ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ, ಏನಿದು ಹೊಸ ಪುರಾಣ?

ಭಾರತವೇನಾದರೂ ಸಣ್ಣ ದೇಶವಾಗಿದ್ದರೆ ಇಡೀ ದೇಶ ಸ್ಕ್ಯಾಮ್ ನ ಹೊಡೆತಕ್ಕೆ ದಿವಾಳಿ ಎದ್ದಿರುತ್ತಿತ್ತು....
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್

ಭಾರತವೇನಾದರೂ ಸಣ್ಣ ದೇಶವಾಗಿದ್ದರೆ ಇಡೀ ದೇಶ ಸ್ಕ್ಯಾಮ್ ನ ಹೊಡೆತಕ್ಕೆ ದಿವಾಳಿ ಎದ್ದಿರುತ್ತಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ನೆಡೆದಿದೆ ಎನ್ನಲಾದ ಅವ್ಯವಹಾರದ ಮೊತ್ತ 11,380 ಕೋಟಿ ರೂಪಾಯಿಗಳು. ಇದು ಎಷ್ಟು ದೊಡ್ಡ ಮೊತ್ತ ಎನ್ನಲು ಮೇಲಿನ ಸಾಲು ಬರೆಯಬೇಕಾಯಿತು. ಇನ್ನೂ ಸರಳವಾಗಿ ಹೇಳಬೇಕೆಂದರೆ ಭಾರತ ಸರಕಾರ ಇತ್ತೀಚೆಗೆ ಹದಗೆಟ್ಟ ಬ್ಯಾಂಕಿಂಗ್ ವ್ಯವಸ್ಥೆಗೆ ಕಾಯಕಲ್ಪ ನೀಡಲು ಬಂಡವಾಳ ಮರು ಹೂಡಿಕೆ ಮಾಡಿತ್ತು. ಭಾರತ ಸರಕಾರ ಅಷ್ಟು ದೊಡ್ಡ ಮೊತ್ತ ಹೂಡಿಕೆ ಮಾಡಿತು. ಪಿಎನ್ಬಿ ಸ್ಕ್ಯಾಮ್ ಸರಾಕಾರದ ಬಂಡವಾಳ ಮರು ಹೂಡಿಕೆಯ ಎರಡು ಪಟ್ಟು ಎಂದರೆ ಸಮಸ್ಯೆಯ ಅರಿವಾದೀತು.

ಇನ್ನೂ ಸರಳವಾಗಿ ಅರ್ಥವಾಗುವಂತೆ ಹೇಳಬೇಕೆಂದರೆ ನಿಮಗೆ ಯಾರಾದರೂ ಮೋಸ ಮಾಡಿದರು ಎಂದುಕೊಳ್ಳಿ ಅದರ ಮೊತ್ತ ಸಾವಿರ ಎಂದುಕೊಳ್ಳಿ ನಿಮಗೆ ಅದೇ ಸಾವಿರ ಮತ್ತೆ ಕೂಡಿಸಲು ಎಂಟೂವರೆ ವರ್ಷ ಬೇಕಾಗುತ್ತೆ ಎಂದುಕೊಳ್ಳಿ ಆಗ ಮೋಸದಿಂದ ಮಾಯವಾದ ಹಣದ ಮೊತ್ತದ ಮೌಲ್ಯದ ಅರಿವು ನಿಮಗಾಗುತ್ತದೆ. ಈಗ ಪಿಎನ್ಬಿ ಬ್ಯಾಂಕಿನ ಸ್ಥಿತಿ ಇದು. ಈ ವರ್ಷದ ಅದರ ಒಟ್ಟು ಲಾಭದ ಎಂಟೂವರೆ ಪಟ್ಟು ಒಂದೇ ಏಟಿಗೆ ಮಂಗಮಾಯವಾಗಿದೆ!. ಈ ರೀತಿಯ ಮೋಸದಾಟದ ಮುಖ್ಯ ರೂವಾರಿ ನೀರವ್ ಮೋದಿ ಎನ್ನುವುದು ಇಂದು ಮಕ್ಕಳಿಗೂ ತಿಳಿದ ವಿಷಯ. ನೀರವ್ ಬ್ಯಾಂಕಿನ ಒಬ್ಬ ಅಧಿಕಾರಿಯ ಸಹಾಯದಿಂದ ಇಷ್ಟು ದೊಡ್ಡ ಮೊತ್ತವನ್ನ ಅಷ್ಟು ಸಲೀಸಾಗಿ ಲಪಟಾಯಿಸಲು ಸಾಧ್ಯವೇ ? ಯಾವುದೇ ಲೆಕ್ಕದಿಂದ ನೋಡಿದರೂ ಇದು ಬಹು ದೊಡ್ಡ ಸ್ಕ್ಯಾಮ್  ಎನ್ನುವುದರಲ್ಲಿ ಎರಡು ಮಾತಿಲ್ಲ. ನೀರವ್ ಮೋದಿ ಒಬ್ಬ ಬಿಲಿಯನೇರ್ ಹಾಲಿವುಡ್ ಮತ್ತು ಬಾಲಿವುಡ್ ನಲ್ಲಿರುವ ಅಲ್ಟ್ರಾ ರಿಚ್ ಜನರ ಸಹವಾಸ ಹೊಂದಿರುವನು ಜೊತೆಗೆ ಚಿಕ್ಕಪ್ಪ, ಮಾವ ಎಲ್ಲರೂ ಅತಿ ಶ್ರೀಮಂತರೇ ಸುತ್ತಿ ಬಳಸಿ ಅಂಬಾನಿ ಮನೆಯವರೊಡನೆಯೂ ಸಂಬಂಧವಿದೆ. ಇವೆಲ್ಲಾ ಅತ್ತಲಿರಲಿ ಏನಿದು ಸ್ಕ್ಯಾಮ್ ಹೇಗಾಯ್ತು? ಎನ್ನುವುದನ್ನ ತಿಳಿದುಕೊಳ್ಳೋಣ. ಸಣ್ಣ ಪುಟ್ಟ ಟ್ರಾನ್ಸಾಕ್ಷನ್ ಮೇಲೆ ಜನ ಸಾಮಾನ್ಯನ ಮೇಲೆ ಹಣ ಜಡಿದು ಗುಂಡಗಾಗುವ ಬ್ಯಾಂಕ್ಗಳನ್ನು ಇಂತಹ ಶ್ರೀಮಂತ ಖದೀಮರು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವ ವಿಷಯ ತಿಳಿದಿರಲಿ.

ಏನಿದು ಸ್ಕ್ಯಾಮ್?

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿದೇಶದಲ್ಲಿರುವ ಬೇರೆ ಭಾರತೀಯ ಬ್ಯಾಂಕ್ಗಳಿಗೆ ಲೆಟರ್ ಆಫ್ ಅಂಡರ್ಸ್ಟ್ಯಾಂಡಿಂಗ್ ಕೊಟ್ಟಿದೆ ಅದರ ಆಧಾರದ ಮೇಲೆ ಅಲ್ಲಿನ ಬ್ಯಾಂಕ್ಗಳು ನೀರವ್ ನ ಸಂಸ್ಥೆಗೆ ವಿದೇಶಿ ಹಣದಲ್ಲಿ ಸಾಲವನ್ನ ಕೊಟ್ಟಿವೆ. ಈಗ ನೀರವ್ ಸಂಸ್ಥೆ ಪಡೆದ ಸಾಲ ಮರುಪಾವತಿಸಿಲ್ಲ. ಭಾರತೀಯ ಮೂಲದ ವಿದೇಶಿ ಬ್ಯಾಂಕ್ಗಳು ಹಣ ಬರಬೇಕಾದದ್ದು ಪಿಎನ್ಬಿ ಯಿಂದ ನೀರವ್ ನಿಂದ ಅಲ್ಲ ಎಂದು ತಗಾದೆ ತೆಗೆದು ಕೂತಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಲೆಕ್ಕ ಪತ್ರ ನೋಡಿ ಅಯ್ಯೋ ಇದ್ಹೇಗೆ ಸಾಧ್ಯ? ನಾನು ಯಾವುದೇ ರೀತಿಯ ಲೆಟರ್ ಆಫ್ ಅಂಡರ್ ಸ್ಟ್ಯಾಂಡಿಂಗ್ ನೀಡಿಲ್ಲ ಎನ್ನುತ್ತಿದೆ. ಅಲ್ಲಿನ ಬ್ಯಾಂಕ್ಗಳು ಸ್ವಿಫ್ಟ್ ಮೂಲಕ ಬಂದ ಸಂದೇಶವ ತೋರಿಸಿ ಇದಕ್ಕಿಂತ ಬೇರೆ ಪುರಾವೆ ಏನು ಬೇಕು ಎನ್ನುತ್ತಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ನೌಕರರಲ್ಲಿ ಒಂದಿಬ್ಬರು ಬ್ಯಾಂಕಿನ ವ್ಯವಸ್ಥೆಯನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ ಅದು ನಕಲು ಪತ್ರಗಳು ಅವನ್ನ ಒಪ್ಪಿಕೊಳ್ಳುವ ಮುಂಚೆ ಪರಿಶೀಲಿಸುವುದು ಅವರ ಕೆಲಸವಲ್ಲವೇ? ಎನ್ನುವ ಪ್ರಶ್ನೆ ಎತ್ತಿದೆ. ಆ ದೃಷ್ಟಿಯಲ್ಲಿ ಸದ್ಯಕ್ಕೆ ಸಾಲದ ನಷ್ಟದ ಮೊತ್ತವಿರುವುದು ಅಲಹಾಬಾದ್ ಬ್ಯಾಂಕ್ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೇಲಲ್ಲ. ಇದನ್ನ ಸರಳವಾಗಿ ಅರ್ಥ ಮಾಡಿಸಲು ಒಂದು ಉದಾಹರಣೆ ನೀಡುತ್ತೇನೆ ಅದಕ್ಕೂ ಮುಂಚೆ ಲೆಟರ್ ಆಫ್ ಅಂಡರ್ ಸ್ಟ್ಯಾಂಡಿಂಗ್ ಎಂದರೇನು ಎಂದು ತಿಳಿದುಕೊಳ್ಳುವುದು ಒಳ್ಳೆಯದು.

ಲೆಟರ್ ಆಫ್ ಅಂಡರ್ ಸ್ಟ್ಯಾಂಡಿಂಗ್ ಎಂದರೆ ಲೆಟರ್ ಆಫ್ ಕ್ರೆಡಿಟ್ ಇದ್ದಹಾಗೆ. ಒಂದು ಬ್ಯಾಂಕ್ ಇನ್ನೊಂದು ಬ್ಯಾಂಕಿಗೆ ಯಾವುದಾದರೂ ವ್ಯಕ್ತಿಗೆ ಅಥವಾ ಸಂಸ್ಥೆಗೆ ಸಾಲ ನೀಡಿ ಪರವಾಗಿಲ್ಲ ಆತ ಅಥವಾ ಆ ಸಂಸ್ಥೆ ಸಾಲ ವಾಪಸ್ಸು ಕೊಡದೆ ಹೋದರೆ ನಾನು ಕೊಡುತ್ತೇನೆ ಎಂದು ಬರೆದು ಕೊಟ್ಟ ಮುಚ್ಚಳಿಕೆ ಪತ್ರ. ಇಂತವು ಸಾಮಾನ್ಯವಾಗಿ ಭಾರತದ ಬ್ಯಾಂಕು ವಿದೇಶದ ಬ್ಯಾಂಕಿಗೆ ನೀಡುವುದು ಸಾಮಾನ್ಯ. ಸದರಿ ಕೇಸ್ ನಲ್ಲಿ ಏನಾಗಿದೆ ಭಾರತದ ಮುಂಬೈ ಶಾಖೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಂಗಕಾಂಗ್ ನಲ್ಲಿರುವ ಅಲಹಾಬಾದ್ ಬ್ಯಾಂಕಿಗೆ ಈ ರೀತಿಯ ಮುಚ್ಚಳಿಕೆ ಪತ್ರ ಕೊಟ್ಟಿದೆ ಹೀಗಾಗಿ ನಾವು ನೀರವ್ ಗೆ ಸಾಲ ಕೊಟ್ಟೆವು ಎನ್ನವುದು ಅಲಹಾಬಾದ್ ಬ್ಯಾಂಕ್ ನ ವಾದ. ನಾನು ಆ ರೀತಿಯ ಮುಚ್ಚಳಿಕೆ ಪತ್ರ ಕೊಟ್ಟಿಲ್ಲ ಎನ್ನುವುದು ಪಿಎನ್ಬಿ ವಾದ. ಇಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಅರಾಜಕತೆ ಮತ್ತು ಟೆಕ್ನಾಲಜಿ ಉಪಯೋಗಿಸಿ ಹಣ ಲಪಟಾಯಿಸುವುದು ಎಷ್ಟು ಸುಲಭ ಎನ್ನುವುದು ಸಾಬೀತಾಗಿದೆ.  

ಈಗ ಉದಾಹರಣೆ ನೋಡೋಣ. ನೀರವ್ ಮೋದಿಯ ಕಂಪನಿ ಪಿಎನ್ಬಿ ಬ್ಯಾಂಕಿಗೆ ಬಂದು ಲೆಟರ್ ಆಫ್ ಅಂಡರ್ ಸ್ಟ್ಯಾಂಡಿಂಗ್ ಕೊಡಿ ಹಾಂಗಕಾಂಗ್ ನಿಂದ ಆಭರಣಗಳನ್ನ ಆಮದು ಮಾಡಿಕೊಳ್ಳಬೇಕಿದೆ ಎಂದು ಕೇಳುತ್ತದೆ. ಹಾಂಗಕಾಂಗ್ ಹಣದಲ್ಲಿ ಸಾಲ ಕೊಟ್ಟರೆ ವಿನಿಮಯ ಉಳಿತಾಯವಾಗುತ್ತದೆ ಜೊತೆಗೆ ನಿರ್ವಹಣೆಯೂ ಸುಲಭ ಎನ್ನುವ ದೃಷ್ಟಿಯಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಂಗಕಾಂಗ್ ನಲ್ಲಿರುವ ಭಾರತೀಯ ಮೂಲದ ಅಲಹಾಬಾದ್ ಬ್ಯಾಂಕಿಗೆ ಸಾಲ ಕೊಡಿ ಆ ಸಾಲಕ್ಕೆ ನಾವು ಗ್ಯಾರಂಟಿ ಎನ್ನುವ ಮುಚ್ಚಳಿಕೆ ಬರೆದುಕೊಡುತ್ತದೆ. ಅಲಹಾಬಾದ್ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತಹ ಸಂಸ್ಥೆ ಮುಚ್ಚಳಿಕೆ ಬರೆದುಕೊಟ್ಟಿದೆ ಎಂದು ನಿರುಮ್ಮಳವಾಗಿ ಸಾಲ ನೀಡುತ್ತದೆ. ಇದು ವರ್ಷಾನುಗಟ್ಟಲೆ ನೆಡೆದು ಬಂದಿದೆ. ಇವತ್ತಿಗೆ ನೀನು ಕೊಟ್ಟೆ ಎಂದು ಅವರು ಕೊಟ್ಟಿಲ್ಲ ಎಂದು ಇವರು, ಹಣ ಪಡೆದು ಪರಾರಿಯಾದ ಮೋದಿ ಒಂದು ಕಡೆ. ಇದು ಸಾರಾಂಶ.

ಹೇಗೆ ಈ ಸ್ಕ್ಯಾಮ್ ಗೆ ಜೀವ ಕೊಟ್ಟರು?
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಹತ್ತು ಜನ ಅಧಿಕಾರಿಗಳ ಕೆಲಸದಿಂದ ತೆಗೆದು ಹಾಕಿದೆ. ಇದು ಕೇವಲ ಇವರ ಕೆಲಸವೇ? ಎನ್ನವುದು ಚರ್ಚೆಯ ವಿಷಯ. ಅದಿರಲಿ, ನೀರವ್ ಮೋದಿಗೆ ಆಪ್ತರಾದ ಅಥವಾ ಆತನಿಂದ ಹಣವನ್ನ ಪಡೆದ ಕೆಲ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳು ನಕಲಿ ಲೆಟರ್ ಆಫ್ ಅಂಡರ್ ಸ್ಟ್ಯಾಂಡಿಂಗ್ ಅನ್ನು ಸ್ವಿಫ್ಟ್ (swift ) ಮೂಲಕ  (ಅಂದರೆ ಸೊಸೈಟಿ ಫಾರ್ ವರ್ಲ್ಡ್ ವೈಡ್ ಇಂಟೆರ್ ಬ್ಯಾಂಕ್ ಟೆಲಿಕಮ್ಯುನಿಕೇಷನ್) ಈ ಪತ್ರವನ್ನ ಕಳಿಸುತ್ತಿದ್ದರು. ಈ ಒಂದು ವ್ಯವಸ್ಥೆ ಜಗತ್ತಿನ ಎಲ್ಲಾ ಬ್ಯಾಂಕ್ಗಳು ನಂಬಿಕೆ ಇಟ್ಟಿರುವ ಸುಲಭವಾಗಿ ಹಣ ಮತ್ತು ಇಂತಹ ಪತ್ರಗಳ ರವಾನೆಗೆ ಬಳಸುವ ಒಂದು ಸಾಫ್ಟ್ವೇರ್. ಇದರ ಮೂಲಕ ವಿನಿಮಯವಾದ ಹಣ ಅಥವಾ ಪತ್ರದಲ್ಲಿ ಯಾರದೇ ಸಹಿ ಇರುವುದಿಲ್ಲ. ಇದೊಂದು ನಂಬಿಕೆಯ ಮೇಲೆ ನೆಡೆಯುವ ಕಾರ್ಯ. ಒಂದು ಬ್ಯಾಂಕಿನ ಮೂಲಕ ಸಂದೇಶ ಬಂದಿದೆ ಎಂದರೆ ಮುಗಿಯಿತು ಅದು ಬ್ಯಾಂಕಿನ ಅನುಮತಿಯಿಂದ ಬಂದಿದೆ ಎಂದರ್ಥ ಅದನ್ನ ನೌಕರನೊಬ್ಬ ತನ್ನ ಅಧಿಕಾರಿಯ ಗಮನಕ್ಕೆ ತರದೇ ಕಳಿಸಿದರೂ ಅದಕ್ಕೆ ಮಾನ್ಯತೆಯುಂಟು. ಪಿಎನ್ಬಿಯಲ್ಲಿ ಆಗಿರುವುದು ಇದೆ. ಕೆಲವು ನೌಕರರು ಮುಚ್ಚಳಿಕೆಯನ್ನ ಸ್ವಿಫ್ಟ್ ಮೂಲಕ ಕಳಿಸಿದ್ದಾರೆ ಅದನ್ನ ಬೇರೆಯಾರು ಪರಿಶೀಲಿಸಲೇ ಇಲ್ಲ.


ಹಾಗಾದರೆ ಇಷ್ಟು ದಿನ ಬೆಳಕಿಗೆ ಬಾರದ ಈ ಸ್ಕ್ಯಾಮ್ ಇವತ್ತು ಹೇಗೆ ಗೊತ್ತಾಯ್ತು ?

ವರ್ಷಾನುಗಟ್ಟಲೆ ಭ್ರಷ್ಟ ಅಧಿಕಾರಿಗಳು ಸ್ವಿಫ್ಟ್ ಮೂಲಕ  ಲೆಟರ್ ಆಫ್ ಅಂಡರ್ ಸ್ಟ್ಯಾಂಡಿಂಗ್ ಕಳಿಸುತ್ತಾ ಬಂದಿದ್ದಾರೆ. ಅವರಲ್ಲಿ ಒಂದಷ್ಟು ಜನ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಈ ಬಾರಿ ಸಾಲದ ಮೊತ್ತ ನೂರು ರೂಪಾಯಿ ಇದ್ದರೆ ಲೆಟರ್ ಆಫ್ ಕ್ರೆಡಿಟ್ ನೂರಾಹತ್ತು ರುಪಾಯಿಗೆ ಕೊಡಿ ಎನ್ನುವ ಬೇಡಿಕೆ ಬಂದಿದೆ. ಅರೆರೆ ಇದೇನಿದು ಸಾಲದ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ಮುಚ್ಚಳಿಕೆ ಏಕೆ ಕೊಡಬೇಕು? ಎಂದು ಅಧಿಕಾರಿಯೊಬ್ಬರು ಎಚ್ಚೆತ್ತುಕೊಂಡಿದ್ದಾರೆ ಸಾಲದಕ್ಕೆ ನಿಮ್ಮ ಹಳೆಯ ಮುಚ್ಚಳಿಕೆ ಎಲ್ಲವನ್ನೂ ನಾವು ಸಾಲದ ಮೊತ್ತಕ್ಕೆ ಒಪ್ಪಿಕೊಂಡೆವು ಇನ್ನು ಸಾಧ್ಯವಿಲ್ಲ ಸಾಲದ ಮೊತ್ತಕ್ಕಿಂತ ಹತ್ತು ಪ್ರತಿಶತ ಹೆಚ್ಚು ನೀಡಿ ಎನ್ನುವ ಸಂದೇಶ ಬೇರೆ ಅಲಹಾಬಾದ್ ಬ್ಯಾಂಕ್ನಿಂದ ಬರುತ್ತದೆ. ಇದೇನಿದು ನಾವು ಯಾವಾಗ ಇಷ್ಟೊಂದು ಮುಚ್ಚಳಿಕೆ ಬರೆದು ಕೊಟ್ಟೆವು ಎಂದು ಹುಡುಕಲು ಶುರು ಮಾಡಿದಾಗ ಸ್ಕ್ಯಾಮ್ ತನ್ನ ದುರ್ನಾತ ವಿಶ್ವರೂಪ ತೋರಿಸಿದೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಲೋಪದೋಷ, ಮನುಷ್ಯ ಸಹಜ ಲೋಭ ಮತ್ತು ದುರಾಸೆ, ಮೋಸದಾಟಕ್ಕೆ ಮತ್ತೆ ಜಯ ಸಿಕ್ಕಿದೆ. ಹಣ ಲಪಟಾಯಿಸಿ ನೀರವ್ ಮೋದಿ ವಿದೇಶದಲ್ಲಿ ಮಜಾ ಮಾಡುತ್ತಿದ್ದರೆ ಏನಾಯಿತು? ಹೇಗಾಯಿತು? ಏಕಾಯಿತು? ಎನ್ನುವ ನಿಖರ ಅರಿವಿಲ್ಲದ ಅದನ್ನ ತಿಳಿದುಕೊಳ್ಳಲು ಪುರುಸೊತ್ತಿಲ್ಲದ ಜನ ಸಾಮಾನ್ಯ ಮಾತ್ರ ಎಂದಿನಂತೆ ಬೆಳಿಗ್ಗೆ ಎದ್ದು ಕೆಲಸಕ್ಕೆ ಓಡುವ ತಾರಾತುರಿಯಲ್ಲಿದ್ದಾನೆ. ಆರು ತಿಂಗಳು ವರ್ಷ ಕಳೆಯುವುದರಲ್ಲಿ ಹೊಸತೊಂದು ಸ್ಕ್ಯಾಮ್ ನೀರವ್ ಪ್ರೇರಿತ ಪಿಎನ್ಬಿ ಸ್ಕ್ಯಾಮ್ ಅನ್ನು ನೀರವವಾಗಿಸುತ್ತದೆ. ಹೊಸ ಸ್ಕ್ಯಾಮ್ ಹೊಸ ರೂವಾರಿಯ ಹೆಸರು ಚರ್ಚೆ ಲೇಖನ.. ವಿಮರ್ಶೆ ಹೊಸದಾಗಿ ಶುರುವಾಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com