ಋಷಿ ವರ್ತಕನಂತೆ !!

ಮುನಿಕುಮಾರನು ಸಾಯುತ್ತಿದ್ದಾನಲ್ಲ?! ಬಂದು ನೋಡಿದರೆ ಜೆಟೆ ಬಿಚ್ಚಿದೆ; ನೀರೆಲ್ಲ ಕೆಂಪಾಗಿದೆ; ಕೆನ್ನೀರಲ್ಲೇ ಅರ್ಧ ಶರೀರ ಬಿದ್ದಿದೆ; ಎದೆಗೆ ಚುಚ್ಚಿದ ಬಾಣ ಬೆನ್ನಲ್ಲಿ ಬಂದಿದೆ; ಕಾಲು ಬಡಿಯುತ್ತಿದ್ದಾನೆ; ನೋವು
ಋಷಿ ವರ್ತಕನಂತೆ !!
Updated on
ಯಾವುದೆ ಚಟವೂ ತೀರದ ಬಯಕೆ ಅಡವಿಯ ಹೊಕ್ಕನು ದಶರಥನು
ಬೇಟೆಯ ತವಕದಿ ಹಂದಿಯ ಹೊಡೆದನು 
ಜಿಂಕೆ ಸಾರಂಗ ಬಿದ್ದಿತು ಹೆಬ್ಬುಲಿ
ಮರೆಯಲಿ ಏನೋ ಸದ್ದದು ಕೇಳಿತು
ಆನೆ ಇರಬಹುದೊ ? ಮನ ಶಂಕಿಸಿತು 
ಶಬ್ದವೇಧಿಯದು ಬಿಲ್ಲಲಿ ಕುಳಿತಿತು
ಮಂತ್ರಿಸಿ ಬಿಟ್ಟನು ಯುವ ದಶರಥನು
ಅಸ್ತ್ರವಿಶೇಷವು ವಿಶೇಷ ಕಾಲದಿ 
ಅಡಗಿಹ ವೈರಿಯ ಮಂತ್ರಿಸಿ ಕೊಲ್ಲುವ
ಮಹಾ ಅಸ್ತ್ರವನು ಬೇಟೆಗೆ ಬಿಟ್ಟನು 
ಮಂತ್ರಾಸ್ತ್ರಕ್ಕವಮಾನವ ಕೊಟ್ಟನು
ಅಪಾತ್ರಕಾಯಿತು ಧ್ವನಿ ಗುರಿ ಬಾಣ
ಅವಸರ ರಾಜನ ಚಪಲದ ಬಾಣ
ಸೀಳಿತು ಮುನಿಯ ಕುಮಾರನ ಎದೆಯ
ನೀರು ತುಂಬುತಿಹ ಬಾಲಕನೆದೆಯ
ತಂಬಿಗೆ ತುಂಬುವ ನೀರಿನ ಸದ್ದು 
’ ಗಜದ ಶಬ್ದ ’ - ಇದು ದಶರಥ ತೀರ್ಪು
ಈಗದು " ಅಯ್ಯೋ " ಎಂಬುದ ಕೇಳಿ
’ ಕೊಂದೆನೊ ಮನುಜನ ’ ಎನ್ನುತ ಬಂದ
ನಡೆದದ್ದು ಇಷ್ಟೇ. ಇಷ್ಟೇನೇ? ಮುನಿಕುಮಾರನು ಸಾಯುತ್ತಿದ್ದಾನಲ್ಲ?! ಬಂದು ನೋಡಿದರೆ ಜೆಟೆ ಬಿಚ್ಚಿದೆ; ನೀರೆಲ್ಲ ಕೆಂಪಾಗಿದೆ; ಕೆನ್ನೀರಲ್ಲೇ ಅರ್ಧ ಶರೀರ ಬಿದ್ದಿದೆ; ಎದೆಗೆ ಚುಚ್ಚಿದ ಬಾಣ ಬೆನ್ನಲ್ಲಿ ಬಂದಿದೆ; ಕಾಲು ಬಡಿಯುತ್ತಿದ್ದಾನೆ; ನೋವು ತಡೆಯಲಾಗದೇ ಕಿರುಚುತ್ತಿದ್ದಾನೆ.
ಉದ್ದಿಶ್ಯ ಇರದಿರಬಹುದು; ಆದರೆ ಅಚಾತುರ್ಯವಾಗಿದೆಯಲ್ಲ? "ಪ್ರಾಣಿ ಎಂದುಕೊಂಡೆ" ಎಂದು ಜಾರಿಕೊಳ್ಳುವುದು ಸುಲಭ. ಆದರೆ ಕಾಣದೆ ಏಕೆ ಹೊಡೆಯಬೇಕಿತ್ತು? ಅಸಲು ರಾತ್ರಿ ಏಕೆ ಬೇಟೆಗೆ ಬರಬೇಕಿತ್ತು? 
ಶಬ್ದವೇಧಿಯನ್ನೇಕೆ ಈ ಅಲ್ಪ ಕಾರ್ಯಕ್ಕೆ ಉಪಯೋಗಿಸಬೇಕಿತ್ತು?...ಹೀಗೆ ಹಲವಾರು ಪ್ರಶ್ನೆಗಳಿಗೆ ಅವನಲ್ಲಿ ಉತ್ತರವಿಲ್ಲ. ಬಿದ್ದಿದ್ದ ಅರ್ಧ ಸಾಯುತ್ತಿರುವ ವಟು ಹೇಳಿದ, ದಶರಥನ ಕ್ಷಮಾಪ್ಪಣಾ ಸ್ತೋತ್ರ ಮುಗಿದ ಮೇಲೆ; " ರಾಜ, ಈಗ ಮಾತಾಡಿ ಪ್ರಯೋಜನ ಇಲ್ಲ, ಈ ಬಾಣ ತೆಗಿ. ನೋವು ತಟ್ಟಕೊಳೋಕೆ ಆಗ್ತಾಯಿಲ್ಲ. ಸತ್ತ್ರೆ ಇದರಿಂದ ಬಿಡುಗಡೆಯಾಗತ್ತೆ ಅಂತ ಕಾಣ್ಸತ್ತೆ. "ಅದೇ ಸರಿ ಎನಿಸಿತು ದಶರಥನಿಗೆ’. ಬಾಣ ಕಿತ್ತರೆ ರಕ್ತ ಹರಿದು ಬೇಗ ಸಾವು ಬರುತ್ತದೆ’. ಎಷ್ಟು ಯುದ್ಧಗಳಲ್ಲಿ ಎಷ್ಟು ಜನರ ಪ್ರಾಣ ತೆಗೆದಿಲ್ಲ ತಾನು?.' ಕೈ ಹಾಕಿದ ಬಾಣ ಕೀಳಲು. 
"ನಿಲ್ಲು ! ಒಂದು ಕ್ಷಣ. ನಾನು ಸತ್ತಮೇಲೆ ಮಾಡಬೇಕಾದ ಒಂದು ಕೆಲಸ ಇದೆ ನಿನಗೆ. ಈ ಕಾಲುದಾರಿಯಲ್ಲಿ ಹೋದರೆ ನಿನಗೊಂದು ಆಶ್ರಮ ಸಿಗುತ್ತೆ. ಅಲ್ಲಿ ನನ್ನ ಅಪ್ಪ- ಅಮ್ಮ ಇದಾರೆ. ಇಬ್ಬರೂ ಕಾಯ್ತಾ ಇರ್ತಾರೆ ನಂಗಾಗಿ. ಇಬ್ಬರೂ ಮುದುಕರಪ್ಪ! ಅವರಿಗೆ ನನ್ನ ಸ್ಥಿತಿ ಹೇಳು, ಈಗ ಕೀಳು. "ದಶರಥ ಕಿತ್ತ, ಕೈಕಾಲುಗಳನ್ನು ಒದರಿ, ಜೋರಾಗಿ ಕೂಗಿ ಸತ್ತ ಆ ಹುಡುಗ. ಪಾಪ ಪ್ರಙ್ಞೆ ದಶರಥನನ್ನು ಸುಡುತ್ತಿದೆ. ’ಹೇಗೆ ಈ ವಾರ್ತೆಯನ್ನು ಹೇಳುವುದು? ಮುದುಕರಂತೆ, ಏನು ಮಾಡ್ಲಿ? ಅರಮನೆಗೆ ಕರೆದುಕೊಂಡು ಹೋಗಿ ಸಾಕೋಣ್ವಾ? ಆದರೆ ಮಗನ್ನ ಕೊಂದವನ ಮನೆಗೆ ಅವರು ಬರ್ತಾರ? ಊರು ಬಿಟ್ಟು ಅರಣ್ಯಕ್ಕೆ ತಪಸ್ಸಿಗೆ ಬಂದವರು ಮತ್ಯಾಕೆ ಬರ್ತಾರೆ ಊರಿಗೆ? ಹೇಳದೇ ಹೋಗೋಣವೋ? ಆದರೆ ಬೆಳಿಗ್ಗೆ ಅವರು ಹುಡುಕಿಕೊಂಡು ಬಂದು ನೋಡಿ ನನ್ನನ್ನ ಶಪಿಸಿದರೆ? ತಪ್ಪಿಸಿಕೊಳ್ಳೋ ಹಾಗೆ ಇಲ್ಲ. ಕಾಲಮೇಲೆ ಬಿದ್ದು ಕ್ಷಮೆ ಕೇಳತೀನಿ. ಏನಾದರೂ ಆಗಲಿ, ಹೋಗೋಣ.’ 
                                         ***********
" ಏಕೆ ಮಗು, ಇಷ್ಟು ಹೊತ್ತು? ಬಾಯಾರಿಕೆಗೆ ನೀರು ತರ್ತೀನಿ ಅಂತ ಹೋದೋನು ಎಷ್ಟು ಹೊತ್ತು ಆಯ್ತು? ನಮಗೋ ಕಣ್ಣು ಕಾಣೊಲ್ಲ. ಏನೂ ಮಾಡಕಾಗದೇ ಒದ್ದಾಡ್ತಾ ಇದೀವಿ. " ’ ಅಯ್ಯಯ್ಯೋ, ಬರೀ ವೃದ್ಧರಲ್ಲ! ಇವರು ಕುರುಡರು ಬೇರೆ!! ಹೇಗಪ್ಪಾ ಹೇಳೋದು?’ ಸುಮ್ಮನೇ ನಿಂತ ಸದ್ದನ್ನು ಕೇಳಿ, " ಯಾರದು ಬಂದಿದ್ದು? ನಮ್ಮ ಮಗನಾದರೆ ಅಷ್ಟು ದೂರ ನಿಲ್ಲತಾ ಇರಲಿಲ್ಲ". ಮುದುಕ ಕೇಳಿದ. ತಡವರಿಸುತ್ತ ದಶರಥ ನಡೆದದ್ದನ್ನು ಸಂಗ್ರಹಿಸಿದ. ಹೇಳುತ್ತಿದ್ದಂತೆ, " ಅಯ್ಯೋ! " ಎಂದು ಕೂಗಿ ಆ ಮುದುಕಿ ನಲಕ್ಕೆ ಉರುಳಿದಳು. ನೀರು ತಟ್ಟಿದ. ಪ್ರಙ್ಞೆ ಬಂದ ಆಕೆ ಕೂಗಿ-ಕೂಗಿ ಅಳುತ್ತಿದ್ದಾಳೆ. " ಎಂತಹ ಕೆಲಸ ಮಾಡಿದೆ! ಎಂತಹ ಕೆಲಸ ಮಾಡಿದೆ! " ಮತ್ತೇನೂ ತೋಚದೆ ಆತ ಹೇಳಿದ್ದೇ ಹೇಳುತ್ತಾ, " ಅಯ್ಯ, ಮಗನ ಹತ್ತಿರಕ್ಕಾದರೂ ಕರೆದುಕೊಂಡು ಹೋಗಯ್ಯ! " ಇಬ್ಬರನ್ನೂ ಕೈಹಿಡಿದು ತಂದ ದಶರಥ. ಮಗನ ಹೆಣವನ್ನು ಸವರಿ ಸವರಿ ಇಬ್ಬರೂ ಗೋಳಾಡುತ್ತಿದ್ದರೆ, ದಶರಥನಿಗೆ ತಲೆ ಸುತ್ತುತ್ತಿದೆ; ಹೊಟ್ಟೆ ತೊಳೆಸುತ್ತಿದೆ.
ಅಬ್ಬ! ಈ ಸಾವು ಎಷ್ಟು ಘೋರ! ಯಾಕಾಗಿ ಜನ ಕಾದಾಡತಾರೆ? ಏಕೆ ನಾವು ಯುದ್ಧ ಮಾಡ್ತೀವಿ? ರಾಜ್ಯ ವಿಸ್ತರಣೆಯ ನೆವದಲ್ಲಿ ಎಲ್ಲ ರಾಜರೂ ಮಾಡೋ ಏಕೈಕ ಕೆಲಸ ಎಂದರೆ ಕೊಲೆ ಮಾಡೋದೇ. ರಕ್ತದಲ್ಲಿ ಭೂಮಿ ಎಷ್ಟು ಸಲ ನೆಂದು ಹೋಗಿದೆಯೋ. ಆದರೂ ಈ ರಾಜ್ಯ ವಿಸ್ತರಣೆಯ ಭೂತಕ್ಕೆ ಮಾತ್ರ ತೃಪ್ತಿ ಇಲ್ಲ. ಇಂದಿನಿಂದ ನಾನು ಯುದ್ಧ ಮಾಡೊಲ್ಲ. ’ .ಇದು ಆತುರದ ವೈರಾಗ್ಯವೋ, ನಿಜವಾಗಿಯೂ ಶಪಥ ಮಾಡಿದನೋ ಗೊತ್ತಿಲ್ಲ, ಏಕೆಂದರೆ ಅದರ ಪರೀಕ್ಷೆ ಆಗಲೇ ಇಲ್ಲ. 
ವಟುವಿನ ಶರೀರಕ್ಕೆ ಧಗ್ಗನೆ ಬೆಂಕಿ ಹೊತ್ತಿತು. ಎಲ್ಲಿಂದ ಬಂತು ಕಟ್ಟಿಗೆ ರಾಶಿ? ಇಲ್ಲ ! ಸೌದೆಯನ್ನು ಯಾರು ತಂದಾರು ಇಲ್ಲಿ; ಈಗ? ಬೆಂಕಿಯ ಕೆಂಬೆಳಕಿನಲ್ಲಿ ಕೆಂಮುಖದ ಮುದುಕ ಅಗ್ನಿಸೂಕ್ತ ಹೇಳುತ್ತಿದ್ದಾನೆ. ಓಹ್ ! ಮಹಾ ತಪಸ್ವಿ ಈತ. ಮುಗಿಸುವ ಮುನ್ನ ಅಗ್ನಿಗೆ ನಮಿಸಿ "ಗುಪ್ತಾ" ಎಂದಂತಾಯಿತಲ್ಲವೆ ? ಇತ್ತ ತಿರುಗಿದ ಕೆಂಗಣ್ಣಿನ ಮುದುಕ ಆದಷ್ಟೂ ಧ್ವನಿಯನ್ನು ಹತೋಟಿಯಲ್ಲಿಡುತ್ತ ಹೇಳಿದ, " ರಾಜ ದಶರಥ, ಈ ಅಡವಿ ನಿನ್ನದೇ. ನಿನ್ನ ರಾಜ್ಯದ ಪ್ರಜೆಗಳು ನಾವು. ನಾನೊಬ್ಬ ವರ್ತಕ. ಇವಳೊಬ್ಬ ಶೂದ್ರ ಸ್ತ್ರೀ. ನಿಷ್ಕಾರಣವಾಗಿ ನಮ್ಮ ಮಗನನ್ನು ನೀನು ಕೊಂದೆ."
-ಡಾ.ಪಾವಗಡ ಪ್ರಕಾಶ್ ರಾವ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com