ಹಣವನ್ನ(ನಗದು) ಹೆಣವಾಗಿಸಲು ನೆಡೆದಿದೆ ಹುನ್ನಾರ!

ವ್ಯವಹಾರವನ್ನ ಡಿಜಿಟಲ್ ಮೂಲಕ ಮಾಡಿ... ನೀವು ಕೊಂಡದ್ದು ಕಾಚ ಅಥವಾ ಕರ್ಚಿಫು.. ಅದು 'ಮೂರನೆಯವರಿಗೆ' ತಿಳಿಯುತ್ತೆ. ಅದು ದಾಖಲಾಗುತ್ತೆ. ಈ ಜಗತ್ತಿನಲ್ಲಿ ನಿಮ್ಮದು ಅನ್ನುವ ಸ್ವಂತದ್ದು ಏನೂ...
ನಗದು- ಡಿಜಿಟಲ್ ವಹಿವಾಟು
ನಗದು- ಡಿಜಿಟಲ್ ವಹಿವಾಟು
ಡಿಜಿಟಲ್ ಕರೆನ್ಸಿ ಅಬ್ಬರ ಎಷ್ಟಿದೆ ಎನ್ನುವುದನ್ನ ನಾನಿಲ್ಲಿ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ ಎಂದು ಕೊಳ್ಳುತ್ತೇನೆ. ಹಣ ಅಥವಾ ಕ್ಯಾಶ್ ಅನ್ನು ಮುಗಿಸಲು ಯಾರು ಮತ್ತು ಯಾಕೆ ನಕ್ಷೆ ತಯಾರಿಸಿದ್ದಾರೆ ಗೊತ್ತೇ? ನಿಮ್ಮ ಬಳಿ ನೂರು ರೂಪಾಯಿ ನೋಟಿದೆ ಎಂದುಕೊಳ್ಳಿ ಅದನ್ನ ಕೊಟ್ಟು ನಿಮಗೆ ಬೇಕಾದ ವಸ್ತು ಅಥವಾ ಸೇವೆಯನ್ನ ಪಡೆಯುತ್ತೀರಿ. ಇಲ್ಲಿ ವ್ಯವಹಾರ ಕೊಳ್ಳುವರ ಮತ್ತು ಮಾರುವವರ ಮಧ್ಯೆ ನೆಡೆಯಿತು. ಬೆಲೆ ಎಷ್ಟು, ಡಿಸ್ಕೌಂಟ್ ಎಷ್ಟು., ನೀವು ಯಾವ ವಸ್ತು ಕೊಂಡಿರಿ? ಕೊಂಡ ಉದ್ದೇಶ? ನಿಮ್ಮ ಫೋನ್ ನಂಬರ್, ನಿಮ್ಮ ಕಾರ್ಡ್ ನಂಬರ್.., ನೀವು ವ್ಯವಹರಿಸುವ ಬ್ಯಾಂಕ್ ಯಾವುದು/ ಹೀಗೆ ಇನ್ನು ಹಲವು ಹತ್ತು 'ನಿಮ್ಮ ಸ್ವಂತದ್ದು' ಮೂರನೆಯವರಿಗೆ ತಿಳಿಯುವುದೇ ಇಲ್ಲ. 
ಈಗ ಅದೇ ವ್ಯವಹಾರವನ್ನ ಡಿಜಿಟಲ್ ಮೂಲಕ ಮಾಡಿ.... ನೀವು ಕೊಂಡದ್ದು ಕಾಚ ಅಥವಾ ಕರ್ಚಿಫು.. ಅದು 'ಮೂರನೆಯವರಿಗೆ' ತಿಳಿಯುತ್ತೆ. ಅದು ದಾಖಲಾಗುತ್ತೆ. ಈ ಜಗತ್ತಿನಲ್ಲಿ ನಿಮ್ಮದು ಅನ್ನುವ ಸ್ವಂತದ್ದು ಏನೂ ಇಲ್ಲ! ಎಲ್ಲಾ ಮಾಹಿತಿ ಇವತ್ತು ರಾಜಾರೋಷವಾಗಿ ಮೂರನೆಯವರ ಕೈ ಸೇರಿದೆ. ನಿಮಗೆ ಗೊತ್ತಿಲ್ಲದೆ ನಿಮ್ಮನ್ನ 'ಕರೆನ್ಸಿ'ಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ!! ಇದು ಭಾರತದಲ್ಲಿ ಮಾತ್ರ ಎಂದೋ ಅಥವಾ ಮೋದಿ ಸರಕಾರ ಬಂದ ಮೇಲೆ ಹೀಗಾಯಿತು ಹೀಯಾಳಿಸುವ ಮುನ್ನ ಇದೊಂದು ಜಾಗತಿಕ ಸಮಸ್ಯೆ ಎನ್ನುವುದನ್ನ ಹೇಳಲು ಬಯಸುತ್ತೇನೆ. ಇಂದಿನ ಲೇಖನದಲ್ಲಿ ಹಣ ಅಥವಾ ಕ್ಯಾಶ್ ಅನ್ನು ನಿರ್ಮೂಲನ ಮಾಡಲು ಏಕೆ ಅವರು ಉತ್ಸುಕರಾಗಿದ್ದಾರೆ? ಎನ್ನುವುದರ ಬಗ್ಗೆ ತಿಳಿಯೋಣ ಅದರ ಜೊತೆಗೆ ನಮ್ಮನ್ನ ಕೂಡ ಅವರು ಕರೆನ್ಸಿಯಾಗಿ ಬಳಸಿಕೊಳ್ಳುತ್ತಿದ್ದಾರೆ! ಹೇಗೆ ಅನ್ನುವ ವಿಷಯವನ್ನ ಕೂಡ ಸ್ವಲ್ಪ ತಿಳಿದುಕೊಳ್ಳೋಣ. 
ವೈ ದೇ ವಾಂಟ್ ಟು ಕಿಲ್ ದ ಕ್ಯಾಶ್? ಅವರು ಹಣವನ್ನ ಏಕೆ ಕೊಲ್ಲಲು ಬಯಸಿದ್ದಾರೆ? 
ಮೊದಲಿನ ಪ್ಯಾರಾದಲ್ಲಿ ಮತ್ತು ಈ ಸಾಲಿನ ಮೇಲಿನ ಸಾಲಿನಲ್ಲಿ 'ದೇ 'ಅಥವಾ 'ಅವರು' ಎಂದು ಮತ್ತು 'ಮೂರನೆಯವರಿಗೆ' ಎನ್ನುವ ಪದಗಳ ಪ್ರಯೋಗವಾಗಿದೆ. ಈ ಅವರು ಯಾರು? ಎನ್ನುವುದನ್ನ ತಿಳಿದುಕೊಳ್ಳೋಣ. ಇಷ್ಟು ದಿನ ನಿಮ್ಮ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದದು ಯಾರು? ಬ್ಯಾಂಕ್ ಅಥವಾ ಬ್ಯಾಂಕರ್ಗಳು ಅಲ್ವಾ? ಈಗ ಅದು ಅವರ ಕೈಯಿಂದ ನಿಧಾನವಾಗಿ ಜಾರಿ 'ಟೆಕ್' ಕಂಪನಿಗಳ ಕೈ ಸೇರುತ್ತಿದೆ. ಆಪ್, ವೆಬ್ ಅಪ್ಲಿಕೇಶನ್ಗಳ ಮೂಲಕ ನಿಮ್ಮ ವಹಿವಾಟಿನ ಮೇಲಿನ ಹಿಡಿತ ಇಂದು ತಂತ್ರಜ್ಞಾನ ಕಂಪನಿಗಳ ಕೈಲಿದೆ. ಹಿಂದಿನಿಂದಲೂ ಅಧಿಕಾರ ಮತ್ತು ಹಣದ ಮೇಲಿನ ಹಿಡಿತದಿಂದ ಏನೆಲ್ಲಾ ಮಾಡಬಹದು ಎನ್ನುವ ಅರಿವು ಇದ್ದ ಜನ ನಿಧಾನವಾಗಿ ತಂತ್ರಜ್ಞಾನದ ಮೂಲಕ ಹೇಗೆ ಹಣ ಮತ್ತು ಅಧಿಕಾರದ ಮೇಲೆ ಹಿಡಿತ ಸಾಧಿಸಬಹದು ಎನ್ನುವುದರ ರುಚಿ ಕಂಡುಕೊಂಡಿದ್ದಾರೆ. ಹೀಗಾಗಿ ತಂತ್ರಜ್ಞಾನದ ಕಂಪನಿಗಳ ಮೇಲೆ ಹಿಡಿತ ಹೊಂದಿರುವ ಬೆರಳೆಣಿಕೆಯಷ್ಟು ಜನ ನಗದು ರೂಪದ ಹಣವನ್ನ ಕೊಲ್ಲಲು ಬಯಸಿದ್ದಾರೆ. ನಗದು ರೂಪದಲ್ಲಿರುವ ಹಣವನ್ನ ನಿರ್ಮೂಲನ ಮಾಡಲು ಇರುವ ಪ್ರಮುಖ ಕಾರಣಗಳು ಹೀಗಿವೆ. 
1. ಹಣದ ಮೂಲಕ ನೆಡೆದ ವಹಿವಾಟಿನಲ್ಲಿ ನಿಮ್ಮ ಬಗ್ಗೆ ಯಾವ ಮಾಹಿತಿ 'ಅವರಿಗೆ' ತಿಳಿಯುವುದಿಲ್ಲ. ನಿಮ್ಮ ಬಗ್ಗೆಯ ಮಾಹಿತಿ ತಿಳಿದುಕೊಂಡರೆ ಅವರು ನಿಮ್ಮನ್ನ ಕೂಡ ಹಣದಂತೆ ಬಳಸಿಕೊಳ್ಳಲು ಸಾಧ್ಯ. ಅದು ಹೇಗೆ ಎನ್ನುವುದನ್ನ ಮುಂದೆ ನೋಡೋಣ. 
2. ನಗದು ಹಣದ ಮೂಲಕ ನೆಡೆದ ವ್ಯವಹಾರದಲ್ಲಿ ಮೂರನೆಯವರು ಲಾಭ ಮಾಡಲು ಸಾಧ್ಯವಿಲ್ಲ. ಇಲ್ಲಿ ಕೂಡುಕೊಳ್ಳುವಿಕೆಯಲ್ಲಿ ಇರುವವರು ಇಬ್ಬರು. ಡಿಜಿಟಲ್ ವ್ಯವಹಾರವನ್ನ ಮೂರನೆಯವರ ಸಹಾಯವಿಲ್ಲದೆ ಮುಗಿಸಲು ಬಾರದು. ಹೀಗೆ ಅವರು ನೀಡುವ ಸೇವೆಗೆ ಒಂದಷ್ಟು ಹಣವನ್ನ ನಮ್ಮಿಂದ ಪೀಕುತ್ತವೆ. 
3. ಇಂದು ಜಗತ್ತಿನ ವಹಿವಾಟಿನ ಮೇಲೆ ನಿಯಂತ್ರಣ ಹೊಂದಿದವರು ಮಾತ್ರ ರಾಜ್ಯಭಾರ ಮಾಡಬಲ್ಲರು. ಹಣದ ವಹಿವಾಟಿನಲ್ಲಿ ಅತಿ ಸಾಮಾನ್ಯ ಮನುಷ್ಯನಿಗೆ ನಿಯಂತ್ರಣವಿರುತ್ತದೆ. ಡಿಜಿಟಲ್ ವ್ಯವಹಾರದಲ್ಲಿ ಆತನೊಬ್ಬ ನಿರಕ್ಷರಕುಕ್ಷಿ. ಹೀಗಾಗಿ ಆತನ ನಿಯಂತ್ರಣ ಮತ್ತಷ್ಟು ಸುಲಭವಾಗುತ್ತದೆ. ಜಗತ್ತಿನ ಜನಸಂಖ್ಯೆಯ ಅತಿ ಹೆಚ್ಚು ಭಾಗವನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಬಿಟ್ಟರೆ ಉಳಿದ ಜನರ ಅನಿಸಿಕೆ 'ಅವರಿಗೆ' ಮುಖ್ಯವಾಗುವುದೇ ಇಲ್ಲ. 
4. ಡಿಜಿಟಲ್ ಕರೆನ್ಸಿಯಲ್ಲೂ ಮುಂಬರುವ ದಿನಗಳಲ್ಲಿ ಬಿಟ್ ಕಾಯಿನ್ ತರಹದ ಹಣ ಪ್ರತಿ ದೇಶದಲ್ಲೂ ಬೇರೆ ಬೇರೆ ಹೆಸರಲ್ಲಿ ಬರುವ ಸಾಧ್ಯತೆಯಿದೆ. ಇವುಗಳ ಸೃಷ್ಟಿ ಗಣಿತದ ಆಲ್ಗರಿದಮ್ ಸೂತ್ರವನ್ನ ಅನುಸರಿಸಿ ಕಂಪ್ಯೂಟರ್ ಕೋಡ್ ಗಳ ಮೂಲಕ ಸೃಷ್ಟಿಸಲಾಗುತ್ತದೆ. ಇದು ಯಾರು ಬೇಕಾದರೂ ನೋಡಬಹದು ಅದರ ನಿಖರತೆಯನ್ನ ಪರೀಕ್ಷಿಸಬಹದು ಎನ್ನುತ್ತಾರೆ ನಿಜ. ತನ್ನ ಬಳಿ ಇದ್ದ ನೋಟನ್ನ ಕೊಟ್ಟು ಬೇಕಾದ್ದ ಕೊಂಡು ವ್ಯಾಪಾರ ಮುಗಿಸುತಿದ್ದ ಜನ ಸಾಮಾನ್ಯ ಕಂಪ್ಯೂಟರ್ ಕೋಡ್ ಪರೀಕ್ಷಿಸುವ ಮಟ್ಟಕ್ಕೆ ಹೇಗೆ ಬೆಳೆದಾನು?  ಅರ್ಥ ಇಷ್ಟೇ ತನ್ನ ಅರಿವಿಗೆ ನಿಲಕದ ವಿಷಯದ ಬಗ್ಗೆ ಅವನಲ್ಲಿ ಅವ್ಯಕ್ತ ಭಯ ಉತ್ಪನ್ನವಾಗುತ್ತದೆ. ಭಯಗೊಂಡ ಜನರನ್ನ ನಿಯಂತ್ರದಲ್ಲಿಡುವುದು ಸುಲಭ. 
5. ರಾಜಕೀಯ ನಿಯಂತ್ರಣ ಸಾಧಿಸಲು ಕೂಡ ಡಿಜಿಟಲ್ ವ್ಯವಹಾರ ಸಹಾಯ ಮಾಡಲಿದೆ. ನೀವು ಕೇಳಬಹದು ನಗದು ರೂಪದ ಹಣ ನಿರ್ಮೂಲನೆಯಾದರೆ ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆ. ರಾಜಕೀಯ ಪಕ್ಷಗಳ ಹುಚ್ಚಾಟಕ್ಕೆ ಕಡಿವಾಣ ಬೀಳುತ್ತದೆ ಎಂದು. ಭ್ರಷ್ಟಾಚಾರ ಒಂದು ಮಾನಸಿಕ ಸ್ಥಿತಿ ಕೇವಲ ನಗದು ಹಣವನ್ನ ನಿರ್ಮೂಲನೆ ಮಾಡುವುದರಿಂದ ಭ್ರಷ್ಟಾಚಾರ ಎಂದಿಗೂ ಕಡಿಮೆಯಾಗುವುದಿಲ್ಲ. ಜಗತ್ತಿನಲ್ಲಿ ಕೆಲವು ದೇಶಗಳಲನ್ನ ಟ್ಯಾಕ್ಸ್ ಹೆವನ್ ಮಾಡಲಾಗಿದೆ. ಎಲ್ಲಿಂದ ಬಂತು ಹೇಗೆ ಬಂತು ಎಂದು ಪ್ರಶ್ನಿಸದೇ ಖಾತೆಗೆ ಹಣ ಹಾಕಿಸಿಕೊಳ್ಳುವ ದೇಶಗಳಿವು. ಡಿಜಿಟಲ್ ಕರೆನ್ಸಿ ಮೂಲಕ ಅದರಲ್ಲೂ ಬಿಟ್ ಕಾಯಿನ್ ತರಹದ ಹಣದ ಮೂಲಕ ಕ್ಷಣಾರ್ಧದಲ್ಲಿ ಜಗತ್ತಿನ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಣದ ವರ್ಗಾವಣೆ ಮಾಡಬಹದು. 
ಜಗತ್ತಿನ ಜನರ ಮೇಲೆ ಹೆಚ್ಚು ನಿಯಂತ್ರಣ ಪಡೆಯುವುದು ಆ ಮೂಲಕ ಹಣ ಮತ್ತು ವ್ಯಾಪಾರ ಮತ್ತು ವಹಿವಾಟಿನ ಮೇಲೆ ಹಿಡಿತ ಸಾಧಿಸುವುದು ಇವರ ಪ್ರಮುಖ ಉದ್ದೇಶ . ಭೌತಿಕ ಹಣವನ್ನ ನಿರ್ಮೂಲನೆ ಮಾಡದೆ ಪೂರ್ಣ ಹಿಡಿತ ಸಾಧ್ಯವಿಲ್ಲ ಹೀಗಾಗಿ ಇವರು ಹಣವನ್ನ ಕೊಲ್ಲಲು ಬಯಸಿದ್ದಾರೆ. 
ಯು ಆರ್ ದ ನ್ಯೂ ಕರೆನ್ಸಿ. ನೀವು ಹೊಸ ಹಣ 
ಮೊದಲೇ ಹೇಳಿದಂತೆ ನಗದು ಹಣದ ಮೂಲಕ ನಡೆದ ವಹಿವಾಟಿನಲ್ಲಿ ಮೂರನೆಯವರು ಸಂಪಾದನೆ ಮಾಡಲು ಸಾಧ್ಯವಿರಲಿಲ್ಲ. ಡಿಜಿಟಲ್ ಪೇಮೆಂಟ್ ಮೂಲಕ ಮೂರನೆಯವರು ಹಣ ಮಾಡಲು ಸಾಧ್ಯ . ಹಣ ಅವರಿಗೆ ನಿಜವಾದ ಹಣವಲ್ಲ ವಹಿವಾಟು ನೆಡೆಸುವ ನೀವು ಅವರ ಪಾಲಿನ ನಿಜವಾದ ಹಣ. ಫೇಸ್ಬುಕ್ ಅಮೆಜಾನ್ ಗೂಗಲ್  ನಂತಹ ದೈತ್ಯ ಕಂಪನಿಗಳು ನಿಮ್ಮ ಆನ್ಲೈನ್ ಚಟುವಟಿಕೆ ಮೇಲೆ ತೀವ್ರ ನಿಗಾ ಇಟ್ಟಿವೆ. ನೀವೊಂದು ಹೊಸ ಫೋನ್ ಕೊಂಡರೆ ಸಾಕು ಆ ಫೋನ್ ಗೆ ಸಂಬಂಧಪಟ್ಟ ಇತರ ಉತ್ಪನ್ನಗಳ ಬಗ್ಗೆ ಜಾಹಿರಾತು ಕಾಣಿಸಿಕೊಳ್ಳಲು ಶುರುವಾಗುತ್ತದೆ. ನೀವು ಹೊಸ ಫೋನ್ ಮೂಲಕ ಫೇಸ್ಬುಕ್ ಅಥವಾ ಅಮೆಜಾನ್ ಆಪ್ ಗೆ ಭೇಟಿ ಇತ್ತರೆ ಸಾಕು! ಉಳಿದದ್ದು ಅವು ಮಾಡುತ್ತವೆ. ಇದು ಸರಿ, ನಾವು ಹೇಗೆ ಅವರಿಗೆ ಹೊಸ ಹಣ ಎಂದಿರಾ? ಇಲ್ಲೇ ಇರುವುದು ಮಜಾ. ಜಗತ್ತಿನ ಎಲ್ಲಾ ಇಂಟರ್ನೆಟ್ ಬಳಸುವ ಜನರ ಚಟುವಟಿಕೆಯನ್ನ ಅವರ ಇಷ್ಟ ಅನಿಷ್ಟಗಳನ್ನ ಇಂತಹ ಕಂಪನಿಗಳು ಸಂಗ್ರಹಿಸುತ್ತಾ ಹೋಗುತ್ತಾರೆ. ಇಂತಹ ಕೆಲಸಕ್ಕೆ ಅವರಿಟ್ಟ ಹೆಸರು ಬಿಗ್ ಡೇಟಾ. ಹೀಗೆ ಸಂಗ್ರಹಿಸಿದ ಡೇಟವನ್ನ ಯಾರು ಹಣ ನೀಡುತ್ತಾರೋ ಅವರಿಗೆ ಮಾರಿ ಬಿಡುತ್ತಾರೆ. ಹೀಗೆ ನಮ್ಮಿಂದ ಅವರು  ಕೋಟ್ಯಧಿಪತಿಗಳಾಗುತ್ತಾರೆ. ಅವರ ಕಣ್ಣಿಗೆ ನಾವೇ ಹಣ. ಇಂತಹ ಕಂಪನಿಗಳು ಡೇಟವನ್ನು ಮಾರುತ್ತವೆ ಕೊಂಡವರು ಅದನ್ನ ವಿಂಗಡಿಸಿ ಮತ್ತೆ ಅದನ್ನ ಉಪಯೋಗಿಸಿಕೊಂಡು ಹೇಗೆ ಹಣ ಮಾಡುವುದು ಎನ್ನುದಕ್ಕೆ ಹೊಂಚುಹಾಕುತ್ತಾರೆ. 
ಈ ರೀತಿಯ ಡೇಟಾ ಕಲೆಕ್ಷನ್ ಅದರ ಮಾರಾಟ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದವರಿಗೆ ಇದೆಷ್ಟು ದೊಡ್ಡ ಆಟ ಇದೆಷ್ಟು ಮುಖ್ಯ ಎನ್ನುದಕ್ಕೆ ಇತ್ತೀಚಿನ ಎರಡು ಉದಾಹರಣೆ ನೀಡುತ್ತೇನೆ. ನಿಮಗೆಲ್ಲಾ ಬ್ರೆಕ್ಸಿಟ್ ತಿಳಿದ ವಿಷಯವೇ ಆಗಿದೆ. ಆದರೆ ನಿಮಗೆ ಗೊತ್ತೇ ಬ್ರೆಕ್ಸಿಟ್ ಚುನಾವಣೆಗೆ ಜನರ ಭಾವನೆಯನ್ನ ಅವರ ಮೂಡ್ ಅನ್ನು ತಿಳಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೆ ಬಿಗ್ ಡೇಟಾ ಮತ್ತು ಅದರ ಅನಾಲಿಸಿಸ್. ಬೇಡ ಎಂದು ನಿರ್ಧಾರ ಮಾಡಿದವರು ಮತ್ತು ಬೇಕು ಎಂದು ನಿರ್ಧಾರ ಮಾಡಿದವರ ಪಟ್ಟಿ ತಯಾರಾಗುತ್ತೆ. ಇವೆರಡರ ಮಧ್ಯೆ ಅತ್ತಲೂ ಇಲ್ಲ ಇತ್ತಲೂ ಎನ್ನುವ ಎತ್ತ ಬೇಕಾದರೂ ವಾಲಬಹುದಾದ ಜನರ ಪಟ್ಟಿ ತಯಾರಾಗುತ್ತೆ. ನಿರ್ಧಾರ ತೆಗೆದುಕೊಂಡಿಲ್ಲದೆ ಇರುವ ಜನರನ್ನ ತಮಗೆ ಬೇಕಾದತ್ತ ಕೊನೆಗಳಿಗೆಯಲ್ಲಿ ವಾಲಿಸಿಕೊಂಡು ಥೆರೆಸಾ ಮೇ ಬ್ರೆಕ್ಸಿಟ್ ಗೆದ್ದದ್ದು ಎನ್ನುವುದು ಇಂದಿಗೆ ತಿಳಿದ ವಿಷಯ. ಹಾಗೆಯೇ ಡೊನಾಲ್ಡ್ ಟ್ರಂಪ್ ಕೂಡ ಬಿಗ್ ಡೇಟಾ ಉಪಯೋಗಿಸಿಕೊಂಡು ಎಲೆಕ್ಷನ್ ಗೆದ್ದರು ಎನ್ನುವುದು ಕೂಡ ಇಂದಿಗೆ ನಗ್ನ ಸತ್ಯ. 
ಹಣ, ಅಧಿಕಾರದ ಮೇಲೆ ನಿಯಂತ್ರಣ ಸಾಧಿಸಲು ಇರುವ ಪ್ರಮುಖ ಅಸ್ತ್ರ ಡಿಜಿಟಲೈಸಷನ್ ಎನ್ನುವುದು ಜಗತ್ತಿನ ರಾಜಕೀಯ ವ್ಯಕ್ತಿಗಳಿಗೆ ತಿಳಿದಿದೆ. ಜನ ಸಾಮಾನ್ಯನ ಮೇಲೆ ಹೆಚ್ಚಿನ ಹಿಡಿತ ಅವನ ಬಗ್ಗೆಯ ಅತ್ಯಂತ ಸಣ್ಣ ಮಾಹಿತಿ ಕೂಡ ಸಂಗ್ರಹಿಸಿ ಇಡುವುದು ಸಮಯ ಬಂದಾಗ ಅದನ್ನ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದು ಹೇಗೆ ಎನ್ನವುದರ ಅರಿವು ಅವರಿಗಿದೆ. ತಂತ್ರಜ್ಞಾನದ ಕಂಪನಿಗಳು ಕೂಡ ಅವರ ಅಣತಿಯಂತೆ ನೆಡೆಯುತ್ತವೆ. ನಾವೇನು ಮಾಡುತ್ತಿದ್ದೇವೆ ಎನ್ನುವುದರ ಸ್ಪಷ್ಟ ಅರಿವು ಅವರಿಗಿದೆ. ಜನ ಸಾಮಾನ್ಯನಿಗೆ ಮಾತ್ರ ಏನಾಗುತ್ತಿದೆ ಎನ್ನವುದರ ಅರಿವಿರಲಿ ಸಣ್ಣ ಸುಳಿವೂ ಇಲ್ಲ. ಧರ್ಮ, ಜಾತಿ, ಭಾಷೆಯ ಹೆಸರಲ್ಲಿ ಒಬ್ಬರ ಮೇಲೆ ಒಬ್ಬರು ಯುದ್ಧ ಸಾರುವುದರಲ್ಲಿ ಅವರು ಮಗ್ನರು. ಅವನಿಗೆ ಅರಿವಾಗುವ ಹೊತ್ತಿಗೆ  'ಅವರು' ಪೂರ್ಣ ನಿಯಂತ್ರಣ  ಸಾಧಿಸಿಯಾಗಿರುತ್ತದೆ.
- ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com