'ರಾಮನನ್ನು ಸಿಂಹಾಸನದಲ್ಲಿ ಕೂಡಿಸಿ ಪಟ್ಟ ಕಟ್ಟುತ್ತೇನೆ' ಎಂದಿದ್ದ ಲಕ್ಷ್ಮಣ

ಅವನು ಮುದುಕ. ವಯಸ್ಸಾಗಿದೆ. ಅರಳು-ಮರಳಾಗಿಯೇ ಮೂವತ್ತು ಮೀರಿದೆ! ಯಾರು ನನ್ನೆದುರಿಸಲು ಸಾಧ್ಯ? ಎಲ್ಲರನ್ನೂ ಕೊಚ್ಚಿ ಹಾಕುತ್ತೇನೆ. ನಿನ್ನನ್ನು ಸಿಂಹಾಸನದಲ್ಲಿ ಕೂಡಿಸಿ ಪಟ್ಟ ಕಟ್ಟುತ್ತೇನೆ....
'ಆ ಮುದುಕನಿಗೆ ವಯಸ್ಸಾಗಿದೆ ಅರಳು-ಮರುಳು, ರಾಮನನ್ನು ಸಿಂಹಾಸನದಲ್ಲಿ ಕೂಡಿಸಿ ಪಟ್ಟ ಕಟ್ಟುತ್ತೇನೆ' ಎಂದು ಹೂಂಕರಿಸಿದ್ದ ಲಕ್ಷ್ಮಣ
'ಆ ಮುದುಕನಿಗೆ ವಯಸ್ಸಾಗಿದೆ ಅರಳು-ಮರುಳು, ರಾಮನನ್ನು ಸಿಂಹಾಸನದಲ್ಲಿ ಕೂಡಿಸಿ ಪಟ್ಟ ಕಟ್ಟುತ್ತೇನೆ' ಎಂದು ಹೂಂಕರಿಸಿದ್ದ ಲಕ್ಷ್ಮಣ
ಎಷ್ಟು ಹೇಳಬಹುದೋ ಅಷ್ಟನ್ನು ಅತ್ಯಂತ ಸಂಗ್ರಹವಾಗಿ ಹೇಳಿದರು ರಾಮರು. ತಂದೆಯವರು ಭರತನಿಗೆ ಪಟ್ಟಕಟ್ಟುವುದನ್ನು ಹೇಳಿ, ತಾನು ಒಂದಷ್ಟು ಕಾಲ ವನ ವಿಹಾರಕ್ಕೆ ಹೋಗಿ ಬರಬೇಕೆಂದು ಹಗುರವಾಗಿ ಹೇಳಿಬಿಟ್ಟರು. ಬಂದದ್ದು ಕೈಕೆಯ ಮನೆಯಿಂದ. ಹೇಳುತ್ತಿರುವುದು ಭರತಾಭಿಷೇಕ. ಎರಡಕ್ಕೆ ಎರಡು ಸೇರಿಸಲಾರಳೆ ಕೌಸಲ್ಯೆ? ಅರಮನೆಯ ಒಳ ಹಗರಣಗಳನ್ನೆಷ್ಟು ನೋಡಿಲ್ಲ ಆಕೆ? ಎಲ್ಲ ಅರ್ಥವಾಗಿ ಬಿಟ್ಟಿತು. 
ಕುಸಿದು ಬಿದ್ದಳು. ಪ್ರಙ್ಞೆ ತಪ್ಪಿದಳು. ಎದ್ದಳು. ಭೋರಾಗಿ ಅತ್ತಳು. ಎಷ್ಟೆಷ್ಟು ಕೂಗಾಡಬೇಕೋ ಅಷ್ಟೂ ಒದ್ದಾಡಿದಳು. ಕೈಕೆಯನ್ನು ಬೈದಳು. ದಶರಥನನ್ನು ನಿಂದಿಸಿದಳು. ಎಲ್ಲ ಮುಗಿದಮೇಲೆ ಸನ್ನಿ ಹಿಡಿದವಳಂತೆ ಮಾತಾಡತೊಡಗಿದಳು. ನೀನು ಹುಟ್ಟಲೇಕೂಡದಾಗಿತ್ತು. ನನಗೆ ಮಗನಾದ್ದರಿಂದ ಹೆಚ್ಚು ನೋವೇ ಆಯಿತು. ಹುಟ್ಟದೇ ಇದ್ದಿದ್ದರೆ ಮಗನಿಲ್ಲ ಅನ್ನೋ ಒಂದು ಕೊರಗು ಇರ್ತಿತ್ತು. ಅಷ್ಟೇ. ಆದರೆ ಈಗ? ಗಂಡನಿಂದ ಯಾವ ಒಳ್ಳೇದೂ ಆಗಲಿಲ್ಲ. ಮಗನಿಂದಲಾದರೂ ಸಿಗುತ್ತೆ ಅಂದ್ಕೊಂಡೆ. ಈಗ ಅದೂ ಇಲ್ಲ. ಇನ್ನು ಮೇಲೆ ಸವತಿಯರು ಚುಚ್ಚಿ ಸಾಯಿಸ್ತಾರೆ. ಹೆಸರಿಗೆ ನಾನು ಪಟ್ಟದ ರಾಣಿ. ಆದರೆ ನಾನು ಎಲ್ಲರ ಮಾತೂ ಕೇಳಬೇಕು. ನೀನು ಇದ್ದಾಗಲೇ ಈ ರೀತಿ ಅಸಡ್ಡೆಗೆ ಗುರಿಯಾಗಿದೀನಿ. ನೀನು ಹೋದಮೇಲೆ ಏನು ಗತಿ? ನನಗೆ ಬದುಕುವ ಆಸೆಯೇ ಇಲ್ಲ. ಈಗ ಒಬ್ಬಿಬ್ಬರಾದರೂ ನನ್ನ ಮಾತು ಕೇಳ್ತಾರೆ; ಇನ್ಮೇಲೆ ಅವಳ ಮಗನಿಗೆ ಹೆದರಿಕೊಂಡು ಮಾತೂ ಆಡಿಸೊಲ್ಲ ಅಂತ ಕಾಣುತ್ತೆ. ಈ ಮುದಿತನದಲ್ಲಿ ಸವತಿಯರ ಮಾತು ಕೇಳಿಸಿಕೊಳ್ಳೋಕೆ ಆಗೊಲ್ಲಪ್ಪ. ಇಷ್ಟು ನೋವಾದರೂ ನನ್ನ ಎದೆ ಒಡೆದುಹೋಗ್ತಾ ಇಲ್ಲ. ನೋಡು. ಇದು ಕಲ್ಲಿಂದ  ಮಾಡಿರಬೇಕು. ಮಳೆಗಾಲದಲ್ಲಿ ದಂಡೆ ಒಡೆದು ಹೋಗೋ ಹಾಗೆ ಯಾಕೆ ಒಡೀತಾ ಇಲ್ಲ? ಬಹುಶಃ ನನಗೆ ಸಾವೇ ಇಲ್ಲವೇನೋ? ಯಮಧರ್ಮರಾಯನ ಪಟ್ಟಣದಲ್ಲಿ ಜಾಗ ಇಲ್ಲ ಅಂತ ಕಾಣುತ್ತೆ.
ಕೊನೆಗೆ ನಿರ್ಧರಿಸಿದಂತೆ ಹೇಳಿಬಿಟ್ಟಳು. ಹಸು ಕರುವಿನ ಹಿಂದೆ ಹೋಗುವಂತೆ ನಾನು ನಿನ್ನ ಜೊತೆ ಕಾಡಿಗೆ ಬರ್ತೀನಿ. ತಾಯಿಯನ್ನು ಸಮಾಧಾನ ಮಾಡಲು ಕಲಿತ ಬುದ್ಧಿಯನ್ನೆಲ್ಲ ಖರ್ಚು ಮಾಡಬೇಕಾಯಿತು. ಕೊನೆಗೆ ಕೌಸಲ್ಯೆ ಧರ್ಮದ ವಿಷಯವೊದನ್ನು ಅಡ್ಡತಂದಳು. ರಾಮ, ಮಾತೃದೇವೋಭವ ಎಂದು ಹೇಳಿ ತಂದೆಗಿನ್ನ ತಾಯಿಗೇ ಮೊದಲ ಸ್ಥಾನ ಕೊಡುತ್ತಾರೆ. ಅಲ್ಲವೆ? ಹೌದೆಂದು ರಾಮರು ತಲೆಯಾಡಿಸಿದರು.  ನಿನ್ನ ಅಪ್ಪನಂತೆ ನಾನೂ ನಿನಗೆ ಪೂಜ್ಯಳೇ. ನೀನು ಕಾಡಿಗೆ ಹೋಗಲು ನಾನು ಅನುಮತಿ ಕೊಡುವುದಿಲ್ಲ!! 
ಒಟ್ಟಿಗೇ ಮತ್ತೊಂದು ಅಭಿಪ್ರಾಯವನ್ನೂ ಮಂಡಿಸಿದಳು. ನನ್ನ ಮಾತನ್ನು ಮೀರಿ ಹೋಗುವುದೇ ನಿಜವಾದರೆ, ಕೊಂಚ ತಡೆದು ಗಂಟಲು ಸರಿಪಡಿಸಿಕೊಂಡು, ರಾಮಾ, ಕರುವನ್ನು ಹಿಂಬಾಲಿಸಿ ತಾನೇ  ಹಸು ಹೋಗುವುದು? ನಾನೂ ನಿನ್ನ ಜೊತೇನೇ ಬರ್ತೀನಿ..  ರಾಮರಿಗೆ ತಲೆ ಕೆಟ್ಟುಹೋಯಿತು. ತಾವು ಹೊರಡುವುದೇ ದುಸ್ತರವಾಗಿದ್ದಾಗ, ಇನ್ನು ಈ ವೃದ್ಧೆಯನ್ನೆಲ್ಲಿ ಕರೆದುಕೊಡುಹೋಗುವುದು? ಹೇಗೆ ಆಕೆಯನ್ನು ತಡೆಯುವುದು? ತಾಯಿಯ ಆಙ್ಞೆ ಮೀರಕೂಡದೆನ್ನುತ್ತಿದ್ದಳೆ. ಧರ್ಮದ ಮಾತು ಬೇರೆ ಹೇಳುತ್ತಿದ್ದಾಳೆ. ಎಂಥ ಇಕ್ಕಟ್ಟಿನಲ್ಲಿ ಸಿಕ್ಕಿಸುತ್ತಿದ್ದಾಳೆ! ಹಾಗೆಂದು ಜೋರಾಗಿ ಮಾತನಾಡುವಂತಿಲ್ಲ! ಮೊದಲೇ ನೊಂದಿರುವ ತಾಯಿ, ಮುದುಕಿ, ಆಮೇಲೆ ಏನಾದರೂ ಹೆಚ್ಚು-ಕಮ್ಮಿ ಆಗಬಾರದಲ್ಲ? ಅದೆಂತು ರಾಮರು ಯೋಚಿಸಿದರೋ? ಅವರಿಗೆ ಆ ಸ್ಥಿರತೆ ಎಲ್ಲಿತ್ತೋ? ಅಮ್ಮಾ ಗಂಡ ಬದುಕಿದ್ದಾಗ, ಹೆಂಡತಿ ಅವನನ್ನು ಬಿಟ್ಟುಬಂದರೆ ಬೇರೆ ಅರ್ಥ ಬರುವುದಿಲ್ಲವೆ? ನೀನು ವಿಧವೆಯಂತೆ ಬರುವೆಯಾ? ರಾಮರ ಮಾತು ಕೌಸಲ್ಯೆಯ ರಭಸಕ್ಕೆ ಅಡ್ಡಗಟ್ಟೆ ಕಟ್ಟಿತು. ರಾಮರು ಮುಂದುವರಿಸಿದರು.  ನಮ್ಮ ವಂಶ ಎಂಥ ದೊಡ್ಡದು? ನಮ್ಮದು ಕಕುತ್ಸ್ಥ ವಂಶ. ಭೂಪತಿಯಾಗಿ ನಮ್ಮಪ್ಪ ಬದುಕಿದ್ದಾಗ ನೀನವನ ಬಳಿ ಅವನಿಗೆ ಸೇವೆ ಮಾಡಿಕೊಂಡಿರಬೇಕಾದ್ದು ಸನಾತನ ಧರ್ಮವಲ್ಲವೆ? ನೀನು ಇಲ್ಲೇ ಇರಬೇಕು.  
ಏನು ಮಾಡುತ್ತಾಳೆ ಕೌಸಲ್ಯೆ?  ಆಯ್ತು ನಾನಿಲ್ಲೇ ಇರುತ್ತೇನೆ. ನನ್ನ ಶುಶ್ರೂಷೆ ಮಾಡಿಕೊಂಡು ನೀನಿರು. ನೀನು ಹೋಗಲು ನಾನು ಅನುಮತಿ ಕೊಡುವುದಿಲ್ಲ. ರಾಮರು ಅನುನಯಿಸುತ್ತ ಹೇಳಿದರು;  ಅಮ್ಮಾ, ತಾಯಿಯ ಮಾತನ್ನು ಕೇಳಲೇಬೇಕು. ಆದರೆ.. .. .. ..  ಕೌಸಲ್ಯೆ ಏನು.. .. .. ಆದರೆ? ಎಂದಳು.  ನೀನು ಮೊದಲೇ ಹೇಳಿದ್ದರೆ ನಿನ್ನ ಮಾತು ಕೇಳಬೇಕು. ಆದರೆ ಮಹಾರಾಜರು ನಿನಗಿನ್ನ ಮೊದಲೇ ಹೇಳಿದ್ದಾರೆ. ಅಲ್ಲವೆ? ತಾನು ಸೋಲುತ್ತಿರುವುದು ಗೊತ್ತಾಗಿ ನಿರ್ವಾಹವಿಲ್ಲದೇ ತಲೆಯಾಡಿಸಿದಳು ಕೌಸಲ್ಯೆ. ಅಮ್ಮಾ, ಮಹಾರಾಜರು ನಮಗೆ ಪೋಷಕರು, ಗುರುಗಳು, ಪೂಜನೀಯರೂ ಆಗಿದ್ದಾರೆ. ಅವರ ಮಾತನ್ನು ನಾನೂ-ನೀನೂ ಇಬ್ಬರೂ ಪಾಲಿಸಬೇಕು. ಎಲ್ಲರನ್ನೂ ನಿಯಮಿಸುವ ಯಜಮಾನ ಅಲ್ಲವೇ ಆತ?
-----*****-----
ಹೇಗೆ ಹೇಗೋ ತಾಯಿಯನ್ನೊಪ್ಪಿಸಿದರೆ, ದೊಡ್ಡಮ್ಮನ ಹಿಂದೆ ನಿಂತ ಲಕ್ಷ್ಮಣ ಉದ್ವಿಗ್ನನಾಗಿ ಬಡಬಡಿಸತೊಡಗಿದ.  ಅಮ್ಮಾ, ದೊಡ್ಡಮ್ಮ, ನಾನೊಪ್ಪಲ್ಲ. ಅಣ್ಣ ಕಾಡಿಗೆ ಹೋಗುವುದನ್ನು ನಾನೊಪ್ಪೊಲ್ಲ. ಅನಿಷ್ಟವಾದ ಮಾತಾಡುತ್ತಿದಾನೆ ಅಣ್ಣ. ಯಾವುದೋ ಹೆಣ್ಣು ಹೇಳಿದಳೆಂದು ರಾಜ್ಯ ತ್ಯಜಿಸುವುದೆ? ಕಾಡಿಗೆ ಹೋಗುವುದೆ?  ಮುಳುಗುತ್ತಿದ್ದವಳಿಗೆ ಹುಲ್ಲು ಕಡ್ಡಿಯಲಲ್ಲ, ಮರದ ದಿಮ್ಮಿಯೇ ಸಿಕ್ಕಂತಾಯಿತು! ಆಶೆಯಿಂದ ಲಕ್ಷ್ಮಣನೆಡೆ ನೋಡಿದಳು. ಅವನು ಮುದುಕ. ವಯಸ್ಸಾಗಿದೆ. ಅರಳು-ಮರಳಾಗಿಯೇ ಮೂವತ್ತು ಮೀರಿದೆ! ಕಾಮದ ಜಗ್ಗಾಟಕ್ಕೆ ಸಿಕ್ಕಿದ್ದಾನೆ. ಚಿಕ್ಕಮ್ಮನಲ್ಲಿ ವಿಶೇಷವಾದ ಆಸಕ್ತಿ. ಅದನ್ನು ನಿಗ್ರಹಿಸಲಾರ. ಈಗ ಆಕೆಯಲ್ಲೇ ಸೆರೆ!! ರಾಜನ ಕಣ್ಣಿಗೆ ಯಾವುದೂ ನೆಟ್ಟಗೆ ಕಾಣುತ್ತಿಲ್ಲ. ಎಲ್ಲ ತಿರುವು ಮರವು.
ಲಕ್ಷ್ಮಣ ತನ್ನ ಮಾತುಗಳನ್ನು ಮುಂದುವರೆಸಿದ. ಹಾಗೊಮ್ಮೆ ದೇಶಭ್ರಷ್ಟನನ್ನಾಗಿ ಮಾಡಬೇಕಿದ್ದರೆ, ಅಣ್ಣ ಏನಾದರೂ ತಪ್ಪು ಮಾಡಿರಬೇಕು. ಅಣ್ಣನೊಡನೆ ಸದಾ ಇರುವ ನನಗೆ ಅಂತಹ ತಪ್ಪೇನೂ ಕಾಣುತ್ತಲೇ ಇಲ್ಲವಲ್ಲ? ಅಥವಾ ನಾನಿಲ್ಲದಾಗ ಅಂತಹ ದೋಷವೇನಾದರೂ ಸಂಭವಿಸಿರಬೇಕು! ಇಲ್ಲ. ಹಾಗಾಗಿದ್ದರೆ ನಾನು ಕೇಳಿಸಿಕೊಂಡಿರಬೇಕು! ಇಲ್ಲ!! ದೊಡ್ಡಮ್ಮಾ, ಇಡೀ ನಮ್ಮ ರಾಜ್ಯದಲ್ಲಿ ಅಣ್ಣನನ್ನು ಇಷ್ಟಪಡದವನೊಬ್ಬನೂ ಇಲ್ಲ. ಇದ್ದರೆ ಆ ಚಿಕ್ಕಮ್ಮ. ಬಿಟ್ಟರೆ ಈ ಹೊತ್ತು ಪಕ್ಷ ಬದಲಿಸಿರುವ ನಮ್ಮಪ್ಪ. ಕೌಸಲ್ಯೆಗೆ ಲಕ್ಷ್ಮಣನ ಮಾತು ಜೇನಿನಂತೆ ಕೇಳುತ್ತಿದೆ. ಶ್ರೀರಾಮರೆಡೆ ತಿರುಗಿ ಅಣ್ಣನಿಗೇ ಬುದ್ಧಿವಾದ ಹೇಳುವಂತೆ ಮಾತಾಡತೊಡಗಿದ!! ಅಣ್ಣಾ, ಜನರಿಗೆ ಇದು ಗೊತ್ತಾಗುವುದಕ್ಕೆ ಮುನ್ನವೇ ನಾವು ಸಿಂಹಾಸನವನ್ನು ಆಕ್ರಮಿಸಿಬಿಡಬೇಕು. ನಾನು ನಿನ್ನ ಜೊತೆ ಇರುತ್ತೇನೆ, ನಿನ್ನ ಪಕ್ಕದಲ್ಲಿ ನಾನು ನಿಂತರೆ ಯಮನೇ ನಿನ್ನ ಸಹಾಯಕ್ಕೆ ಬಂದಂತೆ!! ಯಾರು ನನ್ನೆದುರಿಸಲು ಸಾಧ್ಯ? ಎಲ್ಲರನ್ನೂ ಕೊಚ್ಚಿ ಹಾಕುತ್ತೇನೆ. ನಿನ್ನನ್ನು ಸಿಂಹಾಸನದಲ್ಲಿ ಕೂಡಿಸಿ ಪಟ್ಟ ಕಟ್ಟುತ್ತೇನೆ.
ಲಕ್ಷ್ಮಣನ ಮಾತು ಅತಿಯಾಯಿತು. ಕೊಂಚ ಅಹಂಕಾರದಂತೆ; ಜಂಭ ಕೊಚ್ಚಿಕೊಳ್ಳುವವನಂತೆ!! ಆದರೆ ಇದರಲಲ್ಲಾವ ಸ್ವಾರ್ಥವೂ ಇಲ್ಲ. ಅಣ್ಣನಿಗಾಗುತ್ತಿರುವ ಅನ್ಯಾಯಕ್ಕೆ ಉರಿದು ಬೀಳುತ್ತಿದ್ದಾನೆ ಲಕ್ಷ್ಮಣ!! ಕ್ಷತ್ರಿಯ ಹೀಗಲ್ಲದೇ ಇನ್ನೇನು ಧರ್ಮ  ಪ್ರವಚನ ಕೊಡಲಲು ಸಾಧ್ಯವೆ? ಶ್ರೀರಾಮರು ಮಾತಾಡದೇ ಕೇಳಿಸಿಕೊಳ್ಳುತ್ತಿದ್ದಾರೆ. ಲಕ್ಷ್ಮಣನಿಗೆ ಅದೂ ಪ್ರೋತ್ಸಾಹ ಕೊಟ್ಟಂತಾಯಿತು. ನಮ್ಮನ್ನು ಯಾರಾದರೂ ವಿರೋಧಿಸಿದರೆ ಎಲ್ಲರನ್ನೂ ಕೊಚ್ಚಿಹಾಬಿಡುತ್ತೇನೆ. ಅಕಸ್ಮಾತ್ ಭರತನನ್ನು ಇಷ್ಟಪಡುವವರೂ ಇರಬಹುದು. ಅವರೆಲ್ಲರನ್ನೂ ಸಾಯಿಸಿಬಿಡುವೆ. ನಮ್ಮ ಅಣ್ಣನಂತೆ ಮೃದುವಾಗಿದ್ದರೆ ಜನರಿಗೆ ಅಂತಹ ಸಾಧುಗಳ ಬಗ್ಗೆ ತಿರಸ್ಕಾರ!! 
-ಡಾ.ಪಾವಗಡ ಪ್ರಕಾಶ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com