ಸಂಗ್ರಹ ಚಿತ್ರ
ಅಂಕಣಗಳು
'ಪಟ್ಟ ಕಟ್ಟುವೆನೆಂದು ಹೇಳಿದಾಗ ಅವರ ಒಂದು ಮಾತು ಆ ಹುದ್ದೆಯ ಗಾಂಭೀರ್ಯವನ್ನೂ, ಜವಾಬ್ದಾರಿಯನ್ನೂ, ಭಾರವನ್ನೂ ಹೇಳಿಬಿಟ್ಟಿತು'!
ಕೈಮುಗಿದು ನಿಂತಿದ್ದ ತಮ್ಮನ ತಲೆ ನೇವರಿಸಿ ಹೇಳಿದರು , " ಲಕ್ಷ್ಮಣ, ಯಾವಾಗಲೂ ಜವಾಬ್ದಾರಿಗಳನ್ನು ದೊಡ್ಡವರು ನಿರ್ವಹಿಸಬೇಕು ಚಿಕ್ಕವರು ಸುಖವನ್ನು ಅನುಭವಿಸಬೇಕು. ನನಗೆ ಸಿಂಹಾಸನ ಸಿಕ್ಕರೆ ಅದರ...
ಕೌಸಲ್ಯೆಯ ಬಾಯ ತುದಿಗೆ ಬಂದಿತು. ಆದರೂ ತಡೆದಳು. ತನಗೆ ಗೊತ್ತಿರುವುದನ್ನು ಹೇಳಿದರೆ, ಅದರ ಪರಿಣಾಮ ಏನಾಗಬಹುದೋ? ಹಾಗೆ ಹೇಳುವಂತಿದ್ದರೆ ಯಜಮಾನರೇ ಹೇಳಬಹುದಿತ್ತು. ಅವರು ಹೇಳಿಲ್ಲವೆಂದರೆ ಏನೋ ಕಾರಣವಿರಬೇಕು. ರಾಜರೇ ಹೇಳದ ಮೇಲೆ ತಾನೇಕೆ ಹೇಳಬೇಕು? ಹೀಗಾಗಿ ಮಾತು ಬದಲಿಸಿದಳು. "ಏಳು ರಾಮ ಊಟಕ್ಕೆ! " ಶ್ರೀರಾಮರು "ಇಲ್ಲಮ್ಮ, ಆಗಿದೆ ಆಗಲೆ. "ಎಂದು ಲಕ್ಷ್ಮಣನ ಕಡೆ ತಿರುಗಿ ಹೇಳಿದರು."
ಲಕ್ಷ್ಮಣ, "ನೀನಿನ್ನೂ ಚಿಕ್ಕವ. ಯಾವಾಗಲೂ ಜವಾಬ್ದಾರಿಗಳನ್ನು ದೊಡ್ಡವರು ನಿರ್ವಹಿಸಬೇಕು ಚಿಕ್ಕವರು ಸುಖವನ್ನು ಅನುಭವಿಸಬೇಕು. ಈಗ ನನಗೆ ಸಿಂಹಾಸನ ಸಿಕ್ಕರೆ ಅದರ ಹಕ್ಕುಗಳನ್ನು ನೀನು ನನ್ನ ತಮ್ಮನಾಗಿ ಅನುಭವಿಸು. ಅದರ ಜವಾಬ್ದಾರಿಗಳನ್ನು, ಬಾಧ್ಯತೆಗಳನ್ನು ನಾನು ನಿರ್ವಹಿಸುತ್ತೇನೆ".
ಕೈಮುಗಿದು ನಿಂತಿದ್ದ ತಮ್ಮನ ತಲೆ ನೇವರಿಸಿ ಹೇಳಿದರು, "ಲಕ್ಷ್ಮಣ, ಇದು ಬಹುದೊಡ್ಡ ರಾಜ್ಯ. ನಾನೊಬ್ಬನೇ ಎಲ್ಲವನ್ನೂ ನೋಡುವುದು ಕಷ್ಟ. ನೀನೂ ನನಗೆ ಸಹಾಯ ಮಾಡು. ಈ ರಾಜ್ಯವನ್ನು ಆಳು. ನೀನು ನನ್ನ ಮತ್ತೊಂದು ಪ್ರಾಣದಂತೇ ಇದ್ದೀಯ. ಈ ರಾಜ್ಯ ನಿನಗೂ ಸೇರಿದಂತೆಯೇ. ಹಾಗೇ ಈ ರಾಜಭೋಗಗಳನ್ನು ಅನುಭವಿಸು. ಹಾಗೆ ಅನುಭವಿಸುವಾಗ ಅದು ಧರ್ಮವಾಗಿದೆಯೇ, ಧರ್ಮದ ಅಂಕೆಯಲ್ಲಿ ನಾನು ಅನುಭವಿಸುವ ಅರ್ಥ ಇದೆಯೇ ಎಂಬುದಷ್ಟನ್ನೇ ಚಿಂತಿಸು- ನಿನಗಾಗಿ, ನನ್ನ ತಮ್ಮಂದಿರಿಗಾಗಿ ಈ ಅಧಿಕಾರವನ್ನು ಸ್ವೀಕರಿಸುತ್ತಿದ್ದೇನೆ."
(ಲಕ್ಷ್ಮಣೇ ಮಾಂ ಮಯಾಸಾರ್ಥಂ ಪ್ರಶಾಧಿತ್ವಂ ವಸುಂಧರಾಂ
ದ್ವಿತೀಯಂ ಮೇ ಅಂತರಾತ್ಮಾನಂ ತ್ವಾಮಿಯಂ ಶ್ರೀರುಪಸ್ಥಿತಾ
ಸೌಮಿತ್ರೇ ಭುಂಕ್ಷ ಭೋಗಾಂಸ್ತ್ವಂ ಇಷ್ಟಾನ್ ರಾಜ್ಯಫಲಾನಿಚ
ಜೀವಿತಂ ಚ ಹಿ ರಾಜ್ಯಂಚ ತ್ವದರ್ಥಂ ಅಭಿಕಾಮಯೇ)
ಮತ್ತೆ ತಾಯಿಗೆ ವಂದಿಸಿ ಹೊರಡುವ ಮುನ್ನ ಕೊಂಚ ಆತಂಕದಿಂದ ಹೇಳಿದರು; "ಅಮ್ಮ, ನನಗೆ ಈ ರಾಜ್ಯವನ್ನು ಆಳುವ ಶಕ್ತಿ ಇದೆಯೆ? ನಿನ್ನ ಆಶೀರ್ವಾದ ಬೇಕು". ತಾಯಿ ಮಗನ ತಲೆ ನೇವರಿಸಿ "ನಿನ್ನ ಶಕ್ತಿ ಎಷ್ಟೆಂದು ಎಲ್ಲರೂ ಹೇಳುತ್ತಿದ್ದಾರೆ. ನನ್ನ ಪುಣ್ಯ ಕರ್ಮಗಳು ಫಲಿಸಿ ನಾನೀಗ ರಾಜಮಾತೆಯಾಗುತ್ತಿದ್ದೇನೆ". ಸಂತಸದಿಂದ ಬೀಗುತ್ತ ಹೇಳಿದಳು ತಾಯಿ. "ಅಮ್ಮ, ಅರಸರು ನನಗೆ ಪಟ್ಟ ಕಟ್ಟುವೆನೆಂದಾಗ ಹೇಳಿದ ಒಂದು ಮಾತು, ಆ ಹುದ್ದೆಯ ಗಾಂಭೀರ್ಯವನ್ನೂ, ಜವಾಬ್ದಾರಿಯನ್ನೂ, ಭಾರವನ್ನೂ ಹೇಳಿಬಿಟ್ಟಿತು. ’ಅಮ್ಮ ನನ್ನನ್ನು ಪ್ರಜೆಗಳ ಪಾಲನೆಯನ್ನು ಮಾಡಲೆಂದು ಅಪ್ಪ ನಿಯೋಜಿಸಿದ್ದಾರೆ’ (ಅಂಬ ಪಿತ್ರಾ ನಿಯುಕ್ತೋಸ್ಮಿ ಪ್ರಜಾಪಾಲನ ಕರ್ಮಣಿ) ಎಂದರೆ ಅಷ್ಟೊಂದು ಸಂಖ್ಯೆಯ ಜನಪದರಿಗೆ ಅನ್ಯಾಯವಾಗದಂತೆ, ಯಾರಿಗೂ ತೊಂದರೆಯಾಗದಂತೆ ಎಲ್ಲರನ್ನೂ ಪಾಲಿಸುವುದು ಹೇಗೆ? ಪ್ರಜಾಪಾಲನೆಯೆಂದರೆ ಮಕ್ಕಳಂತೆ ಪೋಷಿಸುವುದು. ಪ್ರಜಾನಾಯಕನದು ಎಷ್ಟು ದೊಡ್ಡ ಜವಾಬ್ದಾರಿ. ಎಂದೂ ಧರ್ಮದ ದಾರಿಯಲ್ಲಿ, ನ್ಯಾಯವಾಗಿ, ಯಾವುದೇ ಪಕ್ಷಪಾತವಿಲ್ಲದೇ, ಸುಗಮವಾಗಿ ಕರ್ತವ್ಯ ನಿರ್ವಹಿಸುವಂತೆ ಆಶೀರ್ವಾದ ಮಾಡು."
*************
ಮೈಮರೆತು ವರ್ಣಿಸುತ್ತಿದ್ದ ದಾಸಿಯನ್ನು ದಾಟಿ ಸಿಡಿಮಿಡಿಗೊಂಡಳು ಮಂಥರೆ. ಎಂಥ ಅನ್ಯಾಯ! ಎಂಥ ಕಾರಸ್ಥಾನ!! ಎಲ್ಲರೂ ಸೇರಿಕೊಂಡು ಭರತನಿಗೆ ಅನ್ಯಾಯ ಮಾಡುತ್ತಿದ್ದಾರೆ. ಪಾಪ! ಅವನನ್ನು ಸೋದರ ಮಾವನ ಮನೆಗೆ ಅಟ್ಟಿ, ಅವನಿಲ್ಲದಾಗ ಮೆಲ್ಲನೆ ಸದ್ದು ಗದ್ದಲವಿಲ್ಲದೇ ರಾಮನಿಗೆ ಪಟ್ಟ ಕಟ್ಟುತ್ತಿದ್ದಾರೆ! ಮೊದಲಿನಿಂದಲೂ ನೋಡುತ್ತಿದ್ದೇನೆ; ದಶರಥನಿಗೆ ರಾಮನ ಮೇಲೇ ವ್ಯಾಮೋಹ ಜಾಸ್ತಿ. ಭರತನ ಮೇಲೆ ಇಲ್ಲವೇ ಇಲ್ಲ! ಕಿರಿಯರಾಣಿ ಕೈಕೆ ಮಂಚಕ್ಕಷ್ಟೇ ಮೀಸಲು. ಅವಳಿಗೋ ಲೋಕಙ್ಞಾನವಿಲ್ಲ! ತನ್ನನ್ನು ರಾಮ ಹಚ್ಚಿಕೊಂಡಿದ್ದಾನೆ ಎಂದುಕೊಂಡಿದ್ದಾಳೆ. ಅವಳಿಗೆ ಗೊತ್ತೇ ಇಲ್ಲ. ಮೊದಲಿನಿಂದಲೂ ಎಲ್ಲರದೂ ಒಂದು ಗುಂಪು. ತನ್ನ ಯಜಮಾನ್ತಿಯದೇ ಒಂದು ಗುಂಪು. ಇಲ್ಲದಿದ್ದರೆ ಏಕೆ, ಕೌಸಲ್ಯೆಯ ಕಡೆಯವರೂ, ಸುಮಿತ್ರೆಯ ಕಡೆಯವರೂ, ರಾಮನ ಕಡೆಯವರೂ ಅಷ್ಟೆಲ್ಲ ಏಕೆ ರಾಜನ ಆಪ್ತರೂ ಯಾರೂ ಕೈಕೆಯ ದಾಸ ಪ್ರಮುಖಳಾದ ನನಗೆ ಬೆಲೆಯನ್ನೇ ಕೊಡುವುದಿಲ್ಲ? ಎಲ್ಲರಿಗೂ ತಾನೆಂದರೆ ತಾತ್ಸಾರ! ಬಹುಶಃ ಕೌಸಲ್ಯೆ, ಸುಮಿತ್ರೆ, ವಸಿಷ್ಠರು, ಸುಮಂತ್ರ... ಎಲ್ಲರೂ ಸೇರಿ ರಾಜ ಪ್ರಮುಖರನ್ನು ಬುಟ್ಟಿಗೆ ಹಾಕಿಕೊಂಡು, ರಾಮನಿಗೆ ಪಟ್ಟಾಭಿಷೇಕ ಮಾಡುತ್ತಿದ್ದಾರೆ.
ಬಹುಶಃ ಆ ರಾಮನೂ ಈ ಯೋಜನೆಯಲ್ಲಿ ಶಾಮೀಲಾಗಿರಬೇಕು. ಇಲ್ಲದಿದ್ದರೆ ಭರತ ಊರಲ್ಲಿಲ್ಲದಿದ್ದಾಗಲೇ ಈ ಕಾರ್ಯ ಇಟ್ಟುಕೊಳ್ಳುತ್ತಿದ್ದರೆ? ಎಲ್ಲರೂ ಸೇರಿ ಭರತನ ಕುತ್ತಿಗೆ ಕೊಯ್ಯುತ್ತಿದ್ದಾರೆ. ಕೈಕೆಯನ್ನು ಕಿತ್ತೆಸೆಯುತ್ತಿದ್ದಾರೆ. ಅವಳೇ ಹೋದಮೇಲೆ ನನ್ನ ಗತಿ ಏನು? ನಾನೆಲ್ಲಿಗೆ ಹೋಗಲಿ? ಅದೇಕೋ ಜನರೆಲ್ಲರೂ ನನ್ನನ್ನು ವಿರೋಧಿಸುತ್ತಾರೆ! ಎಲ್ಲರಿಗೂ ನಾನೆಂದರೆ ತಾತ್ಸಾರ! ರಾಜನ ಮುದ್ದಿನ ರಾಣಿಯ ದಾಸಶ್ರೇಷ್ಠಳಾದ ತನಗೆ ಈ ರೀತಿ ಅವಮಾನವೇ? ಸೋಲೇ? ಯೋಚಿಸುತ್ತ ಮಂಥರೆ ಹಲವಾರು ಕೋಣೆಗಳನ್ನು ದಾಟಿ ಕೈಕೆಯ ಅಂತಃಪುರಕ್ಕೆ ಬಂದಳು. ಅಲ್ಲಿ ಎಲ್ಲ ಸ್ಥಬ್ಧ. ಅದು ಆ ಮನೆಯ; ಕೈಕೆ ಮನೆಯ ಹಣೆಬರಹ. ಎಲ್ಲಕಡೆ ಸೂರ್ಯೋದಯಕ್ಕೇ ಲವಲವಿಕೆ ಇದ್ದರೆ, ಹನ್ನೆರಡಾದರೂ ಬೆಳಗಾಗುವುದಿಲ್ಲ ಕಿರಿರಾಣಿಯ ಮನೆಯಲ್ಲಿ. ರಾತ್ರಿ ಬಹುಹೊತ್ತು ಕುಡಿತ, ನೃತ್ಯ, ನಾಟಕದಲ್ಲಿ ಕಳೆಯುತ್ತಾರೆ. ರಾಜರು ಬಂದರೂ ಸಾಮಾನ್ಯವಾಗಿ ರಾತ್ರಿಯಲ್ಲೇ. ಆಗ ದಶರಥ ಏಳುವುದೂ ತಡವಾಗಿಯೇ! ಕೈಕೆಯ ದಿನದ ಸುಪ್ರಭಾತವಾಗುವುದೇ ಅಭಿಜಿನ್ಮುಹೂರ್ತದಲ್ಲಿ! ಇದು ನಿತ್ಯ ಕಟ್ಟಳೆಯಾದ್ದರಿಂದ, ಅವಳ ದಾಸ ದಾಸಿಯರೆಲ್ಲ, ಅಬ್ಬಬ್ಬ ಎಂದರೆ ಹತ್ತು ಘಂಟೆಗೆ ಎದ್ದಾರು! ಹನ್ನೊಂದರ ಹೊತ್ತಿಗೆ ಕೈಕೆಯ ಸ್ನಾನಕ್ಕೆ ಸಿದ್ಧ ಮಾಡಾರು! ಕೈಕೆ ಮೈಮುರಿಯುವ ಹೊತ್ತಿಗೆ ಸರಿಸುಮಾರು ಹನ್ನೆರಡೇ! ಇಂದೂ ಅಂತೇ! ಮಂಥರೆ ತಲೆಕೆಟ್ಟು ಬಂದಿದ್ದಾಳೆ. ಎಲ್ಲರನ್ನೂ ದಾಟಿಕೊಂಡು ನೇರ ಕೈಕೆಯ ಶಯ್ಯಾಗೃಹಕ್ಕೆ ಬಂದಳು. ಅವಳನ್ನಾರೂ ತಡೆಯುವುದೂ ಇಲ್ಲ. ಬಂದು ನೋಡಿದರೆ ಇನ್ನೂ ಹಾಸುಗೆಯಲ್ಲಿ ಹೊರಳಾಡುತ್ತಿದ್ದಾಳೆ ಕೈಕೆ.
-------೦೦೦೦೦------
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ