ತಾಯ್ತಂದೆಯರಿಗೆ ಈಗಿನ ಮಕ್ಕಳು ನೀಡುವ 'ಶಾಕ್' ಗಳು

ಏಳನೆಯ ತರಗತಿಯ ಹುಡುಗನಿಗೆ 'ಗೇ' ಎಂದರೇನು ಎಂಬುದರ ಬಗ್ಗೆ ಹೇಗೆ ಗೊತ್ತು. ನಿಜಕ್ಕೂ ಅದೇನೆಂದು ಗೊತ್ತೇ ಅಥವಾ ಸುಮ್ಮನೆ ಅಲ್ಲಿ ಇಲ್ಲಿ ಕೇಳಿಕೊಂಡು ಮಾತನಾಡುತ್ತಿದ್ದಾನೋ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನಮ್ಮ ಕಾಲಮಾನಕ್ಕೂ ಈಗಿನ ಕಾಲಮಾನಕ್ಕೂ ಎಲ್ಲರ ಕಣಣಿಗೂ ಕಾಣುವ ಬಹಳ ದೊಡ್ಡ ವ್ಯತ್ಯಾಸಗಳಿವೆ. ತಂತ್ರಜ್ಞಾನವು ನಮಗಿಂತ ನಮ್ಮ ಮಕ್ಕಳನ್ನು ಸಾಕಷ್ಟು ಮುಂದಕ್ಕೆ ಕೊಂಡೊಯ್ದುಬಿಟ್ಟಿದೆ. ನಮ್ಮ ಜ್ಞಾನ ಸಂಪಾದನೆಯ ಮೂಲ ಶಾಲೆಯಲ್ಲಿ ಪಾಠ ಹೇಳುವ ಶಿಕ್ಷಕರು ಮತ್ತು ಅಪ್ಪ ಅಮ್ಮಂದಿರು ಮಾತ್ರ ಇದ್ದರು. ಈಗ ವಿಕಿಪೀಡಿಯಾ, ಗೂಗಲ್ ಗಳು ಮಕ್ಕಳ ಜ್ಞಾನಾರ್ಜನೆಗೆ ಸಾಕಷ್ಟು ಇಂಬು ಕೊಡುತ್ತವೆ. ನಮಗೆ ಈ ವಯಸ್ಸಲ್ಲಿ ತಿಳಿದಿರದ ಅನೇಕ ವಿಷಯಗಳು ನಮ್ಮ ಮಕ್ಕಳಿಗೆ ಸಹಜವೆಂಬಂತೆ ಗೊತ್ತು. 
  ನನ್ನ ಸಹೋದ್ಯೋಗಿಯೊಬ್ಬನ ಮಗ ಏಳನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಒಮ್ಮೆ ಅವರು ತಮ್ಮ ಮಗನ ಜೊತೆ ಸಹಜವಾಗಿ ಮಾತನಾಡುತ್ತಾ ಶಾಲೆಯಲ್ಲಿನ ಅವನ ಗೆಳೆಯರ ಬಗ್ಗೆ ಕೇಳಿದರಂತೆ. ಆತ ತನ್ನ ಗಂಡು ಹುಡುಗ ಗೆಳಯರನೇಕರ ಹೆಸರನ್ನು ಹೇಳಿದರಂತೆ. ಹಾಗಿದ್ದರೆ ನಿಮ್ಮ ಕ್ಲಾಸಿನಲ್ಲಿ ಹುಡುಗಿಯರಿಲ್ಲವಾ ಎಂದು ನನ್ನ ಸಹೋದ್ಯೋಗಿಯು ಕೇಳಿದ ಸಹಜ ಪ್ರಶ್ನೆಗೆ "ನನಗೆ ಹುಡುಗಿಯರು ಅಂದರೆ ಆಗೋದಿಲ್ಲ. ಅವರ ಜೊತೆ ಗೆಳೆತನ ನನಗಿಷ್ಟವಿಲ್ಲ" ಎಂದನಂತೆ. ಅದರ ಹಿಂದೆಯೇ "ಹಾಗಂತ ನನ್ನ ಬಗ್ಗೆ ತಪ್ಪು ತಿಳಿಯಬೇಡ. ನಾನು 'ಗೇ' ಅಲ್ಲ!" ಎಂದನಂತೆ. ನನ್ನ ಸಹೋದ್ಯೋಗಿ ಅವಾಕ್ಕಾದರು! ಏಳನೆಯ ತರಗತಿಯ ಹುಡುಗನಿಗೆ 'ಗೇ' ಎಂದರೇನು ಎಂಬುದರ ಬಗ್ಗೆ ಹೇಗೆ ಗೊತ್ತು. ನಿಜಕ್ಕೂ ಅದೇನೆಂದು ಗೊತ್ತೇ ಅಥವಾ ಸುಮ್ಮನೆ ಅಲ್ಲಿ ಇಲ್ಲಿ ಕೇಳಿಕೊಂಡು ಮಾತನಾಡುತ್ತಿದ್ದಾನೋ ಎಂದು ದುಗುಡವಾಯಿತು. ಅಲ್ಲದೇ ಈ ವಯಸ್ಸಿನಲ್ಲಿ ಆತನಿಗೆ ಈ ವಿಷಯವಾಗಿ ತಿಳುವಳಿಕೆ ಕೊಡಬೇಕೊ ಬೇಡವೋ, ಅಥವಾ ಅವನ ಪಾಡಿಗೆ ಸುಮ್ಮನೆ ಬಿಡಬೇಕೋ ಎಂಬುದು ತಿಳಿಯದೇ ಗೊಂದಲದಲ್ಲಿ ಈ ವಿಷಯವನ್ನು ನಮ್ಮೊಂದಿಗೆ ವಿಷಾದದೊಂದಿಗೆ ಹಂಚಿಕೊಂಡರು.
 ಹಾಗೆಯೆ ಮತ್ತೊಬ್ಬ ಸಹೋದ್ಯೋಗಿಯೊಬ್ಬರ ಮಗಳು ಶಕ್ತಿ ಪೇಯದ ಜಾಹೀರಾತೊಂದನ್ನು ನೋಡುತ್ತಿದ್ದಳಂತೆ. ಅದರಲ್ಲಿ ತಾಯಿ ತಾನು ತನ್ನ ಮಗನಿಗೋಸ್ಕರ ಎಷ್ಟು ಕಷ್ಟ ಪಟ್ಟೆ ಎಂಬುದನ್ನು ಹೇಳಿಕೊಳ್ಳುತ್ತಾಳೆ. ಅದನ್ನು ನೋಡಿ ಈ ಹುಡುಗಿ "ಅದೇನು ಮಹಾ ಮಕ್ಕಳನ್ನು ನೋಡಿಕೊಳ್ಳೋದನ್ನ ಹಿಂಗೆ ಹೇಳಿಕೊಳ್ಳೋದೆಲ್ಲ ಎಷ್ಟು ಚೀಪ್. ಮಕ್ಕಳಿಗಾಗಿ ಕಷ್ಟ ಪಡೋದು ತಂದೆ ತಾಯಿಗಳ ಕರ್ತವ್ಯ" ಎಂದಳಂತೆ. ತಾಯ್ತಂದೆಯರೇ ದೇವರು ಎಂದು ಭಾವಿಸುತ್ತಿದ್ದ ನಮ್ಮ ಕಾಲವೆಲ್ಲಿ ಈಗಿನ ಮಕ್ಕಳೆಲ್ಲಿ ಎಂದು ಅವರು ಎಲ್ಲರಲ್ಲಿ ತಮ್ಮ ಗೋಳು ತೋಡಿಕೊಳ್ಳುತ್ತಿದ್ದರು.
  ಇಂಟರ್ ನೆಟ್ ಮತ್ತು ಶಾಲೆಯಲ್ಲದೇ ಮಕ್ಕಳು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಕಲಿಯಲು ಸೇರುತ್ತಾರೆ. ಈಜು, ಸಂಗೀತ, ನೃತ್ಯ ಪಾಠಶಾಲೆಗಳಲ್ಲಿ ಬೇರೆ ಬೇರೆ ತರಗತಿಯ ಬೇರೆ ಬೇರೆ ಹಿನ್ನೆಲೆಗಳುಳ್ಳ ಮಕ್ಕಳು ಗೆಳೆಯರಾಗುತ್ತಾರೆ. ನಮ್ಮ ಅನುಪಸ್ಥಿತಿಯಲ್ಲಿ ಅದೆಷ್ಟು ವಿವಿಧ ವಿಷಯಗಳ ಬಗ್ಗೆ ಇವರು ಮಾತನಾಡಿಕೊಳ್ಳುತ್ತಾರೆ ಎಂಬ ಜ್ಞಾನವೂ ಸಹ ನಮಗೆ ಇರುವುದಿಲ್ಲ. ನಮಗಿಂತ ಸಾಕಷ್ಟು ಮುಂದೆ ಹೋಗಿರುವುದರಿಂದ ತಮ್ಮ ತಂದೆ ತಾಯಿಗಳ ಬಗ್ಗೆ ಅಸಡ್ಡೆಯೂ ಈ ಮಕ್ಕಳಲ್ಲಿ ಹುಟ್ಟಿಬಿಡುತ್ತದೆ. ವಿಕಿ ಅಥವಾ ತನ್ನ ಗೆಳೆಯರಿಗಿಂತ ಹೆಚ್ಚು ತಿಳಿದಿಲ್ಲದ ತಂದೆ ತಾಯಿಗಳ ಬಗ್ಗೆ ಗೌರವ ಹುಟ್ಟುವುದೂ ಕಠಿಣ. ಅದರಲ್ಲೂ ಈಗಿನ ತಾಯ್ತಂದೆಯರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಪುರುಸೊತ್ತಿಲ್ಲದಿರುವುದರಿಂದ ಈ ರೀತಿಯ ಮನಃಸ್ಥಿತಿ ಹುಟ್ಟಲು ಕಾರಣವಾಗುತ್ತದೆ. 
 ಹಾಗಂತ ಈ ಮಕ್ಕಳಿಗೆ ಪ್ರತಿಯೊಂದು ಸಹ ಗೊತ್ತಿರುತ್ತದೆ ಎಂದಲ್ಲ. ಜನನ ನಿಯಂತ್ರಣ ಎಂದರೆ ಹುಟ್ಟಿದ ಮಕ್ಕಳನ್ನು ಕೊಲ್ಲುವುದು ಎಂದೇ ಇವರು ತಿಳಿದುಕೊಂಡಿದ್ದಾರೆ. ಜನನ ನಿಯಂತ್ರಣ ಅತೀ ದೊಡ್ಡ ತಪ್ಪು ಎಂಬ ಎಂಬ ಭಾವನೆಯಲ್ಲಿರುವ ಅನೇಕ ಮಕ್ಕಳನ್ನು ನಾನು ಮಾತನಾಡಿಸಿದ್ದೇನೆ.  ತೀರಾ ಇತ್ತೀಚೆಗೆ ಹುಟ್ಟಿಕೊಂಡಿರುವ ಮಕ್ಕಳ ಇಂತಹ ಸಮಸ್ಯೆಗಳಿಗೆ ಸರಿಯಾದ ಪರಿಹಾರವೇನು ಎಂದು ಮಕ್ಕಳ ತಜ್ಞರಿಗೂ, ಮಾನಸಿಕ ತಜ್ಞರಿಗೂ ಇನ್ನೂ ಮನದಟ್ಟಾಗಿಲ್ಲ. ಒಂದು ಹಂತದ ವರೆಗೆ ಕೌನ್ಸೆಲಿಂಗ್ ಮಾಡಬಹುದಾದರೂ ಇದು ಬಹುತೇಕ ಸಮಯದಲ್ಲಿ ತಾತ್ಕಾಲಿಕ ಮಾತ್ರ. ಸಧ್ಯದ ಮಟ್ಟಿಗೆ ಪೋಷಕರು ತಮ್ಮ ಮಕ್ಕಳ ಮನಃಸ್ಥಿತಿಯನ್ನು ಅರಿತು ಅವರೊಡನೆ ಬೆರೆತು, ಸಮಯ ಕಳೆದು ಮಾತನಾಡಿ ಅವರನ್ನು ಸರಿಯಾದ ದಾರಿಯಲ್ಲಿ ನಡೆಸುವುದೊಂದೇ ಒಪ್ಪಿತವಾಗಬಲ್ಲದು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com