ಹೂಡಿಕೆಗೆ ಈ ವರ್ಷ ಯಾವ ಕ್ಷೇತ್ರ ತರುವುದು ಹರ್ಷ?

ಕಳೆದ ಹಲವು ವಾರಗಳಿಂದ ನಮ್ಮ ಬ್ಯಾಂಕ್ಗಳೆಷ್ಟು ಸುರಕ್ಷಿತ? ಬೈಲ್ ಔಟ್ ಮತ್ತು ಬೈಲ್ ಇನ್ ಇವುಗಳ ಬಗ್ಗೆ ಜೊತೆಗೆ ಕುಸಿಯುತ್ತಿರುವ ಬಡ್ಡಿ ದರದಿಂದ ಆಗುತ್ತಿರುವ ಸಾಮಾಜಿಕ ಏರುಪೇರುಗಳ ಬಗ್ಗೆ ಹಣಕ್ಲಾಸು....
ಹೂಡಿಕೆಗೆ ಈ ವರ್ಷ ಯಾವ ಕ್ಷೇತ್ರ ತರುವುದು ಹರ್ಷ !
ಹೂಡಿಕೆಗೆ ಈ ವರ್ಷ ಯಾವ ಕ್ಷೇತ್ರ ತರುವುದು ಹರ್ಷ !
Updated on
ಕಳೆದ ಹಲವು ವಾರಗಳಿಂದ ನಮ್ಮ ಬ್ಯಾಂಕ್ಗಳೆಷ್ಟು ಸುರಕ್ಷಿತ? ಬೈಲ್ ಔಟ್ ಮತ್ತು ಬೈಲ್ ಇನ್ ಇವುಗಳ ಬಗ್ಗೆ ಜೊತೆಗೆ ಕುಸಿಯುತ್ತಿರುವ ಬಡ್ಡಿ ದರದಿಂದ ಆಗುತ್ತಿರುವ ಸಾಮಾಜಿಕ ಏರುಪೇರುಗಳ ಬಗ್ಗೆ ಹಣಕ್ಲಾಸು ಅಂಕಣದಲ್ಲಿ ಓದಿದ ಹಲವಾರು ಓದುಗರ ಪ್ರಶ್ನೆ ಹೆಚ್ಚು ಕಡಿಮೆ ಒಂದೇ ರೀತಿ ಇತ್ತು. ಸಣ್ಣ ಉಳಿತಾಯದ ಮೇಲೂ ಬಡ್ಡಿ ದರ ಕುಸಿದಿದೆ ಎನ್ನುತ್ತೀರಿ ವಸ್ತು ಸ್ಥಿತಿ ಹೀಗಿರುವಾಗ ಸಣ್ಣ ಮತ್ತು ಮಧ್ಯಮ ಹೂಡಿಕೆದಾರರು ಎಲ್ಲಿ ಹೂಡಿಕೆ ಮಾಡಿದರೆ ಸೂಕ್ತ ಎನ್ನುವ ಒಂದಷ್ಟು ಮಾಹಿತಿ ನೀಡಿದರೆ ಚನ್ನಾಗಿತ್ತು ಎನ್ನುವುದು ಮೊದಲೆ ಹೇಳಿದಂತೆ ಹಲವಾರು ಓದುಗ ಮಿತ್ರರ ಧ್ವನಿ. ಇಂದಿನ ಹಣಕ್ಲಾಸು ಅಂಕಣದಲ್ಲಿ ಯಾವ ಕ್ಷೇತ್ರದಲ್ಲಿ ಹಣ ತೊಡಗಿಸಬಹದು ಎನ್ನುವುದರ ಬಗ್ಗೆ ಸ್ಥೂಲ ಮಾಹಿತಿ ನೀಡುತ್ತೇನೆ. ಉಳಿದಂತೆ ಹೂಡಿಕೆ ಸಮಯದಲ್ಲಿ ಹೆಚ್ಚಿನ ಪರಾಮರ್ಶೆ ಅವಶ್ಯಕ ಎನ್ನವುದನ್ನ ಓದುಗರ ಅರಿತು ಕೊಳ್ಳುವುದು ಒಳಿತು. 
ನಮ್ಮ ಸ್ಟಾಕ್ ಮಾರ್ಕೆಟ್ 2018 ರಲ್ಲಿ ಹೇಗಿರುತ್ತದೆ? 
2017 ರ ಸ್ಟಾಕ್ ಮಾರ್ಕೆಟ್ ಸಾಕಷ್ಟು ಅಭಿವೃದ್ಧಿ ಕಂಡಿತು. ಹಣಕಾಸಿನ ದೃಷ್ಟಿಯಿಂದ ನೋಡುವುದಾದರೆ ಸ್ಟಾಕ್ ಮಾರ್ಕೆಟ್ ನಲ್ಲಿ ನುರಿತ ಹೂಡಿಕೆದಾರರು ಸಾಕಷ್ಟು ಯಶಸ್ಸು ಕಂಡರು. ಈ ವರ್ಷ ಕೂಡ ಹೇಳಿಕೊಳ್ಳುವಂತಹ ತೊಂದರೆಗಳು ಸದ್ಯದ ಮಟ್ಟಿಗೆ ಕಾಣುತ್ತಿಲ್ಲ. ಭಾರತದ ಮಟ್ಟಿಗೆ ಹೇಳುವುದಾದರೆ ಈ ವರ್ಷ ಸುಲಲಿತವಾಗಿ ಸಾಗಬೇಕು. ಆದರೇನು ನಾರ್ತ್ ಕೊರಿಯಾ ಮತ್ತು ಅಮೇರಿಕಾ ನಡುವಿನ ಟ್ವೀಟ್ ಸಮರವನ್ನ ಕಂಡಿರುವರು ಅವುಗಳ ನಡುವಿನ ಹೊಡೆದಾಟವನ್ನ ಅಲ್ಲಗೆಳೆಯುವುದಿಲ್ಲ. ಈ ರೀತಿ ಅಂತರರಾಷ್ಟ್ರೀಯ ವಿದ್ಯಮಾನಗಳನ್ನ ಮತ್ತು ಊಹಿಸಲಾಗದೆ ಘಟಿಸುವ ವಿಷಯಗಳನ್ನ ಪಕಕ್ಕೆ ಇಟ್ಟು ನೋಡಿದರೆ ಸ್ಟಾಕ್ ಮಾರ್ಕೆಟ್ ಈ ವರ್ಷವೂ ಒಳ್ಳೆಯ ಫಸಲನ್ನ ನೀಡುವ ಸಾಧ್ಯತೆಗಳಿವೆ. 
ಥೀಮ್ ಆಧಾರಿತ ಸ್ಟಾಕ್ ಮೇಲಿನ ಹೂಡಿಕೆಗೆ ಹೆಚ್ಚು ಒತ್ತು ನೀಡಿ: 
2018 ರ ಬಜೆಟ್ನಲ್ಲಿ ಕೇಂದ್ರ ಸರಕಾರ ಖಂಡಿತವಾಗಿ ಗ್ರಾಮಿಣಾಭಾವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಿದೆ. ಹೀಗೆ ರೂರಲ್ ಡೆವಲಪ್ಮೆಂಟ್ ಹೆಸರಿನ ಬಾಂಡ್ಗಳನ್ನ ಕೇಂದ್ರ ಸರಕಾರ ಜಾರಿಗೆ ತರಲಿದೆ. ಇವು ಎಲ್ಲಾ ರೀತಿಯಲ್ಲೂ ಹೆಚ್ಚಿನ ಸುರಕ್ಷತೆಯಿಂದ ಕೂಡಿವೆ ಜೊತೆಗೆ ಹೆಚ್ಚಿನ ಆದಾಯವನ್ನೂ ನೀಡಲಿದೆ. ಇದೊಂದೇ ಅಂತಲ್ಲ ಯಾವುದೇ ರೀತಿಯ ನಿಗದಿತ ಹೆಸರಿಟ್ಟು ಬಿಡುಗಡೆ ಮಾಡುವ ಬಾಂಡ್ ಗಳ ಮೇಲಿನ ಹೂಡಿಕೆ ಉತ್ತಮವಾಗಿರುತ್ತದೆ. ಉದಾಹರಣೆ ನೋಡಿ ಇದೆ ತಿಂಗಳು 10 ನೇ ತಾರೀಕಿನಿಂದ ಕೇಂದ್ರ ಸರಕಾರ ಸೇವಿಂಗ್ ಬಾಂಡ್ ಅಂದರೆ ಉಳಿತಾಯದ ಹೆಸರಿನಲ್ಲಿ ಬಾಂಡ್ ಅನ್ನು ಬಿಡುಗಡೆ ಮಾಡಿದೆ. ಇದು 7.75 ಪ್ರತಿಶತ ಬಡ್ಡಿ ಹೊಂದಿದ್ದು ಇದರಲ್ಲಿ ತೆರಿಗೆ ಮಿತಿಯಲ್ಲಿರುವವರು ಹೂಡಿಕೆ ಮಾಡಬಹದು. ಇದು ಅಂತಹವರಿಗೆ ಹೆಚ್ಚಿನ ಲಾಭ ಕೊಡುತ್ತದೆ.  ತೆರಿಗೆಯನ್ನ ಬಡ್ಡಿ ಹಣ ಕೊಡುವ ಸಮಯದಲ್ಲಿ ಕಡಿತಗೊಳಿಸುವುದರಿಂದ ಯುವಕರಿಗೆ ಮತ್ತು ಹೆಚ್ಚಿನ ತೆರಿಗೆ ಕಟ್ಟುವವರಿಗೆ ಯಾವುದೇ ಉಪಯೋಗ ಇಲ್ಲ. 
ಎಲ್ಲಾ ಮ್ಯೂಚುಯಲ್ ಫಂಡ್ ಗಳು ಸುರಕ್ಷಿತವಲ್ಲ: 
ಇಲ್ಲಿ ಕೂಡ ಮಿಡ್ ಟರ್ಮ್ ನಿಂದ ಲಾಂಗ್ ಟರ್ಮ್ ಹೂಡಿಕೆ ಹೆಚ್ಚಿನ ಲಾಭವನ್ನ ಖಂಡಿತ ತಂದು ಕೊಡುತ್ತದೆ. ಮಾರುಕಟ್ಟೆಯಲ್ಲಿ ಸಣ್ಣ ಪುಟ್ಟ ಏರಿಳಿತಗಳು ಸದಾ ಇದ್ದೆ ಇರುತ್ತದೆ. ಲಾಂಗ್ ಟರ್ಮ್ ನಲ್ಲಿ ಇಂತಹ ಸಣ್ಣ ಪುಟ್ಟ ಏರಿಳಿತಗಳ ಲಾಭ ನಷ್ಟ ಎಲ್ಲವೂ ಹೊಂದಾವಣಿಕೆಯಾಗಿ ನಮ್ಮ ನಿರೀಕ್ಷಿತ ಲಾಭವನ್ನ ತಂದು ಕೊಡುತ್ತದೆ. ಮಾರುಕಟ್ಟೆಯ ಏರಿಳಿತ ಹೇಗೆ ಇರಲಿ ನಿಮ್ಮ ಹೂಡಿಕೆ ಸದಾ ಸಮತೋಲಿತವಾಗಿರಲಿ ಆಗ ಮಾರುಕಟ್ಟೆ ಕುಸಿದರೂ ನಿಮಗೆ ಹೆಚ್ಚಿನ ನಷ್ಟ ಆಗುವುದಿಲ್ಲ. 2017ರಲ್ಲಿ ರಿಲಯನ್ಸ್ ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್ 70 ಪ್ರತಿಶತ ಲಾಭವನ್ನ ತಂದು ಕೊಟ್ಟಿದೆ. ಎಲ್ ಅಂಡ್ ಟಿ ಇನ್ಫ್ರಾ ಮ್ಯೂಚುಯಲ್ ಫಂಡ್ 60 ಪ್ರತಿಶತ ಲಾಭವನ್ನ ತಂದುಕೊಟ್ಟಿದೆ. ಉಳಿದಂತೆ ಮೆಜಾರಿಟಿ ಮ್ಯೂಚುಯಲ್ ಫಂಡ್ ಗಳು ನೆಲ ಕಚ್ಚಿವೆ. ಹೀಗಾಗಿ ನಮ್ಮ ಸಲಹೆ 'ವಿಷಯಾಧಾರಿತ ಅಥವಾ ನಿಗದಿತ ಹೆಸರಿಟ್ಟ ಯೋಜನೆಗಳ ಮೇಲಿನ ಹೂಡಿಕೆ' ಹೆಚ್ಚಿನ ಲಾಭ ತಂದು ಕೊಡುತ್ತದೆ ಅಲ್ಲದೆ ಸುರಕ್ಷತೆಯ ದೃಷ್ಟಿಯಿಂದ ಕೂಡ ಉತ್ತಮ. 
ಪಬ್ಲಿಕ್ ಸೆಕ್ಟರ್ ಬ್ಯಾಂಕ್ಗಳು ಮತ್ತು ಇತರ ಫೈನಾನ್ಸಿಯಲ್ ಸರ್ವಿಸ್ ನೀಡುವ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿ: 
ಬ್ಯಾಂಕ್ಗಳಲ್ಲಿ ಹಣವನ್ನ ಠೇವಣಿ ಇರಿಸುವುದು ಹೆಚ್ಚು ಲಾಭದಾಯಕವಲ್ಲ ಆದರೆ ಅದೇ ಹಣದಲ್ಲಿ ಬ್ಯಾಂಕಿನ ಷೇರು ಖರೀದಿ ಖಂಡಿತ ಹೆಚ್ಚಿನ ಲಾಭವನ್ನ ತಂದು ಕೊಡುತ್ತದೆ. ಕೇಂದ್ರ ಸರಕಾರ ಬ್ಯಾಂಕ್ಗಳು ಕುಸಿಯದಂತೆ ತಡೆಯಲು ಕಟಿಬದ್ಧವಾಗಿದೆ. ಹೇಳಿದಂತೆ ಬ್ಯಾಂಕ್ನಲ್ಲಿ ಬಂಡವಾಳ ಮರು ಹೂಡಿಕೆ ಮಾಡುತ್ತಿದೆ . ಇದು ಹೂಡಿಕೆದಾರರಲ್ಲಿ ಹೆಚ್ಚಿನ ವಿಶ್ವಾಸ ತಂದಿದೆ . 2018 ರಲ್ಲಿ ಬ್ಯಾಂಕ್ ಕ್ಷೇತ್ರಕ್ಕೆ ಸಂಬಂಧಪಟ್ಟ ಷೇರುಗಳು ಏರುಗತಿಯನ್ನ ಕಾಣುವ ಸಾಧ್ಯತೆಗಳು ದಟ್ಟವಾಗಿದೆ . ಕೇವಲ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಅಲ್ಲದೆ ಎಲ್ಲಾ ಹಣಕಾಸು ಸೇವೆ ನೀಡುವ ಸಂಸ್ಥೆಗಳ ಷೇರುಗಳು ಏರುಗತಿಯನ್ನ ಕಾಣಲಿದೆ . ಸ್ವಲ್ಪ ಅಳೆದುತೂಗಿ ಫೈನಾನ್ಸಿಯಲ್ ಮಾರ್ಕೆಟ್ ನಲ್ಲಿ ಹಣವನ್ನ ಹೂಡಬಹದು . 
ಪೀರ್ ಟು ಪೀರ್ ಲೆಂಡಿಂಗ್ : 
ನಿಮ್ಮ ಬಳಿ ಹೆಚ್ಚಿನ ಹಣವಿದ್ದರೆ ನೀವೇ ಬಾಂಕ್ನಂತೆ ಕಾರ್ಯ ನಿರ್ವಹಿಸಬಹದು! ಪೀರ್ ಟು ಪೀರ್ ಎನ್ನುವುದು ಜನಸಾಮನ್ಯ ಇನ್ನೊಬ್ಬ ಜನ ಸಾಮಾನ್ಯನಿಗೆ ಮಧ್ಯವರ್ತಿಯ ಸಹಾಯವಿಲ್ಲದೆ ಹಣವನ್ನ ಸಾಲ ನೀಡಲು ಮತ್ತು ಪಡೆಯಲು ನಿರ್ಮಾಣವಾಗಿರುವ ವೇದಿಕೆ. ಇಲ್ಲಿ ನೊಂದಾಯಿಸಿಕೊಂಡು ಸಾಲ ಪಡೆಯುವನ ಕ್ರೆಡಿಬಿಲಿಟಿ ವೀಕ್ಷಿಸಿ ನೀವೇ ನೇರವಾಗಿ ಹಣವನ್ನ ಸಾಲ ಕೊಡಬಹದು ಮತ್ತು ನಿಗದಿತ ಬಡ್ಡಿಯನ್ನೂ ವಿಧಿಸಬಹದು. ಇದು ಇತ್ತೀಚೆಗಷ್ಟೇ ಭಾರತದಲ್ಲಿ ತನ್ನ ಪುಟ್ಟ ಹೆಜ್ಜೆಯನ್ನ ಇಡುತ್ತಿದೆ. ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ ಮನಸಿದ್ದವರು ಖಂಡಿತ ಇಲ್ಲಿ ಹೂಡಿಕೆ ಮಾಡಬಹದು. ಪ್ರಾರಂಭದಲ್ಲಿ ಇವು ಖಂಡಿತ ಚನ್ನಾಗಿ ಕಾರ್ಯ ನಿರ್ವಹಿಸುತ್ತವೆ. 
ಇತರೆ ಕ್ಷೇತ್ರಗಳ ಹೂಡಿಕೆ: ಕಮಾಡಿಟಿ ಮಾರ್ಕೆಟ್ನಲ್ಲಿ ಹಣವನ್ನ ಹೂಡಬಹದು. ಸಕ್ಕರೆ, ಚಿನ್ನ ಈ ವರ್ಷ ವೃಷಭ ಓಟ ಓಡುವ ಸಾಧ್ಯತೆಯಿದೆ. ಉಳಿದಂತೆ ಐಟಿ ಕ್ಷೇತ್ರ, ಕ್ಯಾಪಿಟಲ್ ವಸ್ತುಗಳ ಮೇಲಿನ ಹೂಡಿಕೆ, ಮೂಲ ಸೌಕರ್ಯಗಳ ಬಾಂಡ್ ಗಳ  ಮೇಲಿನ ಹೂಡಿಕೆ ಕೂಡ ಚನ್ನಾಗಿರುವ ಸಾಧ್ಯತೆಯಿದೆ.  ಯಾವುದೇ ರೀತಿಯ ಅಸುರಕ್ಷತೆ ಬಯಸದವರು ಎಂದಿನಂತೆ ಪಿಪಿಎಫ್, ಸೇವಿಂಗ್ ಬಾಂಡ್, ಪೋಸ್ಟ್ ಆಫೀಸ್ ತಿಂಗಳ ಆದಾಯ ತರುವ ಯೋಜನೆ, ಏನ್ ಎಸ್ ಸಿ ತರಹದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಗಳನ್ನ ಮಾಡಬಹದು. 
ಹಣ ಯಾವತ್ತಿಗೂ ರಾಜ: 
ಮಾರುಕಟ್ಟೆ ಹೆಚ್ಚಿನ ಏರಿಳಿತಕ್ಕೆ ಒಳಗಾದಾಗ ಯಾರ ಕೈಲಿ ಹಣವಿರತ್ತೋ ಅವನು ರಾಜ! ಈ ಮಾತು ಎಂದೆದಿಗೂ ಸತ್ಯ!! ಇದನ್ನ ಹೇಳುವು ಉದ್ದೇಶ ಇಷ್ಟೇ ನಿಮ್ಮ ಬಳಿ 100 ರೂಪಾಯಿ ಹೂಡಿಕೆ ಮಾಡಲು ಇದೆಯೆಂದು ಕೊಳ್ಳಿ ಅದರಲ್ಲಿ ಕನಿಷ್ಠ 20 ರೂಪಾಯಿ ಹಣದ ರೂಪದಲ್ಲೇ ಇರಲಿ! ಅಂದರೆ ಹೂಡಿಕೆ ಕೇವಲ 80 ರೂಪಾಯಿ ಆಗಿರಲಿ. ನಾಳೆ ಯಾವ ಹೊಸ ಅವಕಾಶ ನಿಮ್ಮ ಬಾಗಿಲ ಬಡೆಯಬಹದು ಬಲ್ಲವರಾರು?. 
ಕೊನೆ ಮಾತು: ಇವತ್ತು ಜಗತ್ತು ಪೂರ್ತಿ ಕ್ರಿಪ್ಟೋ ಕರೆನ್ಸಿ ಹಿಂದೆ ಹುಚ್ಚನಂತೆ ಓಡುತ್ತಿದೆ. ಇದು ಭಾರತದಲ್ಲಿ ಕಾನೂನುಬದ್ಧವಲ್ಲ. ಅಲ್ಲದೆ ಇದನ್ನ ಒಮ್ಮೆ ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ. 100 ಕ್ರಿಪ್ಟೋ ಕರೆನ್ಸಿ ಯಲ್ಲಿ ಅರ್ಧದಷ್ಟು ಎಲ್ಲಿದೆ ಎನ್ನುವ ಮಾಹಿತಿಯೇ ಇಲ್ಲ!! ಇವೆಲ್ಲಾ ಅತ್ಯಂತ ಹೆಚ್ಚು ಹಣವಂತರು ಆಡುವ ಆಟ ಇದರಲ್ಲಿ ಹೂಡಿಕೆ ಮಾಡಿ ಹಣವನ್ನ ಕಳೆದುಕೊಳ್ಳಬೇಡಿ. ಇದು ಅಂತಲ್ಲ ಯಾವುದರ ಮೇಲಿನ ಹೂಡಿಕೆಯೇ ಸರಿ ಅದರ ಪೂರ್ಣ ಜ್ಞಾನ ಮತ್ತು ಅರಿವಿಲ್ಲದೆ ಮಾಡುವ ಹೂಡಿಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಮಾಡುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಜ್ಞಾನವೃದ್ಧಿಸುವ ಕಾರ್ಯ ಮಾತ್ರ ನಿಲ್ಲದೆ ಸಾಗುತ್ತಿರಲಿ. ನಿಮಗೆ 2018 ಹೂಡಿಕೆಯ ದೃಷ್ಟಿಯಿಂದ ಫಲಪ್ರದವಾಗಿರಲಿ. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com