ಖುಷಿಯಾಗಿರಲು ಎಷ್ಟು ಹಣ ಬೇಕು?

ಸಕ್ಕರೆ ಅಂಶ ರಕ್ತದಲ್ಲಿ ಇಷ್ಟು ಅಂಶಕ್ಕಿಂತ ಹೆಚ್ಚಾಗಬಾರದು ಕಡಿಮೆಯೂ ಆಗಬಾರದು ಅಂತಿದೆ ಅಲ್ಲವೇ?, ಹಾಗೆ ರಕ್ತದೊತ್ತಡ...
ಖುಷಿಯಾಗಿರಲು ಎಷ್ಟು ಹಣ ಬೇಕು?
ಸಕ್ಕರೆ ಅಂಶ ರಕ್ತದಲ್ಲಿ ಇಷ್ಟು ಅಂಶಕ್ಕಿಂತ ಹೆಚ್ಚಾಗಬಾರದು ಕಡಿಮೆಯೂ ಆಗಬಾರದು ಅಂತಿದೆ ಅಲ್ಲವೇ?, ಹಾಗೆ ರಕ್ತದೊತ್ತಡ... ಜೊತೆಗೆ ದೇಹದಲ್ಲಿ ಇರಬೇಕಾದ ಪ್ರೊಟೀನ್ ವಿಟಮಿನ್ ಇತ್ಯಾದಿಗಳು ನಿಖರವಾಗಿ ಇಷ್ಟಕ್ಕಿಂತ ಜಾಸ್ತಿ ಆಗಬಾರದು ಕಡಿಮೆಯೂ ಆಗಬಾರದು ಎಂದು ವೈದ್ಯ ವಿಜ್ಞಾನ ಒಂದಷ್ಟು ಪ್ಯಾರಾಮೀಟರ್ ಸೃಷ್ಟಿಸಿದೆ. ಇದು ನಮಗೆಲ್ಲಾ ತಿಳಿದಿರುವ ವಿಷಯ. 
ವಿತ್ತ ಜಗತ್ತಿನ ಪಂಡಿತರು ಇಷ್ಟು ಹಣ ವ್ಯಕ್ತಿಯ ಬಳಿ ಇದ್ದರೆ ಆತ ಖುಷಿಯಾಗಿರಲು ಸಾಧ್ಯ ಈ ಸಂಖ್ಯೆಗಿಂತ ಹೆಚ್ಚಾಗಿದ್ದರೆ ಆತ ಖುಷಿಯಾಗಿರಲು ಸಾಧ್ಯವಿಲ್ಲ ಅಥವಾ ಈ ಸಂಖ್ಯೆಗಿಂತ ಕಡಿಮೆಯಾದರೂ ಖುಷಿಯಾಗಿರಲು ಸಾಧ್ಯವಿಲ್ಲ ಅಂತ ಏನಾದರೂ ಒಂದು ಪ್ಯಾರಾಮೀಟರ್ ಇಟ್ಟಿದ್ದಾರೆಯೇ? ಹೌದಾದರೆ ಅದು ಸರಿ ಅಥವಾ ತಪ್ಪು ಎನ್ನಲು ಏನಾದರೂ ಪುರಾವೆ ಇದೆಯೇ? ಇಂತಹ ಪ್ರಶ್ನೆಗಳು ಹುಟ್ಟುವುದು ಸಹಜ. ಸರಿ ಇದರ ಬಗ್ಗೆ ಬರೆಯುವುದಕ್ಕೆ ಮುಂಚೆ ಒಂದು ಸಣ್ಣ ಸಾಮಾಜಿಕ ಪ್ರಯೋಗ ಮಾಡಿ ನೋಡೋಣ ಎನ್ನಿಸಿತು. ತಡವಿನ್ನೇನು ನನ್ನ ಫೇಸ್ಬುಕ್ ಖಾತೆಯಲ್ಲಿ ಖುಷಿಯಾಗಿರಲು ಎಷ್ಟು ಹಣ ಬೇಕು? ಎಂದಷ್ಟೇ ಬರೆದು ಹಾಕಿದೆ. ಅಲ್ಲಿ ಬಂದ ಕಾಮೆಂಟ್ಗಳು ನಮ್ಮ ಸಮಾಜ, ನಮ್ಮ ವಾತಾವರಣ. ವ್ಯಕ್ತಿಯ ಹಿನ್ನೆಲೆಯ ಜೊತೆಗೆ ಹಣ ಬೇಕೇ ಬೇಡವೇ ಎನ್ನುವ ತತ್ವಜ್ಞಾನದವರೆಗೂ ಕರೆದುಕೊಂಡು ಹೋಗಿದೆ. 
ಶಾಸ್ತ್ರಿ ಗುಂಡ್ಲಪೇಟೆ ಅವರು ಖುಷಿಯಾಗಿರಲು ಮನಸ್ಸು ಸರಿಯಿರಬೇಕು ಎಷ್ಟು ಹಣವಿದ್ದರೇನು? ಎನ್ನುತ್ತಾರೆ. ನಮೋ ಆದರ್ಶ್ ಜೋಯಿಸ್ ಅವರು ಕೈ ಬಿಚ್ಚಿ ಖರ್ಚು ಮಾಡುವಷ್ಟು ಇದ್ದರೆ ಸಾಕು ಎನ್ನುತ್ತಾರೆ. ವೀಣಾ ಶಿವಣ್ಣ ಅವರು ನಿಖರ ಮೊತ್ತ ಹೇಳುವುದು ಕಷ್ಟ ನಮ್ಮ ಕುಟುಂಬದ ಖರ್ಚು ನಮ್ಮ ನಂಬಿದವರ ಬೇಡಿಕೆಗಳ ಪೂರೈಸಿವಷ್ಟು ಇದ್ದರೆ ಸಾಕು ಎಂದು ಬರೆಯುತ್ತಾರೆ. ಶಿವ ಪ್ರಸಾದ್ ಭಟ್ ಅವರು ನಿಮ್ಮ ಹತ್ರ ಇರುವಷ್ಟು ಎಂದೂ ಅಂಜಲಿ ರಾಮಣ್ಣ ಅವರು ಎಷ್ಟು ಅಂತ ಬೇಗ ಹೇಳಿ ನನ್ನ ಕ್ಲೈಂಟ್ ಗೆ ಫೀಸ್ ಹೇಳಬೇಕು ಎನ್ನುತ್ತಾರೆ. ಸಂದೇಶ ತಲಕಾಲಕೊಪ್ಪ ಅವರು  'ಮನಸಿಚ ಪರಿತುಷ್ಟೇ ಕೋರ್ಥವಾನ್? ಕೋ ದರಿದ್ರಃ??' ಎನ್ನುವ ಸಂಸ್ಕೃತ ಬಾಣ ಎಸೆದಿದ್ದಾರೆ. ಹಿರಿಯ ಲೇಖಕಿ ಜಯಶ್ರೀ ದೇಶಪಾಂಡೆಯವರು 'ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು...' ವರ್ಕ್ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ. ರಮ್ಯ ತಾಳಗುಂದ ಮೂಲ ಸೌಕರ್ಯಗಳಿಗೆ ಆಗುವಷ್ಟು ಇದ್ದರೆ ಸಾಕು ಎನ್ನುತ್ತಾರೆ. ದೂರದ ಕಲ್ಕತ್ತಾದಿಂದ ನಾಗೇಶ್ ತಾಳಗುಂದ ಸೊನ್ನೆಯಿಂದ ಇನ್ಫಿನಿಟಿ ಮೊತ್ತ ವ್ಯಕ್ತಿಯ ಚಿತ್ತದ ಮೇಲೆ ಅವಲಂಬಿತ ಎನ್ನುವ ನಿತ್ಯ ಸತ್ಯವ ಬಿಡಿಸಿ ಹೇಳುವ ಪ್ರಯತ್ನ ಮಾಡಿದ್ದಾರೆ. ವಿಜಯ ನರಸಿಂಹ ಅವರು  ಹಣ ತೃಪ್ತಿ ನೀಡುವುದಿಲ್ಲ ಎಂದು ಹೇಳುವುದು ಅತೃಪ್ತರಷ್ಟೇ ಎನ್ನುವ ನಿಲುವನ್ನ ವ್ಯಕ್ತ ಪಡಿಸಿದ್ದಾರೆ. ಪ್ರಸಾದ್ ಮೈಸೂರ್ ರವರು ಹಣಕ್ಕಿಂತ ಮನಸ್ಸು ಮುಖ್ಯ ಎನ್ನುತ್ತಾರೆ. ಹೀಗೆ ಇನ್ನೂ ಹಲವಾರು ಮಿತ್ರರು ತಮ್ಮ ನಿಲುವನ್ನ ಹೇಳಿದ್ದಾರೆ. ಇವುಗಳಲ್ಲಿ ಸಾಮ್ಯತೆ ಇರಲಿ ಬಿಡಲಿ ಒಂದಂತೂ ಸತ್ಯ ಹಣ ಬದುಕಿಗೆ ಬೇಕು ಎಷ್ಟು ಎನ್ನುವದಷ್ಟೇ ಪ್ರಶ್ನೆಯಾಗಿ ಉಳಿಯುವುದು. ಯಾವ ರೀತಿಯ ಬದುಕು ಬೇಕು ಎನ್ನುವುದು ಎಷ್ಟು ಹಣ ಬೇಕು ಎನ್ನುವುದಕ್ಕೆ ನೇರವಾಗಿ ಹೊಂದಿಕೊಂಡಿದೆ. 
ಸರಿ ಪೀಠಿಕೆ ಸಾಕು ಖುಷಿಯಾಗಿರಲು ಎಷ್ಟು ಹಣ ಬೇಕು ? ಇದಕ್ಕೆ ನಿಗದಿತ ಮೊತ್ತ ಇದೆಯಾ ? 
ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಲು ಎಷ್ಟು ಹಣ ಬೇಕು ಅಷ್ಟು ಸಾಕು ಎನ್ನುತ್ತಾರೆ ಇದರ ಬಗ್ಗೆ ಹೆಚ್ಚು ಸಂಶೋಧನೆ ಮಾಡಿದ ವಿಜ್ಞಾನಿಗಳು. ಆ ಮೊತ್ತ ಎಷ್ಟು ಎನ್ನುವುದು ನೀವು ಎಲ್ಲಿ ವಾಸಿಸುತ್ತಿದ್ದೀರಿ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ನೀವು ಬೋಸ್ಟನ್ ನಲ್ಲಿದ್ದರೆ ಆ ಮೊತ್ತ ಮತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ಬೇಕಾಗುವ ಮೊತ್ತ ಬದಲಾಗಿರುತ್ತದೆ. ಅಲ್ಲದೆ ವ್ಯಕ್ತಿಯಿಂದ ವ್ಯಕ್ತಿಗೆ ಕೂಡ ಈ ಸಂಖ್ಯೆ ಬದಲಾಗುತ್ತದೆ. ಅಮೇರಿಕಾದಲ್ಲಿ ಕೂಡ ಯಾವ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದೀರಿ ಎನ್ನುವುದರ ಮೇಲೆ ಈ ಮೊತ್ತ ಬದಲಾಗುತ್ತಾ ಹೋಗುತ್ತದೆ. ಭಾರತಕ್ಕೂ ಈ ನಿಯಮ ಲಾಗೂ ಆಗುತ್ತದೆ. ಉದಾಹರಣೆ ನೋಡಿ ಬೆಂಗಳೂರಿನಂತ ನಗರದಲ್ಲಿ ತರಕಾರಿ ಬೆಲೆ ಐವತ್ತು ಅಥವಾ ಅರವತ್ತು ರೂಪಾಯಿ ಕೀಲೊಗ್ರಾಮ್ಗೆ ಸಿಕ್ಕರೆ ಅದೇ ಹಳ್ಳಿಯಲ್ಲಿ ಹತ್ತು ರುಪಾಯಿಗೆ ಸಿಗುತ್ತದೆ. ಹೀಗಾಗಿ ಈ ಮೊತ್ತವನ್ನ ಸಾರ್ವಜನಿಕವಾಗಿ ಎಲ್ಲರಿಗೂ ಒಪ್ಪುವಂತೆ ಇಷ್ಟೇ ಎಂದು ನಿಗದಿಪಡಿಸಲು ಬರುವುದಿಲ್ಲ. ಆದರೂ ಒಂದು ಸಂಖ್ಯೆಯನ್ನ ನಿಗದಿ ಪಡಿಸಬಹದು ಅದೊಂದು ಬೆಂಚ್ ಮಾರ್ಕ್ ಇದ್ದಹಾಗೆ! ನಮ್ಮ ರಕ್ತದೊತ್ತಡ ಹೇಗೆ ಪ್ಯಾರಾಮೀಟರ್ ನಲ್ಲಿ ಹೇಳಿರುವಷ್ಟೇ ಇರುವುದಿಲ್ಲವೂ ಹಾಗೆ ಇದು. ಇದರ ಸುತ್ತ ಮುತ್ತ ಇದ್ದರೆ ಬದುಕು ಸೇಫ್ ಎನ್ನುವ ನಿರಾಳ ಭಾವನೆಯಷ್ಟೇ. 
ಅಮೆರಿಕಾದಂತ ದೇಶದಲ್ಲಿ ಎಪ್ಪತೈದು ಸಾವಿರ ಡಾಲರ್ ವಾರ್ಷಿಕ ಸಂಪಾದನೆಯಿದ್ದರೆ ಅವರು ಖುಷಿಯಾಗಿರಲು ಸಾಧ್ಯ ಎನ್ನುತ್ತದೆ ಅಲ್ಲಿ ನೆಡೆದ ಸಂಶೋಧನೆ. ಇದು ಲಕ್ಷದವರೆಗೆ ಓಕೆ ಆದರೆ ಅದಕ್ಕೂ ಮೀರಿದ ಹಣ ಸಂಪಾದನೆ ಮಾಡುತ್ತಾ ಹೋದಂತೆ ಮನುಷ್ಯರಲ್ಲಿ ಸಂತೋಷ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುವುದು ಕೂಡ ಸಂಶೋಧನೆಯಿಂದ ತಿಳಿದು ಬಂದಿದೆ. ನೀವೀಗ ಪ್ರಶ್ನೆ ಕೇಳಬಹದು ಇದು ಹೇಗೆ ಸಾಧ್ಯ ಎಷ್ಟು ಹಣ ಬಂದರೂ ಖುಷಿಯೇ ತಾನೇ? ಹೆಚ್ಚು ಹಣ ಬಂದರೆ ಅದಕ್ಕೆ ಬೇಜಾರೇ? ಅಸಂತೋಷವೆ?? ಹೌದು ಎಲ್ಲವೂ ಒಂದು ಮಿತಿಯಲ್ಲಿ ಇದ್ದರಷ್ಟೇ ಬದುಕಿನಲ್ಲಿ ಉತ್ಸಾಹ ಮತ್ತು ಸಂತೋಷ ಸಾಧ್ಯ ಅತಿಯಾದರೆ ಅಮೃತವೂ ವಿಷ ಎನ್ನುವ ತತ್ವಜ್ಞಾನವ ನಮ್ಮ ಹಿರಿಯರು ಬಹಳ ಹಿಂದೆಯೇ ಹೇಳಿದ್ದರು. ಇದನ್ನ ವೈಜ್ಞಾನಿಕವಾಗಿ ನಮ್ಮ ಎಕನಾಮಿಕ್ಸ್ ನಲ್ಲಿ 'ದಿ ಲಾ ಆಫ್ ಡಿಮಿನಿಶಿಂಗ್ ಮಾರ್ಜಿನಲ್ ಯುಟಿಲಿಟಿ' ಎನ್ನುತ್ತಾರೆ. ಈ ಲಾ ಪ್ರಕಾರ ಯಾವುದೇ ವಸ್ತುವಿರಲಿ ಅದು ನಮಗೆ ಮೊದಲು ಕೊಟ್ಟ ಸುಖಾನುಭ ಎರಡನೇ ಬಾರಿಗೆ ಕಡಿಮೆಯಾಗಿರುತ್ತದೆ. ಮೂರನೇ ಬಾರಿಗೆ ಅದು ಇನ್ನಷ್ಟು ಕುಸಿತ ಕಾಣುತ್ತದೆ. ಹೀಗೆ ಒಂದಷ್ಟು ಪುನರಾವರ್ತನೆಯಿಂದ ಅದು ಕೊಡುವ ಸುಖ ಇಲ್ಲವೆನ್ನುವಷ್ಟು ಕಡಿಮೆಯಾಗುತ್ತದೆ. ಇದು ತಿನ್ನುವ ವಿಷಯದಲ್ಲಿ ಸರಿ ಹಣದ ವಿಷಯದಲ್ಲಿ ಈ ಲಾ ಲಾಗೂ ಆಗುತ್ತದೆಯೇ ಎನ್ನುವ ಸಂಶಯ ಹಲವರದು. ಆದರೆ ಒಂದು ಹಂತದ ನಂತರ ಹಣ ಅಥವಾ ಸಂಬಳ ನೌಕರನ ಅಥವಾ ಮನುಷ್ಯರನ್ನ ಮೋಟಿವೇಟ್ ಮಾಡುವಲ್ಲಿ ವಿಫಲವಾಗಿವೆ ಎನ್ನುವುದಕ್ಕೆ ಕಾರ್ಪೊರೇಟ್ ಕಂಪೆನಿಗಳಲ್ಲಿ ಇರುವ ಮಾಹಿತಿ ಪುರಾವೆ ಒದಗಿಸುತ್ತದೆ. 
ಇನ್ನೊಂದು ಅಚ್ಚರಿಯ ಅಂಶವೆಂದರೆ ತಾವು ಸಂಪಾದಿಸಿದ ಹಣವನ್ನೆಲ್ಲಾ ತಮಗೆ ಅಥವಾ ತಮ್ಮ ಕುಟುಂಬಕ್ಕೆ ಖರ್ಚು ಮಾಡಿಕೊಂಡವರಲ್ಲಿ ಇರುವ ಸಂತೋಷದ ಪ್ರಮಾಣಕ್ಕೂ ಮತ್ತು ಇತರರಿಗಾಗಿ ಖರ್ಚು ಮಾಡಿದ ಜನರ ಸಂತೋಷದ ಪ್ರಮಾಣಕ್ಕೂ ವ್ಯತ್ಯಾಸ ಕಂಡುಬಂದಿದೆ. ಬೇರೆಯವರಿಗೆ ಅಥವಾ ಸಮಾಜದ ಒಳಿತಿಗೆ ತಮ್ಮ ಹಣವನ್ನ ಖರ್ಚು ಮಾಡಿದ ವ್ಯಕ್ತಿಗಳ ಮಾನಸಿಕ ದೃಢತೆ ಮತ್ತು ಸಂತೋಷದ ಪ್ರಮಾಣ ಹೆಚ್ಚಾಗಿರುವುದು ಅಧ್ಯಯನಗಳು ಸಾಬೀತುಪಡಿಸಿವೆ. 
ಭಾರತದಂತ ದೇಶದಲ್ಲಿ ನಗರ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ವಾರ್ಷಿಕ ಆದಾಯ ಹತ್ತು ಲಕ್ಷದಿಂದ ಹದಿನೈದು ಲಕ್ಷವಿದ್ದರೆ ಅವರು ಖುಷಿಯಾಗಿರಲು ಸಾಧ್ಯ. ಹಳ್ಳಿ ಪ್ರದೇಶದಲ್ಲಿ ಎರಡರಿಂದ ಐದು ಲಕ್ಷವಿದ್ದರೆ ಅದೇ ಮಟ್ಟದ ಖುಷಿ ಅವರದಾದೀತು. ಇದೊಂದು ಪ್ಯಾರಾಮೀಟರ್ ಇಷ್ಟೇ ಸರಿ ಎಂದು ಹೇಳಲು ಬರುವುದಿಲ್ಲ. ಸಾಮಾನ್ಯವಾಗಿ ವರ್ಗೀಕರಣ ಮಾಡುವಾಗ ಇಷ್ಟಿದ್ದರೆ ಬೈ ಅಂಡ್ ಲಾರ್ಜ್ ಚನ್ನಾಗಿ ಬದುಕಬಹದು ಖುಷಿಯಾಗಿರಬಹದು ಎನ್ನುವ ಒಂದು ಕಾಲ್ಪನಿಕ ಸಂಖ್ಯೆ. ಆದರೆ ಮುಕ್ಕಾಲು ಪಾಲು ಜನಸಂಖ್ಯೆ ಈ ಕಾಲ್ಪನಿಕ ಸಂಖ್ಯೆಯ ಆಜುಬಾಜಿನಲ್ಲಿ ಬರುತ್ತಾರೆ ಎನ್ನುವುದು ಕಲ್ಪನೆಯನ್ನ ನಿಜವಾಗಿಸುತ್ತದೆ. 
ಖುಷಿಯಾಗಿರಲು ನಿಗದಿಪಡಿಸಿರುವ ಹಣದ ಮೊತ್ತದ ದುಪಟ್ಟು ಅಥವಾ ಅದಕ್ಕೂ ಹೆಚ್ಚು ಸಂಪಾದಿಸುವ ಜನರಲ್ಲಿ ಖಿನ್ನತೆ, ಅಶಿಸ್ತು, ಬದುಕಿನಲ್ಲಿ ಆಸಕ್ತಿ ಇಲ್ಲದೆ ಹೋಗುವುದು ಏನು ಮಾಡಬೇಕು ಎನ್ನುವ ನಿಖರತೆಯ ಕೊರತೆ. ಸುಖಾಸುಮ್ಮನೆ ಬೇಜಾರು ಇಂತಹ ಮಾನಸಿಕ ತುಮುಲಗಳು ಹೆಚ್ಚಾಗಿರುವುದನ್ನ ಅಧ್ಯಯನಗಳು ಬಹಿರಂಗಪಡಿಸಿವೆ . ಕೊನೆಗೆ ಇಂತವರು ತಮ್ಮ ಬದುಕನ್ನ ಡ್ರಗ್ಸ್ ಸೇವೆನೆಯಂತಹ  ದಾರುಣ ಅಂತ್ಯಕ್ಕೆ ಕರೆದುಕೊಂಡ ಹೋದ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಮಜಾ ನೋಡಿ ನಿಗದಿತ ಮೊತ್ತಕ್ಕಿಂತ ಕಡಿಮೆ ಹಣ ದುಡಿಯುವ ಜನರಲ್ಲಿ ಬದುಕಿನ ಬಗ್ಗೆ ಇನ್ನಷ್ಟು ಹೆಚ್ಚು ಪ್ರೀತಿ ಕಾಣುತ್ತೇವೆ ಹೇಗಾದರೂ ಮಾಡಿ ಬದುಕನ್ನ ಇನ್ನಷ್ಟು ಹಸನಾಗಿಸಲಿ ಕೊಳ್ಳಬೇಕ್ಕೆನ್ನುವ., ನಮ್ಮಂತೆ ನಮ್ಮ ಮುಂದಿನ ಪೀಳಿಗೆ ನೋವು ತಿನ್ನಬಾರದು ಎನ್ನುವ ಹಪಹಪಿಕೆ ಕೆಲಸ ಮಾಡುತ್ತದೆ. ಇದು ಭಾರತದ ವೈಶಿಷ್ಟ್ಯ. ಮುಂದುವರಿದ ದೇಶಗಳಲ್ಲಿ ಹಾಗಲ್ಲ ಕಡಿಮೆಯಿದ್ದವರೂ ಅತಿ ಹೆಚ್ಚಿದ್ದವರೂ ಇಬ್ಬರೂ ನೋವಿನಲ್ಲಿ ಸಮಭಾಗಿಗಳು. 
ಎಷ್ಟು ಹಣ ಬೇಕು ಎನ್ನುವುದು ಇಷ್ಟೇ ಎಂದು ಹೇಳಲು ಸಾಧ್ಯವಾಗದೆ ಹೋಗಬಹದು ಅದೂ ಭಾರತದಂತ ಅತ್ಯಂತ ವಿಭಿನ್ನ ಆರ್ಥಿಕ ಹಿನ್ನೆಲೆಯುಳ್ಳ ಸಮಾಜದಲ್ಲಿ ಅದು ಕಷ್ಟವೇ ಸರಿ. ಆದರೆ ದುಡ್ಡೇ ಬೇಡ ಎನ್ನುವ., ಆಸೆಗಳ ಅಮುಕಿ ಇಷ್ಟು ಸಾಕು ಎನ್ನುವ ಅಭಾವ ವೈರಾಗ್ಯ ಕೂಡ ತಪ್ಪು. ಉತ್ತಮ ಬದುಕಿಗೆ ಹಣದ ಅವಶ್ಯಕತೆ ಇದೆ. ಇವತ್ತು ವಿದ್ಯಾಭ್ಯಾಸ, ಊಟ ವಸತಿ ಜೊತೆಗೆ ಎಂಟರ್ಟೈನ್ಮೆಂಟ್ ಕೂಡ ಸಾಕಷ್ಟು ಹಣವನ್ನ ಬಯಸುತ್ತದೆ. ಇಂದು ಕಾರು, ಫೋನ್ ಅಥವಾ ವಾರ್ಷಿಕ ಒಂದು ಟ್ರಿಪ್ ಅವಶ್ಯಕತೆಯಾಗಿ ಮಾರ್ಪಾಟಾಗಿವೆ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತ ಅದಕ್ಕೆ ಹೊಂದಿಕೊಂಡು ಹೋಗುವುದರಲ್ಲಿ ಖುಷಿಯಿದೆ. ಮನಸ್ಸು ಬಹಳ ಮುಖ್ಯ ಆದರೆ ಹಣವೂ ಅಷ್ಟೇ ಮುಖ್ಯ. ಹೊಟ್ಟೆ ತುಂಬಿದೆ ಎನ್ನುವ ಭಾವನೆಯಿಂದ ಹೊಟ್ಟೆ ತುಂಬುತ್ತದೆಯೇ? ಹೊಟ್ಟೆ ತುಂಬಲು ಆಹಾರ ಬೇಕು ಬರಿ ಭಾವನೆಯಿಂದ ಅದು ಸಾಧ್ಯವಿಲ್ಲ. ಆದರೆ ಯಾವುದೂ ಅತಿಯಾಗಬಾರದು ಎನ್ನುವ ನಮ್ಮ ಹಿರಿಯರ ತತ್ವಜ್ಞಾನವ ನೆನಪಿಟ್ಟುಕೊಂಡರೆ ಸಾಕು. ನೀವೇನಂತೀರಾ? 
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com