ಹಿಂಸೆಯಿಂದ ಹಿಂಸೆಯನ್ನು ನಿಲ್ಲಿಸಲಾಗದು! ಅದು ಕೇವಲ ಕ್ರೌರ್ಯವನ್ನು ವರ್ಧಿಸುತ್ತಲೇ ಇರುತ್ತದೆ...

ಮಾಹಿಷ್ಮತಿ ಪಟ್ಟಣದ ಅರಸು. ಕ್ಷಣಮಾತ್ರದಲ್ಲಿ ಸಾವಿರ ಬಾಹುಗಳು ಮೂಡಿದವು. ಒಂದೊಂದರಲ್ಲೂ ವಿವಿಧ ಆಯುಧಗಳು. " ಈಗ ಗೊತ್ತಾಯಿತೋ ನನ್ನ ಶಕ್ತಿ? ಈಗಲೂ ನಿನಗೆ ನನ್ನೊಡನೆ ಹೋರಾಡುವ ಕೆಚ್ಚು...
ಕಾರ್ತವೀರ್ಯಾರ್ಜುನ-ಪರಶುರಾಮ
ಕಾರ್ತವೀರ್ಯಾರ್ಜುನ-ಪರಶುರಾಮ
ಕೃತವೀರ್ಯ ಮಾಹಿಷ್ಮತಿ ಪಟ್ಟಣದ ಅರಸು. ಅವನ ಮಗನೇ ಕಾರ್ತವೀರ್ಯಾರ್ಜುನ. ಅರ್ಜುನ ದರ್ಪಿಷ್ಠ; ದೈಹಿಕ ಶಕ್ತ. ತಾನು ಏನು ಮಾಡಿದರೂ ನಡೆಯುತ್ತದೆಂಬ ರಾಜ- ಸಹಜ ಅಹಂಕಾರ. ಹಾಗೊಮ್ಮೆ ಆಶ್ರಮವೊಂದನ್ನು ಹಾದು ಹೋಗುತ್ತಿದ್ದ. ಒಳಗೊಂದು ಸುಂದರ ಬಿಳಿ ಬಣ್ಣದ, ಜಿಂಕೆಯಂತೆ ಹಾರುತ್ತಿದ್ದ ಪುಟ್ಟ ಕರು ಒಂದು ಕಾಣಿಸಿತು. ಸರಿ ಇರಲಿ/ತಪ್ಪಿರಲಿ, ಬಯಸಿದ್ದನ್ನು ಪಡೆಯುವ ಹಠ. ರಥವನ್ನು ನಿಲ್ಲಿಸಿ ಆಶ್ರಮದ ಒಳಗೆ ಬಂದ. ಒಳಗೆ ಯಾರೂ ಇಲ್ಲ. ಒಬ್ಬ ತರುಣ ಋಷಿ ಹೇಳಿದ; " ಗುರುಗಳು ಸಂಸಾರ ಸಮೇತ ಪಕ್ಕದ ಋಷ್ಯಾಶ್ರಮಕ್ಕೆ ಹೋಗಿದ್ದಾರೆ; ಯಾವುದೋ ಪೂಜೆಯಲ್ಲಿ ಪಾಲ್ಗೊಳ್ಳಲು. "ಮುಂದೆ ನುಗ್ಗಿ ಕರುವನ್ನೆಳೆದುಕೊಂಡು ಹೊರಬಂದ. 
*************
ತಾಯಿ ಹಸು ಅರಚಿಕೊಳ್ಳುತ್ತಿದ್ದಾಳೆ, ಜಮದಗ್ನಿಗಳು ಆಶ್ರಮಕ್ಕೆ ವಾಪಸಾದಾಗ. ಶಿಷ್ಯ ನಡೆದದ್ದನ್ನು ಹೇಳಿದ. ಜಮದಗ್ನಿಗಳು ಶಿಷ್ಯನಿಗೆ ಹೇಳಿದರು; " ಕಾರ್ತವೀರ್ಯ ತಪ್ಪು ಮಾಡಿದ. ಪಾಪ, ಗೋಮಾತೆಗೆ ಕಷ್ಟ ಕೊಟ್ಟ. ಅವನೆಷ್ಟೇ ಆಗಲಿ ಕ್ಷತ್ರಿಯ; ಕ್ಷಾತ್ರ ಬುದ್ಧಿ. ಅತ್ತ ಕರುವು ತಾಯಿಯನ್ನಗಲಿ ಒದ್ದಾಡುತ್ತಿದೆ. ಹೋಗು, ಈ ಹೋಮಧೇನುವನ್ನೂ ಕರೆದುಕೊಂಡು ಹೋಗಿ ಮಗುವಿನ ಜೊತೆಗೆ ಸೇರಿಸಿ ರಾಜನಿಗೆ ಕೊಟ್ಟು ಬಾ. 
" .ಅಪ್ಪನ ಕ್ಷಮೆಯನ್ನು, ಮೃದುತ್ವವನ್ನು ಕಂಡು ಪರಶುರಾಮರು ಕನಲಿದರು. " ಬೇಡ! ಹೋಗಬೇಡ! ಹಸುವನ್ನು ಕರೆದುಕೊಂಡು ಹೋಗಬೇಡ. ನಾನು ಹೋಗಿ ಕರುವನ್ನೇ ತಾಯ ಬಳಿ ಕರೆತರುವೆ. "ಕೈಲಿ ಪರಶು ಹಿಡಿದು ರಾಜ ಹೋದ ದಿಕ್ಕಿನಲ್ಲಿ ಹಾರಿ ಹೋದರು. ರಥಕ್ಕೆ ಕರುವನ್ನು ಕಟ್ಟಿಕೊಂಡು ಕಾರ್ತವೀರ್ಯ ಹೋಗುತ್ತಿದ್ದುದನ್ನು ತಡೆದು, "ಎಲಾ ಕಳ್ಳ! ನಾವು ಯಾರೂ ಆಶ್ರಮದಲ್ಲಿಲ್ಲದಾಗ ಕರುವನ್ನು ಕದ್ದು ತಂದೆಯಾ? " ಅಡಿಯಿಂದ ಮುಡಿವರೆಗೆ ಪರಶುರಾಮರನ್ನು ಕಂಡು ಹೇಳಿದ ಅರ್ಜುನ; "ಇದನ್ನಾರು ಕಳ್ಳತನ ಎಂದರು?! ನೀನು ಆಶ್ರಮದಲ್ಲಿದ್ದಿದ್ದರೆ ನಿನ್ನೆದುರೇ ತರುತ್ತಿದ್ದೆ! ಇದು ರಾಜರಿಗಿರುವ ವಿಶೇಷ ಹಕ್ಕು. ತಮ್ಮ ರಾಜ್ಯದ ಶ್ರೇಷ್ಠ ವಸ್ತುವನ್ನವರು ಬಯಸಬಹುದು, ಸಂಗ್ರಹಿಸಬಹುದು. "ಮಾಡಿದ ತಪ್ಪನ್ನೇ ಹಕ್ಕೆನ್ನುತ್ತಿರುವ ರಾಜನನ್ನು ಧಿಕ್ಕರಿಸಿ ಹೇಳಿದರು ಪರಶುರಾಮರು, "ಬೇರೆಯವರ ಆಸ್ತಿಯ ಮೇಲೆ ಕಣ್ಣು ಹಾಕುವುದೇ ಮೊದಲ ತಪ್ಪು. ಅದರಲ್ಲಿಯೂ ಬ್ರಹ್ಮಸ್ವವನ್ನಪಹರಿಸುವುದು ಮಹಾ ಪಾಪ. ಇದಕ್ಕೆ ನಿನಗೆ ಶಿಕ್ಷೆ ಆಗದೇ ಇರದ. "ಗಹಗಹಿಸಿ ನಕ್ಕುಬಿಟ್ಟ ಅರ್ಜುನ. "ನನಗೆ? ಈ ದತ್ತಾತ್ರೇಯ ಶಿಷ್ಯನಿಗೆ ಶಿಕ್ಷೆ ಕೊಡುವವರು ಹುಟ್ಟೇ ಇಲ್ಲ! ಎಂಥ ಗರ್ವ! ನಿನ್ನ ಪೊಗರು ಸಾಕು. ಕರುವನ್ನು ಕೊಡದಿದ್ದರೆ ನಿನ್ನನ್ನು ದಂಡಿಸಲು ನಾನೇ ಇದ್ದೇನೆ, ಪರಶುರಾಮ; ಜಮದಗ್ನಿ ಪುತ್ರ ಭಾರ್ಗವ ರಾಮ. ಶಾಪಾದಪಿ ಶರಾದಪಿ . ಇದು ನನ್ನ ಪ್ರತಿಙ್ಞೆ . ಶಾಪ ಕೊಟ್ಟಾದರೂ ನಿನ್ನನ್ನು ನಿಗ್ರಹಿಸಬಲ್ಲೆ! ಆದರೆ ಶಾಪ ಕೊಟ್ಟು ನನ್ನ ತಪಶ್ಶಕ್ತಿಯನ್ನು ಕಳೆದುಕೊಳ್ಳಲಾರೆ. ನನ್ನ ಶಸ್ತ್ರ ಸಾಕು ನಿನ್ನನ್ನು ಹರಿದು ಹಾಕಲು." 
ಇವನಿಗೆ ನನ್ನ ಶಕ್ತಿ ಗೊತ್ತೇ ಇಲ್ಲ. ದತ್ತಾತ್ರೇಯಾನುಗ್ರಹವೂ ಗೊತ್ತಿಲ್ಲ. ರಥ ಬಿಟ್ಟು ಇಳಿದ ಅರ್ಜುನ. ಒಮ್ಮೆ ಗುರುವನ್ನು ನೆನಪಿಸಿ ನಮಸ್ಕರಿಸಿದ. ಕ್ಷಣಮಾತ್ರದಲ್ಲಿ ಸಾವಿರ ಬಾಹುಗಳು ಮೂಡಿದವು. ಒಂದೊಂದರಲ್ಲೂ ವಿವಿಧ ಆಯುಧಗಳು. " ಈಗ ಗೊತ್ತಾಯಿತೋ ನನ್ನ ಶಕ್ತಿ? ಈಗಲೂ ನಿನಗೆ ನನ್ನೊಡನೆ ಹೋರಾಡುವ ಕೆಚ್ಚು ಉಳಿದಿದೆಯೋ? "ಅಪ್ರತಿಭನಾಗಿ ಪರಶುರಾಮ ಹಿಂಜರಿವನೆಂದುಕೊಂಡಿದ್ದ ಅರ್ಜುನ. ಇಲ್ಲ ಇಲ್ಲ, ಪರಶುರಾಮರ ಮುಖದಲ್ಲಿ ಅಚ್ಚರಿಯ ಗೆರೆಯೂ ಮೂಡಲಿಲ್ಲ. "ನಿನಗೆ ಗುರು ಅನುಗ್ರಹವಷ್ಟೇ ಗೊತ್ತು. ಮುಂದಿನದು ಗೊತ್ತಿಲ್ಲ. ನಿನಗೆ ಯಾರು ಗುರುಗಳೋ, ನನಗೂ ಅವರೇ ಗುರುಗಳು. ನಿನ್ನ ಪುಂಡಾಟ, ನೀನು ಸಾಧುಗಳನ್ನು ಹಿಂಸಿಸುವ ವಿಷಯ... ಎಲ್ಲ ದತ್ತಾತ್ರೇಯರಿಗೆ ಗೊತ್ತಾಗುವಾಗಲೇ ನಾನವರ ಶಿಷ್ಯನಾಗಿದ್ದೆ. ಅವರೇ ನಿನ್ನನ್ನು ಮರ್ದಿಸಲು ನನಗೆ ಆದೇಶಿಸಿದ್ದಾರೆ. ಅಷ್ಟೇ ಅಲ್ಲ, ಅವರ ಮಾರ್ಗದರ್ಶನದಂತೆಯೇ ನಾನು ಈಶ್ವರನನ್ನು ಮೆಚ್ಚಿಸಿ ಈ ಪರಶುವನ್ನು ಸಂಪಾದಿಸಿದ್ದೇನೆ. ನೀನೇ ಇದಕ್ಕೆ ಮೊದಲ ಬಲಿ ಎಂದು ಕಾಣುತ್ತದೆ. ಹೇಳು, ಕರುವನ್ನು ಕೊಡುವೆಯೋ, ಅಥವಾ ನಿನ್ನ ತೋಳಿನ ತೋಟವನ್ನು ಕಡಿದುಹಾಕಲೋ?" 
ಮೊದಲ ಬಾರಿ ಕಾರ್ತವೀರ್ಯನಿಗೆ ಹೆದರಿಕೆ ಎನಿಸಿತು. ಹಾಗಾದರೆ ತನಗೆ ಮೃತ್ಯು ಸನ್ನಿಹಿತವಾಯಿತೇ? ಈತನೇನು ಅವತಾರ ಪುರುಷನೇ? ತಾನು ಗುರುಗಳಲ್ಲಿ ಕೇಳಿದ್ದೆನಲ್ಲ; ಸಾಯುವುದಾದರೆ ಭಗವಂತನಿಂದ ಸಾಯಬೇಕೆಂದು! ಗುರುಗಳೇ ಕಳಿಸಿದ್ದಾರೆಂದಮೇಲೆ!!! "ನಿನಗೆ ನನ್ನನ್ನು ಸಾಯಿಸುವ ಸತ್ವವಿದ್ದರೆ ಪ್ರಯತ್ನಿಸು. ಕರುವನ್ನು ಬಿಡುವುದಿಲ್ಲ. "ಮಾತು ಮುಗಿಯುತ್ತಿದ್ದಂತೆಯೇ ಪರಶುರಾಮರ ಕೈಯನ್ನು ಬಿಟ್ಟಿತು, ರೊಯ್ಯೆಂದು ನುಗ್ಗಿತು, ರೇಣುಕೆಯ ತಲೆ ಕಡಿದಷ್ಟೇ ಸುಲಭವಾಗಿ ಕತ್ತರಿಸಿ, ಕತ್ತರಿಸಿ, ಕತ್ತರಿಸಿ ಕೊನೆಗೆ ತಲೆಯನ್ನೂ ತರಿದುಹಾಕಿತು, ಪರಶುರಾಮರ ಪರಶು.
************
ಕೈಗಳ ದೊಡ್ಡ ರಾಶಿ. ಅಷ್ಟು ದೂರದಲ್ಲಿ ತಂದೆಯ ಕಪ್ಪಿಟ್ಟ ಮುಖ ಬಿದ್ದಿತ್ತು. ವಿಷಯ ತಿಳಿದು ಬರುವ ಹೊತ್ತಿಗೆ ನಾಯಿ, ತೋಳ, ನರಿಗಳೆಲ್ಲ ಬಂದು ದೇಹ-ಕೈಗಳನ್ನೆಳೆದಾಡಿ ತಿನ್ನುತ್ತಿವೆ. ದುಃಖತಪ್ತ ಮಕ್ಕಳೆಲ್ಲ ಅಪ್ಪನ ದೇಹಕ್ಕೆ ಬೆಂಕಿ ಇಟ್ಟು ಪ್ರತಿಙ್ಞೆ ಮಾಡಿದರು; "ನಮ್ಮಪ್ಪನ ಸಾವಿನ ಕೊಲೆಯ ಭೀಕರ ಸಾವು ನಮಗೆಷ್ಟು ಚುಚ್ಚುತ್ತಿದೆಯೋ, ನೋಯಿಸುತ್ತಿದೆಯೋ, ಅಂಥ ನೋವನ್ನೇ ಅವನಿಗೆ ಕೊಡಬೇಕು."
*************
ಕಾರ್ತವೀರ್ಯನ ಮಕ್ಕಳು ಬಂದಾಗ ಆಶ್ರಮದಲ್ಲಿ ನಿಶ್ಶಬ್ದ; ಯಾರೂ ಇಲ್ಲ; ಖಾಲಿ. ಎಲ್ಲರೂ ಎಲ್ಲೋ ಹೋಗಿದ್ದಾರೆ. ಇನ್ನೇನು ಹಿಂದಿರುಗಬೇಕೆಂದಿದ್ದರು. ಮೃದುವಾದ ಧ್ವನಿ ಕೇಳಿತು. "ಬನ್ನಿ, ಬನ್ನಿ. ಮಧ್ಯಾಹ್ನಕ್ಕೆ ಬಂದಿದ್ದೀರಿ. ಊಟ ಮಾಡಿಕೊಂಡು ಹೋಗಿ. "ತಿರುಗಿ ನೋಡಿದರು, ವಿಭೂತಿಯಿಟ್ಟ ಪ್ರಶಾಂತ ಮುಖ. "ಒಳಗೆ ಬಚ್ಚಿಟ್ಟುಕೊಂಡಿದ್ದೋ, ನಾವು ಊಟ ಮಾಡುವುದೂ ಇಲ್ಲ; ನೀನು ಊಟ ಮಾಡುವುದಕ್ಕೆ ಬಿಡುವುದೂ ಇಲ್ಲ. "ನುಗ್ಗಿದರು, ಸುತ್ತುಗಟ್ಟಿದರು, ಕಾಲುಗಳನ್ನು ಹಿಡಿದು ನೂಕಿದರು, ನೆಲಕ್ಕೆ ತಲೆ ಒಡೆದು ನೋವಿನಿಂದ ಕಿರಿಚಿದರು, ದರದರ ಎಳೆದರು. ಕಲ್ಲು-ಮುಳ್ಳುಗಳಲ್ಲಿ ದೇಹ ಉಜ್ಜಿ-ಉಜ್ಜಿ ರಕ್ತ ಸುರಿಯಿತು. ಋಷಿಗಳು ನೋವಿನಿಂದ ಕೂಗಿದರು, ನೋವು! ನೋವು! ಆದರೆ ಸಿಟ್ಟೇ ಬರುತ್ತಿಲ್ಲ. ಒಮ್ಮೆ ಮಂತ್ರ ನೆನಪಿಸಿಕೊಂಡು ಶಪಿಸಿದ್ದರೆ ಸಾಕಿತ್ತು; ಎಲ್ಲರೂ ಸುಟ್ಟು ಹೋಗುತ್ತಿದ್ದರು! ಇಲ್ಲ, ಕೋಪ ಹುಟ್ಟುತ್ತಿಲ್ಲ. ಸಾಮಾನ್ಯರಂತೆ ಅರಚುತ್ತಿದ್ದರು. ಎಳೆದು, ಎಳೆದು, ಕೊನೆಗೆ ಭಲ್ಲೆಗಳಿಂದ ಜಮದಗ್ನಿಗಳನ್ನು ಮೈತುಂಬ ಚುಚ್ಚಿದರು. ಕತ್ತಿಯ ತುದಿ ಕಣ್ಣುಗಳನ್ನು ಇರಿದು ಗುಡ್ಡೆಗಳನ್ನು ಒಡೆದು ಹಾಕಿತು. ಕಲ್ಲನ್ನೆತ್ತಿ ಬುರುಡೆಗೆ ಹೊಡೆದರು, ಬ್ರಹ್ಮ ರಂಧ್ರ ಒಡೆದು ಪ್ರಾಣ ಹಾರಿ ಹೋಯಿತು. (ಮುಂದುವರೆಯುವುದು...)
---೦೦೦---
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com