ಧರೆಗಿಳಿದ ದೇವರಾಜ

ಬೆರಳಿಂದ ಅಮೃತದ ಹನಿಗಳು ಜಾರಿತು ; ಮಗು ನಕ್ಕಿತು; ಎಲ್ಲರೂ ಎದ್ದರು . ದೇವತೆಗಳು ಮಗುವಿಗೆ ನಾಮಕರಣ ಮಾಡಿದರು, " ಮಾಂ ಧಾಸ್ಯತಿಯೆಂದು ಇಂದ್ರನೇ ಹೇಳಿದ್ದರಿಂದ ಈ ಮಗುವಿಗೆ...
ಧರೆಗಿಳಿದ ದೇವರಾಜ
ಕಾಲ ಸರಿಯಿತು. ಗರ್ಭ ಬೆಳೆಯಿತು. ಉದರ ಊದಿತು. ತಿಂಗಳೊಂಬತ್ತೂ ಆಯಿತು. ಇದೀಗ ಪ್ರಸೂತಿಕಾ ಗೃಹಕ್ಕೆ. ಆದರೆ ಸ್ತ್ರೀಗಿರುವಂತೆ ಗರ್ಭದ್ವಾರವೆಲ್ಲಿ ಲೋಹಿತಾಶ್ವನಿಗೆ? ಬಹುಶಃ ಪ್ರಪಂಚದಲ್ಲಿ ಪ್ರಪ್ರಥಮ ಬಾರಿಗೆ ಗಂಡಿನ ಹೊಟ್ಟೆ ಕೊಯ್ದಿರಬೇಕು ವೈದ್ಯರು ಮಗು ತಗೆಯಲು! ವೈದ್ಯ ಪದ್ಧತಿ ನಮ್ಮಲ್ಲಿ ಉಚ್ಛ್ರಾಯವಾಗಿದ್ದ ಕಾಲ ಇರಬೇಕು ಅದು. ಅಂತೂ ಲೋಹಿತಾಶ್ವ ಪ್ರಸವಿಸಿದ !!! 
ನಾಟಕ ಇನ್ನೂ ಮುಗಿದಿಲ್ಲ. ಮಗು ಅಳಲು ಶುರುವು ಮಾಡಿದಾಗ ನಿಜವಾದ ಅಂಕದ ಪರದೆ ಏರಿತು. ಉದರ ಬೇಧಿಸಿ ಮಗುವನ್ನು ಉಳಿಸಿದರು. ಸರಿ; ಆದರೆ ಎದೆಯಲ್ಲಿ ಸ್ತನವನ್ನೆಲ್ಲಿ ಸ್ಥಾಪಿಸಿಯಾರು ವೈದ್ಯರು? ಸ್ತನ್ಯವೆಲ್ಲಿ ಜಿನುಗೀತು? ಹುಟ್ಟಿದ ಮಗು ಅಳುತ್ತಿದೆ. ಹಾಲು, ಹಾಲು , ಎದೆ ಹಾಲು ; ಎಲ್ಲಿ ತರೋಣ ? ಯಾರೋ ಸಲಹೆ ಕೊಟ್ಟರು , " ನವಜಾತ ಶಿಶುವಿನ ತಾಯಿಯನ್ನು ಹುಡುಕಿ . ಆಕೆ ಹಾಲೂಡಿಸಲಿ " . ಮತ್ತಾರೋ ಆಕ್ಷೇಪಣೆ ಎತ್ತಿದರು , " ರಾಜಕುಮಾರನಿಗೆ ಸಾಮಾನ್ಯ ಸ್ತ್ರೀಯ ಹಾಲೆ ? " ಅಲ್ಲಿಗೆ ಆ ಪ್ರಸ್ತಾವ ಬದಿಗೆ ಸರಿಯಿತು . " ಹಸುವಿನ ಹಾಲು ? " ಯಾರದೋ ಪ್ರಶ್ನೆ . " ಹಸುವಿನದಾದರೂ ಅಷ್ಟೇ , ಅದು ಮಂದ . ಅಲ್ಲಿಗೆ ಅದೂ ಮುರಿದು ಬಿತ್ತು . ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು , ಮಗು ಮಾತ್ರ ಅಳುತ್ತಿದೆ . 
                                           **********
ಅಮರಾವತಿಯಲ್ಲಿ ಇಂದ್ರಸಭೆ. ಈ ಇಂದ್ರನೋ, ಮಹಾ ಭೋಗಿ; ಚಪಲಚಿತ್ತ. ಇಂದ್ರ ಪದವಿಗೇರುವ ತನಕ ತಪಸ್ಸು , ಯಙ್ಞ , ದೀಕ್ಷೆ , ಜಪ . ಹೀಗೆ ಎಲ್ಲ ಕಾಲವೂ ಸಾಧನೆ. " ಶತ ಕ್ರತು " ಇವನ ಮತ್ತೊಂದು ಹೆಸರು . ಎಂದರೆ ನೂರು ಯಙ್ಞಗಳನ್ನು ಮಾಡಿದಾತ . ಇದೀಗ ಇಂದ್ರ . ನಮ್ಮ ಮಂತ್ರಿಗಳಿಗೆ ಒಮ್ಮೆ ಗದ್ದುಗೆ ಸಿಕ್ಕಿತೋ , ಮುಗಿಯಿತು . ಪ್ರಜಾ ಕ್ಷೇಮವೂ ಇಲ್ಲ , ಉತ್ತಮ ನಿರ್ವಹಣೆಯೂ ಇಲ್ಲ . ಇದೀಗ ಕೇವಲ ಭೋಗ , ಅಮೃತ ಪಾನ , ರಂಭಾ ನರ್ತನ , ಅಪ್ಸರಸಿಯರ ಅನವರತ ಸಂಗ , ಅಷ್ಟೇ . ಅಂದೂ ಹಾಗೇ , ಯಾರದೋ ಕುಣಿತ . ನಾಟ್ಯವನ್ನು ಆಸ್ವಾದಿಸುತ್ತಿದ್ದನೋ , ದೇಹ ಸಿರಿಯನ್ನು ಹೀರುತ್ತಿದ್ದನೋ . ಪಾನಕದಲ್ಲಿ ಪುಳ್ಳೆ ಅಡ್ಡ ಬಂದಿತು . ಯಾಕೋ ನೋವಿನ ಎಳೆ . ಯಾರದೋ ಆಕ್ರಂದನ , ಭೂಲೋಕದ ಕಡೆಯಿಂದ . " ನೊಂದ ಸುಂದರಿ ಇರಬಹುದೇ ? ಸಹಾಯ ಮಾಡೋಣವೇ ? " ಚಪಲ ಇಂದ್ರ ಆಕೃತಿಯನ್ನು ಕಲ್ಪಿಸಿಕೊಳ್ಳತೊಡಗಿದ . " ಅಲ್ಲಲ್ಲ , ಅದು ಮಗುವಿನ ಅಳು " , ಇಂದ್ರನ ಮನಸ್ಸನ್ನು ಓದಿದಂತೆ ಹೇಳಿದರು ಬೃಹಸ್ಪತಿಗಳು . " ಆ ಮಗು ಲೋಹಿತಾಶ್ವನಿಗೆ ಹುಟ್ಟಿದೆ . ಹಾಲಿಲ್ಲದೇ ಅಳುತ್ತಿದೆ . " ಗೊಂದಲದಿಂದ ಇಂದ್ರ ಕೇಳಿದ , " ಆಯಿತು , ಕೋಟಿ ಕೂಸುಗಳು ಕೂಗುತ್ತವೆ ಹುಟ್ಟುತ್ತಿದ್ದಂತೆಯೆ , ಅದರಲ್ಲೇನು ವಿಶೇಷ ? ಆದರೆ ಇದರ ಕೂಗು ಇಲ್ಲಿ , ಸ್ವರ್ಗದಲ್ಲೇಕೆ ಕೇಳುತ್ತಿದೆ ? " . ಬೃಹಸ್ಪತಿಗಳು ವಿವರಿಸಿದರು , " ಸಾಮಾನ್ಯ ಸಂದರ್ಭಗಳಲ್ಲಾಗಿದ್ದರೆ , ಇದರ ಕೂಗು ಇಲ್ಲಿ ಕೇಳಿಸುತ್ತಿರಲಿಲ್ಲ . ಚ್ಯವನ ಮಹರ್ಷಿ ಚರುವನ್ನು ತಯಾರಿಸುತ್ತಿರುವಾಗ ಇಂದ್ರ ಮಂತ್ರವನ್ನು ಆವಾಹಿಸಿದ್ದ ; ‘ ಹುಟ್ಟಿದ ಮಗು ಇಂದ್ರನಷ್ಟು ಸಬಲವಾಗಲಿ’, ಎಂದು. ಆದರೆ ಅಚಾತುರ್ಯ ನಡೆದು ಹೋಯಿತು. ರಾಣಿಯ ಬದಲು ರಾಜ ಕುಡಿದುಬಿಟ್ಟ. ಹುಟ್ಟಿದ ಮಗುವಿಗೆ ತಾಯಿಯೂ ಇಲ್ಲ, ಹಾಲೂ ಇಲ್ಲ. ಒಂದರ್ಥದಲ್ಲಿ, ದೇವರಾಜ, ನೀನೂ ಅದರ ತಂದೆ ಅಲ್ಲವೇ? ಮಗುವಿನ ನಿಜವಾದ ಅಪ್ಪ ಹೊಟ್ಟೆ ಕುಯ್ಸಿಕೊಂಡು ಮಲಗಿದ್ದಾನೆ, ಏನೂ ಮಾಡಲಾಗದೆ. ಇದೀಗ ಮಗುವಿನ ರಕ್ಷಣೆ ನಿನ್ನ ಕರ್ತವ್ಯ . "
                                          ************
ಏನೂ ಮಾಡಲು ತೋಚದೇ ಎಲ್ಲರೂ ದಿಗ್ಭ್ರಾಂತರಾಗಿದ್ದಾಗ ಧಿಗ್ಗನೆ ಬೆಳಗಿತು ಗರ್ಭಗೃಹ . ಎಲ್ಲರೂ ಕಣ್ಣು ಮುಚ್ಚಿದರು . ಉಜ್ಜಿಕೊಂಡರು . ಕೊಂಚ ಹೊತ್ತಿಗೆ ಕಣ್ಣು ಹೊಂದಿಕೊಂಡಿತು . ಯಾರೋ ನಾಲ್ಕೈದು ತೇಜಸ್ವಿಗಳು , ರಾಜನಂತೆ ಪೋಷಾಕು ದರಿಸಿದ್ದವರು . ನಿಬ್ಬೆರಗಾಗಿ ನೋಡುತ್ತಿದ್ದಾರೆ ಎಲ್ಲ . ಅವರಲ್ಲೊಬ್ಬ ಮಗುವನ್ನೆತ್ತಿ ಇಂದ್ರನ ಕೈಗಿತ್ತ . ಇಂದ್ರನ ಸ್ಪರ್ಶವಾದೊಡನೆ ಆ ಮಗುವಿನ ಅಳು ನಿಂತಿತು . " ಕಂ ಧಾಸ್ಯತಿ , ಕಂ ಧಾಸ್ಯತಿ . ಏನನ್ನು ಕುಡಿಯುತ್ತದೆ ?", ದೇವತೆಗಳು ಇಂದ್ರನನ್ನು ಕೇಳಿದರು. "ಮಾಂ ಧಾಸ್ಯತಿ", ನನ್ನನ್ನು ಕುಡಿಯುತ್ತದೆ. ಹೇಳಿದ ಇಂದ್ರ ತೋರು ಬೆರಳನ್ನು ಮಗುವಿನ ಬಾಯಲ್ಲಿ ಇಟ್ಟ. 
(ಪ್ರದೇಶಿನೀಂ ತತೋ ಅನ್ಯ ಅಸ್ಯೇ ಶಕ್ರಃ ಸಮಧಿಸಂಧದೇ
ಮಾಂ ಅಯಂ ಧಾಸ್ಯತಿ ಇತಿ ವರಂ ಭಾಷಿತೇ ಚೈವ ವಜ್ರಿಣಾ)
ಬೆರಳಿಂದ ಅಮೃತದ ಹನಿಗಳು ಜಾರಿತು ; ಮಗು ನಕ್ಕಿತು; ಎಲ್ಲರೂ ಎದ್ದರು . ದೇವತೆಗಳು ಮಗುವಿಗೆ ನಾಮಕರಣ ಮಾಡಿದರು, " ಮಾಂ ಧಾಸ್ಯತಿಯೆಂದು ಇಂದ್ರನೇ ಹೇಳಿದ್ದರಿಂದ ಈ ಮಗುವಿಗೆ ಮಾಂಧಾತನೆಂಬ ನಾಮಕರಣವೇ ಆಗಲಿ.
(ಮಾಂಧಾತ ಇತಿಚ ನಾಮ ಅಸ್ಯ ಚಕ್ರುಹು ಸ ಇಂದ್ರಾ ದಿವೌಕಸಃ)
                                              *************
ಮಾಂಧಾತ ಚಕ್ರವರ್ತಿಯೆಂದೇ ಹೆಸರಾಗಿ , ಭಾರತದುದ್ದಕ್ಕೂ ಅನೇಕ ಯಙ್ಞಗಳನ್ನು ಮಾಡಿ , ಕೊನೆಗೆ ಇಂದ್ರ ಸಿಂಹಾಸನದಲ್ಲಿ ಅವನ ಪಕ್ಕ ಕುಳಿತ . ಈತನ ಮಗ ಸುಸಂಧಿಯಾಗಲೀ , ಅವನ ಮಗು ಧ್ರುವಸಂಧಿಯಾಗಲೀ , ಅಷ್ಟು ಖ್ಯಾತನಾಮರಲ್ಲ . ಇವನ ಮಗ ಭರತ . ಈತನಿಂದಲೇ ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂದಿರಬಹುದೇ ಎಂಬ ಒಂದು ಪುಟ್ಟ ಸಂದೇಹ ನನಗೆ . ವಿದ್ವಜ್ಜನ , ಶಕುಂತಲಾ ಪುತ್ರನಿಂದ ಭಾರತವೆಂಬ ಹೆಸರಾಯಿತು ಎಂದು ಹೇಳುತ್ತಾರೆ . ಈ ಭರತನಾಗಲೀ , ದಶರಥನ ಪುತ್ರನಾಗಲಿ , ಆ ಧ್ರುವಸಂದಿಯ ಪುತ್ರನಿಗೆ ಹೋಲಿಸಿದರೆ ಆರ್ವಾಚೀನರು . ಅದು ಕಾರಣ ಬಹುಪಾಲು ಈ ಭರತನಿಂದಲೇ ನಮ್ಮ ದೇಶಕ್ಕೆ ಹೆಸರು ಬಂದಿರ ಬೇಕು. 
ಈ ಭರತನ ಮಗ ಅಸಿತ, ದುರ್ಬಲ ರಾಜ. ವಿರೋಧಿಗಳಲ್ಲಿ ಸೋತು, ರಾಜ್ಯ ಬಿಟ್ಟು , ಓಡಿ ಹೋಗಿ ಚ್ಯವನರಲ್ಲಿ ಆಶ್ರಯ ಬೇಡಿದ. ಈತನಿಗೆ ಇಬ್ಬರು ಪತ್ನಿಯರು. ಒಬ್ಬಳು ಕಾಳಿಂದಿ , ಇನ್ನೊಬ್ಬಳು ತನ್ನ ಕೆಟ್ಟ ಕಾರ್ಯಗಳಿಂದ ಜನರ ಮನದಲ್ಲಿ ಉಳಿಯಬಾರದೆಂದು ಮುನಿ ಶಾಪ ಇತ್ತ . ಸದ್ಯಕ್ಕೆ ಅವಳನ್ನು ನಿರ್ನಾಮೆ ಎನ್ನೋಣ. ಅಸಿತ ಸತ್ತಾಗ ಕಾಲಿಂದಿ ಗರ್ಭವತಿಯಾಗಿದ್ದಳು . ಸವತಿಯ ಗರ್ಭ ಸತ್ತು ಹೋಗಲೆಂದು ನಿರ್ನಾಮೆ ವಿಶದ ಕಜ್ಜಾಯ ಕೊಟ್ಟಳು. ಮುಂದೇನು ಗತಿ ?? 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com