ನೇಯ್ಮಾರನಿಗೆ ಮಿಲಿಯನ್ ಗಳ ನಂಟು ಜನ ಸಾಮಾನ್ಯನಿಗೆ ಕುಣಿಕೆಯ ಗಂಟು!

ಈ ರೀತಿಯ ಹಣದಾಟವನ್ನ ಅವರು ಹುಟ್ಟಿ ಹಾಕಿದ್ದಾರೆ. ತಲೆಬುಡವಿಲ್ಲದ ಯಾವ ಲಾಜಿಕ್ ಇಲ್ಲದ ಈ ರೀತಿಯ ವೇತನ ಅವರಿಗೇಕೆ ದೊರಕುತ್ತದೆ ನಿಮಗೆ ಗೊತ್ತೇ?? ಅದಕ್ಕೆ ಮುಖ್ಯ ಕಾರಣರಾರು ಗೊತ್ತೆ? ತಿಪ್ಪೆಯ ಮೇಲಿನ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜಗತ್ತು ಎಷ್ಟು ವೇಗವಾಗಿ ಸಾಗುತ್ತಿದೆ ಎಂದರೆ ನಮ್ಮ ಬಗ್ಗೆ ನಮಗೇ ತಿಳಿದುಕೊಳ್ಳಲು ಪುರುಸೊತ್ತಿಲ್ಲದಷ್ಟು! ಅದು ಸರಿ ಇಷ್ಟು ವೇಗವಾಗಿ ಹೋಗಿ ತಲುಪುವುದಾದರೂ ಎಲ್ಲಿಗೆ? ನಿಖರ ಉತ್ತರ ಗೊತ್ತಿಲ್ಲ. ನಿನ್ನೆಗಿಂತ ಇಂದಿನ ವೇಗ ಹೆಚ್ಚು. ಆ ವೇಗದಿಂದ ಗಳಿಸುವುದಾದರೂ ಏನು? ವೇಳೆ ಮತ್ತು ಹಣ ಒಂದಕ್ಕೊಂದು ಲಿಂಕ್ ಮಾಡಿದುದರ ಫಲವಿದು. 
ಹಣದ ಮೌಲ್ಯವನ್ನ ವೇಳೆಯ ಜೊತೆಗೆ ತಳುಕು ಹಾಕಲು ಶುರು ಮಾಡಿದ್ದು ಮನುಕುಲ ಇಂದು ಇಷ್ಟೊಂದು ಸಿರಿವಂತಿಕೆ ಕಾಣಲು ಸಾಧ್ಯವಾಯಿತು. ಸಿರಿವಂತಿಕೆಯೇನೋ ಬಂತು ಆದರೆ ಬದುಕಿನಲ್ಲಿ ಇದ್ದ ನೆಮ್ಮದಿ ಮತ್ತು ಶಾಂತಿಯ ಲೆಕ್ಕ ಅದಕ್ಕೆ ಕಟ್ಟಬೇಕಾದ ಮೌಲ್ಯ ಮಾತ್ರ ಮರೆತು ಬಿಟ್ಟೆವು. ಇರಲಿ ಈಗ ಹಣ ಮತ್ತು ವೇಳೆಯೇ ವಿಷಯ ತೆಗೆಯಲು ಮುಖ್ಯ ಕಾರಣವೇನು ಗೊತ್ತೇ? ನೇಯ್ಮಾರ್ ಎನ್ನುವ ಬಾರ್ಸಿಲೋನಾ ಫುಟಬಾಲ್ ಕ್ಲಬ್ಬಿಗ್ಗೆ ಆಡುವ ಆಟಗಾರನ ಹೆಸರು ಕೇಳಿರುತ್ತೀರಿ ಅಲ್ಲವೇ? ಆತನನ್ನ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಜಗತ್ತಿನ ಚರಿತ್ರೆಯಲ್ಲೆ ಅತಿ ದುಬಾರಿ ಮೊತ್ತ ಕೊಟ್ಟು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ವಿಷಯ ಗೊತ್ತಿರುವುದೆ. ಹೊಸ ವಿಷಯ ಏನಪ್ಪಾ ಅಂದರೆ ಇದೆ ನೇಯ್ಮಾರ್ ನನ್ನ 2050 ರಲ್ಲಿ ಕೊಳ್ಳಲು ಎಷ್ಟು ಹಣ ಬೇಕು ಎನ್ನುವುದನ್ನ ಹಣದುಬ್ಬರ ಮತ್ತಿತರ ಲೆಕ್ಕಾಚಾರದ ಮೂಲಕ ಹೇಳುವುದಾದರೆ ಸಾವಿರ ಮಿಲಿಯನ್ ಯುರೋ ಬೇಕು. 
ಅಂಕಿ-ಅಂಶಗಳ ಪ್ರಕಾರ ನೇಯ್ಮಾರ್ ಇಂದಿನ ಮಟ್ಟಿಗೆ ಜಗತ್ತಿನ ಅತಿ ದುಬಾರಿ ಆಟಗಾರ. ಕಳೆದ ಜುಲೈ ನಲ್ಲಿ ಆತನ ಬಿಕರಿಗೆ 222 ಮಿಲಿಯನ್ ಯುರೋ ತೆತ್ತಿದ್ದರಂತೆ! ಇನ್ನೊಂದು ಅಚ್ಚರಿಯ ವಿಷಯ ನಿಮಗೆ ಗೊತ್ತೆ? ಯೂರೋಪಿನ ಜನರ ಗಳಿಕೆ ಭಾರತೀಯರ ಗಳಿಕೆಗಿಂತ ಹೆಚ್ಚಾಗಿದೆ ಆದರೂ ಸಾಮಾನ್ಯ ಯೂರೋಪಿಯನ್ ಒಬ್ಬ ನೇಯ್ಮಾರ್ ನ ಒಂದಷ್ಟು ವರ್ಷದ ಗಳಿಕೆಯನ್ನ ಗಳಿಸಲು 6500 ವರ್ಷ ದುಡಿಯಬೇಕು. ಇದೆ ಮಾತನ್ನ ನಾವು ಭಾರತೀಯ ಕ್ರಿಕೆಟ್ ಆಟಗಾರರಿಗೂ ಅನ್ವಯಿಸಬಹದು. ಆಟವಷ್ಟೇ ಏಕೆ ಸಿನಿಮಾ ಒಳಗೊಂಡು ಆನೇಕ ಕಾರ್ಯ ಕ್ಷೇತ್ರಗಳಲ್ಲಿ ಇದನ್ನ ಕಾಣಬಹದು. ಈ ರೀತಿಯ ಹಣದಾಟವನ್ನ ಅವರು ಹುಟ್ಟಿ ಹಾಕಿದ್ದಾರೆ. ತಲೆಬುಡವಿಲ್ಲದ ಯಾವ ಲಾಜಿಕ್ ಇಲ್ಲದ ಈ ರೀತಿಯ ವೇತನ ಅವರಿಗೇಕೆ ದೊರಕುತ್ತದೆ ನಿಮಗೆ ಗೊತ್ತೇ?? ಅದಕ್ಕೆ ಮುಖ್ಯ ಕಾರಣರಾರು ಗೊತ್ತೆ? ತಿಪ್ಪೆಯ ಮೇಲಿನ ಜಾಗಕ್ಕೆ ಅಲ್ಲಿ ಕಟ್ಟಿದ ಮನೆಗೆ ಕೋಟಿ ಕೋಟಿ ಹಣವನ್ನ ನಿಗದಿ ಮಾಡಿದ್ದು ಯಾರು ಗೊತ್ತೆ? ಇವತ್ತು ಬೆಂಗಳೂರಿನ ತಗಡು ಶಾಲೆಗಳು ಕೂಡ ವರ್ಷಕ್ಕೆ ಮಕ್ಕಳ ಪಾಠಕ್ಕೆ ಅಂತ ಲಕ್ಷ ರೂಪಾಯಿ ನಿಗದಿ ಮಾಡಿವೆ ಅದಕ್ಕೆ ಕಾರಣರಾರು ಗೊತ್ತೆ? ಇಂದು ಜಗತ್ತಿನೆಲ್ಲೆಡೆ ಮನುಷ್ಯ ಮನುಷ್ಯನ ನಡುವಿನ ಅಂತರ ಹೆಚ್ಚಾಗುತ್ತಿದೆ. ಭಾರತದ ನ್ಯಾಷನಲ್ ಫುಡ್ ಸೆಕ್ಯೂರಿಟಿ ಸಂಸ್ಥೆ ಹೇಳುವ ಪ್ರಕಾರ ಪ್ರತಿ ವರ್ಷ ಭಾರತದಲ್ಲಿ ನಾವು ಹೊರಚೆಲ್ಲುವ ಆಹಾರ ಪದಾರ್ಥದ ಮೌಲ್ಯ 92 ಸಾವಿರ ಕೋಟಿ. ಈ ಸಂಖ್ಯೆಯನ್ನ ನಿಖರ ಎಂದು ಭಾವಿಸುವಂತಿಲ್ಲ ಇವೆಲ್ಲಾ ಅಂದಾಜು ಅಂಕಿ ಅಂಶಗಳು. ಅಂದರೆ ಇಷ್ಟು ಮಟ್ಟದ ಆಹಾರ ಬೀದಿಗೆ ಬಿಸಾಕುವ ಶ್ರೀಮಂತ ವರ್ಗ ಇಲ್ಲಿದೆ ಅಂತಾಯ್ತು. ಇದೆ ನೆಲದಲ್ಲಿ ಪ್ರತಿ ದಿನ ನಿಖರ ಲೆಕ್ಕವಿಲ್ಲದಷ್ಟು (ಮೂರರಿಂದ ಐದು ಸಾವಿರ ಮಕ್ಕಳು ದಿನಂಪ್ರತಿ ಎನ್ನುವುದು ಕೂಡ ಅಂದಾಜು ಸಂಖ್ಯೆ ಅಲ್ಲದೆ ಇನ್ನೇನು ಆಗಿರಲು ಸಾಧ್ಯ?) ಮಕ್ಕಳು ಹಸಿವು ಮತ್ತು ಪೌಷ್ಟಿಕತೆ ಇಲ್ಲದೆ ಸಾಯುತ್ತವೆ. ನಮ್ಮ ನಡುವೇ ಈ ಮಟ್ಟದ ಅತಂಕಕಾರಿ ಅಂತರವೇಕೆ ಸೃಷ್ಟಿಯಾಗುತ್ತಿದೆ? ಇಂತಹ ಒಂದು ಬೆಳವಣಿಗೆಗೆ ಕಡಿವಾಣ ಹಾಕಲು ನಾವೇನು ಮಾಡಬಹದು? ಎನ್ನುವುದನ್ನ ಇಂದಿನ ಹಣಕ್ಲಾಸಿನಲ್ಲಿ ತಿಳಿಸುವ ಪುಟ್ಟ ಪ್ರಯತ್ನ ಮಾಡುವೆ. 
ನಮ್ಮ ನಡುವೆ ಇಂತಹ ಅಂತಕಾರಿ ಅಂತರವೇಕೆ ಸೃಷ್ಟಿಯಾಗುತ್ತಿದೆ? 
ಮೊದಲನೆಯದಾಗಿ ಈ ಜಗತ್ತಿನ ರಿಚ್ ಅಂಡ್ ಎಲೈಟ್ ವರ್ಗದ ಜನ ತಮ್ಮನ್ನ ತಾವೇ ಗಂಧರ್ವರು ಅಥವಾ ಜಗತ್ತನ್ನ ಆಳಲು ಹುಟ್ಟಿದ ಉನ್ನತ ವರ್ಗದ ಜನ ಎನ್ನುವ ಭಾವನೆ ಬೆಳಸಿಕೊಂಡಿದ್ದಾರೆ. ಜಗತ್ತಿನ ಮೇಲಿನ ತಮ್ಮ ಬಿಗಿ ಹಿಡಿತ ಮುಂದುವರಿಸಿಕೊಂಡು ಹೋಗಲು ಅವರಿಗೆ ಅಸಂಘಟಿತ, ಅವಿಧ್ಯಾವಂತ ಬಡ ಜನರು ಬೇಕು. ಒಂದು ವೇಳೆ ಇಂತಹ ಜನರ ಪರಿಸ್ಥಿತಿ ಸುಧಾರಿಸಿ ಬಿಟ್ಟರೆ ಅವರು ಎಲ್ಲವನ್ನೂ ಪ್ರಶ್ನಿಸಲು ಶುರು ಮಾಡುತ್ತಾರೆ. ಇಂದು ಜಗತ್ತನ್ನ ಆಳುತ್ತಿರುವರಿಗೆ ಅವರನ್ನ ಪ್ರಶ್ನಿಸುವ ಜನಾಂಗ ಸೃಷ್ಟಿಯಾಗುವುದು ಇಷ್ಟವಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲರೂ ಆ ಮಟ್ಟದ ನಿರಕ್ಷರತೆ ಹೊಂದಿದರೆ ಅವರು ಹೇಳುವ ಕೆಲಸ ಮಾಡಲು ಜನ ಎಲ್ಲಿಂದ ತಂದಾರು? ಹೀಗಾಗಿ ಒಂದಷ್ಟು ಜನರನ್ನ  ತಾವು ಮಧ್ಯಮವರ್ಗಕ್ಕೆ ಸೇರಿದವರು ಎನ್ನುವ ಭ್ರಮೆಯಲ್ಲಿ ಬಂಧಿಸುತ್ತಾರೆ. ಹಾಗೆ ನೋಡಲು ಹೋದರೆ ಜಗತ್ತಿನಲ್ಲಿ ಮಧ್ಯಮವರ್ಗ ಎನ್ನುವುದು ಇಲ್ಲ ಎನ್ನುವಷ್ಟು ಕಡಿಮೆ ಜನಸಂಖ್ಯೆ ಹೊಂದಿರುವ ಒಂದು ಪುಟ್ಟ ಬಳಗ. ಬಡವರಲ್ಲಿ ಯಾರು ಕಡಿಮೆ ಬಡವರು? ಯಾರು ಹೆಚ್ಚು ಬಡವರು? ಎನ್ನುವ ಬಡಿದಾಟವಿದ್ದಂತೆ ಶ್ರೀಮಂತರಲ್ಲಿ ಕೂಡ ಅಗ್ರ ಪಟ್ಟಕ್ಕೆ ಪ್ರತಿ ನಿತ್ಯ ಹೊಡೆದಾಟವಿದೆ.  
ಎರಡನೆಯದಾಗಿ ಅತಿ ಶ್ರೀಮಂತರ ನಡುವೆ ಇದೊಂದು ಶಕ್ತಿ ಪ್ರದರ್ಶನದ ವಿಷಯವಾಗಿದೆ. ಹಣ ಎನ್ನುವುದು ಅವರಿಗೆ ವಸ್ತು ಅಥವಾ ವಿಷಯವೇ ಅಲ್ಲ ಅವರಿಗೇನಿದ್ದರೂ ನಾನು ಎನ್ನುವ ಅಹಂಭಾವವಷ್ಟೇ ಮುಖ್ಯ. ಜಗತ್ತಿನ ಎಷ್ಟು ಭಾಗ ತಮ್ಮ ಹಿಡಿತದಲ್ಲಿದೆ ಎನ್ನುವುದು ಅವರಿಗೆ ಉನ್ಮಾದ ತರಿಸುವ ವಿಷಯವೇ ಹೊರತು ಹಣವಲ್ಲ. ತಮ್ಮ ಮುಂದಿನ ಪೀಳಿಗೆ ಕೂಡ ಇತರರ ಜೊತೆ ಸ್ನೇಹ ಸಂಬಂಧ ಬೆಳಸದಂತೆ ತಾಕೀತು ಮಾಡುತ್ತಾರೆ. ಇವರ ಸ್ನೇಹ ಸಂಬಂಧ ತನ್ನ ಸರೀಕರೊಂದಿಗೆ ಮಾತ್ರ. 
ಮೂರನೆಯದಾಗಿ ಹಿಂದೆ ಜನರನ್ನ ಧರ್ಮದ  ಹೆಸರಿನಲ್ಲಿ ವಿಭಜಿಸುವುದು ಮತ್ತು ಆ ಮೂಲಕ ತಮ್ಮ ಅಂಕೆಯಲ್ಲಿ ಹಿಡಿದಿಡುವುದು ಸುಲಭವಾಗಿತ್ತು. ಇತ್ತೀಚಿನ ದಶಕದಲ್ಲಿ ಅಮೇರಿಕಾ ಮತ್ತು ಯೂರೋಪಿನಲ್ಲಿ ಸಾಮಾನ್ಯ ಜನರನ್ನ ಧರ್ಮದ ಹೆಸರಲ್ಲಿ ವಿಭಜಿಸುವುದು ಮತ್ತು ಕಂಟ್ರೋಲ್ ಮಾಡುವುದು ಕಷ್ಟದ ಕೆಲಸವೆಂದು ಅವರಿಗೆ ತಿಳಿಯಿತು. ಅದಲ್ಲದೆ ಮುಂದುವರಿಯುತ್ತಿರುವ ದೇಶಗಳಲ್ಲಿ ಕೂಡ ಹೆಚ್ಚಿದ ಇಂಟರ್ನೆಟ್ ಬಳಕೆ ಪರ್ಯಾಯ ಚಿಂತನಶಕ್ತಿಯನ್ನ, ಪ್ರಶ್ನಿಸುವ ಶಕ್ತಿಯನ್ನ ಜನತೆಗೆ ನೀಡಿತು. ಇದಕ್ಕೆ ಉತ್ತರ ಎನ್ನುವಂತೆ ಅವರು ಕಂಡು ಕೊಂಡ ಪರಿಹಾರವೇ ಹಣಕಾಸು ಅಥವಾ ಹೊಸ ಮನಿ ಗೇಮ್! ಜಗತ್ತಿನ ಮುಕ್ಕಾಲು ಪಾಲು ಜನರನ್ನ ಸಾಲವೆನ್ನುವ ಖೆಡ್ಡಾಗೆ ದೂಡಿಬಿಟ್ಟರೆ ಮುಗಿಯಿತು ಅವರೆಂದೂ ತಲೆ ಎತ್ತಬಾರದು ಹಾಗೆ ಯೋಜನೆಯನ್ನ, ಬಡ್ಡಿ ದರವನ್ನ ತಮಗೆ ಬೇಕಾದ ಹಾಗೆ ಬದಲು ಮಾಡುವ ಅಧಿಕಾರ ಅವರ ಕೈಲಿದೆ. ಹೀಗಾಗಿ ಇಂದು ಪ್ರಶ್ನಿಸುವ ಬುದ್ದಿಯಿರುವ ಜನ ಸಾಲದ ಸುಳಿಯಲ್ಲಿ, ಪ್ರಶ್ನಿಸಲು ಬಾರದವರು ಹಸಿವಿನ ಹಂಗಿನಲ್ಲಿ ಹೀಗೆ ಜನತೆಯನ್ನ ವಿಭಾಜಿಸಿ ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. 
ಇಂತಹ ಒಂದು ಬೆಳವಣಿಗೆಗೆ ಕಡಿವಾಣ ಹಾಕಲು ನಾವೇನು ಮಾಡಬಹದು?
ವಿತ್ತ ನೀತಿಯಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಅಡಗಿದೆ. ಅವರು ನಮ್ಮನ್ನು ಕಟ್ಟಿ ಹಾಕಿದ ದಾರದಿಂದ ಮಾತ್ರ ನಾವು ಅವರನ್ನ ಕಟ್ಟಿ ಹಾಕಲು ಸಾಧ್ಯ. ಕೆಲವೊಂದು ಅಂಶಗಳನ್ನ  ನೋಡೋಣ ಅವುಗಳನ್ನ ನಿಜ ಜೀವನದಲ್ಲಿ ಅಳವಡಿಸಿಕೊಂಡಿದ್ದೆ ಆದರೆ ಖಂಡಿತ ಅವರನ್ನ ಕಟ್ಟಿ ಹಾಕಬಹದು. 
ಡಿಮ್ಯಾಂಡ್ ಅಂಡ್ ಸಪ್ಲೈ: ಎಲ್ಲರಿಗೂ ಗೊತ್ತಿರುವಂತೆ ಬೇಡಿಕೆ ಹೆಚ್ಚಿದರೆ ಅದಕ್ಕೆ ತಕ್ಕಂತೆ ಪೂರೈಕೆಯು ಹೆಚ್ಚುತ್ತದೆ ಅಲ್ಲವೇ? ಬೇಡಿಕೆಯೇ ಇಲ್ಲದಿದ್ದರೆ? ಪೂರೈಕೆಗೆ ಬೆಲೆ ಎಲ್ಲಿಂದ ಬಂದೀತು?  ತಿಪ್ಪೆಯ ಮೇಲಿನ ಮನೆಗೆ ಕೋಟಿ ರೂಪಾಯಿ ನಿಗದಿ ಮಾಡಿದರು ಸರಿ., ಅದನ್ನ ಸಾಲ ಮಾಡಿ ಮುಗಿಬಿದ್ದು ಕೊಳ್ಳಲು ಯಾರು ಹೇಳಿದರು?? ಅಷ್ಟು ಸಾಲ ಮಾಡಿ ಕೊಂಡ ಮೇಲೆ ನೀವು ಅವರು ಹೇಳಿದಂತೆ ಕುಣಿಯುವ ತೊಗಲು ಬೋಂಬೆ ಬೇರೇನೂ ಆಗಲು ಸಾಧ್ಯವಿಲ್ಲ. ಉತ್ತರ ಸಿಕ್ಕಿತು ಅಂದುಕೊಳ್ಳುತ್ತೀನಿ. ಅವರು ಬೆಲೆ ಎಷ್ಟೇ ನಿಗದಿ ಮಾಡಲಿ ಅದನ್ನ ನಿಮ್ಮ ಬೆಲೆಗೆ ಇಳಿಸಿಕೊಳ್ಳುವ ತಾಕತ್ತು ನಿಮಗಿದೆ. ಆದರೆ ವಿಪರ್ಯಾಸ ನೋಡಿ ಅಂತಹ ಶಕ್ತಿ ನಿಮ್ಮಲಿದೆ ಎನ್ನುವ ಅರಿವು ನಿಮ್ಮಲಿಲ್ಲ. 
ಹೂಡಿಕೆ ನಾಳಿನ ಬದುಕಿಗೆ ಮಾಡಲೇಬೇಕಾದ ಅನಿವಾರ್ಯ ಎನ್ನುವ ನಿಲುವನ್ನ ನಮ್ಮ ನಡುವೆ ಹುಟ್ಟಿಹಾಕಿದ್ದಾರೆ. ವೇಳೆಗೂ ಹಣಕ್ಕೂ ಒಂದು ಕೊಂಡಿ ಸೃಷ್ಟಿಸಿದ್ದಾರೆ ಅದು ಇಂದು ಕೇವಲ ಕೊಂಡಿಯಾಗಿರದೆ ಸರಪಳಿಯಾಗಿ ಮಾರ್ಪಟ್ಟಿದೆ. ಮನೆ ಮತ್ತು ಜಾಗದ ಮೇಲೆ ಹಣವಿದ್ದರೆ ಮಾತ್ರ ಹೂಡಿಕೆ ಮಾಡಬೇಕು. ಆದರೇನು ಇಂದಿನ ಹೂಡಿಕೆ ನಾಳೆ ಹೆಚ್ಚಿನ ಲಾಭಾಂಶ ತಂದು ಕೊಡುತ್ತದೆ ಎನ್ನುವ ಪ್ರಲೋಭನೆ ಇಂದು ನಿಮ್ಮನ್ನ ಸಾಲ ಮಾಡಲು ಪ್ರೇರೇಪಿಸುತ್ತದೆ. ಇದೊಂದು ವಿಷವರ್ತುಲ ಒಮ್ಮೆ ಇಲ್ಲಿ ಪ್ರವೇಶ ಪಡೆದರೆ ಮುಗಿಯಿತು ಇಲ್ಲಿಂದ ನಿರ್ಗಮಿಸುವುದು ಕಷ್ಟ. ಇದರ ಅರಿವು ನಮ್ಮದಾದರೆ ಅದು ನಮ್ಮ ಗೆಲುವು ಅವರ ಸೋಲು. 
ನಮ್ಮಲ್ಲಿರುವ ಬಹು ದೊಡ್ಡ ಕೊರತೆ ಸಂಘಟನೆ: ಯಾವುದೇ ಒಂದು ವ್ಯವಸ್ಥೆಯ ವಿರುದ್ಧ ನಾಲ್ಕು ಜನ ಸಂಘಟಿರಾದರೆ ಸಾಕು ಮೂರು ದಿನದಲ್ಲಿ ಅವರಲ್ಲಿ ನಾಲ್ಕು ಪಾರ್ಟಿ ಉಂಟಾಗಿರುತ್ತದೆ. ನಮ್ಮನ್ನಾಳುವರಿಗೆ ನಮ್ಮನ್ನ ಒಡೆಯುವ ರೀತಿ ಗೊತ್ತಿದೆ. ಹೀಗಾಗಿ ನಮ್ಮ ಸಮಸ್ಯೆಗಳು ಎಂದಿಗೂ ಮುಗಿಯದ ಸಮಸ್ಯೆಗಳಾಗಿಯೇ ಉಳಿದಿವೆ. ಡಾಲರ್ ತಿರಸ್ಕರಿಸುವುದಿರಬಹದು., ಬೆಂಗಳೂರಿನ ಸೈಟಿನ ಬೆಲೆ ನಿಗದಿ ಇರಬಹದು.. ಅಷ್ಟೇಕೆ ಸ್ಕೂಲ್ನ ಫೀಸ್ ಎಷ್ಟೆನ್ನುವ ನಿರ್ಧಾರವಿರಬಹದು ಇವೆಲ್ಲವನ್ನ ನಾವು ಸಂಘಟಿತರಾದರೆ ಸುಲಭವಾಗಿ ನಿರ್ವಹಿಸಬಹದು. 
ನಮ್ಮ ನಡುವಿನ ಅಂತರಕ್ಕೆ, ಬೆಂಗಳೂರಿನ ಸೈಟಿನ ಬೆಲೆ ಏರುವಿಕೆಗೆ, ಶಾಲೆಯ ಫೀಸ್ ಏರುವಿಕೆ, ಡಾಲರ್, ಬಂಗಾರದ ಬೆಲೆಯೇರಿಕೆ ಹೀಗೆ ಜಗತ್ತಿನ ಯಾವುದೇ ಸಮಸ್ಯೆಯ ಹೆಸರೇಳಿ ಅದಕ್ಕೆಲ್ಲಾ ಕಾರಣ ನಾವು-ನೀವು. ನಾವು-ನೀವು ಸರಿಯಾಗಿಬಿಟ್ಟರೆ ಸಮಾಜ ತಾನಾಗೇ ಸರಿಯಾಗುತ್ತದೆ. ಸಣ್ಣ ಉದಾಹರಣೆ ನೋಡಿ ಸಾವಿರಾರು ಸಂಖ್ಯೆಯ ಜಿಂಕೆಗಳ ಹಿಂಡನ್ನ ಕೇವಲ ನಾಲ್ಕೈದು ಸಿಂಹ ಅಥವಾ ಹುಲಿಗಳು ಅಟ್ಟಾಡಿಸಿ.. ಬೇರ್ಪಡಿಸಿ ಕೊನೆಗೆ ತನ್ನ ಆಹಾರವ ಪಡೆದುಕೊಳ್ಳುತ್ತದೆ. ನಮ್ಮ ಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ಜಿಂಕೆಗಳಿಗೆ ಸಿಂಹದ ವಿರುದ್ಧ ತಿರುಗಿ ಬೀಳುವ ಯೋಚನಾಶಕ್ತಿ, ಸಂಘಟನಾಶಕ್ತಿ ಇಲ್ಲ. ನಾವು ಮನುಷ್ಯ ಪ್ರಾಣಿಗಳು ಚಿಂತಿಸುವ ಶಕ್ತಿ ನಮಗಿದೆ ಆದರೆ ಸಂಘಟನೆಗೆ ಯಾರ ಅಪ್ಪಣೆಗಾಗಿ ಕಾದು ಕುಳಿತ್ತಿದ್ದೇವೆ?  
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com