"ಶೂದ್ರ ತಪಸ್ವಿ" ಯೆಂಬ ಮಿಥ್ಯೆ !!

ಯುಗಧರ್ಮ ಎಂಬುದರಲ್ಲಿ ಈ ಭ್ರಮಾತ್ಮಕ ವ್ಯವಸ್ಥೆ ಇರಲಿಲ್ಲ!
"ಶೂದ್ರ ತಪಸ್ವಿ" ಯೆಂಬ ಮಿಥ್ಯೆ !!
ಯುಗಧರ್ಮ ಎಂಬುದರಲ್ಲಿ ಈ ಭ್ರಮಾತ್ಮಕ ವ್ಯವಸ್ಥೆ ಇರಲಿಲ್ಲ! 
  • ಶ್ರೀರಾಮರ ತ್ರೇತೆಗಿನ್ನ ಹಿಂದಿನ ಯುಗದಲ್ಲಿನ (ಕೃತಯುಗ) ವೇದ ದರ್ಶನದಲ್ಲಿ ಹಲ ಜಾತಿಗಳ ದಾರ್ಶನಿಕರಿದ್ದಾರೆ. ಅಷ್ಟೇಕೆ, ಶ್ರೀರಾಮರ ಗುರುಗಳಾದ ವಿಶ್ವಮಿತ್ರರಿಗೇ ಅವರು ಕೌಶಿಕರಾಗಿ ಆಗ್ಗೆ ತಪಸ್ಸು ಮಾಡುವ ಅಧಿಕಾರವೇ ಇರಲಿಲ್ಲ ನಾರದರ ಮಾತಿನಂತೆ!  ಏಕೆಂದರಾತ ಕ್ಷತ್ರಿಯ. ವೇದದ ಮೂರನೆಯ ಮಂಡಲ ಈ ಬ್ರಾಹ್ಮಣನಾದ, ಎಂದರೆ ತಪಸ್ಸು ಮಾಡಿದ ಕ್ಷತ್ರಿಯ ದರ್ಶನ.
  • ಶ್ರೀಮದ್ ರಾಮಾಯಣದಲ್ಲಿಯೇ ಇರುವ ಸಾಕ್ಷ್ಯವೆಂದರೆ ಈಗ ನೋಡುತ್ತಿರುವ ದಶರಥನಿಗೆ ಸಂದಾಯವಾದ ಶಾಪ. ಯಾರಿಂದ? ಒಬ್ಬ ವರ್ತಕನಿಂದ! ನಾರದರ ಪ್ರಕಾರ ವೈಶ್ಯರಿಗೆ ತ್ರೇತೆಯಲ್ಲಿ ತಪೋಧಿಕಾರವೇ ಇಲ್ಲ. ಆದರೆ ಶ್ರೀರಾಮರನ್ನು ದಶರಥನಿಂದ ದೂರಾಗಿಸಿದ್ದು ಈ ವೈಶ್ಯ ಋಷಿ ಇತ್ತ ಶಾಪ. ವೈಶ್ಯ ತಪಸ್ಸು ಮಾಡುವುದಷ್ಟೇ ಅಲ್ಲ, ಶಪಿಸಲೂ ಸಾಧ್ಯವಿತ್ತು! 
  • ಈ ವರ್ತಕ ಋಷಿಯ ಪತ್ನಿ ಒಬ್ಬ ಶೂದ್ರ ತಪಸ್ವಿನಿ. ಅವರಿಗೆ ಹುಟ್ಟಿದಾತನನ್ನೇ ದಶರಥ ಕೊಂದದ್ದು. ಅವನು ಸಾಯುವ ಮುನ್ನ ಹೇಳುವ ಮಾತು, "ನಾನು ಶೂದ್ರ ಸ್ತ್ರೀಯಲ್ಲಿ ವೈಶ್ಯನಿಗೆ ಹುಟ್ಟಿದವ. " 
(ಶೂದ್ರಾಯಾಂ ಅಸ್ಮಿ ವೈಶ್ಯೇನ ಜಾತೋ ಜನಪದಾಧಿಪ). 
ಇಂತಹವನಿಗೆ ಸ್ವರ್ಗಪ್ರಾಪ್ತಿ. ಉತ್ತರ ಕ್ರಿಯಾ ನಂತರ ಆತ ದೇವೇಂದ್ರನೊಡನೆ ಸೇರಲು ವಿಮಾನವೇರಿದ.  
(ಆರುರೋಹ ದಿವಂ ಕ್ಷಿಪ್ರಂ ಮುನಿ ಪುತ್ರೋ ಜಿತೇಂದ್ರಿಯಃ)
ಎಂದರೆ ವೈಶ್ಯ-ಶೂದ್ರ ಸಂಜಾತನೂ ತಪಸ್ಸು ಮಾಡುತ್ತಿದ್ದ. ಅವನಿಗೆ ಸ್ವರ್ಗಾರೋಹಣಕ್ಕೂ ಅಧಿಕಾರವಿದೆ. 
ಸಿದ್ಧಾಂತ:- ಎಂದರೇನಾಯಿತು? ಶೂದ್ರ ತಪಸ್ಸು ಮಾಡಬಹುದು, ಮಾಡುತ್ತಿದ್ದ!!
ಶಂಬೂಕ ವಧೆ ಎಂಬುದು ಯಾರೋ ಗೊಡ್ಡು ಸಂಪ್ರದಾಯಕವಾದಿಗಳು ಬರೆದು ಸೇರಿಸಿ ಶ್ರೀರಾಮರಿಗೆ ಕಳಂಕ ತಂದರು. ಅಷ್ಟೇ ಅಲ್ಲ. ಪಾಪ ! ದೇವರ್ಷಿ ನಾರದರನ್ನು ಖಳನಾಯಕನನ್ನಾಗಿ ಚಿತ್ರಿಸಿದರು!! ಅದು ಕಾರಣ ಶೂದ್ರ ತಪಸ್ವಿ ಎನ್ನುವ ಶೀರ್ಷಿಕೆಯಡಿಯಲ್ಲಿ ಶ್ರೀರಾಮರ ತೇಜೋಭಂಗ ಮಾಡುವುದು ಶ್ರೀರಾಮರಿಗೆ ಮಾಡುವ ಅನ್ಯಾಯ. ಇಂತಹ ಯಾವುದೇ ದುಷ್ಕಲಾ ರಹಿತ ಸ್ಫಟಿಕ ಶುಭ್ರ ತೇಜ ಶ್ರೀರಾಮರು. 
                                            **********
(ಒಂದೆರಡು ವಾಸ್ತವಾಂಶಗಳು:- ಈ ಕಥೆಯಲ್ಲಿ ಬರುವ ಋಷಿ ಕುಮಾರನ ಹೆಸರು ಶ್ರವಣ ಕುಮಾರ ಎಂದು ಹಬ್ಬಿದೆ, ಜನಪದರಲ್ಲಿ. ಎಷ್ಟು? , ಯಾರಾದರೂ ತಂದೆ ತಾಯಿಗಳನ್ನು ಶುಶ್ರೂಷೆ ಮಾಡುತ್ತಿದ್ದರೆ ಶ್ರವಣ ಕುಮಾರನಂತೆ ಎಂಬ ಉದ್ಗಾರ ಬರುವಷ್ಟು. ಆದರೆ ವಾಲ್ಮೀಕಿ ರಾಮಾಯಣದಲ್ಲಿ ಈ ಹೆಸರು ಇಲ್ಲ. ಯಾವ ಹೆಸರೂ ಇಲ್ಲ! ಆನಂದ ರಾಮಾಯಣದಲ್ಲಿ ಮಾತ್ರ ಈ ಹೆಸರಿದೆ. ತಾಂಡವನೆಂಬ ಹೆಸರನ್ನು ತುಳಸಿದಾಸರು, ಹಾಗೂ ನರಹರಿಗಳು ಪ್ರಯೋಗಿಸಿದ್ದಾರೆ. ಈ ಕಥೆ ಈ ಮೂವರಲ್ಲಿಯೂ ಅತ್ಯುತ್ಪ್ರೇಕ್ಷವಾಗಿದೆ, ಅತಿರಂಜಿತವಾಗಿದೆ.
ಕಾವಡಿ ಎಂದರೆ ಬಿದಿರಿನಲ್ಲಿ ತಯಾರಿಸಿರುವ, ಅತ್ತಿತ್ತ ಬುಟ್ಟಿಗಳು ಹೊಂದಿರುವ ಒಂದು ಉದ್ದನೆಯ ಕೋಲು; ತಕ್ಕಡಿಯಂತೆ. ಆ ಬುಟ್ಟಿಗಳೆರಡರಲ್ಲಿ ತಂದೆ - ತಾಯಿಗಳನ್ನು ಕೂಡಿಸಿಕೊಂಡು ತೀರ್ಥ ಯಾತ್ರೆ ಮಾಡುತ್ತಿದ್ದನಂತೆ ಆ ಸುಪುತ್ರ. ಒಬ್ಬ ವಟು, ದುರ್ಬಲ ಶರೀರಿ, ಎಷ್ಟೇ ಮುದುಕರಾಗಿದ್ದರೂ ಬುಟ್ಟಿಗಳೆರಡರಲ್ಲಿ ಕುಳಿತ ತಂದೆ ತಾಯಿಗಳನ್ನು ಹೊತ್ತು ಓಡಾಡುವುದು. ಎಂದರೆ ಹಗಲಿರುಳೆನ್ನದೆ ಮೈಲು ಮೈಲು ನಡೆಯುತ್ತಿರುವುದು ಸಾಧ್ಯವೇ ಇಲ್ಲದ ಮಾತು. (ಈ ಸಾತತ್ಯ ದೃಢ ದೇಹದ ಜಟ್ಟಿಗೇ ಅಸಾಧ್ಯವೇನೋ). ಅಙ್ಞಾತ ಜಾಗದಲ್ಲಿ ನೀರು ತರಲು ಹೊರಟನೆಂಬದು-ಅದೂ ರಾತ್ರಿಯ ಕತ್ತಲಿನಲ್ಲಿ-ಮತ್ತೂ ಅಸಂಗತ. 
(ಅಂಬುಜಾನನೆ ಕೇಳು ತಾಂಡವ
ನೆಂಬ ಮುನಿ ಪಿತೃ - ಮಾತೃ ಸೇವಾ 
ಲಂಬಕನು ತೊಳಲಿದನು ನಾನಾ ತೀರ್ಥಯಾತ್ರೆಯಲಿ
ಅಂಬುವನು ತರಲೆಂದು ಪಿತೃಗಳ
ಕಂಬಿಯನು ನೇರಿರಿಸಿ ಚರ್ಮದ
ತಂಬಿಗೆಯ ಕೊಂಡರಸುತಿರುಳೈದಿದನು ಜೀವನವ)
ಮಹರ್ಷಿಗಳಲ್ಲಿ ಅತ್ಯಂತ ಸಹಜವಾಗಿ ಚಿತ್ರಿತವಾಗಿದೆ ಸರಳವಾಗಿ. ಕಾವಡಿ-ತೀರ್ಥಯಾತ್ರೆಗಳು ಇರಲ್ಲಿಲ್ಲ. ಅಯೋಧ್ಯೆಯ ಹೊರವಲಯದಲ್ಲಿನ ಅರಣ್ಯದಲ್ಲಿ ಆಶ್ರಮ ಕಟ್ಟಿಕೊಂಡಿದ್ದಾರೆ. ಬಳಿಯ ಜಲಾಶಯಕ್ಕೆ ಋಷಿ ಕುಮಾರ ಬಂದಿದ್ದಾನೆ, ಅಷ್ಟೇ. - ಲೇ)
ಎಂತೆಂತಹ ಸಾವುಗಳನ್ನು ನೋಡಿಲ್ಲ ದಶರಥ? ಅದರೆ ಇದು? ಸುಟ್ಟುಕೊಂಡು, ಅಪ್ಪಿಕೊಂಡು, ಉರಿದುಹೋಗುತ್ತ, ಉರಿ ತಾಳಲಾರದೇ ಒರಲುತ್ತ, ಉರಿದುರಿದು ಕರಕಲಾಗಿ ಕರ್ರನೆಯ ಆಕೃತಿಗಳೆರಡು ಧರೆಗೆ ಬಿದ್ದಿತಲ್ಲ! ಕುಸಿದು ಬಿಟ್ಟ ಯುವಕ. ಶರೀರವಷ್ಟೇ ಅಲ್ಲ; ಮನಸ್ಸೂ ಕೆಟ್ಟು ಹೋಯಿತು; ಮುರಿದು ಹೋಯಿತು. ಎಷ್ಟೋ ವರ್ಷಗಳು ಇದೇ ಛಾಯೆ ಆವರಿಸಿ ಹರ್ಷವೇ ಕಾಣದಾದ. 
ಅವನ ಮುಖದಲ್ಲಿ ಬಹುಕಾಲದ ನಂತರ ಕಂಡ ನಗೆ ಕೌಸಲ್ಯೆಯನ್ನು ಮಹಿಷಿಯನ್ನಾಗಿ ಮಾಡಿಕೊಂಡಾಗ. ಆದರೆ ಪ್ರಯತ್ನವೆಲ್ಲ ವಿಫಲವಾಗಿ ಸುಖ ಶರೀರಕ್ಕೆ ಮಾತ್ರ, ಮನಸ್ಸಿಗಲ್ಲದಾದಾಗ; ಮಗನೇ ಹುಟ್ಟದಾದಾಗ ಮತ್ತೆ ಖಿನ್ನನಾದ. ಅವಳಲ್ಲದಿದ್ದರೇನಾಯಿತು, ಮತ್ತೊಬ್ಬಳು ಬರಲಿ! ಸುಮಿತ್ರೆ ಬಂದಾಯಿತು. ಕೌಸಲ್ಯೆಯನ್ನು ಕಡೆಗಣಿಸಲಿಲ್ಲ. ಕಾರಣ ಬಂದಾಕೆ ಅಕ್ಕನೆಂದೇ ಗೌರವಿಸಿದಳು ಕೌಸಲ್ಯೆಯನ್ನು. ಮೈತ್ರಿ ಆಕೆಯ ಹುಟ್ಟುಗುಣ. ಇಬ್ಬರಿಗಷ್ಟೇ ಏಕೆ, ಎಲ್ಲರಿಗೂ ಮಿತ್ರೆಯೇ; ಸುಮಿತ್ರೆಯೇ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com