ಶೂದ್ರರಿಗೆ ತಪೋಧಿಕಾರ ಇಲ್ಲವೆ?

ಬೆಂಕಿ ಸುತ್ತಿದ ದೇಹದಿಂದ ಧ್ವನಿ ಬಂದಿತು, "ನಾವು ಪುತ್ರ ಶೋಕದಿಂದ ಸಾಯುತ್ತಿದ್ದೇವೆ. ನಿನಗೂ ಸಾವು ಬರಲಿ , ಪುತ್ರಶೋಕದಿಂದಲೇ ! ಇದು ನನ್ನ ಶಾಪ !! "
ದಶರಥನಿಗೆ ವೃದ್ಧ ದಂಪತಿಗಳ ಶಾಪ (ಸಾಂಕೇತಿಕ ಚಿತ್ರ)
ದಶರಥನಿಗೆ ವೃದ್ಧ ದಂಪತಿಗಳ ಶಾಪ (ಸಾಂಕೇತಿಕ ಚಿತ್ರ)
Updated on
ಮುನಿಯ ಮಾತನ್ನು ಕೇಳುತ್ತಿದ್ದಂತೆಯೇ ದಶರಥ ನಲಕ್ಕೆ ಬಿದ್ದು ಅವನ ಕಾಲು ಹಿಡಿದ. " ಏಳು, ಏಳು. ಅವನ ಆಯುಷ್ಯ ಅಷ್ಟಕ್ಕೇ ಮುಗಿಯಿತು ಎಂದು ಕಾಣುತ್ತದೆ. ನೀನೇನು ಮಾಡೊಕಾಗುತ್ತೆ? ಅವನನ್ನು ಕೊಲ್ಲೋ ಉದ್ದಿಶ್ಯ ನಿನಗಿರಲಿಲ್ಲ ಅಂತ ನನಗೆ ಗೊತ್ತಿದೆ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ನಿನ್ನ ತಲೆ ತುಂಡಾಗಿ ಬಿಡ್ತಾ ಇತ್ತು. ಆದರೂ ನಿನ್ನ ತಪ್ಪಿಗೆ ಶಿಕ್ಷೆ ಆಗಲೇ ಬೇಕು. ಆಗಲೇ ನನಗೂ ಸಮಾಧಾನ, ನಿನಗೂ ಅದು ಯೋಗ್ಯ. ಕೇಳಿಸಿಕೊ, 
ನಾನೊಬ್ಬ ವರ್ತಕ. ಇವಳೊಬ್ಬ ಶೂದ್ರ ಸ್ತ್ರೀ. ನಮ್ಮದು ಪ್ರೇಮ ವಿವಾಹ. ಇವನೊಬ್ಬನೇ ಮಗ. ಕಣ್ಣು ಇಬ್ಬರಿಗೂ ಹೋದಮೇಲೆ ಎಲ್ಲವೂ ಕತ್ತಲಾದಾಗ ನಾಡೇನು-ಕಾಡೇನು? ತಪಸ್ಸಿಗೆ ಬಂದೆವು. ಮಗನೂ ಸಹಾಯ ಮಾಡೋಕೆ ಕಾಡಿಗೆ ಬಂದ. ಈ ಹೊತ್ತು ಹೀಗಾಯ್ತು. ನಾವಿಬ್ಬರೂ ಈಗ ಪ್ರಾಯೋಪವೇಶ ಮಾಡಿ ನಮ್ಮ ದೇಹಗಳನ್ನ ಸುಟ್ಟುಹಾಕಿಕೊಳ್ಳತೀವಿ, ಬದುಕಿರುವ ಇಷ್ಟ ನಮಗಿಲ್ಲ. "ಹೇಳುತ್ತ ಹೇಳುತ್ತ ಮುದುಕ, ಅಂಗೈಗಳೆರಡನ್ನೂ ತಿಕ್ಕಿದ, ಅಬ್ಬ! ಅವನ ತಪಶ್ಶಕ್ತಿಯೇ!! ತಕ್ಷಣ ಅಲ್ಲಿ ಬೆಂಕಿ ಹೊತ್ತಿತು. ಮಡದಿಯನ್ನು ಹಿಡಿದ. ಅವಳಿಗೂ ಕ್ಷಣಮಾತ್ರದಲ್ಲಿ ಬೆಂಕಿ ಸುತ್ತಿತು. ಎರಡು ದೇಹಗಳೂ ಕಣ್ಣ ಮುಂದೆ ಧಗ ಧಗನೆ ಉರಿದು ಹೋಗುತ್ತಿವೆ. ಬೆಂಕಿ ಸುತ್ತಿದ ದೇಹದಿಂದ ಧ್ವನಿ ಬಂದಿತು, " ನಾವು ಪುತ್ರ ಶೋಕದಿಂದ ಸಾಯುತ್ತಿದ್ದೇವೆ. ನಿನಗೂ ಸಾವು ಬರಲಿ , ಪುತ್ರಶೋಕದಿಂದಲೇ ! ಇದು ನನ್ನ ಶಾಪ !! "
(ಪುತ್ರ ವ್ಯಸನಜಂ ದುಃಖಂ ಯದೇ ತನ್ ಮಮ ಸಂಪ್ರತಂ
 ಏವಂ ತ್ವಂ ಪುತ್ರ ಶೋಕೇನ ರಾಜನ್ ಕಾಲಂ ಗಮಿಷ್ಯಸಿ)
                                        ****************
ಇದೇ ಸಂದರ್ಭದಲ್ಲಿ ಬಹು ಚರ್ಚಿತವಾಗಿರುವ ಶೂದ್ರ ತಪಸ್ವಿಯನ್ನು ಕುರಿತು ಯೋಚಿಸುವುದು ಯೋಗ್ಯವಾಗಿದೆ. ಈಗಲೇ ಏಕೆ ಈ ಚರ್ಚೆ ಎಂಬುದಕ್ಕೆ ಕಾರಣವನ್ನು ಚರ್ಚೆಯ ಅಂತ್ಯಕ್ಕೇ ಬರೆಯೋಣ!. 
ಮೊದಲು, ಉತ್ತರಕಾಂಡದಲ್ಲಿರುವ ಈ ಕಥೆಯನ್ನು ಸಂಗ್ರಹಿಸುವ. ಬ್ರಾಹ್ಮಣನ ಪುತ್ರನೊಬ್ಬ ಸತ್ತಿದ್ದರ ಕಾರಣ ಶೂದ್ರನ ತಪಸ್ಸೆಂದು ನಾರದರು ಹೇಳಿದರು. ಹಾಗೂ ಅವನನ್ನು ಸಂಹರಿಸಬೇಕಾದದ್ದು ರಾಜನ ಕರ್ತವ್ಯವೆಂದೂ ಮಾರ್ಗದರ್ಶನ ಮಾಡಿದರು. ಒಂಬತ್ತು ಋಷಿಗಳ ಮುಖವಾಣಿಯಾದ ನಾರದರ ವಚನವಂತೆ ಹುಡುಕ ಹೊರಟು ಶೈವಲ ಪರ್ವತದ ಬಳಿ ತಲೆ ಕೆಳಗಾಗಿದ್ದ ತಾಪಸನನ್ನು ಶ್ರೀರಾಮರು ಕಂಡರು. ವಿಚಾರಿಸಲಾಗಿ ಆ ತಪಸ್ವಿ, " ಉಗ್ರ ತಪದಲ್ಲಿರುವ ನನ್ನನ್ನು ಶೂದ್ರನೆಂದು ತಿಳಿ" ಎಂದು ಉತ್ತರಿಸಿದ. (ಶೂದ್ರಂ ಮಾಂ ವಿದ್ಧಿ ಕಾಕುತ್ಸ್ಥ ತಪ ಉಗ್ರಂ ಸಮಾಸ್ಥಿತಂ)
ಹಾಗೆ ಉತ್ತರಿಸುತ್ತಿದ್ದಂತೆಯೇ ರಾಮರ ಒರೆಯಿಂದ ಖಡ್ಗ ಹೊರಬಂತು . ಆ ಶಂಬುಕನ ತಲೆಯನ್ನು ಕತ್ತರಿಸಿಬಿಟ್ಟರು. (ಭಾಷತಸ್ತಸ್ಯ ಶೂದ್ರಸ್ಯ ಖಡ್ಗಂ ಸುರುಚಿರ ಪ್ರಭಾಂ ನಿಷ್ಕೃತ್ಯ ಕೋಶಾದ್ ವಿಮಲಂ ಶಿರಶ್ಛೇದ ರಾಘವಃ)
ಇಷ್ಟು ಖಚಿತವಾಗಿ ರಾಮಾಯಣದಲ್ಲಿ ಸಾಕ್ಷ್ಯವಿರುವಾಗ ಇನ್ನೇನಿದೆ ಶ್ರೀರಾಮರ ಪರವಾಗಿ ಮಾತನಾಡಲು? ನಿರಾಯುಧ ತಪಸ್ವಿಯನ್ನು ಕತ್ತರಿಸಿದರೆಂದರೆ ಯಾರಿಗೆ ತಾನೇ  ಅಸಹ್ಯವಾಗೊಲ್ಲ? ಗೌರವ ಹೋಗೊಲ್ಲ ? 
ದಯಮಾಡಿ ಕೊಂಚ ನಿಲ್ಲಿ, ಈ ಪ್ರಸಂಗದ ಕೆಲ ಗೊಂದಲಗಳನ್ನು ನೋಡೋಣ. 
  •  ಶೂದ್ರ ತಪಸ್ಸು ಮಾಡಿದರೆ ಬ್ರಾಹ್ಮಣನ ಮಗ ಸಾಯಬೇಕೇಕೆ? 
  • ಯಾರೋ ಒಬ್ಬನೇ ಏಕೆ; ಎಲ್ಲ ಬ್ರಾಹ್ಮಣ ಪುತ್ರರೂ ಏಕೆ ಸಾಯಲಿಲ್ಲ? 
  • ತ್ರೇತಾಯುಗದಲ್ಲಿ ಶೂದ್ರರು ತಪಸ್ಸು ಮಾಡಕೂಡದೆಂಬ ಕಾನೂನು ಹೇಳಿದ ನಾರದ ವಾಕ್ಯದಲ್ಲಿ ಹುರುಳಿದೆಯೇ?
  •  ಶ್ರೀರಾಮರು ನಿರಾಯುಧನನ್ನು ಸಂಹರಿಸುವಷ್ಟು ಅಧರ್ಮಿಯೇ? 
  •  ಅಕಸ್ಮಾತ್ ಶೂದ್ರನ ತಪಸ್ಸು ತಪ್ಪಾಗಿದ್ದರೆ (?) ಅದನ್ನು ತಿದ್ದಿಕೊಳ್ಳಲು ಅವನಿಗೆ ಒಂದು ಅವಕಾಶವನ್ನೂ ಕೊಡಲಾರದಷ್ಟು ಅನ್ಯಾಯಿ ನಿಷ್ಕರುಣಿಯೇ ಶ್ರೀರಾಮರು?  ಇವನ್ನೆಲ್ಲ ನೋಡಿದಾಗ ಈ ವರದಿ ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಿ ಸಾಧುವಾಗಿ ಕಾಣಿಸುವುದಿಲ್ಲ. ಅತ್ಯಂತ ಪ್ರಧಾನ ಕಾರಣ ನಾರದರು ಕೊಟ್ಟಿದ್ದು ಯುಗ ವ್ಯವಸ್ಥೆಯಲ್ಲಿ ಶೂದ್ರ ಸ್ಥಾನ. ಎಂದರೆ, ಕೃತ ಯುಗದಲ್ಲಿ ಕೇವಲ ಬ್ರಾಹ್ಮಣ ತಪಸ್ಸು ಮಾಡಬೇಕು. ತ್ರೇತೆಯಲ್ಲಿ ಬ್ರಾಹ್ಮಣರೊಟ್ಟಿಗೆ ಕ್ಷತ್ರಿಯರಿಗೂ ಅವಕಾಶವಿದೆ. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ಮೂವರೂ ದ್ವಾಪರ ಯುಗದಲ್ಲಿ ತಪಸ್ವಿಗಳಾಗಬಹುದು, ಕಲಿಯುಗದಲ್ಲಿ ಚಾತುರ್ವರ್ಣದವರಿಗೂ ಅಧಿಕಾರವಿದೆ. 
(ಪುರಾ ಕೃತಯುಗೇ ರಾಜನ್ ಬ್ರಾಮ್ಹಣಾವೈ ತಪಸ್ವಿನಃ
ತ್ರೇತಾಯುಗೇಚ ವರ್ತಂತೇ ಬ್ರಾಮ್ಹಣಾಃ ಕ್ಷತ್ರಿಯಾಶ್ಚಯೇ
ತಸ್ಮಿನ್ ದ್ವಾಪರ ಸಂಖ್ಯಾತೇ ತಪೋ ವೈಶ್ಯಾನ್ ಸಮಾವಿಷತ್
ಭವಿಷ್ಯ ಶೂದ್ರಯೋದ್ಯಾಂ ವೈ ತಪಶ್ಚರ್ಯಾ ಕಲೌ ಯುಗೇ)
ಇದು ಯುಗ ನಿಯಮ. ಕ್ರಮಭಂಗವಾಗಿ ಶೂದ್ರ ತ್ರೇತೆಯಲ್ಲಿ ತಪಸ್ಸು ಮಾಡಿದರೆ ಅದು ಮರಣದಂಡನೀಯ ಅಪರಾಧ. ಇದು ಅಂದಿನ ಕಾನೂನೆಂದು ನಾರದ ಉವಾಚ. ಇಷ್ಟೇ ಹೇಳಿ ಇದರಲ್ಲಿ ಶ್ರೀರಾಮರ ತಪ್ಪೇನಿದೆ ಎಂದು ಕೈ ತೊಳೆದುಕೊಂಡು ಬಿಡೋಣವೆ? ಬೆಟ್ಟ ಅಗೆದು ಇಲಿ ಹಿಡಿಯುವುದೆ? ಹಾಗಾದರೆ ಉಳಿದ ಪ್ರಶ್ನೆಗಳಿಗೇನೆನ್ನೋಣ? 
ಇದೀಗ ನಮ್ಮ ವಾದ:- ನಾರದರು ಕೊಟ್ಟ ಮಾಹಿತಿಯಾದರೂ ತಪ್ಪಿರಬೇಕು. ಅಥವ ಈ ಕಥೆಯನ್ನು ಸೇರಿಸಿದವರಿಗಾದರೂ ಶೂದ್ರ ವಿರೋಧದ ಕೆಂಪು ತಲೆ ಇರಬೇಕು!! ವಾಲ್ಮೀಕಿ ಮಹರ್ಷಿಗಳನಕಾ ಈ ಪ್ರಸಂಗ ಬರೆದಿರುವ ಸಾಧ್ಯತೆಯೇ ಇಲ್ಲ! ( ಅಷ್ಟೇಕೆ, ಇಡೀ ಉತ್ತರಕಾಂಡವೇ ಅವರದಲ್ಲ ಎಂಬ ವಾದವೂ ಉಂಟಲ್ಲ? ಅದನ್ನು ನಾನು ಸೀತಾ ವಿವಾಸನ ಸಂದರ್ಭದಲ್ಲಿ ವಿವರವಾಗಿ ಚರ್ಚಿಸುವೆ). ನಾರದರ ಮಾತನ್ನು ವಿಶ್ಲೇಷಿಸೋಣವೇ? 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com