ನಿನ್ನೆಯ ರೂಪಾಯಿಗಿಂತ ಇಂದಿನ ರೂಪಾಯಿ ಮೌಲ್ಯವೇಕೆ ಕಡಿಮೆ ?

ಹಣದ ಇಂದಿನ ಬೆಲೆ ನಾಳೆ ಇರುವುದಿಲ್ಲ. ವಿಚಿತ್ರವೆಂದರೆ ರೂಪಾಯಿ ಮೇಲಿನ ಮುದ್ರಿತ ಮೌಲ್ಯ ಬದಲಾಗುವುದಿಲ್ಲ, ಮುಖ ಬೆಲೆ ಅದೇ ಇರುತ್ತದೆ. ಹಾಗಾದರೆ ಇದೇನು ಎನ್ನುವ ವಿಷಯ ತಿಳಿದುಕೊಳ್ಳಣ ಬನ್ನಿ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ರೂಪಾಯಿ, ಯುರೋ, ಡಾಲರ್, ಯೆನ್, ಪೌಂಡ್. ಡಾಂಗ್ ಹೀಗೆ ಪಟ್ಟಿ ಸಾಗುತ್ತದೆ. ದೇವನೊಬ್ಬ ನಾಮ ಹಲವು ಎನ್ನುವ ವಾಕ್ಯ 'ಹಣ' ಕ್ಕೆ ಚನ್ನಾಗಿ ಹೊಂದುತ್ತದೆ. ಹೆಸರು ಯಾವುದೇ ಇರಲಿ ಇದರ ಕೆಲಸ ಮಾತ್ರ ಒಂದೇ. ಇದಿಲ್ಲದ ಕೆಲಸಗಳು  ಸಾಧ್ಯತೆಗಳು ಕೂಡ ಕಡಿಮೆ. ತನ್ನ ವ್ಯಾಪಾರ ವಹಿವಾಟುಗಳಿಗೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಹುಟ್ಟಿಹಾಕಿದ  ವ್ಯವಸ್ಥೆ ಸರಳವಾಗಿರಬೇಕಿತ್ತು. 
ಇಂದಿನ ಬಹುತೇಕ ಸಮಸ್ಯೆಗಳ ಮೂಲ ಹಣಕಾಸು ವ್ಯವಸ್ಥೆ. ಮೇಲ್ನೋಟಕ್ಕೆ ಸರಳವೆನ್ನಿಸುವ ವಿಷಯಗಳು ಹಲವು ಅರ್ಥ ಕೊಡುತ್ತವೆ ಹೀಗಾಗಿ ಜನ ಸಾಮಾನ್ಯನಿಗೆ ಅವುಗಳನ್ನ ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದು ಒಂದು ಸವಾಲು. ವಿದ್ಯಾವಂತರು ಎನಿಸಿಕೊಂಡವರು ಕೂಡ ಬ್ಯಾಂಕ್ ಗಳಲ್ಲಿ ತಮ್ಮ ಗೃಹಸಾಲ ಇತ್ಯಾದಿಗಳ ಮೇಲೆ ಕಟ್ಟುವ ಕಂತಿನ ನಿಖರ ಬಡ್ಡಿಯ ಲೆಕ್ಕ ತಪ್ಪಿರುವುದು ಹಲವಾರು ಬರಿ ಗಮನಕ್ಕೆ ಬಂದಿದೆ. ಹಣದ ಇಂದಿನ ಬೆಲೆ ನಾಳೆ ಇರುವುದಿಲ್ಲ. ವಿಚಿತ್ರವೆಂದರೆ ರೂಪಾಯಿ ಮೇಲಿನ ಮುದ್ರಿತ ಮೌಲ್ಯ ಬದಲಾಗುವುದಿಲ್ಲ, ಮುಖ ಬೆಲೆ ಅದೇ ಇರುತ್ತದೆ. ಹಾಗಾದರೆ ಇದೇನು ಎನ್ನುವ ವಿಷಯ ತಿಳಿದುಕೊಳ್ಳಣ ಬನ್ನಿ. 
ಟೈಮ್ ವ್ಯಾಲ್ಯೂ ಆಫ್ ಮನಿ ಅರ್ಥಾತ್ ವೇಳೆಯೊಂದಿಗಿನ ಹಣದ ಮೌಲ್ಯ ಎಂದರೇನು? 
ಹಣದ ಮೌಲ್ಯ ಗಳಿಗೆಯಿಂದ ಗಳಿಗೆಗೆ ಬದಲಾಗುತ್ತಾ ಇರುತ್ತದೆ. ನಿಮ್ಮ ಕೈಲಿರುವ ನೋಟಿನ ಮುಖ ಬೆಲೆ ಮಾತ್ರ ಅದೇ ಇರುತ್ತದೆ ಆದರೆ ಅದರ ಮೌಲ್ಯ ಮಾತ್ರ ಕಡಿಮೆಯಾಗಿರುತ್ತದೆ. ಏಕೆ ಹೀಗೆ? ಇದಕ್ಕೆ ಉತ್ತರ ಬಹಳ ಸರಳ ವೇಳೆಯೊಂದಿಗೆ ಹಣ ಒಂದಷ್ಟು ಹಣವನ್ನ ದುಡಿಯುತ್ತದೆ ಜೊತೆಗೆ ವಸ್ತುಗಳ ಬೆಲೆ ಏರುತ್ತದೆ ಇವೆರಡರ ಸಂಗಮದಿಂದ ಇಂದಿನ ಒಂದು ರೂಪಾಯಿ ನಾಳಿನ ಒಂದು ರುಪಾಯಿಗೆ ಸಮವಾಗಿರುವುದಿಲ್ಲ. ಇಲ್ಲಿ ಬಡ್ಡಿ ಮತ್ತು ಹಣದುಬ್ಬರ ಎನ್ನುವ ಎರಡು ವಿಷಯಗಳು ಮಿಳಿತವಾಗಿವೆ. ಒಂದು ಉದಾಹರಣೆ ಈ ವಿಷಯದ ಜಟಿಲತೆಯನ್ನ ಒಂದಷ್ಟು ಕಡಿಮೆ ಮಾಡಿ ಟೈಮ್ ವ್ಯಾಲ್ಯೂ ಆಫ್ ಮನಿಯನ್ನ ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ. 
ಜನವರಿ ತಿಂಗಳಲ್ಲಿ ನಿಮ್ಮ ಬಳಿ ಒಂದು ಸಾವಿರ ರೂಪಾಯಿ ಇತ್ತೆಂದುಕೊಳ್ಳಿ. ನಿಮ್ಮ ಸ್ನೇಹಿತನೊಬ್ಬ ನಿಮ್ಮ ಬಳಿ ಅದನ್ನ ಎರವಲು ಪಡೆದು ಆರು ತಿಂಗಳ ನಂತರ ಕೊಡುತ್ತೇನೆ ಎನ್ನುತ್ತಾನೆ ಎಂದುಕೊಳ್ಳಿ, ಜನವರಿಯಲ್ಲಿ ಸಾವಿರ ರೂಪಾಯಿ ಕೊಟ್ಟಿರಿ ಜುಲೈನಲ್ಲಿ ಸಾವಿರ ವಾಪಸ್ಸು ಬಂತು ಲೆಕ್ಕ ಚುಕ್ತಾ ಆಯ್ತಾ? ಜನವರಿಯಲ್ಲಿ ಸಾವಿರ ಬಳಸಿ ನೀವೇನು ಕೊಳ್ಳಬಹುದಿತ್ತು ಇಂದು ಅದನ್ನ ಕೊಳ್ಳಲು ಇನ್ನು ಐವತ್ತು ರೂಪಾಯಿ ಸೇರಿಸಬೇಕು. ಹಣದುಬ್ಬರ ಅಥವಾ ಇನ್ಫ್ಲೇಶನ್ ನಿಂದ ಹೀಗಾಗಿದೆ. ಅಂದರೆ ಜನವರಿಯ ಸಾವಿರ ರೂಪಾಯಿಯ ಫ್ಯೂಚರ್ ವ್ಯಾಲ್ಯೂ ಸಾವಿರಕ್ಕಿಂತ ಕಡಿಮೆ. ಹಣದುಬ್ಬರವನ್ನ ಸರಿಗಟ್ಟಿ ಇಂದಿನ ಹಣದ ಮುಂದಿನ ಬೆಲೆ (ಫ್ಯೂಚರ್ ವ್ಯಾಲ್ಯೂ) ಸಮವಾಗಿ ಅಥವಾ ಒಂದಷ್ಟು ಪಟ್ಟು ಹೆಚ್ಚಾಗಿಸಲು ಸಾಧ್ಯವಾಗಿರುವುದು ಬಡ್ಡಿಯ ಉಗಮದಿಂದ. ಜನವರಿಯಲ್ಲಿ ನೀವು ಸ್ನೇಹಿತನಿಗೆ ಸಾವಿರ ರೂಪಾಯಿ ಮೇಲೆ ಹತ್ತು ಪ್ರತಿಶತ ಬಡ್ಡಿ ನೀಡಲು ಹೇಳಿದ್ದರೆ ಜುಲೈ ನಲ್ಲಿ ನೀವು ಪಡೆಯುವ ಮೊತ್ತ ಸಾವಿರದ ಐವತ್ತು ರೂಪಾಯಿ. 
ಟೈಮ್ ವ್ಯಾಲ್ಯೂ ಆಫ್ ಮನಿ ಎನ್ನುವುದು ಬಡ್ಡಿಯ ಮೇಲೆ ಅವಲಂಬಿತ ಮೌಲ್ಯವಾಗಿದೆ. ಈ ವೇಳೆಯ ಜೊತೆಗಿನ ಹಣದ ಮೌಲ್ಯ ಮುಖ್ಯವಾಗಿ ಕಾರ್ಪೊರೇಟ್ ಫೈನಾನ್ಸ್, ಕನ್ಸೂಮರ್ ಫೈನಾನ್ಸ್ ಮತ್ತು ಗವರ್ನಮೆಂಟ್ ಫೈನಾನ್ಸ್ ಮೇಲೆ ಪರಿಣಾಮ ಬೀರುತ್ತದೆ. ಹಾಗೆ ನೋಡಲು ಹೋದರೆ ಹಣವನ್ನ ಉಪಯೋಗಿಸುವ ಪ್ರತಿ ಪ್ರಜೆಯ ಮೇಲೂ ಇದು ಪರಿಣಾಮ ಬೀರುತ್ತದೆ. 
ಟೈಮ್ ವ್ಯಾಲ್ಯೂ ಆಫ್ ಮನಿ ಅವಶ್ಯಕತೆ ಏನು? 
ಇದು ಹೂಡಿಕೆದಾರರಿಗೆ ಅತ್ಯಂತ ಸಹಾಯವಾದ ಮಾಹಿತಿ. ನೀವು ಇಂದು ಯಾವುದೊ ಬಾಂಡ್ ಮೇಲೆ ಸಾವಿರ ರೂಪಾಯಿ ಹೋಡ್ಕಿ ಮಾಡುತ್ತೀರಿ ಎಂದುಕೊಳ್ಳಿ ಎರಡು ವರ್ಷದ ನಂತರ ಇಷ್ಟು ಹಣ ವಾಪಸ್ಸು ಕೊಡುತ್ತೇವೆ ಎನ್ನುತ್ತಾರೆ. ಆಗ ಎರಡು ವರ್ಷದ ನಂತರ ಅಷ್ಟು ಹಣ ವಾಪಸ್ಸು ಪಡೆಯುವುದು ಲಾಭದಾಯಕವೇ? ಅಥವಾ ನಷ್ಟವೇ? ಇದರಲ್ಲಿ ಹೂಡಿಕೆ ಮಾಡಬಹುದೇ? ಅಥವಾ ಬೇಡವೇ? ಇಂತಹ ನಿರ್ಧಾರಗಳ ತಗೆದುಕೊಳ್ಳಲು ಇದು ಸಹಾಯಕವಾಗಿದೆ. ಹಾಗೆ ಕೆಲವೊಮ್ಮೆ ಬಾಂಡ್ ಗಳ ಮೇಲೆ ಇಷ್ಟೇ ಮೊತ್ತದ ಹಣ ವಾಪಸ್ಸು ನೀಡಲಾಗುತ್ತದೆ ಎಂದು ಸೂಚಿಸಿರುವುದಿಲ್ಲ ಆಗ ಹೂಡಿಕೆದಾರ ಅದನ್ನ ಬ್ಯಾಂಕ್ನಲ್ಲಿ ಠೇವಣಿ ಇಟ್ಟಿದ್ದರೆ ಎಷ್ಟು ಹಣ ಬರುತಿತ್ತು ಅದನ್ನ ಲೆಕ್ಕ ಹಾಕಿ ಬಾಂಡ್ ಮೇಲಿನ ಹೂಡಿಕೆ ಅದಕ್ಕಿಂತ ಹೆಚ್ಚು ಬರುತ್ತದೆಯೇ ಇಲ್ಲವೇ ಎಂದು ನಿರ್ಧರಿಸಲು ಕೂಡ ಸಹಾಯಕವಾಗುತ್ತದೆ. ಸರಳವಾಗಿ ಹೇಳಬೇಕೆಂದರೆ ಟೈಮ್ ವ್ಯಾಲ್ಯೂ ಆಫ್ ಮನಿ ಹೂಡಿಕೆ ಮಾಡಲು ಮಾನದಂಡ ದಂತೆ ಕೆಲಸ ನಿರ್ವಹಿಸುತ್ತದೆ. 
ಇಂತಹ ಟೈಮ್ ವ್ಯಾಲ್ಯೂ ಆಫ್ ಮನಿ ಎಷ್ಟು ಎಂದು ನಿರ್ಧರಿಸುವುದರಲ್ಲಿ ಬಡ್ಡಿಯ ಪಾತ್ರ ಪ್ರಮುಖ. ಬಡ್ಡಿಯಲ್ಲಿ ಹಲವು ವಿಧ ಬಡ್ಡಿಯ ವಿಧಗಳನ್ನ ತಿಳಿದು ಕೊಂಡರೆ ಇಂದಿನ ಹಣದ ನಾಳಿನ ಮೌಲ್ಯ ತಿಳಿದುಕೊಳ್ಳಲು ಸಹಾಯವಾಗುತ್ತದೆ. 
1) ಸಿಂಪಲ್ ಇಂಟರೆಸ್ಟ್ ಅಥವಾ ಸಾಮಾನ್ಯ ಬಡ್ಡಿ: ಮೂಲ ಹೂಡಿಕೆ ಅಥವಾ ಸಾಲದ ಮೇಲಿನ ಮೊತ್ತದ ಮೇಲೆ ಮಾತ್ರ ಲೆಕ್ಕ ಹಾಕುವ ಬಡ್ಡಿಗೆ ಸಿಂಪಲ್ ಇಂಟರೆಸ್ಟ್ ಎನ್ನುತ್ತಾರೆ. ಉದಾಹರಣೆ ನೋಡಿ ಸಾವಿರ ರೂಪಾಯಿ ಐದು ಪ್ರತಿಶತ ಬಡ್ಡಿ ಐದು ವರ್ಷಕ್ಕೆ ಎಂದರೆ ಪ್ರತಿ ವರ್ಷ 50 ರೂಪಾಯಿ ಬಡ್ಡಿ. ಅಂದರೆ ಮೂಲ ಹಣ ಸಾವಿರವನ್ನ ಐದರಿಂದ ಗುಣಿಸಿ ನೂರರಿಂದ ಭಾಗಿಸಿದಾಗ ಸಿಕ್ಕ ಭಾಗಲಬ್ಧ. 
2) ಕಾಂಪೌಂಡ್ ಇಂಟರೆಸ್ಟ್ ಅಥವಾ ಚಕ್ರಬಡ್ಡಿ: ಮೂಲ ಹೂಡಿಕೆ ಅಥವಾ ಸಾಲದ ಮೇಲಿನ ಹಣದ ಜೊತೆಗೆ ಪ್ರತಿ ತಿಂಗಳು ಜೋಡಣೆಯಾದ ಬಡ್ಡಿಯ ಮೊತ್ತವನ್ನೂ ಮೂಲ ಹಣದೊಂದಿಗೆ ಕೂಡಿಸಿ ಮುಂದಿನ ತಿಂಗಳು ಬಡ್ಡಿ ಕೊಡುವ ಕ್ರಿಯೆಗೆ ಕಾಂಪೌಂಡ್ ಇಂಟರೆಸ್ಟ್ ಎನ್ನುತ್ತಾರೆ. ಸರಳವಾಗಿ ಹೇಳಬೇಕೆಂದರೆ ಬಡ್ಡಿಯ ಮೇಲೆ ಬಡ್ಡಿಯನ್ನ ಚಕ್ರಬಡ್ಡಿ ಎನ್ನಬಹದು. ಸಿಂಪಲ್ ಇಂಟರೆಸ್ಟ್ ನ ಉದಾಹರಣೆಯನ್ನ ಮುಂದುವರೆಸೋಣ. ಮೊದಲ ವರ್ಷದ ಬಡ್ಡಿ 50 ರೂಪಾಯಿ ಎರಡನೇ ವರ್ಷ ಬಡ್ಡಿ ಲೆಕ್ಕ ಹಾಕುವುದು ಸಾವಿರ ಮತ್ತು ಐವತ್ತು ಸೇರಿಸಿ ಸಾವಿರದ ಐವತ್ತು ರೂಪಾಯಿ ಮೇಲೆ ಅಂದರೆ ಸರಳಬಡ್ಡಿಯಲ್ಲಿ 50 ರೂಪಾಯಿ ಬರುತ್ತಿದ್ದ ಕಡೆ ಚಕ್ರಬಡ್ಡಿಯಲ್ಲಿ ಐವತ್ತೆರಡುವರೆ ರೂಪಾಯಿ ಬಡ್ಡಿ ಬರುತ್ತದೆ.
ಇದಲ್ಲದೆ ಸಾಲದ ಮೇಲೆ ಇತರ ರೀತಿಯ ಬಡ್ಡಿಗಳು ಇವೆ ಆದರೆ ಅವು ಇಲ್ಲಿನ ಪರಿಧಿಯಲ್ಲಿ ಮಾನ್ಯತೆ ಪಡೆಯುವುದಿಲ್ಲ. ವಿನಿಮಯಕ್ಕೆ ಎಂದು ಶುರುವಾದ ಹಣ ಇಂದು ತ್ರಿವಿಕ್ರಮ ರೂಪ ಪಡೆದಿದೆ. ಹಣವಿಲ್ಲದೆ ಜಗವಿಲ್ಲ ಎನ್ನುವ ಮಟ್ಟಕ್ಕೆ ಬೆಳೆದಿದೆ. ಬೆಳೆಯುತ್ತಿರುವ ವೇಗದಿಂದ ಸಾಗುತ್ತಿರುವ ಸಮಾಜದೊಂದಿಗೆ ಹೆಜ್ಜೆ ಹಾಕುವ ಅವಶ್ಯಕತೆ ಎಲ್ಲರಿಗೂ ಇದೆ. ಸುಮ್ಮನೆ ಗೊತ್ತಿಲ್ಲದ ದಿಕ್ಕಿನಲ್ಲಿ ಹೆಜ್ಜೆ ಹಾಕುವುದಕ್ಕಿಂತ ಒಂದಷ್ಟು ತಿಳಿವಳಿಕೆ ನಾವು ಸೇರುವ ಜಾಗ ನೆಡಯುತ್ತಿರುವ ದಾರಿಯ ಒಂದಷ್ಟು ನಿಖರತೆ ನೀಡುತ್ತದೆ. ಆ ನಿಟ್ಟಿನಲ್ಲಿ ನಿತ್ಯ ಕಲಿಕೆಯೊಂದೇ ಮಂತ್ರ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com