್ಥಂಭಗಳಲ್ಲಿ ಕೆತ್ತಿಸಿ ಜನರಿಗೆ ತಿಳಿಯುವಂತೆ ರಾಜ್ಯದಲ್ಲೆಲ್ಲ ನಿಲ್ಲಿಸಿದ.

 ಇಂತಹದೊಂದು ಕೆಲಸ ಕನ್ನಡದ ತಾಂತ್ರಿಕ ಜಗತ್ತಿನಲ್ಲಿ ಆಗಬೇಕಿದೆ. ಸದ್ಯಕ್ಕೆ ಕನ್ನಡದ ಬಳಕೆ ತಂತ್ರಜ್ಞಾನ ಲೋಕದಲ್ಲಿ ಅತ್ಯಂತ ಸೀಮಿತವಾಗಿದೆ. ವಿಶ್ವದೆಲ್ಲೆಡೆ ಬಿಡುಗಡೆಯಾಗುವ ಕಂಪ್ಯೂಟರ್ ಗಳೇ ಕರ್ನಾಟಕಕ್ಕೂ ಬರುತ್ತಿವೆ. ಅಮೇರಿಕದ ಜನಬಳಕೆಗಾಗಿ ಬಳಸುವ ಕಂಪ್ಯೂಟರ್ ಗಳನ್ನೇ ಇಲ್ಲಿಯೂ ಬಳಸಬೇಕಾಗಿರುವುದರಿಂದ ಕಂಪ್ಯೂಟರು (ಇನ್ನೂ ಕರಾರುವಕ್ಕಾಗಿ ಹೇಳಬೇಕೆಂದರೆ ಆಪರೇಟಿಂಗ್ ಸಿಸ್ಟಮ್)ಇಂಗ್ಲೀಷ್ ಮಯವಾಗಿದೆ. ಕನ್ನಡ ಬಳಸಲು ಸಹಜವಾಗಿ ಸಾಧ್ಯವಿಲ್ಲದಂತಾಗಿದೆ. ಕನ್ನಡವನ್ನು ಕಂಪ್ಯೂಟರ್ ನಲ್ಲಿ ಬಳಸಲು ವಿಶೇಷ ಇಂಜಿನ್ ಗಳ ಮತ್ತು ಸಾಫ್ಟ್ ವೇರ್ ಗಳ ಅವಶ್ಯಕತೆ ಇದೆ. ಇಂಗ್ಲೀಷ್ ಕೀಲಿಮಣೆಗಳನ್ನು ಕನ್ನಡ ಟೈಪ್ ಮಾಡಲು ಬಳಸುತ್ತಿರುವುದೂ ಒಂದು ಕಾರಣ. ಇಂಗ್ಲೀಷ್ ವೆಬ್ ಸೈಟ್ ಗಳನ್ನು ನೋಡಿದರೆ ವಿವಿಧ ಅಕ್ಷರ ವಿನ್ಯಾಸ ಗಳು ಕಾಣುತ್ತವೆ. ಕನ್ನಡ ವೆಬ್ ಸೈಟ್ ಗಳಲ್ಲಿ ಒಂದೇ ಅಕ್ಷರ ವಿನ್ಯಾಸವಿರುತ್ತದೆ. ಈ ಕಾರಣದಿಂದಾಗಿ ಕನ್ನಡ ವೆಬ್ ಸೈಟ್ ಗಳು ಚೆಂದವಾಗಿಯೂ ಕಾಣುವುದಿಲ್ಲ! ಇದಕ್ಕೆ ಕಾರಣ ಕನ್ನಡವು ಯುನಿಕೋಡ್ ಶಿಷ್ಠಾಚಾರಕ್ಕೆ ಒಗ್ಗಿಕೊಳ್ಳಲು ತಡಮಾಡಿದ್ದು! ಕನ್ನಡ ಯುನಿಕೋಡ್ ನಲ್ಲಿ ಹಲವು ಫಾಂಟ್ ಗಳು ಬಂದು ವರ್ಷಗಳೇ ಕಳೆದಿದ್ದರೂ ಅವನ್ನು ವೆಬ್ ಸೈಟ್ ಗಳಲ್ಲಿ ಕಾಣಲು ಸಾಧ್ಯವಿಲ್ಲ. ಒಂದು ವೇಳೆ ನಾವು ಆ ಫಾಂಟ್ ಗಳನ್ನು ಬಳಸಿದರೂ ವಿಶ್ವಸಮುದಾಯವು ಇನ್ನೂ ಅಳವಡಿಸಿಕೊಂಡಿಲ್ಲದ ಕಾರಣ ನಮ್ಮ ಪರ್ಸನಲ್ ಕಂಪ್ಯೂಟರ್ ಗಳಲ್ಲಿ ಫಾಂಟ್ ಗಳು ಇನ್ ಸ್ಟಾಲ್ ಆಗಿರದಿದ್ದರೆ ಅವು ಸರಿಯಾಗಿ ಕಾಣುವುದಿಲ್ಲ.

 ಇಂತಹ ತೊಂದರೆಗಳಿಗೆ ಮೂಲ ಕಾರಣವೆಂದರೆ ಕನ್ನಡಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಸರಿಯಾದ ಪರಿಕಲ್ಪನೆ ನಮ್ಮಲ್ಲಿ ಇಲ್ಲದಿರುವುದು. ಕನ್ನಡಕ್ಕಾಗಿಯೇ ಮತ್ತೊಮ್ಮೆ ಎಲ್ಲ ತಂತ್ರಜ್ಞಾನಗಳನ್ನು ಬೆಳೆಸುವ ಅವಶ್ಯಕತೆಯಿಲ್ಲ. ಬದಲಾಗಿ ಬೇರೆಡೆಯೆಲ್ಲ ತಮ್ಮ ಮಾತೃಭಾಷೆಗೆ ಅನುಗುಣವಾಗಿ ತಂತ್ರಜ್ಞಾನವನ್ನು ಒಗ್ಗಿಸಿಕೊಂಡಿರುವುದನ್ನು ನೋಡಿ ಕಲಿಯಬೇಕು. ಅದರಂತೆ ನಮ್ಮಲ್ಲೂ ನಡೆಯಬೇಕು. ಅಲ್ಲದೇ ಕನ್ನಡಿಗರ ಬಳಕೆಗೆ ತಕ್ಕಂತೆಯೇ ವಿಶೇಷವಾಗಿ ಸಾಫ್ಟ್ ವೇರ್ ಸಲಕರಣೆಗಳು ಸಿದ್ಧವಾಗಬೇಕು. ಕನ್ನಡದ ತಂತ್ರಜ್ಞಾನಕ್ಕೆ ಮಾರುಕಟ್ಟೆಯಿಲ್ಲ ಎಂದು ಕೆಲವರು ಅಲವತ್ತುಕೊಳ್ಳುತ್ತಾರೆ. ಇದು ಸಂಪೂರ್ಣ ಸತ್ಯವಲ್ಲ. ಕೇವಲ 95 ಲಕ್ಷ ಜನಸಂಖ್ಯೆಯ ಸ್ವೀಡನ್ ಜನರಿಗಾಗಿ, ನಲವತೈದು ಲಕ್ಷವಿರುವ ಸ್ಪ್ಯಾನಿಶ್ ಜನರಿಗಾಗಿ, ಎಂಟು ಕೋಟಿ ಇರುವ ಜರ್ಮರಿಗಾಗಿ, ಹನ್ನೆರಡು ಕೋಟಿ ಜಪಾನೀಯರಿಗಾಗಿ ತಂತ್ರಜ್ಞಾನ ಒಗ್ಗಬಲ್ಲುದಾದರೆ ಆರು ಕೋಟಿ ಕನ್ನಡಿಗರಿಗೇಕಿಲ್ಲ? ಹತ್ತಾರು ಮನರಂಜನೆ ಮತ್ತು ಸುದ್ದಿ ವಾಹಿನಿಗಳನ್ನು ಸಾಕುತ್ತಿರುವ ಕನ್ನಡದ್ದು ಸಣ್ಣ ಮಾರುಕಟ್ಟೆಯೇನೂ ಅಲ್ಲ. ಕನ್ನಡಕ್ಕಾಗಿಯೇ ಆಪರೇಟಿಂಗ್ ಸಿಸ್ಟಮ್ ಗಳು ಬರಬೇಕು. ಕೀಲಿಮಣೆಗಳು ಬರಬೇಕು. ಲಿಪಿ ಗುರುತಿಸುವ ಸಲಕರಣೆಗಳು ಬರಬೇಕು. ಕನ್ನಡವನ್ನು ಅತ್ಯಂತ ಸಹಜವಾಗಿ ಬಳಸುವಂತೆ ಕಂಪ್ಯೂಟರ್ ಕಾರ್ಯಾಚರಣೆಗಳು ರೂಪುಗೊಳ್ಳಬೇಕು. ನಮ್ಮಕಂಪ್ಯೂಟರ್ ಗಳಲ್ಲಿ ಎಲ್ಲೆಲ್ಲಿ ಇಂಗ್ಲೀಷ್ ಬಳಸುವ ಅಗತ್ಯ ಇದೆಯೋ ಅಲ್ಲೆಲ್ಲ ಕಡೆ ಕನ್ನಡವೂ ಬರಬೇಕು!  ಒಂದು ಒಳ್ಳೆಯ ಆಶಾವಾದದ ಬೆಳವಣಿಗೆಯೆಂದರೆ ಸ್ಮಾರ್ಟ್ ಫೋನ್ ಗಳಲ್ಲಿ ಕನ್ನಡ ಬಳಕೆಯು ಬರುತ್ತಿರುವ ಬಗೆ. ಫೋನ್ ಗಳಿಗಾಗಿ ಒಂದು ಸುಸಜ್ಜಿತ ಮಾರುಕಟ್ಟೆಯಿರುವುದರಿಂದ ಇಲ್ಲಿ ಬೆಳವಣಿಗೆ ಅತ್ಯಂತ ವೇಗವಾಗಿ ನಡೆಯುತ್ತಿದೆ ಹಾಗೂ ಜನರನ್ನು ತಲುಪುತ್ತಿದೆ. ಇದೇ ರೀತಿ ಎಲ್ಲಾ ರಂಗಗಳಲ್ಲಿಯೂ ವಿಸ್ತರಿಸುವ ಅವಶ್ಯಕತೆ ಇದೆ. ಹಮ್ಮುರಾಭಿಯ ಹಾಗೆ ಈ ನೆಲಕ್ಕೆ ಹಾಗೂ ನೆಲದ ಜನಕ್ಕೆ ತಕ್ಕ ಬೇಕು ಬೇಡಗಳನ್ನು ಒಂದೆಡೆ ಪಟ್ಟಿ ಮಾಡಿ ತಕ್ಕಂತೆ ತಾಂತ್ರಿಕ ಬೆಳವಣಿಗೆಯನ್ನು ರೂಪಿಸುವ ಅವಶ್ಯಕತೆ ಇದೆ. ತಂತ್ರಜ್ಞಾನವನ್ನು ಎಲ್ಲರಿಗೂ ತಲುಪಿಸುವ ಅವಶ್ಯಕತೆ ಇದೆ.
- ಶ್ರೀಹರ್ಷ ಸಾಲಿಮಠ
ಮುಂದಿನ ವಾರ: ಕನ್ನಡಕ್ಕೆ ತಂತ್ರಜ್ಞಾನ ಒಗ್ಗಬೇಕಾದದ್ದೆಲ್ಲೆಲ್ಲಿ..?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com