ಮಧ್ಯಮ ವರ್ಗ ಎನ್ನುವ ಮಾಯಾಜಾಲ ಹರಡಿದೆ ಜಗದಗಲ!

ಮಧ್ಯಮ ವರ್ಗ ಅಥವಾ ಶ್ರೀಮಂತ ಎಂದು ವರ್ಗಿಕರಿಸಲು ಏನಾದರೂ ಡೆಫಿನಿಷನ್ ಇದೆಯಾ? ಹೌದು ಡೆಫಿನಿಷನ್ ಇದೆ. ಆದರೆ....
ಹಣಕ್ಲಾಸು
ಹಣಕ್ಲಾಸು
ನಿತ್ಯದ ಜೀವನದಲ್ಲಿ ಒಂದಲ್ಲ ಒಂದು ಬಾರಿ ನೀವು ಕೂಡ 'ನಾನು ಮಧ್ಯಮ ವರ್ಗಕ್ಕೆ ಸೇರಿದವನು' ಎನ್ನುವ ಹೇಳಿಕೆ ಕೊಟ್ಟಿರುತ್ತೀರಿ. ಸ್ನೇಹಿತರೊಂದಿಗೆ ಮಾತನಾಡುವಾಗ ಅಥವಾ ನಿಮ್ಮ ಪರಿಚಯ ಹೇಳಿಕೊಳ್ಳುವ ಸಂದರ್ಭದಲ್ಲಿ ಖಂಡಿತ ಒಮ್ಮೆಯಾದರೂ ನಾನು ಮಿಡೆಲ್ ಕ್ಲಾಸ್ ನಿಂದ ಬಂದಿದ್ದೇನೆ, ಅಥವಾ ನನ್ನದು ಮಿಡ್ಲ್ ಕ್ಲಾಸ್ ಅಪ್ ಬ್ರಿಗಿಂಗ್ ಎನ್ನುವ ಮಾತು ನಿಮ್ಮಿಂದ ಬಂದೆ ಇರುತ್ತದೆ. ಇದು ಅತ್ಯಂತ ಸಾಧಾರಣ ಮತ್ತು ಸಾಮಾನ್ಯ ವಿಷಯವಾಗಿದೆ. ನೀವು ನಿಮ್ಮ ಅಕ್ಕಪಕ್ಕದವರನ್ನ, ಬಂಧು ಮಿತ್ರರನ್ನ ಕೇಳಿ ಅವರೆಲ್ಲರ ಸಿದ್ದ ಉತ್ತರ 'ನಾವು ಮಿಡ್ಲ್ ಕ್ಲಾಸ್/ಮಧ್ಯಮ ವರ್ಗದ ಜನ' ಎನ್ನುವುದೇ ಆಗಿರುತ್ತದೆ.
ಭಾರತದಲ್ಲಂತೂ ಮುಕ್ಕಾಲು ಪಾಲು ಜನ ತಮ್ಮನ್ನ ತಾವೇ ಮಿಡ್ಲ್ ಕ್ಲಾಸ್ ಎಂದು ಸ್ವಘೋಷಣೆ ಮಾಡಿಕೊಂಡಿದ್ದಾರೆ. ಈಗ ನೀವು ಕೇಳಬಹದು ಹೌದು ನಾವು ಮಧ್ಯಮ ವರ್ಗದ ಜನ ಹಾಗೆ ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ? ಬಡವ, ಮಧ್ಯಮ ವರ್ಗ ಅಥವಾ ಶ್ರೀಮಂತ ಎಂದು ವರ್ಗಿಕರಿಸಲು ಏನಾದರೂ ಡೆಫಿನಿಷನ್ ಇದೆಯಾ? ಹೌದು ಡೆಫಿನಿಷನ್ ಇದೆ. ಆದರೆ ಅದನ್ನ ಎಲ್ಲಾ ದೇಶಗಳಿಗೂ ಅನ್ವಯಿಸಲು ಬರುವುದಿಲ್ಲ. ಬಡತನತದ ವ್ಯಾಖ್ಯೆ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಹಾಗೆಯೇ ಸಿರಿತನ ಮತ್ತು ಮಧ್ಯಮ ವರ್ಗದ ವ್ಯಾಖ್ಯೆ ಕೂಡ ಬದಲಾಗುತ್ತದೆ. ಇಂದಿನ ಹಣಕ್ಲಾಸು ಅಂಕಣದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇದರ ವ್ಯಾಖ್ಯೆ ಮತ್ತು ಭಾರತದ ಮಟ್ಟದಲ್ಲಿ ಇದರ ಅರ್ಥವನ್ನ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. 
ಬಡತನ ರೇಖೆ ಅಥವಾ ಬಿಲೋ  ಪಾವರ್ಟಿ ಲೈನ್: ಬದುಕಲು ಅತ್ಯಂತ ಅವಶ್ಯಕವಾಗಿ ಏನು ಬೇಕು ಅಷ್ಟನ್ನು ಪೂರೈಸಲು ಎಷ್ಟು ಹಣ ಬೇಕು ಅಷ್ಟು ಹಣ ಮಾತ್ರ ಗಳಿಸಲು ಸಾಧ್ಯವಾದ ಜನರನ್ನ ಬಡತನ ರೇಖೆಯಲಿದ್ದಾರೆ ಎಂದು ವರ್ಗಿಕರಿಸಲಾಗುತ್ತದೆ. ಭಾರತದಂತ ದೇಶದಲ್ಲಿ 35 ರಿಂದ 43 ರೂಪಾಯಿ ನಿತ್ಯ ಗಳಿಸುವ ಜನರನ್ನ ಬಡತನ ರೇಖೆಯಲ್ಲಿದ್ದಾರೆ ಎನ್ನುತ್ತಾರೆ. ಎಲ್ಲಕ್ಕೂ ಡಾಲರ್ ಅನ್ನು ಮಾನದಂಡವಾಗಿ ಒಪ್ಪಿರುವ ನಾವು ಅಮೇರಿಕಾದ ಡೆಫಿನಿಷನ್ ಅನ್ನು ಅಂತರರಾಷ್ಟ್ರೀಯ ಎಂದು ಒಪ್ಪುವುದಾದರೆ ಒಬ್ಬ ವ್ಯಕ್ತಿ ನಿತ್ಯ ಎರಡು ಡಾಲರ್ ಗಿಂತ (130 ರೂಪಾಯಿ) ಕಡಿಮೆ ದುಡಿದರೆ ಅಂತವನ್ನ ಬಡವ ಎನ್ನಬಹದು. 
ಕಡಿಮೆ ಆದಾಯದ ಜನ ಅಥವಾ ಲೊವೆರ್ ಇನ್ಕಮ್ ಗ್ರೂಪ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂವತ್ತು ಸಾವಿರ ಡಾಲರ್ ಗಿಂತ(20 ಲಕ್ಷ ರೂಪಾಯಿ) ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬವನ್ನ ಕಡಿಮೆ ಆದಾಯ ಹೊಂದಿರುವರು ಎಂದು ಗುರುತಿಸಲಾಗುತ್ತದೆ. ಹೆಚ್ಚುತ್ತಿರುವ ಬೆಲೆ ಬದಲಾಗುತ್ತಿರುವ ಜೀವನ ಶೈಲಿ ಭಾರತದಲ್ಲಿ ಕೂಡ ಸಾಕಷ್ಟು ಬದಲಾವಣೆ ತಂದಿದೆ. ವಾರ್ಷಿಕ ಐದು ಲಕ್ಷಕ್ಕೂ ಕಡಿಮೆ ಆದಾಯ ಹೊಂದಿರುವ ಕುಟುಂಬವನ್ನ ಲೊ ಇನ್ಕಮ್ ಗ್ರೂಪ್ ಎನ್ನಲು ಅಡ್ಡಿ ಇಲ್ಲ. ಅಂಕಿಅಂಶದ ಪ್ರಕಾರ ಭಾರತದ ಎಪ್ಪತ್ತು ಪ್ರತಿಶತ ಜನರು ಈ ವರ್ಗಿಕರಣದಲ್ಲಿ ಬರುತ್ತಾರೆ. 
ಲೊವೆರ್ ಮಿಡ್ಲ್ ಕ್ಲಾಸ್ ಅಥವಾ ಕೆಳ ಮಧ್ಯಮ ವರ್ಗ: ಮೂವತ್ತು ಸಾವಿರ ಡಾಲರ್ ನಿಂದ ಐವತ್ತು ಸಾವಿರ ಡಾಲರ್ ವಾರ್ಷಿಕ ವರಮಾನ ಇರುವ ಕುಟುಂಬವನ್ನ ಈ ವರ್ಗಿಕರಣಕ್ಕೆ ಸೇರಿಸಲಾಗುತ್ತದೆ. ಭಾರತದಲ್ಲಿ ವಾರ್ಷಿಕ ಆರು ಲಕ್ಷ ವರಮಾನ ಇರುವ ಕುಟುಂಬವನ್ನ ಇಲ್ಲಿ ಸೇರಿಸಬಹದು. 
ಮಿಡ್ಲ್ ಕ್ಲಾಸ್ ಅಥವಾ ಮಧ್ಯಮ ವರ್ಗ: ಭಾರತ ಮಾತ್ರ ಅಂತ ಅಲ್ಲ ಜಗತ್ತಿನ ಬಹುತೇಕ ಜನ ತಮ್ಮನ್ನ ತಾವೇ ಈ ವರ್ಗಿಕರಣದಲ್ಲಿ ಕಾಣುತ್ತಾರೆ. ಒಂದು ಮಟ್ಟದ ಬದುಕ ಬದುಕಲು ಇಂತಿಷ್ಟು ಆದಾಯ ಇರಬೇಕು ಎನ್ನುವುದನ್ನ ಆರ್ಥಿಕ ತಜ್ಞರು ಸಾಮಾಜಿಕ ಪ್ರಮಾಣಿತೆಗೆ ಅನುಗುಣವಾಗಿ ನಿಗದಿಪಡಿಸಿದ್ದಾರೆ. ಅದರಂತೆ ಐವತ್ತು ಸಾವಿರದಿಂದ ಒಂದು ಲಕ್ಷ ಡಾಲರ್ (30ರಿಂದ 65 ಲಕ್ಷ ರೂಪಾಯಿ) ವಾರ್ಷಿಕ  ವರಮಾನ ಇರುವ ಕುಟುಂಬವನ್ನ ಮಧ್ಯಮ ವರ್ಗ ಎನ್ನುತ್ತಾರೆ. ಭಾರತದಲ್ಲಿ 9 ರಿಂದ 12 ಲಕ್ಷ ವಾರ್ಷಿಕ ಆದಾಯ ಇರುವರನ್ನ ಮಧ್ಯಮ ವರ್ಗ ಎನ್ನಬಹದು. 
ಅಪ್ಪರ್ ಮಿಡ್ಲ್ ಕ್ಲಾಸ್ ಅಥವಾ ಮೇಲ್ಮಧ್ಯಮ ವರ್ಗ: ಒಂದು ಲಕ್ಷ ಡಾಲರ್ನಿಂದ ಮೂರುವರೆ ಲಕ್ಷ ಡಾಲರ್ ವಾರ್ಷಿಕ ಆದಾಯ ಇರುವ ಕುಟುಂಬವನ್ನ ಮೇಲ್ಮಧ್ಯಮ ವರ್ಗ ಎನ್ನಲಾಗುತ್ತದೆ. ಭಾರತದಲ್ಲಿ ಹಂದಿನೆಂಟರಿಂದ ಇಪ್ಪತ್ತನಾಕು ಲಕ್ಷ ಆದಾಯ ಇರುವ ಕುಟುಂಬವನ್ನ ಅಪ್ಪರ್ ಮಿಡ್ಲ್ ಕ್ಲಾಸ್ ಎನ್ನಬಹದು. ಭಾರತದಲ್ಲಿ ಇಂತಹ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಜನರ ಸಂಖ್ಯೆ ಕೇವಲ ಒಂದು ಪ್ರತಿಶತವಷ್ಟೇ ಎನ್ನುತ್ತದೆ ಅಂಕಿ-ಅಂಶ. 
ರಿಚ್ ಕ್ಲಾಸ್ ಅಥವಾ ಶ್ರೀಮಂತ ಜನ: ಮೂರು ಲಕ್ಷ ಐವತ್ತು ಸಾವಿರ ಡಾಲರ್ ಗಿಂತ ವಾರ್ಷಿಕ ಆದಾಯ ಹೆಚ್ಚಾಗಿದ್ದರೆ ಅಂತವರನ್ನ ರಿಚ್ ಅಥವಾ ಶ್ರೀಮಂತರು ಎನ್ನಬಹದು. ಭಾರತದಲ್ಲಿ ಮೂವತ್ತಾರು ಲಕ್ಷದಿಂದ ಐವತ್ತು ಲಕ್ಷದವರೆಗೆ ವಾರ್ಷಿಕ ಆದಾಯ ಇದ್ದರೆ ಅಂತವರನ್ನ ಶ್ರೀಮಂತರು ಎಂದು ಗುರುತಿಸಬಹದು. 
ಎಲೈಟ್ ಕ್ಲಾಸ್ ಅಥವಾ HNI (ಹೈ ನೆಟ್ ವರ್ತ್ ಇಂಡಿವಿಜುಯಲ್): ವಾರ್ಷಿಕ ಆದಾಯ ಎಪಾಟು ಲಕ್ಷಕ್ಕೂ ಹೆಚ್ಚಿದ್ದು ಆಸ್ತಿಯ ಮೊತ್ತ ಕನಿಷ್ಠ ಆರೂವರೆ ಕೋಟಿ ರೂಪಾಯಿಗೂ ಹೆಚ್ಚಿದ್ದರೆ ಅಂತವರನ್ನ ಎಲೈಟ್ ಕ್ಲಾಸ್ ಅಥವಾ HNI ಎಂದು ವರ್ಗಿಕರಿಸಬಹದು. 
ಕ್ರೀಮ ದೇ ಲಾ ಕ್ರೀಮ ಅಥವಾ ಅಲ್ಟ್ರಾ (UHNI ) ನೆಟ್ ವರ್ತ್ ಇಂಡಿವಿಜುಯಲ್: ಕನಿಷ್ಠ 25 ಕೋಟಿ ಮೀರಿದ ಆಸ್ತಿ ಉಳ್ಳವರನ್ನ UHNI ಎನ್ನುವ ವರ್ಗಿಕರಣಕ್ಕೆ ಸೇರಿಸಬಹದು. ವಾರ್ಷಿಕ ಆದಾಯ ಅಥವಾ ಹಣ ಇವರಿಗೆ ಮುಖ್ಯವಲ್ಲ. ಇಂತವರಿಗೆ ಅಧಿಕಾರದ ಆಸೆ ಇರುತ್ತದೆ. 
ಸಾಹುಕಾರರ ಸಾಹುಕಾರ ಅಥವಾ Richie rich: ಕನಿಷ್ಠ ನೂರು ಕೋಟಿಗೂ ಮೀರಿದ ಆಸ್ತಿ, ಜಗತ್ತಿನ ಬೇಕು ಬೇಡ ನಿರ್ಧರಿಸುವ ಪಾಲಿಸಿ ಮೇಕಿಂಗ್ ನಂತಹ ವಿಷಯದಲ್ಲಿ ಇವರಿರುತ್ತಾರೆ. ಜಗತ್ತು ಇವರಿಚ್ಛೆಯಂತೆ ನೆಡೆಯುತ್ತದೆ. 
ಮೊದಲೇ ಹೇಳಿದಂತೆ ದೇಶದಿಂದ ದೇಶಕ್ಕೆ ಇವುಗಳ ವ್ಯಾಖ್ಯೆ ಬದಲಾಗುತ್ತದೆ. ಅಂದರೆ ಸಂಖ್ಯೆ ಬದಲಾಗುತ್ತದೆ ಅಷ್ಟೇ ಉಳಿದಂತೆ ಮಿಕ್ಕೆಲ್ಲಾ ಅದೇ ರೀತಿ ಕಾರ್ಯ ನಿರ್ವಹಿಸುತ್ತದೆ. 
ಇಷ್ಟೆಲ್ಲಾ ಏಕೆ ಹೇಳ ಬೇಕಾಯಿತೆಂದರೆ ನಮ್ಮಲ್ಲಿ ಮತ್ತು ಜಗತ್ತಿನ ಮುಕ್ಕಾಲು ಪಾಲು ದೇಶಗಳಲ್ಲಿ ಮುಕ್ಕಾಲು ಪಾಲು ಜನ ತಮ್ಮನ್ನ ತಾವೇ ಮಧ್ಯಮ ವರ್ಗ ಎಂದು ತಿಳಿದುಕೊಂಡಿದ್ದಾರೆ. ಈ ಪದವನ್ನು ಬಹಳ ಜಾಳಾಗಿ ಉಪಯೋಗಿಸುತ್ತೇವೆ. ಭಾರತದಲ್ಲಿ ಈ ಸ್ಟ್ಯಾಂಡರ್ಡ್ ಪ್ರಕಾರ ನೋಡುವುದಾದರೆ ಜನಸಂಖ್ಯೆಯ ಎರಡು ಅಥವಾ ಮೂರು ಪ್ರತಿಶತ ಜನರನ್ನ ಮಧ್ಯಮ ವರ್ಗ ಎಂದು ಕರೆಯಬಹದುದಷ್ಟೇ!. ಜಾಗತಿಕವಾಗಿ ನೋಡುವುದಾದರೆ ದಿನಕ್ಕೆ ಇಪ್ಪತ್ತು ಡಾಲರ್ ಪ್ರತಿ ವ್ಯಕ್ತಿಗೆ ಗಳಿಕೆಯಿದ್ದರೆ ಆತನನ್ನ ಮಧ್ಯಮವರ್ಗಕ್ಕೆ ಸೇರಿದವನು ಎನ್ನಬಹದು. ಹೀಗೆ ನೋಡಿದರೆ ಜಗತ್ತಿನ ಹದಿಮೂರು ಪ್ರತಿಶತ ಮಾತ್ರ ಮಧ್ಯಮ ವರ್ಗ ಎಂದು ಹೇಳಿಕೊಳ್ಳಲು ಅರ್ಹತೆ ಪಡೆಯುತ್ತಾರೆ. ಜಾಗತಿಕ ಸ್ಟ್ಯಾಂಡರ್ಡ್ ಮತ್ತು ಭಾರತೀಯ ಪ್ರಮಾಣಿತ ಏನೆಂದು ಗೊತ್ತಾಯಿತಷ್ಟೆ. ನೀವು ಯಾವ ವರ್ಗ? ಎನ್ನುವ ತಿದುಕೊಳ್ಳಿ. ಇದು ಅತಿ ಮುಖ್ಯ ನಾವೆಲ್ಲಿದ್ದೇವೆ ಎನ್ನುವುದು ತಿಳಿಯದಿದ್ದರೆ ನಾವೆಲ್ಲಿಗೆ ಹೋಗಬೇಕು ಎಂದು ನಿರ್ಧರಿಸುವುದು ಹೇಗೆ? ನಮ್ಮ ಹಣಕಾಸಿನ ಪರಿಸ್ಥಿತಿ ನಮಗೆ ತಿಳಿದ್ದಿದ್ದರೆ ಮುಂದಿನ ಜೀವನಕ್ಕೆ ಪ್ಲಾನ್ ಮಾಡಲು ಅದು ಸಹಾಯ ಮಾಡುತ್ತದೆ. ಇಷ್ಟು ದಿನ ಮಿಡ್ಲ್ ಕ್ಲಾಸು ಎಂದುಕೊಂಡು ನೆಮ್ಮದಿಯಾಗಿದ್ದೆ ಇದೇನಿದು? ಎನ್ನುವ ಮನಸ್ಥಿತಿ ಬೇಡ. ನಿಜವಾದ ಮಿಡ್ಲ್ ಕ್ಲಾಸ್ ಅಥವಾ ಎಲೈಟ್ ವರ್ಗಕ್ಕೆ ಸೇರುವತ್ತ ಗಮನವಿರಲಿ. ಅದು ಅಸಾಧ್ಯವೇನು ಅಲ್ಲ. 

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com