ದುಬೈ ಮಲ್ಯರು ಹಾರಿ ಎಲ್ಲಿಗೆ ಹೋದರು?
ದುಬೈ ಮಲ್ಯರು ಹಾರಿ ಎಲ್ಲಿಗೆ ಹೋದರು?

ಹಣಕ್ಲಾಸು: ದುಬೈ ಮಲ್ಯರು ಹಾರಿ ಎಲ್ಲಿಗೆ ಹೋದರು?

ರಾತ್ರಿಯಲ್ಲಿ ಕಣ್ಣಿಗೆ ಹಬ್ಬದಂತೆ ಕಾಣುವ ಸ್ಕೈ ಲೈನ್ ಕಟ್ಟಡಗಳು ಕಣ್ಣಿಗಷ್ಟೇ ಸುಂದರ ಅದರಲ್ಲಿ 90 ಪ್ರತಿಶತ ಖಾಲಿ ಇರುವ ಕೊಠಡಿಗಳು ಬೇರೆಯದೇ ಕಥೆ ಹೇಳುತ್ತವೆ....
ದುಬೈ ಎಂದ ತಕ್ಷಣ ಅಲ್ಲಿನ ಸ್ಕೈ ಲೈನ್ ಜಗಮಗಿಸುವ ಅಂಗಡಿ , ಕಣ್ಣು ಕೋರೈಸುವ ಬುರ್ಜ್ ಖಲೀಫಾ ಜೊತೆಗೆ ಶಾಪಿಂಗ್ ಫೆಸ್ಟಿವಲ್ ನೆನಪಿಗೆ ಬರುತ್ತದೆ ಅಲ್ಲವೇ ? ಹೌದು ಪ್ರವಾಸಿಗರಿಗೆ ಈ ನೆನಪು ಬರುವುದು  ಸಾಮಾನ್ಯ. ಬೆಳಕಿನ ಕೆಳಗೆ ಕತ್ತಲೆ ಎನ್ನುವ ಒಂದು ಮಾತಿದೆ. ಜೊತೆಗೆ ದುಬೈ ಯಾವ ವೇಗದಲ್ಲಿ ಬೆಳದಿದೆ ಎಂದರೆ ಅದು ಏರಿದ ವೇಗದಲ್ಲೇ ಕುಸಿದರೆ? ಎನ್ನುವ ಭಯ ಹುಟ್ಟಿಸುವಷ್ಟು. 
ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ತಲ್ಲಣವಿರುವುದು ಜಗತ್ತಿಗೆ ತಿಳಿದ ವಿಷಯ, ಹೀಗಾಗಿ ಒಂದು ಮಟ್ಟದ ಪ್ರಭಾವ ದುಬೈ ಮೇಲೂ ಆಗುವುದು ಶತಸಿದ್ಧ. ಆದರೆ ದುಬೈ ತನ್ನ ಮೂಲಸೌಕರ್ಯಗಳ ಕಾಪಿಡಲು ಮತ್ತು ಅವುಗಳ ಉತ್ತಮ ನಿರ್ವಹಣೆಗೆ ಹೆಚ್ಚು ಹಣವನ್ನ ವ್ಯಯಿಸುತ್ತದೆ. ಇದೊಂದು ಅತ್ಯಂತ ಸೂಕ್ಷ್ಮ ಆರ್ಥಿಕ ವ್ಯವಸ್ಥೆ ಹೊಂದಿರುವ ದೇಶ. ಇಲ್ಲಿ ಉತ್ಪಾದನೆಗೆ  ಬೆಂಬಲ ನೀಡುವ ಸಂಸ್ಥೆಗಳು ಗೌಣ. ಇಲ್ಲೇನಿದ್ದರೂ ಟ್ರೇಡರ್ ಗಳದ್ದೇ ಕಾರುಬಾರು. ಗಮನಿಸಿ ಇಲ್ಲಿ ವಸ್ತು ಉತ್ಪಾದನೆಯಾಗುವುದಿಲ್ಲ ಬದಲಿಗೆ ಬೇರೆ ದೇಶಗಳಿಂದ ಕೈ ಬದಲಾಗುವುದಕ್ಕೆ ಒಂದು ವೇದಿಕೆಯಾಗಿದೆ. ಅಲ್ಲದೆ ಈ ದೇಶದಲ್ಲಿ ಸಂಸ್ಥೆಗಳ ಲಾಭಂಶದ ಮೇಲೆ ಯಾವುದೇ ತೆರಿಗೆ ಇಲ್ಲ, ವೈಯಕ್ತಿಕ ತೆರಿಗೆ ಕೂಡ ಇಲ್ಲ. ಮೊದಲು ಸೇವೆ ಮತ್ತು ಸರುಕಿನ ಮೇಲೂ ಯಾವುದೇ ತೆರಿಗೆ ಇರಲಿಲ್ಲ. 
ಇತ್ತೀಚಿಗೆ ಅಂದರೆ ಜನವರಿ  2018 ರಿಂದ 5 ಪ್ರತಿಶತ ವ್ಯಾಟ್ (ವ್ಯಾಲ್ಯೂ ಆಡೆಡ್ ಟ್ಯಾಕ್ಸ್ ) ವಿಧಿಸಲು ಶುರು ಮಾಡಿದೆ. ಯಾವುದೇ ತೆರನಾದ ತೆರಿಗೆ ಕೊಟ್ಟು ಅಭ್ಯಾಸವಿರದ ಜನತೆ ಮತ್ತು ವ್ಯಾಪಾರಸ್ಥರು ಹೊಸ ತೆರಿಗೆಯನ್ನ ಖುಷಿಯಿಂದ ಸ್ವೀಕರಿಸಿಲ್ಲ. ಮೊದಲೇ ಹೇಳಿದಂತೆ ಈ ದೇಶದಲ್ಲಿ ವ್ಯಾಪಾರ ನೆಡೆಯುತ್ತಿರುವುದು ಮಧ್ಯವರ್ತಿಗಳ ಸಹಾಯದಿಂದ ಮತ್ತು ಕಾರ್ಪೊರೇಟ್ ಟ್ಯಾಕ್ಸ್ ಇಲ್ಲದ ಕಾರಣ ಬಹಳಷ್ಟು ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿ ತಮ್ಮ ಕಛೇರಿಯನ್ನ ತೆರಿದಿವೆ. ಜಗತ್ತಿನಲ್ಲಿ ತಾವು ಮಾಡುವ ವ್ಯವಹಾರದ ಕೇಂದ್ರವಾಗಿ ದುಬೈ ಅನ್ನು ಆರಿಸಿಕೊಂಡಿವೆ. ದೇಶ ಯಾವುದೇ ಇರಲಿ ಅದು ಉತ್ಪಾದಕ ದೇಶವಲ್ಲದಿದ್ದರೆ ಅದರ ಅಭಿವೃದ್ಧಿ ಹೆಚ್ಚು ದಿನ ತನ್ನ ಸ್ಥಿರತೆ ಕಾಯ್ದುಕೊಳ್ಳುವುದು ಸಾಧ್ಯವಿಲ್ಲ. 
ದುಬೈ ಜಗತ್ತಿನ ಬಹುತೇಕ ದೇಶಗಳಂತೆ ಆರ್ಥಿಕವಾಗಿ ಕಂಗೆಟ್ಟಿದೆ, ದುಬೈನಲ್ಲಿ ಹತ್ತಾರು ವರ್ಷದಿಂದ ವ್ಯಾಪಾರ ಮಾಡಿಕೊಂಡು ಬಂದ ಬಹಳಷ್ಟು ಪ್ರಭಾವಿ ಮತ್ತು ಹಣವಂತ ವ್ಯಾಪಾರಸ್ಥರು ದುಬೈ ಬಿಟ್ಟು ಬೇರೆ ದೇಶಗಳಿಗೆ ಓಡಿ ಹೋಗಿದ್ದಾರೆ. ಇವರು ನಮ್ಮ ಮಲ್ಯನಂತೆ ಇದ್ದ ವ್ಯಾಪಾರ ವಹಿವಾಟು ಹತ್ತಾರು ವರ್ಷದಿಂದ ಕಟ್ಟಿಕೊಂಡು ಬಂದ ಬ್ರಾಂಡ್, ಹೆಸರು ಎಲ್ಲಾ ಬಿಟ್ಟು ಓಡಿ ಹೋಗಲು ಕಾರಣವೇನಿರಬಹದು? ಜೊತೆಗೆ ದುಬೈನ್ನು ಬಾಧಿಸುತ್ತಿರುವ ಸಮಸ್ಯೆಗಳೇನು? ಒಂದಷ್ಟು ಅರಿಯುವ ಪ್ರಯತ್ನ ಮಾಡೋಣ. 
ದುಬೈ ಇತರ ದೇಶಗಳಂತೆ ವ್ಯಾಪಾರ  ಮಾಡುವುದಿಲ್ಲ ಇಲ್ಲಿನ ವ್ಯಾಪಾರ ಕ್ರಮವೇ ಭಿನ್ನ. ಇಲ್ಲಿ ಒಬ್ಬ ವ್ಯಾಪಾರಿ ಇನ್ನೊಬ್ಬ ವ್ಯಾಪಾರಿಯಿಂದ ವಸ್ತುವನ್ನ ಕೊಂಡಾಗ ಅದನ್ನ ಕೊಳ್ಳುವುದು ಸಾಲದಲ್ಲಿ, ಅಂದರೆ ಕೊಳ್ಳುವ ಸಮಯದಲ್ಲಿ ಮೂರು ತಿಂಗಳು ಅಥವಾ ಕೆಲವೊಮ್ಮೆ 8 ತಿಂಗಳ ವರೆಗೆ ಸಮಯವನ್ನ ಕೇಳಿ  ಆ ಮುಂದಿನ ದಿನಾಂಕಕ್ಕೆ ಚೆಕ್ ಬರೆದು ಕೊಡುತ್ತಾರೆ. ಉದಾಹರಣೆ ನೋಡಿ ಜನವರಿ 1 ರಂದು ಕೊಂಡ ವಸ್ತುವಿಗೆ ಹಣವನ್ನ 30 ಮಾರ್ಚ್ ಗೆ ಕೊಡುವುದಾಗಿ ಹೇಳಿ, ಮಾರ್ಚ್ 30 ಕ್ಕೆ ಪೋಸ್ಟ್ ಡೇಟೆಡ್ ಚೆಕ್ ನೀಡುತ್ತಾರೆ. ಇಲ್ಲಿ ನಂಬಿಕೆ ಎನ್ನುವುದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಈ ನಂಬಿಕೆಯನ್ನ ಭದ್ರಗೊಳಿಸಲು ದುಬೈ ಸರಕಾರ ಪೋಸ್ಟ್ ಡೇಟೆಡ್ ಚೆಕ್ ಬೌನ್ಸ್ ಆದರೆ ವ್ಯಾಪಾರಿಗೆ ಮತ್ತೆ ಮಾತುಕತೆಗೆ ಅವಕಾಶ ಕೊಡದೆ ನೇರವಾಗಿ ಆತನನ್ನ ಬಂಧಿಸಲಾಗುತ್ತದೆ. ಇಷ್ಟು ವರ್ಷ ಇದು ಹೇಗೂ ನೆಡೆದುಕೊಂಡು ಬಂದಿತು. ನೆನಪಿಡಿ ಇಂತಹ ವ್ಯವಸ್ಥೆಯಲ್ಲಿ ಯಾರೊಬ್ಬರೂ ಬೀಳುವ ಹಾಗಿಲ್ಲ ಯಾರೊಬ್ಬರೂ ಕೊಟ್ಟ ಮಾತಿಗೆ ತಪ್ಪುವ ಹಾಗಿಲ್ಲ. ವ್ಯವಸ್ಥೆಯ ಒಂದು ಕೊಂಡಿ ಕಳಚಿದರೆ ಇಡೀ ವ್ಯವಸ್ಥೆ ಕುಸಿದುಬೀಳುತ್ತದೆ. 
ದುಬೈ ಕುಸಿಯಲು ಶುರುವಾಗಿದೆ. ಅಂಕಿಅಂಶದ ಪ್ರಕಾರ ಜನವರಿ 2018 ರಿಂದ ಮೇ 2018ರಲ್ಲಿ ಒಟ್ಟು 12 ಲಕ್ಷ ಇಂತಹ ಪೋಸ್ಟ್ ಡೇಟೆಡ್ ಚೆಕ್ ಗಳು ಬೌನ್ಸ್ ಆಗಿವೆ. 2017ರಲ್ಲಿ ಹೀಗೆ ಕೊಟ್ಟ ಚೆಕ್ ಗಳ ಒಟ್ಟು ಸಂಖ್ಯೆಯ  40 ಪ್ರತಿಶತ 2018 ರ ಐದು ತಿಂಗಳಲ್ಲಿ ಬೌನ್ಸ್ ಆಗಿದೆ ಎಂದರೆ ಇದೆಷ್ಟು ದೊಡ್ಡ ಸಂಖ್ಯೆ ಎನ್ನುವ ಅರಿವಾದೀತು. ಇವುಗಳ ಒಟ್ಟು ಮೊತ್ತ 26ಬಿಲಿಯನ್ ದಿರಾಮ್ (7 ಬಿಲಿಯನ್ ಡಾಲರ್) ಇಷ್ಟು ದೊಡ್ಡ ಮೊತ್ತ ಕೊಡಲು ವಿಫಲವಾಗಿರುವುದು 2018 ರ ಮೊದಲ ಐದು ತಿಂಗಳ ಸಂಖ್ಯೆಯಷ್ಟೇ ಎನ್ನುವುದು ಆಘಾತಕಾರಿ. 2018 ರಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ 30 ಸಾವಿರಕ್ಕೂ ಹೆಚ್ಚಿನ ಮೊಬೈಲ್ ಕನೆಕ್ಷನ್ ರದ್ದಾಗಿದೆ ಎನ್ನುತ್ತದೆ ಅಂಕಿಅಂಶ. ಮುಂದಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಪಡೆಯದೆ ಇರುವ ಮಕ್ಕಳ ಸಂಖ್ಯೆ 28 ಸಾವಿರಕ್ಕೂ ಹೆಚ್ಚಿದೆ. ಇವೆಲ್ಲ ಹೇಳುವ ಕಥೆ ಏನು ಗೊತ್ತೇ? ಇವರೆಲ್ಲಾ ದುಬೈ ತೊರೆದು ಹೊರಟಿದ್ದಾರೆ ಎನ್ನುವುದು. 
ವ್ಯಾಪಾರಿಗೆ ಬೌನ್ಸ್ ಆದ ಚೆಕ್ ನ ಬಗ್ಗೆ ಮಾತಾಡಲು ಕೂಡ ಅವಕಾಶ ಕೊಡದೆ ನೇರವಾಗಿ ಜೈಲಿಗೆ ಕಳಿಸುವುದು ವ್ಯಾಪಾರಸ್ಥರಲ್ಲಿ ಭಯ ಉಂಟುಮಾಡಿದೆ. ಅಲ್ಲದೆ ತಪ್ಪು ಅವರಿಂದ ಆಗಿರಬೇಕು ಎಂದಿಲ್ಲ, ಅವರಿಗೆ ಕೊಡಬೇಕಾದ ಇನ್ನೊಬ್ಬ ವ್ಯಾಪಾರಿ ಕೊಡದೆ ಹೋದರೂ ಈತ ಜೈಲಿಗೆ ಹೋಗಬೇಕಾಗುತ್ತದೆ. ಇದೊಂದು ಚೈನ್ ರಿಯಾಕ್ಷನ್. ಬಹಳ ಸಂಖ್ಯೆಯಲ್ಲಿ ವ್ಯಾಪಾರಸ್ಥರು ಸದ್ದಿಲ್ಲದೇ ತಮ್ಮ ವ್ಯಾಪಾರ, ಮನೆ, ಹತ್ತಾರು ವರ್ಷದಿಂದ ಕಟ್ಟಿಕೊಂಡ ಬದುಕು ಬಿಟ್ಟು ಓಡಿ ಹೋಗಿದ್ದಾರೆ. ಕೆಲವರು ಮುಂಬೈ, ಕೆಲವರು ಲಂಡನ್ ಸೇರಿದರೆ ಕೆನಡಾ ಬಳಷ್ಟು ಜನರನ್ನ ಕೈಬೀಸಿ ಕರೆದಿದೆ. ಹೀಗೆ ಹೋದ ಜನ ಬದುಕಿರುವಷ್ಟು ದಿನ ಇನ್ನೆಂದೂ ದುಬೈಗೆ ಕಾಲಿಡಲು ಮಾತ್ರ ಸಾಧ್ಯವಿಲ್ಲ. ಅವರ ಪಾಲಿಗೆ ಯುಎಇ ಮುಚ್ಚಿದ ಬಾಗಿಲು. 
ದುಬೈ ರಿಯಲ್ ಎಸ್ಟೇಟ್ ಇನ್ನಿಲ್ಲದೆ ಕುಸಿದಿದೆ. ಚದರ ಅಡಿಗೆ 2 ಸಾವಿರದಿಂದ ಎರಡೂವರೆ ಸಾವಿರ ದಿರಾಮ್ ಇದ್ದ ಬೆಲೆ ಇಂದು 6೦೦ ದಿರಾಮ್ ಚದರ ಅಡಿ ಎಂದರೂ ಕೊಳ್ಳುವರಿಲ್ಲದೆ ಖಾಲಿ ಬಿದ್ದಿದೆ. ರಾತ್ರಿಯಲ್ಲಿ ಕಣ್ಣಿಗೆ ಹಬ್ಬದಂತೆ ಕಾಣುವ ಸ್ಕೈ ಲೈನ್ ಕಟ್ಟಡಗಳು ಕಣ್ಣಿಗಷ್ಟೇ ಸುಂದರ ಅದರಲ್ಲಿ 90 ಪ್ರತಿಶತ ಖಾಲಿ ಇರುವ ಕೊಠಡಿಗಳು ಬೇರೆಯದೇ ಕಥೆ ಹೇಳುತ್ತವೆ. ಆದರೂ ಈ ಬಾರಿಯ ನನ್ನ ಭೇಟಿಯಲ್ಲಿ ಕಟ್ಟುತ್ತಿರುವ ಕಟ್ಟಡಗಳ ಸಂಖ್ಯೆ ಅಚ್ಚರಿ ಮೂಡಿಸಿತು. 
ದುಬೈ ಎಂದಾಕ್ಷಣ ದುಬೈ ಗೋಲ್ಡ್ ಕೂಡ ನೆನಪಿಗೆ ಬರುತ್ತದೆ. ದುಬೈ ನ ಮೀನಾ ಬಜಾರ್, ದೈರಾದಲ್ಲಿನ ಗೋಲ್ಡ್ ಶಾಪ್ಗಳು ವಿಶ್ವಪ್ರಸಿದ್ಧ. ಕಳೆದ 35 ವರ್ಷದಲ್ಲಿ ಕಾಣದ ಕುಸಿತ ಈ ಅಂಗಡಿಗಳು ಕಾಣುತ್ತಿವೆ. ಇದರ ಜೊತೆಗೆ ಬೇರೆ ಅಂಗಡಿಗಳು ಹೋಟೆಲ್ಗಳು ಕೂಡ ದಿನದಿಂದ ದಿನಕ್ಕೆ ಮುಚ್ಚುತ್ತಿವೆ. ವಿದ್ಯಾವಂತ ವಲಸಿಗರು ಭಾರತಕ್ಕೆ ವಾಪಸ್ಸು ಬರುತ್ತಿದ್ದರೆ. ಇಲ್ಲಿ ಬಂದು ಬದುಕಲಾಗದವರು ಕೆನಡಾ ಕದವನ್ನ ತಟ್ಟುತ್ತಿದ್ದಾರೆ. ಅಬ್ರಾಜ್ ಗ್ರೂಪ್ ಎನ್ನುವ ಪ್ರೈವೇಟ್ ಈಕ್ವಿಟಿ ಸಂಸ್ಥೆಯ ಕುಸಿತ ದುಬೈ ಮಟ್ಟಿಗೆ ತಡೆದುಕೊಳ್ಳಲಾಗದ ಹೊಡೆತ ಕೊಟ್ಟಿದೆ. 
ದುಬೈ ಇಂದು ಅಂತಲ್ಲ ನಾನು ಕಂಡಹಾಗೆ ಕಳೆದ 20 ವರ್ಷದಿಂದ ಒಂದಲ್ಲ ಒಂದು ಹೈಪ್ ಕ್ರಿಯೇಟ್ ಮಾಡಿ ಅದರ ಹೆಸರಲ್ಲಿ ಅಭಿವೃದ್ಧಿಗೆ ಹಣವನ್ನ ಸೃಷ್ಟಿಕೊಂಡು ಬಂದಿದೆ. ವ್ಯಕ್ತಿ ಅಥವಾ ವಸ್ತುವಿನಲ್ಲಿ ಶಕ್ತಿಯಿಲ್ಲದೆ ಕೇವಲ ಹೈಪ್ ನಿಂದ ಎಷ್ಟು ದಿನ ಉಳಿಯಲು ಸಾಧ್ಯವಾದೀತು? ಎಂದೋ ಕುಸಿಯಬೇಕಿದ್ದ ದುಬೈ ಇಂದು ಕುಸಿಯಲು ಶುರುವಾಗಿದೆ. 
ಕೊನೆ ಮಾತು: ಅಭಿವೃದ್ಧಿ ಎನ್ನುವುದು ಎರಡು ಅಲುಗಿನ ಕತ್ತಿಯಂತೆ. ಅಭಿವೃದ್ಧಿ ಎಲ್ಲಾ ದೇಶಕ್ಕೂ ಬೇಕು. ಆದರೆ ಅದು ದೀರ್ಘಕಾಲ ಉಳಿಯುವಂತಿರಬೇಕು. ಅಭಿವೃದ್ಧಿಯ ಬುನಾದಿ ಭದ್ರವಾಗಿದ್ದರೂ ಹತ್ತರಿಂದ ಹದಿನೈದು ವರ್ಷಕೊಮ್ಮೆ ಅರ್ಥಕತೆಯಲ್ಲಿ ಏರುಪೇರಾಗುವುದು ಸಹಜ. ಬುನಾದಿಯೇ ಟೊಳ್ಳಾಗಿದ್ದರೆ? ದುಬೈನ ಇಂದಿನ  ಸ್ಥಿತಿ ಬಂದೊದಗುತ್ತದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Related Stories

No stories found.

Advertisement

X
Kannada Prabha
www.kannadaprabha.com