ಕಂಪ್ಯೂಟರ್ ಮತ್ತು ಸುತ್ತಲಿನ ಯಂತ್ರಗಳ ಮಧುರ ಸಂಭಾಷಣೆ

ಪೆನ್ ಡ್ರೈವ್ ಎಲ್ಲರ ಬಳಿ ಅದರಲ್ಲೂ ವಿದ್ಯಾರ್ಥಿಗಳ ಬಳಿ ಲೇಖನಿ ಇರುವಷ್ಟೇ ಅಗತ್ಯವಾಗಿ ಇಂದಿಗೆ ಬೇಕು. ಒಂದು ಕಂಪ್ಯೂಟರ್ ನಿಂದ ಇನ್ನೊಂದು ಕಂಪ್ಯೂಟರ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪೆನ್ ಡ್ರೈವ್ ಎಲ್ಲರ ಬಳಿ ಅದರಲ್ಲೂ ವಿದ್ಯಾರ್ಥಿಗಳ ಬಳಿ ಲೇಖನಿ ಇರುವಷ್ಟೇ ಅಗತ್ಯವಾಗಿ ಇಂದಿಗೆ ಬೇಕು. ಒಂದು ಕಂಪ್ಯೂಟರ್ ನಿಂದ ಇನ್ನೊಂದು ಕಂಪ್ಯೂಟರ್ ಗೆ ಮಾಹಿತಿಗಳನ್ನು ಸಾಗಿಸಲು ಇದಕ್ಕಿಂತ ಪ್ರಯೋಜನಕಾರಿ ಹಾಗೂ ಸುಲಭ ಬಳಕೆಯ ಸಾಧನ ಇನ್ನೊಂದಿಲ್ಲ.  ಈ ಸಾಧನಕ್ಕೆ USB ಡ್ರೈವ್ ಎಂದೂ ಕರೆಯುತ್ತಾರೆ. ಈ ಯು ಎಸ್ ಬಿ ಯನ್ನು ತಯಾರು ಮಾಡಿದವರು ಬರೋಡಾ ಮೂಲದ ಭಾರತೀಯ ವಿಜ್ಞಾನಿ ಅಜಯ್ ಭಟ್!
 ಕಂಪ್ಯೂಟರ್ ಏನೋ ಮೊದಲಿಗೆ ಹುರುಪಿನಿಂದ ತಯಾರಾಯಿತು. ಆದರೆ ಜನಬಳಕೆಗೆ ಕಂಪ್ಯೂಟರ್ ಒದಗಬೇಕೆಂದರೆ ಸಾಕಷ್ಟು ಹೊರ ಮೆಶಿನುಗಳನ್ನು ಜೋಡಿಸಬೇಕಿತ್ತು. ಈ ಹೊರಮೆಶಿನುಗಳೆಂದರೆ ಪರದೆ, ಮುದ್ರಕಗಳು, ಇಲಿ ಇತ್ಯಾದಿ. ಈ ಹೊರ ಜಗತ್ತಿನ ಯಂತ್ರಗಳಿಗೆ ಕಂಪ್ಯೂಟರನ್ನು ಜೋಡಿಸಲು ತಕ್ಕ ಶಿಷ್ಠಾಚಾರಗಳನ್ನು ತಯಾರು ಮಾಡಬೇಕಿತ್ತು. ಒಂದು ದೇಶದ ಮಂತ್ರಿಗಳು ಇನ್ನೊಂದು ದೇಶಕ್ಕೆ ಹೋದಾಗ ಎರಡು ದೇಶಗಳ ನಡುವೆ ಕೆಲ ಶಿಷ್ಠಾಚಾರಗಳು, ಗೌರವ ವಿಧಿವಿಧಾನಗಳನ್ನು ಪಾಲಿಸುವುದಿಲ್ಲವೇ ಹಾಗೆ! ಕಂಪ್ಯೂಟರ್ ಮತ್ತು ಸುತ್ತಲಿನ ಯಂತ್ರಗಳು ಪರಸ್ಪರ ಮಾತನಾಡಲು, ಹೊಂದಾಣಿಕೆ ಮಾಡಿಕೊಳ್ಳಲು ಮತ್ತು ಮಾಹಿತಿಯನ್ನು ಅದಲು ಬದಲು ಮಾಡಿಕೊಳ್ಳಲು ಈ ಶಿಷ್ಟಾಚಾರಗಳು ಬಳಕೆಯಾಗುತ್ತವೆ.
 ಹೀಗೆ ಮೊದಲು ತಯಾರಾದದ್ದೇ RS-232 ಎಂಬ ಶಿಷ್ಟಾಚಾರ. ಕೊಂಚ ಹಳೆಯ ಅಂದರೆ ಐದಾರು ವರ್ಷ ಹಳೆಯ ಕಂಪ್ಯೂಟರ್ ನ ಮೌಸ್,ಕೀಬೋರ್ಡ್ಗಳು ಮತ್ತು ಈಗ ಪರದೆಗಳನ್ನು ಕಂಪ್ಯೂಟರ್ ಗೆ ಜೋಡಿಸಲು ಬಳಸುವ ಕೇಬಲ್ ಗಳು ಇದೇ RS-232 ಶಿಷ್ಟಾಚಾರವನ್ನು ಬಳಸುತ್ತವೆ. ಈ ಶಿಷ್ಟಾಚಾರವನ್ನು ಬಳಸುವ ಕೇಬಲ್ ಗಳು 3 , 5, 24 ಪಿನ್ ಗಳದ್ದಾಗಿರುತ್ತವೆ.  ಬೇರೆ ಬೇರೆ ಪಿನ್ ಅನ್ನು ಬೇರೆ ಬೇರೆ ಉದ್ದೇಶಕ್ಕಾಗಿ ಬಳಸಲಾಗುತ್ತವೆ. ಕಂಪ್ಯೂಟರ್ ಮತ್ತು ಯಂತ್ರಗಳ ನಡುವೆ ಸನ್ನೆಗಳ ಮುಖಾಂತರ ಮಾತುಕತೆ ನಡೆಯುತ್ತದೆ. ಇದಕ್ಕೆ "ಹ್ಯಾಂಡ್ ಶೇಕಿಂಗ್" ಸಿಗ್ನಲ್ ಎನ್ನುತ್ತಾರೆ. ಉದಾಹರಣೆಗೆ ಪ್ರಿಂಟರ್ ಗೆ ಮಾಹಿತಿ ಕಳಿಸಲು "ಪ್ರಿಂಟ್" ಗುಂಡಿ ಒತ್ತುತ್ತಿದ್ದಂತೆ ಮಾತುಕತೆ ಶಿಸ್ತಿನ ಸೈನಿಕರಂತೆ ಹಂತ ಹಂತವಾಗಿ ಕೆಳಗಿನಂತೆ ನಡೆಯುತ್ತದೆ.

1.  ಮೊದಲಿಗೆ ಕಂಪ್ಯೂಟರ್ ಮಾಹಿತಿ ಕಳಿಸಬೇಕಾದ ಯಂತ್ರಕ್ಕೆ "ನಮ್ಮಿಂದ ಮಾಹಿತಿ ಬರಲಿದೆ. ಸ್ವೀಕರಿಸಲು ನೀವು ಸಿದ್ಧವೇ?" ಎಂದು ಪಿನ್ ನಂ.20 ರ ಮೂಲಕ ಸಿಗ್ನಲ್ ಕಳಿಸುತ್ತದೆ. ಇದಕ್ಕೆ DTR- Signal ಎಂದು ಕರೆಯುತ್ತಾರೆ.
2. ಎಚ್ಚೆತ್ತುಕೊಂಡ ಪ್ರಿಂಟರ್ ತಾನು ಯಾವುದೇ ಕೆಲಸದಲ್ಲಿ ತೊಡಗಿಕೊಂಡಿಲ್ಲವಾದರೆ "ನಾನು ಸಿದ್ಧನಿದ್ದೇನೆ" ಎಂದು ಸಂದೇಶವನ್ನು ಪಿನ್ ನಂ. 8 ರ ಮೂಲಕ ಕಳಿಸುತ್ತದೆ. ಇದಕ್ಕೆ DCD- Signal ಎಂದು ಕರೆಯುತ್ತಾರೆ.     
3. RTS - 4ನೆಯ ಪಿನ್ ಮೂಲಕ "ನಾನು ಮಾಹಿತಿ ಕಳಿಸಲಿದ್ದೇನೆ" ಎಂಬ ಸಂದೇಶ ಕಂಪ್ಯೂಟರ್ ನಿಂದ ಪ್ರಿಂಟರ್ ಗೆ.
4. RTR - ಅದೇ ಪಿನ್ ಮುಖಾಂತರ "ರಸ್ತೆ ಕ್ಲಿಯರ್ ಇದೆ. ಸರಿ ಕಳುಹಿಸಿ" ಎಂಬ ಮಾತು ಪ್ರಿಂಟರ್ ನಿಂದ.
5. TxD - ಕಂಪ್ಯೂಟರ್ ನಿಂದ ಪ್ರಿಂಟರ್ ಗೆ ಮಾಹಿತಿ ರವಾನೆ ಪಿನ್ ನಂ 2 ರ ಮುಖಾಂತರ.
6. RI -  "ಮಾಹಿತಿ ಮುಕ್ತಾಯವಾಯಿತು" ಎಂಬ ಸಂದೇಶ ಪಿನ್ 22 ರ ಮೂಲಕ.
 ಮಾಹಿತಿ ತರಿಸಿಕೊಂಡ ಮುದ್ರಕವು ಹಾಳೆಯ ಮೇಲೆ ಮುದ್ರಿಸಿ ನಮಗೆ ಕೊಡುತ್ತದೆ.

  RS -232 ನಲ್ಲಿ ಸಾಕಷ್ಟು ಲೋಪದೋಶಗಳಿದ್ದವು. ಹೆಚ್ಚಿನ ವೋಲ್ಟೇಜ್ ಬಂದಾಗ ಮಾಹಿತಿ ಮುಕ್ಕಾಗುವುದು. ಮಾಹಿತಿಯನ್ನು ಕಳಿಸುವ ವೇಗ ಕಡಿಮೆ ಮತ್ತು ಹೆಚ್ಚು ದೂರ ಕಳಿಸದಿರಲು ಸಾಧ್ಯವಾಗದಿರುವುದು ಹೊಸ ಶಿಷ್ಟಾಚಾರಕ್ಕೆ ಬದಲಾಗಲು ವಿಜ್ಞಾನುಗಳನ್ನು ಪ್ರೇರೇಪಿಸಿತು. ಇಂಟೆಲ್, ಮೈಕ್ರೊಸಾಫ್ಟ್, ಐಬಿಎಮ್, ನಾರ್ಟೆಲ್ ಸೇರಿ ಏಳು ಕಂಪನಿಗಳು ಈ ಕೆಲಸವನ್ನು ಕೈಗೆತ್ತಿಕೊಂಡವು.  ಈ ಹೊಸ ಉಸ್ತುವಾರಿಯನ್ನು ಹೊತ್ತವರು ಭಾರತೀಯ ಸಂಜಾತ ಅಜಯ್ ಭಟ್!
 ಮಾಹಿತಿ ವಿನಿಮಯದ ವೇಗವನ್ನ ಆಧರಿಸಿ ಯು ಎಸ್ ಬಿ ಯಲ್ಲಿ 1.1, 2.0, ಮತ್ತು 3.0 ಎಂಬ ಮೂರು ಬಗೆಗಳಿವೆ. ಯು ಎಸ್ ಬಿ ಸಹ ಕಂಪ್ಯೂಟರ್ ಮತ್ತು ಇತರ ಯಂತ್ರಗಳೊಡನೆ.ಸಂಭಾಷಣೆ ಏರ್ಪಡಿಸುತ್ತವೆ. ಈ ಮೂಲಕ ಮಾಹಿತಿ ವಿನಿಮಯಕ್ಕೆ ಅನುವು ಮಾಡಿಕೊಡುತ್ತದೆ. ಈಗ ಪ್ರಿಂಟರ್ ಅಲ್ಲದೇ ಜಾಯ್ ಸ್ಟಿಕ್, ಮೌಸ್, ಯು ಪಿ ಎಸ್, ಪೆನ್ ಡ್ರೈವ್, ಮೊಬೈಲ್ ಗಳು, ಮೆಡಿಕಲ್ ಯಂತ್ರಗಳು, ಬಾರ್ ಕೋಡ್ ಸ್ಕ್ಯಾನರ್ ಗಳು, ಕ್ಯಾಮೆರಾಗಳು ಎಲ್ಲೆಡೆಯಲ್ಲೂ ಯು ಎಸ್ ಬಿ ವಿಶ್ವವ್ಯಾಪಿ! ಯು ಎಸ್ ಬಿ ಯ ವೇಗ RS-232 ಗೆ ಹೋಲಿಸಿದರೆ ಬಹಳ ಹೆಚ್ಚು. ಇತ್ತೀಚೆಗೆ ಬಂದ USB 3.1 ನಲ್ಲಿ ಒಂದು ಸೆಕಂಡಿಗೆ 10 ಜಿ ಬಿ ಯಷ್ಟು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬಹುದು. ಅಂದರೆ ಸೆಕಂಡಿಗೆ ಮೂರು ಬ್ಲೂ ರೇ ಸಿನಿಮಾಗಳು ಅಥವಾ ಹನ್ನೆರಡು ಡಿವಿಡಿ ಕ್ವಾಲಿಟಿಯ ಸಿನಿಮಾಗಳನ್ನು ವಿನಿಮಯ ಮಾಡಿಕೊಳ್ಳಬಹುದು! ಜೊತೆಗೆ ಇದಕ್ಕೆ ಹೆಚ್ಚು ವಿದ್ಯುತ್ ಅವಶ್ಯಕತೆಯಿಲ್ಲ. ವೋಲ್ಟೇಜ್ ವ್ಯತ್ಯಯದ ತಲೆನೋವೂ ಇಲ್ಲ.
  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com