ನಾರ್ತ್ ಕೊರಿಯಾಗೆ ಹಣ ಹೇಗೆ ಬರುತ್ತೆ ಗೊತ್ತಿದೆಯಾ?

2016 ರ ಅಂಕಿಅಂಶದ ಪ್ರಕಾರ ನಾರ್ತ್ ಕೊರಿಯಾ ಎಕಾನಮಿ ಕಳೆದ 17 ವರ್ಷಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳವಣಿಗೆ ಕಂಡಿದೆ. ಅಲ್ಲಿನ ಜಿಡಿಪಿ ಹೆಚ್ಚಿದೆ. ಜನರ ಖರೀದಿ ಶಕ್ತಿ ಹೆಚ್ಚಿದೆ. ಹೌದ? ಎನ್ನುವ ಪ್ರಶ್ನೆ ಈಗ ನಿಮ್ಮದು....
ಉತ್ತರ ಕೊರಿಯಾ ಸರ್ವಾಧಿಕಾರಿ (ಸಂಗ್ರಹ ಚಿತ್ರ)
ಉತ್ತರ ಕೊರಿಯಾ ಸರ್ವಾಧಿಕಾರಿ (ಸಂಗ್ರಹ ಚಿತ್ರ)
ಉತ್ತರ ಕೊರಿಯಾ ಎಂದರೆ ನಮಗೆ ತಕ್ಷಣ ಆ ದೇಶದ ಬಗ್ಗೆ ಚಿತ್ರಣ ತಕ್ಷಣ ಮೂಡುವುದಿಲ್ಲ ಆದರೆ ನಾರ್ತ್ ಕೊರಿಯಾ ಎಂದ ತಕ್ಷಣ ನಮಗೆ ಅಲ್ಲಿನ ಅಧ್ಯಕ್ಷ, ಆತನ ದುರಾಡಳಿತ ಅಲ್ಲಿನ ಜನರ ಬವಣೆಗಳು ತಕ್ಷಣ ನೆನಪಾಗುತ್ತದೆ. ಹಾಗೆ ನೋಡಲು ಹೋದರೆ ನಾರ್ತ್ ಕೊರಿಯಾದ ವಿಷಯಗಳು ಕೂಡ ಹೊರ ಜಗತ್ತಿಗೆ ತಿಳಿಯುವುದು ಅಷ್ಟಕಷ್ಟೇ. 
ಚೀನಾ ದೇಶದಂತೆ ಈ ದೇಶದಲ್ಲೂ ಪ್ರಜೆಗಳಿಗೆ ತಮಗನಿಸಿದ ಎಲ್ಲಾ ಕೆಲಸಗಳ ಮಾಡುವ ಹಕ್ಕಿಲ್ಲ. ಇದೊಂದು ಕಡೆಯಾದರೆ ಇನ್ನೊಂದೆಡೆ ಜಗತ್ತಿನ ದೊಡ್ಡಣ್ಣ ಅಮೇರಿಕಾ ಈ ಪುಟ್ಟ ದೇಶದ ಮೇಲೆ ಅನಾದಿ ಕಾಲದಿಂದಲೂ ಬಹಿಷ್ಕಾರ ಅಥವಾ ಇಂಗ್ಲಿಷ್ನಲ್ಲಿ ಹೇಳುವಂತೆ ಸ್ಯಾಂಕ್ಷನ್ ಹಾಕುತ್ತಲೇ ಬಂದಿದೆ. ಹೀಗಾಗಿ ಈ ದೇಶ ಆರ್ಥಿಕವಾಗಿ ಸಬಲವಾಗುವುದು ಹೇಗೆ? ಅಲ್ಲಿನ ಜನರ ಜೀವನ ಮಟ್ಟ ಉತ್ತಮವಾಗುವುದು ಹೇಗೆ? ಉದಾಹರಣೆ ನೋಡಿ ಇಡಿ ಜಗತ್ತನ್ನ ಒಂದು ಪುಟ್ಟ ಹಳ್ಳಿ ಎಂದುಕೊಳ್ಳಿ ನಾರ್ತ್ ಕೊರಿಯಾ ಆ ಹಳ್ಳಿಯಲ್ಲಿ ವಾಸಿಸುವ ಒಂದು ಕುಟುಂಬ ಎಂದುಕೊಳ್ಳಿ. ಅಮೇರಿಕಾ ಆ ಹಳ್ಳಿಯ ಪಂಚಾಯತಿ ಅಧ್ಯಕ್ಷ, ಆತ ಹೇಳುತ್ತಾನೆ ಯಾರೂ ನಾರ್ತ್ ಕೊರಿಯಾ ಎನ್ನುವ ಕುಟುಂಬಕ್ಕೆ ಸಹಾಯ ಮಾಡಬಾರದು ಅವರೊಂದಿಗೆ ಯಾವುದೇ ವಹಿವಾಟು ಇಟ್ಟು ಕೊಳ್ಳಬಾರದು ಎಂದು. ಈ ಕುಟುಂಬ ಬದುಕುವುದು ಹೇಗೆ? ನಾರ್ತ್ ಕೊರಿಯಾದ ಕಥೆ ವಿಶ್ವದ ಮಟ್ಟದಲ್ಲಿ ಆಗಿರುವುದು ಹೀಗೆ.
ಆದರೆ ನಿಮಗೊಂದು ಅಚ್ಚರಿಯ ವಿಷಯ ತಿಳಿಸಬೇಕಿದೆ ಅದೇನು ಗೊತ್ತೇ? 2016 ರ ಅಂಕಿಅಂಶದ ಪ್ರಕಾರ ನಾರ್ತ್ ಕೊರಿಯಾ ಎಕಾನಮಿ ಕಳೆದ 17 ವರ್ಷಕ್ಕಿಂತ ಹೆಚ್ಚಿನ ವೇಗದಲ್ಲಿ ಬೆಳವಣಿಗೆ ಕಂಡಿದೆ. ಅಲ್ಲಿನ ಜಿಡಿಪಿ ಹೆಚ್ಚಿದೆ. ಜನರ ಖರೀದಿ ಶಕ್ತಿ ಹೆಚ್ಚಿದೆ. ಹೌದ? ಎನ್ನುವ ಪ್ರಶ್ನೆ ಈಗ ನಿಮ್ಮದು. ಅಮೇರಿಕಾ ಬಹಿಷ್ಕಾರ ಸಡಿಲಿಸಿತಾ? ಎನ್ನುವ ಇನ್ನೊಂದು ಪ್ರಶ್ನೆಯೂ ನಿಮ್ಮಿಂದ ಬರಬಹುದು. ನಾರ್ತ್ ಕೊರಿಯಾ ಎಕಾನಮಿ ಅಭಿವೃದ್ಧಿ ಕಾಣುತ್ತಿರುವುದು ಸತ್ಯ ಅಮೇರಿಕಾ ಸ್ಯಾಂಕ್ಷನ್ ಸಡಿಲಿಸದೆ ಇರುವುದು ಕೂಡ ಸತ್ಯ. ಹಾಗಾದರೆ ನಾರ್ತ್ ಕೊರಿಯಾ ಹಣವನ್ನ ಹೇಗೆ ಸಂಪಾದಿಸುತ್ತದೆ ಎನ್ನುವುದನ್ನ ನೋಡೋಣ. 
ಗಣಿಗಾರಿಕೆ ಮತ್ತು ಕಲ್ಲಿದ್ದಲು: ನಾರ್ತ್ ಕೊರಿಯಾ ದೇಶ ಕಲ್ಲಿದ್ದಲ್ಲನ್ನ ಮಾರಿ ಹಣ ಸಂಪಾದಿಸುತ್ತದೆ. ಚೀನಾ ನಾರ್ತ್ ಕೊರಿಯಾ ದೇಶದ ಅತ್ಯಂತ ದೊಡ್ಡ ಟ್ರೇಡ್ ಪಾರ್ಟ್ನರ್. ಹಲವು ಖರೀದಿಗಳು ಪುಸ್ತಕದಲ್ಲಿ ದಾಖಲಾಗುವುದಿಲ್ಲ. ಆದರೇನು ನಾರ್ತ್ ಕೊರಿಯಾ ದೇಶದ ಬಂಡಿ ಸಾಗಲು ಬೇಕಾಗುವ ಹಣವನ್ನ ಚೀನಾ ಸುರಿಯುತ್ತದೆ. 
ನಕಲಿ ಹಣವನ್ನ ಮುದ್ರಿಸುತ್ತದೆ: ನಾರ್ತ್ ಕೊರಿಯಾ ದೇಶದಲ್ಲಿ ಕಪ್ಪು ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವುದು ಅಮೆರಿಕಾದ ಡಾಲರ್! ನಂಬಲು ಅಸಾಧ್ಯ ಎನಿಸುತ್ತದೆ ಆದರೆ ಇದು ಸತ್ಯ. ಇಲ್ಲಿನ ಸಾಮಾನ್ಯ ಪ್ರಜೆ ತನ್ನ ದೈನಂದಿನ ವ್ಯವಹಾರಕ್ಕೆ ಬಳಸುವುದು ಡಾಲರ್ನನ್ನ ಬಳಸುತ್ತಾನೆ. ಅಮೇರಿಕನ್ ನಕಲಿ ಡಾಲರ್ ನನ್ನ ಮುದ್ರಿಸಿ ಅಮೇರಿಕಾ ದೇಶದಲ್ಲಿ ಚಲಾವಣೆಗೆ ಬಿಡುವ ಒಂದು ಸಂಘಟಿತ ಸಂಸ್ಥೆಗಳೇ ಇಲ್ಲಿವೆ. ಇಷ್ಟೇ ಏಕೆ, ತನ್ನ ದೊಡ್ಡ ಟ್ರೇಡ್ ಪಾರ್ಟ್ನರ್ ಚೀನಾ ದೇಶದ ಕರೆನ್ಸಿಯನ್ನ ಕೂಡ ನಕಲು ಮಾಡುವುದರಲ್ಲಿ ನಾರ್ತ್ ಕೊರಿಯಾ ಸಿದ್ದ ಹಸ್ತ. 
ಸೈಬರ್ ಕ್ರೈಂ:  ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್ನಿಂದ 81 ಮಿಲಿಯನ್ ಅಮೆರಿಕನ್ ಡಾಲರ್ ಹಣ ನಾಪತ್ತೆಯಾಗಿದ್ದು ಇಂದಿಗೆ ಇತಿಹಾಸ. ಇದನ್ನ ಮಾಡಿದವರು ನಾರ್ತ್ ಕೊರಿಯಾ ಹ್ಯಾಕರ್ಸ್ ಎನ್ನುವುದು ಇಂದಿಗೆ ಎಲ್ಲರಿಗೂ ತಿಳಿದಿರುವ ಸತ್ಯ. ಹೀಗೆ ಸೋನಿ ಕಂಪನಿಯ ಮೇಲೂ ದಾಳಿ ನೆಡೆಸಿತ್ತು. ನಾರ್ತ್ ಕೊರಿಯಾದ ಹ್ಯಾಕರ್ಸ್ ಸದಾ ವ್ಯವಸ್ಥೆಯಲ್ಲಿನ ಲೋಪದೋಷಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ. ಮುಂದಿನ ಭೇಟೆಗೆ ಅವರು ಸದಾ ಸಿದ್ದರು. ಇತ್ತೀಚಿಗೆ ಅತಿ ಹೆಚ್ಚು ಸದ್ದು ಮಾಡುತ್ತಿರುವ ಬಿಟ್ ಕಾಯಿನ್ ಮೇಲೆ ಇವರ ಕಣ್ಣು ಬಿದ್ದಿದೆ ಎನ್ನುವುದು ಸುದ್ದಿ. 
ಮಿತ್ರ ರಾಷ್ಟ್ರಗಳಿಗೆ ತನ್ನ ಜನರ ವಿಲೇವಾರಿ ಮಾಡುವ ವ್ಯವಹಾರ: ನಿಮಗೆ ಆಶ್ಚರ್ಯ ಹುಟ್ಟಿಸುವ ವಿಷಯಗಳಿವೆ, ಆಫ್ರಿಕಾ ಖಂಡದ ಹಲವು ದೇಶಗಳ ಮಿಲಟರಿಗೆ ಮತ್ತು ಪ್ರೆಸಿಡೆಂಟ್ ಗಳ ಅಂಗರಕ್ಷಕರಿಗೆ ಮಾರ್ಷಲ್ ಆರ್ಟ್ ಕಲಿಸುವುದು ಇದೆ ನಾರ್ತ್ ಕೊರಿಯಾ. ಇವುಗಳಲ್ಲಿ ಅಂಗೋಲ ಪ್ರಮುಖವಾದುದು. ಅಂತೆಯೇ ಚೀನಾ ದೇಶದಲ್ಲಿ ಕೆಲಸ ಮಾಡುತ್ತಿರುವ ನಾರ್ತ್ ಕೊರಿಯಾ ಕೆಲಸಗಾರರ ಸಂಖ್ಯೆಯೂ ಬಹಳವಿದೆ. ನಾರ್ತ್ ಕೊರಿಯಾ ಸರಕಾರ ತನ್ನ ಪ್ರಜೆಗಳನ್ನ ಗುಲಾಮರಂತೆ ಕೆಲಸ ಮಾಡಲು ಇಷ್ಟು ವರ್ಷಕ್ಕೆ ಅಂತ ಗುತ್ತಿಗೆ ನೀಡುತ್ತದೆ. ಚೀನಾ ಮಾತ್ರವಲ್ಲದೆ ರಿಪಬ್ಲಿಕ್ ಆಫ್ ಕಾಂಗೊ ಎನ್ನುವ ದೇಶದಲ್ಲೂ ನಾರ್ತ್ ಕೊರಿಯಾ ಪ್ರಜೆಗಳು ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಕುವೈತ್ ದೇಶದ ಕಟ್ಟಡ ಕಾಮಗಾರಿ ಕೆಲಸಕ್ಕೆ ಬೇಕಾಗುವ ಕೆಲಸಗಾರರ ವ್ಯವಸ್ಥೆ ಕೂಡ ನಾರ್ತ್ ಕೊರಿಯಾ ಮಾಡಿದೆ. ಓಮನ್, ಕತಾರ್ ದೇಶಗಳು ಕೂಡ ನಾರ್ತ್ ಕೊರಿಯಾ ಇಂದ ಜನರನ್ನ ಕೆಲಸಕ್ಕೆ ಆಮದು ಮಾಡಿಕೊಂಡಿವೆ. ಬದಲಿಗೆ ನಾರ್ತ್ ಕೊರಿಯಾ ದೇಶಕ್ಕೆ ದೊಡ್ಡ ಗಂಟು ಸಂದಾಯವಾಗುತ್ತದೆ. 
ಶಸ್ತ್ರಾಸ್ತ್ರ ಮಾರಾಟ: ಹಲವು ಆಫ್ರಿಕನ್ ದೇಶಗಳು ನಾರ್ತ್ ಕೊರಿಯಾದಿಂದ ಮದ್ದು ಗುಂಡುಗಳನ್ನ ಖರೀದಿ ಮಾಡುತ್ತಿವೆ. ಹೊರ ಜಗತ್ತಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವುದರಿಂದ ಈ ದೇಶಗಳು ನಾರ್ತ್ ಕೊರಿಯಾ ಬಳಿ ಕೊಳ್ಳುತ್ತಿವೆ. ಜೊತೆಗೆ ಆಂತರಿಕ ಕಲಹದಲ್ಲಿ ಆಗುವ ಸಾವು ನೋವುಗಳನ್ನ ಆರೈಕೆ ಮಾಡುವುದಕ್ಕೆ ಎಂದು ನಾರ್ತ್ ಕೊರಿಯಾ ತನ್ನ ವೈದ್ಯರನ್ನ ಪ್ಯಾಕೇಜ್ ಡೀಲ್ ಮೂಲಕ ಇಷ್ಟು ವರ್ಷಕ್ಕೆ ಎಂದು ಆಫ್ರಿಕನ್ ದೇಶಗಳಿಗೆ ಗುತ್ತಿಗೆ ನೀಡುತ್ತಿದೆ. 
ಮಾದಕ ವಸ್ತುಗಳ ಮಾರಾಟ: ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಲಾಭ ತಂದುಕೊಡುತ್ತಿರುವ ಕೆಲವೇ ಕೆಲವು ಉದ್ದಿಮೆಗಳಲ್ಲಿ ಮಾದಕ ವಸ್ತುಗಳ ಮಾರಾಟ ಕೂಡ ಒಂದು. ನಾರ್ತ್ ಕೊರಿಯಾ ತನ್ನ ದೇಶದಲ್ಲಿ ಇಂತಹ ಮಾದಕ ವಸ್ತುಗಳ ಬೆಳೆಯನ್ನ ಬೆಳೆಯುತ್ತಿದೆ. ಸರಕಾರ ಅನುಮತಿ ಇದ್ದ ಮೇಲೆ ಯಾವುದರ ಭಯ? 
ನಾರ್ತ್ ಕೊರಿಯಾದಿಂದ ಕೆಲಸಕ್ಕೆ ಎಂದು ಅಲ್ಲಿನ ಪ್ರಜೆಗಳನ್ನ ಗುತ್ತಿಗೆ ಆಧಾರದ  ಮೇಲೆ ಕೊಂಡ ದೇಶಗಳ ಪಟ್ಟಿ ಮಾಡುತ್ತಾ ಹೋದರೆ ಅದೊಂದು ದೊಡ್ಡ ಪಟ್ಟಿಯಾಗುತ್ತದೆ. ಹಣವೆಂಬುದು ಇಂದಿನ ಜೀವನಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾದದ್ದು ಅದು ಸರಿಯಾದ ಮಾರ್ಗದಲ್ಲಿ ಬಂದರೆ ಸರಿ ಇಲ್ಲದಿದ್ದರೆ ಹೇಗಾದರೂ ಸರಿ ಅದನ್ನ ಪಡೆದೆ ತಿರುತ್ತೇವೆ ಎನ್ನುವ ಮನೋಭಾವ ಸರಕಾರಕ್ಕೆ ಬಂದರೆ ಗತಿಯೇನು? ಇಂದು ನಾರ್ತ್ ಕೊರಿಯಾ ದೇಶದಲ್ಲಿ ಇದು ಕಾನೂನು ಬಾಹಿರ ಎನ್ನುವ ಯಾವ ಉದ್ದಿಮೆಯೂ ಇಲ್ಲ. ಸರಕಾರ ಬೊಕ್ಕಸಕ್ಕೆ ಹಣ ಬರುವ ಯಾವುದೇ ಕೆಲಸವಿರಲಿ ಅದಕ್ಕೆ ತಕ್ಷಣ ಸರಕಾರದ ಅಧಿಕೃತ ಮುದ್ರೆ ಬೀಳುತ್ತದೆ. ನಮಗೆಲ್ಲಾ ಅಲ್ಲಿ ಪ್ರಜೆಗಳಿಗೆ ತನ್ನ ಸರಕಾರ ವಿರುದ್ಧ ಮಾತನಾಡುವ ಹಕ್ಕಿಲ್ಲ ಮತ್ತು ಆ ದೇಶ ಸರ್ವಾಧಿಕಾರಿಯ ಹಿಡಿತದಲ್ಲಿದೆ ಎನ್ನುವುದು ಮಾತ್ರ ಗೊತ್ತು. ಆದರೆ ಅಲ್ಲಿನ ವಸ್ತುಸ್ಥಿತಿ ನಾವಂದುಕೊಂಡಿರುವದಕ್ಕಿಂತ ಬಹಳ ಕೆಟ್ಟದಾಗಿದೆ.  ಮನಷ್ಯರ ಮಾರಾಟ ದೇಶದ ಒಳಗೆ ಮತ್ತು ಹೊರಗೆ ಎಗ್ಗಿಲ್ಲದೆ ನೆಡೆಯುತ್ತಿದೆ. ಹೆಸರಿಗೆ ಮಾತ್ರ ನಿಬಂಧನೆ, ಸ್ಯಾಂಕ್ಷನ್.. ಎಲ್ಲರ ಕಣ್ಣಿಗೂ ಕಾಣುವಂತೆ ನೆಡೆಯುತ್ತಿರುವ ಈ ಕರಾಳ ದಂಧೆಗೆ ಮಾತ್ರ ಯಾರೂ ಚಕಾರ ಎತ್ತುವುದಿಲ್ಲ. ಏಕೆಂದೆರೆ ಬೃಹತ್ ರಾಷ್ಟ್ರಗಳಾದ ರಷ್ಯಾ, ಚೀನಾ ಜೊತೆಗೆ ಯುನೈಟೆಡ್ ಅರಬ್ ಒಕ್ಕೊಟ, ಆಫ್ರಿಕನ್ ದೇಶಗಳು ಎಲ್ಲರೂ ಕಡಿಮೆ ಬೆಲೆಗೆ ಸಿಕ್ಕ ನಾರ್ತ್ ಕೊರಿಯನ್ ಕಾರ್ಮಿಕರ ರಕ್ತ ಹೀರುವುದರಲ್ಲಿ ನಿರತರು. ಅವರದು ಕೂಡ ಹಣದ ಲೆಕ್ಕಾಚಾರ ಅಷ್ಟೇ. ನಮಗೆ ಲಾಭ ನಾವು ಮಾಡುತ್ತೇವೆ ಎನ್ನುವ ಮನೋಭಾವ. 
ನಾರ್ತ್ ಕೊರಿಯಾ ಕಳೆದ 17 ವರ್ಷಕ್ಕಿಂತ ವೇಗವಾಗಿ ಬೆಳೆಯುತ್ತಿದೆಯಂತೆ ಹಾಗಂತ ಅಂಕಿ-ಅಂಶ ಹೇಳುತ್ತೆ. ನಾನು ಪ್ರಾರಂಭದಲ್ಲಿ ಮತ್ತು ಈಗಲೂ ಅಂಕಿ ಸಂಖ್ಯೆಯನ್ನ ನಮೂದಿಸುವದಿಲ್ಲ ಲಕ್ಷಾಂತರ ಜನರ ಬೆವರು ಮತ್ತು ರಕ್ತದಿಂದ ತಯಾರಾದ ಆ ಅಂಕಿಅಂಶ ಕೇವಲ ಸಂಖ್ಯೆಯಷ್ಟೇ. ಹೀಗೆ ಸಂಗ್ರಹವಾದ ಹಣ ಕಂಪ್ಯೂಟರ್ ಪರದೆ  ಮೇಲಿನ ಸಂಖ್ಯೆಯಾಗಿ ಉಳಿಯುತ್ತದೆ. ಅದನ್ನ ನೀವು ಒಮ್ಮೆಲೇ ಬಳಸುವಿರೇನು? ಹೀಗೆ ತಯಾರಾದ ಬ್ಲಡ್ ಮನಿ ಮಾತ್ರ ಯಾರ ಕಣ್ಣಿಗೂ ಕೆಟ್ಟದಾಗಿ ಕಾಣುವುದಿಲ್ಲ. ಅಮೆರಿಕಾದ ದಿಗ್ಬಂಧನದ ನಡುವೆಯೂ ಗುಡುಗುವ ನಾರ್ತ್ ಕೊರಿಯಾ ಹಲವರ ಕಣ್ಣಿಗೆ ಹೀರೋ ಆಗಿ ಕಂಡರೂ ಆಶ್ಚರ್ಯವಿಲ್ಲ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com