ನಿಮ್ಮ ಜಿಎಸ್ಟಿ ತೆರಿಗೆ ಸಲ್ಲಿಕೆಯಲ್ಲಿ ಆಗಿಲ್ಲವೆ ಸೋರಿಕೆ?

ನೂರರಲ್ಲಿ ಮೂವತ್ತಕ್ಕೂ ಹೆಚ್ಚು ಜನ ರಿಟರ್ನ್ ಫೈಲ್ ಮಾಡದೆ ಇರುವುದು ವ್ಯವಸ್ಥೆಯ ಬಗ್ಗೆ ಇರುವ ಮಾಹಿತಿಯ ಕೊರತೆಯನ್ನ ಎತ್ತಿ ತೋರಿಸುತ್ತದೆ. ಜಿಎಸ್ಟಿ ತೆರಿಗೆ ವಿಧಾನ ಹೇಗೆ ಕಾರ್ಯ ನಿರ್ವಹಿಸುತ್ತೆ ತಿಳಿಯೋಣ
ನಿಮ್ಮ ಜಿಎಸ್ಟಿ ತೆರಿಗೆ ಸಲ್ಲಿಕೆಯಲ್ಲಿ ಆಗಿಲ್ಲವೆ ಸೋರಿಕೆ?
ಜಿಎಸ್ಟಿ ಲಕ್ಷಾಂತರ ಸಣ್ಣ ಹಾಗು ಮಧ್ಯಮ ಮಟ್ಟದ ವ್ಯಾಪಾರಿಗಳ ನಿದ್ದೆ ಕೆಡೆಸಿರುವುದು ಸುಳ್ಳಲ್ಲ. ಹಿಂದೆ ಸೇಲ್ಸ್ ಟ್ಯಾಕ್ಸ್ ರಿಟರ್ನ್ ಗಳನ್ನ ಪ್ರತಿ ತಿಂಗಳು ತಮ್ಮ ಪರಿಚಯವಿದ್ದ ಸಣ್ಣ ಪುಟ್ಟ ಆಡಿಟರ್ ಗಳ ಸಹಾಯದಿಂದ ಸಲ್ಲಿಸಿ ಅವರಿಗೂ ಒಂದು ಚಿಕ್ಕ ಫೀಸ್ ಕೊಟ್ಟು ಮುಗಿಸಿಬಿಡುತ್ತಿದರು. ಜಿಎಸ್ಟಿ ಬಗ್ಗೆ ವಿಶದವಾಗಿ ತಿಳಿದುಕೊಂಡವರ ಸಂಖ್ಯೆ ಸದ್ಯಕ್ಕೆ ಬಹಳ ಕಡಿಮೆ ಎಂದು ನಿಸ್ಸಂಕೋಚವಾಗಿ ಹೇಳಬಹುದು. ಅಲ್ಲದೆ ಜಿಎಸ್ಟಿ ಪೋರ್ಟಲ್ ಅತ್ಯಂತ ನಿಧಾನ ಗತಿಯಲ್ಲಿ ಕೆಲಸಮಾಡುತ್ತಿದೆ. 
ನಾವು ಹಾಕಿದ ಮಾಹಿತಿ ಅಲ್ಲಿ ಪ್ರತ್ಯಕ್ಷವಾಗಲು ಗಂಟೆಗಟ್ಟಲೆ ಹಿಡಿಯುತ್ತದೆ. ನಾನು ತುಂಬಿದ ಮಾಹಿತಿ ಸರಿಯಾ ಅಥವಾ ತಪ್ಪಾ? ಎನ್ನುವುದು ತಿಳಿಯದೆ ಸಂಶಯದಲ್ಲಿ ಜನ ದಿನ ದೂಡುತ್ತಿದ್ದಾರೆ. ಇನ್ನು ಅಲ್ಪ ಸ್ವಲ್ಪ ಜ್ಞಾನವಿದ್ದವರು ಹೇಗೂ ನಿಗದಿತ ದಿನಾಂಕದಲ್ಲಿ ರಿಟರ್ನ್ ಫೈಲ್ ಮಾಡಿದ್ದಾರೆ ಆದರೆ ಅದು ಪೂರ್ಣ ಸರಿಯೇ? ಎನ್ನುವುದು ಯಕ್ಷ ಪ್ರಶ್ನೆ. ಹೀಗೆ ಹೇಳಲು ಕಾರಣವಿದೆ ಆ ಕಾರಣವೇನು ಎನ್ನುವುದನ್ನ ಮುಂದಿನ ಸಾಲುಗಳಲ್ಲಿ ತಿಳಿದುಕೊಳ್ಳೋಣ. 
ಅಂಕಿಅಂಶದ ಪ್ರಕಾರ ಜುಲೈ ತಿಂಗಳ ಜಿಎಸ್ಟ್ 3ಬಿ ರಿಟರ್ನ್ ಫೈಲ್ ಮಾಡಿದ ರಾಜ್ಯಗಳಲ್ಲಿ ಕರ್ನಾಟಕಕ್ಕೆ 17 ನೇ ಸ್ಥಾನ ಎನ್ನುವುದು ಮತ್ತು ನೂರರಲ್ಲಿ ಮೂವತ್ತಕ್ಕೂ ಹೆಚ್ಚು ಜನ ರಿಟರ್ನ್ ಫೈಲ್ ಮಾಡದೆ ಇರುವುದು ಈ ಹೊಸ ವ್ಯವಸ್ಥೆಯ ಬಗ್ಗೆ ಇರುವ ಮಾಹಿತಿಯ ಕೊರತೆಯನ್ನ ಎತ್ತಿ ತೋರಿಸುತ್ತದೆ. ಜಿಎಸ್ಟಿ ತೆರಿಗೆ ವಿಧಾನ ಹೇಗೆ ಕಾರ್ಯ ನಿರ್ವಹಿಸುತ್ತೆ ಎನ್ನುವದನ್ನ ಸ್ವಲ್ಪ ತಿಳಿಯೋಣ. 
ಜಿಎಸ್ಟಿ ತೆರಿಗೆ ಯಾರು ಕಟ್ಟಬೇಕು? 
ಜಿಎಸ್ಟಿ ತೆರಿಗೆ ಸಾಮಾನ್ಯ ಪರಿಸ್ಥಿತಿಯಲ್ಲಿ ಗೂಡ್ಸ್ ಅಥವಾ ಸರ್ವಿಸ್ ನೀಡುವರು ಅಂದರೆ ಸಪ್ಲೈರ್ ತೆರಿಗೆಯನ್ನ ಕಟ್ಟಬೇಕು. ಉದಾಹರಣೆ ನೋಡಿ, ಶ್ರೀ ರಾಮ ಎಂಟರ್ಪ್ರೈಸಸ್ ಸಂಸ್ಥೆಗೆ ಶ್ರೀ ಭರತ ಎಂಟರ್ಪ್ರೈಸಸ್ ಸಂಸ್ಥೆ ಒಂದು ವಸ್ತುವನ್ನ ಸರಬರಾಜು ಮಾಡುತ್ತದೆ ಎಂದುಕೊಳ್ಳಿ. ಇಲ್ಲಿ ಶ್ರೀ ರಾಮ ಸಂಸ್ಥೆ ಸರಕು ಅಥವಾ ಸೇವೆ ಪಡೆದ ಸಂಸ್ಥೆ. ಶ್ರೀ ಭರತ ಸೇವೆ ಅಥವಾ ಸರುಕು ನೀಡಿದ ಸಂಸ್ಥೆ. ಈ ಅರ್ಥದಲ್ಲಿ ಶ್ರೀ ರಾಮ ಸಂಸ್ಥೆ ರಿಸೀವರ್ ಮತ್ತು ಶ್ರೀ ಭರತ ಸಂಸ್ಥೆ ಸಪ್ಲೈರ್. ಹೀಗಾಗಿ ಕಾನೂನಿನ ಪ್ರಕಾರ ಶ್ರೀ ಭರತ ಸಂಸ್ಥೆ  ಸರಬರಾಜು ಮಾಡಿದ ವಸ್ತುವಿನ ಮೇಲೆ ಲಾಗೂ ಹಾಗುವ ತೆರಿಗೆಯನ್ನ ಶ್ರೀ ರಾಮ ಸಂಸ್ಥೆಯಿಂದ ವಸೂಲಿ ಮಾಡಿ ಸರಕಾರಕ್ಕೆ ಕಟ್ಟಬೇಕು. 
ಮೇಲಿನ ಉದಾಹರಣೆಯಲ್ಲಿ ಎರಡು ಸಂಸ್ಥೆಗಳ ನಡುವೆ ನೆಡೆದ ವಹಿವಾಟನ್ನು ಉದಾಹರಿಸಲಾಗಿದೆ. ಕೆಲವೊಮ್ಮೆ ವ್ಯಕ್ತಿ ಮತ್ತು ಸಂಸ್ಥೆಯ ನಡುವೆ ಕೂಡ ಈ ರೀತಿಯ ವ್ಯಾಪಾರ ನೆಡೆಯಬಹದು. ಇಲ್ಲಿ  ವ್ಯಕ್ತಿ ಅಥವಾ ಸಂಸ್ಥೆ ಮುಖ್ಯವಾಗುವುದಿಲ್ಲ. ಇಲ್ಲಿ ಮುಖ್ಯವಾಗುವುದು ಸರಬರಾಜುದಾರ ಅಥವಾ ಸಪ್ಲೈರ್ ಯಾರು ಎನ್ನುವುದು. ಹೀಗಾಗಿ ಸಾಮಾನ್ಯ ಪರಿಸ್ಥಿತಿಯಲ್ಲಿ ತೆರಿಗೆ ಸಂಗ್ರಹಿಸಿ ಅದನ್ನ ಸರಕಾರಕ್ಕೆ ಕಟ್ಟುವುದು ಸರಬರಾಜುದಾರನ ಬಾಧ್ಯತೆ.  ಸರಬರಾಜುದಾರನ ವಹಿವಾಟು ವಾರ್ಷಿಕ 20 ಲಕ್ಷಕ್ಕೂ ಹೆಚ್ಚಿದ್ದರೆ ಅಂತವರು ಜಿಎಸ್ಟಿ ಅಡಿಯಲ್ಲಿ ನೋಂದಾವಣಿ ಮಾಡಿಸಿಕೊಳ್ಳಬೇಕು. ಮತ್ತು ಅಂತವರು ತೆರಿಗೆ ಸಂಗ್ರಹಿಸಿ ಸರಕಾರಕ್ಕೆ ಕಟ್ಟಬೇಕು. ಆದರೆ  ಸರಬರಾಜುದಾರನ ವಾರ್ಷಿಕ ವಹಿವಾಟು 75 ಲಕ್ಷಕ್ಕಿಂತ ಕಡಿಮೆ ಇದ್ದು ಆತ ಕಂಪೋಸಿಟ್ ಟ್ಯಾಕ್ಸ್ ಅಡಿಯಲ್ಲಿ ನೊಂದಾವಣಿ ಮಾಡಿಕೊಂಡಿದ್ದರೆ ಆಗ ಆತ ತೆರಿಗೆಯನ್ನ ಪ್ರತ್ಯೇಕ ಸಂಗ್ರಹಿಸುವ ಅವಶ್ಯಕತೆಯಿಲ್ಲ . ಇದು ಕೇವಲ ಸರುಕಿಗೆ ಮಾತ್ರ ಸೀಮಿತ. ಸೇವೆ ಈ ಪರಿಧಿಯಲ್ಲಿ ಬರುವುದಿಲ್ಲ. 
ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎಂದರೇನು? 
ಸರಬರಾಜುದಾರ ಸಂಗ್ರಹಿಸಿದ ತೆರಿಗೆಯನ್ನ ಸೇವೆ ಅಥವಾ ಸರಕು ಖರೀದಿಸಿದ ಸಂಸ್ಥೆ ಸರಕಾರದಿಂದ ವಾಪಸ್ಸು ಪಡೆಯಬಹದು ಈ ಪ್ರಕ್ರಿಯೆಗೆ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಎನ್ನುತ್ತೇವೆ. ಮೇಲೆ ಹೇಳಿದ ಉದಾಹರಣೆಯನ್ನ ಮುಂದುವರಿಸೋಣ. ರಾಮ ಸಂಸ್ಥೆಯಿಂದ ಭರತ ಸಂಸ್ಥೆಯು ಸರಬರಾಜು ಮಾಡಿದ ಹತ್ತು ಸಾವಿರ ಮೌಲ್ಯದ ವಸ್ತುವಿನ ಮೇಲೆ 1,800 ರೂಪಾಯಿ ತೆರಿಗೆ ಸಂಗ್ರಹಿತು ಎಂದುಕೊಳ್ಳಿ ಮತ್ತು ಆ ಹಣವನ್ನ ಅದು ಸರಕಾರಕ್ಕೆ ಸಲ್ಲಿಸಿತು ಅಲ್ಲಿಗೆ ಸರಬರಾಜುದಾರನಾಗಿ ಅವರ ಕೆಲಸ ಮುಗಿಯಿತು. ರಾಮ ಸಂಸ್ಥೆ ಹೀಗೆ ಕಟ್ಟಿದ 1800 ರೂಪಾಯಿಯನ್ನ ಸರಕಾರದಿಂದ ವಾಪಸ್ಸು ಪಡೆಯಬಹದು, ಹೀಗೆ ಕಟ್ಟಿದ ತೆರಿಗೆ ಹಣವನ್ನ ತಾನು ಕಟ್ಟಬೇಕಿರುವ ತೆರಿಗೆ ಹಣದಿಂದ ವಜಾ ಮಾಡಿಕೊಳ್ಳುವ ಪ್ರಕ್ರಿಯೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡೈ ಎನ್ನುತ್ತೇವೆ. ಇದನ್ನ ಇನ್ನಷ್ಟು ಸರಳವಾಗಿ ಹೀಗೆ ವಿವರಿಸಬಹದು. ರಾಮ ಸಂಸ್ಥೆ ಸರಕಾರಕ್ಕೆ ತನ್ನ ವಹಿವಾಟಿನ ಮೇಲೆ ಕಟ್ಟಬೇಕಿರುವ ತೆರಿಗೆ ಮೊತ್ತ 10,000 ರೂಪಾಯಿ ಎಂದುಕೊಳ್ಳಿ. ಆದರೆ ಅವರು ಹತ್ತು ಸಾವಿರ ಕಟ್ಟಬೇಕಾಗಿಲ್ಲ ಏಕೆಂದರೆ ಈಗಾಗಲೇ ಅವರು ತಮ್ಮ ಖರೀದಿಯ ಮೇಲೆ 1800 ರೂಪಾಯಿಯನ್ನ ಪಾವತಿಸಿಯಾಗಿದೆ. ಹೀಗಾಗಿ ರಾಮ ಸಂಸ್ಥೆ  ಹತ್ತು ಸಾವಿರದಲ್ಲಿ ಸಾವಿರದ ಎಂಟು ನೂರು ಕಳೆದು ಉಳಿದ ಎಂಟು ಸಾವಿರದ ಇನ್ನೂರು ರೂಪಾಯಿ ಪಾವತಿಸಿದರೆ ಸಾಕು. ಇಲ್ಲಿ 1800 ರೂಪಾಯಿಯನ್ನ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಎಂದು ಪರಿಗಣಿಸಲಾಗುತ್ತದೆ. 
ರಿವರ್ಸ್ ಟ್ಯಾಕ್ಸ್ ಮೆಕ್ಯಾನಿಸಂ ಎಂದರೇನು? 
ಮೊದಲೇ ಹೇಳಿದಂತೆ ಸಾಮಾನ್ಯವಾಗಿ ತೆರಿಗೆ ಸಂಗ್ರಹಿಸಿ ಸರಕಾರಕ್ಕೆ ಕಟ್ಟುವುದು ಸರಬರಾಜುದಾರನ ಭಾದ್ಯತೆ. ಕೆಲವೊಂದು ಸಂಧರ್ಭದಲ್ಲಿ ಸರಬರಾಜುದಾರನ ಬದಲು ಖರೀದಿದಾರನೇ ಸರಕಾರಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ. ಈ ಪ್ರಕ್ರಿಯೆಗೆ ರಿವರ್ಸ್ ಟ್ಯಾಕ್ಸ್ ಮೆಕ್ಯಾನಿಸಂ ಎನ್ನುತ್ತೇವೆ. ಉದಾಹರಣೆ ನೋಡಿ ಶಾಮ್ ಎನ್ನುವ ಸಂಸ್ಥೆ ಬೀಮ್ ಎನ್ನುವ ಸಂಸ್ಥೆಯಿಂದ ಸರಕು ಖರೀಸುತ್ತದೆ. ಆದರೆ ಬಿಮ್ ಸಂಸ್ಥೆಯು ಜಿಎಸ್ಟಿ ಅಡಿಯಲ್ಲಿ ನೊಂದಾಯಿತ ವರ್ತಕನಾಗಿಲ್ಲದೆ ಇರುವ ಕಾರಣ ಆ ಸಂಸ್ಥೆ ತೆರಿಗೆಯನ್ನ ಶಾಮ್ ಕಂಪನಿಯಿಂದ ವಸೂಲಿ ಮಾಡಲು ಬರುವುದಿಲ್ಲ. ಈ ಸಂಧರ್ಭದಲ್ಲಿ ಶಾಮ್ ಕಂಪನಿ ತನ್ನ ಖರೀದಿ ಮೇಲೆ ಲಾಗೂ ಆಗುವ ತೆರಿಗೆಯ ಮೊತ್ತವನ್ನ ಸರಕಾರಕ್ಕೆ ಕಟ್ಟಬೇಕು. 
ಖರ್ಚಿನ ಮೇಲೂ ಇದೆಯೇ ರಿವರ್ಸ್ ಟ್ಯಾಕ್ಸ್ ಮೆಕ್ಯಾನಿಸಂ? 
ರಿಟರ್ನ್ ಫೈಲ್ ಮಾಡಿದವರೆಲ್ಲ ಸರಿಯಾಗಿ ಮಾಡಿದ್ದಾರೆಯೇ? ಎನ್ನುವ ಪ್ರಶ್ನೆಯನ್ನ ಲೇಖನದ ಮೊದಲ ಪ್ಯಾರಾದಲ್ಲಿ ವ್ಯಕ್ತಪಡಿಸಲಾಗಿತ್ತು ಮತ್ತು ಅದಕ್ಕೆ ಕಾರಣವಿದೆ ಎನ್ನುವ ಸುಳಿವು ಕೂಡ ನೀಡಲಾಗಿತ್ತು. ಸಾಮಾನ್ಯವಾಗಿ ವ್ಯಕ್ತಿ ಅಥವಾ ಸಂಸ್ಥೆಗಳು ತಮ್ಮ ಟರ್ನ್ಓವರ್ ಮೇಲೆ ಎಷ್ಟು ತೆರಿಗೆ ಕಟ್ಟಬೇಕು ಎನ್ನುವುದನ್ನ ಲೆಕ್ಕ ಹಾಕುತ್ತವೆ, ಮತ್ತು ತಮ್ಮ ಖರೀದಿ ಮೇಲೆ ಆಗಲೇ ನೀಡಿರುವ ತೆರಿಗೆಯನ್ನ ತಾವು ಕಟ್ಟಬೇಕಿರುವ ತೆರಿಗೆಯಿಂದ ಕಳೆದು ಮಿಕ್ಕ ತೆರಿಗೆಯನ್ನ ಕಟ್ಟುತ್ತವೆ. ಇದು ತಪ್ಪು ಏಕೆಂದರೆ ಜಿಎಸ್ಟಿ ಜಾರಿಗೆ ತಂದಿರುವ ಉದ್ದೇಶ ಯಾವುದೇ ವ್ಯವಹಾರ ಅಥವಾ ವಹಿವಾಟು ನೊಂದಾಯಿತ ವರ್ತಕ ಅಥವಾ ಸಂಸ್ಥೆಯ ಜೊತೆಯಲ್ಲಿ ಮಾಡಬೇಕು ಎನ್ನುವುದು ಮತ್ತು ಎಲ್ಲಕ್ಕೂ ರಸೀದಿ ಇರಬೇಕು ಎನ್ನುವುದು ಆ ಮೂಲಕ ವ್ಯಾಪಾರದಲ್ಲಿ ಹೆಚ್ಚಿನ ಪಾರದರ್ಶಕತೆ ಹೆಚ್ಚಿಸುವುದು, ಹೀಗಾಗಿ ಸಂಸ್ಥೆ ಯಾವುದಾದರು ಖರ್ಚನ್ನ ರಸೀದಿ ಇಲ್ಲದೆ ಮಾಡಿದ್ದಾರೆ ಅದರ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ. ಗಮನಿಸಿ ಇಲ್ಲಿ ಎಲ್ಲಾ ನೊಂದಾಯಿತ ಸಂಸ್ಥೆ ಅಥವಾ ವ್ಯಕ್ತಿಗಳು ಅತ್ಯಂತ ಜಾಗರೋಕರಾಗಿರುವ ಅವಶ್ಯಕತೆಯಿದೆ. ನೀವು ಮಾಡಿದ ಖರ್ಚಿನ ಮೇಲೆ ತೆರಿಗೆ ನಿಮ್ಮ ಸರಬರಾಜುದಾರ ಸಂಗ್ರಹಿಸದೆ ಹೋದರೆ ಅದು ನಿಮಗೆ ಉಳಿತಾಯ ಎಂದುಕೊಂಡರೆ ಅದು ತಪ್ಪು. ಅದರ ಮೇಲೆ ತೆರಿಗೆ ಕಟ್ಟಬೇಕಾಗುತ್ತದೆ ಇದೆ ರಿವರ್ಸ್ ಟ್ಯಾಕ್ಸ್ ಮೆಕ್ಯಾನಿಸಂ. ಉದಾಹರಣೆ ನೋಡೋಣ.
ಶ್ರೀ ರಾಮ ಸಂಸ್ಥೆಯ ವಾರ್ಷಿಕ ವಹಿವಾಟು - 10 ಲಕ್ಷ
ತೆರಿಗೆ 12 ಪ್ರತಿಶತ -1.20 ಲಕ್ಷ
ಖರೀದಿ ಮೇಲೆ ಕೊಟ್ಟ ತೆರಿಗೆ - 0.20 ಲಕ್ಷ (20 ಸಾವಿರ)
ಕಟ್ಟಬೇಕಾದ ಬಾಕಿ ತೆರಿಗೆ - 1 ಲಕ್ಷ

ಇದು ಸಾಮಾನ್ಯವಾಗಿ ಎಲ್ಲರಿಗೆ ಇಂದಿನ ಮಟ್ಟಿಗೆ ತಿಳಿದಿರುವ ಮಾಹಿತಿ. ಇದೆ ರಾಮ ಸಂಸ್ಥೆ ತನ್ನ ವಹಿವಾಟು ನೆಡೆಸುವ ಜಾಗಕ್ಕೆ ಬಾಡಿಗೆ ಎರಡು ಲಕ್ಷ ವಾರ್ಷಿಕ ನೀಡಿದ್ದರೆ ಅದರ ಮೇಲೆ 18 ಪ್ರತಿಶತ 36 ಸಾವಿರ ರೂಪಾಯಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಬಹದು. ಅಂದರೆ ಏನಾಗುತ್ತೆ ಉದಾಹರಣೆ ಮುಂದುವರಿಸಿ ನೋಡೋಣ.
ಶ್ರೀ ರಾಮ ಸಂಸ್ಥೆಯ ವಾರ್ಷಿಕ ವಹಿವಾಟು - 10 ಲಕ್ಷ
ತೆರಿಗೆ 12 ಪ್ರತಿಶತ - 1.20 ಲಕ್ಷ
ಖರೀದಿ ಮೇಲೆ ಕೊಟ್ಟ ತೆರಿಗೆ - 0.2 ಲಕ್ಷ (20 ಸಾವಿರ)
ಕಟ್ಟಬೇಕಾದ ಬಾಕಿ ತೆರಿಗೆ - 1 ಲಕ್ಷ
ಬಾಡಿಗೆ ಮೇಲೆ ಕಟ್ಟಿದ ತೆರಿಗೆ - 36 ಸಾವಿರ
ಬಾಕಿ ತೆರಿಗೆ - 64 ಸಾವಿರ

ಆಕಸ್ಮಾತ್ ನೀವು ಬಾಡಿಗೆಯ ಮೇಲೆ ತೆರಿಗೆ ಕಟ್ಟದೆ ಇದ್ದರೆ ಅದರ ಮೇಲಿನ ಹಣವನ್ನ ರಾಮ ಸಂಸ್ಥೆಯೇ ಕಟ್ಟಬೇಕಾಗುತ್ತದೆ. ಇದೆ ರಿವರ್ಸ್ ಟ್ಯಾಕ್ಸ್ ಮೆಕ್ಯಾನಿಸಂ ಉದಾಹರಣೆ ನೋಡೋಣ.
ಶ್ರೀ ರಾಮ ಸಂಸ್ಥೆಯ ವಾರ್ಷಿಕ ವಹಿವಾಟು - 10 ಲಕ್ಷ
ತೆರಿಗೆ 12 ಪ್ರತಿಶತ - 1.20 ಲಕ್ಷ
ಖರೀದಿ ಮೇಲೆ ಕೊಟ್ಟ ತೆರಿಗೆ - 0.2 ಲಕ್ಷ (20 ಸಾವಿರ)
ಕಟ್ಟಬೇಕಾದ ಬಾಕಿ ತೆರಿಗೆ - 1 ಲಕ್ಷ
ಬಾಡಿಗೆ ಮೇಲೆ ಕಟ್ಟಲು ಮರೆತೆ ತೆರಿಗೆ - 36 ಸಾವಿರ ಅಥವಾ 0.36 ಲಕ್ಷ
ಒಟ್ಟು ಕಟ್ಟಾ ಬೇಕಾದ ತೆರಿಗೆ - 1. 36 ಲಕ್ಷ
ಜಿಎಸ್ಟಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನ ವಿವರವಾಗಿ ತಿಳಿಯಬೇಕಾದ ಅವಶ್ಯಕತೆ ಎಲ್ಲಾ ನೊಂದಾಯಿತ ವರ್ತಕರಿಗೂ ಹಾಗು ಸಂಸ್ಥೆಗಳಿಗೂ ಹೆಚ್ಚಾಗಿದೆ. ಅಲ್ಲದೆ ಜಿಎಸ್ಟಿಯ ಮೂಲ ಉದ್ದೇಶ ನೊಂದಾಯಿತವಲ್ಲದ ಜನರನ್ನ ನೊಂದಾವಣಿ ಮಾಡಿಸಿಕೊಳ್ಳಲು ಪ್ರೇರೇಪಿಸುವುದು ಮತ್ತು ಸಾಧ್ಯವಾದಷ್ಟು ವ್ಯಾಪಾರದಲ್ಲಿ ಪಾರದರ್ಶಕತೆ ಹೆಚ್ಚಿಸುವುದು ಆಗಿದೆ. ಈ ನಿಟ್ಟಿನಲ್ಲಿ ಜಿಎಸ್ಟಿ ಬಗ್ಗೆ ಹೆಚ್ಚು ಮಾಹಿತಿ ತಿಳಿದು ಕೊಂಡಷ್ಟು ಉತ್ತಮ. ಇಲ್ಲವಾದರೆ ಮುಂದಿನದಿನಗಳಲ್ಲಿ ನೀವು ಕಟ್ಟಿದ ತೆರಿಗೆ ಮೊತ್ತ ಸರಿಯಾಗಿಲ್ಲ ಎನ್ನುವ ನೋಟೀಸ್ ಬರಬಹದು, ಅಂತಹ ನೋಟಿಸ್ ನಿಮ್ಮ ಲಾಭಕ್ಕಾದರೆ ಸರಿ. ಇನ್ನಷ್ಟು ತೆರಿಗೆ ಹಣ ತುಂಬಬೇಕು ಎಂದಾದರೆ? ಹೀಗಾಗಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಮತ್ತು ರಿವರ್ಸ್ ಟ್ಯಾಕ್ಸ್ ಮೆಕ್ಯಾನಿಸಂ ಬಗ್ಗೆ ಇರಲಿ ಹೆಚ್ಚು ಗಮನ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com