ಸುಡುಗಾಡಲ್ಲಿ ಸತಿಪತಿಯರು!

"ಚಂದ್ರಮತಿ, ನಾನು ಬಂಧಿ. ಸ್ಮಶಾನ ಬಿಟ್ಟು ಹೊರಬರಲಾರೆ. ಹೋಗು, ನೀನಾದರೂ ಓಡಾಡಲು ಅನುಮತಿ ಪಡೆದು ಬಂದಿದ್ದೀಯೆ. ಹೋಗು, ಹೋಗಿ ತಾಳಿ ಮಾರಿ ದುಡ್ಡು ತಾ...!
ಸುಡುಗಾಡಲ್ಲಿ ಸತಿಪತಿಯರು!
"ಏ ಹೆಣ್ಣೆ! ಸುಡುವ ಸುಂಕ ಕೊಡದೇ ಸುಡ ಹೊರಟೆಯಲ್ಲ, ನಿನಗೆಷ್ಟು ಸೊಕ್ಕು!," ನುಗ್ಗಿ ಬಂದು ಚಿತೆಯ ಮೇಲಿದ್ದ ಶವದ ಕಾಲೆಳೆದು ಹೊರ ಬಿಸುಟ ಹರಿಶ್ಚಂದ್ರ. ಓಡಿ ಬಂದ ಆ ಒಂಟಿ ಹೆಣ್ಣು ಕಾಲು ಹಿಡಿದು ಬೇಡಿದಳು, "ಅಪ್ಪ ದಯಾಳು! ಸಿಟ್ಟಾಗಬೇಡ! ನೀನು ಯಾರೋ? ನೀನು ಯಾರೇ ಆಗಿರು, ನಿನ್ನ ಕಾಲು ಹಿಡಿದು ಬೇಡುವೆನು. ನೀನು ಯಾವ ಜಾತಿಯವನೇ ಆಗಿರು, ನಿನ್ನಲ್ಲಿ ಬೇಡುವೆ. ಈ ಮಗ, ನನ್ನ ಮಗ, ನನ್ನ ಮಗನಲ್ಲಪ್ಪ, ನಿನ್ನ ಮಗ ಎಂದುಕೊಳ್ಳಯ್ಯ! ಬೇಡ ಬೇಡ, ಕಠಿಣನಾಗಬೇಡ. ಹಾಗೆ ದರದರ ಎಳೆದರೆ ನೋವಾಗುತ್ತೆ  ಅವನಿಗೆ. ದಯವಿಟ್ಟು ಸುಡೋಕೆ ಅನುಮತಿ ಕೊಡಪ್ಪ. 
(ಬಿಸುಡದಿರು ಬಿಸುಡದಿರು ಬೇಡ ಬೇಡ ಅಕಟಕಟ ಹಸುಳೆ ನೊಂದಹನು ಎಂದು ಬೀಳ್ವವನನು ಎತ್ತಿ ತಕಿಸಿಕೊಂಡು ಕುಲವ ನೋಡದೆ ಬೇಡಿಕೊಂಬೆ ಇವನು ನನ್ನ ಮಗನಲ್ಲ ನಿನ್ನ ಶಿಶುವಿನೋಪಾದಿ ಸುಡಲು ಅನುಮತುವನು ಇತ್ತು ರಕ್ಷಿಸು ಕರುಣಿ ....)
ಹರಿಶ್ಚಂದ್ರ: ನೋಡಮ್ಮ, ಇಲ್ಲಿ ಮೂರು ನಿಯಮಗಳಿವೆ. ಒಂದು, ಶುಲ್ಕ. ಎರಡು, ಹೆಣಕ್ಕೆ ಉಡಿಸಿದ ಬಟ್ಟೆ. ಮೂರು, ಹೆಣದ ಎದೆ ಮೇಲೆ ಹಾಕಿದ ಅಕ್ಕಿ. ಈ ಮೂರೂ ಇಲ್ಲಿ ಕೊಡಬೇಕು. ಮೊದಲಿನೆರಡು ನನ್ನ ಯಜಮಾನರದು. ಕೊನೆಯದು ನನಗೆ ಸೇರಿದ್ದು. ನೀನು ಬಡವಿ ಅನ್ನೋದು ಎಂದೋ ಗೊತ್ತಾಯ್ತು. ನನಗೆ ಸೇರುವ ಅಕ್ಕಿ ಬೇಡ. ಆದರೆ ಧಣಿಯ ಹಣ ಬಿಟ್ಟುಕೊಡದೆ ಸುಡಲು ಒಪ್ಪಿಗೆ ಕೊಡೋಕೆ ನನಗೆ ಅಧಿಕಾರ ಇಲ್ಲ. 
ಹೆಣ್ಣು: ಅಯ್ಯ, ನಾನು ಅನಾಥೆ. ಯಾರದೋ ಮನೆಯ ಬಡದಾಸಿ. ಕೊಡಲು ಏನೂ ಇಲ್ಲಪ್ಪ. 
ಹರಿಶ್ಚಂದ್ರ: ನೋಡಮ್ಮ, ಶುಲ್ಕ ಕೊಡೋದಕ್ಕೆ ಸಾಧ್ಯವೇ ಇಲ್ಲ ಅಂತಾದರೆ ಸುಡೋ ಕಷ್ಟ ಯಾಕೆ? ಗಂಗಾ ನದಿಗೆ ಎಸೆದುಬಿಡು. 
ಹೆಣ್ಣು: ನನ್ನ ಕುಲದಲ್ಲಿ ಸುಡಲೇ ಬೇಕಲ್ಲಪ್ಪ! 
ಹರಿಶ್ಚಂದ್ರ: ಹಾಗಿದ್ದರೆ ನಿನ್ನ ಗಂಡನೇಕೆ ಜೊತೆಗಿಲ್ಲ? ತಾಳಿ ಕಟ್ಟಬೇಕಾಗಿದ್ದಾಗಿದ್ದ ಗಂಡ, ಮಗ ಹೋದಾಗ ಜೊತೆಗೆ ಬರಬೇಡವೆ? ಅವನೆಂಥ ಅಯೋಗ್ಯ. 
ಹೆಣ್ಣು: ಹಾಗೆಲ್ಲ ನನ್ನ ಯಜಮಾನರನ್ನ ಬೈಬೇಡ. ಅವರು ಬಹಳ ದೊಡ್ಡ ವ್ಯಕ್ತಿ!! 
ಹರಿಶ್ಚಂದ್ರ: ಆಯ್ತು ಬಿಡು. ಅದು ನಿಮ್ಮ ವಿಷಯ. ಶುಲ್ಕ ಕೊಡದೆ ಸುಡೋದಿಕ್ಕೆ ಸಾಧ್ಯವೇ ಇಲ್ಲ. ಸೆರಗು ಹೊದ್ದಿಕೊಂಡಿದ್ದರೂ ಒಳಗಿನ ತಾಳಿ ಕಾಣಿಸ್ತಾ ಇದೆ. ಜೊತೆಗೆ ಬರದ ಗಂಡ ಕಟ್ಟಿದ ತಾಳಿಯನ್ನಾದರೂ ಮಾರಿ ಹಣ ಕೊಡು; ಹೋಗು ಹೋಗು. 
ಹೆಣ್ಣು: ಆ! ಏನು! ನಿನಗೆ ತಾಳಿ ಕಾಣಿಸ್ತಾ? ಅಲ್ಲಿಗೆ ನನ್ನ ಯಜಮಾನರು ಸತ್ತುಹೋದ್ರಾ?
ಹರಿಶ್ಚಂದ್ರ: ನಾನು ತಾಳಿ ನೋಡೋದಕ್ಕೂ, ನಿನ್ನ ಯಜಮಾನರು ಹೋಗೋದಕ್ಕೂ ಏನಮ್ಮ ಸಂಬಂಧ?
ಹೆಣ್ಣು: ಅಯ್ಯೋ, ಅದು ನಿನಗೆ ಹೇಗಪ್ಪಾ ಗೊತ್ತಾಗತ್ತೆ? ಮಗನ್ನ ಕಳಕೊಂಡೆ. ಈಗ ಗಂಡನೂ ಸತ್ತುಹೋದನಾ? ನನಗೆ ಮದುವೆ ಆಗಬೇಕಾಗಿದ್ದಾಗ ಋಷಿಗಳು ಹೇಳಿದ್ದರು; ಈ ತಾಳಿ ಯಾರ ಕಣ್ಣಿಗೂ ಕಾಣಿಸೊಲ್ಲ, ನಿನ್ನ ಗಂಡನಿಗೆ ಬಿಟ್ಟು. ಯಾರಾದರೂ ಬೇರೆಯವರು ನೋಡಿದ್ದಾರೆ ಅಂದರೆ, ಅಲ್ಲಿಗೆ ನಿನ್ನ ಗಂಡ ದೇಹ ಬಿಟ್ಟ ಅಂತ ಅರ್ಥ. 
ಹೇಳುತ್ತ ಹೇಳುತ್ತ ಕುಸಿದುಬಿಟ್ಟಳು ನೆಲಕ್ಕೆ. ಎದೆ ಎದೆ ಹೊಡೆದುಕೊಳ್ಳುತ್ತಿದ್ದಾಳೆ.  ಇದೇನೋ ನನ್ನ ಬುಡಕ್ಕೇ ಬರುತ್ತಿದೆಯಲ್ಲ? ನನ್ನ ಮದುವೆಯಲ್ಲೂ ಹೀಗೇ ಹೇಳಿದ್ದರು. ಆದರೆ ಈಕೆ ಯಾರೋ... "ಅಮ್ಮ, ನೀನು ಯಾರು? ಈ ಸತ್ತ ಹುಡುಗ ಯಾರು? " ‘ಧ್ವನಿ ಎಲ್ಲೋ ಪರಿಚಿತವಾಗಿ ಕೇಳುತ್ತಿದೆಯಲ್ಲ ಈಗ? ಯಾರೀತ?  ಚಿತೆಯ ಬೆಳಕಿನಲ್ಲಿ, ಕೇವಲ ಕಪ್ಪು ಮುಖ. " ಅಯ್ಯ ನೀನು ಯಾರಾದರೂ ಆಗಿರು, ನಿನ್ನ ಊರು ಬೇರೆ. ನಮ್ಮ ಊರು ಬೇರೆ. ನಾವು ಇಲ್ಲಿಗೆ ಬಂದು ಕೆಲವು ದಿವಸಗಳು ಆಯಿತು. ಬಹುಶಃ ನನ್ನ ಯಜಮಾನರ ಪರಿಚಯ ನಿನಗಿರೋಕೆ ಸಾಧ್ಯ ಇಲ್ಲ; ಹೆಸರೂ ನೀನು ಕೇಳಿರಲಾರೆ ಅಂತ ಕಾಣತ್ತೆ. ಅವರ ಹೆಸರು ಹರಿಶ್ಚಂದ್ರ..... ಅರೆ ಇದು ಯಾಕೆ ನೀನು ಬಿದ್ದೆ? " ಏನಾಗುತ್ತಿದೆ ಅಂತಲೇ ಅರ್ಥವಾಗುತ್ತಿಲ್ಲ. ಪಕ್ಕದಲ್ಲಿ ಸುಡಲು ಸಿದ್ಧವಾದ ಚಿತೆ. ಇನ್ನೇನು ಬೆಂಕಿ ಹಚ್ಚಬೇಕು. ಇವನು ಅಡ್ಡ ಬಂದ, ಮಗನನ್ನು ಎಳೆದು ಎಸೆದ. ಈಗ ಇವನೇ ಬಿದ್ದ !...... 
ಬೀಸಿದ ತಂಗಾಳಿಗೆ ಎದ್ದ ಹರಿಶ್ಚಂದ್ರ " ಚಂದ್ರಮತಿ ! " ಎಂದು ಕೂಗಿದ. 
ಮುಂದಿನ ಭಾವುಕ ಸನ್ನಿವೇಶವನ್ನು ಏನೆಂದು ಬರೆಯಲಿ? ಸುಡುಗಾಡಿನಲ್ಲಿ ಗಂಡ ಹೆಂಡತಿಯರ ಭೇಟಿ; ಸತ್ತು ಮಲಗಿರುವ ಮಗನ ಮುಂದೆ. ಎಷ್ಟು ಅತ್ತರೋ? ಏನು ಮಾತನಾಡಿಕೊಂಡರೋ? ಇಬ್ಬರಿಗೂ ಮುಂದಿನ ಬದುಕೇ ಕತ್ತಲು. ತಮ್ಮ ದುಃಸ್ಥಿತಿಗೆ ಎಷ್ಟು ಹಳಹಳಿಸಿದರೋ? ಬದುಕಿದ್ದು ಸಾಧಿಸಬೇಕೇನು ಎಂದು ತಿಳಿಯದೆ ಗೋಳಾಡಿದರೋ, ಕಾಲಕೌಶಿಕ ತನ್ನನ್ನು ಗೋಳು ಹೊಯ್ದುಕೊಳ್ಳುವುದನ್ನು ಹೇಳಿದಳೋ, ಶ್ರಾದ್ಧಕ್ಕಾಗಿ ದರ್ಭೆ ತರಲು ಹೋದ ಮಗನನ್ನು ಹಾವು ಕಚ್ಚಿತೆಂದು ಅತ್ತಳೋ, ಸತ್ತ ಮಗನನ್ನು ತರಲು ಕಾಡಿ ಬೇಡಿದಮೇಲೆ ಯಜಮಾನ ಅನುಮತಿ ಕೊಟ್ಟನೆಂದು ನಿಟ್ಟುಸಿರಿಟ್ಟಳೋ, ಒಂಟಿಯಾಗಿ ಕಾಡಿನಲ್ಲಿ ಅಲೆದು ಮೋಡದ ಮರೆಯಲ್ಲಿ ಆಗಾಗ ಚಂದ್ರ ತೋರಿದ ಬೆಳಕಿನಲ್ಲಿ ಮಗನ ಹೆಣ ಹುಡುಕಿ, ಮರಗಟ್ಟಿದ ಮಗನನ್ನು ಬೆನ್ನ ಮೇಲೆ ಹೊತ್ತು ಹೆದರಿಕೆಯಿಂಡ ನಡುಗಿ-ನಡುಗಿ ಸ್ಮಶಾನಕ್ಕೆ ತಂದೆನೆಂದು ಮತ್ತೆ-ಮತ್ತೆ ನಡುಗಿದಳೋ, ರಾಜಕುಮಾರನ ಶವವನ್ನು ಸುಡಲೂ ಕಟ್ಟಿಗೆಗಳಿಲ್ಲದೇ ಬೇರೆಯ ಚಿತೆಗಳಿಂದ ಅಲ್ಲಿ ಉರಿದು ಉಳಿದ ತುಂಡುಗಳನ್ನು ಶೇಖರಿಸಿದೆನೆಂದು ತಮ್ಮ ದಾರಿದ್ರ್ಯಕ್ಕೆ ಗೋಳಾಡಿದಳೋ, ಹೆಂಡತಿಯ ವಿವರಣೆ ಕೇಳಿ-ಕೇಳಿ ನೋವನ್ನು ಉಂಡು-ಉಂಡು, ಹೇಗೆ ತಾನಿನ್ನೂ ಬದುಕಿದ್ದೇನೆಂದು ಹರಿಶ್ಚಂದ್ರ ಮರುಗಿದನೋ, ಅಂತೂ ಅದೇನೇನು ಮಾತನಾಡಿಕೊಂಡರೋ ಗೊತ್ತಿಲ್ಲ.
ಮುಂದೆಂದಾದರೊಮ್ಮೆ ಹಣ ಗಳಿಸಿ ತನ್ನನ್ನು ಬಿಡಿಸಿಕೊಂಡು ಹೋಗಬಹುದೆಂದು ಬಯಸಿದ್ದ ಚಂದ್ರಮತಿಗೆ ಈಗ ಮಗನೇ ಹೋದಮೇಲೆ, ಅದರಲ್ಲಿಯೂ ಗಂಡ ಚಂಡಾಲನಾಗಿದ್ದಾಗ ಗತಿ ಏನು? ಇತ್ತ ಹರಿಶ್ಚಂದ್ರ, ತಾನೇ ತೊತ್ತಾದಮೇಲೆ ಮುಂದೇನು? ಆದರೂ ಕರ್ತವ್ಯ, ಧಣಿ, ಅವನಿಗಿತ್ತಿರುವ ವಚನ! ಎದ್ದ ಹರಿಶ್ಚಂದ್ರ ಹೇಳಿದ, " ಚಂದ್ರಮತಿ, ನಾನು ಬಂಧಿ. ಸ್ಮಶಾನ ಬಿಟ್ಟು ಹೊರಬರಲಾರೆ. ಹೋಗು, ನೀನಾದರೂ ಓಡಾಡಲು ಅನುಮತಿ ಪಡೆದು ಬಂದಿದ್ದೀಯೆ. ಹೋಗು, ಹೋಗಿ ತಾಳಿ ಮಾರಿ ದುಡ್ಡು ತಾ!, ಮಂಗಳಕ್ಕಾಗಿ ಕಟ್ಟಿದ ತಾಳಿ ಮಸಣದಲ್ಲಿಯಾದರೂ ಉಪಯೋಗಕ್ಕೆ ಬರಲಿ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com