ಸೌಮಿತ್ರಿಗಳಿಗೆ ಸ್ವಾಗತ

ನಿಮಿಷದಲ್ಲಿ ಶುದ್ಧಿ ಮಾಡಿ, ಬಟ್ಟೆಯಲ್ಲಿ ಸುತ್ತಿದ ಎರಡು ಮಕ್ಕಳನ್ನೆತ್ತಿ ತಂದಿದ್ದಾರೆ ಇಬ್ಬರು ದಾದಿಯರು. ದಶರಥನ ಎರಡು ಕೈಗಳನ್ನೂ ತುಂಬಿದರು.
ಸೌಮಿತ್ರಿಗಳಿಗೆ ಸ್ವಾಗತ
Updated on
ಅಭಿಜಿನ್ಮುಹೂರ್ತ. ಮತ್ತೊಮ್ಮೆ ಸಂತೋಷದ ಅಲೆ ಹಾದು ಹೋಯಿತು ಅರಮನೆಯಲ್ಲಿ. ಸಾಮಾನ್ಯ ಬಾಣಂತಿಯರಾಗಿದ್ದರೆ ಮಲಗಿರುತ್ತಿದ್ದರು; ಆದರೆ ಮಕ್ಕಳ ಜನನದಿಂದ ತಾಯಂದಿರಿಗೆ ಏನೇನೂ ತೊಂದರೆಯಾಗದಿರುವಾಗ, ಆಯಾಸದ ಅಲ್ಪ ತಿಳಿವಳಿಕೆಯೂ ಇಲ್ಲದಾಗ, ಕೌಸಲ್ಯೆ ಕೈಕೆಯರು ಸುಮಿತ್ರೆಯ ಕೋಣೆಗೇ ಬಂದಿದ್ದಾರೆ. ಮಹಾರಾಜರೂ ಅಲ್ಲೇ ಇದ್ದಾರೆ. ನಿರೀಕ್ಷಣೆ ಸುಮಿತ್ರೆಗೆ ಹುಟ್ಟುವ ಮಗುವಿಗಾಗಿ. ಕೊಂಚ ಕಾಲ ಕಳೆಯಿತು. ಒಂದೆರಡು ಘಂಟೆಗಳೇ ಆದುವು. ಮಧ್ಯಾಹ್ನಕ್ಕೆ ಸರಿಯಾಗಿ ಬಾಣಂತಿ ಕೋಣೆಯಿಂದ ಕಿಲ ಕಿಲ ನಗು.
ನಿಮಿಷದಲ್ಲಿ ಶುದ್ಧಿ ಮಾಡಿ, ಬಟ್ಟೆಯಲ್ಲಿ ಸುತ್ತಿದ ಎರಡು ಮಕ್ಕಳನ್ನೆತ್ತಿ ತಂದಿದ್ದಾರೆ ಇಬ್ಬರು ದಾದಿಯರು. ದಶರಥನ ಎರಡು ಕೈಗಳನ್ನೂ ತುಂಬಿದರು. ಕೆಂಪು ಕಣ್ಣುಗಳು, ಬಿಗಿದ ಹುಬ್ಬು, ಅತಿ ಕಠಿಣ ಮುಖಚರ್ಯೆ, ಚೂಪಾದ ಮೂಗು, ಕಚ್ಚಿದ ತುಟಿ, ಏಕೋ ಗೊತ್ತಿಲ್ಲ; ಬಿಗಿಯಾದ ವಾತಾವರಣ!  ರಾಮ ಭರತರ ಬಣ್ಣಗಳ ಸಂಯುಕ್ತ ವರ್ಣ... ಸರಿಸುಮಾರು ನಾಲ್ಕು ಮಕ್ಕಳದೂ ಒಂದೇ ಮುಖ, ಒಂದೇ ಆಕರ್ಷಣೆ. ವಸಿಷ್ಠರು ಹೆಸರಿಟ್ಟೇಬಿಟ್ಟರು, " ಬಲಗೈ ತುಂಬಿದ ಮಗು ಲಕ್ಷ್ಮಣ, ವಾಮಕರದಲ್ಲಿರುವಾತ ಶತ್ರುಘ್ನ"
(ಅಥ ಲಕ್ಷ್ಮಣ ಶತ್ರುಘ್ನೌ ಸುಮಿತ್ರಾ ಜನಯತ್ ಸುತೌ)
(ಒಂದು ಜನಪ್ರಿಯ ಭ್ರಮೆ:- ಅದೇ ಲಕ್ಷ್ಮಣ ಆದಿಶೇಷನ ಅಂಶ. ಹಾಗೂ ಭರತ ಶತ್ರುಘ್ನರು ಶ್ರೀಮನ್ನಾರಾಯಣನ ಶಂಖ ಚಕ್ರಗಳು ಎಂಬುದು. ಇದಕ್ಕೆ ಉದ್ದ ನಾಮಗಳೂ, ದಪ್ಪ ನಾಮಗಳೂ ಕಚ್ಚೆ ಬಿಗಿದು ಪರಾಕು ಹೇಳುತ್ತವೆ. ಏಕೆಂದು ನನಗೆ ಅರ್ಥವಾಗುತ್ತಿಲ್ಲ. ಶ್ರೀಮದ್ರಾಮಾಯಣದಲ್ಲಿ ಇದಕ್ಕೆ ಯಾವುದೇ ಆಧಾರವಿಲ್ಲ. ಹುಟ್ಟಿದ ನಾಲ್ಕೂ ಮಂದಿ ನಾರಾಯಣಾಂಶವೇ. ಸಂದೇಹ ರಹಿತವಾಗಿ ದಾಖಲಾಗಿದೆ ಅಲ್ಲಿ. ಗಮನಿಸಿ; ಬ್ರಹ್ಮ ಬೇಡುವುದೇ; " ವಿಷ್ಣುವೇ ನೀನು ನಿನ್ನ ಆತ್ಮವನ್ನು ನಾಲ್ಕು ಭಾಗವಾಗಿ ಮಾಡಿಕೊಂಡು ಆಗಮಿಸು. 
(ವಿಷ್ಣೋ ಪುತ್ರತ್ವಮಾಗಚ್ಛ ಕೃತ್ವಾತ್ಮಾನಂ ಚತುರ್ವಿಧಂ)
ರಾಮಾವತಾರಕ್ಕೆ ಮುನ್ನ ತಾನೆಲ್ಲಿ ಹುಟ್ಟಬೇಕೆಂದು ಚಿಂತಿಸಿದ ಕಮಲಾಕ್ಷ, ತನ್ನ ಆತ್ಮವನ್ನು ಚತುರ್ಭಾಗ ಮಾಡಿಕೊಂಡು ದಶರಥನನ್ನು ತಂದೆಯಾಗಿ ಸ್ವೀಕರಿಸಿದ. 
(ತತಃ ಪದ್ಮಪಲಾಶಾಕ್ಷಃ ಕೃತ್ವಾತ್ಮಾನಂ ಚತುರ್ವಿಧಂ
ಪಿತರಂ ರೋಚಯಾಮಾಸ ತದಾ ದಶರಥಂ ನೃಪಂ)
ಇಷ್ಟೇ ಅಲ್ಲ , ಭರತನ ಜನ್ಮ ಸಂದರ್ಭದಲ್ಲಿ ವಾಲ್ಮೀಕಿಗಳು ಬರೆಯುತ್ತಾರೆ, " ಸಾಕ್ಷಾತ್ ವಿಷ್ಣುವಿನ ಒಂದು ಅಂಶವಾದ ಭರತನು ಜನಿಸಿದ . 
( ಸಾಕ್ಷಾತ್ ವಿಷ್ಣೋಶ್ಚತುರ್ಭಾಗಃ )
ಲಕ್ಷ್ಮಣ - ಶತ್ರುಘ್ನರ ಸಂದರ್ಭದಲ್ಲಿಯೂ ಇದನ್ನು , ಇನ್ನೂ ಖಚಿತವಾಗಿ ದಾಖಲು ಮಾಡುತ್ತಾರೆ; " ವಿಷ್ಣುವಿನ ಅರ್ಧಾಂಶದಿಂದ ಬಂದವರು ಲಕ್ಷ್ಮಣ ಶತ್ರುಘ್ನರು " .
(ಸರ್ವಾಸ್ತ್ರ ಕುಶಲೌ ವೀರೌ ವಿಷ್ಣೋರರ್ಧ ಸಮನ್ವಿತೌ)
ಇಷ್ಟೆಲ್ಲ ದಾಖಲಿದ್ದಾಗಲೂ ಏಕೆ ಲಕ್ಷ್ಮಣನನ್ನು ಆದಿಶೇಷ ಎಂದು ಬೊಬ್ಬೆ ಹಾಕುತ್ತಾರೋ ಗೊತ್ತಿಲ್ಲ. ಲಕ್ಷ್ಮಣ ಆದಿಶೇಷನೇ ಎಂದು ದೃಢವಾಗಿ ನಂಬಿರುವ ಅವರಿಗೆ, ಶ್ರೀಮತ್ ರಾಮಾಯಣದಲ್ಲಿ ‘ಅದಿಲ್ಲವಲ್ಲ’ ಎಂಬುದನ್ನು ತೋರಿಸಿ, ಅವರ ವಾದಕ್ಕೆ ಸಾಕ್ಷ್ಯ ಕೇಳಿದಾಗ, ವಿಷ್ಣು ತಮ್ಮ ಬಾಯಿಗೆ ಬೀಗ ಹಾಕಿದ್ದಾನೆಂದೂ, ಅದು ಕೇವಲ ತಮಗೆ ಗೊತ್ತಿರುವ ರಹಸ್ಯವೆಂದೂ ತಾರಮಯ್ಯ ಆಡುತ್ತಾರೆ. " 24,೦೦೦ ಶ್ಲೋಕಗಳಲ್ಲಿ ಎಲ್ಲೂ ಆದಿಶೇಷನ ಪ್ರಸಕ್ತಿಯೇ ಇಲ್ಲವಲ್ಲ" ಎಂದರೆ, ಹೊಸದಾಗಿ ಇತ್ತೀಚಿಗೆ ರಾಮಾಯಣದ ಕೊನೆಯಲ್ಲಿ ಅರ್ಧಶ್ಲೋಕವನ್ನು ಸೇರಿಸಿ (ಅದೂ ಪೂರ್ಣ ಮಾಡದೇ!!!! ) " ಶೇಷೋ ಲಕ್ಷ್ಮಣ ಉಚ್ಯತೇ" ಎಂದು ಹೇಳಿ, ಹುಳಿನಗು ನಗುತ್ತಾರೆ. ಶ್ರೀರಾಮ, ಏಕಪ್ಪ ಈ ಸಂಕಟ ಇವರಿಗೆ?
ಹೀಗೆ, ಹಾವು, ಚಕ್ರ, ಶಂಖ ಎಂದು ಹೇಳಿ, ಅವರಿಗಿರುವ ವಿಷ್ಣುತ್ವದಿಂದ ಏಕೆ ಕಳಗಿಳಿಸುತ್ತಾರೋ? ಒಟ್ಟಿನಲ್ಲಿ ಶ್ರೀರಾಮ, ಭರತ, ಲಕ್ಷ್ಮಣ, ಶತ್ರುಘ್ನರು ನಾಲ್ವರೂ ನಾರಾಯಣಾಂಶರೇ. ಮತ್ತೊಬ್ಬ ಆಚಾರ್ಯರ ಮತ್ತೊಂದು ಉವಾಚ ಹೀಗೆ. " ಭರತ ಮೊದಲು ಹುಟ್ಟಲಿಲ್ಲ, ಶ್ರೀರಾಮರ ನಂತರ ಹುಟ್ಟಿದ್ದು ಲಕ್ಷ್ಮಣ, ಅನಂತರ ಭರತ ಹಾಗೂ ಶತ್ರುಘ್ನರು ಹುಟ್ಟಿದ್ದರು.
ಹೀಗೆ ಹೇಳುವ ಮೂಲಕ ಲಕ್ಷ್ಮಣ-ಶತ್ರುಘ್ನರು, ಅವಳಿ-ಜವಳಿ ಎಂಬುದನ್ನೂ ತಿರಸ್ಕರಿಸುತ್ತಾರೆ. ಮಹರ್ಷಿಗಳು ಈ ನಾಲ್ವರ ನಕ್ಷತ್ರಗಳನ್ನೂ ಹೇಳುತ್ತಾರೆ. ಶ್ರೀರಾಮರದು ಪುನರ್ವಸು ಎಂದು ಬರೆದ ಮೇಲೆ, ಭರತ ಪುಷ್ಯ ನಕ್ಷತ್ರದಲ್ಲಿ ಹುಟ್ಟಿದ ಎಂದು ಹೇಳಿ, ಆಶ್ಲೇಷಾ ನಕ್ಷತ್ರದಲ್ಲಿ ಲಕ್ಷ್ಮಣ-ಶತ್ರುಘ್ನರು ಹುಟ್ಟಿದರು ಎನ್ನುತ್ತಾರೆ. " ಪುಷ್ಯೇ ಜಾತಸ್ತು ಭರತೋ" , ಹಾಗೂ "ಸಾರ್ಪೇ ಜಾತೌ ಚ ಸೌಮಿತ್ರೀ" .ಆಶ್ಲೇಷಾಕ್ಕೆ ಪರ್ಯಾಯ ನಾಮ "ಸರ್ಪ"!!!! ಅದಕ್ಕೇ ಸರ್ಪ ಸಂಸ್ಕಾರದ ಸಂದರ್ಭದಲ್ಲಿ ಆಶ್ಲೇಷಾ ಬಲಿ ಎಂದು ಹೇಳುವುದು.  
ಪುನರ್ವಸು, ಪುಷ್ಯ, ಆಶ್ಲೇಷ. ಇವು ನಕ್ಷತ್ರ ಕ್ರಮ. ಇಷ್ಟು ಸರಳ ವಿಷಯವೂ ಆಚಾರ್ಯರಿಗೆ ಅರ್ಥವಾಗದ್ದು ಅಚ್ಚರಿ! ಒಟ್ಟಿನಲ್ಲಿ ರಾಮ ಜನನದ ಮಾರನೆಯ ಬೆಳಗು ಪುಷ್ಯ ನಕ್ಷತ್ರವಿದ್ದು ಭರತ ಜನನವಾಗಿದೆ. ಮಧ್ಯಾನಃದಲ್ಲಿ ಆಶ್ಲೇಷಾ ನಕ್ಷತ್ರ ಬಂದಿದೆ. ಆಗ ಲಕ್ಷ್ಮಣ ಶತ್ರುಘ್ನರು ಹುಟ್ಟಿದ್ದಾರೆ. - ಲೇ )

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com