ನಮ್ಮ ಹಣವನ್ನ ದುಪ್ಪಟ್ಟು ಮಾಡುವುದು ಹೇಗೆ ?

ತೀರಾ ಇತ್ತೀಚಿನ ವಿಕ್ರಂ ಇನ್ವೆಸ್ಟ್ಮೆಂಟ್ ಸಂಸ್ಥೆಯ ಕತೆ ಕೂಡ ನೀವೆಲ್ಲಾ ಕೇಳಿಯೇ ಇರುತ್ತೀರಿ. ಸಭ್ಯ ಕ್ರಿಕೆಟಿಗ ಎಂದು ಹೆಸರು ಮಾಡಿದ, ಸಂಯಮಕ್ಕೆ ಹೆಸರುವಾಸಿಯಾದ ರಾಹುಲ್ ದ್ರಾವಿಡ್ ಇಲ್ಲಿ ಹೂಡಿಕೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನಿನ್ನೆ ರಾತ್ರಿ ಒಂದು ಸಣ್ಣ ಸಮಾರಂಭವಿತ್ತು ಅಲ್ಲಿಗೆ ಪರಿವಾರ ಸಮೇತ ಹೋಗಿದ್ದೆ. ನನ್ನ ಮಗಳು ಅನನ್ಯ ಪರಿಚಯವಾದವರ ಜೊತೆ ಮಾತಾಡುವುದು ಜೊತೆಗೆ ಅವರಿಗೆ ಒಗಟುಗಳನ್ನ (ರಿಡೇಲ್ಸ್) ಕೇಳುವುದು ಅವರನ್ನ ಪೇಚಿಗೆ ಸಿಲುಕಿಸಿ ನಂತರ ಉತ್ತರ ಹೇಳಿ ನಗುವುದು ಮಾಡುತ್ತಿರುತ್ತಾಳೆ. ನಿನ್ನೆಯೂ ಹೀಗೆಯೇ ಆಯಿತು. ಪರಿಚಯಸ್ಥರೊಬ್ಬರ ಬಳಿ 'ಅಂಕಲ್ ಹೌ ವಿಲ್ ಯು ಡಬಲ್ ಯುವರ್ ಮನಿ?' ಎಂದು ಪ್ರಶ್ನಿಸಿದಳು. ಹೀಗೆ ಪ್ರಶ್ನೆಗೆ ಸಿಲುಕಿದ ವ್ಯಕ್ತಿ ಕೂಡ ಲೋಕಾನುಭವ ಹೊಂದಿದವರು ಅನನ್ಯಳ ಮಾತಿಗೆ ಸ್ವಲ್ಪವೂ ವಿಚಲಿತರಾಗದೆ 'ಬಹಳ ಸುಲಭ ಕಣಮ್ಮ ನಿನ್ನ ಅಪ್ಪನನ್ನೇ ಕೇಳಿ ಹೇಳುತ್ತೇನೆ' ಎಂದರು.
ಅದಕ್ಕೆ ಅನನ್ಯ 'ಅಪ್ಪನನ್ನ ಕೇಳುವ ಅವಶ್ಯಕತೆ ಇಲ್ಲ ನಿಮ್ಮ ಕೈಲಿರುವ ಹಣವನ್ನ ಕನ್ನಡಿ ಮುಂದೆ ಹಿಡಿಯಿರಿ' ಎಂದು ನಕ್ಕು ಆಡಲು ಓಡಿದಳು.  ಈ ಘಟನೆಯನ್ನ ಇಲ್ಲಿ ಪ್ರಸ್ತಾಪಿಸುವ ಅವಶ್ಯಕತೆ ಏನಿತ್ತು? ಎನ್ನುವ ಪ್ರಶ್ನೆ ನಿಮ್ಮಲ್ಲಿ ಬಂದಿದ್ದರೆ ಅದಕ್ಕೆ ಕಾರಣವಿದೆ. ನಮ್ಮ ಸಮಾಜವನ್ನು ಸ್ವಲ್ಪ ಗಮನಿಸಿ ನೋಡಿ, ನಮ್ಮ ಸುದ್ದಿ ಪತ್ರಿಕೆಗಳ, ವಾರ್ತಾವಾಹಿನಿಗಳನ್ನು ಸ್ವಲ್ಪ ನೋಡಿ ಅವುಗಳಲ್ಲಿ ಜನರ ಹಣವನ್ನ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಮೋಸ ಮಾಡಿದ ಸುದ್ದಿಗಳು ಇದ್ದೇ ಇರುತ್ತವೆ. ಅನನ್ಯಳಂತ ಮಗು ಕನ್ನಡಿಯ ಮುಂದಿಡಿ ಅದು ಡಬಲ್ ಆಗುತ್ತೆ ಎನ್ನವುದು ಜೋಕ್ ಎಂದು ನಗುವ ಜನ ಅದೇ ಸೋಗಲಾಡಿ ಇನ್ವೆಸ್ಟ್ಮೆಂಟ್ ಅಡ್ವೈಸರ್ಗಳು ಅಥವಾ ಕಂಪನಿಗಳ ಬಲೆಗೆ ಮಾತ್ರ ಅದೆಷ್ಟು ಸುಲಭವಾಗಿ ಬೀಳುತ್ತಾರೆ.. ಹೀಗೇಕೆ? ಇದಕ್ಕೆ ಮೂಲ ಕಾರಣ ಜನರಲ್ಲಿರುವ ಅರ್ಥ ನಿರಕ್ಷರತೆ. ಅಂಕಿ ಸಂಖ್ಯೆಗಳು ನನ್ನದಲ್ಲ ಅದು ನಗಿಷ್ಟವಿಲ್ಲ ಎನ್ನವುದು ನಾನು ಸಾಮನ್ಯವಾಗಿ ನನ್ನ ಬಳಿ ಸಲಹೆ ಕೇಳಿ ಬರುವ ಜನರ ಬಾಯಲ್ಲಿ ಕೇಳುವ ಮಾತು. ನನ್ನದಲ್ಲ ನನಗಿಷ್ಟವಿಲ್ಲ ಎನ್ನುವುದು ಹೆಗ್ಗಳಿಕೆಯಲ್ಲ ಕಲಿಯಬೇಕು ನಿಮ್ಮ ಮೆದುಳನ್ನ ಸ್ವಲ್ಪ ದುಡಿಮೆಗೆ ಹಾಕಿ ಆಗ ಅದು ಎಲ್ಲಾ ತರದಲ್ಲೂ ಲಾಭದಾಯಕ ಎನ್ನವುದು ನಾನು ಹೇಳುವ ಮಾತು.ಇರಲಿ. 
ನನಗೆ ಬುದ್ದಿ ತಿಳಿಯುವುದಕ್ಕೆ ಮುಂಚಿನಿಂದ ಚಿಟ್ ಫಂಡ್ ನಲ್ಲಿ ಮೋಸ ಹೋದ ನನ್ನ ನೆಂಟರ ಬಗ್ಗೆ, ಚಿನ್ನ, ಹಣ ದುಪ್ಪಟ್ಟು ಮಾಡುತ್ತೇನೆ ಎಂದ ಕಾವಿಧಾರಿಯ ನಂಬಿ ಬೀದಿಗೆ ಬಿದ್ದವರ ಬಗ್ಗೆ ನನ್ನ ಹೆತ್ತವರು ಮಾತಾಡುವುದನ್ನು ಕೇಳುತ್ತಾ ಬೆಳೆದಿದ್ದೇನೆ. ನಂತರದ ದಿನಗಳಲ್ಲಿ ನಮ್ಮ ಜನ ಅದು ಹೇಗೆ ಸರಳ ಲೆಕ್ಕಾಚಾರ ಮಾಡದೆ ಕೇವಲ ಮಾತಿಗೆ ಮರುಳಾಗಿ ಹೂಡಿಕೆ ಮಾಡುತ್ತಾರೆ ಎಂದು ಪ್ರಶ್ನಿಸಿಕೊಂಡಿದ್ದೇನೆ. ಕ್ಯೂ ನೆಟ್ ಎನ್ನುವ ಸಂಸ್ಥೆ ಅಬ್ಬರದ ಪ್ರಚಾರ ಮಾಡುತ್ತಾ ಜಗತ್ತಿನ ವಿಖ್ಯಾತ ತಾರೆಯರನ್ನ ತನ್ನ ರಾಯಭಾರಿ ಮಾಡಿಕೊಂಡು ಇಲ್ಲಿ ಹೂಡಿಕೆ ಮಾಡಿದರೆ ಮಾತ್ರ ನೀವು ಸಫಲ ಇಲ್ಲದಿದ್ದರೆ ನಿಮ್ಮ ಜೀವನವೇ ವ್ಯರ್ಥ್ಯ ಎಂದು ಬೊಬ್ಬಿರಿಯುತಿತ್ತು. ಗಮನಿಸಿ ಈ ಸಂಸ್ಥೆ ಕೇವಲ ಭಾರತದಲ್ಲಿ ಮಾತ್ರವಲ್ಲ ಇನ್ನು ಹತ್ತಾರು ದೇಶದಲ್ಲಿ ಇದೆ ರಾಗವನ್ನ ಹಾಡುತಿತ್ತು. ಸಾಮಾನ್ಯ ಮನುಷ್ಯ ಇದರ ಬಲೆಗೆ ಬೀಳದೆ ಇರುವುದು ಅಸಾಧ್ಯ. ಹೀಗೆ ಅಂದಿನ ಅಬ್ಬರದ ಪ್ರಚಾರದ ದಿನದಲ್ಲಿ ನನ್ನ ಬಳಿಗೂ ಈ ಸಂಸ್ಥೆಯ ಹೂಡಿಕೆಯ ಪ್ರಸ್ತಾವ ಬಂದಿತ್ತು. ಹೊಗಳಿಕೆಗೆ ಈ ಸಾಲುಗಳನ್ನ ಬರೆಯುತ್ತಿಲ್ಲ ಕೇವಲ ಎರಡು ನಿಮಿಷದಲ್ಲಿ ಇದೊಂದು ಫ್ರಾಡ್ ಸಂಸ್ಥೆ ಇದಕ್ಕೆ ಭವಿಷ್ಯವಿಲ್ಲ ಎಂದು ಹೇಳಿದ್ದೆ. ಇಂದಿಗೆ ಕ್ಯೂ ನೆಟ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿದವರ ಪಾಡೇನಾಗಿದೆ ಎನ್ನುವುದು ನಿಮಗೆ ತಿಳಿಯದ ವಿಷಯವೇನಲ್ಲ. 
ಇನ್ನು ತೀರಾ ಇತ್ತೀಚಿನ ವಿಕ್ರಂ ಇನ್ವೆಸ್ಟ್ಮೆಂಟ್ ಸಂಸ್ಥೆಯ ಕಥೆ ಕೂಡ ನೀವೆಲ್ಲಾ ಕೇಳಿಯೇ ಇರುತ್ತೀರಿ. ಸಭ್ಯ ಕ್ರಿಕೆಟಿಗ ಎಂದು ಹೆಸರು ಮಾಡಿದ, ಸಂಯಮಕ್ಕೆ ಹೆಸರುವಾಸಿಯಾದ ರಾಹುಲ್ ದ್ರಾವಿಡ್  ಇಲ್ಲಿ ಹೂಡಿಕೆ ಮಾಡಿ ಕೋಟ್ಯಂತರ ಕಳೆದು ಕೊಂಡಿದ್ದಾರೆ. ಇಷ್ಟೆಲ್ಲಾ ಪೀಠಿಕೆ ಏಕೆಂದರೆ ನಿಮ್ಮ ಹಣವನ್ನ ಕಡಿಮೆ ಅವಧಿಯಲ್ಲಿ ದುಪಟ್ಟು ಮಾಡುವ ಯಾವುದೇ ವಿಧಾನ ಇಲ್ಲ ಎನ್ನುವುದನ್ನು ಹೇಳುವುದಕ್ಕೆ ಮತ್ತು ಇಂತಹ ಖದೀಮ ಹೂಡಿಕೆ ಸಂಸ್ಥೆಗಳ ಮಾತಿಗೆ ಬಲಿಯಾಗದಿರಲು ಪಾಲಿಸಬೇಕಾದ ನಿಯಮಗಳೇನು ಎನ್ನುವುದನ್ನ ಹೇಳುವುದಕ್ಕೆ ಮತ್ತು ಹಣವನ್ನ ದುಪ್ಪಟ್ಟು ಮಾಡಲು ಇರುವ ನಿಜವಾದ ಮತ್ತು ಸುರಕ್ಷ ದಾರಿಗಳ ಬಗ್ಗೆ ಅವಲೋಕಿಸುವುದಕ್ಕೆ. 
ಯಾವುದೇ ಹೂಡಿಕೆ ಸಂಸ್ಥೆ ಹೆಚ್ಚಿನ ಲಾಭ ಕೊಡುವುದಾಗಿ ಹೇಳಿ ಹೂಡಿಕೆ ಮಾಡಿ ಎಂದು ಪ್ರಚೋದಿಸಿದರೆ ಮುಖ್ಯವಾಗಿ ನೆನಪಿಡಬೇಕಾದ ಎರಡು ಅಂಶಗಳು:
1. ಮಾರುಕಟ್ಟೆಯಲ್ಲಿ ಸದ್ಯದ ಮಟ್ಟದಲ್ಲಿ ಅತಿ ಹೆಚ್ಚು ಎನ್ನುವ ಲಾಭಾಂಶ ಕೊಡುತ್ತಿರುವುದು ಯಾವುದು ಎನ್ನವುದು ತಿಳಿದುಕೊಂಡಿರಬೇಕು. ಬ್ಯಾಂಕಿನ ಬಡ್ಡಿ ದರವೆಷ್ಟು ಎನ್ನುವ ಅರಿವಿರಬೇಕು. ನಿಮಗೆ ಅವರು ಹೇಳಿರುವ ಲಾಭಾಂಶ ಇವೆರಡರ ನಡುವಿದ್ದರೆ ಓಕೆ. ಇದಕ್ಕಿಂತ ಅತ್ಯಂತ ಹೆಚ್ಚಿದ್ದರೆ ಅದು ಖಂಡಿತ ಹೂಡಿಕೆಗೆ ಯೋಗ್ಯವಲ್ಲ. 
2. ಅದು ಅಷ್ಟು ದೊಡ್ಡ ಮಟ್ಟದಲ್ಲಿ ಲಾಭ ನೀಡುತ್ತಿದ್ದರೆ ಎಲ್ಲ ಲಾಭವನ್ನ ಅವರೇ ಪಡೆಯಬಹುದಲ್ಲ?? ಅವರೇಕೆ ನಿಮ್ಮ ಬಳಿ ಬಂದು ಅತ್ಯಂತ ಲಾಭದಾಯಕ ಇಲ್ಲಿ ಹೂಡಿಕೆ ಮಾಡಿ ಎಂದು ದುಂಬಾಲು ಬೀಳುತ್ತಾರೆ? ಈ ಸಾಮಾನ್ಯ ಜ್ಞಾನ, ಸಾಮಾನ್ಯ ಪ್ರಶ್ನೆ ಸದಾ ನೆನಪಿನಲ್ಲಿರಲಿ. 
ಹಣವನ್ನ ವೃದ್ಧಿಸುವ ಸುರಕ್ಷ ದಾರಿಗಳು: 
1. ಹಣವನ್ನ ಗಳಿಸುವ ಅತ್ಯಂತ ಒಳ್ಳೆಯ ಮತ್ತು ಯಾವ ರಿಸ್ಕ್ ಇಲ್ಲದ ದಾರಿಯೆಂದರೆ ಅದನ್ನ ನಮ್ಮ ಸ್ಕಿಲ್ ಅಥವಾ ಬುದ್ದಿವಂತಿಕೆಯಿಂದ ದುಡಿಯುವುದು. ಕಷ್ಟ ಪಟ್ಟ ದುಡಿಯುವುದಕ್ಕೆ ಪರ್ಯಾಯ ಯಾವುದು ಈ ಜಗತ್ತಿನಲ್ಲಿ ಇಲ್ಲಿಯ ತನಕ ಸೃಷ್ಟಿಯಾಗಿಲ್ಲ. 
2. ರೂಲ್ ನಂಬರ್ 72 ಬಳಸಿ ಎಷ್ಟು ವರ್ಷದಲ್ಲಿ ಹಣ ದುಪ್ಪಟಾಗುತ್ತದೆ ಎನ್ನವುದನ್ನ ತಿಳಿಯಬಹದು. ರೂಲ್ ನಂಬರ್ 72 ಅಂದರೆ ನಿಮ್ಮ ಹಣ ದುಪ್ಪಟಾಗಲು ಎಷ್ಟು ವರ್ಷ ಬೇಕು ಎಂದು ತಿಳಿಸುವ ಒಂದು ಸರಳ ವಿಧಾನ. ನಿಮ್ಮ ಒಟ್ಟು ಕೇಂದ್ರೀಕೃತ ಬಡ್ಡಿಯ ದರದಿಂದ 72 ನ್ನ ಭಾಗಿಸಿದಾಗ ಬರುವ ಭಾಗಲಬ್ಧ ನಿಮ್ಮ ಹಣ ದುಪ್ಪಟಾಗಲು ಬೇಕಾಗುವುವ ವರ್ಷವನ್ನ ಪ್ರತಿನಿಧಿಸುತ್ತದೆ. ಉದಾಹರಣೆ ನೋಡೋಣ. ನಿಮ್ಮ ಕ್ಯುಮುಲೇಟಿವ್ ಬಡ್ಡಿ ದರ ವಾರ್ಷಿಕ 9 ಪ್ರತಿಶತ ಎಂದುಕೊಳ್ಳಿ. ಈಗ 72ನ್ನ 9 ರಿಂದ ಭಾಗಿಸಿ ( 72/9 = 8. ಉತ್ತರ 8. ಅಂದರೆ ನಿಮ್ಮ ಹಣ ದುಪ್ಪಟಾಗಲು 8 ವರ್ಷ ಬೇಕೇ ಬೇಕು. ಸಾಧಾರಣವಾಗಿ ಇಂದಿನ ದಿನಗಳಲ್ಲಿ 8 ರಿಂದ ಹತ್ತು ವರ್ಷ ಹಣ ದುಪ್ಪಟ್ಟಾಗಲು ಸಮಯವಾಗುತ್ತದೆ. ಯಾರಾದರೂ ಕೇವಲ ಎರಡು ವರ್ಷದಲ್ಲಿ  ಅಥವಾ ಮೂರು ವರ್ಷದಲ್ಲಿ ಹಣ ದುಪ್ಪಟ್ಟು ಮಾಡುತ್ತೇನೆ ಹೂಡಿಕೆ ಮಾಡಿ ಎಂದರೆ ಏನು ಮಾಡಬೇಕು ಎನ್ನವುದು ನಿಮಗೆ ತಿಳಿಯಿತು ಅಲ್ಲವೇ? 
3. ನಿಯಮಿತವಾಗಿ ನಿಗದಿತ ಮೊತ್ತವನ್ನ ಬೇರೆ ಬೇರೆ ಆಯ್ದ ಕ್ಷೇತ್ರದ ಉತ್ತಮ ಬ್ಲೂ ಚಿಪ್ ಸ್ಟಾಕ್ ಗಳ ಮೇಲೆ ಹೂಡಿಕೆ ಮಾಡುತ್ತಾ ಹೋಗಬೇಕು. ನೆನಪಿಡಿ ಒಂದು ರಾತ್ರಿಯಲ್ಲಿ ಗೆಲುವು ಸಿಗಲು ಸಾವಿರಾರು ರಾತ್ರಿ ನಿದ್ದೆ ಗೆಟ್ಟಿರಬೇಕು. 
4. ಸ್ಟಾಕ್ ಮತ್ತು ಷೇರಿನ ಸಹವಾಸ ಬೇಡ ಅನ್ನುವರು ಚಕ್ರ ಬಡ್ಡಿಯ ದರದಲ್ಲಿ ಏರಿಕೆ ಯಾಗುವ ಕೇಂದ್ರ ಸರಕಾರದ ಅಭಯವಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆ ಮಾಡಬಹದು. 
5. ನಿಮ್ಮ ಇತಿಮಿತಿಯ ಅರಿವು ನಿಮಗೆ ಬಿಟ್ಟು ಇನ್ನ್ಯಾರಿಗೂ ತಿಳಿದಿರಲು ಸಾಧ್ಯವಿಲ್ಲ. ಇದರ ಅರ್ಥ ಇಷ್ಟೇ ಆದಾಯಕ್ಕಿಂತ ಕಡಿಮೆ ಖರ್ಚು ಮಾಡಿ. ಆದಾಯದ ಮೂಲವನ್ನ ಹೆಚ್ಚಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ನೆಡೆಯುತ್ತಲೇ ಇರಲಿ. 
ಕೊನೆ ಮಾತು: ಹಣ ದುಪ್ಪಟ್ಟು ಮಾಡಲು ಶಾರ್ಟ್ ಕಟ್ ಇಲ್ಲ. ಯಾರಾದರೂ ಹಾಗೆ ಹೇಳಿಕೊಂಡು ಹೂಡಿಕೆ ಮಾಡಿ ಎಂದರೆ, ನೀವೇ ಹಣವನ್ನ ಹೂಡಿಕೆ ಮಾಡಿ ಅದರಲ್ಲಿ ಬಂದ ಹಣವನ್ನ ನೀವೇ ಅನುಭವಿಸಿ ಎನ್ನಿ. ನೆನಪಿಡಿ ಅಷ್ಟೊಂದು ಸುಲಭವಾಗಿ ಹಣ ನಿಜವಾಗಿಯೂ ದುಪ್ಪಟ್ಟಾಗುವುದಿದ್ದರೆ ಅವರೇಕೆ ಬಂದು ನಿಮ್ಮ ಮನೆಯ ಬಾಗಿಲು ಬಡಿಯುತ್ತಾರೆ? ಜನರ ನೆನಪಿನ ಶಕ್ತಿ ಬಹಳ ಕಡಿಮೆ. ವರ್ಷಕ್ಕೂ ಅಥವಾ ಎರಡು ವರ್ಷಕ್ಕೂ ಹೀಗೆ ಮೋಸ ಹೋದವರ ಕಥೆ ಕೇಳುತ್ತಲೇ ಇರುತ್ತೇವೆ. ಎಲ್ಲಿಯವರೆಗೆ ನಮ್ಮ ಸಾಮಾನ್ಯ ಜ್ಞಾನ ನಾವು ಬಳಸುವುದಿಲ್ಲ ಅಲ್ಲಿಯವರೆಗೆ ಇಂತಹ ಫ್ರಾಡ್ ಗಳು ನೆಡೆಯುತ್ತಲೆ ಇರುತ್ತವೆ. ಹಣ ದುಪ್ಪಟ್ಟಾಗಲು ಸಮಯಬೇಕು. ಸಂಯಮ ಬೇಕು ಜೊತೆಗೆ ನಿಮ್ಮ ಸಾಮಾನ್ಯ ಜ್ಞಾನವನ್ನ ಕೂಡ ಕೆಲಸಕ್ಕೆ ಹಾಕಬೇಕು!. 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com