ಹೊಸ ವರ್ಷಕ್ಕೆ ವಿತ್ತ ಬದುಕಿಗೆ ಬೇಕಾ ಕಾಯಕಲ್ಪ?

ಇನ್ನೊಂದು ವರ್ಷವನ್ನ ಕೂಡ ಮುಗಿಸಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷದ ಸಮಯದಲ್ಲಿ ಏನಾದರೂ ಒಂದು ಹೊಸ ನಿಲುವನ್ನ ತೆಗೆದುಕೊಳ್ಳುವುದು ಮುಕ್ಕಾಲು ಪಾಲು ಜನ ಮಾಡಿಕೊಂಡು ಬಂದಿರುವ ಅಭ್ಯಾಸ....
ಹೊಸ ವರ್ಷಕ್ಕೆ ವಿತ್ತ ಬದುಕಿಗೆ ಬೇಕಾ ಕಾಯಕಲ್ಪ?
ಹೊಸ ವರ್ಷಕ್ಕೆ ವಿತ್ತ ಬದುಕಿಗೆ ಬೇಕಾ ಕಾಯಕಲ್ಪ?
ಇನ್ನೊಂದು ವರ್ಷವನ್ನ ಕೂಡ ಮುಗಿಸಿ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ವರ್ಷದ ಸಮಯದಲ್ಲಿ ಏನಾದರೂ ಒಂದು ಹೊಸ ನಿಲುವನ್ನ ತೆಗೆದುಕೊಳ್ಳುವುದು ಮುಕ್ಕಾಲು ಪಾಲು ಜನ ಮಾಡಿಕೊಂಡು ಬಂದಿರುವ ಅಭ್ಯಾಸ. ತಮ್ಮ ಹಳೆ ಚಾಳಿಯನ್ನ ಬಿಟ್ಟು ಹೊಸ ರೀತಿಯಲ್ಲಿ ಬದುಕಲು ನಿರ್ಧಾರ ತೆಗೆದುಕೊಳ್ಳುವರ ಸಂಖ್ಯೆಯೂ ಬಹಳವಿದೆ. ಇವತ್ತು ಬದುಕು ಸುತ್ತುವುದು ಹಣದ ಹಿಂದೆ ಮುಂದೆ. ನಮ್ಮ ಬದುಕಿನ ಅತಿ ಸಣ್ಣ ನಿರ್ಧಾರ ಕೂಡ ಹಣದೊಂದಿಗೆ ಜೋಡಣೆಯಾಗುತ್ತದೆ. ಹೀಗಿರುವಾಗ ರಿಟೈರ್ಮೆಂಟ್ ನಂತಹ ಅತಿ ದೊಡ್ಡ ನಿರ್ಧಾರಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಮೂರು ಅಥವಾ ನಾಲ್ಕು ವರ್ಷದ ಹಿಂದೆ ರಿಟೈರ್ಮೆಂಟ್ ಗೆ ಎಂದು ಎಷ್ಟು ಹಣ ಹೂಡಿಕೆ ಮಾಡುತ್ತಿದಿರಿ ಇಂದು ಅದು ಸಾಲದು. ನೆಮ್ಮದಿ ರಿಟೈರ್ಮೆಂಟ್ ಜೀವನ ನೆಡೆಸಲು ಸೃಷ್ಟಿಸಬೇಕಾಗಿದ್ದ ಹಣದ ಮೊತ್ತ ಇದ್ದಕಿದ್ದಂತೆ ಹೆಚ್ಚಾಗಿದೆ! ಹೆಚ್ಚಾದ ಹಣದ ಮೊತ್ತವನ್ನ ಸೇರಿಸುವುದು ಹೇಗೆ? ಖರ್ಚು ಕಡಿಮೆ ಮಾಡಿಕೊಳ್ಳುವುದು ಎಷ್ಟು ಸಾಧ್ಯ? ಹೀಗೆ ಒಂದಲ್ಲ ಹತ್ತು ಪ್ರಶ್ನೆಗಳು. ಇಂತಹ ಪ್ರಶ್ನೆಗಳು ಕೇವಲ ರಿಟೈರ್ಮೆಂಟ್ ಜೀವನಕ್ಕೆ ಒಂದೇ ಅಲ್ಲ ಜೀವನದ ಇತರ ಮಜಲುಗಳಲ್ಲಿರುವ ಎಲ್ಲರಿಗೂ ಇರುತ್ತದೆ. ಪ್ರಶ್ನೆ ಬದಲಾಗುತ್ತದೆ ಉತ್ತರ ಮಾತ್ರ ಮುಕ್ಕಾಲು ಪಾಲು ಸೇಮ್ ಇರುತ್ತದೆ. ಏಕೆಂದರೆ ಎಲ್ಲರ ಪ್ರಶ್ನೆ ಸುತ್ತುವುದು ಹಣದ ಸುತ್ತಮುತ್ತ. ನೀವು ನಿಮ್ಮ ಹಣಕಾಸಿನ ಬದುಕನ್ನ ಹೇಗೆ ಸಾಗಿಸುತ್ತಿದಿರಿ ಎನ್ನುವುದರ ವಿಮರ್ಶೆ ಮಾಡಿಕೊಳ್ಳಿ. ಬದಲಾವಣೆ ಬೇಕಿದ್ದಲ್ಲಿ ಮಾಡಿಕೊಳ್ಳಿ. ಹೊಸ ವರ್ಷಕ್ಕೆ ಹೊಸ ವಿತ್ತ ಬದುಕು ನಿಮ್ಮದಾಗಲು ಕೆಳಗಿನ ಒಂದಷ್ಟು ಸಲಹೆ ಪಾಲಿಸಿ. 
ಬೆಳಿಗ್ಗೆ ಬೇಗ ಏಳಿ:  ಅಲ್ರಿ ಹಣಕಾಸಿಗೂ ಬೆಳಿಗ್ಗೆ ಬೇಗ ಏಳುವುದಕ್ಕೂ ಏನು ಸಂಬಂಧ ಎಂದಿರಾ? ಇಲ್ಲೇ ಟ್ರಿಕ್ ಇರುವುದು. ಜಗತ್ತಿನಲ್ಲಿ ಹಣಕಾಸಿನ ವಿಷಯದಲ್ಲಿ ಸಾಕಷ್ಟು ಯಶಸ್ವೀಯಾಗಿರುವ ವ್ಯಕ್ತಿಗಳು ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಹೊಂದಿದ್ದಾರೆ. ಈಗ ನೀವು ಹೇಳಬಹದು ಬಕ್ವಾಸ್ ಅವನಾರೊ ಬೆಳಿಗ್ಗೆ ಬೇಗ ಎದ್ದರೆ ನಾನೇಕೆ ಬೇಗ ಏಳಬೇಕು? ಬೇಗ ಏಳುವುದು ಯಶಸ್ಸಿನ ಗ್ಯಾರಂಟಿ ಕೊಡುತ್ತಾ? ನಿಮ್ಮ ಮಾತು ಸರಿಯಾಗಿದೆ. ಬೆಳಿಗ್ಗೆ ಬೇಗ ಏಳುವುದು ಯಾವ ಗ್ಯಾರಂಟಿ ಕೊಡುವುದಿಲ್ಲ. ಆದರೆ ಕೆಲಸ ಅಥವಾ ನಿಮ್ಮ ದೈನಂದಿನ ಕಾರ್ಯಗಳಲ್ಲಿ ತೊಡಗಲು ಮೂರು ಗಂಟೆ ಮುಂಚೆ ಏಳುವುದು ನಿಮಗೆ ಸಾಕಷ್ಟು ಸಮಯ ಕೊಡುತ್ತದೆ. ನಿತ್ಯ ಒಂದು ಗಂಟೆ ನಿಮ್ಮ ಬಗ್ಗೆ, ಬದುಕಿನ ಬಗ್ಗೆ ವಿಚಾರ ಮಾಡಲು ಸಮಯ ಸಿಗುತ್ತದೆ. ಒಂದೊಳ್ಳೆ ಪುಸ್ತಕ ಅರ್ಧ ತಾಸು ಓದಿ ನೋಡಿ, ನಂತರ ಹೇಳಿ. 
ನಿಮ್ಮ ಆದ್ಯತೆಗಳ ಮರು ವಿಂಗಡಣೆ ಮಾಡಿ: ಬದುಕು ಅತ್ಯಂತ ಶೀಘ್ರಗತಿಯಲ್ಲಿ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ/ ಮೊದಲನೇ ಸಾಲುಗಳಲ್ಲಿ ಹೇಳಿದಂತೆ ನಾವು ನಾಳೆಗಾಗಿ ಉಳಿಸುತ್ತಿರುವ ಹಣದ ಮೊತ್ತ ಕಡಿಮೆಯಾಗಿರಬಹದು. ಕುಸಿದ ಬಡ್ಡಿ ದರ ನಿಮ್ಮ ಉಳಿಕೆಯ ಹಣದಲ್ಲಿ ಏರಿಕೆಯನ್ನ ಬಯಸುತ್ತದೆ. ಹೀಗೆ ಇದರಲ್ಲಿ ಬದಲಾವಣೆ ಮಾಡಲು ನಿಮ್ಮ ಆದ್ಯತೆಗಳಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿರುತ್ತದೆ. 
ಉಳಿಕೆ ಮತ್ತು ಹೂಡಿಕೆಯ ಮೊತ್ತ ನಿಗದಿ ಮಾಡಿ: ನಮ್ಮ ಮುಂದೆ ಒಂದು ಸವಾಲು ಸದಾ ಇರಬೇಕು ಅದನ್ನ ಸ್ವೀಕರಿಸಬೇಕು ಮತ್ತು ಆ ಸವಾಲನ್ನ ಗೆಲ್ಲುವ ಹಾದಿಯಲ್ಲಿ ನಮ್ಮ ನೆಡೆಯಿರಬೇಕು. ಅರ್ಥ ಇಷ್ಟೇ ಬದುಕಿಗೊಂದು ಗುರಿ ಬೇಕು. ಒಂದು ಸಣ್ಣ ಗುರಿ ಈ ವರ್ಷಕ್ಕೆ ನಿಗದಿಪಡಿಸಿಕೊಳ್ಳಿ. ಈ ವರ್ಷದಲ್ಲಿ ಐದು ಲಕ್ಷ ಉಳಿತಾಯ ಮಾಡಬೇಕು ಎನ್ನುವುದು ಆ ಗುರಿ ಇರಬಹದು. ನಿಮ್ಮ ಗಳಿಕೆಯ ಹಣ ಬ್ಯಾಂಕಿಗೆ ಬಂದ ತಕ್ಷಣ ನಿಗದಿತ ಉಳಿಕೆ ಹಣ ಇನ್ನೊಂದು ಖಾತೆಗೆ ಆಟೋಮ್ಯಾಟಿಕ್ ವರ್ಗಾವಣೆ ಮಾಡುವಂತೆ ನಿಮ್ಮ ಬ್ಯಾಂಕ್ಗರೆ ಹೇಳಿ. ಉಳಿದ ಹಣ ಮಾತ್ರ ಖರ್ಚಿಗೆ. 
ಗಳಿಸಿದ ಹೆಚ್ಚಿನ ಮೊತ್ತ ಕೂಡ ಉಳಿಕೆಗೆ ಮೀಸಲಾಗಿರಲಿ:  ಕೆಲವೊಮ್ಮೆ ತಿಂಗಳ ಆದಾಯದ ಜೊತೆಗೆ ಬೋನಸ್ ಅಥವಾ ಹೆಚ್ಚಿನ ಕೆಲಸಕ್ಕೆ ಭತ್ಯೆ ಸಿಗುತ್ತದೆ. ಹೀಗೆ ಸಿಕ್ಕ ಹಣದಲ್ಲಿ ಇಂದು ಮೋಜು ಮಾಡುವುದರ ಬದಲು ಅದನ್ನ ತುರ್ತು ಪರಿಸ್ಥಿಯ ಮೊತ್ತ ಎಂದು ತೆಗೆದಿರಿಸಿ. ಬದುಕು ಯಾವಾಗ ಹೇಗೆ ಮಗ್ಗುಲು ಬದಲಾಯಿಸುತ್ತೆ ಹೇಳಲು ಬಾರದು. 
ವಿತ್ತ ಪ್ರಪಂಚದ ಆಗು ಹೋಗುಗಳಿಗೆ ಒಂದಷ್ಟು ತೆರೆದ ಮನಸ್ಸು ನಿಮ್ಮದಾಗಿರಲಿ: ಅಯ್ಯೋ ನನಗೆ ಕಾಮರ್ಸ್ ಅಂದರೆ ಅಲರ್ಜಿ! ನನಗೆ ಈ ಲೆಕ್ಕಾಚಾರ ಎಲ್ಲಾ ಅರ್ಥ ಆಗುವುದಿಲ್ಲ ಎನ್ನುವುದು ಬಹಳ ಜನರ ಮಾತಿನಲ್ಲಿ ನಾವು ಕೇಳುವ ಸಾಮಾನ್ಯ ವಾಕ್ಯಗಳು. ನಿಮಗೆ ಇಷ್ಟವಿರಲಿ ಬಿಡಲಿ ವಿತ್ತ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳ ಮೇಲೆ ನಿಮ್ಮ ಗಮನವಿರಲೇಬೇಕು. ಬ್ರಿಟನ್ ಯುರೋ ಜೋನ್ ನಿಂದ ಹೊರಗೋದರೆ ನನಗೇನು? ಎನ್ನುವ ದಿನದಲ್ಲಿ ನಾವಿಲ್ಲ? ಬ್ರೆಕ್ಸಿಟ್ ನಮ್ಮ ಮೇಲೆ ಯಾವ ಪರಿಣಾಮ ಬೀರಬಲ್ಲದು ಎನ್ನುವ ಅರಿವು ನಮ್ಮದಾಗಿರಬೇಕು. ನಿಮ್ಮದೇ ಭಾಷೆ ಕನ್ನಡದಲ್ಲಿ ಪ್ರತಿ ಗುರುವಾರ ಕನ್ನಡಪ್ರಭ. ಕಾಮ್ ನಲ್ಲಿ ಪ್ರಕಟವಾಗುವ 'ಹಣಕ್ಲಾಸು ' ಅಂಕಣ ಓದುವುದು ಅಥವಾ ನಿಮ್ಮ ಸಂದೇಹಗಳ ಮಿಂಚಂಚೆ ಮಾಡುವುದು ಕೂಡ ಹಲವು ಆಯ್ಕೆಗಳಲ್ಲಿ ಒಂದು. 
ಹೂಡಿಕೆಯನ್ನ ಪರಿಶೀಲಿಸುತ್ತಿರಿ:  ಗಳಿಸುವುದು ಒಂದು ಹಂತ ಉಳಿಸುವುದು ಇನ್ನೊಂದು ಹಂತ ಹೀಗೆ ಉಳಿಸಿದ ಹಣವನ್ನ ಸರಿಯಾದ ರೀತಿಯಲ್ಲಿ ಹೂಡಿಕೆಮಾಡುವುದು ಬಹು ಮುಖ್ಯ ಹಂತ. ಯಾವುದೋ ಒಂದು ಚಲನಚಿತ್ರ ಬಿಡುಗಡೆಯಾದರೆ ಅದನ್ನ ಹೇಗಿದೆ ಅಂತ ಇಬ್ಬರ ಬಳಿ ಕೇಳಿಹೋಗುವ ನಮ್ಮ ಜನ ಹೂಡಿಕೆ ಸಮಯದಲ್ಲಿ ಮಾತ್ರ ಪರಿಣಿತರ ಕೇಳುವ ಅಭ್ಯಾಸ ಮಾತ್ರ ಇಟ್ಟುಕೊಂಡಿಲ್ಲ. ನೆನಪಿಡಿ ಉತ್ತಮ ಹೂಡಿಕೆ ಬದುಕನ್ನ ಬದಲಾಯಿಸಬಲ್ಲದು. ಕೆಟ್ಟ ಹೂಡಿಕೆ ಕೂಡ ಬದುಕನ್ನ ಬೇರೆ ರೀತಿಯಲ್ಲಿ ಬದಲಾಯಿಸುತ್ತದೆ. ಇವತ್ತಿಗೆ ಉತ್ತಮ ಹೂಡಿಕೆ ಅಂತ ನಿಮಗೆ ಅನ್ನಿಸುತ್ತೆ ಹೂಡಿಕೆ ಮಾಡುತ್ತೀರಿ ನಾಳೆ ಅದು ಉತ್ತಮವಾಗೇ ಇದೆಯೇ ಅಥವಾ ಇಲ್ಲವೇ ಎನ್ನುವುದನ್ನ ಪರಿಶೀಲಿಸುತ್ತಾ ಇರಬೇಕು. ಹೂಡಿಕೆ ಧೀರ್ಘಾವದಿಯಾಗಿದ್ದಾಗಿರಬೇಕು ಎನ್ನುವುದು ಸಾಮಾನ್ಯವಾಗಿ ನಾವು ಎಲ್ಲರ ಬಾಯಲ್ಲಿ ಕೇಳುವ ಮಾತು ಅದು ಮುಕ್ಕಾಲು ಪಾಲು ಸರಿ ಕೂಡ. ಆದರೆ ಎಲ್ಲ ಸಮಯದಲ್ಲೂ ಎಲ್ಲಾ ನಿಯಮಗಳು ಸರಿಯಾಗೇ ಇರಬೇಕು ಎನ್ನುವ ನಿಯಮವಿಲ್ಲ ಅಲ್ಲವೇ? ಹೀಗಾಗಿ ಅದು ಸರಿಯಾಗೇ ಇದ್ದರೂ ಸರಿಯಾಗಿದೆ ಎಂದು ಖಾತ್ರಿ ಪಡಿಸಿಕೊಳ್ಳಲು ಪರಿಶೀಲನೆ ಅತ್ಯಗತ್ಯ. 
ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ತಪ್ಪದೆ ಪಡೆಯಿರಿ: ಸ್ವಯಂ ವೈದ್ಯ ಬಹಳ ತಪ್ಪು ಎನ್ನವುದು ನಾವು ಕೇಳಿದ್ದೇವೆ. ನೆಗಡಿ ಕೆಮ್ಮಿಗೆ ತಮಗೆ ತಿಳಿದ ಮಾತ್ರೆ ತೆಗೆದುಕೊಳ್ಳುವರ ಸಂಖ್ಯೆ ಬಹಳವಿದೆ. ಹೀಗೆ ವೈದ್ಯರ ಸಲಹೆಯಿಲ್ಲದೆ ಮಾತ್ರೆ ತೆಗೆದುಕೊಳ್ಳುವುದು ಜೀವಘಾತ ಮಾಡಬಹದು. ಆದರೇನು ವೈದ್ಯರ ಮಾತನ್ನ ನಿರ್ಲಕ್ಷಿಸುವ  ಸ್ವಯಂ ವೈದ್ಯರ ಸಂಖ್ಯೆ ಬಹಳವಿದೆ. 2018 ರಲ್ಲಿ ಷೇರುಮಾರುಕಟ್ಟೆ ಅಂದುಕೊಂಡಷ್ಟು ಹೆಚ್ಚಿನ ಹಣವನ್ನ ತಂದುಕೊಡದೆ ಹೋಗಬಹದು ಎನ್ನುವ ಒಂದು ಸಣ್ಣ ಮಾತು ಆಗಲೇ ಮಾರುಕಟ್ಟೆಯಲ್ಲಿ ರೌಂಡ್ ಹಾಕುತ್ತಿದೆ. ಷೇರುಮಾರುಕಟ್ಟೆ ಒಂದು ಸಮುದ್ರವಿದ್ದಂತೆ ಅದರಲ್ಲಿ ಈಜಲು ವಿಶೇಷ ತರಬೇತಿ ಪಡೆದ ಜನರಿರುತ್ತಾರೆ. ಈಜು ಬಾರದೆ ಸಮುದ್ರಕ್ಕೆ ಧುಮುಕುವ ಸಾಹಸ ಮಾಡಬೇಡಿ. 
ಧನಾತ್ಮಕ ಮತ್ತು ಯಶಸ್ವಿ ವ್ಯಕ್ತಿಗಳ ಸಾಂಗತ್ಯ ನಿಮ್ಮದಾಗಿರಲಿ: ಅದೃಷ್ಟ ಎನ್ನುವುದು ಬದುಕಿನ ಒಂದು ಅಂಶ ಅದನ್ನ ನಾನಂತೂ ಪೂರ್ಣವಾಗಿ ಇಲ್ಲವೆನ್ನಲಾರೆ ಅದರ ಅದೃಷ್ಟವೇ ಎಲ್ಲವೂ ಅಲ್ಲ. ಗೆಲುವಿಗೆ ಒಂದೇ ಮಂತ್ರ ಸೋಲದಿರುವುದು. ಸೋಲದಿರಲು ಒಂದೇ ದಾರಿ ಸೋತೆನೆಂದು ಹಿಡಿದ ಕೆಲಸ ಬಿಡದೆ ಇರುವುದು!. ಎಲ್ಲರೂ ಒಂದೇ ಸಮಯದಲ್ಲಿ ಯಶಸ್ಸು ಪಡೆಯುತ್ತಾರೆ ಎಂದು ಹೇಳಲು ಬಾರದು. ಕೆಲವರಿಗೆ ಬೇಗ ಕೆಲವರಿಗೆ ಹೆಚ್ಚು ಸಮಯ ಹಿಡಿಸುತ್ತದೆ. ಸೋತಾಗ ಹೀಯಾಳಿಸುವ/ನಿಂದಿಸುವ ಮಂದಿಯಿಂದ ದೂರಾಗಿ. ನಾಳಿನ ಬದುಕಿನ ಬಗ್ಗೆ ಭರವಸೆ ಹೊಂದಿರುವ ಜನರ ಸಖ್ಯ ನಿಮ್ಮದಾಗಿರಲಿ. ಬದುಕು ಹಸನಾಗುತ್ತದೆ. 
ಬೆಳಿಗ್ಗೆ ಬೇಗ ಎದ್ದ  ತಕ್ಷಣ ಆದ್ಯತೆಗಳ ತಪ್ಪದೆ ಪರಿಶೀಲಿಸಿದ ಮಾತ್ರಕ್ಕೆ ಅಥವಾ ಉತ್ತಮ ಸಂಗದಿಂದ ನಿಮ್ಮ ವಿತ್ತ ಬದುಕು ತಕ್ಷಣದಿಂದ ಹಸಿರಾಗುತ್ತದೆ ಎಂದುಕೊಂಡರೆ ಅದು ಮತ್ತೊಂದು ತಪ್ಪಿನ ಪಟ್ಟಿ ಸೇರುತ್ತದೆ. ಇದು ಒಂದು ದಿನ ಮಾಡಿ ನಿಲ್ಲಿಸುವ ವಿಷಯವಲ್ಲ ಇದೊಂದು ಬದುಕುವ ರೀತಿ. ಈ ಬದುಕುವ ರೀತಿಯಿಂದ ಒಳಿತಾಗುತ್ತದೆ ಎಂದು ಯಾರೂ ನಿಖರವಾಗಿ ನಿಮಗೆ ಬರೆದು ಕೊಡಲು ಬರುವುದಿಲ್ಲ. ಆದರೆ ಕೆಡುಕಾಗುವುದಿಲ್ಲ ಎಂದು ವಿಶ್ವಾಸದಿಂದ ಹೇಳಬಹದು.  
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com