ಸ್ವಿಸ್ ಬ್ಯಾಂಕ್ ಗಳಲ್ಲಿ ಇಟ್ಟ ಹಣವೆಲ್ಲ ಕಪ್ಪು ಹಣವೇ?

ಹಣಕ್ಲಾಸು ಅಂಕಣದಲ್ಲಿ ಅಂಕಿ ಅಂಶಗಳಿಗಷ್ಟೇ ಪ್ರಾಮುಖ್ಯತೆ. ಸ್ವಿಸ್ ಹಣ ಇಟ್ಟ ಮಾತ್ರಕ್ಕೆ ಅದು ಕಪ್ಪು ಹಣವೇ? ಈ ಕಪ್ಪು ಹಣ ಅನ್ನುವುದು ಹೇಗೆ ಶುರುವಾಯ್ತು? ತಿಳಿದುಕೊಳ್ಳೋಣ....
ಸ್ವಿಸ್ ಬ್ಯಾಂಕ್
ಸ್ವಿಸ್ ಬ್ಯಾಂಕ್
ಸ್ವಿಸ್ ನ್ಯಾಷನಲ್ ಬ್ಯಾಂಕ್ 1987 ರಿಂದ ತನ್ನ ಬಳಿ ಹಣ ಇಟ್ಟಿರುವ ಮಾಹಿತಿಯನ್ನ ಪೂರ್ಣವಲ್ಲದಿದ್ದರೂ ಬೇರೆ ದೇಶಗಳಿಗೆ ಹಂಚಿಕೊಳ್ಳುತ್ತಾ ಬಂದಿದೆ. ಪ್ರತಿ ವರ್ಷ ಇದು ಬಿಡುಗಡೆ ಮಾಡುವ ಪಟ್ಟಿಯಲ್ಲಿ ಸ್ವಿಸ್ ನ್ಯಾಷನಲ್ ಬ್ಯಾಂಕ್ ನ ಲಿಯಬಿಲಿಟಿ ಇಷ್ಟು ಎಂದು ತೋರಿಸುತ್ತದೆ. ಅಂದರೆ ಠೇವಣಿ ಇಟ್ಟ ಗ್ರಾಹಕನಿಗೆ ಅದು ಆಸ್ತಿ ಆದರೆ ಬ್ಯಾಂಕು ಅದನ್ನ ಗ್ರಾಹಕ ಕೇಳಿದಾಗ ವಾಪಸ್ಸು ಕೊಡಬೇಕು ಹೀಗಾಗಿ ಅದನ್ನ ಲಿಯಬಿಲಿಟಿ ಎಂದು ತೋರಿಸುತ್ತದೆ. 
2016 ರಲ್ಲಿ ಹೀಗೆ ಸ್ವಿಸ್ ನಲ್ಲಿ ಇದ್ದ ಭಾರತೀಯರ ಒಟ್ಟು ಹಣ ಹತ್ತಿರ ಹತ್ತಿರ 4,500 ಕೋಟಿ ರೂಪಾಯಿ. ಇದೀಗ  2017 ರ ಮಾಹಿತಿ ಪ್ರಕಾರ ಈ ಹಣದ ಮೊತ್ತ 7000 ಕೋಟಿ ರೂಪಾಯಿ. ಅಂದರೆ ಸ್ವಿಸ್ ನಲ್ಲಿ ಶೇಖರಣೆಯಾದ ಭಾರತೀಯರ ಹಣ ಏರಿಕೆ ಕಂಡಿತು. ಇಷ್ಟು ಸಾಕಲ್ಲ ಮಾಧ್ಯಮಗಳು ಬೊಬ್ಬೆ ಹೊಡೆಯಲು. ಕಪ್ಪು ಹಣದ ವಿರುದ್ಧ ಸರಕಾರ ಹೋರಾಡುತ್ತಿದೆ ಎನ್ನುತ್ತೀರಿ, ಕಪ್ಪು ಹಣ ವಾಪಸ್ಸು ತರುತ್ತೇವೆ ಎನ್ನುವುದು ಕೇಳಿದ್ದೇವೆ ಆದರೆ ಈಗ ಆಗಿರುವುದೇನು? ಸ್ವಿಸ್ ಬ್ಯಾಂಕಿನಲ್ಲಿ ಇಟ್ಟಿರುವ ಹಣದ ಮೊತ್ತ ದುಪ್ಪಟಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಂದ್ರ ಸರಕಾರದ ವಿರುದ್ಧ ಕೇಳಿ ಬರುತ್ತಿರುವ ಆರೋಪ. ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ, ವಿರೋಧ ಪಕ್ಷದಲ್ಲಿ ಯಾವುದೇ ಇರಲಿ, ಹಣಕ್ಲಾಸು ಅಂಕಣದಲ್ಲಿ ಅಂಕಿ ಅಂಶಗಳಿಗಷ್ಟೇ ಪ್ರಾಮುಖ್ಯತೆ. ಸ್ವಿಸ್ ಬ್ಯಾಂಕ್ನಲ್ಲಿ ಯಾವಾಗ ಎಷ್ಟು ಹಣ ಇತ್ತು? ಸ್ವಿಸ್ ಬ್ಯಾಂಕ್ನಲ್ಲಿ ಹಣ ಇಟ್ಟ ಮಾತ್ರಕ್ಕೆ ಅದು ಕಪ್ಪು ಹಣವೇ? ಈ ಕಪ್ಪು ಹಣ ಅನ್ನುವುದು ಹೇಗೆ ಶುರುವಾಯ್ತು? ಅನ್ನುವುದನ್ನ ತಿಳಿದುಕೊಳ್ಳೋಣ. 
ಎಲ್ಲಕ್ಕೂ ಮುಂಚೆ ಕಪ್ಪು ಹಣ ಎಂದರೇನು? ಎನ್ನುವುದನ್ನ ತಿಳಿದುಕೊಳ್ಳೋಣ. ನಮ್ಮಲ್ಲಿ ಬಹುತೇಕರಿಗೆ ಲಂಚದ ಹಣ ಅಥವಾ ಕಾನೂನು ಬಾಹಿರ ಚಟುವಟಿಕೆಗಳಿಂದ ಸಂಗ್ರಹವಾದ ಹಣವನ್ನ ಕಪ್ಪು ಹಣ ಎಂದದಷ್ಟೇ ಗೊತ್ತು. ಹೌದು ಹೀಗೆ ಸಂಗ್ರಹವಾದ ಹಣ ಕಪ್ಪು ಹಣ ನಿಜ. ಆದರೆ ಹಣ ನೀವೆಷ್ಟೇ ನಿಯತ್ತಿನಿಂದ ಅಥವಾ ಶ್ರಮಪಟ್ಟು ಸಂಗ್ರಹಿಸಿರಿ ಅದನ್ನ ತೆರಿಗೆ ಇಲಾಖೆಗೆ ತೋರಿಸದೆ ಅದರ ಮೇಲೆ ವಿಧಿಸಲಾಗುವ ಒಂದಷ್ಟು ತೆರಿಗೆಯನ್ನ ಕಟ್ಟದೆ ಇರುವ ಎಲ್ಲಾ ಹಣವೂ ಕಪ್ಪು ಹಣವೇ! ಬಿಲ್ ಇಲ್ಲದೆ ನೀವು ನಿತ್ಯ ಏನೆಲ್ಲಾ ವ್ಯವಹಾರ ಮಾಡುತ್ತೀರಿ ನೆನೆಪಿಸಿಕೊಳ್ಳಿ ಅವೆಲ್ಲಾ ಕಪ್ಪು ಹಣವೇ. ಎಲ್ಲಿಯವರೆಗೆ ನಾವು ನೆಡೆಸಿದ ವ್ಯವಹಾರ ರಿಜಿಸ್ಟರ್ ಆಗುವುದಿಲ್ಲ ಅಲ್ಲಿಯವರೆಗೆ ಅವೆಲ್ಲಾ ಕಪ್ಪು ಹಣದ ಲೆಕ್ಕಕ್ಕೆ ಬರುತ್ತದೆ. ಹೀಗಾಗಿ ಕಪ್ಪು ಹಣ ಕೇವಲ ರಾಜಕಾರಣಿಗಳು ಮತ್ತು ಉದ್ಯಮಿಗಳ ಬಳಿ ಮಾತ್ರವಿಲ್ಲ. ತೆರಿಗೆ ಇಲಾಖೆಗೆ ವಂಚಿಸುವ ಎಲ್ಲರೂ ಅವರವರ ಮಟ್ಟದಲ್ಲಿ ಕಪ್ಪು ಹಣದ ಮಾಲೀಕರೇ. ಕಪ್ಪು ಹಣಕ್ಕೆ ನಮ್ಮೆಲ್ಲರ ದೇಣಿಗೆ ಕೂಡ ಯಥೇಚ್ಛವಾಗಿದೆ. 
ಸ್ವಿಸ್ ಬ್ಯಾಂಕ್ನಲ್ಲಿ ಯಾವಾಗ ಎಷ್ಟು ಹಣ ಇತ್ತು? 
2006 ರಲ್ಲಿ 44,500 ಕೋಟಿ ರೂಪಾಯಿ ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಹಣ ಕೊಳೆಯುತ್ತಾ ಬಿದ್ದಿತ್ತು. 2016 ರ ವೇಳೆಗೆ ಇದು ಕುಸಿತ ಕಂಡು 4,500 ಕೋಟಿ ರೂಪಾಯಿ ಗೆ ಇಳಿತ ಕಂಡಿತ್ತು. ಇದೀಗ ಇದರ ಮೊತ್ತ 7,000 ಸಾವಿರ ಕೋಟಿ. ಈ ಏರಿಕೆ ಇಂದು ವಿಷಯದ ವಸ್ತುವಾಗಿದೆ. ಕಳೆದ ಮೂರು ವರ್ಷಗಳಿಂದ ನೆಡೆದ ಘಟನೆಗಳನ್ನು ನೋಡೋಣ. 2015 ರಲ್ಲಿ ಹೆಚ್ ಎಸ್ ಬಿ ಸಿ ಲೀಕ್, 2016 ರಲ್ಲಿ ಪನಾಮ ಲೀಕ್ 2016 ರಲ್ಲಿ ಡೀಮಾನಿಟೈಸೇಶನ್ ನಂತಹ ಹೊಡೆತಗಳು ಸ್ವಿಸ್ ಒಂದೇ ಅಂತಲ್ಲ ವಿದೇಶದಲ್ಲಿ ಹಣವನ್ನ ಇಟ್ಟವರ ಜಂಘಾಬಲ ಕಸಿಯದು ಮುಂದೇನು? ಹಣವನ್ನ ಎಲ್ಲಿಡುವುದು? ಎನ್ನುವ ಚಿಂತೆಗೆ ಹಚ್ಚಿದ್ದು ಮಾತ್ರ ಸುಳ್ಳಲ್ಲ. 2005  ರಿಂದ 2017 ರ ವರೆಗೆ ಸ್ವಿಸ್ನಲ್ಲಿದ್ದ ಭಾರತಿಯ ಹಣದ ಮಾಹಿತಿಯನ್ನ ಈ ಕೆಳಗಿನ ಚಿತ್ರದಲ್ಲಿ ಚಿತ್ರದಲ್ಲಿ ಕಾಣಬಹದು. 
ಸ್ವಿಸ್ ಬ್ಯಾಂಕ್ನಲ್ಲಿ ಹಣ ಇಟ್ಟ ಮಾತ್ರಕ್ಕೆ ಅದು ಕಪ್ಪು ಹಣವೇ?
ಖಂಡಿತ ಇಲ್ಲ. ಸ್ವಿಸ್ ಬ್ಯಾಂಕಿನಲ್ಲಿ ಇಟ್ಟ ಹಣವೆಲ್ಲ ಕಪ್ಪು ಎಂದು ಹೇಳಲು ಬರುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ನ ಅನುಮತಿ ಪಡೆದು ಯಾವುದೇ ನಾಗರೀಕ ವಾರ್ಷಿಕ ಎರಡು ಲಕ್ಷ ಐವತ್ತು ಸಾವಿರ ಡಾಲರ್ ಹಣವನ್ನ ವಿದೇಶದ ಖಾತೆಗೆ ವರ್ಗಾವಣೆ ಮಾಡಬಹದು. ಹೀಗೆ ಅನುಮತಿ ನೀಡುವ ಮುನ್ನ ಆ ಹಣದ ಮೇಲೆ ತೆರಿಗೆ ಕಟ್ಟಲಾಗಿದೆಯೇ? ಅದರ ಮೂಲವೇನು? ಆ ಹಣವನ್ನ ನ್ಯಾಯಯುತವಾಗಿ ಸಂಪಾದಿಸಲಾಗಿದೆಯೇ ಎನ್ನುವುದನ್ನ ನೋಡಲಾಗುತ್ತದೆ. ಎಲ್ಲವೂ ಸರಿಯಿದ್ದರೆ ಹೊರದೇಶಕ್ಕೆ ಹಣವನ್ನ ಕಳಿಸಲು ಅನುಮತಿ ನೀಡಲಾಗುತ್ತದೆ. ಹೀಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಅನುಮತಿ ಪಡೆದು ವಿದೇಶಕ್ಕೆ ಕಳಿಸಲಾದ ಮೊತ್ತ 2017/2018 ರಲ್ಲಿ 77, 939 ಕೋಟಿ ರೂಪಾಯಿ. ಕಳೆದ ವರ್ಷಗಳಿಗೆ ಹೋಲಿಸಿದರೆ 39 ಪ್ರತಿಶತ ಏರಿಕೆಯಾಗಿದೆ. ಅಂದರೇನರ್ಥ? ಹಿಂದೆ ಕಳ್ಳ ದಾರಿಯಲ್ಲಿ ಸಾಗಿ ಸೇರುತ್ತಿದ್ದ ಹಣ ಇಂದು ಸರಿಯಾದ ದಾರಿಯಲ್ಲಿ ಹೋಗುತ್ತಿದೆ. ಸರಕಾರಕ್ಕೆ ಕಟ್ಟಬೇಕಾದ ತೆರಿಗೆ ಅದರ ಮೇಲೆ ಕಟ್ಟಲಾಗುತ್ತಿದೆ. ಹೀಗಾಗಿ ಸ್ವಿಸ್ ನಲ್ಲಿ ಏರಿಕೆಯಾಗಿರುವ ಹಣದ ಮೊತ್ತ ಯಾವುದೇ ರೀತಿಯಲ್ಲೂ ಕಪ್ಪು ಎಂದು ಹೇಳಲು ಬರುವುದಿಲ್ಲ. 
ಈ ಕಪ್ಪು ಹಣ ಅನ್ನುವುದು ಹೇಗೆ ಶುರುವಾಯ್ತು ? 
ಜಗತ್ತಿನ ಒಂದಲ್ಲ ಹತ್ತಾರು ಸಮಸ್ಯೆಗಳಿಗೆ ಬ್ರಿಟಿಷರು ಮೂಲ ಕಾರಣ. ಅವರ ಧನದಾಹ, ವಸಾಹತು ಸೃಷ್ಟಿಸಿ ಅವುಗಳ ಮೇಲೆ ಹಿಡಿತ ಸಾಧಿಸಬೇಕೆನ್ನುವ ಹಂಬಲ ಜಗತ್ತಿನ ಇವತ್ತಿನ ಅಷ್ಟೂ ಪಿಡುಗುಗಳಿಗೆ ಕಾರಣ. ನಿಸ್ಸಂಶಯವಾಗಿ ಬ್ರಿಟಿಷರು ಜಗತ್ತಿನ ಎಲ್ಲಾ ಸಮಸ್ಯೆಗಳ ಬೇರು. ಕಪ್ಪು ಹಣದ ಹುಟ್ಟು ಇಂತಹ ದಿನದಿಂದ ಆಯ್ತು ಎಂದು ಹೇಳುವುದು ಕಷ್ಟ ಆದರೆ ಸಮಾಜದಲ್ಲಿ ಒಂದು ಮಿತಿಯಲಿದ್ದ ಈ ಪಿಡುಗು ಇಡೀ ಪ್ರಪಂಚವನ್ನೇ ಆಕ್ರಮಿಸಲು ಶುರು ಆಗಿದ್ದು ಎರಡನೇ ಮಹಾಯುದ್ಧದ ನಂತರ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳನ್ನು ಇತಿಹಾಸ ನೀಡುತ್ತದೆ. 
ಎರಡನೇ ಮಹಾಯುದ್ಧದ ನಂತರ ಬ್ರಿಟಿಷ್ ಸರಕಾರ ಇತರ ದೇಶಗಳಿಂದ ತನ್ನ ದೇಶಕ್ಕೆ ಬರುತಿದ್ದ ಕೈಗಾರಿಕಾ ಉತ್ಪನ್ನಗಳ ಮೇಲೆ ನಿಬಂಧನೆ ಹೇರುತ್ತದೆ ಹೀಗಾಗಿ ವಸ್ತುಗಳ ಬೇಡಿಕೆ ಹೆಚ್ಚಾಗುತ್ತದೆ. ಸಾಲದು ಎನ್ನುವಂತೆ ಯುದ್ಧದ ಖರ್ಚು ವೆಚ್ಚ ತೂಗಿಸುವ ಸಲುವಾಗಿ ಪ್ರಜೆಗಳ ಮೇಲೆ ಹಾಕುತಿದ್ದ ತೆರಿಗೆಯ ಮೊತ್ತವನ್ನ ಸಾಕಷ್ಟು ಹೆಚ್ಚಿಸುತ್ತದೆ. ಪರಿಣಾಮ ವ್ಯಾಪಾರಿಗಳು ನಿಬಂಧಿತ ವಸ್ತುಗಳನ್ನ ಕಳ್ಳ ದಾರಿಯ ಮೂಲಕ ದೇಶಕ್ಕೆ ತರಲು ಶುರು ಮಾಡುತ್ತಾರೆ ತಂದದ್ದ ಕದ್ದು ಮುಚ್ಚಿ ಮಾರಲು ಶುರು ಮಾಡುತ್ತಾರೆ. ಕೊಂಡ ಪ್ರಜೆಗಳಿಗೂ ಒಂದಂಶ ಕಡಿಮೆ ಬೆಲೆಗೆ ಸಿಕ್ಕಿತ್ತು ವ್ಯಾಪಾರಿಗಳ ಲಾಭವೂ ಹೆಚ್ಚಿತ್ತು. ಹೀಗೆ ಸರಕಾರಕ್ಕೆ ಕಟ್ಟಬೇಕಾದ ತೆರಿಗೆ ಕಟ್ಟದೆ ಸಂಗ್ರಹವಾದ ಹಣ 'ಕಪ್ಪು ಹಣ' 'ಡರ್ಟಿ ಮನಿ'  'ಬ್ಲಾಕ್ ಮನಿ' ಎನ್ನುವ ಹೆಸರುಗಳಿಂದ ಕುಖ್ಯಾತಿ ಪಡೆಯಿತು.  
ತೆರಿಗೆ ಲೆಕ್ಕಹಾಕಲು ಇಡಬೇಕಾದ ಲೆಕ್ಕ ಪತ್ರಗಳ ಜಂಜಾಟವಿಲ್ಲ ಜೊತೆಗೆ ಹೆಚ್ಚು ಲಾಭ! ಇವೆರೆಡೂ ವ್ಯಾಪಾರಿಗಳ ಮುಂದಿನ ದಿನಗಳಲ್ಲೂ ಇದನ್ನೇ ಮಾಡಲು ಪ್ರೇರೇಪಿಸಿತು. ಜಗತ್ತಿನಾದ್ಯಂತ ತಮ್ಮ ವಸಾಹತು ಹೊಂದಿ ಸೂರ್ಯ ಮುಳುಗದ ನಾಡು ಎನ್ನುವ ಹೆಸರು ಪಡೆದಿದ್ದ ಬ್ರಿಟನ್ ತನ್ನ ಈ ರೋಗವನ್ನ ಜಗತ್ತಿಗೆ ಬಳುವಳಿಯಾಗಿ ನೀಡಿತು. ಕೆಟ್ಟದ್ದನ್ನು ಕಲಿಯಲು ಮತ್ತು ಅದಕ್ಕೆ ಹೊಂದಿಕೊಳ್ಳಲು ಯಾವ ತರಬೇತಿಯ ಅವಶ್ಯಕತೆ ಇಲ್ಲ ನೋಡಿ ಹೀಗಾಗಿ ಜಗತ್ತು ಇದನ್ನ ತೆರೆದ ಬಾಹುಗಳಿಂದ ಅಪ್ಪಿತು. 
ಕೊನೆ ಮಾತು: ಭಾರತೀಯರ ಕಪ್ಪು ಹಣ ವಿದೇಶದಲ್ಲಿ ಎಷ್ಟಿದೆ? ಎನ್ನುವುದರ ಲೆಕ್ಕ ಸಿಗುವುದು ಬಹಳ ಕಷ್ಟ. 2015 ರಲ್ಲಿ ಅಂದಾಜಿಸಿರುವ ಸಂಖ್ಯೆ 90 ಲಕ್ಷ ಕೋಟಿ ರೂಪಾಯಿ. ಇದು ಸ್ವಿಸ್ ಒಳಗೊಂಡು ಇತರ ಎಲ್ಲಾ ಟ್ಯಾಕ್ಸ್ ಹೆವನ್ ದೇಶಗಳಲ್ಲಿ ಸಂಗ್ರಹವಾಗಿರುವ ಭಾರತೀಯರ ಹಣ. ಇದು ನಿಜವಾದ ಕಪ್ಪು ಹಣ. ಸ್ವಿಸ್ ಸರಕಾರ ಮುಕ್ತವಾಗಿ ಕೊಟ್ಟಿರುವ ಮಾಹಿತಿಯ ಪ್ರಕಾರ ಇರುವ 7 ಸಾವಿರ ಕೋಟಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಷ್ಟು ತೃಣವಾದ ಮೊತ್ತ. ಹೀಗಾಗಿ ಅದು ಕಪ್ಪು ಹಣ ಹೇಗಾದೀತು? ಈ ಹಣದಲ್ಲಿ ಹೆಚ್ಚಳವಾಗಿರುವುದು ಬೇರೆ ಕಾರಣದಿಂದ. ಗಮನಿಸಿ ನೋಡಿ  ನಿಜವಾದ ಕಪ್ಪು ಹಣದ ಬಗ್ಗೆ ಯಾರೂ ಬೊಬ್ಬೆ ಹೊಡೆಯುವುದಿಲ್ಲ. ಹೊಡೆಯುತ್ತಲೂ ಇಲ್ಲ. ಎಂದಿನಂತೆ ಜನ ಸಾಮಾನ್ಯನ ಗಮನ ಬೇರೆ ಕಡೆ ಸೆಳೆದು ತಮ್ಮ ಆಟ ಮುಂದುವರಿಸುವ ಬುದ್ಧಿವಂತ ನೆಡೆಯೇ ಇಲ್ಲಿಯೂ ಕಾಣುತ್ತಿರುವುದು. 
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com