ಕೈಕೆ-ಮಂಥರೆ
ಕೈಕೆ-ಮಂಥರೆ

ರಾಮನ ಪಟ್ಟಾಭಿಷೇಕದ ಸುದ್ದಿ ಕೇಳಿ ಸಂತಸಗೊಂಡಿದ್ದಳು ಕೈಕೆ!

ಓಹ್! ಮಂಥರೆ ಎಂಥ ಒಳ್ಳೆ ಸುದ್ದಿ ಹೇಳಿದೆ! ಎಂಥ ಆನಂದದ ಸುದ್ದಿ ತಿಳಿಸಿದೆ! ನಿನಗೆ ಬೇಕಾದ ಯಾವ ಬಹುಮಾನ ಕೊಡಲಿ ಹೇಳು! ನನಗೆ ರಾಮನಲ್ಲೂ, ಭರತನಲ್ಲೂ ವ್ಯತ್ಯಾಸವೇ ಇಲ್ಲ!
(ವಾಲ್ಮೀಕಿ ಮಹರ್ಷಿಗಳೇ ಹಾಗೆ; ಪರಿಚಯ ಮಾಡಿಸುವಾಗಲೇ ಆ ಪಾತ್ರದ ಯೋಗ್ಯತೆ ನಿರ್ಣಯವಾಗಿಬಿಡುತ್ತದೆ. ತಮ್ಮ ಕಾವ್ಯದ ಮೊದಲ ಪದಗಳೆರಡರಿಂದಲೇ ಶ್ರೀಮದ್ರಾಮಾಯಣದ ಔನ್ನತ್ಯವನ್ನು, ಭಾರತೀಯ ಸಂಸ್ಕೃತಿಯ ಸಂದೇಶವನ್ನು ಅರ್ಧ ಶ್ಲೋಕದಲ್ಲಿ "ತಪಃ ಸ್ವಾಧ್ಯಾಯ ನಿರತಂ" ಎಂದು ಹೇಳಿ ಬೆಳಗಿದ್ದರು! ಹದಿನಾರು ಗುಣಗಳ ಪಟ್ಟಿ ಮಾಡಿ ಅಂತಹ ಷೋಡಶ ಗುಣ ಗಂಭೀರ, ಅಷ್ಟು ಸುಲಭವಲ್ಲ; ಬಹು ವಿರಳ; ಬಹಳ ಕಷ್ಟಸಾಧ್ಯ ("ಬಹವೋ ದುರ್ಲಭಾಶ್ಚೈವ ಯೇ ತ್ವಯಾ ಕೀರ್ತಿತಾ ಗುಣಾಃ") ಎಂದು ಹೇಳಿ ಶ್ರೀರಾಮರ ಪಾತ್ರಕ್ಕೆ ದೃಢ ಬುನಾದಿಯನ್ನು ಹಾಕಿ, ಅಂತಹ ಅತ್ಯಂತ ವಿರಳ ಪಾತ್ರ, ಭವ್ಯ ಪಾತ್ರ, ಗುಣಗಣಿಯೆಂದರೆ ದಶರಥ ಪುತ್ರ ಶ್ರೀರಾಮ 
(ಇಕ್ಷ್ವಾಕು ವಂಶ ಪ್ರಭವೋ ರಾಮೋ ನಾಮ ಜನೈಃ ಶ್ರುತಃ) 
ಎಂದು ಹೇಳಿ, ತಮ್ಮ ನಾಯಕನನ್ನು ಪರಿಚಯಿಸಿದ್ದರು. ಇದು ಆದಿಕವಿಯ ಪಾತ್ರ ಚಿತ್ರ ಪ್ರಾವೀಣ್ಯತೆ! ಇದೀಗ ಮೊಂಕಾಗಿ ಪ್ರವೇಶಿಸಿ, ಭೂತ ನೃತ್ಯ ಮಾಡಿ, ಪ್ರಶಾಂತ ಕೊಳವನ್ನು ಕಲಕಿ, ನಷ್ಟ-ಕಷ್ಟಗಳಿಗೆ ನೂಕಿ, ತಾನೂ ಹತಭಾಗ್ಯಳಾಗಿ, ಬಂದಂತೇ ಹೆಸರು ಹಾಳು ಮಾಡಿಕೊಂಡು ಹೋದ, ಯುಗ-ಯುಗಗಳಿಂದ ಜನಪದರ ಹೀಯ್ಯಾಳಿಕೆಗೆ, ಭರ್ತ್ಸ್ಯನೆಗೆ ತುತ್ತಾಗಿರುವ, ಪೋಷಕ ಪಾತ್ರವಾದರೂ ಪಿಶಾಚಿಯ ಲಂಗತೊಟ್ಟ ಕರಾಳಿಯ ಪ್ರವೇಶ ಮಾಡಿಸುತ್ತಿದ್ದಾರೆ! ಹೇಗೆ? ಮಧ್ಯಾನಃವಾದರೂ ಮಂಚದ ಮೇಲೆ ಮಲಗಿರುವ, ದಾಸಿಯಿಂದಲೇ ಬೈಸಿಕೊಳ್ಳುವ ರಾಣಿಯನ್ನು; ಕಿರಿರಾಣಿಯನ್ನು; ಮುದ್ದಿನ ರಾಣಿಯನ್ನು!!!)
ಅರಮನೆಯೇ ಹೊತ್ತಿ ಉರಿಯುತ್ತಿದ್ದರೆ ಇವಳಿನ್ನೂ ಹಗಲುಗನಸು ಕಾಣುತ್ತಿದ್ದಾಳಲ್ಲಾ! ಹೊಟ್ಟೆ ಉರಿದುಕೊಂಡ ಮಂಥರೆ ಕೈಕೆಯನ್ನು ಅಲುಗಿಸಿ ಕಿರುಚಿದಳು; "ಏನೇ ಮೂರ್ಖಳೇ! ಏಕೇ! ಏಕೆ ಮಲಗಿದ್ದೀಯೇ?! ಅಯ್ಯೋ ಭಯಾನಕ ಪರಿಸ್ಥಿತಿ ನಿನ್ನನ್ನು ಸುತ್ತುಗಟ್ಟಿರುವುದು ಗೊತ್ತಾಗುತ್ತಿಲ್ಲವೆ? ಅಯ್ಯೋ! ಅನಿಷ್ಠಳೇ! ಆ ಗಂಡ ನಿನ್ನ ಸೌಭಾಗ್ಯ ಎಂದು ಕೊಚ್ಚಿಕೊಳ್ಳುತ್ತಿದ್ದೆಯಲ್ಲಾ, ಆ ಭಾಗ್ಯ ಅತ್ಯಂತ ಚಂಚಲ; ವೈಶಾಖದಲ್ಲಿ ಒಣಗಿ ಹೋಗುವ ನದಿಯಂತೆ!" 
(ಉತ್ತಿಷ್ಠ ಮೂಢೇ ಕಿಂ ಶೇಷೇ ಭಯಂ ತ್ವಾಂ ಅಭಿವರ್ತತೇ
ಉಪಪ್ಲುತ ಮಘೌಘೇನ ಕಿಂ ಆತ್ಮಾನಂ ನ ಬುದ್ಧ್ಯಸೇ
ಅನಿಷ್ಠೇ ಸುಭಗಾಕಾರೇ ಸೌಭಾಗ್ಯೇನ ವಿಕತ್ಥಸೇ
ಚಲಂಹಿ ತವಸೌಭಾಗ್ಯಂ ನದ್ಯಾಃ ಸ್ರೋತ ಇವ ಉಷ್ಮಗೇ)
ಕೈಕೆ ಹೊರಳಿದಳು. ಮೊದಲೇ ವಿಕಾರ ಕುಬ್ಜೆ, ಈಗ ಮತ್ತಷ್ಟು ಕೆಟ್ಟದಾಗಿದ್ದಾಳೆ. ಈಗ ಅವಳ ಮಾತು ಮತ್ತೂ ಗಬ್ಬೆದ್ದಿದೆ. ಹೊದಿಕೆಯನ್ನೆಳೆದುಕೊಳ್ಳುತ್ತ ಕೇಳಿದಳು; "ಏಕೆ? ಯಾಕೆ ನಿನ್ನ ಮುಖದಲ್ಲಿ ನೋವು ಕಾಣುತ್ತಿದೆ! ಏಕೋ ಅಳುತ್ತಿರುವಂತಿದೆ!" 
(ವಿಷಣ್ಣ ವದನಾಂ ಹಿ ತ್ವಾಂ ಲಕ್ಷಯೇ ಭೃಶ ದುಃಖಿತಾಂ)
’ಒಡತಿ (?) ತನ್ನ ನೋವು ಗಮನಿಸಿದಳಲ್ಲ ಸಧ್ಯ!’ ಎಂದುಕೊಳ್ಳುತ್ತ ಹೊದಿಕೆಯನ್ನೆಳೆದು ಕಿತ್ತು ಹಾಕಿ, ಅಳುವುದಕ್ಕೇ ಆರಂಭ ಮಾಡಿ ಮಂಚದ ಕೆಳಗೆ ಕುಸಿದು ಬಿದ್ದು, ತನ್ನ ನೋವನ್ನೆಲ್ಲ ಮಾತಿಗೆ ತುಂಬಿದಳು. "ಅಯ್ಯೋ ಹುಡುಗಿ. ನೀನು ಇನ್ನು ಎಂದೆಂದಿಗೂ ಏಳದಂತೆ ಭಾರಿ ಹಂಚಿಕೆ ನಡೆಯುತ್ತಿದೆ. ಗೊತ್ತಾ ನಿನಗೆ? ನಿನ್ನ ಗಂಡ ರಾಮನನ್ನ ಯುವರಾಜನನ್ನಾಗಿ ಮಾಡ್ತಾನಂತೆ! ಅದನ್ನ ಕೇಳ್ತಿದ್ದ ಹಾಗೆ ನನಗೆ ಹೆದರಿಕೆ, ಸಂಕಟ, ನೋವು, ಎಲ್ಲಾ ಒಟ್ಟಿಗೆ ಆಯ್ತು. ಮೈಯಲ್ಲಾ ಉರೀತಾ ಇದೆ. ನಿನಗೇನಾದರೂ ಒಳ್ಳೇದು ಮಾಡೋಣ ಅಂತ ಇಲ್ಲಿಗೆ ಬಂದೆ." 
(ಅಕ್ಷಯ್ಯಂ ಸುಮಹದ್ದೇವಿ ಪ್ರವೃತ್ತಂ ತದ್ವಿನಾಶನಂ
ರಾಮಂ ದಶರಥೋ ರಾಜ ಯೌವ್ವರಾಜ್ಯೇ ಅಭಿಷೇಕ್ಷ್ಯತಿ
ಸಾಸ್ಮ್ಯಗಾಧೇ ಭಯೇ ಮಗ್ನಾ ದುಃಖಶೋಕ ಸಮನ್ವಿತಾ
ದಹ್ಯಮಾನ ಅನಲೇನ ಇವ ತ್ವತ್ ಹಿತಾರ್ಥಂ ಇಹ ಆಗತಾ) 
ಲಗುಬಗೆಯಿಂದ ಎದ್ದಳು ಕೈಕೆ! ’ಈಗಾಗಲೇ ಒಳ್ಳೆಯದೇ ಆಗಿರುವಾಗ ಇವಳೇಕೆ ಹೀಗೆ ಭಯಪಡುತ್ತಿದ್ದಾಳೆ?! ’ಕೈಕೆಗೆ ಅರ್ಥವೇ ಆಗಲಿಲ್ಲ! ಕೈಕೆಯ ಕೈಯನ್ನು ಹಿಡಿದುಕೊಂಡು, " ಅಯ್ಯೋ! ಎಂಥ ಒಳ್ಳೆಯವಳು ನೀನು. ನಿನ್ನ ಗಂಡನೋ! ಮಾತನಾಡುವುದು ಧರ್ಮ. ಒಳಗೆ ಮಹಾ ಮೋಸಗಾರ. ನಿನ್ನ ಮುಂದೆ ಮೃದುವಾಗಿ ಮಾತಾಡುತ್ತಲೇ ಒಳಗೆ ಕ್ರೂರಿಯಾಗಿದ್ದಾನೆ. ಅವನು ನಿನ್ನ ಹತ್ತಿರ ಸಿಹಿ ಸಿಹಿ ಮಾತಾಡುತ್ತಲೇ ಕೌಸಲ್ಯೆಗೆ ಒಳ್ಳೆಯದು ಮಾಡಿದ್ದಾನೆ. ಅವನು ನಿನ್ನ ಮಗನನ್ನ ಸೋದರಮಾವನ ಮನೇಗೆ ಕಳಿಸಿ, ಅವನಿಲ್ಲದಾಗ ರಾಮನಿಗೆ ನಾಳೆ ಬೆಳಿಗ್ಗೆ ಪಟ್ಟ ಕಟ್ತಾ ಇದಾನೆ. ಅಯ್ಯೋ ಮುಗ್ಧೆ, ನಿನ್ನ ವೈರಿಯನ್ನ ಗಂಡ ಅಂದ್ಕೊಂಡೆಯಲ್ಲೇ! ಕೃಷ್ಣ ಸರ್ಪಾನ ತೊಡೆ ಮೇಲೆ ಮಲಗಿಸಿಕೊಂಡೆಯಲ್ಲೇ! ಕಾಲ ಮೀರೋಕೆ ಮುಂಚೆ ಏನಾದರೂ ಬೇಗ ಮಾಡು. ನಿನ್ನನ್ನ, ನಿನ್ನ ಮಗನ್ನಾ, ನನ್ನನ್ನಾ ಕಾಪಾಡಿಕೋ! . .. .. .. ಯಾಕೆ ನನ್ನ ಮಾತು ನಿನಗೆ ಆಶ್ಚರ್ಯ ಆಗ್ತಾ ಇದೆಯಾ?" 
(ಧರ್ಮವಾದೀ ಶಠೋ ಭರ್ತಾ ಶ್ಲಕ್ಷ್ಣವಾದೀ ಚ ದಾರುಣಃ
ಶುದ್ಧ ಭಾವೇ ನ ಜಾನೀಷೇ ತೇನೈವ ಮತಿಸಂಧಿತಾ
ಉಪಸ್ಥಿತಂ ಪ್ರಯುಂಜಾನಸ್ತ್ವಯಿ ಸಾಂತ್ವಮನರ್ಥಕಂ
ಅರ್ಥೇ ನೈವಾದ್ಯತೇ ಭರ್ತಾ ಕೌಸಲ್ಯಾಂ ಯೋಜಯಿಷ್ಯತಿ
ಅಪವಾಹ್ಯ ಸದುಷ್ಟಾತ್ಮಾ ಭರತಂ ತವ ಬಂಧುಷು
ಕಾಲ್ಯೇ ಸ್ಥಾಪಯಿತ್ವಾ ರಾಮಂ ರಾಜ್ಯೇ ನಿಹತಕಂಟಕೇ 
ಶತ್ರುಂ ಪತಿ ಪ್ರವಾದೇನ ಮಾತ್ರೇವ ಹಿತಕಾಮ್ಯಯಾ
ಅಹೀ ವಿಷ ಇವಾಂಕೇನ ಬಾಲೇ ಪರಿಹೃತಸ್ತ್ವಯಾ
ಸಾ ಪ್ರಾಪ್ತ ಕಾಲಂ ಕೈಕೇಯೀ ಕ್ಷಿಪ್ರಂ ಕುರುಹಿತಂ ತವ
ತ್ರಾಯಸ್ವ ಪುತ್ರಮಾತ್ಮಾನಂ ಮಾಂ ಚ ವಿಸ್ಮಯ ದರ್ಶನೇ )
ಮಂಚ ಇಳಿದ ಕೈಕೆ ಕೊಳಕು ಮಂಥರೆಯನ್ನು ಅಪ್ಪಿಕೊಂಡೇ ಬಿಟ್ಟಳು. ಸಂತೋಷ ಅರಳಿತು! ಕೊರಳಲ್ಲಿದ್ದ ಹಾರ ತೆಗೆದು ಮಂಥರೆಯ ಕೊರಳಿಗೆ ಹಾಕಿದಳು. ಓಹ್! ಮಂಥರೆ ಎಂಥ ಒಳ್ಳೆ ಸುದ್ದಿ ಹೇಳಿದೆ! ಎಂಥ ಆನಂದದ ಸುದ್ದಿ ತಿಳಿಸಿದೆ! ನಿನಗೆ ಬೇಕಾದ ಯಾವ ಬಹುಮಾನ ಕೊಡಲಿ ಹೇಳು! ನನಗೆ ರಾಮನಲ್ಲೂ, ಭರತನಲ್ಲೂ ವ್ಯತ್ಯಾಸವೇ ಇಲ್ಲ! ಯಜಮಾನರು ರಾಮನಿಗೆ ಪಟ್ಟಾಭಿಷೇಕ ಮಾಡುವುದು ಕೇಳಿ ನನಗೆ ಪರಮ ಸಂತೋಷವಾಗಿದೆ. ಏನಾದರೂ ವರ ಬೇಕಿದ್ದರೆ ಕೇಳಿಕೋ! ಕೊಡ್ತೀನಿ! " 
(ಇದಂತು ಮಂಥರೇ ಮಹ್ಯಮಾಖ್ಯಾಸಿ ಪರಮಂ ಪ್ರಿಯಂ
ಏತನ್ಮೇ ಪ್ರಿಯಂ ಆಖ್ಯಾತಂ ಭೂಯಃ ಕಿಂ ವಾ ಕರೋಮಿತೇ
ರಾಮೇ ವಾ ಭರತೇವಾ ಅಹಂ ವಿಶೇಷಂ ನ ಉಪಲಕ್ಷ್ಯತೇ
ತಸ್ಮಾತ್ ತುಷ್ಟೋಸ್ಮಿ ಯತ್ ರಾಜಾ ರಾಮಂ ರಾಜ್ಯೇ ಅಭಿಷೇಕ್ಷ್ಯತಿ 
ಪರಂ ವರಂ ತೇ ಪದದಾಮಿ ತಂ ವೃಣು)
-------೦೦೦೦೦------
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com 

Related Stories

No stories found.

Advertisement

X
Kannada Prabha
www.kannadaprabha.com