ಜಗತ್ತಿನ ಯಾವ ಹಣ ಬೆಸ್ಟ್? ಹಣದ ಮೌಲ್ಯ ಕುಸಿತ ಅಥವಾ ಅಪಮೌಲ್ಯ ಎಂದರೇನು?

ಇವತ್ತು ನಿಮಗೊಂದು ಕತೆ ಹೇಳುವೆ ಒಂದೂರಿನಲ್ಲಿ ಮೂವರು ಸಹೋದರರಿದ್ದರು ಒಟ್ಟಿಗೆ ಓದಿ ಬೆಳದ ಅವರು ತಮ್ಮ ಭವಿಷ್ಯ ಅರಸಿ ಬೇರೆ ದೇಶಗಳಿಗೆ ಹೋದರು . ಆದರೂ ವರ್ಷಕೊಮ್ಮೆ ತಮ್ಮ ಹುಟ್ಟೂರಲ್ಲಿ ಸೇರುತ್ತಿದ್ದರು ...
ಹಣ (ಸಂಗ್ರಹ ಚಿತ್ರ)
ಹಣ (ಸಂಗ್ರಹ ಚಿತ್ರ)
ಇವತ್ತು ನಿಮಗೊಂದು ಕತೆ ಹೇಳುವೆ ಒಂದೂರಿನಲ್ಲಿ ಮೂವರು ಸಹೋದರರಿದ್ದರು ಒಟ್ಟಿಗೆ ಓದಿ ಬೆಳದ ಅವರು ತಮ್ಮ ಭವಿಷ್ಯ ಅರಸಿ ಬೇರೆ ದೇಶಗಳಿಗೆ ಹೋದರು . ಆದರೂ ವರ್ಷಕೊಮ್ಮೆ ತಮ್ಮ ಹುಟ್ಟೂರಲ್ಲಿ ಸೇರುತ್ತಿದ್ದರು. ಎಲ್ಲರಿಗಿಂತ ದೊಡ್ಡವನು ಹಣವನ್ನ ಪೌಂಡ್ ಎನ್ನುತ್ತಾರೆ ಅದು ಅತ್ಯಂತ ಬಲಶಾಲಿ ಎಂದ. ಎರಡನೆಯವನು ಅಮೇರಿಕಾ ಪಾಲಾಗಿದ್ದು ತನ್ನ ಅಣ್ಣನಿಗೆ ನೀನು ಹೇಳಿದ್ದು ತಪ್ಪು ಹಣದ ಹೆಸರು ಡಾಲರ್ ಅಂತ ಅದೇ ಅತ್ಯಂತ ಬಲಶಾಲಿ, ಇವರಿಬ್ಬರ ಕೇಳಿಸಿಕೊಂಡ ಕಿರಿಯ ತಮ್ಮ ನೀವಿಬ್ಬರು ಹೇಳುವುದು ತಪ್ಪು ಹಣದ ಹೆಸರು ದಿನಾರ್ ಅದೇ ಬಲಶಾಲಿ ಎಂದ. ಮತ್ತೆ ಹಿರಿಯಣ್ಣ ತಾವಿದ್ದ ಕೊಠಡಿಯನ್ನ 12 ಅಡಿ ಉದ್ದವಿದೆ ಎಂದ, ಎರಡನೆಯವನು 265 ಸೆಂಟಿಮೀಟರ್ ಇದೆ ಎಂದ ಕೊನೆಯವನು ಇಲ್ಲ ಇದು 144 ಇಂಚಿದೆ ಎಂದ. ಇದರ ಅರ್ಥವಿಷ್ಟೆ ಹೆಸರು  ಯಾವುದೇ ಇಡಿ ಅದೊಂದು ಅಳತೆಗೋಲು ಅಷ್ಟೇ ಉಳಿದಂತೆ ಅವುಗಳು ಮಾಡುವ ಕೆಲಸ ಮಾತ್ರ ಸೇಮ್. ಈಗ ನೀವೊಂದು ಪ್ರಶ್ನೆ ಕೇಳಬಹದು ಹಾಗಾದರೆ ಜಗತ್ತಿನ ಎಲ್ಲಾ ಕರೆನ್ಸಿ ಮೌಲ್ಯ ಒಂದೇ ಏಕಿಲ್ಲ ? ನಮ್ಮ ಹಣವನ್ನ ಬಲಿಷ್ಠ ರಾಷ್ಟ್ರಗಳ ಎದಿರು ಅಪಮೌಲ್ಯ ಗೊಳಿಸುವ ಉದ್ದೇಶವಾದರೂ ಏನು? ನಿಮ್ಮ ಪ್ರಶ್ನೆಗೆ ಇಂದು ಉತ್ತರ ಕಂಡುಕೊಳ್ಳೋಣ. 
ಜಗತ್ತಿನ ಎಲ್ಲಾ ಕರೆನ್ಸಿ ಮೌಲ್ಯ ಒಂದೇ ಏಕಿಲ್ಲ ? 
ಇದಕ್ಕೆ ನಾವು ಶುರುವಿನಲ್ಲಿ ಹಣದ ಮೌಲ್ಯವನ್ನ ಹೇಗೆ ಅಳೆಯುತ್ತಿದ್ದರು ಎನ್ನುವುದನ್ನ ತಿಳಿದುಕೊಳ್ಳುವುದು ಉತ್ತಮ. ಒಂದು ಪೌಂಡ್ ಅಂದರೆ 450 ಗ್ರಾಂ ಬೆಳ್ಳಿಗೆ ಸಮ ಎಂದಿತ್ತು ಅದೇ ಒಂದು ರೂಪಾಯಿ ಎಂದರೆ 11.5 ಗ್ರಾಂ ಬೆಳ್ಳಿ. ಇದರರ್ಥ ರೂಪಾಯಿಗಿಂತ ಪೌಂಡ್ ಶಕ್ತಿಶಾಲಿ ಎಂದಲ್ಲ. 450 ಗ್ರಾಂ ಸರಿದೊಗಲು ಎಷ್ಟು ರೂಪಾಯಿ ನೀಡಬೇಕು ಅಷ್ಟು ನೀಡಿದರೆ ಸಾಕು. ಹೀಗಾಗಿ ಒಂದು ಪೌಂಡ್ ಒಂದು ರೂಪಾಯಿ ಎಂದೆದಿಗೂ ಸಮವಾಗುವುದು ಸಾಧ್ಯವಿಲ್ಲ. ನಮ್ಮ ಶುರುವಿನ ಗೆರೆ ಎಂದೂ ಒಂದೇ ಆಗಿರಲಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ಸಮದ ಪ್ರಶ್ನೆ ಬಲಶಾಲಿ ಪ್ರಶ್ನೆ  ಬರಬಾರದು. ದೇಶದ ಮೌಲ್ಯ ಅಳೆಯಲು ಬೇರೆ ಮಾಪನಗಳಿವೆ. 
ಸರಿ ಹಾಗಾದರೆ ಅಪಮೌಲ್ಯ ಅಥವಾ ಡಿವ್ಯಾಲ್ಯೂವೆಶನ್  ಎಂದರೇನು ?
ಒಂದು ದೇಶದ ವಿನಿಮಯ ದರದೊಂದಿಗೆ ತನ್ನ ದೇಶದ ಕರೆನ್ಸಿ ಮೌಲ್ಯ ಕುಗ್ಗಿಸುವ ಪ್ರಕ್ರಿಯೆಗೆ ಡಿವ್ಯಾಲ್ಯೂವೆಶನ್ ಎನ್ನುತ್ತಾರೆ . ಅಂದರೆ ಒಂದು ಡಾಲರಿಗೆ 64 ರೂಪಾಯಿ ತೆತ್ತು ಕೊಳ್ಳುತ್ತಿದ್ದೆವು ಅದೇ ಡಾಲರ್ ಕೊಳ್ಳಲು ಮುಂದೆ 65 ರೂಪಾಯಿ ಕೊಟ್ಟರೆ ಭಾರತದ ರೂಪಾಯಿ ಡಾಲರ್ ಎದುರು ಒಂದು ರೂಪಾಯಿ ಅಪಮೌಲ್ಯ ಕಂಡಿತು ಎಂದರ್ಥ. ಇಲ್ಲಿ ಗಮಿಸಬೇಕಾದ ಇನ್ನೊಂದು ಅಂಶವಿದೆ , ಭಾರತ ತನ್ನ ಟ್ರೇಡ್ ಹೊಂದಾವಣಿಕೆಗೆ ತನ್ನ ಹಣವನ್ನ ತನಗೆ ಬೇಕಾದ ರೀತಿಯಲ್ಲಿ ಹೊಂದಿಸಿಕೊಂಡರೆ ಅದು ಅಪಮೌಲ್ಯ, ಭಾರತ ಏನೂ ಮಾಡದೆ ಡಾಲರ್ ಎದಿರು ಹಣದ ವಿನಿಮಯದಲ್ಲಿ ಕಡಿಮೆಯಾದರೆ ಅದು ಕುಸಿತ. ಅಪಮೌಲ್ಯ ನಾವೇ ಮಾಡಿಕೊಂಡದ್ದು ಕುಸಿತ ಬಾಹ್ಯ ಕಾರಣಗಳಿಂದ ನಮ್ಮ ಹಣದಲ್ಲಿ ಅದ ಬದಲಾವಣೆ. 
ಕಳೆದ ಒಂದು ದಶಕದಲ್ಲಿ ಯಾನ್, ಚೀನಾದ ಕರೆನ್ಸಿ ಅಮೇರಿಕಾ ದ ಡಾಲರ್ ಎದುರು ಸ್ಥಿರತೆ ಕಾಪಡಿಕೊಂಡಿತ್ತು, ಈಗ ಚೀನಾ ದೇಶ ತನ್ನ ಕರೆನ್ಸಿ ಅಪಮೌಲ್ಯ ಮಾಡಿದೆ. ಉದಾಹರೆಣೆ ನೋಡಿ ಒಂದು ಟೂಥ್ ಬ್ರಶ್ ಒಂದು ಡಾಲರ್ ಗೆ ಸಿಗುತಿತ್ತು, ಅಪಮೌಲ್ಯದ ಕಾರಣ 80ಸೇಂಟ್ (ಡಾಲರ್ ನ ರುಪಾಯಿ ಎಂದು ಕೊಂಡರೆ, ಸೇಂಟ್ ಪೈಸೆಗೆ ಸಮ) ಗೆ ಸಿಗುತ್ತದೆ.
ಡಿವ್ಯಾಲ್ಯೂವೆಶನ್ ನಿಂದ ಚೀನಾಗೆ ಏನು ಲಾಭ ?
ಚೀನಾ ವಿಶ್ವದ ತಯಾರಿಕಾ ಘಟಕ ( ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ) ಎನ್ನುವುದು ಎಲ್ಲರಿಗು ತಿಳಿದ ವಿಷಯ, ಹೀಗೆ ತಯಾರಾದ ವಸ್ತುಗಳು ಮಾರಟವಾಗಲೇಬೇಕು, ಇಲ್ಲದಿದ್ದರೆ ಅವುಗಳನ್ನು ಕಾಯ್ದಿಡಲು ತಗಲುವ ವೆಚ್ಚ, ತಯಾರಿಕೆಗೆ ಹೂಡಿದ ಹಣದ ಮೇಲಿನ ಬಡ್ಡಿ ಎಲ್ಲಾ ಲೆಕ್ಕ ಹಾಕಿದರೆ, ಕಡಿಮೆ ಬೆಲೆಗೆ ಕೊಡುವುದು ಚೀನಾಗೆ ಒಂದರ್ಥದಲ್ಲಿ ಲಾಭವೇ, ಎಲ್ಲಕ್ಕೂ ಮುಖ್ಯ ತಯಾರಿಕೆಗೆ ಬೇಕಾದ ಮಷೀನ್ಗಳು ನಿರಂತರ ಚಲನೆಯಲ್ಲಿ ಇರಬೇಕು ಇಲ್ಲದಿದ್ದರೆ ಅವುಗಳ ಮೈಟೆನೆಸ್ ಕಾಸ್ಟ್ ಹೆಚಾಗುತ್ತೆ. ಇದು ಹೇಗೆಂದರೆ ಜಿಮ್ ಹೋಗಿ ದಷ್ಟಪುಷ್ಟ ದೇಹ ಬೆಳಸಿದ ಯುವಕನಿದಂತೆ, ಜಿಮ್ ಮಾಡಬೇಕು ಅದಕ್ಕೆ ತಕ್ಕಂತೆ ತಿನ್ನಬೇಕು, ಎರಡರಲ್ಲಿ ಒಂದು ಸೊರಗಿದರು ದೇಹದ ಮೇಲೆ ಪರಿಣಾಮ ತಪ್ಪಿದಲ್ಲ. ಪ್ರೊಡಕ್ಷನ್ ಸ್ಟಾಪ್ ಹಾಗುವಂತಿಲ್ಲ, ಸೇಲ್ಸ್ ನಿಂತರೆ ಪ್ರಳಯ, ಸೇಲ್ಸ್ ನಿಲ್ಲಕೂಡದು, ನಿಲ್ಲಲು ಬಿಡರು.
ಭಾರತ ತನ್ನ ಕರೆನ್ಸಿ ಡಿವ್ಯಾಲ್ಯೂ ಮಾಡಬಹುದೇ ?
ಖಂಡಿತಾ ಮಾಡಬಹುದು, ನಾಳೆಯೇ ಒಂದು ರುಪಾಯಿ ಒಂದು ಡಾಲರ್ ಗೆ ಸಮ ಎಂದು ಘೋಷಿಸಬಹದು, ಇಲ್ಲವೇ ಒಂದು ಡಾಲರ್ ನೂರು ರೂಪಾಯಿಗೆ ಸಮ ಎಂದು ಡಿವ್ಯಾಲ್ಯೂ ಕೂಡ ಮಾಡಬಹುದು. ನಮ್ಮ ದೇಶದ ಅಂತರಿಕ ಅರ್ಥ ವ್ಯವಸ್ಥೆ ಭದ್ರವಾಗಿದ್ದಾರೆ ಖಂಡಿತಾ ನಮ್ಮ ಮನಸ್ಸಿಗೆ ಬಂದದ್ದ ಮಾಡಬಹದು. ನಾವು ಘೋಷಿಸಿದ ಮಾತ್ರಕ್ಕೆ ಜಗತ್ತು ಹೊಸ ಮೌಲ್ಯವನ್ನ ಒಪ್ಪುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಉದಾಹರಣೆ ನೋಡಿ ನಿನ್ನೆಯ ತನಕ ಒಂದು ರುಪಾಯಿಗೆ ಹತ್ತು ಸಿವುಡು ಸೊಪ್ಪು ಕೊಡುತ್ತಿದ್ದ ಮಾರಾಟಗಾರ ನಾಳೆ ಒಂದು ರುಪಾಯಿಗೆ ಒಂದೇ ಸಿವುಡು ಎಂದು ಹೇಳಬಹದು ಆದರೆ ನೀವು ಅವನ ಬಳಿ ಕೊಳ್ಳುವಿರಾ? ನಿನ್ನೆಯಿಂದ ಇವತ್ತಿನಲ್ಲಿ ಅದೇನು ಅಂತ ಬದಲಾವಣೆ ಆಯಿತು? ಹೀಗೆ ಒಮ್ಮೆಲೇ ಬದಲಾವಣೆ ಮಾಡಲು ಎಂದು ಪ್ರಶ್ನಿಸುವುದಿಲ್ಲವೇ? ಸಹಜವಾಗೆ ಬೇರೊಬ್ಬ ಮಾರಾಟಗಾರನಲ್ಲಿ ಕೊಳ್ಳುವಿರಿ ಅಲ್ಲವೇ? ಇದು ಹಾಗೆಯೇ ನಮ್ಮಿಷ್ಟ ಎಂದು ನಾಳೆ ಒಂದು ರೂಪಾಯಿ ಒಂದು ಡಾಲರಿಗೆ ಅಥವಾ ಪೌಂಡ್ಗೆ ಸಮ ಎನ್ನುವ ನಿರ್ಧಾರ ನಮ್ಮ ಕೈಲಿದೆ ಆದರೇನು ಅದು ಆತ್ಮಹತ್ಯೆಯಾಗುತ್ತದೆ. ನಮ್ಮ ವ್ಯಾಪಾರ ವಹಿವಾಟು ಒಮ್ಮೆಲೇ ಕುಸಿತಕಂಡು ಸಮಾಜದಲ್ಲಿ ಅರಾಜಕತೆ ಹೆಚ್ಚುತ್ತದೆ.  ನಾವು ಮಾಡದೇ ಕೆಲವೊಮ್ಮೆ ನಮ್ಮ ಹಣ ಅಪಮೌಲ್ಯ ಹೊಂದುತ್ತದೆ  ಇದನ್ನ ಕುಸಿತ ಎನ್ನಬಹುದು, ವಾರದ ಹಿಂದೆ ಒಂದು ಡಾಲರ್ 63 ಅಥವಾ 64 ರುಪಾಯಿ ಇಂದು 66 ರುಪಾಯಿ, ಅಂದರೆ ನಾವು ಒಂದು ಬ್ಯಾರೆಲ್ ತೈಲಕ್ಕೆ ವಾರದ ಹಿಂದೆ 64*42= 2688 ರುಪಾಯಿ ಸಂದಾಯ ಮಾಡುತ್ತಿದ್ದೆವು, ಇಂದು 66*42 = 2772 ರುಪಾಯಿ, ಇದು ಕೋಟಿ ಗಳ ಲೆಕ್ಕದಲ್ಲಿ ಮಾಡಿ ನಮ್ಮದಲ್ಲದ ತಪ್ಪಿಗೆ ನಾವು ಕಟ್ಟಿದ ಕಪ್ಪದ ಅರಿವು ನಿಮ್ಮದಾಗುತ್ತೆ !
ಅಪಮೌಲ್ಯ ಮಾಡುವುದು ನಮ್ಮ ದೇಶದ ಆರ್ಥಿಕತೆಗೆ ಲಾಭವಾಗುವುದಾದರೆ ಓಕೆ . ಇದು ಕೂಡ ಸಮಯ ಮತ್ತು ಸಂದರ್ಭದ ಮೇಲೆ ಅವಲಂಬಿತ. ಕೆಲವೊಮ್ಮೆ ಅಪಮೌಲ್ಯ ಮಾಡುವುದು ದೇಶದ ದೃಷ್ಟಿಯಿಂದ ಒಳ್ಳೆಯದೇ ಆಗಿರುತ್ತದೆ. ಹೀಗಾಗಿ ಅಪಮೌಲ್ಯ ಎಂದ ತಕ್ಷಣ ಅದು ಕೆಟ್ಟದ್ದು ಅಥವಾ ಭಾರತದ ಆರ್ಥಿಕತೆ ಕುಸಿದಿದೆ ಎನ್ನುವ ಅರ್ಥವಂತೂ ಅಲ್ಲವೇ ಅಲ್ಲ. 
ನಮ್ಮ ದೇಶದ ಹಣ ಅಂತರರಾಷ್ಟ್ರ್ರೀಯ ಮಟ್ಟದಲ್ಲಿ ಕುಸಿದಾಗ  ಏನಾಗುತ್ತೆ ? 
ದೇಶದ ಹಣ ಅಂತರರಾಷ್ಟೀಯ ಮಟ್ಟದಲ್ಲಿ ಕುಸಿತ  ಹೊಂದಿದಾಗ, ದೇಶದಲ್ಲಿ ವಸ್ತುಗಳ ಬೆಲೆ ಹೆಚ್ಚುತ್ತದೆ, ಬೆಲೆಗಳ ಹೆಚ್ಚಳದ ಅಳತೆಗೋಲು ಇನ್ಫ್ಲೆಶನ್, ಇನ್ಫ್ಲೆಶನ್ ಹೆಚ್ಚಿದರೆ, ಬ್ಯಾಂಕ್ ತನ್ನ ಬಡ್ಡಿ ದರ ಹೆಚ್ಚಿಸ ಬೇಕಾಗುತ್ತೆ, ಬಡ್ಡಿ ದರ ಹೆಚ್ಚಿದರೆ ಅದು ಉದ್ಯಮದ ಮೇಲೆ ಪರಿಣಾಮ ಬೀರುತ್ತೆ, ಉದ್ಯಮ ಕುಂಠಿತ ಆಗುತ್ತೆ, ದೇಶದ ಒಟ್ಟು ಅರ್ಥಿಕ ಪ್ರಗತಿ ಅಳೆಯುವ ಜಿಡಿಪಿ ಕುಸಿಯುತ್ತೆ, ಇದು ವಿಶ್ವದಲ್ಲಿ ನಮ್ಮ ಇತರ ದೇಶಗಳು ನೋಡುವ ರೀತಿ ಕೂಡ ಬದಲಿಸುತ್ತೆ.
ನಮ್ಮ ಹಣವನ್ನ ನಾವೇ ಅಪಮೌಲ್ಯ ಮಾಡಿಕೊಂಡರೆ ಏನಾಗುತ್ತೆ ? 
ವ್ಯಾಪಾರ ವಹಿವಾಟು ನಿಗದಿತ ಮಟ್ಟದಲ್ಲಿ ಆಗದೆ ಇದ್ದಾಗ ಮತ್ತು ವಿದೇಶಿ ವಿನಿಮಯ ಸಂಗ್ರಹವನ್ನ ನಿಗದಿತ ಮಟ್ಟದಲ್ಲಿ ಕಾಯ್ದುಕೊಳ್ಳುವ ಸಲುವಾಗಿ ಮತ್ತು ಇನ್ನೂ ಹಲವು ಹತ್ತು ಕಾರಣಗಳಿಂದ ನಮ್ಮ ಹಣವನ್ನ ನಾವೇ ಅಪಮೌಲ್ಯ ಗೊಳಿಸಿಕೊಳ್ಳುತ್ತೇವೆ. ಅದು ಒಳ್ಳೆಯದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ರೀತಿಯ ಕರೆನ್ಸಿ ಅಡ್ಜಸ್ಟ್ಮೆಂಟ್ ಸಾಮಾನ್ಯವಾಗಿದೆ.
ಹಣವೆನ್ನುವುದು ಜಗತ್ತಿನ ಕೊಡುಕೊಳ್ಳುವಿಕೆ ನೆಡೆಸಲು ಇರುವ ಒಂದು ಮಾಪಕ ಅಥವಾ ಮಾನದಂಡವಷ್ಟೇ. ಮೌಲ್ಯವಿರುವುದು ವಸ್ತುವಿಗೆ, ಹಣ ಮೌಲ್ಯವನ್ನ ಅಳೆಯಲು ಇರುವ ಒಂದು ಸಾಧನ. ವಸ್ತುವಿನ ಮೌಲ್ಯದಲ್ಲಿ ಆಗುವ ಬದಲಾವಣೆ ಹಣದ ರೂಪದಲ್ಲಿ ಕಾಣುತ್ತದೆ ಅಷ್ಟೇ. ಹೀಗೆ ವಸ್ತುವಿನ ಮೌಲ್ಯ ನಿರ್ಧರಿಸುವರು ಯಾರು? ಆ ಮೌಲ್ಯವನ್ನ ಸರಿ ಇದೆ ಎಂದು ಹೇಳುವರು ಯಾರು? ಎನ್ನವುದನ್ನ ಇನ್ನೊಮ್ಮೆ ತಿಳಿದುಕೊಳ್ಳೋಣ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com