ರಾಮನನ್ನು ವನವಾಸಕ್ಕೆ ಕಳಿಸುವ ನಿರ್ಧಾರ ಕೇಳುತ್ತಿದ್ದಂತೆ ಉರಿದುಬಿದ್ದಿದ್ದ ಲಕ್ಷ್ಮಣ!

ಉರಿದುರಿದು ಬೀಳುತ್ತಿದ್ದವನು ಲಕ್ಷ್ಮಣ. ಅಪ್ಪ ಸಿಕ್ಕಿದ್ದಿದ್ದರೆ ಎರಡು ಕೊಟ್ಟೇ ಬಿಡುತ್ತಿದ್ದನೇನೋ ! ಪುಣ್ಯಕ್ಕೆ ಭರತ ಅರಮನೆಯಲ್ಲಿಲ್ಲ. ಇದ್ದಿದ್ದರೆ ಹೋಗಿ ಅವನನ್ನು ಕತ್ತರಿಸಿ ಬಿಡುತ್ತಿದ್ದನೇನೋ !
ರಾಮ
ರಾಮ
ತಂಗಾಳಿ ಸುಳಿಯುತ್ತಿದ್ದ ಬೆಳುದಿಂಗಳ ಉದ್ಯಾನವನದಲ್ಲಿ ಪ್ರಿಯೆಯೊಡನೆ ಮೈಮರೆತು ನಡೆಯುತ್ತಿದ್ದಾಗ, ತಲೆ ಮೇಲೆ ಮರದ ಕೊಂಬೆ ಮುರಿದು ಬಿತ್ತೊ? ಬೇಸಗೆಯ ಸುಡು ಬಿಸಿಲಿನಿಂದ ನದಿಗೆ ಧುಮುಕಿ ಆ ಶೈತ್ಯವನ್ನನುಭವಿಸುತ್ತ ಸಂತಸದಿಂದ ಖುಷಿಯಾಗಿ ಈಜುತ್ತಿದ್ದಾಗ, ಕಾಲನ್ನು ಹಿಡಿದೆಳೆಯಿತೊ ಮೊಸಳೆ? ನವ ಯೌವ್ವನದ, ಗೌರ ವರ್ಣದ, ಮೋಹಕ ಮಾಟದ, ಅರಳುಗಂಗಳ, ಮಂದಸ್ಮಿತದ, ರಕ್ತ ತುಟಿಯ, ತುಂಬುಗೆನ್ನೆಯ ಜಗದೇಕಸುಂದರಿಯ ಕಂಠಕ್ಕಿನ್ನೇನು ತಾಳಿ ಕಟ್ಟಬೇಕಿದ್ದಾಗ, ಅವಳ ಜಾಗದಲ್ಲಿ ಇದ್ದಿಲುಗಪ್ಪಿನ, ಬೋಡು ತಲೆಯ, ಕ್ರೂರ ಕಣ್ಣಿನ, ಸುಟ್ಟ ಮೋರೆಯ, ಜೋತ ತುಟಿಗಳ, ಮುರಿದ ಹಲ್ಲಿನ ವೃದ್ಧ ರಕ್ಕಸಿಯೊಬ್ಬಳು ಪ್ರತ್ಯಕ್ಷಳಾದಳೊ?
ಗುಲಾಬಿ ಹಾಸಿನಲ್ಲಿ ಅಡಿ ಇಡುತ್ತ, ಗೆಳೆಯರ ಪ್ರೋತ್ಸಾಹದ ನುಡಿಗಳನ್ನು ಕೇಳುತ್ತ, ಮನದನ್ನೆಯ ಮೃದು ಕರದ ಬಿಸುಪನ್ನು ಅನುಭವಿಸುತ್ತ ಪುರೋಹಿತರ ಮಂಗಳಾ ಶಾಸನಗಳನ್ನು ಕೇಳುತ್ತ, ಮುಂದಿನ ಹೆಜ್ಜೆ ಇಟ್ಟರೆ ಸಿಗುವ ಸ್ವರ್ಣ ಸಿಂಹಾಸನ, ಇದ್ದಕ್ಕಿದ್ದಂತೇ ಮಾಯವಾಗಿ ಮೂಳೆಗಳ ಭೂತಾಸನ ಕರೆಯಿತೊ?...... ಹೀಗೆಲ್ಲ ಆಯಿತೋ ಶ್ರೀರಾಮರಿಗೆ? ಇಲ್ಲ; ಇಲ್ಲವೇ ಇಲ್ಲ! ಬಹುಶಃ ಕೊಂಚ, ಅತಿ ಕೊಂಚ ನಿರಾಶೆ ಆಗಿರಬಹುದೇನೋ! ಸಹಜವಲ್ಲವೆ? ಬಾಡಿಗೆಗೆ ಹಿಡಿದ ಮನೆಯನ್ನೇ ಬಿಡದೇ ನ್ಯಾಯಾಲಯಕ್ಕೆ ಹೋಗುವ ನಾವಿರುವಾಗ, ಶ್ರೀರಾಮರ ಸ್ಥಿರತೆ ಅತ್ಯಚ್ಚರಿ! 
ಅರಮನೆಯಲ್ಲ, ಅಯೋಧ್ಯೆಯಷ್ಟೇ ಅಲ್ಲ, ಇಡೀ ಕೋಸಲ ರಾಜ್ಯವನ್ನೇ ಇನ್ನೇನು ತಾನು ಯುವರಾಜನಾಗಿ ಅನುಭವಿಸಲಿರುವಾಗ , ಬಿಟ್ಟುಬಿಟ್ಟು ರಾಜ್ಯಭ್ರಷ್ಟನಾಗುವುದಷ್ಟೇ ಅಲ್ಲ , ಅರಣ್ಯಕ್ಕೆ ಹೋಗಬೇಕು , ಅದೂ ಹದಿನಾಲ್ಕು ವರ್ಷಗಳು ಏಕಾಂಗಿಯಾಗಿ ದಂಡಕಾರಣ್ಯದಲ್ಲಿರಬೇಕು ; ಎಂದಾದಾಗ ಆಗಿರಬಹುದಾದ ಕಿಂಚಿತ್ ನೋವನ್ನೂ ತೋರಿಸದೇ , ಅದೇ ಸಹಜ ಧ್ವನಿಯಲ್ಲಿ , ಅದೇ ಮೃದು ಮಾತಿನಲ್ಲಿ , ಅದೇ ವಿನಯ ಭಾಷೆಯಲ್ಲಿ , ಅದೇ ಸಭ್ಯ ರೀತಿಯಲ್ಲಿ ಹೇಳಿಬಿಡುತ್ತಾರೆ ರಾಮರು ! ಏನೆಂದು ? ಹೆಚ್ಚೇನಿಲ್ಲ , ಉದ್ದುದ್ದ ಭಾಷಣವಿಲ್ಲ , ತಾನು ತ್ಯಾಗ ಮಾಡುತ್ತಿದ್ದೇನೆಂಬ ಭಾವವಿಲ್ಲ . ಅತ್ಯಂತ ಸಹಜವಾಗಿ, ಯಾವುದೇ ಕೊಂಕಿಲ್ಲದೇ ಹೇಳಿಬಿಟ್ಟರು ; "ಹಾಗೇ ಆಗಲಿ ಹೋಗುವೆ" (ಏವಂ ಅಸ್ತು . ಗಮಿಷ್ಯಾಮಿ). " ಈ ವಿಷಯದಲ್ಲಿ ಇನ್ನೇನೂ ಚರ್ಚೆ ಇಲ್ಲ . ತಂದೆಯ ಆಙ್ಞೆಯಂತೆ ಹೋಗುತ್ತೇನೆ . ಆದಷ್ಟು ಬೇಗ ದಂಡಕಾರಣ್ಯಕ್ಕೆ ಹೋಗಿ ಹದಿನಾಲ್ಕು ವರ್ಷಗಳು ಅಲ್ಲಿರುತ್ತೇನೆ. "ಧಡ್! ಅಯ್ಯೋ!! ಸದ್ದು ಬಂದ ಕಡೆ ನೋಡಿದರೆ ದಶರಥ ಮಂಚದಿಂದ ಕೆಳಗುರುಳಿ ಬಿದ್ದಿದ್ದಾನೆ !!
****************
ಹೊರಗಡೆ ಬಂದರೆ ಲಕ್ಷ್ಮಣ , ಮಿತ್ರರು ಕಾತುರದಿಂದ ಕಾಯುತ್ತಿದ್ದಾರೆ . " ಏಯ್ ! ರಥ ಬರಲಿ . "ಲಕ್ಷ್ಮಣ ಹೇಳಿದ. " ನಿಲ್ಲು. ಬೇಡ. "ಶ್ರೀರಾಮರು ಹೇಳಿದರು." ನನಗೀಗ ರಥ ಹತ್ತುವ ಅಧಿಕಾರ ಇಲ್ಲ.  ಅವಾಕ್ಕಾಗಿ ಲಕ್ಷ್ಮಣನಷ್ಟೇ ಏನು; ಶ್ರೀರಾಮ ಸ್ನೇಹಿತರೆಲ್ಲ ತಿರುಗಿದರು ರಾಮರೆಡೆಗೆ. "ಏನಿಲ್ಲ, ಚಿಕ್ಕಮ್ಮನ ಅಪೇಕ್ಷೆಯಂತೆ ಮಹಾರಾಜರು ಭರತನಿಗೆ ಪಟ್ಟಗಟ್ಟಲಿದ್ದಾರೆ! ಕೆಲಕಾಲ ವನದಲ್ಲಿ ಆನಂದದಿಂದ ವಿಹರಿಸಿ ಬರಲು ನನಗೆ ಹೇಳಿದ್ದಾರೆ. "ಶ್ರೀರಾಮರು ಅನುದ್ವಿಗ್ನರಾಗಿ ಹೇಳಿ, ಪಟ್ಟಾಭಿಷೇಕದ ವಸ್ತುಗಳಿಗೆಲ್ಲ ನಮಸ್ಕರಿಸಿ, ತಲೆ ಮೇಲೆ ಹಿಡಿಯಲು ತಂದಿದ್ದ ಬೆಳ್ಗೊಡೆಯನ್ನು ಬಿಟ್ಟು, ಯುವರಾಜನಾಗಿ ಹತ್ತಬೇಕಿದ್ದ ರಥವನ್ನು ತಿರಸ್ಕರಿಸಿ, ಸ್ನೇಹಿತರನ್ನು ಬೀಳ್ಕೊಂಡು ಕಾತುರದಿಂದ ಕಾಯುತ್ತಿದ್ದ, ನೋಡುತ್ತಿದ್ದಂತೆಯೇ ಜಯಕಾರ ಹಾಕಲು ಶುರುವಾದ ಪೌರರಿಗೆ ಸಮಾಧಾನ ಹೇಳಿ ಕೌಸಲ್ಯಾ ಭವನದೆಡೆ ಹೊರಟರು.
ಮಿತ್ರರಿಗೆ , ಪೌರರಿಗೆ ಅಚ್ಚರಿ ! ಸಿಂಹಾಸನವಷ್ಟೇ ಅಲ್ಲ , ರಾಜ್ಯ ಸಿಗದಿರುವುದಷ್ಟೇ ಅಲ್ಲ , ನಗರದಿಂದಲೇ ಹೊರಹೋಗಬೇಕಾದ ; ಅಲ್ಲಲ್ಲ , ಇಡೀ ರಾಜ್ಯದಿಂದಲೇ ಹೊರನೂಕಲ್ಪಡುವ ದುರಂತವಾದಾಗ , ಅಷ್ಟೇನೇ ; ಕಾಡಿಗೆ ಹೋಗಬೇಕಾದ ಕಡು ಕಷ್ಟ ಬಂದರೂ , ಇಂತಹ ಮಹಾ ಸಂಕಟ ಸಂಭವಿಸಿದ್ದರೂ , ಏನೂ ಆಗಿಲ್ಲವೆಂಬಂತೆ ಅತ್ಯಂತ ಸಹಜವಾಗಿದ್ದಾರಲ್ಲಾ ರಾಮರು ? ಯಾರೋ ಕವಿ ಹೃದಯರು ಹೇಳಿದರು ; " ಕತ್ತಲಾಯಿತೆಂದು ಚಂದ್ರನ ಕಾಂತಿ ಕುಗ್ಗುವುದೆ ?  ರಾಜ್ಯ ಸಿಗಲಿಲ್ಲವೆಂದ ಮಾತ್ರಕ್ಕೇ ರಾಮರ ಮುಖ ಕಾಂತಿ ಕುಗ್ಗಲಿಲ್ಲ . "
ರಾಮರ ಸುತ್ತಲಿದ್ದ ಎಲ್ಲರಿಗೂ ಸತ್ಯವಾದಿಯಾದ ಶ್ರೀರಾಮರ ಮುಖದಲ್ಲಿ ಒಂದು ಗೆರೆಯೂ ಹೆಚ್ಚು ಕಮ್ಮಿಯಾಗದೇ ನಿರ್ವಿಕಾರ ಮನಸ್ಕರಾಗಿರುವುದು ಅಚ್ಚರಿಯ ಸಂಗತಿಯಾಯಿತು. ಶರತ್ಕಾಲದಲ್ಲಿ ಎಂದಾದರೂ ಚಂದ್ರನಿಗೆ ಕಾಂತಿ ಕುಂದುವುದೆ?
ಆದರೆ ಉರಿದುರಿದು ಬೀಳುತ್ತಿದ್ದವನು ಲಕ್ಷ್ಮಣ . ಅಪ್ಪ ಸಿಕ್ಕಿದ್ದಿದ್ದರೆ ಎರಡು ಕೊಟ್ಟೇ ಬಿಡುತ್ತಿದ್ದನೇನೋ ! ಪುಣ್ಯಕ್ಕೆ ಭರತ ಅರಮನೆಯಲ್ಲಿಲ್ಲ . ಇದ್ದಿದ್ದರೆ ಹೋಗಿ ಅವನನ್ನು ಕತ್ತರಿಸಿ ಬಿಡುತ್ತಿದ್ದನೇನೋ ! ಕೈಕೆಯನ್ನು ಕಂಭಕ್ಕೆ ಕಟ್ಟಿ ಛಡಿಯಿಂದ ಹೊಡೆಯಬೇಕೆಂಬ ತೀವ್ರ ಆವೇಗವನ್ನು ತಡೆದುಕೊಂಡಿದ್ದಾನೆ ; ಶ್ರೀರಾಮರು ಇದಕ್ಕೆಲ್ಲ ಆಸ್ಪದ ಕೊಡುವುದಿಲ್ಲವೆಂದು . ಇರಲಿ . ಈಗ ಅಮ್ಮನ ಹತ್ತಿರ ಹೋಗುತ್ತಿದ್ದಾರೆ, ನೋಡುವ ದೊಡ್ಡಮ್ಮ ಏನು ಹೇಳುತ್ತಾರೋ?
***************
ರಾತ್ರಿಯಿಡೀ ಉಪವಾಸವಿದ್ದು ಜಾಗರಣೆ ಮಾಡಿ , ನಾರಾಯಣನ ಪೂಜೆ ಮಾಡಿ ಮಗನಿಗೆ ಒಳಿತಾಗಲೆಂದು ಬೇಡಿದ್ದಳು ಕೌಸಲ್ಯೆ . ರಾಕ್ಷೋಘ್ನ ಹೋಮವನ್ನು ಮಾಡಿಸುತ್ತಿದ್ದಾಳೆ ಋತ್ವಿಜರಿಂದ . ಶ್ರೀರಾಮರ ಕಣ್ಣಿಗೆ ವ್ರತ ನಿಷ್ಠಳಾದ ತಾಯಿಯೊಟ್ಟಿಗೇ ಪೂರ್ಣಾಹುತಿಗೆ
ಸಿದ್ಧವಿದ್ದ ಬಂಗಾರದ ಬಟ್ಟಲಲ್ಲಿ ತುಂಬಿದ ಮೊಸರು , ಬೆಳ್ಳಿಯ ಬಟ್ಟಲಲ್ಲಿದ್ದ ಅಕ್ಷತೆ , ಬೆಳ್ಳಿಯ ತಂಬಿಗೆ ತುಂಬಿದ್ದ ತುಪ್ಪ , ದೊಡ್ಡತಟ್ಟೆಯಲ್ಲಿದ್ದ ಕರಿಗಡುಬುಗಳು, ಬುಟ್ಟಿ ಭರ್ತಿಯಾಗಿದ್ದ ಭತ್ತದ ಅರಳು, ಮಲ್ಲಿಗೆಯ ಮಾಲೆಗಳು , ಕರಿದ ಶಾವಗೆ ಪಾಯಸ , ಹೆಸರುಬೇಳೆಯ ಹುಗ್ಗಿ , ಸಮಿತ್ತುಗಳ ಕಟ್ಟುಗಳು ಹಾಗೂ ಬೆಳ್ಳಿಯ ತಂತುಗಳಿಂದ ಕ್ರಮಬದ್ಧವಾಗಿ ಸುತ್ತಿದ್ದ ಪೂರ್ಣ ಕುಂಭ ... ಇತ್ಯಾದಿಗಳೆಲ್ಲ ಕಂಡವು. ಮಗನನ್ನು ಕಂಡು ಆನಂದದಿಂದ ಓಡಿದಂತೆ ನಡೆದುಬಂದು ಮಗನನ್ನಪ್ಪಿಕೊಂಡಳು. "ರಾಮ, ನೀನು ನೂರು ವರ್ಷ ಬದುಕು. ಋಷಿಗಳಂತೆ ಇನ್ನೂ ಹೆಚ್ಚು ಕಾಲ ಜೀವಿಸು. ಕೀರ್ತಿಶಾಲಿಯಾಗು. ಯಾವುದೇ ಕ್ಷಣದಲ್ಲಿಯೂ ರಾಜಧರ್ಮದಿಂದ ದೂರ ಹೋಗಬೇಡ.
ಸತ್ಯಶೀಲನಾಗಿರು. ನಿನ್ನ ತಂದೆ ಎಷ್ಟು ದೊಡ್ಡ ಸತ್ಯವಾದಿ ಎಂಬುದನ್ನು ನೆನಪಿನಲ್ಲಿಡು. ಕೊಟ್ಟ ಮಾತನ್ನು ತಪ್ಪದ ವಂಶ ಈ ಸೂರ್ಯವಂಶ. ಬಾ ಕುಳಿತುಕೋ. ನನಗೆ ತುಂಬಾ ಸಂತೋಷವಾಗಿದೆ . " ಎಂದು ಹೇಳಿ ಬೆಳ್ಳಿಯ ಸಿಂಹಾಸನವನ್ನು ತೋರಿಸಿದಳು . ಶ್ರೀರಾಮರು ಆ ಪೀಠಕ್ಕೆ ನಮಸ್ಕರಿಸಿ , ಬಾಗಿ ಪಾದಕ್ಕೆ ತಲೆ ಕೊಟ್ಟು ಕೌಸಲ್ಯೆಯ ಕಾಲ ಬಳಿಯೇ ಕುಳಿತರು . "ಛೇ ಛೇ ಇದೇನು ನೆಲದ ಮೇಲೆ ಕುಳಿತೆ ! ಏಳು , ಏಳು " ತಾಯಿ ಕೈಹಿಡಿದಾಗ , ಮೃದು ಮಾತಿನಲ್ಲಿ ರಾಮರು ಹೇಳಿದರು ; " ಅಮ್ಮ , ಇನ್ನುಮೇಲೆ ನಾನು ನೆಲದ ಮೇಲೇಕುಳಿತುಕೊಳ್ಳಬೇಕಾಗಿದೆ . ನೀನಲ್ಲಿ ಕುಳಿತುಕೋ . ನಾನು ಹೇಳುವುದನ್ನು ಗಮನವಿಟ್ಟು ಕೇಳು : ಒದ್ದಾಡದೇ ಕೇಳು . "
**************
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com