ಪ್ರಧಾನವೆಂದುಕೊಂಡ ವಿವಾಹ ಕರ್ಮಗಳಿಗೆ ಶ್ರೀರಾಮರಿಂದ ಕತ್ತರಿ!

ನಾವು ಎಷ್ಟು ಸರಳವಾಗಿ ಇಂತಹ ಕಾರ್ಯಗಳನ್ನು ಆಚರಿಸುತ್ತೇವೋ, ಅಷ್ಟು ಸರಳವಾಗಿ ಜನರು ಮಾಡುತ್ತಾರೆ. ನಾವೇ ವೈಭವವಾಗಿ ಮಾಡಿಬಿಟ್ಟರೆ, ನೋಡುವ ಜನಪದರಿಗೆ ತಾವೂ ಹೀಗೇ ಮಾಡಬೇಕೇನೋ ಎನ್ನಿಸುತ್ತದೆ.....
ಪ್ರಧಾನವೆಂದುಕೊಂಡ ವಿವಾಹ ಕರ್ಮಗಳಿಗೆ ಶ್ರೀರಾಮರಿಂದ ಕತ್ತರಿ!
ಪ್ರಧಾನವೆಂದುಕೊಂಡ ವಿವಾಹ ಕರ್ಮಗಳಿಗೆ ಶ್ರೀರಾಮರಿಂದ ಕತ್ತರಿ!
"ನೀವು ಯಾವುದಾದರೂ ವೈದಿಕ ಹೋಮ ಮಾಡುತ್ತೀರೋ? ವಿವಾಹ ಮಂಟಪದ ಅಲಂಕಾರ ಮಾಡುತ್ತೀರೋ? ಮಂಗಳವಾದ್ಯ ಮೊಳಗಿಸುತ್ತೀರೋ? ದಾನಗಳನ್ನು ಮಾಡುತ್ತೀರೋ.... ಇವುಗಳ ಬಗ್ಗೆ ನನ್ನ ತಕರಾರಿಲ್ಲ. ಮನೆಯಲ್ಲಿ ನಡೆಯುವ ಇಂತಹುದೊಂದು ವಿಶೇಷ ಸಮಾರಂಭದಲ್ಲಿ ಪೂಜೆ ಮಾಡಕೂಡದೆಂದೂ, ಯಙ್ಞ ಮಾಡಕೂಡದೆಂದೂ, ನಗು-ನಗುತ್ತಾ ಸಂತೋಷದಿಂದ ಇರಕೂಡದೆಂದೂ ನಾನು ಹೇಳುತ್ತಿಲ್ಲ. ಆದರೆ...  ನನಗೆ ಸಂಬಂಧಿಸಿದಂತೆ, ಎಂದರೆ ನನ್ನ ಮದುವೆಗೆ ಸಂಬಂಧಿಸಿದಂತೆ ಅನಗತ್ಯವಾದದ್ದಾವುದೂ ಬೇಕಿಲ್ಲ. ಆಡಂಬರ ಬೇಕಿಲ್ಲ. ನಾವು ಎಷ್ಟು ಸರಳವಾಗಿ ಇಂತಹ ಕಾರ್ಯಗಳನ್ನು ಆಚರಿಸುತ್ತೇವೋ, ಅಷ್ಟು ಸರಳವಾಗಿ ಜನರು ಮಾಡುತ್ತಾರೆ. ನಾವೇ ವೈಭವವಾಗಿ ಮಾಡಿಬಿಟ್ಟರೆ, ನೋಡುವ ಜನಪದರಿಗೆ ತಾವೂ ಹೀಗೇ ಮಾಡಬೇಕೇನೋ ಎನ್ನಿಸುತ್ತದೆ. ಉಳ್ಳವರಿಗೆ ಅದರಿಂದ ತೊಂದರೆಯಿಲ್ಲ. ಆದರೆ ಪಾಪ ಬಡವರ ಗತಿ ಏನು? ದೊಡ್ಡವರನ್ನು ಅನುಕರಿಸಲು ಹೋಗಿ, ಸಾಲ-ಸೋಲಗಳನ್ನು ಮಾಡಬೇಕಾಗುತ್ತದೆ. ಅದನ್ನು ತೀರಿಸಲು ಜೀವನವಿಡೀ ಕಷ್ಟ ಪಡಬೇಕಾಗುತ್ತದೆ.... ಇಂತಹ ಕಷ್ಟವನ್ನು ಜನಪದರಿಗೆ ತಪ್ಪಿಸಬೇಕಿದ್ದರೆ, ನಾಯಕರಾಗಿರುವವರು ಸರಳವಾಗಿರಬೇಕು. "
ಶ್ರೀರಾಮರನ್ನೇ ದಿಟ್ಟಿಸುತ್ತಾ ಕುಳಿತರು ಶತಾನಂದರು. ತನಗಿನ್ನ ವಯಸ್ಸಿನಲ್ಲಿ ಕಡಿಮೆ ಇರುವ ಶ್ರೀರಾಮರು ಕ್ಷಾತ್ರವಿದ್ಯೆಯಲ್ಲಿ ಪರಿಣಿತರೆಂದು ತಿಳಿದಿತ್ತು. ಆದರೆ ಈಗ ವೈದಿಕ ವಿದ್ಯೆಯ ಬಗ್ಗೆಯೂ ಇಷ್ಟು ಅಧಿಕೃತವಾಗಿ ಮಾತನಾಡುತ್ತಿದ್ದಾರೆ! ಅದಕ್ಕಿನ್ನ ಹೆಚ್ಚಾಗಿ, ನಿಜವಾದ ಪ್ರಜಾ ವತ್ಸಲರಾಗಿ ಮಾತನಾಡುತ್ತಿದ್ದಾರೆ. "ನಾನು ಹೇಳಿದ್ದು ತಮ್ಮ ಮನಸ್ಸಿಗೆ ಬಂತೇ? "ಅನ್ಯ ಮನಸ್ಕರಂತೆ ಕಂಡ ಶತಾನಂದರನ್ನು ಕೇಳಿದರು ರಾಮರು. "ಆ, ಏನಂದಿರಿ? ಏನೋ ಆಲೋಚನೆ ಅಡ್ಡ ಬಂದಿತು. ದಯವಿಟ್ಟು ಇನ್ನೊಮ್ಮೆ ಹೇಳಿ. "ಶತಾನಂದರು ಜಾಗೃತರಾದರು. "ಏನಿಲ್ಲ, ನೀವೇನೋ ವಿವಾಹ ಕರ್ಮಗಳ ಬಗ್ಗೆ ಮಾತನಾಡಬೇಕೆಂದಿರಿ; ಹೇಳಿ. ಆದರೆ ವೈದಿಕ ಕರ್ಮಗಳನ್ನು ಮಾತ್ರ ಹೇಳಿ. "ಇದೀಗ ಶತಾನಂದರ ಸ್ಮೃತಿಯನ್ನೆಲ್ಲ ತಿರುವಿದಂತೆ. ಅವರ ಅನುಭವವನ್ನೆಲ್ಲ ನಿಕಷಕ್ಕೊಡ್ಡಿದಂತೆ! "ಎಲ್ಲಿಂದ ಆರಂಭಿಸಬೇಕೆಂದೇ ಗೊತ್ತಾಗುತ್ತಿಲ್ಲ... ಆದರೂ..... ವಿವಾಹದಲ್ಲಿ ಮುಖ್ಯವಾದ... ಆಹ್ ! ಕನ್ಯಾದಾನ. ಅದರ ಬಗ್ಗೆ ಮಾತಾಡೋಣವೇ? "ಎಂದರು. 
"ಮತ್ತೆ ಅದನ್ನೇ ಶುರು ಮಾಡಿದ್ದೀರಿ. ವೈದಿಕವಾಗಿ ಎಂದು ಹೇಳಿದೆ. ಹೇಳಿ, ಏನು ಈ ಕನ್ಯಾದಾನ? ದಾನ ಮಾಡಲು ಮಗಳೇನು ವಸ್ತುವೇ? ಹಾಗೆ ದಾನ ಮಾಡುವಾಗ ದುಃಖಿಸದ ತಂದೆ ತಾಯಿಯರಾರಿದ್ದಾರೆ? ಕಣ್ಣೀರಿಟ್ಟು ಕೊಡುವುದನ್ನು ಯಾರಾದರೂ ದಾನವೆನ್ನುತ್ತಾರೇನು? ಹೆತ್ತು, ಹೊತ್ತು, ಸಾಕಿ, ಸಲಹಿದ ಮಗಳನ್ನು ಅಲ್ಲಿವರೆಗೆ ಅಪರಿಚಿತನಾದ ವ್ಯಕ್ತಿಗೆ ದಾನ ಮಾಡಿಬಿಡುವುದೆಂದರೇನು ಅರ್ಥ? ಏಕೋ ಈ ದಾನ ಎನ್ನುವ ಪದವೇ ನನಗೆ ಸರಿ ಕಾಣುತ್ತಿಲ್ಲ. ನನ್ನ ನೆನಪು ಹೋದಂತೆ ಇದು ವೈದಿಕವಲ್ಲ. ಅಕಸ್ಮಾತ್ ಯಾವುದಾದರೂ ವೇದದಲ್ಲಿ ಹೇಳಿದ್ದರೂ ನಾನಿದನ್ನು ಒಪ್ಪುವುದಿಲ್ಲ." 
ಶ್ರೀರಾಮರನ್ನು ವಿರೋಧಿಸುವುದಕ್ಕೇ ಆಗುತ್ತಿಲ್ಲವಲ್ಲ! ಹೇಗೆ ಇಷ್ಟು ಖಚಿತವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿದ್ದಾರೆ? "ಅಲ್ಲಪ್ಪ, ಕನ್ಯಾದಾನದಿಂದ ತನ್ನ ಹಿಂದಿನ ಹತ್ತು ತಲೆಮಾರಿಗೆ, ಮುಂದಿನ ಹತ್ತು ತಲೆಮಾರಿಗೆ, ಹಾಗೂ ತನಗೆ, ಒಟ್ಟು ಇಪ್ಪತ್ತೊಂದು ತಲೆಗಳಿಗೆ ನರಕ ಬರದಂತೆ ಎಂದಿದೆಯಲ್ಲ... "ಎಂದು ಯಾವುದೋ ಮದುವೆ ಮಂತ್ರವನ್ನು ನೆನಪಿಸಿಕೊಳ್ಳುತ್ತಾ ಹೇಳಿದರು ಶತಾನಂದರು. "ಗುರುಗಳೆ, ಅಕಸ್ಮಾತ್ ಪುಣ್ಯ ಬರುವುದಿದ್ದರೆ; ಸ್ವರ್ಗ ಸಿಗುವುದಿದ್ದರೆ, ಅಪ್ಪನ ಮನೆ ಬಿಟ್ಟು, ಕಂಡು ಕೇಳರಿಯದ ಗಂಡನ ಮನೆಗೆ ಹೋಗಿ, ಅಲ್ಲಿನ ಮನೆಯ ಎಲ್ಲ ಸದಸ್ಯರನ್ನೂ ಹೊಂದಿಕೊಳ್ಳುವ ಹೆಣ್ಣಿಗೆ ಬರಬೇಕೋ, ಅಪ್ಪನಿಗೆ ಬರಬೇಕೋ? ಇದಾವ ನ್ಯಾಯ? "ಶ್ರೀರಾಮರ ಮಾತಿಗೆ ತಮ್ಮ ಕೊನೆಯ ಅಸ್ತ್ರವಾಗಿ ಶತಾನಂದರು ಮನುವಿನ ಮಾತನ್ನು ಘೋಷಿಸಿಬಿಟ್ಟರು. " ಬ್ರಹ್ಮ ವಿವಾಹದಲ್ಲಿ ಆಹೂಯ ದಾನಂ ಕನ್ಯಾಯಾಂ ಎಂದೂ,  ದೈವ ವಿವಾಹದಲ್ಲಿ  ಅಲಂಕೃತ್ಯ ಸುತಾ ದಾನಂ ಎಂದೂ, ಆರ್ಷವಿವಾಹದಲ್ಲಿ  ಕನ್ಯಾ ಪ್ರದದಾನಂ ವಿಧಿವತ್ ಆರ್ಷೇ ಎಂದೂ, ಪ್ರಾಜಾಪತ್ಯದಲ್ಲಿ ಕನ್ಯಾ ಪ್ರದಾನಂ ಅಭ್ಯರ್ಚ್ಯ ಎಂದೂ, ಅಸುರ ವಿವಾಹದಲ್ಲಿ ಕನ್ಯಾ ಪ್ರದಾನಂ ಸ್ವಾಚ್ಛಂದ್ಯ ಎಂದೂ, ನಿಮ್ಮ ವಂಶದ ಮೂಲ ಪುರುಷರಲ್ಲೊಬ್ಬ ಮನುವೇ ಹೇಳಿದ್ದಾನಲ್ಲ?" 
ಶ್ರೀರಾಮರು ಮತ್ತದೇ ನಿಶ್ಚಿತ ಧ್ವನಿಯಲ್ಲಿ ಹೇಳಿದರು. "ಈ ಬಗ್ಗೆ ನಾನು ಬಹು ಬಾರಿ ಯೋಚಿಸಿದ್ದೇನೆ. ಒಂದನೆಯದಾಗಿ, ಮನುವಿನ ಕಾಲಕ್ಕೂ, ನನ್ನ ಕಾಲಕ್ಕೂ ಮಧ್ಯೆ ಸಾವಿರಾರು ವರ್ಷಗಳ ಅಂತರವಿದೆ. ಅಂದಿನ ಸಮಾಜ, ಅಂದಿನ ನಾಗರಿಕತೆ, ಅಂದಿನ ಪದ್ಧತಿಗಳೆಲ್ಲವನ್ನೂ ನಾವು ಅನುಸರಿಸುತ್ತಿದ್ದೇವೋ? ಎರಡನೆಯದಾಗಿ ಈ ನಿಯಮ ಬ್ರಾಹ್ಮಣರಿಗೇ ವಿನಃ ಕ್ಷತ್ರಿಯರಿಗಲ್ಲ. ಕನ್ಯಾದಾನ ಬ್ರಾಹ್ಮಣರಿಗೆ ಮಾತ್ರ! ಬ್ರಾಹ್ಮಣೇತರರಲ್ಲಿ ಪರಸ್ಪರ ಒಪ್ಪಿದರಾಯ್ತು; ಕನ್ಯಾದಾನ ಇಲ್ಲವೆಂದು ಅದೇ ಮನು ಮಹರ್ಷಿಯೇ ಹೇಳಿದ್ದಾನಲ್ಲ!!
(ಅದ್ಭಿರ್ ಏವ ದ್ವಿಜಾಗ್ರ್ಯಾಣಾಂ ಕನ್ಯಾದಾನಂ ವಿಶಿಷ್ಯತೇ 
ಇತರೇಷಾಂತು ವರ್ಣಾನಾಂ ಇತರೇತರ ಕಾಮ್ಯಯಾ) 
 "ಇನ್ನೇನು ಹೇಳುವುದು ರಾಮರಿಗೆ? ಶತಾನಂದರಿಗೆ ಹೊಳೆಯುತ್ತಲೇ ಇಲ್ಲ. "ಅಂತೂ ಕನ್ಯಾದಾನ ಬೇಡೆಂದಿರಿ, ಬಿಡಿ. ವರೋಪಚಾರವೂ ಬೇಡೆಂದಿರಿ, ಆಯಿತು. ಈಗ ಹೋಗಲಿ, ವರಪೂಜೆಗಾದರೂ ನಿಮ್ಮ ಒಪ್ಪಿಗೆ ಇದೆ ತಾನೆ? "ರಾಮರ ಉತ್ತರ ಏನಿರಬಹುದೆಂದರಿಯದೇ ಕೇಳಿದ್ದರು. "ಖಂಡಿತ ಒಪ್ಪಿಗೆ ಇಲ್ಲ! ಇದೊಂದು ದುಷ್ಟ ಕಾರ್ಯ!! ಅಸಭ್ಯ ಕಾರ್ಯ!!! ತನ್ನ ಎರಡರಷ್ಟು ವಯಸ್ಸಾಗಿರುವ ಭಾವೀ ಅತ್ತೆಯಿಂದ ಉಪಚಾರವೇ? ಅದೂ ಕಾಡಿಗೆ ಹಚ್ಚುವುದೆಂದರೇನು; ಕನ್ನಡಿ ತೋರಿಸುವುದೆಂದರೇನು; ಕಾಲು ತೊಳೆಯುವುದೆಂದರೇನು? ಅತ್ತೆ ಒತ್ತಾಯಿಸಿದರೂ ಕೊಂಚ ಯೋಚನೆ ಮಾಡುವ ಗಂಡು ಅತ್ತೆಗೆ ತಿಳಿ ಹೇಳಿ,  ನೀವು ನನ್ನನ್ನು ನಾರಾಯಣನೆಂದೇ ಭಾವಿಸಿದರೂ ನನಗೆ ವಿಷ್ಣುವಿನಲ್ಲಿರುವ ಯಾವ ಗುಣವೂ ಇಲ್ಲ ’ ಎಂದು ಅರ್ಥ ಮಾಡಿಸಿ ಕಡ್ಡಾಯವಾಗಿ ಯಾರು ವರಪೂಜೆಯನ್ನು ತಿರಸ್ಕರಿಸುತ್ತಾನೆಯೋ, ಅವನೇ ನಿಜವಾದ ಗಂಡು. " 
ಏನು ಹೇಳಲೂ ತೋಚದೇ ನಿಟ್ಟುಸಿರಿಟ್ಟು ಹೇಳಿದರು ಶತಾನಂದರು; " ಆಯಿತು ಬಿಡಿ. ಲಗ್ನ ಪತ್ರಿಕೆ ಬೇಡ, ವರದಕ್ಷಿಣೆ ಬೇಡ, ವರೋಪಚಾರ ಬೇಡ, ಕನ್ಯಾದಾನ ಬೇಡ. ಕೊನೆಗೆ ನಿಶ್ಚಿತಾರ್ಥ?" (ಮುಂದುವರೆಯುವುದು...)
-ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com